24 September 2014

ಪುಸ್ತಕದೊಳಗೆ - ೮


"ಮುಳುಗಡೆ"
ಲೇಖಕ; ಡಾ ನಾರ್ಬರ್ಟ್ ಡಿ'ಸೋಝಾ,
ಪ್ರಕಾಶಕರು; ರವೀಂದ್ರ ಪುಸ್ತಕಾಲಯ,
ಪ್ರಕಟಣೆ; ೧೯೮೮,
ಕ್ರಯ; ರೂಪಾಯಿ ೮೦.
" ಸಣ್ಣದೇವೇಗೌಡನಿಗೆ ಶಿವಮೊಗ್ಗದಲ್ಲಿ ನೂರಾರು ಕೆಲಸಗಳು. ಅಂಗಡಿ, ವರ್ಕ್'ಶಾಪು, ಗ್ಯಾರೇಜು ಎಂದೆಲ್ಲ ತಿರುಗಾಡಿದ್ದಾಯಿತು. 'ಇದಕ್ಕಿಂತ ಹಳ್ಳಿಯಲ್ಲಿ ತಿರುಗಾಡೋದೆ ವಾಸಿ' ಅಂದೆ. ಒಂದು ಘಂಟೆಗೆ ಊಟಕ್ಕೆ ಹೋದೆವು, ಊಟ ಅರ್ಧ ಆಗಿರಲಿಲ್ಲ ಅರಮನೆ ಹಕ್ಲು ರಂಗೇಗೌಡರು ಒಳಬಂದರು. ಗೌಡನಿಗೆ ಮೊದಲೆ ಪರಿಚಯವಂತೆ, ಅವನ ಬಳಿಯೆ ಅವರು ಬಂದು ಕುಳಿತರು. ನನ್ನನ್ನು ನೋಡಿ 'ನೀವೂ...' ಎಂದು ರಾಗ ಎಳೆದರು. 'ನಿಮ್ಮಲ್ಲಿಗೆ ಬಂದಿದ್ದೆ ಲಕ್ಷ್ಮಿನಾರಾಯಣ ವಿಗ್ರಹ ಹುಡುಕಿಕೊಂಡು' 'ನೆನಪಾಯ್ತು, ನೆನಪಾಯ್ತು, ಸಿಕ್ಕಿತೆ ಅದು?' ಎಂದು ವಿಚಿತ್ರವಾಗಿ ಕಣ್ಣು ಕಿರಿದುಗೊಳಿಸಿ ಕೇಳಿದರು. 'ಎಲ್ಲಿ ಸಿಗುತ್ತೆ ಸ್ವಾಮಿ? ಯಾವ ದೇಶವನ್ನು ಸುತ್ತಿಕೊಂಡು ಬರಲು ಹೋಗಿದ್ದಾನೋ ಲಕ್ಷ್ಮಿನಾರಾಯಣ!' ಎಂದು ಸೂಕ್ಷ್ಮವಾಗಿ ಅವರ ಮುಖವನ್ನ ದಿಟ್ಟಿಸಿದೆ. 'ಹಾಹಾಹಾ' ಎಂದು ನಕ್ಕರು. ಕ್ಲೋಸ್ ಕಾಲರಿನ ಹಸಿರು ಕೋಟು, ಪ್ಯಾಂಟು, ಟೋಪಿ, ದಪ್ಪ ಕನ್ನಡಕ ಾವರ ಎತ್ತರದ ಮೈಕಟ್ಟಿಗೆ ಉಡುಪು ಸೂಕ್ತವಾಗಿ ಹೊಂದಿಕೊಂಡಿತ್ತು. ಮಾತು ನೋಟದಲ್ಲಿ ಒಂದು ದರ್ಪ, ಗೈರತ್ತು, ಕೈಬೀಸುವುದು, ತೋಳು ಕುಣಿಸುವುದು ಮೊದಲಾದ ಅಂಗ ಚಲನೆಗಳು ಬೇರೆ.
'ಏನು ಸಮಾಚಾರ ಸಣ್ಣದೇವೇಗೌಡ್ರೆ?' 'ಹೇಳಿ ಸ್ವಾಮಿ.... ಮನೆ ಕೆಲಸ ಎಲ್ಲಿಗೆ ಬಂತು?' 'ನಡೀತಿದೆ... ನೀವು ನೋಡಲಿಲ್ಲ ಅಲ್ವೆ?.... ಈಗ ಹೋಗೋಣ.' ಊಟ ಸಾಗಿತು, ಕೇಳದೆಯೆ ರಂಗೇಗೌಡರು ಹೇಳುತ್ತಿದ್ದರು. 'ಪುರುಸೊತ್ತೆ ಇಲ್ಲಾ ನೋಡಿ, ಮೊನ್ನೆ ಬೆಂಗಳೂರಿಗೆ ಹೋಗಿದ್ದೆ, ನೆನ್ನೆ ಬೆಳಗ್ಯೆ ಬಂದೆ, ಮತ್ತೆ ಚೀಪು ಫೋನ್ ಮಾಡಿದಾರೆ, ನಾಳೆ ಹೋಗಬೇಕು, ಈ ಮುಳುಗಡೆ ವ್ಯವಹಾರದಲ್ಲಿ ನಾನೂ ಮುಳುಗಿ ಹೋದೆ, ಊಟ ನಿದ್ದೆ ಯಾವುದಕ್ಕೂ ಪುರುಸೋತ್ತಿಲ್ಲ.' ಸಣ್ಣದೇವೇಗೌಡ 'ಹಾಂಹೂಂ'ಎಂದು ಊಟ ಸಾಗಿಸಿದ. ಒಂದೆರಡು ಸಾರಿ ನಾನು ನೋಡಿದಾಗ ಕಣ್ಣು ಮಿಟುಕಿಸಿದ. ಊಟ ಮುಗಿಯಿತು. 'ಬನ್ನಿ ಕಾರಿದೆ ಹೋಗೋಣ' ಎಂದರು ಗೌಡರು. ನಾವು ಕಾರನ್ನು ಏರಿದೆವು, ನಮ್ಮ ಜೀಪು ಹಿಂಬಾಲಿಸಿತು.
ದುರ್ಗಿಗುಡಿಯಾಚೆಯ ಹೊಸ ಬಡಾವಣೆ ಮನೆ ಅರ್ಧ ಎದ್ದಿತ್ತು. ಆದರೆ ಮಜಭೂತಾಗಿ ಕಟ್ಟಿಸಿದ್ದರು ಗೌಡರು. ಅವರೆ ನಿಂತು ವಿವರಿಸಿದರು, ಇದು ಪೋರ್ಟಿಕೋ, ಇದು ವರಾಂಡ, ಇದು ಆಫೀಸು, ದೇವರ ಮನೆ, ಹಾಲು, ಬೆಡ್ಡು, ಡೈನಿಂಗು, ಅಡುಗೆ ಮನೆ, ಕೆಳಗೆ ನಾಲ್ಕು ರೂಮುಗಳು, ಮೇಲೆ ದೊಡ್ದ ಹಾಲು ಮತ್ತೆ ನಾಲ್ಕು ರೂಮುಗಳು, ಪ್ರತಿಯೊಂದಕ್ಕೂ ತಗುಲಿಕೊಂಡೆ ಕಕ್ಕಸು, ತೋಟ ಸುತ್ತಲೂ ಬರುತ್ತೆ, ಗ್ಯಾರೇಜು. 'ಏನು ಇಷ್ಟೊಂದು ರೂಮುಗಳು!' 'ನಾಲ್ಕು ಜನ ಹುಡುಗರಿಗೆ, ನಾಲ್ಕು ಜನ ಹೆಣ್ಣು ಮಕ್ಕಳೂ ಬಂದರೆ ಅವರಿಗೂ ಬೇಕಲ್ಲ ಸಪರೇಟಾಗಿ, ಇನ್ನು ನೆಂಟ್ರುಪಂಟ್ರು ಬರ್ತಾರೆ, ಅವರಿಗೆ ಬೇಕಲ್ಲ, ಸಾಲದೇನೋ ಅನ್ನಿಸ್ತಿದೆ ನನಗೆ, ಹಳ್ಳಿಲಿದ್ದೆ ಯಾರೂ ಬರ್ತಿರಲಿಲ್ಲ, ಸಿಟಿ ಸೇರಿದ ಮೇಲೆ ಬಂದು ಹೋಗೋರು ಇದ್ದೇ ಇರ್ತಾರೆ ನೋಡಿ' 'ಅಂತೂ ಪೇಟೆಯವರಾಗ್ತಿದೀರ' 'ಆಗೋದಪ್ಪ, ನನಗೂ ಆ ಕೊಂಪೆಲಿದ್ದು ಬೇಸರ ಬಂದು ಹೋಗಿತ್ತು, ಗಾಜನೂರು ದೂರ ಇಲ್ಲ, ಜಮೀನು ಅಲ್ಲಿ, ಮನೆ ಇಲ್ಲಿ' ಮನೆ ನೋಡಿ ಮುಗಿಸಿ ನಾವು ಜೀಪು ಹತ್ತಿದೆವು. ಸಣ್ಣದೇವೇಗೌಡ 'ನೋಡಿದಿರಾ?' 'ನೋಡಿದೆ' 'ಶರಾವತಿಗೆ ಅಣೆಕಟ್ಟು ಕಟ್ಟಬಾರದು ಅಂತ ಇದೆ ಮನುಷ್ಯ ಉಪವಾಸ ಸತ್ಯಾಗ್ರಹ ಮಾಡಿದ್ದ! ಅಮರಣಾಂತ ಉಪವಾಸ ಸತ್ಯಾಗ್ರಹ?!' 'ಹೌದೇನು!' 'ಈಗ ಮುಳುಗಡೆಯಿಂದ ಹೆಚ್ಚು ಲಾಭ ಆಗಿರೋದು ಸಹ ಇವನಿಗೇನೆ!'
ನಾನು ಕೇಳುತ್ತ ಕುಳಿತೆ.
- ಡಾ ನಾ ಡಿ'ಸೋಝಾ.
ಮಲೆನಾಡಿನ ಹಾಗೂ ಪಶ್ಚಿಮ ಘಟ್ಟಗಳ ಕುರಿತು ದಟ್ಟ ಬಣ್ಣನೆ ಬರುವ ಅನೇಕ ಕಥೆ ಕಾದಂಬರಿಗಳನ್ನ ಬರೆದಿರುವ ನಾರ್ಬರ್ಟ್ ಡಿ'ಸೋಝರು ಸಾಗರದಂತಹ ಊರಿನಲ್ಲಿ ಕುಳಿತು ನಡೆಸುವ ತಮ್ಮ ಸಾಹಿತ್ಯಿಕ ಚಟುವಟಿಕೆಗಳಿಂದ ನಾಡಿನಾದ್ಯಂತ ಖ್ಯಾತರಾದವರು. ಲೋಕೋಪಯೋಗಿ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿದ್ದ ಅವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಹಾಗೂ ಸಾಗರ ಉಪವಿಭಾಗಗಳಲ್ಲಿ ಸೇವೆ ಸಲ್ಲಿಸುವಾಗ ಅಣೆಕಟ್ಟುಗಳ ನಿರ್ಮಾಣ ಅದರಿಂದಾಗುವ ಜನ ಸಂಸ್ಕೃತಿಯ ವಿನಾಶ, ಪರಿಸರಕ್ಕೆ ಬಂದೆರಗಿದ ಮಾಸಲಾಗದ ಧಕ್ಕೆ ಇವುಗಳನ್ನೆಲ್ಲ ಬಹಳ ಹತ್ತಿರದಿಂದ ಕಂಡು ನೊಂದವರು. ಹಿರೆ ಭಾಸ್ಕರ ಅಣೆಕಟ್ಟನ್ನ ಮುಳುಗಿಸಿದ ಲಿಂಗನಮಕ್ಕಿ ಅಣೆಕಟ್ಟು, ಅದೆ ಅಣೆಕಟ್ಟೆಯಲ್ಲಿ ಮುಳುಗಿದ ತಡಗಳಲೆ ಒಡ್ಡು, ವಾರಾಹಿಯನ್ನ ತಡೆದು ನಿಲ್ಲಿಸಿದ ಯಡೂರು ಅಣೆಕಟ್ಟು, ಚಕ್ರಾ ನದಿಯನ್ನ ಹಿಡಿದುಕೊಂಡ ಚಕ್ರಾ ಅಣೆಕಟ್ಟು ಹೀಗೆ ಎಲ್ಲಾ ಒಡ್ಡುಗಳೂ ಮಲೆನಾಡಿನ ಜೀವ ವೈವಿಧ್ಯ ಹಾಗೂ ಪರಿಸರಕ್ಕೆ ತಂದೊಡ್ಡಿದ ಹಾನಿಯನ್ನ ಅವರ ಬರಹಗಳಲ್ಲಿ ಸಶಕ್ತವಾಗಿ ಬಿಂಬಿಸಿದ್ದಾರೆ.
ರಾಜಧಾನಿಯ ಚಿಲ್ಲರೆ ಸಾಹಿತ್ಯಿಕ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರ ತಮ್ಮ ಹುಟ್ಟೂರಿಗೆ ಒಂದು ಸಾಂಸ್ಕೃತಿಕ ಚೌಕಟ್ಟು ಹಾಕಿ ಕೊಟ್ಟಿರುವ ಸಾಗರ ಕೇಂದ್ರಿತ ಚಟುವಟಿಕೆಗಳು ಕೇವಲ ಬರಹಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರ ಹೋರಾಟ, ತಿರುಗಾಟದ ನಾಟಕ, ನದಿ ಉಳಿಸಿ ಚಳುವಳಿ, ರೈಲ್ವೆ ಹೋರಾಟ ಸಮಿತಿ ಹೀಗೆ ಅಸಂಖ್ಯ. ಅಣೆಕಟ್ಟು ಹಾಗೂ ಮುಳುಗಡೆಗಳ ಸಂಬಂಧ ಕನ್ನಡವಷ್ಟೆ ಅಲ್ಲದೆ ಇನ್ಯಾವುದೆ ಭಾರತೀಯ ಭಾಷೆಗಳಲ್ಲೂ ಇವರಷ್ಟು ಬರೆದವರು ಇನ್ಯಾರೂ ಇದ್ದಿರಲಾರರು. "ಮುಳುಗಡೆ" "ಗುಣವಂತೆ" "ಒಡ್ಡು' ಹಾಗೂ "ದ್ವೀಪ" ಅವರು ಈ ಸಂಗತಿಯ ಕುರಿತು ಬರೆದಿರುವಂತಹ ಕಾದಂಬರಿಗಳು. ಅದರಲ್ಲೂ "ಮುಳುಗಡೆ" ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಕಾಲದ ಸಚಿತ್ರ ದರ್ಶನ ಮಾಡಿಸುತ್ತದೆ. ಭೂಹೀನರಾಗಿ ನೆಲ ತೊರೆದ ಆದಿವಾಸಿ ಹಸಲರ ಸಂಕಟ, ಸಮಯಸಾಧಕರಾಗಿ ಊರ ದೇವರ ಪ್ರತಿಮೆಗಳನ್ನೂ ವಿದೇಶಕ್ಕೆ ಮಾರಿಕೊಂಡು ತಿಂದ ಜಮೀನ್ದಾರರ ಸಮಯಸಾಧಕತನ, ಲಂಚಕೋರ ಅಧಿಕಾರಿಗಳ ದುರಾಸೆಯ ಪರಮಾವಧಿ ಹಾಗೂ ದರ್ಪ, ಮೂಕ ಪಶುಗಳ ಒಡಲ ಆಕ್ರಂದನ, ಸರಕಾರಿ ನೀತಿಗಳ ದುರುಳತನ, ಇವೆಲ್ಲವನ್ನೂ ನೋಡಿಕೊಂಡು ನಿರ್ಲಿಪ್ತಳಾಗಿ ಹರಿಯುತ್ತಿದ್ದ ಶರಾವತಿ ಒತ್ತಾಯಕ್ಕೆ ಒಡ್ಡು ಹೊಕ್ಕಿ ನಿಂತದ್ದು ಎಲ್ಲವನ್ನೂ ಅವರು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಈ ಪೈಕಿ "ದ್ವೀಪ" ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಅದೆ ಹೆಸರಿನ ಚಲನಚಿತ್ರವಾಗಿ ರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ.
"ಮುಳುಗಡೆ' ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯವಾಗಿತ್ತು, ಈಗ ಮಂಗಳೂರು ವಿಶ್ವವಿದ್ಯಾಲಯ ಅದನ್ನ ತನ್ನ ಪದವಿ ಪಠ್ಯದಲ್ಲಿ ಅಳವಡಿಸಿಕೊಂಡಿದೆ. ೧೯೮೩ನೆ ಸಾಲಿನ ಸುಧಾ ಕಾದಂಬರಿ ಸ್ಪರ್ಧೆಯ ವಿಜೇತ ಕೃತಿಯಾದ ಇದರ ಓದು ಸ್ವಾತಂತ್ರೋತ್ತರ ಭಾರತದಲ್ಲಿ ಅಣೆಕಟ್ಟಿನ ಹೆಸರಿನಲ್ಲಿ ಆದ ಸರಕಾರಿ ಸೊಕ್ಕಿನ ಪ್ರದರ್ಶನವನ್ನ ಅರಿತುಕೊಳ್ಳಲಿಕ್ಕೆ ಸಹಕಾರಿ.

No comments: