24 September 2014

ಪುಸ್ತಕದೊಳಗೆ - ೧೭






"ಗಾನ್ ವಿತ್ ದ ವಿಂಡ್" ( ಆಂಗ್ಲ.)

"ಗಾನ್ ವಿತ್ ದ ವಿಂಡ್" ( ಕನ್ನಡಾನುವಾದ.)

ಲೇಖಕರು; ಮಾರ್ಗರೆಟ್ ಮಿಶೆಲ್ ( ಮೂಲ.),

ಶ್ಯಾಮಲಾ ಮಾಧವ ( ಕನ್ನಡ.)

ಪ್ರಕಾಶಕರು; ಆಂಗ್ಲ, ಪ್ಯಾನ್ ಬುಕ್ಸ್.
ಕನ್ನಡ, ಅಂಕಿತ ಪುಸ್ತಕ.

ಪ್ರಕಟಣೆ; ೧೯೩೬ ( ಆಂಗ್ಲ ಮೊದಲ ಆವೃತ್ತಿ.)
೨೦೦೪ ( ಕನ್ನಡ ಆವೃತ್ತಿ.),

ಕ್ರಯ; ೮.೯೯ ಪೌಂಡ್ ( ಆಂಗ್ಲ.)
ರೂಪಾಯಿ ಇನ್ನೂರೈವತ್ತು ( ಕನ್ನಡ.).




                                    

            "ಅಂದು ರಾತ್ರಿ ಭೋಜನದಲ್ಲಿ ಸ್ಕಾರ್ಲೆಟ್ ತನ್ನ ತಾಯ ಸ್ಥಾನವನ್ನು ನಿರ್ವಹಿಸಿದಳಾದರೂ, ಅವಳ ಮನವೆಲ್ಲ ತಾಯ ಸಾಮೀಪ್ಯಕ್ಕಾಗಿ ಕಾತರಿಸುತ್ತಿತ್ತು. ತನ್ನ ಸಂಕಷ್ಟವನ್ನು ತಾಯೊಡನೆ ನಿವೇದಿಸಿ ಕೊಳ್ಳುವುದು ಅಸಾಧ್ಯವೇ ಇತ್ತಾದರೂ ತಾಯಿಯ ಉಪಸ್ಥಿತಿಯೇ ಅವಳ ಮನವನ್ನು ಹಗುರಾಗಿಸ ಬಹುದಿತ್ತು. ತನ್ನ ಸಮಸ್ಯೆಯನ್ನೇ ಮರೆತು ತಂದೆ ಎಂದಿನಂತೆ ಅಧಿಕಾರ ವಾಣಿಯಿಂದ ಯುಧ್ಧದ ಬಗ್ಗೆ ಘಂಟಾಘೋಷವಾಗಿ  ಮಾತು ಹರಿಸಿದಾಗ ಸ್ಕಾರ್ಲೆಟ್ ಇನ್ನು ಸಹಿಸದಾದಳು. ಅಷ್ಟರಲ್ಲಿಯೇ ಕೇಳಿಸಿದ ಬಂಡಿಯ ದನಿಗೆ ಅವಳು ಒಮ್ಮೆಲೇ ಕುಳಿತಲ್ಲಿಂದ ಎದ್ದು ಬಿಟ್ಟಳು.

              ಬಂಡಿಯು ನೇರವಾಗಿ ಮನೆಯ ಹಿಂಭಾಗಕ್ಕೆ ಹೋದುದರಿಂದ ಸ್ಕಾರ್ಲೆಟ್ ನಿರಾಶಳಾಗಿ ಪುನಃ ಕುಳಿತು ಬಿಟ್ಟಳು. ಹೊರಗೆ ಸಂಭ್ರಮದ ದನಿಗಳೊಡನೆ ಅದೇ ತಾನೇ ಹೊರಗೆ ಹೋದ ಪೋರ್ಕ್‍ನ ದನಿಯೂ ಸೇರಿ ಹೆಜ್ಜೆಗಳು ಊಟದ ಮನೆಯ ಹೊರಗೆ ನಡೆತಂದು ಒಳ ಬಂದ ಪೋರ್ಕ್ 
ಬಿನ್ನವಿಸಿದ;  "ಮಿಸ್ಟರ್ ಜೆರಾಲ್ಡ್, ನಿಮ್ಮ ಹೊಸ ಹೆಣ್ಮಗಳು ಬಂದಿದ್ದಾಳೆ."

            ಮದುಮಗನ ಸಂಭ್ರಮ ಅವನ ಮಾತು, ಮುಖದಲ್ಲಿ ಎದ್ದು ತೋರುತ್ತಿತ್ತು.

              "ಹೊಸ ಹೆಣ್ಣೇ? ನಾನ್ಯಾವ ಹೆಣ್ಣನ್ನೂ ಕೊಂಡಿಲ್ಲ."

              "ಹೌದು ಒಡೆಯಾ, ನೀವು ಕೊಂಡಿದ್ದೀರಿ. ಆಕೆ ಇಲ್ಲಿ ನಿಮ್ಮನ್ನು ಕಂಡು ಮಾತಾಡಲು ಕಾದಿದ್ದಾಳೆ." ಕೈಗಳನ್ನು ಹಿಸುಕುತ್ತಾ ಪೋರ್ಕ್ ನುಡಿದ .
               " ಸರಿ, ಮದುಮಗಳನ್ನು ಒಳಗೆ ಕರೆ ತಾ."

              ಒಳ ಪ್ರವೇಶಿಸಿದ ಡಿಲ್ಸಿಯು  ನೇರ ಮೈಕಟ್ಟು ನಡೆಯ ಗಂಭೀರ ಗತ್ತಿನ ಚಹರೆಯ ಮಹಿಳೆಯಾಗಿದ್ದಳು. ಆಕೆಯ ರೂಪದಲ್ಲಿ ನೀಗ್ರೋ - ಇಂಡಿಯನ್ ಚಹರೆಗಳೆರಡೂ ಮಿಳಿತವಾಗಿದ್ದುವು. ಸ್ಕಾರ್ಲೆಟ್‍ಗೂ ಮಿಸ್ಟರ್ ಒಹಾರಾಗೂ ಅಭಿವಾದಿಸಿದ ಆಕೆ ತನ್ನೊಡನೆ ತನ್ನ ಮಗಳನ್ನೂ ಕೊಂಡ ಒಡೆಯನ ಔದಾರ್ಯವನ್ನು ಹೊಗಳಿ ಕೃತಜ್ಞತೆ ಸಲಿಸಿ ತೊಂದರೆ ಕೊಡುತ್ತಿರುವುದಕ್ಕಾಗಿ ಕ್ಷಮೆ ಯಾಚಿಸಿದಳು. ಕರುಣೆಯ ಕಾಯಕದಲ್ಲಿ ಸಿಕ್ಕಿ ಬಿದ್ದ ಜೆರಾಲ್ಡ್ ಸಂಕೋಚಗೊಂಡ ಡಿಲ್ಸಿ ತನ್ನ ಮಗಳು ಪ್ರಿಸ್ಸಿಯನ್ನು ಸ್ಕಾರ್ಲೆಟ್‍ಗೆ ಆಳಾಗಿ ಕೊಟ್ಟಿರುವುದಾಗಿ ಸಾರಿದಳು. ಹಕ್ಕಿಯಂತೆ ತೆಳ್ಳಗಿದ್ದ ಪ್ರಿಸ್ಸಿಯ ಕೂದಲು ಹಲವಾರು ಪಿಗ್‍ಟೇಲ್‍ಗಳಲ್ಲಿ ಹೆಣೆಯಲ್ಪಟ್ಟಿತ್ತು. ತಾಯ ಸೂಚನೆಯಂತೆ ಪ್ರಿಸ್ಸಿ ಥಟ್ಟನೆ ವಂದಿಸಿ ನಕ್ಕಂತೆ ಹಲ್ಲು ಕಿರಿದಾಗ ಸ್ಕಾರ್ಲೆಟ್‍ಗೂ ನಗದೆ ಇರಲಾಗಲಿಲ್ಲ. 

              ಡಿಲ್ಸಿ ಅನುಮತಿ ಪಡೆದು ಮಗಳೊಡನೆ ಹೊರನಡೆದಳು. ಪೋರ್ಕ್ ಹಿಂಬಾಲಿಸಿದ.

             ಕ್ಯಾರಿನ್ ರಮ್ಯ ಕಾದಂಬರಿಯೊಂದರ ಪ್ರಣಯ ಪ್ರಸಂಗದಲ್ಲಿ ಮುಳುಗಿ ತೇಲುತ್ತಿದ್ದಳು. ಸ್ಯುಲೆನ್ ಮರುದಿನದ ಪಾರ್ಟಿಯಲ್ಲಿ ಸ್ಟ್ಯುವರ್ಟ್‍ನನ್ನು ಸ್ಕಾರ್ಲೆಟ್‍ಳ ಪಕ್ಕದಿಂದ ತನ್ನತ್ತ ತನ್ನ ನಾಜೂಕು ಸ್ತ್ರೀತ್ವದತ್ತ ಆಕರ್ಷಿಸಲು ಸಾಧ್ಯವಾದೀತೋ ಏನೆಂದು ಚಿಂತೆಯಲ್ಲಿ ಮುಳುಗಿದ್ದಳು. ಸ್ಕಾರ್ಲೆಟ ಆಶ್‍ಲಿಯ ಬಗೆಗಿನ ಚಿಂತೆಯುಲ್ಲಿ ಯೋಚನೆಯ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಳು .

             ಅವಳ ಅಂತರಂಗವೆಲ್ಲ ಬುಡಮೇಲಾಗಿದ್ದರೂ ಅವಳ ಈ ಪ್ರೀತಿಯ ಕೋಣೆ ಮಾತ್ರ ಎಂದಿನ ವ್ಯವಸ್ಥೆಯಲ್ಲೇ ಇತ್ತು. ವಿಶಾಲ ಮಹಾಗನಿ ಮೇಜು, ಕಪಾಟುಗಳು, ಬೆಳ್ಳಿಯ ಪರಿಕರಗಳು, ಒರಸು ಬಟ್ಟೆಗಳು ಎಲ್ಲವೂ ಸ್ವಸ್ಥಾನದಲ್ಲೇ ಇದ್ದು ಅವಳ ಸಹನೆಯನ್ನು ಪರೀಕ್ಷಿಸುತ್ತಿದ್ದುವು. ಅಲ್ಲಿಂದ ಹೊರಗೋಡಿ ತಾಯ ಆಫೀಸ್ ಕೋಣೆಯಲ್ಲಿ ಅತ್ತು ಮನವನ್ನು ಹಗುರಾಗಿಸ ಬಯಸಿದ್ದಳು. ಅವಳ ಪರಮ ಪ್ರಿಯ ಕೋಣೆ- ತಾಯಿ ದಿನವೂ ಜಮೀನಿನ ಲೆಕ್ಕಪತ್ರಗಳನ್ನು ಪರಿಶೀಲಿಸುವ ಆ ಕೋಣೆಯಲ್ಲಿ - ತಾಯ ಮಡಿಲಲ್ಲಿ ತಲೆಯಿರಿಸಿ ಅತ್ತು ಮನವನ್ನು ಹಗುರಾಗಿಸ ಬಯಸಿದಳು ಸ್ಕಾರ್ಲೆಟ್.

            ಕೊನೆಗೂ ಬಂಡಿಗಾಲಿಗಳ ಸದ್ದೂ ಎಲೆನ್‍ಳ ಇನಿದನಿಯೂ ಕೇಳಿ ಬಂತು. ಎಲ್ಲ ಕಣ್ಗÀಳೂ ಉತ್ಸುಕತೆಯಿಂದ ಬಾಗಿಲತ್ತ ತಿರುಗಿದುವು.  ಎಲೆನ್ ಒಳ ಹೊಕ್ಕೊಡನೆ ಮಾಯೆಯಿಂದೆಂಬಂತೆ ಜೆರಾಲ್ಡ್‍ನ ಮುಖ ಬೆಳಗಿತು . 

            ಎಮ್ಮಿಯ ಮಗು ತೀರಿತೆಂದು ಎಲೆನ್ ತಿಳಿಸಿದಾಗ ತಾಯಿಯಿರದ ಆ ಮಗು ತೀರಿ ಕೊಂಡುದೇ ಉತ್ತಮವೆಂದು ಜೆರಾಲ್ಡ್ ಅನ್ನುವಾಗ ಎಲೆನ್ ಆ ಮಾತನ್ನಲ್ಲೇ ಹಗುರವಾಗಿ ಕಡಿದಳು. ಎಮ್ಮಿಯ ಮಗುವಿನ ತಂದೆ ಟ್ಯಾರಾದ ಓವರ್ಸಿಯರ್ ಆಗಿದ್ದ ಜೊನಾಸ್ ವಿಲ್ಕರ್‍ಸನ್ ಇರಬಹುದೆಂಬ ಸಂದೇಹ ಸ್ಕಾರ್ಲೆಟ್‍ಗೂ ಬಂದಿತ್ತು. 

              ಪ್ರಾರ್ಥನೆಗೆ ಸಜ್ಜಾದ ಎಲೆನ್‍ಳನ್ನು ಮ್ಯಾಮಿಯ ಧೃಢ ಸ್ವರ ಎಚ್ಚರಿಸಿತು. ಉಪಯೋಗಕ್ಕೆ ಬಾರದ ಕೃತಘ್ನರಾದ ಆ ಬಡ ಬಿಳಿಯರಿಗಾಗಿ ಜೀವ ತೇದು ಊಟ ಬಿಡುವುದರಲ್ಲಿ ಅರ್ಥವಿಲ್ಲವೆಂದು ಕಟುವಾಗಿ ನುಡಿದ ಮ್ಯಾಮಿ ಎಲೆನ್‍ಳ ಊಟವನ್ನು ಸಿಧ್ಧಗೊಳಿಸುವಂತೆ ಪೋರ್ಕ್‍ಗೆ ಆಜ್ಞಾಪಿಸಿದಳು. 

           ಎಲೆನ್ ಕುಳಿತೊಡನೆ ಮಕ್ಕಳ ಅಹವಾಲುಗಳು ಅವಳನ್ನು ಮುತ್ತಿ ಕೊಂಡವು. ನಡುನಡುವೆ ಮಕ್ಕಳನ್ನು ಗದರುತ್ತಾ ಜೆರಾಲ್ಡ್ ಕೂಡ ಪತ್ನಿಯು ತನ್ನ ಮಾತನ್ನೇ ಕೇಳಲೆಂಬ ತನ್ನಿಷ್ಟವನ್ನು ಸಾಧಿಸ ಹೊರಟಿದ್ದ. ಚಾಲ್ರ್ಸ್‍ಟನ್‍ನ ಸಜ್ಜನರ ಬಗ್ಗೆ ಜೆರಾಲ್ಡ್ ನುಡಿದ ಮಾತುಗಳನ್ನು ಒಪ್ಪಿ ಕೊಂಡ ಎಲೆನ್ ಮಕ್ಕಳ ಅಹವಾಲುಗಳಿಗೂ ಸಹನೆಯಿಂದ ಉತ್ತರಿಸಿದಳು.

            ಕರಿಯರನ್ನು ದಾಸ್ಯದಿಂದ ಬಿಡಿಸಿ ಸ್ವತಂತ್ರರಾಗಿಸ ಹೊರಟಿರುವ ಯಾಂಕಿಗಳು ಈ ಬಿಡುಗಡೆಗೆ ಯಾವ ಬೆಲೆಯನ್ನೂ ತೆರಲು ಸಿಧ್ಧರಿರದೆ ಇರುವ ಬಗ್ಗೆ ಜೆರಾಲ್ಡ್ ನುಡಿಯುತ್ತಿದ್ದಾಗ ಎಲೆನ್‍ಳ ಊಟ ಮುಗಿದು ಅವಳು ಎದ್ದು ಬಿಟ್ಟಳು. 

                 "ಪ್ರಾರ್ಥನೆಯೇ ?" ಜೆರಾಲ್ಡ್ ಅರೆಮನದಿಂದ ಕೇಳಿದ. 

                "ಹೌದು ಈಗಾಗಲೇ ಬಹಳ ತಡವಾಗಿದೆ" ಎಲೆನ್ ಉತ್ತರಿಸಿದಳು. 

             ಮೇಜು ಪ್ರಾರ್ಥನೆಗೆ ಸಿಧ್ಧವಾದೊಡನೆ ಎಲೆನ್ ಮೊಣಕಾಲೂರಿ ಧರ್ಮಗ್ರಂಥದ ಮೇಲೆ ಕೈಗಳನ್ನು ಜೋಡಿಸಿ ಆರಂಭಿಸಿದಳು. ತಂದೆ ಮಕ್ಕಳು ತಮ್ಮ ತಮ್ಮ ಸ್ಥಾನದಲ್ಲೂ ಆಳುಗಳು ಬಾಗಿಲ ಬಳಿಯಲ್ಲೂ ಮೊಣಕಾಲೂರಿ ಸಿಧ್ಧವಾದರು. ಮ್ಯಾಮಿ ನರಳುತ್ತಾ ತನ್ನ ಸ್ಥೂಲಕಾಯದ ಭಾರವನ್ನು ತನ್ನ ಮೊಣಕಾಲ್ಗಳ ಮೇಲಿರಿಸಿದರೆ ಪೋರ್ಕ್ ನೆಟ್ಟನೆ ಸರಳಿನಂತೆಯೂ ರೋಸಾ, ಟೀನಾ ಹಾಗೂ ಇತರ ಆಳುಗಳು ತಮ್ಮ ಕ್ಯಾಲಿಕೋ ಉಡುಪನ್ನು ಹರಡುತ್ತಲೂ ನಿದ್ದೆಯಿಂದ ಕಣ್ಣೆಳೆದು ಹೋಗುತ್ತಿದ್ದ ಜ್ಯಾಕ್ ಮ್ಯಾಮಿಯ ಕೈಗೆ ತನ್ನ ಕಿವಿ ಸಿಗದಂತೆ ದೂರದಲ್ಲೂ ಸಿಧ್ಧರಾಗಿ ಉತ್ಸುಕತೆಯಿಂದ ಪ್ರಾರ್ಥನೆಗಾಗಿ ಎದುರು ನೋಡಿದರು. 

              "ಪವಿತ್ರ ಮಾತೆ ಮೇರಿ ನಮಗಾಗಿ ಇಂದೂ ನಮ್ಮ ಅಂತಿಮ ಕ್ಷಣಗಳಲ್ಲೂ ಪ್ರಾರ್ಥನೆಯಿರಲಿ!" ಎಂದು ಸಾಗಿದ ಪ್ರಾರ್ಥನೆಯು ಇಂದೂ ಸ್ಕಾರ್ಲೆಟ್‍ಳ ಮನದ ತುಮುಲವನ್ನಡಗಿಸಿ ಶಾಂತಿ ತುಂಬಿತು. ಎಲೆನ್ ಮಧ್ಯಸ್ಥಿಕೆ ವಹಿಸಿದಾಗ ಸ್ವರ್ಗಕ್ಕೆ ಅವಳ ಕರೆಯು ಖಂಡಿತ ಕೇಳುವುದೆಂದು ಸ್ಕಾರ್ಲೆಟ್‍ಳ ಧೃಢ ನಂಬಿಕೆಯಾಗಿತ್ತು. 

             ಮುಗಿದ ಕೈಗಳ ಮೇಲೂ ತಲೆಬಾಗಿ ಆಶ್‍ಲಿಯ ಚಿಂತೆಯಲ್ಲಿ ಮುಳುಗಿದ್ದ ಸ್ಕಾರ್ಲೆಟ್‍ಗೆ ಇದ್ದಕ್ಕಿದ್ದಂತೆ ಆಶ್‍ಲಿಗೆ ತಾನು ಅವನನ್ನು ಪ್ರೇಮಿಸುತ್ತಿರುವ ಅರಿವೇ ಇಲ್ಲವೆಂಬ ಸತ್ಯ ಗೋಚರವಾಯ್ತು . ಅವನಿಗೆ ಅರಿವಾಗುವಂತೆ ತಾನೆಂದೂ ನಡೆದು ಕೊಂಡಿರಲಿಲ್ಲ. ಅವನ ಕಣ್ಗಳನ್ನು ಆಗಾಗ ಕವಿಯುತ್ತಿದ್ದ ವ್ಯಥೆಯ ಮೋಡಕ್ಕೆ ಇದೇ ಕಾರಣವೆಂದು ಆಕೆ ಅರಿತಳು. ಹೇಗಾದರೂ ತನ್ನ ಪ್ರೇಮವನ್ನು ಅರುಹಿದರೆ ..... ಹೌದು, ಹೇಗಾದರೂ ........

            ತಾಯಿಯ ದೃಷ್ಟಿ ತನ್ನ ಮೇಲಿದ್ದುದು ಅರಿವಾಗಿ, ಪ್ರಾರ್ಥನೆಯ ಸರಣಿಯನ್ನು ಮರೆತಿದ್ದ ಸ್ಕಾರ್ಲೆಟ್ ಎಚ್ಚತ್ತು ತನ್ನ ಭಾಗವನ್ನು ಮುಂದುವರಿಸಿದಳು. ಕನ್ಯೆ ಮೇರಿಯ ಸ್ತುತಿಯನ್ನು ಎಲೆನ್ ಸುಶ್ರಾವ್ಯವಾಗಿ ಮುಂದುವರಿಸಿದಾಗ ಎಂದಿನಂತೆ ಸ್ಕಾರ್ಲೆಟ್‍ಳ ಮನದಲ್ಲಿ ಮಾತೆ ಮೇರಿಯ ಸ್ಥಾನದಲ್ಲಿ ತಾಯಿ ಎಲೆನ್‍ಳ ಚಿತ್ರವೇ ಇತ್ತು. 

                ಪ್ರಾರ್ಥನೆ ಮುಗಿದು ಎದ್ದ ಪೋರ್ಕ್ ಉದ್ದದ ದೀಪದಾನಿಯ ದೀಪ ಬೆಳಗಿ ಹಾಲ್‍ಗೆ ನಡೆದು ಅಲ್ಲಿನ ವಿಶಾಲ ವಾಲ್‍ನಟ್ ಮೇಜಿನ ಮೇಲಿಟಸಂಖ್ಯ ದೀಪ ಮೋಂಬತ್ತಿಗಳಲ್ಲಿ ಒಂದು ದೀಪವನ್ನೂ ಮೂರು ಮೋಂಬತ್ತಿಗಳನ್ನೂ ಬೆಳಗಿಸಿ ರಾಜ-ರಾಣಿಯರನ್ನು ಶಯ್ಯಾಗಾರಕ್ಕೊಯ್ಯುವ ಗತ್ತಿನಲ್ಲಿ ದೀಪಧಾರಿಯಾಗಿ ಮುಂಬರಿದು ಉಪ್ಪರಿಗೆಯೇರಿದನು. ಜೆರಾಲ್ಡ್‍ನ ತೋಳನ್ನಾಧರಿಸಿ ಎಲೆನ್‍ಳೂ ಹಿಂದಿನಿಂದ ತಂತಮ್ಮ ಮೋಂಬತ್ತಿಗಳೊಡನೆ ಮಕ್ಕಳು ಮೂವರೂ ಸಾಗಿದರು. 

              ತನ್ನ ಕೋಣೆಯನ್ನು ತುಂಬಿದ ಮಂದವಾದ ತಿಂಗಳ ಬೆಳಕಲ್ಲಿ ಹಾಸಿಗೆಯ ಮೇಲೆ ಪವಡಿಸಿದ ಸ್ಕಾರ್ಲೆಟ್ ನಾಳೆಯ ದಿನದ ರಂಗುಗಂಗಿನ ಕನಸುಗಳನ್ನು ಹೆಣೆಯ ತೊಡಗಿದಳು. ತನ್ನ ಕಲ್ಪನೆಯ ಚಿತ್ರ ಪೂರ್ಣಗೊಂಡಾಗ ಅವಳು ಶ್ರೀಮತಿ ಆಶ್‍ಲಿ ವಿಲ್ಕ್ಸ್ ಆಗಿದ್ದಳು. ಇಚ್ಛೆ ಹಾಗೂ ಪ್ರಾಪ್ತಿ ಎರಡು ಬೇರೆ ಬೇರೆ ವಿಷಯಗಳೆಂಬ ಸತ್ಯವನ್ನು ಎಲೆನ್ ಆಕೆಗೆ ತಿಳಿ ಹೇಳಿರಲಿಲ್ಲ. ಹದಿಹರೆಯದ ಸೋಲರಿಯದ ಸಂತೃಪ್ತ ಜೀವನವು ವಿಧಿಯನ್ನೂ ಜಯಿಸಬಹುದೆಂದು ತಿಳಿದಿತ್ತು!"



- ಶ್ಯಾಮಲಾ ಮಾಧವ


ಇಲ್ಲಿಯವರೆಗಿನ ಪುಸ್ತಕಗಳ ಮಾರಾಟದಲ್ಲಿ ದಾಖಲೆಯನ್ನೆ ನಿರ್ಮಿಸಿದ ಕಾದಂಬರಿ "ಗಾನ್ ವಿತ್ ದ ವಿಂಡ್' ತನ್ನ ಮೊದಲ ಪ್ರಕಟಣೆಯ ನಂತರದ ಮುಕ್ಕಾಲು ದಶಕಗಳ ನಂತರವೂ ಮೊದಲಿನಷ್ಟೆ ಜನಪ್ರಿಯತೆ ಉಳಿಸಿಕೊಂಡಿರುವ ಈ ಕೃತಿಗಿಂತ ಜಾಗತಿಕವಾಗಿ ವ್ಯಾಪಾರದ ಅಂಕಿ ಸಂಖ್ಯೆಗಳ ತುಲನೆಯಲ್ಲಿ ಅಲ್ಪ ಅಂತರದಲ್ಲಿ ಮುಂದಿರುವ ಇನ್ನೊಂದು ಪುಸ್ತಕವೇನಾದರೂ ಇದ್ದರೆ ಅದು 'ಬೈಬಲ್' ಮಾತ್ರ! ವಿಶ್ವವಿಖ್ಯಾತವಾದ ಮಾರ್ಗರೆಟ್ ಮಿಶಲ್ ರಚಿಸಿದ ಈ ಉನ್ಮತ್ತ ಪ್ರಣಯದ ಕೃತಿಯನ್ನ ಲೇಖಕಿ ಶ್ಯಾಮಲಾ ಮಾಧವರು ಹತ್ತು ವರ್ಷಗಳ ಹಿಂದೆಯೆ ಕನ್ನಡದ ಓದುಗರಿಗೆ ಅನುವಾದದ ಮೂಲಕ ಪರಿಚಯಿಸಿದ್ದಾರೆ.  

'ಗಾನ್ ವಿತ್ ದ ವಿಂಡ್' ಅದರ ನಾಯಕಿ ಸ್ಕಾರ್ಲೆಟ್ಟಳ ಕಥೆ ಅಂತ ಮೇಲ್ನೋಟಕ್ಕೆ ಅನ್ನಿಸಿದರೂ ಇದರ ವಿಸ್ತಾರದ ಹರಿವು ಇನ್ನಷ್ಟು ಆಳವಾಗಿದೆ. ಅಮೇರಿಕಾವನ್ನ ಕಾಡಿದ ಆಂತರಿಕ ನಾಗರೀಕ ಯುದ್ಧ ಅಮೇರಿಕಾವನ್ನು ಹೈರಾಣಾಗಿಸಿದ್ದು. ಸಂಯುಕ್ತ ಸಂಸ್ಥಾನಗಳ ದಕ್ಷಿಣದ ರಾಜ್ಯ ಜಾರ್ಜಿಯದಲ್ಲಿ ಇದರ ಕಿಡಿ ಹೊತ್ತಿಕೊಂಡದ್ದು. ಆಫ್ರಿಕನ್ ಕಪ್ಪು ಅಮೇರಿಕನ್ನರ ಮೇಲಿನ ಅಸ್ಪರ್ಶ್ಯತೆಯ ದೌರ್ಜನ್ಯಕ್ಕೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳುವಲ್ಲಿ ಇದರ ಪರಿ ಸಮಾಪ್ತಿಯಾದದ್ದು. ಉತ್ತರ ಹಾಗೂ ದಕ್ಷಿಣದ ಏಳು ರಾಜ್ಯಗಳ ಸ್ವಾತಂತ್ರ್ಯ ಘೋಷಣೆಯ ಹಂತಕ್ಕೆ ಹೇತುವಾದ ಮೂಲ ನಿವಾಸಿಗಳು, ವಲಸಿಗ ಬಿಳಿಯರು ಹಾಗೂ ಆಫ್ರಿಕನ್ ಕರಿಯರ ನಡುವಿನ ದಮನಕಾರಿ ತಾರತಮ್ಯ ನೀತಿಯ ಚಲಾವಣೆ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ನಿರುಪಯುಕ್ತವಾದದ್ದು. ಅಬ್ರಾಹಂ ಲಿಂಕನ್ ರಾಷ್ಟ್ರದ ಚುಕ್ಕಾಣಿ ಹಿಡಿದು ಅಧ್ಯಕ್ಷನಾಗಿ ರಾಜಕೀಯ ಸವಾಲುಗಳ ಸರಮಾಲೆಯನ್ನೆ ಎದುರಿಸಬೇಕಾಗಿ ಬಂದುದು ಇವೆಲ್ಲ ಸರಣಿಯಾಗಿ ಓದುಗರ ಮನದ ಭಿತ್ತಿಯನ್ನ ಬಿಡಿ ಬಿಡಿ ಚಿತ್ರಗಳಾಗಿ ಆವರಿಸಿ ಕೂತು ಬಿಡುತ್ತವೆ. ಹಾಗಿದೆ ಮಿಶೆಲ್ ನಿರೂಪಣೆ.

ಕನ್ನಡಕ್ಕೆ ಬಹಳ ಅಸ್ಥೆಯಿಂದ ಇದನ್ನ ಅನುವಾದಿಸಿದ ಶ್ಯಾಮಲಾ ಮಾಧವರು ಈ ಬೃಹತ್ ಕೃತಿಯ ಪ್ರಕಟಣೆಗಾಗಿ ಅನುವಾದದ ನಂತರ ಒಂದು ದಶಕ ಕಾಯಬೇಕಾಯಿತು. ಆದರೆ ಈ ಸುದೀರ್ಘ ನಿರೀಕ್ಷೆ ಹುಸಿ ಹೋಗದ ಹಾಗೆ ಇದರ ಕನ್ನಡಾವತರಣಿಕೆಯೂ ಸಹ ಮೂಲದಷ್ಟೆ ಜನಪ್ರಿಯತೆ ಗಳಿಸಿತು. ಮುಂಬೈ ಕನ್ನಡತಿಯಾದ ಮಂಗಳೂರು ಮೂಲದ ಶ್ಯಾಮಲಾರು ಲೇಖಕಿ ಹಾಗೂ ಅನುವಾದಕಿಯಾಗಿ ಕನ್ನಡದ ಓದುಗರಿಗೆ ಸುಪರಿಚಿತರು. ತಮ್ಮ ಹನ್ನೊಂದರ ಹರೆಯದಲ್ಲಿಯೆ ಕವಯತ್ರಿಯಾಗಿ ಬರಹ ಜಗತ್ತಿಗೆ ಕಾಲಿಟ್ಟಿದ್ದ ಅವರು ೧೯೯೪ರಲ್ಲಿ 'ಆಲಂಪನಾ' ಉರ್ದು ಕೃತಿಯನ್ನ ಅದೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸುವ ಮೂಲಕ ಅನುವಾದಕಿಯಾಗಿಯೂ ಗುರುತಿಸಿಕೊಂಡರು. ಇದುವರೆಗೂ ನಿವೃತ್ತ ಪೊಲಿಸ್ ಅಧಿಕಾರಿ ರಾಮಣ್ಣ ರೈಗಳ ಆಂಗ್ಲ ಕೃತಿ 'ಮೈ ಡೇಸ್ ಇನ್ ಪೊಲೀಸ್' ( 'ಸುಧಾ'ದಲ್ಲಿ ಇದು 'ಪೊಲಿಸ್ ಡೈರಿ'ಯಾಗಿ ಪ್ರಕಟಗೊಂಡಿತು.), ವಿಲ್ಡ್ಯುರಾಂಟರ 'ದ ಸ್ಟೋರಿಸ್ ಆಫ್ ಸಿವಿಲೈಸೇಶನ್' ( ಭಾಗಶಃ.), 'ಎಂ ಆರ್ ಪೈ - ಅನ್ ಕಾಮನ್ ಮ್ಯಾನ್' ಇದರ ಭಾವಾನುವಾದ 'ಎಂ ಆರ್ ಪೈ - ಅಸಮಾನ್ಯ ಮನುಷ್ಯ', ವಿಶ್ವಸಾಹಿತ್ಯದ ಇನ್ನೊಂದು ಖ್ಯಾತ ಕೃತಿ 'ಫ್ರಾಂಕನ್ಸ್ಟೈನ್' ಕೂಡ ಇವರ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಸ್ಪಾರೋಗಾಗಿ ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿಕೊಟ್ಟ ಬಿ ಟಿ ಲಲಿತಾನಾಯಕರ ಎರಡು ಕಥೆಗಳು, ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಆಂಗ್ಲಾನುವಾದ, ಕುವೆಂಪು ಭಾಷಾಭಾರತಿಗಾಗಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿಕೊಟ್ಟ ಡಾ ಬಾಬಾಸಾಹೆಬ್ ಅಂಬೇಡ್ಕರರ ಬರಹ ಮತ್ತು ಭಾಷಣಗಳು ಮುಂತಾದ ಕೃತಿಗಳ ಮೂಲಕ ಅನುವಾದಕ ಖ್ಯಾತರಾಗಿದ್ದಾರೆ.

ಇವಿಷ್ಟು ಅವರ ಪ್ರಕಟಿತ ಕೃತಿಗಳ ಕಥೆಯಾದರೆ. ಇನ್ನು ಆಂಗ್ಲದಿಂದ ಕನ್ನಡಕ್ಕೆ ಅವರು ಅನುವಾದಿಸಿರುವ ಅರುಂಧತಿ ರಾಯ್'ರವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಹಾಗೂ ಶಾಲೆಟ್ ಬ್ರಾಂಟಿಯ 'ಜೇನ್ ಏರ್' ಪ್ರಕಟಣೆಯ ಹೊಸ್ತಿಲಿನಲ್ಲಿವೆ. ಲೇಖಕಿ ಎಂ ಎಂ ಕೆಯವರ 'ಫಾರ್ ಪೆವೆಲಿಯನ್ಸ್' ಸದ್ಯ ಅವರಿಂದ ಕನ್ನಡಾನುವಾದಗೊಳ್ಳುತ್ತಿದೆ. ೨೦೦೪ರಲ್ಲಿ ಅತ್ಯುತ್ತಮ ಅನುವಾದಿತ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡಮಿ 'ಗಾನ್ ವಿತ್ ದ ವಿಂಡ್'ನ್ನ ಪುರಸ್ಕರಿಸಿತ್ತು. ಕೇವಲ ಅನುವಾದ ಕ್ಷೇತ್ರಕ್ಕಷ್ಟೆ ಸೀಮಿತಗೊಳ್ಳದ ಶ್ಯಾಮಲಾರ 'ಆಲೋಕ' ಕಥಾ ಸಂಗ್ರಹ, 'ಬದುಕು ಚಿತ್ತಾರ' ಲೇಖನಗಳ ಸಂಗ್ರಹ. 'ಸತ್ಸಂಚಯ'ವೆಂಬ ಸಂಪಾದಿತ ಕೃತಿಗಳು ಸಹ ಓದುಗರ ಮನ್ನಣೆಯನ್ನ ಗಳಿಸಿವೆ.  

'ಗಾನ್ ವಿತ್ ದ ವಿಂಡ್' ಕೃತಿಯು ಪುಸ್ತಕವಾಗಿ ಪ್ರಕಟಣೆಯಾದ ಎರಡು ವರ್ಷಗಳ ನಂತರ ವಿಕ್ಟರ್ ಫ್ಲೆಮಿಂಗ್ ನಿರ್ದೇಶನದಲ್ಲಿ ಸಿನೆಮಾವಾಗಿ ಬೆಳ್ಳಿತೆರೆಯನ್ನೂ ಏರಿತ್ತು. ೧೯೪೦ರ ಹನ್ನೆರಡನೆ ಅಕಾಡಮಿ ಪ್ರಶಸ್ತಿಗಳಲ್ಲಿ ಹತ್ತು ಪ್ರಶಸ್ತಿಗಳನ್ನ ಪ್ರಬಲ ಪೈಪೋಟಿಯ ನಡುವೆಯೂ ಇದೊಂದೆ ಚಿತ್ರ ದೋಚಿದ್ದೂ ಸಹ ಇದು ವರೆಗಿನ ದೊಡ್ಡ ದಾಖಲೆ. ಲೆಸ್ಲಿ ಹಾರ್ವರ್ಡ್, ಕ್ಲಾರ್ಕ್ ಗ್ಲೇಬ್, ಒಲಿವಿಯಾ ಡೆ ಹೆವ್ವಿಲ್ಯಾಂಡ್ ಹಾಗೂ ವಿವಿಯನ್ ಲೈ ಅಭಿನಯದ ಈ ಚಿತ್ರ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಆ ಸಾಲಿನ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತ್ತು. ಇವತ್ತಿಗೂ ಒಂದು ಪುಸ್ತಕವಾಗಿ ಹಾಗೂ ಸಿನೆಮಾವಾಗಿ 'ಗಾನ್ ವಿತ್ ದ ವಿಂಡ್' ಶ್ರೇಷ್ಠವೆಂದೆ ಪರಿಗಣಿತವಾಗುವ ವಿಶ್ವಮಾನ್ಯ ಕೃತಿ. 

No comments: