30 September 2014

ಪುಸ್ತಕದೊಳಗೆ - ೧೯




"ಅನರ್ಥ ಕೋಶ"

ಲೇಖಕರು; ನಾರಾಯಣ ಕಸ್ತೂರಿ,
ಪ್ರಕಾಶಕರು; ಸಮಾಜ ಪುಸ್ತಕಾಲಯ ( ಮೊದಲ ಐದು ಮುದ್ರಣ.)

ಪ್ರಕಟಣೆ; ೧೯೭೦.


ಅಂಕಿತ ಪುಸ್ತಕ ( ಹೊಸ ಆವೃತ್ತಿ ಎರಡು ಬಾರಿ.)


ಪ್ರಕಟಣೆ; ೨೦೦೭,

ಕ್ರಯ; ರೂಪಾಯಿ ನಲವತ್ತು.



"ಅತ್ತೆ - ಈಕೆಗೆ ಮೀಸೆ ಬಂದರೆ, ಚಿಕ್ಕಪ್ಪ ಎಂದು ಕರೆಯಬಹುದು - ಮರೆಯಲ್ಲಿ.

ಅಶ್ವಶಕ್ತಿ - ಎರಡೂವರೆ ಸೇರು ಹುರಳಿ.

ಆಟಿಗೆ - ವಿರಾಮ ಸಿಕ್ಕಿದಾಗ, ನಾವು ಆಡುವುದಕ್ಕಾಗಿ, ಮಕ್ಕಳ ಹೆಸರು ಹೇಳಿ, ನಾವು ಕೊಂಡು ತಂದು ಇರಿಸಿರುವ ಆಟದ ಸಾಮಾನುಗಳು.

ಆಣೆ - ಬಹಳ ಅಗ್ಗವಾದ ಒಂದು ವಸ್ತು.

ಆತ್ಮಕಥೆ - ಬೇರೆ ಯಾರಾದರೂ ತಮಗಾಗದವರು ಬರೆದು ಬಿಟ್ಟಾರು ಎಂಬ ಭೀತಿಯಿಂದ ಬುದ್ಧಿವಂತರಾದ ದೊಡ್ಡವರನೇಕರು ತಮ್ಮ ಜೀವನ ಚರಿತ್ರೆಯನ್ನು ತಾವೆ ತಯಾರಿಸಿ ತಿದ್ದಿಸಿ ಪ್ರಕಟಿಸಿ ಬಿಡುತ್ತಾರೆ.

ಆತ್ಮಹತ್ಯೆ - ಸಂಸಾರವೆಂಬ ಆಟಕ್ಕೆ ಇದೆ ತುರುಫ್, ನೂರು ಸಲ ಹೇಳ ಬಹುದು. ಆದರೆ ಮಾಡಲು ಒಂದೆ ಸಲ ಮಾತ್ರ ಸಾಧ್ಯ. ಇದನ್ನು ಸಮರ್ಪಕವಾಗಿ ಮಾಡದಿದ್ದರೆ ಸರ್ಕಾರದವರು ಹಿಡಿದು ಶಿಕ್ಷಿಸುತ್ತಾರೆ. ಆದ್ದರಿಂದ ಮಿಕ್ಕ ಕೆಲಸಗಿಲಸ ಚಾಕರಿಗಳಂತಲ್ಲ.

ಆತಿಥ್ಯ - ಬಂದವನನ್ನು ಮರುದಿನವೆ ಮನೆಯಿಂದ ಹೊರಡಿಸುವ ಪಿತೂರಿ.

ಆನೆ ಹಾಲು - ಇದನ್ನು ಸೇವಿಸಿದರೆ ವಾರವೊಂದಕ್ಕೆ ಮೈಯಭಾರ ಇಪ್ಪತೈದು ಪೌಂಡಿನಂತೆ ಹೆಚ್ಚುತ್ತಾ ಹೋಗುವುದಂತೆ, ಆನೆ ಮರಿಗೆ.

ಇತ್ಯಾದಿ - ಮುಂದಕ್ಕೆ ಬರೆಯಲು ಬುಧ್ಧಿ ಓಡದಿದ್ದರೆ, ಈ ಪದವನ್ನುಪಯೋಗಿಸಿ ಬಚಾವಾಗಬಹುದು.

ಉದರ - ಉದರನಿಮಿತ್ತಮ್ ಬಹುಕೃತ ರೇಷನ್.

ಊಳಿಡುವುದು - ರಾತ್ರಿ ಹೊತ್ತು ನಾಯಿ ಊಳಿಟ್ಟರೆ, ಸಾವಿನ ಸೂಚನೆ ಅನ್ನುತ್ತಾರೆ. ಏಕೆಂದರೆ, ಆ ನಾಯಿಯನ್ನು ಎದುರು ಮನೆಯವರು ಕಲ್ಲು ಹೊಡೆದು ಸಾಯಿಸುವ ಸಂಭವ ಇದೆ.

ಕಲಿಯುಗ - ವಿದ್ಯಾರ್ಥಿ ದೆಸೆ, ಕಲಿಯುವ ಕಾಲ.

ಕವರು - ಬಿಲ್ಲುಗಳನ್ನಿರಿಸುವ ಬತ್ತಳಿಕೆ.

ಕಾಮಗಾರಿ - ವಿಟಲೀಲೆ.

ಕೆಸರು - ಹೆಸರು ಕೆಡಿಸಲು ಉಪಯೋಗವಾಗುವ ಪದಾರ್ಥ.

ಕೌಮಾರ - ಹಸುವನ್ನು ಕೊಲ್ಲುವವ.

ಗಲ್ಲಿ - ಕ್ರಿಕೆಟ್ ಆಟಗಾರರಲ್ಲಿ ಹಲವಾರು ಓಡಾಡುವ ಜಾಗ.

ಗೋಡೆ - ಅಶ್ಲೀಲ ಸಾಹಿತ್ಯದ ಪ್ರಚಾರ ಕೇಂದ್ರ, ಸಿನಿ ಪ್ರಚಾರದ ಆಧಾರ, ಪರಸ್ಪರ ದೂಷಣೆಗಳಿಗೂ , ಪಕ್ಷ ಪ್ರತಿಪಕ್ಷಗಳ ಘೋಷಣೆಗಳಿಗೂ ಒದಗುವಂತೆ ಕಟ್ಟಿ ತಯಾರಿಸಿದ ಜಾಹಿರಾತು ಜಾಗ.

ಗೋದಾನ - ಒಂದು ಬಗೆಯ ಕ್ಷೌರ.

ಗೋಲಿ - ಸಣ್ಣ ಹುಡುಗರೂ ದೊಡ್ಡ ಯೋಧರೂ ಆಟಕ್ಕಾಗಿ ಉಪಯೋಗಿಸುವ ಪದಾರ್ಥ.

ಗ್ರಂಥಕರ್ತ - ಈತ ಗಮನಿಸಬೇಕಾದದ್ದು ಮೂರು, ಹೆಸರು - ಸಮರ್ಪಣ - ಮುನ್ನುಡಿ. ಉಳಿದದ್ದು ಹೇಗಾದರೂ ಇರಲಿ.

ಚಿತ್ರಹಿಂಸೆ - ಸಿನಿಮಾ ನೋಡುವವರಿಗಾಗುವ ಹಿಂಸೆ.

ಚಿರಋಣಿ - ಸಾಲವನ್ನು ಕೊಟ್ಟು ತೀರಿಸದವನು.

ಜಗಲಿ - ಜಗಳಗಳ ಉಗಮ ಸ್ಥಾನ.

ಜಗಳ - ಗಂಡ ಹೆಂಡಿರ ಜಗಳ, ಗಂಡ ಕೊಂಡು ಕೊಡುವ ತನಕ.

ಜನಪ್ರಿಯ ಗೀತೆ - ಇದನ್ನು ಕೆಲವರು ಹಾಡುವ ಮೊದಲು ಜನಪ್ರಿಯ ಎನಿಸಿರುತ್ತದೆ.

ಟೀಚರ್ - ನಪುಂಸಕ ಲಿಂಗ, ಅಂದರೆ ಮಾಸ್ಟರೂ ಆಗಬಹುದು, ಮೇಡಂಮ್ಮೂ ಆಗಬಹುದು.

ಟ್ರೂಮನ್ - ಹೆಸರಿನಲ್ಲೇನಿದೆ ಅನ್ನುವುದಕ್ಕೆ ಒಳ್ಳೆಯ ಉದಾಹರಣೆ.


ಟೆಲಿಫೋನ್ - ಯಾರುಯಾರೋ ಪರಸ್ಪರ ಮಾತನಾಡುವುದನೆಲ್ಲ ಗುಪ್ತವಾಗಿ ಕೇಳಲಿಕ್ಕೆ ಇದೊಂದು ಉಪಾಯ.

ಟೋಪಿ - ಇದನ್ನು ಮೊದಲು ನಮಗೆ ಹಾಕಿದವರು ಪರಂಗಿಯವರು.

ಟೋಲ್'ಗೇಟ್ - ಇಲ್ಲಿಗೆ ಬಂದಾಗ ಲಾರಿಗಳಿಗೆ ಸ್ಪೀಡ್ ಲಿಮಿಟ್ ಎಂಬುದೇ ಇಲ್ಲ.

ತಕ್ಕಡಿ - ವ್ಯಾಪಾರಗಾರರು ಗಿರಾಕಿಗಳಿಗೆ ಮೋಸ ಮಾಡಲು ಉಪಯೋಗಿಸುವ ಒಂದು ಸಾಧನ, ಅನೇಕ ಸಂಸಾರಗಳಲ್ಲಿ ತಕ್ಕಡಿ ಏಳುವುದೇ ಇಲ್ಲವಂತೆ, ತಕ್ಕಡಿಗೇನು ಗೊತ್ತು ಸಕ್ಕರೆಯ ಬೆಲೆ?

ತಿಗಣೆ - ಹಾಸಿಗೆ ಇದ್ದಷ್ಟು ತಿಗಣೆ ಕಾಟ ( ಗಾದೆ.) ಮನುಷ್ಯನೊಂದಿಗೆ ತನ್ನ ರಕ್ತ ಸಂಬಂಧವನ್ನು ಉಳಿಸಿಕೊಂಡಿರುವ ಪ್ರಾಣಿ.

ತಟಸ್ಥ - ನದೀಸ್ನಾನಕ್ಕೆ ಬಂದು ನೀರಿಗೆ ಇಳಿಯಲೋ ಬೇಡವೋ ಎಂದು ಅನುಮಾನಿಸುವವ.

ಬೊಜ್ಜು - ಇದನ್ನ ಕಂಡಲ್ಲಿ ಕರಗಿಸೋಣ ಎನ್ನಿಸುತ್ತದೆ.

ಬೋಂಡ - ಇದನ್ನ ಕರಿಯುವ ಎಣ್ಣೆ ಹೊಲಸಾಗಿರುವುದರಿಂದ ಇದರ ಗಾತ್ರ ಚಿಕ್ಕದಾದಷ್ಟೂ ಉತ್ತಮ.

ಬ್ಯಾಂಕು - ಹಣವಂತರಿಗೆ ಹಣ ಒದಗಿಸುವ ಸಂಸ್ಥೆ, ಬಿಸಿಲಿದ್ದಾಗ ಕೊಡೆ ಸಾಲ ಕೊಟ್ಟು ಮಳೆ ಬಂದ ಕೂಡಲೆ ಹಿಂದಕ್ಕೆ ಕೇಳುವ ಸಂಸ್ಥೆ.

ಬ್ರಹ್ಮಚಾರಿ - ತಲೆಯೊಳಗೆ ಮೆದುಳಿದೆ ಎಂದು ತೋರುವ ಧೀರ, ಯಾರನ್ನು ಮದುವೆಯಾಗಲಿ ಎಂದು ತೀರ್ಮಾನಿಸಲು ಅಶಕ್ತನಾಗಿ ತೊಳಲಾಡುವವ, ಒಂದು ಹೆಣ್ಣು ಜೀವವನ್ನು ಉಳಿಸಿದವ, ತನ್ನ ಪೀಳಿಗೆಯನ್ನು ಬೆಳೆಸಲೆ ಬೇಕಾಗಿಲ್ಲವೆಂಬ ಸತ್ ಸಂಕಲ್ಪವನ್ನು ಮಾಡಿದವ.

ಬಂದರು - ಸಮುದ್ರದ ಮೇಲೆ ಹೋಗಿದ್ದವರು ಬಂದರು ಎನ್ನಿಸುವ ಜಾಗ.

ಭಾವಜೀವಿ - ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.

ಮಂತ್ರಿ - ನಾವು ಇನ್ನೂ ಚನ್ನಾಗಿ ಮಾಡಬಲ್ಲ ಕೆಲಸ ಕಾರ್ಯಗಳನ್ನು, ನಮಗಿಂತ ಅಸಮರ್ಪಕವಾಗಿ ಮಾಡಲು, ನಾವು ಚುನಾಯಿಸುವ ವ್ಯಕ್ತಿ.

ಮಹಾತ್ಮರು - ಮಹಾತ್ಮರು ಯಾವ ದೇಶದಲ್ಲೂ ಇದುವರೆಗೂ ಹುಟ್ಟಿಲ್ಲ; ಹುಟ್ಟುವುದೆಲ್ಲಾ ಶಿಶುಗಳೇ.

ಮೀನ ಮೇಷ - ಮೀನು ತಿನ್ನಲೋ, ಮೇಷ ತಿನ್ನಲೋ, ಎಂಬ ಚರ್ಚೆ.

ಮೋಸ - ಇತರರಿಗೆ ನಾವು ಮಾಡಿದರೆ ಜಾಣತನ, ಅವರು ನಮಗೆ ಮಾಡಿದರೆ ದ್ರೋಹ.. ಪತ್ತೆಯಾದರೆ ಪೆಚ್ಚು ಇಲ್ಲದಿದ್ದರೆ ಕೆಚ್ಚು, ದುರ್ಭಿಕ್ಷದಲ್ಲಿ ಅಧಿಕ ಮೋಸ.

ವಸಂತ - ಕವಿಗಳಿಗೆ ಹುಚ್ಚು ಬರುವ ಕಾಲ.

ವಾಕರಿಕೆ - ಕೆಲವರ ವಾಕ್ ಕೇಳುವಾಗ ಆಗುವ ಪ್ರತಿಕ್ರಿಯೆ.

ಶನೀಶ್ವರ - ರಾಮೇಶ್ವರಕ್ಕೆ ಹೋದಾಗ, ಅಲ್ಲೂ ನಮ್ಮನ್ನು ಪೀಡಿಸುವ ಪೂಜಾರಿಗಳು.

ಸಮಯಸ್ಪೂರ್ತಿ - ಸ್ನಾನದ ಮನೆಯೊಳಗೆ ನುಗ್ಗಿದಾಗ, ಅಲ್ಲಿದ್ದ ಮಹಿಳೆಯನ್ನು ಕಾಣುತ್ತಲೂ, ಹೊರಕ್ಕೆ ಧಾವಿಸುತ್ತ, ಕ್ಷಮಿಸಿ ರಾಯರೆ, ಎಂದು ಹೇಳುವುದು.

ಸೂಟು - ಸೂಟಾಗದಿದ್ದರೂ ಅನೇಕರು ಧರಿಸಿ ಮೆರೆಯುವ ವಸ್ತ್ರ ವಿಶೇಷ.

ಸ್ವಗತ - ನಾಟಕದಲ್ಲಿ ಒಬ್ಬರನ್ನುಳಿದು ಮಿಕ್ಕೆಲ್ಲರಿಗೂ ಕೇಳಿಸುವಂತೆ ಕೂಗಬೇಕಾದ ಮಾತು.

ಹರಿಹರ - ಒಬ್ಬ ಕನ್ನಡ ಕವಿ, ತುಂಬಾ ರಗಳೆ ಮಾಡಿದವನು."

- ನಾರಾಯಣ ಕಸ್ತೂರಿ


ನಾ ಕಸ್ತೂರಿಯೆಂದೆ ಪ್ರಸಿದ್ಧರಾಗಿರುವ ನಾರಾಯಣ ಕಸ್ತೂರಿ ಕನ್ನಡ, ಮಲಯಾಳಂ ಹಾಗೂ ಆಂಗ್ಲಭಾಷಾ ನಿಪುಣ ಲೇಖಕ. ಶಿಶು ಸಾಹಿತ್ಯ, ಕಾದಂಬರಿ, ಅನುವಾದ, ಹಾಸ್ಯ ಬರಹ, ಜೀವನ ಚರಿತ್ರೆ ಹಾಗೂ ಅಧ್ಯಾತ್ಮ ಇವರ ಬರಹದ ವಿವಿರ ಪ್ರಕಾರಗಳಾಗಿದ್ದವು. ಅಂದಿನ ತಿರುವಾಂಕೂರು ಸಂಸ್ಥಾನದ ಮಾರ್ತಾಂಡಂನಲ್ಲಿ ೧೮೯೭ರ ಅಗೋಸ್ತು ೧೪ನೆ ತೇದಿಯಲ್ಲಿ ಹುಟ್ಟಿ ಮಲಾಯಾಳಂ ಮಾಧ್ಯಮದಲ್ಲಿಯೆ ವಿದ್ಯಾಭ್ಯಾಸ ಪೂರೈಸಿ ತನ್ನ ಇಪ್ಪತೊಂದನೆ ವಯಸ್ಸು ಪ್ರಾಯಕ್ಕೆ ಉದರ ನಿಮಿತ್ತವಾಗಿ ಮೈಸೂರಿಗೆ ಶಿಕ್ಷಕ ವೃತ್ತಿ ಕೈಗೊಳ್ಲಲು ಬಂದ ನಾ ಕಸ್ತೂರಿ ಆನಂತರ ತಮ್ಮ ಕಲಿಕೆಯ ಶ್ರದ್ಧೆಯಿಂದ ಕನ್ನಡವನ್ನು "ಉಟ್ಟು ಖನ್ನಡ ಓರಾಟಗಾರರೂ" ನಾಚುವಂತೆ ಆಳವಾಗಿ ಕಲಿತು ಕನ್ನಡ ಬರಹ ಪ್ರಪಂಚದಲ್ಲಿ ಢಾಳವಾಗಿ ತಮ್ಮ ಹೆಸರು ಉಳಿಸಿ ಹೋದ ಪ್ರತಿಭಾವಂತ.

ಡಾ ರಾಶಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಆ ಕಾಲದಲ್ಲಿಯೆ ಸುಮಾರು ಎರಡು ಲಕ್ಷ ಪ್ರಸಾರ ಸಂಖ್ಯೆ ಹೊಂದಿದ್ದ "ಕೊರವಂಜಿ" ಹಾಸ್ಯ ಮಾಸ ಪತ್ರಿಕೆಗೆ ಅಂಕಣಕಾರರಾಗಿ ಕೇಫ, ಟಿ ಸುನಂದಮ್ಮ, ಆರಾಸೆ ಹಾಗೂ ಗಿರಣಿ ರಾಮಸ್ವಾಮಿಯಂತಹ ಲೇಖಕರೊಂದಿಗೆ ಸೇರಿ ಸುಮಾರು ಸಾವಿರಕ್ಕೂ ಮೀರಿದ ಹಾಸ್ಯ ಲೇಖನಗಳನ್ನು ಬರೆದಿದ್ದರೆ. 'ಆನರ್ಥ ಕೋಶ' ಒಂದು ವಿಶಿಷ್ಟ ಹಾಸ್ಯ ಪ್ರಯೋಗ. ಕನ್ನಡದ ಆಡುಭಾಷೆಯಲ್ಲಿ ಸೇರಿ ಹೋಗಿದ್ದ ಪರಭಾಷಾ ಪದಗಳನ್ನೂ ದಯ ತೋರಿ ಬಿಟ್ಟು ಬಿಡದೆ ದರದರನೆ ಎಳೆದುಕೊಂಡು ಬಂದು ಮುಂದೆ ಹಣಕಾಸಿನ ಮುಗ್ಗಟ್ಟಿನಿಂದ 'ಕೊರವಂಜಿ' ಶಾಶ್ವತವಾಗಿ ಹಾಸ್ಯದ ಕಣಿ ಹೇಳುವುದನ್ನ ನಿಲ್ಲಿಸುವವರೆಗೂ ನಾ ಕಸ್ತೂರಿ ನಿಯಮಿತವಾಗಿ ಬರೆದು ಕನ್ನಡಿಗರನ್ನ ರಂಜಿಸಿದ ಈ ಹಾಸ್ಯ ಅರ್ಥದ ಅಂಕಣ ಭಾರತೀಯ ಭಾಷೆಗಳನ್ನ ಬಿಡಿ ಪ್ರಪಂಚದ ಯಾವುದೇ ಭಾಷೆಯಲ್ಲಿಯೂ ಕಾಣ ಸಿಗಲಿಕ್ಕಿಲ್ಲ. ಬರವಣಿಗೆಯಲ್ಲಿ ಕನ್ನಡ ಅವರಿಗೆ ಸಿದ್ಧಿಸಿದ್ದರೂ ಸಹ ಉಚ್ಛಾರಣೆಯ ಹಂತದಲ್ಲಿ ಅವರ ಮಲಯಾಳಿ ಶೈಲಿ ಮರೆಯಾಗಿರಲಿಲ್ಲವಂತೆ, ಸಾಲದ್ದಕ್ಕೆ ಮೂಗಿನಲ್ಲಿ ಬೇರೆ ಮಾತಾಡುತ್ತಿದ್ದರಂತೆ ಅವರು. ಇದನ್ನೆ ಪ್ರಸಿದ್ಧ ಕಥೆಗಾರ ಸೀತಾರಾಂ ( ಆನಂದ.) ಈ ಬಗ್ಗೆ ಜಿ ಪಿ ರಾಜರತ್ನಂರಲ್ಲಿ 'ನರ್ಕಕ್ಕಿಳ್ಸಿ ನಾಲಗೆ ಸೀಳಿಸದ್ದಿದ್ದರೂನು "ಣಾ ಕಸ್ತೂರಿ" ಣಿತ್ಯ ಕನ್ನಡದಲ್ಲಿಯೆ ಮಾತಾಡ್ತಾರೆ!" ಅಂತ ಹಾಸ್ಯ ಮಾಡುತ್ತಿದ್ದರಂತೆ.

ತಾನು ಕನ್ನಡ ಕಲಿತ ಬಗೆಯನ್ನ ನಾ ಕಸ್ತೂರಿಯವರೆ ಹೀಗೆ ತಮಾಷೆಯಾಗಿ ಕೆಳಗಿನಂತೆ ವರ್ಣಿಸಿದ್ದಾರೆ.

" ಶ್ರೀಮಾನ್ ಟಿ ಎಸ್ ವೆಂಕಣ್ಣಯ್ಯನವರು ನನ್ನ ಕನ್ನಡ ಗುರುಗಳಲ್ಲೊಬ್ಬರು. ಅವರನ್ನು ನಾನು ಎಂದೆಂದಿಗೂ ಮರೆಯುವಂತಿಲ್ಲ. ಅವರ ಸಹವಾಸ ಭಾಗ್ಯ ನನಗೆ ದೊರೆತಾಗ ನಾನು ಇನ್ನೂ 'ಆಟ' 'ಊಟ' ಓಟ'ಗಳನ್ನ ತಟಾಯಿಸಿ 'ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಎಂದು ಒದರುತ್ತಿದ್ದ ಆರು ವರ್ಷದ ಕನ್ನಡ 'ಮಾಣಿ'. ಅವರು ನನ್ನನ್ನು ಹುರಿದುಂಬಿಸಿದರು. ಅಡಿ ಇಡಿಸಿ ನಡೆಯಿಸಿದರು. ತ್ರಿಪದಿ ಗುಡ್ಡಗಳನ್ನೂ, ವಚನ ಸರೋವರಗಳನ್ನೂ, ಕುಮಾರವ್ಯಾಸ ಭಾರತದ ಗೇರುಸೊಪ್ಪೆಯನ್ನೂ, ಪಂಪ ಸಹ್ಯಾದ್ರಿಯನ್ನೂ, ತೋರಿಸಿ ಉತ್ಸಾಹ ತುಂಬಿದರು ಪ್ರಬುದ್ಧ ಕರ್ಣಾಟಕಕ್ಕಾಗಿ ನನ್ನಿಂದ ಹಲವಾರು ಲೇಖನಗಳನ್ನು ಬರೆಯಿಸಿದರು. ನಾನೆ ಸ್ಪೂರ್ತಿಗೊಂಡು ರಚಿಸಿದ ಒಂದು ಕವನವನ್ನು ಮೆಚ್ಚಿ ಅದರಲ್ಲಿ ಅಚ್ಚು ಹಾಕಿಸಿದರು. ಬೂದಿಯನ್ನೂ ಊದಿ ಬೆಳಗಿಸುವ ಕಾವು ಇತ್ತು ಅವರ ಉಸಿರಲ್ಲಿ. ಅವರ ಸ್ಮಾರಕವಾಗಿ ಒಂದು ಗ್ರಂಥಮಾಲೆಯನ್ನು ಅವಿಚ್ಛಿನ್ನವಾಗಿ ಹೊರಡಿಸುವ ಹೊಣೆಗಾರಿಕೆಯನ್ನು ಅವರ ಮಿತ್ರರು ಹಾಗೂ ಶಿಷ್ಯವೃಂದದ ಪರವಾಗಿ ಅವರ ತಮ್ಮಂದಿರಾದ ತ ಸು ಶಾಮರಾವ್ ಅವರು ಹೊತ್ತುಕೊಂಡಿದ್ದಾರೆ.

ಶ್ರೀ ಶಾಮರಾವ್ ಇಂಟರ್ ಬಿ ಎ ತರಗತಿಗಳಲ್ಲಿ ನನ್ನ ವಿದ್ಯಾರ್ಥಿ. ನನ್ನ ಗುರುಚರಣದಲ್ಲಿ ಪುಸ್ತಕವೊಂದನ್ನರ್ಪಿಸಬೇಕೆಂದು ನನ್ನ ಶಿಷ್ಯ ಸೂಚನೆ ಕೊಟ್ಟಾಗ ನನಗೆ ಅತ್ಯಾನಂದವಾಯಿತು. ಹಲವಾರು ವರ್ಷಗಳಿಂದ ನಾನು ಗುರುತು ಹಾಕಿರಿಸಿದ್ದಈ 'ಅನರ್ಥ ಕೋಶ'ವನ್ನು ಕಳಿಸಿದೆ. 'ಕನ್ನಡಂ ಕಾತ್ತುರಿಯಲ್ತೆ' ಎಂದು ನನ್ನನ್ನು ಪ್ರೀತಿಯಿಂದ ಬರ ಮಾಡಿಕೊಂಡ ಕನ್ನಡ ತಾಯಿಗೆ ಇದು ಒಂದು ಕುಹಕದ ಕಾಣಿಕೆ! ಅಳಿಲು ಸೇವೆ. ಹೊಕ್ಕ ಮನೆಯನ್ನು ಚೊಕ್ಕ ಮಾಡಲು ನಾನು ಕುಕ್ಕು ಮಾಡಿದ ಒಂದು ಬುಕ್ಕು! ಇದೀಗ ಇದು ಧಾರವಾಡದ ಸಮಾಜ ಪುಸ್ತಕಾಲಯದಿಂದ ದ್ವಿತೀಯ ಮುದ್ರಣ ಕಾಣುತ್ತಿರುವುದು ನನಗೆ ಸಂತೋಷ ತಂದಿದೆ.

ಸಂಪಗೆಗಿಂತಲೂ ತಂಪಗೆ ಎಂದರೆ ಇಂಪಾಗುವುದು ಕೇಳ್ವರಿಗೆ ಎಂದು ಕುವೆಂಪು ಅವರು ಮೂವತ್ತೆಂಟು ವರ್ಷಗಳ ಹಿಂದೆಯೆ ಸಾರಿದರು. ಈ ಕವನವನ್ನು ಅವರು ಬರೆದು ಮುಗಿಸಿದ ಕೂಡಲೆ ನನಗೆ ಅದನ್ನು ಓದಿ ತೋರಿಸಿದ ನೆನಪಿದೆ. ಬಹುಷಃ ಅಂದೆ ಆ ಘಳಿಗೆಯಲ್ಲಿಯೆ ಈ ಅನರ್ಥ ಕೋಶದ ಕಲ್ಪನೆ ನನ್ನಲ್ಲಿ ಮೂಡಿರಬೇಕು ಅನ್ನಿಸುತ್ತಿದೆ. ಅನಂತರ ಕುವೆಂಪು ಅವರೆ ನನ್ನನ್ನು 'ಆಲಿಸ್ ಇನ್ ವಂಡರ್'ಲ್ಯಾಂಡ್' ಎಂಬ ಸ್ವಪ್ನ ಕಥಾನಕವನ್ನು ಕನ್ನಡಿಕರಿಸುವಂತೆ ಪ್ರೇರೇಪಿಸಿದರು. ಅದರ ಗ್ರಂಥಕರ್ತನ ಚಮತ್ಕಾರಗಳ ಪೈಕಿ ಆತನ ಹೊಸ ಪದ ಪ್ರಯೋಗಗಳೂ ಬೆಸುಗೆ ಮಾತುಗಳೂ ನನ್ನೊಳಗೆ ಮನೆ ಮಾಡಿದವು. ಅಲ್ಲಿಂದೀಚೆಗೆ ನಾನು ಬರೆದ ಕಥೆ, ಕಾದಂಬರಿ, ಹರಟೆ, ಅಣುಕು, ಮಿಣುಕು ಇವುಗಳಲ್ಲೆಲ್ಲ ನನ್ನ ಲೇಖನಿಯಿಂದ ಜಾರಿದ ಇಂಥ ಅನೇಕ ಹೊಸ ಪ್ರಯೋಗಗಳು ಸೇರಿಕೊಂಡಿವೆ. ಶ್ರೀ ವಿ ಕೃ ಗೋಕಾಕರು, ಶ್ರೀ ದ ರಾ ಬೇಂದ್ರೆಯವರು 'ಚಕ್ರದೃಷ್ಟಿ' 'ಗಾಳಿಗೋಪುರ'ಗಳ ಮುನ್ನುಡಿಯಲ್ಲಿ ನನ್ನ ಈ ಚಾಳಿಯನ್ನ ಮೆಚ್ಚಿದ್ದಾರೆ. ಶ್ರೀ ಡಿವಿಜಿಯವರಂತೂ ನನ್ನ ಬುರುಡೆಗೆ ಮಸಿ ತುಂಬುತ್ತಲೇ ಬಂದಿದ್ದಾರೆ.


'ಜನ ಮೆಚ್ಚಿ ಹುಚ್ಚನ್' ಎಂಬಂತೆ ನಾನು 'ಖಾರಂತ' ಎನ್ನುವ ಅಣಕು ಹೆಸರಿನಲ್ಲಿ ಕಾರಂತರು 'ಅರ್ಥಕೋಶ'ವನ್ನ ಬರೆದಂತೆ ಕೊರವಂಜಿಯ ಪುಟಗಳ ಮೂಲಕ ಒಂದು ಅರಥಕೋಶವನ್ನೆ ಆರಂಭಿಸಿದೆ. ಆಗಾಗ ಹರುಕುಮುರುಕಾಗಿ ಹೊರಬಂದ ಈ ಕೃತಿಯ ಮೂಲ ಸ್ವರೂಪವೆ ಅದು. ಹಳೆಯ ಮಾತುಗಳು ಅನೇಕ ಈಗ ಮರದಡಿಯ ಸೀತೆಯಂತೆ ಅರ್ಥ ಮರೆತು ಗೋಳಿಡುತ್ತಿವೆ. ಹೊಸ ಅರ್ಥವನ್ನೂ, ಹಲವು ವೇಳೆ ವಿಪರೀತಾರ್ಥವನ್ನೂ ತೊಟ್ಟು ತಲೆ ತಗ್ಗಿಸಿವೆ. ಹೊಸ ಮಾತುಗಳನ್ನ ರಚಿಸಿ ನಾವು ನಮ್ಮ ಬಾಳನ್ನ ಹಸನಾಗಿಸಬೇಕೆಂದು ದಿ ಗೋವಿಂದ ಪೈಗಳೂ ಕೂಡ ಒತ್ತಿ ಹೇಳಿ ಕನ್ನಡ ನಾಡಿನ ಮೇಧಾವಿಗಳನ್ನೂ, ಕೀಧಾವಿಗಳನ್ನೂ ಅದಕ್ಕಾಗಿ ಕರೆದರು. ಹೊಸಲು ದಾಟಿದರೆ ಹೊಸ ಅಯ್ಯ ಎನ್ನುತ್ತಾರೆ. ಹಾಗೆಯೆ ಸಂಸ್ಕೃಅತದಿಂದ ಕನ್ನಡಕ್ಕೂ ಇತರ ಭಾಷೆಗಳಿಂದ ನಮ್ಮ ಭಾಷೆಗೂ ಶತಮಾನದಿಂದ ಶತಮಾನಕ್ಕೂ ಹೊಸಲು ದಾಟಿದಾಗಲೆಲ್ಲ ಅವು ಹೊಸ ಅರ್ಥ ತಾಳಿ ಅವು ಹೊಸ ಅಯ್ಯ ಗಳಾಗುತ್ತವೆ. ಅಂತವು ಅನೇಕ ಈ ಗ್ರಂಥದಲ್ಲಿಯೂ ಇವೆ.

ಇಂಗ್ಲೀಷಿನಲ್ಲಿ ಂಒಃಖಔSಇ ಃIಇಖಅಇ ಎಂಬುವವರ ಆeviಟs ಆiಛಿಣioಟಿಚಿಡಿಥಿ ಇದೆ. ಅomiಛಿ ಆiಛಿಣioಟಿಚಿಡಿಥಿ ಎಂಬ ಅಮೇರಿಕನ್ ಗ್ರಂಥವನ್ನೂ ನಾನು ನೋಡಿದ್ದೇನೆ. ಆದರೆ ಅವೆರಡರಲ್ಲೂ ಗ್ರಂಥಕರ್ತರು ಹೊಸ ಪದ ಪ್ರಯೋಗ ನಿರ್ಮಾಣಕ್ಕೆ ಹೊರಟಿಲ್ಲ. ನನ್ನ ಅಭಿಪ್ರಾಯದಲ್ಲಿ ಇಂತಹ ಒಂದು 'ಶಬ್ದ ಕೋಶ' ಹೊರದೇಶಗಳ ಯಾವ ಭಾಷೆಯಲ್ಲಿಯೂ ಇಲ್ಲ, ಭರತಖಂಡದ ಭಾಷೆಗಳಲ್ಲಂತೂ ಇದು ನವನವೀನ. ಆದರೊಂದು ಮಾತು 'ನವೀನಮಿತ್ಯೇವ ನ ಸಾಧು ಸರ್ವಂ' ಅಲ್ಲಲ್ಲಿ ಕೆಲವು ಹಲವು ಅಸಾಧು ಇರಬಹುದು. ಅನಿವಾರ್ಯವಾದ ಅನರ್ಥಗಳೂ ಅವುಗಳಲ್ಲಿ ಸೇರಿ ಹೋಗಿವೆ!

ಸದ್ಯಕ್ಕೆ ನನ್ನದು ಒಂದೆ ಒಂದು ಬಿನ್ನಹ. ಇದನ್ನು ಒಟ್ಟಿಗೆ ಒಂದೆ ಕೂರಿನಲ್ಲಿ 'ಪುಟಪುಟ'ನೆ ಓದಬೇಡಿ. ಗ್ರಂಥವನ್ನು ಕೊಂಡು ಕೈಗೆ ಎಟುಕುವಷ್ಟು ದೂರದಲ್ಲಿ ಇರಿಸಿಕೊಳ್ಳಿ. ಕಣ್ಣಲ್ಲೇನೋ ಬಂದು, ತುಟಿಯಲ್ಲೇನೋ ನಿಂತಾಗ ಸರಕ್ಕನ್ನೆಳೆದು ನಾಲ್ಕೈದು ಮಾತುಗಳನ್ನ ಅವುಗಳ ಅರ್ಥವನ್ನೂ ಓದಿ. ಥಟಕ್ಕನೆ ರುಚಿ ಗೊತ್ತಾಗದಿದ್ದರೆ ಎರಡು ಬಾರಿ ಆಕಳಿಸಿ ಗ್ರಂಥವನ್ನು ಇನ್ನೂ ಕೊಂಚ ದೂರದಲ್ಲಿರಿಸಿ ಸಮಾಧಾನವಾಗಿರಿ!"

- ನಾ ಕಸ್ತೂರಿ.



ದಾವಣಗೆರೆಯ ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ನಾ ಕಸ್ತೂರಿ ಅಪಾರ ಅಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದವರು. ಕೆಲಕಾಲ ಮೈಸೂರಿನ ಶ್ರೀರಾಮಕೃಷ್ಣ ಮಠದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು ಕೊನೆಗಾಲದಲ್ಲಿ ಶಿರಡಿಯ ಸಾಯಿಬಾಬರ ಅವತಾರ ತಾನೆಂದು ಹೇಳಿಕೊಳ್ಳುತ್ತಿದ್ದ ಪುಟ್ಟಪರ್ತಿಯ ಕರಡಿ ಸಾಯಿಬಾಬರ ಭಕ್ತಾಗ್ರೇಣಿಯಾಗಿ ಹೋದರು. ಸಾಯಿ ಆತ್ಮ ಕಥೆಯಿಂದ ಹಿಡಿದು ಅವರ ಮಹಿಮೆ ಸಾರುವ ಅನೇಕ ಭಕ್ತಿಭಾವದ ಗ್ರಂಥಗಳನ್ನ ರಚಿಸಿದ ನಾ ಕಸ್ತೂರಿ ಮಲಯಾಳಂನ ಪ್ರಸಿದ್ಧ ಕಾದಂಬರಿ ತಕಳಿ ಶಿವಶಂಕರ ಪಿಳ್ಳೆಯವರ "ಚೆಮ್ಮೀನ್"ನನ್ನ ಕನ್ನಡಕ್ಕೆ ಅನುವಾದಿಸಿ ಗಳಿಸಿದ್ದ ಖ್ಯಾತಿಯ ನಂತರ ಸಾಯಿ ಭಕ್ತಿ ಪರವಶತೆಯಿಂದ ಹಾಸ್ಯಾಸ್ಪದರೂ ಆದರು. ಅದೇನೆ ಇದ್ದರೂ ಪರಭಾಷಿಗನಾಗಿದ್ದೂ ಕನ್ನಡವನ್ನ ಕಲಿತು ಬೆಳೆಸಿದ ಕೀರ್ತಿ ಇವರದ್ದು. ಅದಕ್ಕಾಗಿ ಅವರು ಸದಾ ಸ್ಮರಣೀಯರು. ಅವರ ಕಾಲಾತೀತ ಹಾಸ್ಯ ಇಂದಿಗೂ ಪ್ರಸ್ತುತವಾಗಿಯೆ ಉಳಿದಿದೆ. ಈ ಕಾಲದ ಕೋಡಂಗಿಗಳಂತಹ ಟಿವಿ ಹಾಸ್ಯ ಸಾಹಿತಿಗಳನೇಕರ ಬಂಡವಾಳವಿಲ್ಲದ ಬಡಾಯಿಗೆ ಕಳ್ಳಸಾಗಣೆ ಮಾಡುವ ಹಾಸ್ಯದ ಆಕರ ಗ್ರಂಥವಾಗಿಯೆ ಅವರ ಬರಹಗಳು ಉಳಿದಿವೆ.  

No comments: