ಮೀನು ತಿನ್ನುವ ಬಾಯಿ ಚಪಲ ಹತ್ತಿಸಿಕೊಂಡ ನಂತರ ಬಹುಕಾಲ ಕೇವಲ ಹಸಿ ಹಾಗೂ ತಾಜಾ ಮೀನುಗಳನ್ನಷ್ಟೆ ಚಪ್ಪರಿಸುತ್ತಿದ್ದವನ ನಾಲಗೆಯ ರುಚಿಮೊಗ್ಗಿಗೆ ಹತ್ತು ವರ್ಷಗಳ ಹಿಂದೆ ಅದು ಹೇಗೋ ಏನೋ ಒಣಮೀನಿನ ರುಚಿಯೂ ಹತ್ತಿತ್ತು. ಈ ಒಣಮೀನನ್ನ ಸಾಮಾನ್ಯವಾಗಿ ಹೆಚ್ಚು ಉಪ್ಪಿನಲ್ಲಿ ಸಂಸ್ಕರಿಸದೆ ಊರಿಟ್ಟ ಹಸಿಮೀನುಗಳನ್ನ ಕಡಲತಡಿಯ ಬಿರುಬಿಸಿಲಿನಲ್ಲಿ ಅದರಲ್ಲಿರುವ ನೀರಿನಂಶವೆಲ್ಲಾ ಸಂಪೂರ್ಣ ಇಂಗಿ ಹೋಗುವ ತನಕ ಒಣಗಿಸಿಟ್ಟು ಮರಕ್ಕಲರು ತಯಾರಿಸುತ್ತಾರೆ. ಸಹಜವಾಗಿ ಅದು ತನ್ನ ತ್ಯಾಜ್ಯದ ಅಂಶವನ್ನ ತನ್ನೊಳಗೆ ಇಟ್ಟುಕೊಂಡುˌ ಕೆಡದಿರಲು ಹಾಕಲಾಗಿರುವ ಅಗತ್ಯಕ್ಕಿಂತ ಅಧಿಕ ಉಪ್ಪಿನಂಶವನ್ನ ಹೀರಿಕೊಂಡುˌ ಒಣಗುವ ಹಂತದಲ್ಲಿ ಬೀಸಿ ಬರುವ ಕಡಲಕೆರೆಯ ಗಾಳಿ ಹೊತ್ತು ತರುವ ಸಣ್ಣ ಸಣ್ಣ ಮರಳಿನ ಕಣಗಳನ್ನ ಅಂಟಿಸಿಕೊಂಡು ಒಂಥರಾ ಕಟ್ಟಿಗೆಯಂತಾಗಿರುತ್ತದೆ.
ಹೀಗಾಗಿ ಅನಿವಾರ್ಯವಾಗಿ ಅಡುಗೆಗೆ ಉಪಯೋಗಿಸುವ ಮೊದಲು ಐದಾರು ಬಾರಿ ಅದನ್ನ ಬೆಚ್ಚನೆ ಹಾಗೂ ತಣ್ಣೀರಲ್ಲಿ ಬದಲಿಸಿ - ಬದಲಿಸಿ ಚೆನ್ನಾಗಿ ತೊಳೆದು ಅದರಲ್ಲಿರುವ ಉಪ್ಪಿನಂಶವನ್ನ ಆದಷ್ಟು ಕಡಿಮೆ ಮಾಡಿˌ ಪೂರ್ತಿಯಾಗಿ ಅಂಟಿದ ಮರಳಿನ ಕಣಗಳನ್ನ ಬೇರ್ಪಡಿಸಿ ತೆಗೆಯಬೇಕಿರುತ್ತೆ. ಅದಾದ ಮೇಲೆ ತಿನ್ನಲು ಬೇಡದ ಹೊಟ್ಟೆಯೊಳಗಿರುವ ಅದರ ಅಂಗಾಂಶಗಳು-ಬಾಲ-ರೆಕ್ಕೆ-ಮಂಡೆ ಎಲ್ಲವನ್ನೂ ತೆಗೆದೆಸೆದ ನಂತರವೆ ಅದು ಬೇಯಿಸಲರ್ಹವಾಗೋದು. ಹಸಿಮೀನಿನ ಮಂಡೆ ತನ್ನ ಅಪಾರ ರುಚಿಗೆ ಎಷ್ಟು ಪ್ರಖ್ಯಾತವೋˌ ಅದೆ ಒಣ ಮೀನಿನದ್ದು ತನ್ನ ರುಚಿಹೀನತೆಗೆ ಅಷ್ಟೆ ಕುಖ್ಯಾತ. ನಿರುಪಯುಕ್ತ ಭಾಗಗಳನ್ನ ಒಣಮೀನಿನಿಂದ ಕತ್ತರಿಸಿ ತೆಗೆಯೋದೆ ಒಂದು ಸವಾಲು. ಅದನ್ನ ಗೆದ್ದರಷ್ಟೆ ಅಡುಗೆ ಸುಸಂಪನ್ನ.
ಸಾಲದ್ದಕ್ಕೆ ಬಾಯಿಗೆ ರುಚಿಯಿದ್ದಷ್ಟೂ ಸಹ ಆ ಒಣಮೀನು ಸ್ವಲ್ಪ ವಾಸನೆಯೂ ಹೆಚ್ಚಿರುವುದು ಸಹಜ. ಅದರಿಂದ ಅದೆಷ್ಟೆ ಅದರ ಗೀಳಿಗೆ ಬಿದ್ದದ್ದರೂ ಸಹ ತೊಳೆದು ಸೋಸಿದ ನಂತರ ಅದನ್ನೊಮ್ಮೆ ಎಣ್ಣೆಯಲ್ಲಿ ಹುರಿದುಕೊಳ್ಳುವಾಗ ತಿನ್ನುವ ಚಪಲಚನ್ನಿಗರೆ ಮೂಗು ಮುಚ್ಚಿಕೊಳ್ಳಬೇಕು. ಅದು ಸಾಲದು ಅಂತ ನೆರೆಕರೆಯಲ್ಯಾರಾದರೂ ಮತ್ಸ್ಯ ದ್ವೇಷಿಗಳಿದ್ದರೆ ಆ ಹೊತ್ತಿನಲ್ಲಿ ಅಡುಗೆ ಮನೆಯಲ್ಲರಳಿ ಊರು ಸುತ್ತಲು ಹೊರಡುವ ಅದರ ಘಾಟಿನಿಂದ ಅಘಾತರಾಗುವ ಅಂತವರ ಹಿಡಿಶಾಪವನ್ನ ಸಹ ಜೊತೆಜೊತೆಗೆ ತಿನ್ನಲು ತಯಾರಾಗಿರಬೇಕು. ಇದಕ್ಕೆಲ್ಲ ಕಳಶವಿಟ್ಟಂತೆ ಗಾಳಿಯಲೆಯಲ್ಲಿ ಬಡಾವಣೆಯೆಲ್ಲಾ ಹೋಗಿ ಅಂದಿನ ಅಡುಗೆಯ ಚಾಡಿ ಹರಡಿ ಆ "ಮನಮೋಹಕ" ವಾಸನೆಗೆ ಮನಸೋತು ಅಂತಹ ಒಣಮೀನು ಅಡುಗೆಯಾಗುತ್ತಿರವಲ್ಲಿಗೆ ತುರ್ತು ಮೈತ್ರಿಯ ಆಹ್ವಾನ ಕೊಡಲು ಕಾತರಿಸುತ್ತಾ ಎಂದಿಲ್ಲದ ಪೂಸಿ ಹೊಡೆದುಕೊಂಡು ಬರುವ ಸುತ್ತಮತ್ತಲಿನ ಪುಸ್ಸಿಕ್ಯಾಟುಗಳು ಮಾಡುವ ಅನುಕೂಲ ಸಿಂಧು ಪ್ರೀತಿಯ ರಗಳೆಯನ್ನೂ ಸಹ ಎದುರಿಸಿ ಅವುಗಳ ಅವಕಾಶವಾದಿ ಒಲವಿನ ನಾಟಕವನ್ನೂ ಸಹ ನಿಭಾಯಿಸಿ ಗೆಲ್ಲುವ ಛಾತಿ ಹೊಂದಿರಬೇಕು. ಇಷ್ಟೆಲ್ಲಾ ದಪ್ಪಚರ್ಮ ಬೆಳೆಸಿಕೊಂಡಾಗ ಮಾತ್ರ ಬಾಯಲ್ಲಿ ನೀರೂರಿಸುವ ಸಿಗಡಿ ಚಟ್ನಿಯನ್ನಾಗಲಿˌ ಬದನೆ ಕಾಯಿ ಬೆರಕೆ ಹಾಕಿದ ಒಣಮೀನಿನ ತಾಳ್ಯವನ್ನಾಗಲಿˌ ಇಲ್ಲಾ ಬಸಳೆ ಸೊಪ್ಪು ಅಥವಾ ನುಗ್ಗೆಕಾಯಿಯನ್ನ ಬೆರೆಸಿದ ರುಚಿಕಟ್ಟಾದ ಒಣಮೀನಿನ ಸಾರು ತಯಾರಿಸಿ ಸವಿಯಲು ಸಾಧ್ಯವಾಗುತ್ತಿತ್ತು. ಇವನ ಜಿಹ್ವಾಚಾಪಲ್ಯ ಅದಕ್ಕೆಲ್ಲಾ ಒಗ್ಗಿ ಹೋಗಿ ಈಗವನೂ ಸಹ ಒಣಮೀನಿನ ರುಚಿಗೆ ಮಾರು ಹೋಗಿ ಅದರ ಖಾದ್ಯ ವೈವಿಧ್ಯಗಳ ಪರಮ ಅಭಿಮಾನಿಯಾಗಿ ಶಾಶ್ವತವಾಗಿ ಮತಾಂತರವಾಗಿದ್ದ.
ಗಣಪತಿ ಸ್ವಾಮಿಗಳೊಡನೆ ಇವನು ಮಾರುಕಟ್ಟೆ ರಸ್ತೆಯಲ್ಲಿದ್ದ ಮೀನಂಗಡಿಗೆ ಹೊಕ್ಕಾಗˌ ಆಗಷ್ಟೆ ಮಧ್ಯಾಹ್ನದೂಟ ಮುಗಿಸಿ ಮನೆಯಿಂದ ಬಂದಂತಿದ್ದ ಬಿಳಿ ಮುಂಡುಟ್ಟು ಜೇಬಿನಲ್ಲೊಂದು ಬಾಲ್ ಪೆನ್ ಸಿಕ್ಕಿಸಿಕೊಂಡಿದ್ದ ಬೆಳ್ಳನೆ ಅಂಗಿ ತೊಟ್ಟಿದ್ದ ದಪ್ಪ ಗಾಜಿನ ಕಪ್ಪು ಫ್ರೇಮಿನ ಕನ್ನಡಕ ತೊಟ್ಟಿದ್ದ ಮಾಧವನ್ ಕುರ್ರುಪ್ಪರು ಸೆಖೆಗೆ ಪಂಖ ಹಾಕಿಕೊಂಡು ಖಾಲಿ ಹೊಡೆಯುತ್ತಿದ್ದ ತಮ್ಮ ಅಂಗಡಿಯ ಗಲ್ಲಾದ ಕುರ್ಚಿಯ ಮೇಲೆ ಆರಾಮದ ಭಂಗಿಯಲ್ಲಿ ಕೂತುಕೊಂಡು ಅಂದಿನ "ಮಾತೃಭೂಮಿ"ಯನ್ನ ಕೂಲಂಕಷವಾಗಿ ಓದುತ್ತಿದ್ದರು.
ಆಶ್ರಮದಿಂದ ಕುಶಾಲನಗರಕ್ಕೆ ಹೋಗುವ ದಾರಿಯ ಕುಟೀರದಲ್ಲಿ ತಮ್ಮ ನೆರೆಯವರಾಗಿ ವಾಸವಿದ್ದ ಪರಿಚಿತರಾದ ಗಣಪತಿ ಸ್ವಾಮಿಗಳ ಮಖ ದರ್ಶನವಾಗುತ್ತಲೆ "ವರು ವರುˌ ಎದಾ ವಂದದು?" ಎನ್ನುತ್ತಾ ಬಿಡಿಸಿ ಓದುತ್ತಿದ್ದ "ಪತ್ರಂ"ವನ್ನು ಮಡಿಚಿಡುತ್ತಾ ಎದ್ದು ನಿಂತರು.
ಅವನ ಬೇಡಿಕೆಯನ್ನ ಗಣಪತಿ ಸ್ವಾಮಿಗಳು ಕುರುಪ್ಪರಿಗೆ ಅರುಹಿದರು. ವ್ಯಾಪಾರಕ್ಕವನು ಮೊದಲಿಟ್ಟ.
ಉದ್ದನೆ ಮರದ ಮೇಜುಗಳ ಮೇಲೆ ಬಗೆಬಗೆಯ ಮೀನುಗಳನ್ನ ಪೇರಿಸಿಟ್ಟ ಬುಟ್ಟಿಗಳನ್ನ ಸಾಲಾಗಿ ಜೋಡಿಸಿಟ್ಟಿದ್ದರು. "ಞಾನ್ ಇವಿಡೆಲೇತ್ತಿ ಪಲ ಸ್ಥಳಂಗಳೆ ಕಂಡು ಪಿನ್ನೆ ಮಡಕ್ಕಯಾತ್ರ ಚೇಯ್ದುಳ್ಳುˌ ಬುದ್ಧಿಮುಟ್ಟೊನ್ನೂ ಆಗಾದೆ ಕೊಂಡುಪೋವಾನ್ ಪೆಟ್ಟೋ?" ಎನ್ನುತ್ತಾ ಇವನು ಮಾಧವನ್ ಕುರುಪ್ಪರ ಮುಖ ದಿಟ್ಟಿಸಿದ. ಅದಕ್ಕವರು "ಅಯ್ಯೋˌ ಅದ್ಯೊನ್ನು ಕೊಳಪಿಲ್ಲಯ. ತಿಗಞ್ಞಾ ಕೆಟ್ಟಾಕಿ ತರ. ಮಣಂ ಪೊರುತ್ತು ವರಾದಿರುನ್ನ ಪುರತ್ತಾಕ್ಕಲ್ ಇರುಂದುಕೊಂಡು ಪ್ರಶ್ನಂ ಇಲ್ಲಾದೆ ಪಲದಿವಸಂ ಅಕಲೆ ಕೊಂಡು ಪೋಯಾಂಪೆಟ್ಟು" ಎಂದು ಮಾರುತ್ತರಿಸಿದರು.
ಅವರ ಉತ್ತರದಿಂದ ತೃಪ್ತನಾದ ಇವನು ಎರಡು ಕಿಲೋ ಮಲಯಾಳಂನಲ್ಲಿ ತಿರಂಣ್ಭಿ ಎನ್ನಲಾಗುವ ತೊರಕೆ. ಎರಡೂವರೆ ಕಿಲೋ ಮಲಯಾಳಂನಲ್ಲಿ ಚೆಮ್ಮೀನ್ ಎನ್ನಲಾಗುವ ಪೊಡಿ ಎಟ್ಟಿ ಹಾಗೂ ಮಲಯಾಳಿಗಳು ನೆತ್ತೋಲಿ ಅನ್ನುವ ಕೊಲ್ಲತ್ತರು ಒಂದು ಕಿಲೋ ಕಟ್ಟಿಸಿಕೊಂಡು ಚೂರು ಕ್ರಯದಲ್ಲಿ ಚೌಕಾಸಿ ಮಾಡಿ ವ್ಯಾಪಾರ ಕುದುರಿಸಿದ. ಅಂದ ಮಾತಿನಂತೆ ಮೀನಿನ ವಾಸನೆ ಹೊರಬಾರದಂತೆ ಕೌಶಲ್ಯಪೂರ್ಣವಾಗಿ ಕುರಪ್ಪರು ಅವನ್ನ ಕಟ್ಟಿ ಕೊಟ್ಟರು. ಜೊತೆಗೆ ತಲಾ ಎರಡೆರಡು ಕಿಲೋ ತೆಂಗಿನೆಣ್ಣೆ ಹಾಗೂ ಆಣಿಬೆಲ್ಲವನ್ನೂ ಸಹ ಪಕ್ಕದಲ್ಲಿದ್ದ ಕೊಗ್ಗ ಕಾಮತರ ಅಂಗಡಿಯಿಂದ ಕೊಂಡು ಮಾಡಿದ ಸಹಾಯಕ್ಕಾಗಿ ಗಣಪತಿ ಸ್ವಾಮಿಗಳಿಗೆ ಕೃತಜ್ಞತೆ ತಿಳಿಸಿˌ ಅವರ ವ್ಯಾಪಾರಕ್ಕೆ ಅವರು ಅತ್ತ ತಿರುಗುತ್ತಿದ್ದಂತೆ ಇವನು ರಿಕ್ಷ ಹಿಡಿದು ತನ್ನ ಕೋಣೆಯ ಹಾದಿಯತ್ತ ಹೊರಳಿದ. ಹೋಗುವ ಮೊದಲು "ನಾಳೆ ಸಂಜೆ ವಿಶೇಷ ಪೂಜೆ ಇದೆ. ಮರೆಯದೆ ಬನ್ನಿ" ಎಂದು ಗಣಪತಿ ಸ್ವಾಮಿಗಳು ಹೇಳಿದ್ದರು.
*****
"ಜಬ್ ಹಮ್ ನಾ ಹೋಂಗೇ
ತಬ್ ಹಮಾರಿ
ಕಾಕ್ ಪೇ ತುಮ್ ರುಕೋಗೆ
ಚಲತೇ ಚಲತೇ.
ಅಶ್ಕೋಂಸೇ ಭೀಗೀ ಚಾಂದನೀ ಮೈ
ಏಕ್ ಸದಾ ಸೀ ಸುನೋಗೇ ಚಲತೇ ಚಲತೇ./
ವಹೀಂ ಪೇ ಕಹೀಂ
ವಹೀಂ ಪೇ ಕಹೀಂ ಹಮ್ˌ
ತುಮ್ ಸೇ ಮಿಲೇಂಗೇ
ಬನ್ ಕೇ ಕಲೀ
ಬನ್ ಕೇ ಸಬಾ
ಭಾಗ್-ಏ-ವಫಾ಼ ಮೈ.//
ಕೋಣೆಗೆ ಹೋಗಿ ಕೈಫೋನಿನ ರೇಡಿಯೋ ಹಚ್ಚಿದವನಿಗೆ ಹಚ್ಚಗೆ ಸುಮನ ಕಲ್ಯಾಣಪುರ ರಫಿ ಸಾಹೇಬರೊಂದಿಗೆ ಹಾಡುತ್ತಿದ್ದ ಮಧುರ ಯುಗಳ ಮೂಡಿ ಬರುತ್ತಿದ್ದುದು ಕೇಳಿ ಬಂತು. ಅಯಾಚಿತವಾಗಿ ಅವನ ಬಾಯಿ ಸ್ವರ ಸಂಯೋಜನೆ ರೋಷನ್-ಸಾಹಿತ್ಯ ಮಾಜ್ರೂಹ್ ಸುಲ್ತಾನಪುರಿ ಅನ್ನುವ ಮನಸಿನಾಳದ ಪುಟಗಳಿಂದ ಹೆಕ್ಕಿ ತೆಗೆದ ಹೆಸರುಗಳನ್ನ ಗಟ್ಟಿಯಾಗಿ ಉಚ್ಛರಿಸಿತು. ಬಿಸಿಲಿನ ಧಗೆ ನಿಜವಾಗಲೂ ಕಾಡಿಸುವಷ್ಟು ಹೆಚ್ಚಾಗಿತ್ತು. ಹಾಡಿನ ಇಂಪಿನ ಜೊತೆಗೆ ದೇಹಕ್ಕೂ ಕೊಂಚ ತಂಪು ಬೇಕಿದೆ ಅನಿಸಿ ತಣ್ಣೀರಿನ ಸ್ನಾನ ಮಾಡಿ ಸುಧಾರಿಸಿಕೊಳ್ಳಲು ಅಣಿಯಾದ. ಬಿಸಿಲ ಪ್ರಕೋಪಕ್ಕೆ ಬಳಲಿದ್ದ ದೇಹಕ್ಕೆ ತಂಪನುಣಿಸದಿದ್ದರೆ ಚಡಪಡಿಕೆಯಾಗುವ ಸಂಭವವಿತ್ತು.
"ಮೌಸಂ ಕೋಈ ಹೋ
ಇಸ್ ಚಮನ್ ಮೈ
ರಂಗ್ ಬನಕೇ ರಹೇಂಗೇ
ಹಮ್ ಖರೀಮಾˌ
ಚಾಹತ್ ಕೀ ಖುಷ್ಬೂ
ಯೂಂ ಹೀ ಜು಼ಲ್ಫೋಂ
ಸೇ ಉಢೇಗೀ
ಖಿಜಾ಼ ಹೋ ಯಾ ಬಹಾರೇಂ!
ಯೂಂ ಹೀ ಜೂಮ್ ಥೇ
ಯೂಂ ಹೀ ಜೂಮ್ ಥೇ
ಔರ್ ಖಿಲತೇ ರಹೇಂಗೇ
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//
ರಹೇನಾ ರಹೇ ಹಮ್
ಮೆಹಕಾ ಕರೇಂಗೇ/
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//
( ಇನ್ನೂ ಇದೆ.)
https://youtu.be/WH1GWfIpjBw
No comments:
Post a Comment