24 September 2014

ಪುಸ್ತಕದೊಳಗೆ - ೧೦( ಬರಹ; ರೂಪಾಲಕ್ಷ್ಮಿ.)

"ಆಡುಕಳ"

(ಕಾದಂಬರಿ)

ಬರೆದಿರುವವರು; ಶ್ರೀಧರ ಬಳಗಾರ,
ಪ್ರಕಾಶಕರು; ಅಂಕಿತ ಪುಸ್ತಕ,
ಪ್ರಕಟಣೆ; ೨೦೧೪,
ಕ್ರಯ; ರೂಪಾಯಿ ೧೫೦.

ಮದ್ಗುಣಿ ಡಾಕ್ಟರ್ ಜೊತೆಗೆ ಅಟ್ಟದ ಕೋಣೆಗೆ ಬಂದ. ದಶರಥ ಕೈ ಮುಗಿಯುತ್ತ ಎದ್ದು ಕುಳಿತ. "ನಿನ್ನೆಗಿಂತ ಹೆಚ್ಚು ಲವಲವಿಕೆ ಕಾಣ್ತದೆ. ಶರೀರದ ಸೂಕ್ಷ್ಮ ಭಾಗ ಅದು. ಗಾಯ ನಿಧಾನ ಮಾಯಬೇಕು. ನಿಮ್ಮ ನಸೀಬು ಚಲೋ ಇತ್ತು. ಸರಿ ಹೊತ್ತಿಗೆ ಗಂಗಣ್ಣನ ಕಣ್ಣಿಗೆ ಬೀಳದಿದ್ದರೆ ಇನ್ನೂ ಹೆಚ್ಚು ಬ್ಲೀಡಿಂಗ್ ಆಗಿ ಜೀವಕ್ಕೆ ಅಪಾಯವಿತ್ತು." ದಶರಥನ ಬೆನ್ನು ತಟ್ಟಿ ಭರವಸೆ ಮೂಡಿಸಿದರು. "ಡಾಕ್ಟ್ರೆ, ದಶರಥನಿಗೆ ಎಮ್ಮೆ ಚಿಂತೆ! ಮನೇದೆ ಧ್ಯಾನ!" ಎಂದು ಗಂಗಣ್ಣ ಮದ್ಗುಣಿಯವರಿಂದ ಸಲಹೆ ಬರಲೆಂದು ನಿರೀಕ್ಷಿಸಿದ. 

ಮದ್ಗುಣಿಯವರು ಒಳವಸ್ತ್ರವನ್ನು ಕಳಚಲು ಹೇಳಿದರು. ಕೋಣೆಯಲ್ಲಿ ನಸುಗತ್ತಲಿರುವುದರಿಂದ ಹೆಚ್ಚು ನಾಚದೆ ದಶರಥ ಬಟ್ಟೆ ಬಿಚ್ಚಿದ. ದೀಪ ಹಾಕಿದರು. ದಶರಥ ತನ್ನ ನಗ್ನತೆಗೆ ತಾನೆ ಅಳುಕಿ ಕತ್ತು ಹೊರಳಿಸಿದ. ಸುತ್ತ ಬಿಗಿದ ಬ್ಯಾಂಡೇಜ್ ನ್ನು ನಾಜೂಕಾಗಿ ಬಿಡಿಸಿದರು. "ಗಾಯ ಒಣಗ್ತಾ ಇದೆ. ನೀರು ತಗಲಬಾರ್ದು, ಇನ್ನೆರಡು ದಿವಸ ಸ್ನಾನ ಬೇಡ" ಎಂದರು.

"ಡಾಕ್ಟರೆ ನನಗೆ ಈ ಗಾಯ ದೊಡ್ಡದಲ್ಲ, ಆ ಕಳ್ಳರ ಭಯವೂ ಅಷ್ಟೆಲ್ಲಾ ಕಾಡೋದಿಲ್ಲ. ಆ ಎಮ್ಮೆ ಕರು ಮಾಡಿದ ಹಲ್ಕಟ್ ದಂಧೆ ನೋಡಿ ತಲೆ ಎತ್ಕಂಡು ತಿರಗಾಡೋದೆ ಕಷ್ಟ" ದಶರಥ ಔಷಧಿಯೆ ಇಲ್ಲದ ತನಗಾದ ಅವಮಾನವನ್ನು ನೆನಪಿಸಿಕೊಂಡು ಸಂಕಟಪಟ್ಟ. "ನಾಚುವಂತಾದ್ದು ಏನಿದೆ ಅದ್ರಲ್ಲಿ? ನಾ ಬರೆದ ಮದ್ದು ಚಾಲೂ ಇರ್ಲಿ, ಒಂದು ವಾರದ ನಂತರ ಮತ್ತೆ ನೋಡ್ತೇನೆ" ಮದ್ಗುಣಿಯವರು ಅವನಿಗೆ ಬಟ್ಟೆ ಹಾಕಲು ಹೇಳಿ ಹೊರನಡೆದರು.

- ಶ್ರೀಧರ ಬಳಗಾರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರ ಊರಿನ ಶ್ರೀಧರ್ ಅವರ ಎರಡನೆಯ ಕಾದಂಬರಿ ಇದು. ಕುಮಟಾದ ಕಮಲಾಬಾಳಿಗ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ. ‘ಅಧೋಮುಖ (೧೯೯೫), ‘ಮುಖಾಂತರ (೧೯೯೮), ‘ಇಳೆ ಎಂಬ ಕನಸು’ (೨೦೦೩), ‘ಒಂದು ಫೋಟೋದ ನೆಗೆಟಿವ್’ (೨೦೦೮) ‘ಅಮೃತಪಡಿ’ (೨೦೧೧) ಕಥಾ ಸಂಕಲನಗಳು, ‘ಕೇತಕಿಯ ಬನ’ (೨೦೦೩) ಕಾದಂಬರಿ - ‘ರಥ ಬೀದಿ’ ಮತ್ತು ‘ಕಾಲ ಪಲ್ಲಟ’ ಅಂಕಣ ಬರಹಗಳು. ಕೆಲವು ಕಥೆಗಳು ಇಂಗ್ಲೀಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.

ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್ ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ.ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಸಂಸ್ಮರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು ‘ಅಮ್ಮ’ ಪ್ರಶಸ್ತಿ ಪುರಸ್ಕೃತರು.

ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳು ಇಡೀ ಊರನ್ನು / ಊರಿನ ಜನರನ್ನು ಒಳಗೊಳ್ಳುವ ಬಗೆ, ಬದುಕಿನ ತಲ್ಲಣಗಳು, ದೂರದೃಷ್ಟಿ, ದುರಾದೃಷ್ಟಿಯ ಮನುಷ್ಯನ ಆಲೋಚನೆಗಳು ದಿಗಿಲನ್ನುಂಟುಮಾಡುತ್ತವೆ. ‘ಆಡುಕಳ’ ಎಂಬ ಫಲವತ್ತಾದ ಭೂಮಿಯ ಆಸೆಗೆ, ಅದರ ಮಾಲೀಕನನ್ನು ತುಳಿಯುವ, ಆತನನ್ನು ಬದುಕಿನಿಂದಲೇ ವಿಮುಖಗೊಳಿಸುವ ಪ್ರಯತ್ನ ಹೇಸಿಗೆ ಹುಟ್ಟಿಸಿದರೂ, ಯಾವುದೂ ಇಲ್ಲಿ ಅನಿರೀಕ್ಷಿತವಲ್ಲ, ಅಸಾಧ್ಯವಲ್ಲ. ಹಿಂದಿನಿಂದಲೂ ಪ್ರಬಲರು ದುರ್ಬಲರನ್ನು ತುಳಿಯುವುದು ಇದ್ದೇ ಇದೆ ಎನ್ನುವ ಒಂದು ರೀತಿಯ ನಿರಾಳ?! ಮನಸ್ಥಿತಿಯನ್ನು ಉಂಟು ಮಾಡಿಬಿಡುವ ಕಾದಂಬರಿ. ಪಾತ್ರ ರಚನೆ, ಅವುಗಳ ಸಂಭಾಷಣೆ ಎಲ್ಲೋ ಒಂದು ಕಡೆ ‘ತೇಜಸ್ವಿ’ಯವರ ‘ಕರ್ವಾಲೋ’ ವನ್ನು ನೆನಪಿಸಿಬಿಡುತ್ತವೆ. ಕೊನೆಯವರೆಗೂ ಎಲ್ಲಾ ಪಾತ್ರಗಳು ಮನಸ್ಸಿನಲ್ಲಿ ಕಾಡಿಬಿಡುತ್ತವೆ ಕಾದಂಬರಿ ಮುಗಿದ ಮೇಲೂ.

No comments: