07 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೯.👊


ಅವನು ಹುಟ್ಟಿ ಬೆಳೆದಿದ್ದ ಬಡಾವಣೆ ಆ ಪುಟ್ಟ ಪಟ್ಟಣದ ಒಂದು ಯೋಜಿತ ವಿಸ್ತರಣ. ಗುಡ್ಡವೊಂದರ ನೆತ್ತಿಯಲ್ಲಿ ಸರಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಜಾಗ ಉಳಿಸಿಕೊಂಡು ಅದರ ಪೂರ್ವ ಭಾಗದಲ್ಲಿ ಕಂಠಿಹಾರದಂತೆ ಆಂಗ್ಲ ಅಕ್ಷರ "ಯು" ಆಕಾರದಲ್ಲಿ ಮುಖ್ಯರಸ್ತೆ ನಿರ್ಮಿಸಿ ಅದಕ್ಕೆ ಉದ್ದಲಾಗಿ ಒಂದು ಪಕ್ಕ ಜಟೆ ಇಳಿಸಿದ್ದಂತೆ ಹದಿನಾಲ್ಕು ೩೦*೪೦ ಚದರಡಿ ಅಳತೆಯ ಗೃಹ ನಿವೇಶನ ಯೋಗ್ಯ ತಿರುವುಗಳನ್ನ ಆ ಗುಡ್ಡದ ಬುಡದ ಕಣಿವೆಯಲ್ಲಿದ್ದ ಶೆಟ್ಟರ ಗದ್ದೆಯ ಮೇಲು ಬದುವಿನಲ್ಲಿದ್ದ ಅಡ್ಡಲಾದ ಮತ್ತೊಂದು ಪುಟ್ಟರಸ್ತೆಯವರೆಗೂ ಯೋಜಿತವಾಗಿ ನಿರ್ಮಿಸಲಾಗಿತ್ತು. ಅದೆ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಕೊಂಚ ದೊಡ್ಡದಾದ ಅಂದರೆ ೬೦*೮೦ ಅಡಿ ನಿವೇಶನಗಳ ಅಡ್ಡಡ್ಡವಾದ ರಸ್ತೆಗಳನ್ನ ಆ ಭಾಗದ ಗುಡ್ಡದ ಬುಡದ ಕಣಿವೆಯಲ್ಲಿದ್ದ ಬೆಟ್ಟಮಕ್ಕಿ ಗದ್ದೆಗಳವರೆಗೂ ನಿರ್ಮಿಸಿ ಹಂಚಿದ್ದರು. 


ಆ ಗುಡ್ಡದ ಮೇಲ್ಭಾಗದಲ್ಲಿ ಸಂಸ್ಕೃತಿ ಮಂದಿರˌ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯˌ ಪುರಸಭೆ ಕಛೇರಿˌ ಬಾಲಕಿಯರ ಸರಕಾರಿ ಪ್ರೌಢಶಾಲೆˌ ಅದರ ಮಗ್ಗುಲಲ್ಲೆ ನಿರ್ಮಿಸಲಾಗಿದ್ದ ಹೊಸ ಸರಕಾರಿ ಕಿರಿಯ ಪ್ರಾಥಮಿಕ ಶಾಲೆˌ ಊರಿನ ಸಂತೆಮಾಳˌ  ಎರಡು ಸಿನೆಮಾ ಮಂದಿರಗಳು ಹಾಗೂ ತಾಲೂಕಿನ ಸಹಕಾರಿ ಭತ್ತದ ಮಿಲ್ಲುˌ ಪಡಿತರ ದಾಸ್ತಾನು ಕೇಂದ್ರˌ ವಿದ್ಯುತ್ ಸರಬರಾಜು ಕೇಂದ್ರದ ತಾಲೂಕು ಮುಖ್ಯ ಕಛೇರಿˌ ಅದರ ಸಿಬ್ಬಂದಿಗಳ ವಸತಿಗೃಹದ ಸಾಲುˌ ವಿಶಾಲವಾಗಿದ್ದ ಮೂರು ಆಟದ ಬಯಲುˌ ಉಪಯೋಗದಲ್ಲಿ ಇಲ್ಲದ ಸಾಬರ ಸ್ಮಶಾನ ಇಷ್ಟು ಇದ್ಧವು.


ಹಿಂದೆ ಊರದಷ್ಟು ಬೆಳೆದಿದ್ದಿರದ ಕಾಲದಲ್ಲಿˌ ಆ ಗುಡ್ಡದಲ್ಲಿ ಯತೇಚ್ಛವಾಗಿ ಬೆಳೆದುಕೊಂಡಿರುತ್ತಿದ್ದ ಕಾಡಿನ ಸೊಪ್ಪುಗಳನ್ನ ಕೃಷಿಕಾರ್ಯಕ್ಕೂˌ ಹೈನು ಮೇವಿಗೂ ಊರವರು ಕೊಚ್ಚಿಕೊಂಡು ಹೋಗುವ ಅಭ್ಯಾಸವಿಟ್ಟುಕೊಂಡಿದ್ದುˌ ಅದನ್ನ ಆಡುನುಡಿಯಲ್ಲಿ "ಸೊಪ್ಪುಗುಡ್ಡೆ"ಯೆಂದೆ ಕರೆಯುವ ರೂಢಿ ಇಟ್ಟುಕೊಂಡಿದ್ದರು. ನಿರ್ಜನವಾಗಿದ್ದ ಕಾಲದಲ್ಲಿ ಅಲ್ಲಿ ಸತ್ತವರ ಹೆಣಗಳನ್ನ ಹೂಳುವ ಹಾಗೂ ಸುಡುವ ತಾಣವಾಗಿಯೂ ಬಳಸುತ್ತಿದ್ದರಂತೆ. ಒಟ್ಟಿನಲ್ಲಿ ನಿಶ್ಯಬ್ಧದ ತಾಣವಾಗಿದ್ದ ನೈಸರ್ಗಿಕ ಹಸಿರು ಸಮೃದ್ಧವಾಗಿದ್ದ ಗುಡ್ಡವೊಂದು ಕಾಲಾಂತರದಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಯ ಕಾರಣದಿಂದ ಮಾನವನ ಮೂಗು ತೂರಿಸುವಿಕೆಗೆ ಬಲಿಯಾಗಿ ವಾಸಯೋಗ್ಯ ಬಡಾವಣೆಯಾಗಿ ರೂಪಾಂತರಗೊಂಡು ಗಿಜಿಗುಡುವ ವಿಸ್ತರಣದ ಅವತಾರ ಎತ್ತಿತ್ತು. ಅದೆ ಆ ಊರಿನ ಮೊತ್ತಮೊದಲ ವಿಸ್ತರಣ ಸಹ ಹೌದು.


ಇಂತಿಪ್ಪ ಬಡಾವಣೆಯ ಪೂರ್ವದಂಚಿನಲ್ಲಿದ್ದ ತಿರುವುಗಳಲ್ಲಿ ಮುಖಾಮುಖಿ ನಿವೇಶನಗಳನ್ನ ಮಧ್ಯದಲ್ಲೊಂದು ಕಿರು ರಸ್ತೆ ಮಾತ್ರ ಬಿಟ್ಟುˌ ಜೊತೆಗೆ ನಿವೇಶನಗಳ ಹಿಂಭಾಗದಲ್ಲಿ ಹಿಂದಿನ ಹಾದಿಯೊಂದನ್ನ ಯೋಜಿಸಿ ಕಟ್ಟಿದ್ದರು. ಅಂತಹ ತಿರುವೊಂದರ ಅಂಚಿನಲ್ಲಿದ್ದ ಮೊದಲ ಮನೆ ಅವನ ಅಜ್ಜನದ್ದು. ಹೀಗಾಗಿ ಅವನನ್ನ ಅವನಮ್ಮ ಅಲ್ಲೆ ಹೆತ್ತಿದ್ದಳು.


ಇವರ ಮನೆಯೆದುರಿದ್ದದ್ದೆ "ಶಂಕರ್ ಕಂಪನಿ"ಯ ಬುಕ್ಕಿಂಗ್ ಏಜೆಂಟ್ ವಿಜಯೇಂದ್ರ ಶಣೈ ಮನೆ. ಅವರಮ್ಮನೆ ಈ ಇವನ ನೆಚ್ಚಿನ ಅಜ್ಜಿ "ಬಪಮ". ಕೊಂಕಣಿಗಳಾಗಿದ್ದ ಶಣೈಗಳ ಮನೆಯಲ್ಲಿ ಅವರ ಅಜ್ಜಿಯನ್ನ ಮೊಮ್ಮಕ್ಕಳೆಲ್ಲ ಬಪಮ ಎಂದೆ ಕೊಂಕಣಿಯಲ್ಲಿ ಸಂಬೋಧಿಸುವುದು ರೂಢಿ. ಹೀಗಾಗಿ ಊರಿನˌ ಕೇರಿಯˌ ಬೀದಿಯ ಆ ವಯಸ್ಸಿನ ಹಾಗೂ ಅದಕ್ಕಿಂತ ಸಣ್ಣ ಪ್ರಾಯದ ಮಕ್ಕಳ ಪಾಲಿಗೆ ಅವರು ಸಾರ್ವತ್ರಿಕವಾಗಿ ಬಪಮನೆ ಆಗಿದ್ದರು. ಪ್ರತಿದಿನ ಸಂಜೆ ಗಣಪತಿ ಪೂಜೆ ಮಾಡಿ ನೆನೆಸಿಟ್ಟ ಕಡಲೆಯನ್ನೋˌ ಒಂದೊಮ್ಮೆ ಮಗ-ಸೊಸೆ ತಂದ ಕಡಲೆಯ ದಾಸ್ತಾನು ತೀರಿ ಹೋಗಿದ್ದರೆ ನೆನೆಸಿಟ್ಟ ಹೆಸರುಬೇಳೆಯನ್ನೋ ಅದೆ ಗಣಪತಿಗೆ ನೈವೇದ್ಯ ಮಾಡಿ ಬೀದಿಯ ಎಲ್ಲಾ ಕಿರಿಯರಿಗೂ ಅದನ್ನ ಕರೆದು ಹಂಚುವ ಕ್ರಮ ಇಟ್ಟುಕೊಂಡಿದ್ದ ಬಪಮ ಎಲ್ಲಾ ಮಕ್ಕಳ ಮನಗೆಲ್ಲಲು ಅದೂ ಸಹ ಒಂದು ಕಾರಣವಾಗಿತ್ತು.


ತಲೆಮಾರುಗಳು ಬದಲಾದರೂ ಹೊಸಹುಟ್ಟಿನ ಮಕ್ಕಳ ಪಾಲಿಗೂ ಅಕ್ಕರೆಯ ಅಜ್ಜಿಯಾಗಿಯೆ ಉಳಿದಿದ್ದ ಬಪಮನ ವಯಕ್ತಿಕ ಜೀವನ ಮಾತ್ರ ಅಷ್ಟು ಹಿತಕಾರಿಯಾಗಿರಲಿಲ್ಲ. ಅದರಲ್ಲೂ ಅವರ ವೈವಾಹಿಕ ಬದುಕಂತೂ ದೊಡ್ಡ ದುರಂತ. ಉಡುಪಿ ಹತ್ತಿರದ ಪಾರಂಪಳ್ಳಿಯ ತುಂಬು ಕುಟುಂಬದ ಹುಡುಗಿ ಶಾಂತಾಮಾಯಿ ಅದಾಗಲೆ ಒಂದು ಹೆಣ್ಣುಮಗುವಿದ್ದ ವಿಧುರ ಶಣೈಮಾಮ್ ಎರಡನೆ ಹೆಂಡತಿಯಾಗಿ ಕರಾವಳಿಯ ತನ್ನೂರಿಂದ ಮಲೆಸೀಮೆಯ ಪ್ರಸಾದಪುರಕ್ಕೆ ಶಾಶ್ವತವಾಗಿ ಸ್ಥಳಾಂತರವಾದದ್ದು ಕಳೆದ ಶತಮಾನದ ಮೂರನೆ ದಶಕದಲ್ಲಿ. ಆಗಷ್ಟೆ ಪ್ರಾಯಕ್ಕೆ ಬಂದಿದ್ದ ಶಾಂತಾಮಾಯಿಗೂ ಅದಾಗಲೆ ಹೆಂಡತಿಯನ್ನ ಕಳೆದುಕೊಂಡು ವಿಧುರರಾಗಿದ್ದ ಅವರಿಂದ ಮೂರು ಪಟ್ಟು ಹೆಚ್ಚು ಪ್ರಾಯಸ್ಥರಾಗಿದ್ದ ಶಣೈಮಾಮರಿಗೂ ವರಸಾಮ್ಯವೆ ಇರಲಿಲ್ಲ. ಆದರೆ ಆಗೆಲ್ಲಾ ಇಂತಹ ಅಪಸವ್ಯದ ಜೋಡಿಗಳ ಮದುವೆಗಳಾಗುತ್ತಿದ್ದುದು ಸರ್ವೇಸಾಮಾನ್ಯ. ಅಂತಹ ಒಂದು ಒಲ್ಲದ ಮದುವೆಯ ಬಲಿಪಶುವಾಗಿ ಆ ಊರಿಗೆ ಬಂದಿದ್ದ ಶಾಂತಮಾಯಿಗೆ ತನ್ನ ಪ್ರಾಯಸಂದ ಗಂಡನ ಕೃಪೆಯಿಂದ ಮುಂದಿನ ಒಂದೆರಡು ದಶಕಗಳಲ್ಲಿ ಅನುಭವಿಸಬೇಕಾಗಿ ಬಂದದ್ದು ಮಾತ್ರ ಕೇವಲ ನರಕ ಸದೃಶ ಬಾಳ್ವೆ.


ಅದಾಗಲೆ ಅವರ ಗಂಡನಿಗೆ ಆ ಊರಿನ ಪ್ರಮುಖ ಸ್ಥಳದಲ್ಲಿ ಹೊಟೇಲೊಂದರ ವ್ಯವಹಾರವಿತ್ತು. ಅನ್ನ ಮಾರೋದು ಅಪರಾಧ ಅನ್ನುವ ಭಾವನೆಯಿದ್ದ ಕಾಲ ಅದು. ಹೊಟೆಲಿನಲ್ಲಿ ಬಂದು ತಿನ್ನುವ ಚಪಲ ಒಂದೆಡೆಯಾದರೆˌ ಹಾಗೆ ತಿಂದದ್ದು-ಕುಡಿದದ್ದು ಕಂಡವರ ಕಣ್ಣಿಗೆ ಬಿದ್ದರೆ ಆಡಿಕೊಳ್ಳುವ ಜನರ ಬಾಯಿಗೆ ಪುಗಸಟ್ಟೆ ಆಹಾರವಾದೇವು ಎಂದು ಅಂತಹ ಸಣ್ಣ ಊರುಗಳ ಮಂದಿ ಹೆದರುತ್ತಿದ್ದˌ ಇಬ್ಬಂದಿತನ ಇನ್ನೊಂದೆಡೆಗೆ ತುಂಬಿಕೊಂಡೆ ಕದ್ದುಮುಚ್ಚಿ ಹೊಟೇಲು ತಿಂಡಿಗಳಿಗೆ ಜೊಲ್ಲು ಸುರಿಸಿಕೊಂಡು ಬರುತ್ತಿದ್ದ ಆಶಾಡಭೂತಿ ಗ್ರಾಹಕರ ಕೃಪೆಯಿಂದ ತಕ್ಕಮಟ್ಟಿಗೆ ಚೆನ್ನಾಗಿಯೆ ಶಣೈಮಾಮರ ವ್ಯಾಪಾರ ಲಾಭದಲ್ಲಿ ಕುದುರಿತ್ತು. 


ಹೆಸರಿಗೆ ಹೊಟೇಲಾದರೂ ಅಲ್ಲಿನ ಅಡುಗೆಯವರˌ ಸಪ್ಲೆಯರˌ ಕ್ಲೀನರˌ ಎಂಜಲು ತಟ್ಟೆ ಲೋಟ ಪಾತ್ರೆ ತೊಳೆಯುವˌ ಅಡುಗೆಗೆ ಹಿಟ್ಟು-ಚಟ್ನಿ-ಖಾರ ಇವೆಲ್ಲವನ್ನೂ ಕಡೆದು ಅಚ್ಚುಕಟ್ಟಾಗಿ ಬೇಯಿಸಿ "ಊಟ ತಯಾರಿದೆ" ಬೋರ್ಡಿಗೆ ನ್ಯಾಯ ಒದಗಿಸುವ ಈ ಎಲ್ಲಾ ಬಹುಪಾತ್ರಗಳ ಏಕಪಾತ್ರಾಭಿನಯವನ್ನ ಮನೆಯವರೆ ಮಾಡಬೇಕಿತ್ತು. ಅದಕ್ಕಾಗಿ ಬೇರೆ ಕೆಲಸದವರನ್ನ ಇಟ್ಟುಕೊಂಡಿರದ ಹೊಟೇಲ್ ಮನೆಯ ವ್ಯವಸ್ಥೆ ಅದಾಗಿತ್ತು. ಮೊದಲ ಮೂರು ವಿಭಾಗಗಳನ್ನ ಶಣೈಮಾಮ್ ವಹಿಸಿಕೊಂಡಿದ್ದರೆˌ ಉಳಿದ ಎಲ್ಲಾ ಒಳಮನೆಯ ವಿಭಾಗಗಳಿಗೂ ಶಾಂತಾಮಾಯಿಯೆ ಜವಬ್ದಾರಿ. ಒಟ್ಟಿನಲ್ಲಿ ಇನ್ನೂ ಬೆಳ್ಳಿ ಮೂಡುವ ಮೊದಲೆ ಎದ್ದು ನಡುರಾತ್ರಿ ಜಾರಿದ ನಂತರ ಮಲಗುವ ಅನಿವಾರ್ಯತೆಯಿದ್ದ ಅವರ ಬದುಕಿನ ನಡುವಿನ ಕಾಲವೆಲ್ಲ ಒಂದೆ ಸಮನೆ ಮೈಮುರಿತದ ದುಡಿಮೆ.


ಇಷ್ಟು ಸಾಲದು ಅಂತ ಇದರ ಜೊತೆಗೆˌ ಅಷ್ಟೆಲ್ಲಾ ಪುಗಸಟ್ಟೆಯಾಗಿ ದುಡಿಸಿಕೊಂಡೂ ಸಹ ಕಿಂಚಿತ್ತೂ ಕರುಣೆಯಿಲ್ಲದವನಂತೆ ಸಣ್ಣಪುಟ್ಟದಕ್ಕೂ ಸಿಟ್ಟಾದಾಗ ಜಾಡಿಸಿ ಸೊಂಟಕ್ಕೆ ಒದೆಯುವುದನ್ನೆ ಅಭ್ಯಾಸ ಮಾಡಿಕೊಂಡಿದ್ದ ದುರುಳ ಗಂಡನ ಹಿಂಸಾಪ್ರವೃತ್ತಿಯನ್ನ ಸಹಿಸಿಕೊಂಡುˌ ಆ ನಡುವೆ ರಾತ್ರಿ ದಣಿದಿದ್ದರೂ ಬಿಡದೆ ಹಾಸಿಗೆಯಲ್ಲೂ ಹಾಕಿಕೊಂಡು ಹಿಂಸಿಸುತ್ತಿದ್ದ ಶಣೈಮಾಮನ ಪ್ರಸಾದದಿಂದ ಪುಟ್ಟ ಪ್ರಾಯದಲ್ಲೆ ನಾಲ್ಕು ಗಂಡು ಹಾಗೂ ಒಂದು ಹುಡುಗಿಯ ತಾಯಿಯಾಗಿದ್ದರು ಶಾಂತಾಮಾಯಿ. 

ಬಸಿರು-ಬಾಣಂತನಗಳ ಮಧ್ಯ ಹೊಟೇಲಿನ ಗೇಯ್ಮೆಯನ್ನೂ ಮಾಡಿಕೊಂಡುˌ ಮುದುಕ ಗಂಡನ ಹಿಂಸಾ ಪ್ರವೃತ್ತಿಯನ್ನೂ ತಾಳಿಕೊಂಡುˌ ತನ್ನ ಮಕ್ಕಳ ಜೊತೆಗೆ ಮಲ ಮಗಳ ದೇಖಾರೇಖಿಯನ್ನೂ ಮಾಡಿಕೊಂಡು ತನ್ನ ದೌರ್ಭಾಗ್ಯದ ಬದುಕನ್ನ ಹಲ್ಲುಕಚ್ಚಿ ಸಹಿಸಿಕೊಂಡೆ ಬದುಕಿ ಮಾಗಿ ಮುಪ್ಪಾಗಿ ತನ್ನ ವಯಸ್ಸಿಗಿಂತ ಬೇಗ ಮುದಿತನಕ್ಕೆ ಜಾರಿದ್ದ ಶಾಂತಾಮಾಯಿ ಅವನನ್ನೂ ಸೇರಿ ಅವನ ತಲೆಮಾರಿನವರನ್ನ ಹೊರತುಪಡಿಸಿ ಉಳಿದೆಲ್ಲ ಪರಿಚಿತರ ಪಾಲಿಗೂ ಬಪಮನಾಗಿ ಬದಲಾಗಿದ್ದರು.

( ಇನ್ನೂ ಇದೆ.)



https://youtu.be/Muv9sDDHmEE

No comments: