24 September 2014

ಪುಸ್ತಕದೊಳಗೆ - ೩

" ಉಲ್ಲಂಘನೆ"
ಲೇಖಕ; ಡಾ ನಾರಾಯಣ ಭಟ್ಟ ಮೊಗಸಾಲೆ,
ಪ್ರಕಾಶಕರು; ಸುಮುಖ,
ಪ್ರಕಟಣೆ; ೨೦೧೨,
ಕ್ರಯ; ರೂಪಾಯಿ ೪೦೦.
" ಸಾಂತೇರ್'ಗುತ್ತಿನ ಹೆಣ್ಮಕ್ಕಳು ಯಾವತ್ತೂ ಸುಂದರಾಂಗಿಯರೇ, ಅವರ ನಡೆಯಲ್ಲಿ ನುಡಿಯಲ್ಲಿ, ಗುತ್ತಿನ ಛಾಪು ಇರುವಂತದ್ದೇ. ಅಂಗಸೌಷ್ಠವವೂ ಅಷ್ಟೇ. ತಿದ್ದಿ ತೀಡಿದ ಹಾಗಿರುವ ಹುಬ್ಬು, ಉರುಟಾಗಿರುವ ಮುಖ, ತುಸು ದೊಡ್ಡದೆ ಎನ್ನಬಹುದಾದ ಮೂಗು, ತೊಂಡೆ ತುಟಿ, ಸೊಂಟದ ತನಕ ಇಳಿಯುವ ಕೂದಲು, ಗೋಧಿನಾಗರ ಮೈಬಣ್ಣ, ಆಕರ್ಷಕ ಕಣ್ಣು, ಉದ್ದ ತೋಳು, ಎದ್ದು ತೋರುವ ಎದೆ, ಹದವಾದ ಸಿಂಹ ಸೊಂಟ! ಸಾಮಾನ್ಯವಾಗಿ ಗುತ್ತಿನ ಎಲ್ಲಾ ಹೆಣ್ಮಕ್ಕಳೂ ಹೀಗೆಯೇ.
ಹಿಂದೆ ಕೋಚ್'ಮೆನ್ ದೊರೆ ಒಪ್ಪಿ ಕೈ ಹಿಡಿದ ಅಂಬಕ್ಕೆಯ ಅಜ್ಜಿಯ ತಂಗಿ ಕೊರಪೊಲುಗೆ ಈ ಎಲ್ಲಾ ಲಕ್ಷಣಗಳಿದ್ದು ಫಕ್ಕನೆ ಎಂತಹ ಗಂಡಸೂ ಒಮ್ಮೆ ನಿಂತು ನೋಡುವಷ್ಟು ಆಕರ್ಷಕವಾಗಿದ್ದಳಂತೆ. ಗಂಡಸು ಏನು, ಹೆಂಗಸೂ ಸಹ ಆಕೆಯನ್ನು ನೋಡಿ ಕಣ್ಣು ಕೀಳದೆ ಇರುತ್ತಿದ್ದರಂತೆ ಎಂದು ಮೂಸಬ್ಬ ವರ್ಣಿಸುವಾಗ ಕೇಳುಗರಿಗೆ ಪ್ರತ್ಯಕ್ಷ ಆಕೆಯನ್ನು ಕಾಣುತ್ತಿದ್ದೇನೆ ಎಂಬ ಹಾಗೆ ಚಿತ್ರ ಕಣ್ಮುಂದೆ ಬಂದಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ.
- ಡಾ ನಾ ಮೊಗಸಾಲೆ.
ಕನ್ನಡದ ಸಮಕಾಲೀನ ಸಾಹಿತ್ಯ ಜಗತ್ತಿನಲ್ಲಿ ಡಾ ನಾ ಮೊಗಸಾಲೆ ಒಂದು ಪ್ರಮುಖ ಹೆಸರು. ರಾಜಧಾನಿಯ ಸಾಹಿತ್ಯಿಕ ರಾಜಕೀಯಗಳಿಂದ ದೂರವಾಗಿ ಕೇವಲ ಸಾಹಿತ್ಯಕ್ಕಾಗಿ ಸಾಹಿತಿಯಾಗಿರುವ ಅನೇಕ ವಿರಳ ಬರಹಗಾರರಲ್ಲಿ ಇವರೂ ಒಬ್ಬರು. ಉಡುಪಿ ಜಿಲ್ಲೆಯ ಕಾಂತಾವರ ಎನ್ನುವ ಪುಟ್ಟ ಹಳ್ಳಿಯಲ್ಲಿ ಎಡೆಬಿಡದ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಇವರು ಎರಡು ವರ್ಷದ ಕೆಳಗೆ ಬರೆದ ದೊಡ್ಡ ಕಾದಂಬರಿ "ಉಲ್ಲಂಘನೆ". ಕನ್ನಡ ನಾಡಿನ ಕರಾವಳಿಯ ಬಲಾಢ್ಯ ಬಂಟ ಜನಾಂಗದ ಬಗ್ಗೆ, ಅವರ ಗುತ್ತು ಗತ್ತು ಒಂದಾನೊಂದು ಕಾಲದಲ್ಲಿ ಮೆರೆದಿದ್ದನ್ನ - ಆಧುನಿಕತೆಯ ಹೊಡೆತಕ್ಕೆ ಸಿಕ್ಕಿದ ಅವುಗಳ ಊರ ಯಜಮಾನಿಕೆಯ ಹೊಳಪು ಕ್ರಮೇಣ ಕರಗಿದ್ದನ್ನ ಸಾಂತೇರ್'ಗುತ್ತು ಎನ್ನುವ ಮಂಗಳೂರಿನ ಬಗಲಿನಲ್ಲಿಯೆ ಇರಬಹುದಾದ ಕಾಲ್ಪನಿಕ ದೊಡ್ಡ ಮನೆಯೊಂದರ ಉತ್ಥಾನ ಹಾಗೂ ಅವಸಾನದ ಕಥೆಗಳಲ್ಲಿ ನಾಲ್ಕು ತಲೆಮಾರುಗಳ ಸುದೀರ್ಘ ಕಥನದಲ್ಲಿ ಅವರು ವಿವರಿಸುತ್ತಾರೆ.
ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ ಮೊಗಸಾಲೆಯವರ ವಿವರಣೆಯಲ್ಲಿ ಕೃತಕತೆ ಕಾಣಲಾರದಷ್ಟು ಅವರು ಬಂಟರ ರೀತಿ ರಿವಾಜುಗಳನ್ನ, ಸಾಂಸ್ಕೃತಿಕ ಅನನ್ಯತೆಗಳನ್ನ ಸೂಕ್ಷ್ಮವಾಗಿ ಗಮನಿಸಿ ಅರಿತು ಬರೆದಿದ್ದಾರೆ. ಊರೊಂದರ ಅಭಿವೃದ್ಧಿಯ ದ್ಯೋತಕವಾಗಿದ್ದ ಗುತ್ತಿನ ಏಳ್ಗೆ ಹಾಗೂ ನಡೆ, ಅಳಿಯಕಟ್ಟಿನ ಕೌಟುಂಬಿಕ ಪದ್ದತಿಯ ಬಂಟರ ಮನೆಯ ಯಜಮಾನ ಸಹೋದರ ಮಾವನಾಗಿರುತ್ತಾನೆ. ಇಲ್ಲಿಯೂ ಎರಡನೆ ತಲೆಮಾರಿನ ಗುತ್ತಿನಾರ್ ಸಂಕಪ್ಪ ಹೆಗ್ಗಡೆಯವರು ಯಜಮಾನರಾದರೂ ಗತ್ತು ಮೆರೆಯದೆ ಋಷಿಯಂತೆ ಬಾಳಿದ ಸ್ವಾತಂತ್ರ್ಯ ಹೋರಾಟಗಾರ. ಆದರೆ ಹರಿಯುವ ನೀರಿನಲ್ಲಿ ಎಲ್ಲವೂ ತೇಲುವಂತೆ ಮುಂದಿನ ತಲೆಮಾರಿನ ಹುಡುಗರಲ್ಲಿ ಯಜಮಾನಿಕೆಯ ಗತ್ತಿನ ಅವರ ತಂಗಿ ಯಜಮಾನತಿ ಅಂಬಕ್ಕೆಯ ಮಕ್ಕಳ ಕಾಲವೂ ಬರುತ್ತದೆ. ಭೂ ಸುಧಾರಣೆ ಮಸೂದೆ ಗುತ್ತಿನ ಕೃಷಿಗೆ ಗ್ರಹಣ ಹಿಡಿಸಿದ್ದು, ಫಲಾನುಭವಿ ಆಳು ಮಕ್ಕಳು ತಮಗೆ ಮಂಜೂರಾದ ಗುತ್ತಿನ ತುಂಡು ಭೂಮಿಯನ್ನ ಮಲೆಯಾಳಿ ಮುರಕಲ್ಲು ಮಾರಾಟಗಾರರಿಗೆ ಮೂರು ಕಾಸಿಗೆ ಮಾರಿ ಬದುಕನ್ನ ಇನ್ನಷ್ಟು ಹಾಳುಗೆಡವಿಕೊಂಡದ್ದು, ಗುತ್ತಿನ ಗತ್ತಿನ ಶೆಟ್ಟರೆಲ್ಲ ಬೊಂಬಾಯಿ ಸೇರಿ ಅಲ್ಲಿನ ಹೊಸ ತಲೆಮಾರಿನ ಸೇಟುಗಳಾಗುವಷ್ಟು ಪ್ರಭಾವಿಗಳಾಗಿ ಬೆಳೆದದ್ದು, ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗುವ ಅಂಚಿನಲ್ಲಿದ್ದ ಭೂತದ ಕೋಲ, ನಾಗ ತಂಬಿಲ, ಕೋಳಿ ಅಂಕ ಹಾಗೂ ಕಂಬಳದಂತಹ ಸಾಂಸ್ಕೃತಿಕ ಆಚರಣೆಗಳೆಲ್ಲ ಬೊಂಬಾಯಿ ದುಡ್ಡಿನ ಭರಾಟೆಯಲ್ಲಿ ಡೌಲಿನ ಆಚರಣೆಗಳಾಗಿ ಮರುಹುಟ್ಟು ಪಡೆದು ದುಡ್ಡಿದ್ದವರ ಸೊಕ್ಕಿನ ಸೂಚಕಗಳಾಗಿ ಬೆಳೆದದ್ದು ಹೀಗೆ ಜಿಲ್ಲೆಯ ಎಲ್ಲಾ ಸ್ಥಿತ್ಯಂತರಗಳು ಇಲ್ಲಿ ಸೂಕ್ಷ್ಮವಾಗಿ ದಾಖಲಾಗಿವೆ. ನಡುನಡುವೆ ಮೊಗಸಾಲೆಯವರು ಹೆಣೆದಿರುವ ಪಾಡ್ದನಗಳು, ಉಲ್ಲೇಖಿಸಿರುವ ಕೃಷಿ ಪದ್ದತಿಗಳು ಮತ್ತು ಬಂಟ ಆಹಾರ ಪದ್ದತಿಯ ಸವಿವರಣೆ ಸ್ಥಳಿಯ ಭಾಷೆ ಹಾಗೂ ಸಂಸ್ಕಾರಗಳ ಬಗ್ಗೆ ಅವರಿಗಿರುವ ಹಿಡಿತಕ್ಕೆ ಸಾಕ್ಷಿ.
ಉಲ್ಲಂಘನೆ ಒಂದು ಕೃತಿಯಾಗಿ ಈಗಾಗಲೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಜೊತೆಜೊತೆಗೆ ಇನ್ನೂ ಮೂರು ಪ್ರತಿಷ್ಠಿತ ಸಾಹಿತ್ಯಿಕ ಪ್ರಶಸ್ತಿಗಳನ್ನ ತನ್ನ ಮುಡಿಗೆ ಏರಿಸಿಕೊಂಡಿದೆ. ಬಂಟ ಸಂಸ್ಕೃತಿಯ ಬಗ್ಗೆ ಈ ಕಾದಂಬರಿಯನ್ನ ಆಧರಿಸಿ ಎಂ ಫಿಲ್ ಕೂಡಾ ಮಾಡಲಾಗಿದೆ. ಕೃಷಿಕ, ಬರಹಗಾರ ಹಾಗೂ ಅನುವಾದಕ ಮಧುಸೂದನ ಪೆಜತ್ತಾಯರು "ಉಲ್ಲಂಘನೆ"ಯನ್ನ DEFIENCE ಎನ್ನುವ ಹೆಸರಿನಲ್ಲಿ ಆಂಗ್ಲಕ್ಕೂ ಅನುವಾದಿಸಿದ್ದು ಅದೀಗ ಅದು ಪ್ರಕಟಣೆಯ ಹಂತದಲ್ಲಿದೆ. ದಕ್ಷಿಣ ಕನ್ನಡದ ಪ್ರಮುಖ ಕಾಲಾಂತರದ ಬದಲಾವಣೆಯನ್ನ ಸಶಕ್ತವಾಗಿ ಅನುಭವಿಸಲು ಇಚ್ಛಿಸುವವರು "ಉಲ್ಲಂಘನೆ"ಯನ್ನ ಓದಬೇಕು.

No comments: