28 September 2014

ಪುಸ್ತಕದೊಳಗೆ - ೧೮

"ನನ್ನ ಮಗ ಗುರುದತ್ತ"

ಲೇಖಕರು; ವಾಸಂತಿ ಪಡುಕೋಣೆ,
ಪ್ರಕಾಶಕರು; ಮನೋಹರ ಗ್ರಂಥಮಾಲಾ.
ಪ್ರಕಟಣೆ; ೧೯೭೬,
ಕ್ರಯ; ರೂಪಾಯಿ ಇಪ್ಪತ್ತು.


" ೧೯೫೩, ಮೆ ತಿಂಗಳಲ್ಲಿ ಗುರುದತ್ತನ ಮದುವೆಯಾಯಿತು. ಗೀತಾರಾಯ್'ಳನ್ನು ಅವಳ ಹಣಕ್ಕೋಸ್ಕರ ಗುರುದತ್ತ ಮದುವೆ ಮಾಡಿಕೊಂಡಿರುವನೆಂದೂ, ಇಲ್ಲದಿದ್ದರೆ ಆತನಿಗು ಆಕೆಗೂ ಎಲ್ಲಿಂದೆಲ್ಲಿಗೆ ಎಂದೂ 'ಟೈಮ್ಸ್' ಪತ್ರಿಕೆಯವರು ತುಂಬಾ ಅವಹೇಳನ ಮಾಡಿ ಬರೆದಿದ್ದರು. ಗುರುದತ್ತನಿಗೆ ವಾಸ್ತವದಲ್ಲಿ ಎಂದೂ ಹಣದ ಮೇಲೆ ಆಸೆ ಇರಲಿಲ್ಲ. ಹಾಗೆ ಇದ್ದದ್ದೇ ಆಗಿದ್ದರೆ ಆಕೆಯ ಹಣವನ್ನೆಲ್ಲ ದೋಚಿಕೊಂಡು ಆಕೆಯನ್ನಾತ ಕೈಬಿಡಬಹುದಾಗಿತ್ತು. ಆತ ದುಡಿದಿದ್ದು ಸ್ವತಃ ದುಡಿದು, ಅದರ ಒಂದು ಕಾಸನ್ನೂ ಇಟ್ಟುಕೊಳ್ಳದೆ ಬಂದದ್ದನೆಲ್ಲ ಪರೋಪಕಾರಕ್ಕಾಗಿ, ದಾನಕ್ಕಾಗಿ ಖರ್ಚು ಮಾಡುವ ಎದೆ ಅವನಿಗಿತ್ತು. ಇಷ್ಟಾಗಿ ಮಾಡಿದ್ದನ್ನು ಹೇಳಿಕೊಳ್ಳುವ ಚಟವೂ ಅವನಿಗಿರಲಿಲ್ಲ. ಈ ಚಿತ್ರಪಟದ ವ್ಯವಸಾಯವೆ ಹೆಚ್ಚಾಗಿ ಆತ್ಮಸ್ತುತಿ ಮಾಡಿಕೊಳ್ಳುವುದಕ್ಕೆ ಹಿರಿದು. ಇನ್ನೊಬ್ಬರು ತಮ್ಮನ್ನು ಮೆಚ್ಚಿ ಮಾತನಾಡುತ್ತಾರೋ ಇಲ್ಲವೋ? ಎಂಬ ಅನುಮಾನವಿದ್ದವರು ಸ್ವತಃ ಆತ್ಮಸ್ತುತಿ ಮಾಡಿಕೊಳ್ಳುತ್ತಿರಬಹುದು. ಗುರುದತ್ತನಿಗೆ ಯಾರ ಹೊಗಳಿಕೆಯಾಗಲಿ ಅಥವಾ ತೆಗಳಿಕೆಯಾಗಲಿ ಅತ್ತ ಲಕ್ಷ್ಯವೆ ಇರುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸವಾಯಿತು.ಹೀಗಾಗಿ ಅವನ ಸದ್ಗುಣಗಳು ಯಾರಿಗೂ ತಿಳಿಯದೆ ಹೋದವು. ಬಾಯಿಬಿಚ್ಚಿ ತನ್ನ ಸುಖ ದುಃಖಗಳನ್ನು ಹೇಳದ್ದರಿಂದ ಅವು ಯಾರಿಗೂ ತಿಳಿಯದೆ ಹೋದವು. ಸದಾ ಹಣದ ತಾಪತ್ರಯವಂತೂ ಇದ್ದೇ ಇತ್ತು. ಅಂದರೂ ಒಮ್ಮೆ ಕೈಯಲ್ಲಿ ತೆಗೆದುಕೊಂಡ ಕೆಲಸವನ್ನು ಆತ ಎಂದೂ ಕೈಬಿಡಲಿಲ್ಲ, ಇನ್ನೊಬ್ಬರ ಮುಂದೆ ಹೋಗಿ 'ದೇಹಿ' ಎಂದು ಕೈ ಒಡ್ಡಲಿಲ್ಲ.


'ಬಾಝ್' ನಂತರ 'ಆರ್ ಪಾರ್' ಫಿಲ್ಮಿನಲ್ಲಿ ಶ್ಯಾಮಾ ಎಂಬುವಳನ್ನು ನಾಯಕಿಯನ್ನಾಗಿ ಮಾಡಿ ತಾನು ನಾಯಕನಾಗಿ ಕೆಲಸ ಮಾಡಹತ್ತಿದನು. ಶ್ರಮಜೀವಿಗಳ ಬದುಕನ್ನ ತೋರಿಸುವ ಆ ಫಿಲ್ಮು ತುಂಬಾ ನಡೆದು ಹೆಸರನ್ನ ತಂದಿತು ಜೊತೆಗೆ ಹಣವನ್ನೂ ಸಹ. ಈ ನಡುವೆ ಮನೆಯ ವಾತಾವರಣವೆ ಬದಲಾಗಿದ್ದರಿಂದ ದೇವಿದಾಸನೂ, ವಿಜಯನೂ  ಓದು ಬರಹದಲ್ಲಿ ಮನಸ್ಸು ಹಾಕುತ್ತಿರಲಿಲ್ಲ. ದೇವಿದಾಸನನ್ನು ಒಂದು ಬೋರ್ಡಿಂಗಿಗೆ ಸೇರಿಸುವ ಸಲಹೆ ನಾನು ಗುರುದತ್ತನಿಗೆ ಕೊಟ್ಟೆನು. ಅವನಿಗೆ ಆಗ ಅದು ಸಾಧ್ಯವಾಗಲಿಲ್ಲ. ಆದರೂ ನನ್ನ ಮಾತಿಗೆ ಒಪ್ಪಿ ದೇವಿದಾಸನನ್ನು SSP ಶಾಲೆಗೆ ಸೇರಿಸಿದನು.೧೯೫೩ ನವಂಬರದಲ್ಲಿ ಆತ್ಮಾರಾಮಾ, ನಾಗರತ್ನಾ ಇವರ ಮದುವೆಯೂ ಆಯಿತು.

ಗೀತ ಮದುವೆಯಾದ ನಂತರ ಹಿಂದಿನಂತಿರಲಿಲ್ಲ. ಆಕೆಯ ಸ್ವಭಾವವೆ ಬದಲಾಯಿಸಿತ್ತು. ಮದುವೆಯನಂತರ ಸುಖವಾಗಿ ಆನಂದದಲ್ಲಿರುವುದರ ಬದಲಿಗೆ ಗುರುದತ್ತ - ಗೀತಾ ಇಬ್ಬರಲ್ಲೂ ಸದಾ ಜಗಳವೆ ಹೆಚ್ಚಾಗಿ ಕಂಡುಬರುತ್ತಿತ್ತು. ಗೀತಾ ಒಳ್ಳೆಯ ಹುಡುಗಿ ಹೌದು, ಆದರೂ ಏಕೋ ಏನೋ ಆ ಮದುವೆ ಸುಖಕರವಾಗಲಾರದೆಂದು ನನ್ನ ಒಳ ಮನಸ್ಸಿಗೆ ಕಾಣುತ್ತಿತ್ತು. ಗುರುದತ್ತನೂ ನನ್ನಲ್ಲಿ ಸಲುಗೆಯಿಂದಿದ್ದಾಗ ನನಗೆ ಅನಿಸಿದ್ದರ ಸೂಚನೆಯನ್ನೂ ಅವನಿಗೆ ಕೊಟ್ಟಿದ್ದೆ. ಆತನಿಗೂ ಒಮ್ಮೊಮ್ಮೆ ಹಾಗೆಯೆ ಕಾಣುತ್ತಿತ್ತೇನೋ ಆದರೆ ಕೊಟ್ಟ ಮಾತಿಗೆ ಎಂದೂ ಆತ ತಪ್ಪುತ್ತಿರಲಿಲ್ಲ. 'ಅಮ್ಮಾ, ನಾನು ಏನೆ ಆದರೂ ಗೀತಾಳನ್ನ ಪ್ರೀತಿಸುತ್ತೇನೆ. ಅದೂ ಅಲ್ಲದೆ ಅವಳನ್ನೆ ವರಿಸುವೆನೆಂದು ನಾನು ಮಾತು ಕೊಟ್ಟಿರುವುದನ್ನು ಹೇಗೆ ತಾನೆ ಒಪ್ಪಿ ತಪ್ಪಿಸಲಿ? ಸಾಧ್ಯವಿಲ್ಲ ಎಂದೂ ಸಾಧ್ಯವಿಲ್ಲ. ಅದೃಷ್ಟದಲ್ಲಿ ಇದ್ದಂತಾಗಲಿ. ನೀನು ಸುಮ್ಮನೆ ಚಿಂತಿಸಿ ಹಣ್ಣಾಗಬೇಡಮ್ಮ' ಎಂದೊಮ್ಮೆ ನನಗೆ ಹೇಳಿದ್ದನು. ಅವನೆ ಹೀಗೆ ಹೇಳುತ್ತಿರುವಾಗ, ಅವನೆ ನಮ್ಮ ಕುಟುಂಬಕ್ಕೂ ಆಧಾರವಾಗಿರುವಾಗ ನಾನಾದರೂ ಬಲವಂತ ಹೇಗೆ ಮಾಡಲಿ? ನಾನು ಮಾಡಿದರೂ ಅವನು ಕೇಳುವವನಲ್ಲ. ದೇವರೆ ಗತಿ ಅಂದುಕೊಂಡು ಸುಮ್ಮನಾದೆ.

೧೯೫೪ ಜುಲೈ ತಿಂಗಳ ಒಂಬತ್ತಕ್ಕೆ ಗುರುದತ್ತನ ಚೊಚ್ಚಲ ಮಗು ತರುಣನ ಜನನವಾಯಿತು. ಅದೆ ವರ್ಷ ಮೆ ೩೧ಕೆ ಮಗಳು ಲಲಿತೆಗೂ ಹೆಣ್ಣು ಮಗು ಹುಟ್ಟಿತು. ಗುರುದತ್ತನಿಗೆ ತನ್ನ ಮಗನಿಗಿಂತ ಲಲಿತೆಯ ಮಗಳ ಮೇಲೆಯೆ ಹೆಚ್ಚು ಮಮತೆ. ಮೊದಲು ಕೂಸು ನೋಡಿದವನೆ ಅವನು. ಹುಟ್ಟಿದ ಮೂರನೆ ದಿನಕ್ಕೆ ಅದರ ಎಷ್ಟೋ ಫೋಟೋಗಳನ್ನ ತೆಗೆದಿದ್ದನು. ಅದೆಷ್ಟೋ ವರ್ಷಗಳವರೆಗೆ ಸಣ್ಣ ಮಕ್ಕಳಿಲ್ಲದೆ ಇದ್ದ ಮನೆ ಈಗ ತುಂಬಿದಂತಾಯಿತು. ಇಬ್ಬರು ಮೊಮ್ಮಕ್ಕಳಿಗೂ ಹನ್ನೆರಡನೆ ದಿನ ಹೆಸರಿಡುವ ಸಂಭ್ರಮ ನಡೆಯಿತು. ಮಗಳ ಮಗುವಿಗೆ ಕಲ್ಪನಾ ಎಂದು ಹೆಸರಿಟ್ಟದ್ದಾಯಿತು. ಮಗ ಹುಟ್ಟಿದ ಮೇಲೆ ಗುರುದತ್ತ - ಗೀತ ತಕ್ಕ ಮಟ್ಟಿಗೆ ಸಂತೋಷವಾಗಿ ಅನ್ಯೋನ್ಯವಾಗಿಯೇ ಇದ್ದರು. ಮಗನಿಗಾಗಿ ಒಬ್ಬ ಆಯಾಳನ್ನು ಗೊತ್ತು ಮಾಡಿದರು. ನಾನು ಹೆಚ್ಛಾಗಿ ಮಗಳ ಮನೆಯಲ್ಲಿಯೆ ಇರುತ್ತಿದ್ದೆ. ಏಕೆಂದರೆ ಆಕೆಗೆ ಆಯ ಇಡುವ ಮನಸ್ಸೂ ಇರಲಿಲ್ಲ ಅನುಕೂಲತೆಯೂ ಇರಲಿಲ್ಲ.


ಒಂದು ವರ್ಷದಲ್ಲಿ ಗೀತಾ ಅತಿರೇಕದ ಸಿಡುಕಿನಿಂದ ಅನೇಕ ಬಾರಿ ಮನೆಬಿಟ್ಟು ಹೋಗಿದ್ದಳು. ಮದುವೆಯಾದ ನಂತರವಂತೂ ಆಕೆ ಸಂಪೂರ್ಣ ಸ್ವಾತಂತ್ರ್ಯ ತೆಗೆದು ಕೊಂಡಿದ್ದಳು. ಆದರೆ ಗಂಡ ಇದ್ದಾನೆಂಬ ನೆಪದಿಂದ ಇನ್ನೂ ಹೆಚ್ಚು ಸ್ವೇಚ್ಛಾಚಾರಿಯಾಗಿರಲಿಲ್ಲ ಅಷ್ಟೆ. ಅವಳ ಸಂಪಾದನೆಯೆಲ್ಲ ಅವಳ ಕೈಯಲ್ಲಿ. ಗುರುದತ್ತ ಅತ್ತ ಎಂದೂ ಲಕ್ಷ್ಯ ಹಾಕಲಿಲ್ಲ. ಅದು ಎಷ್ಟು ಎಂದೂ ಸಹ ಕೇಳುತ್ತಿರಲಿಲ್ಲ. ಹಾಗಾಗಿ ಅವಳ ದುಂದುವೆಚ್ಚಕ್ಕೆ ಹಾದಿಯಾಗಿತ್ತು. ಅಲ್ಲದೆ ಅನೇಕ ಸ್ನೇಹಿತರೂ ಇದಕ್ಕೆ ಕೂಡಿಕೊಂಡರು. ಅವರೊಡನೆ ಮನಸ್ಸು ಬಂದ ಕಡೆ ತಿರುಗುವುದು ಹೆಚ್ಚಾಯಿತು. ಕ್ರಮೇಣ ಸ್ವೇಚ್ಛಾಚಾರ ಮಿತಿಮೀರಲು ಆರಂಭಿಸಿತು. ಆಗಲೆ ಗುರುದತ್ತ ಒಂದಷ್ಟು ದಿಟ್ಟತನದಿಂದ ಲಗಾಮು ಜಗ್ಗಿ ತಡೆ ಹಿಡಿದಿದ್ದರೆ ಕುದುರೆ ಸರಳ ಹಾದಿ ಹಿಡಿಯುತ್ತಿತ್ತೋ ಏನೋ? ಸಡಿಲು ಬಿಟ್ಟು ತಪ್ಪು ಮಾಡಿದ.

........

೧೯೫೫ರಲ್ಲಿ ಗುರುದತ್ತನು ಖಾರಿನ ೧೨ನೆ ರಸ್ತೆಯಿಂದ ೧೯ನೆ ರಸ್ತೆಯಲಿಯ ಒಂದು ದೊಡ್ಡ ಮನೆ ಬಾಡಿಗೆ ಹಿಡಿದು ಅಲ್ಲಿಗೆ ಹೋದನು. ಆಗ ಗುರುದತ್ತನ ಸ್ಟೂಡಿಯೋ ತಾಡ್'ದೇವ್'ದಲ್ಲಿತ್ತು. ಈ ಸಲ ಹಾಸ್ಯ ಪ್ರಧಾನವಾದ ಚಿತ್ರಪಟವೊಂದನ್ನು ತಯಾರಿಸುವ ಇಚ್ಛೆಯಿಂದ ಆತನು ಮಧುಬಾಲಾಳಿಗೆ ನಾಯಕಿ ಪಾತ್ರ ಕೊಟ್ಟು ತಾನು ನಾಯಕನ ಪಾತ್ರ ವಹಿಸಿದನು. ಇದೂ ಅತ್ಯಂತ ಭರಪೂರ ನಡೆಯಿತು, ಕೈಯಲ್ಲಿ ಹಣ ಓಡಾಡ ಹತ್ತಿತು. ತರುಣನ ವರ್ಷದ ಹುಟ್ಟುಹಬ್ಬ ವಿಜೃಂಭಣೆಯಿಂದ ನಡೆಯಿತು. ಹುಟ್ಟು ಹಬ್ಬದ ಆಮಂತ್ರಣದ ಕಾರ್ಡುಗಳನ್ನ ಲಲಿತೆ ತಾನೆ ಮಾಡಿದ್ದಳೂ. ಗುರುದತ್ತಾ - ಗೀತಾ ಕೂಡಿಕೊಂಡು ಅನೇಕ ಸಲ ಮುಂಬೈಯನ್ನೆಲ್ಲಾ ಇಬ್ಬರೆ ಸುತ್ತಾಡಿಬಂದರು. ಮೊದಲನೆ ಸಲ ಲಂಡನ್ನಿಗೂ ಹೋಗಿ ಬಂದರು. ಇದೆ ವರ್ಷ ನಮ್ಮ ಯಜಮಾನರೂ ರಿಟೈರ್ ಆದರು. ನಾನೂ ಅವರೊಂದಿಗೆ ದೆಲ್ಲಿ, ಜಯಪುರ, ಕಾಶ್ಮೀರ, ಹರಿದ್ವಾರ, ಋಷಿಕೇಶ ಮುಂತಾದ ಸ್ಥಳಗಳನ್ನೆಲ್ಲ ನೋಡಿಬಂದು ನನ್ನ ಅನೇಕ ದಿನದ ಬಯಕೆ ತೀರಿಸಿಕೊಂಡೆನು. ನನ್ನ ತಾಯಿಯನ್ನು ಲಲಿತೆಯ ಮನೆಯಲ್ಲಿ ಇರುವಂತೆ ಒಪ್ಪಿಸಿದೆನು. ನಮ್ಮ ಯಜಮಾನರು ಇಬ್ಬರು ಮಕ್ಕಳಲ್ಲಿಯೂ ಸ್ವಲ್ಪ ಸ್ವಲ್ಪ ದಿನ ಇರಲಾರಂಭಿಸಿದರು. ನಾನು ಮುಂಬೈ ಬಿಡುವಾಗಲೆ ಸ್ವಲ್ಪ ಜ್ವರವಿತ್ತು. ಆದರೆ ನಾನು ಯಾರಿಗೂ ಹೇಳಲಿಲ್ಲ. ಒಮ್ಮೆ ಮುಂಬೈ ಬಿಟ್ಟರೆ ಸಾಕಾಗಿತ್ತು. ನಮ್ಮ ಸಂಸಾರವೋ ಬಡತನದ್ದು. ಸದಾ ದುಡ್ಡಿನ ಚಿಂತೆ. ಬರುವುದು ಕಡಿಮೆ ಹೋಗುವುದು ಹೆಚ್ಚು. ನಮಗಲ್ಲದೆ ನಮ್ಮಿಂದ ನಮ್ಮ ಮಕ್ಕಳಿಗೂ ಅವರ ಪಾಡು ದುಃಖಕ್ಕೀಡಾಗುವುದು. ಆಗ ಯಾರನ್ನವರು ಸಂಭಾಳಿಸಬೇಕು? ಮಾತಿಗೊಮ್ಮೆ ಸಿಡಿದೇಳುವ ತಮ್ಮ ಹೆಂಡತಿಯನ್ನೆ? ಮುಸು ಮುಸು ಮಾಡುವ ತಂದೆ ತಾಯಂದಿರನ್ನೆ? ಈ ಅನುಭವ ನಮಗಷ್ಟೆ ಕಾಯ್ದಿರಿಸಿದ್ದಲ್ಲ. ಇಡಿ ಜಗತ್ತಿನ ಅನುಭವವೆ ಇದು.

ಗುರುದತ್ತ ನನ್ನಿಂದ ದೂರವಾಗಿದ್ದೇನೋ ನಿಜ ಆದರೆ ನನ್ನ ಬೇಕು ಬೇಡಗಳನ್ನು ಅವನು ಯಾವಾಗಲೂ ಪೂರೈಸುತ್ತಿದ್ದನು. ನನಗೆ ಎಲ್ಲಿಗೆ ಬೇಕೋ ಅಲ್ಲಿಗೆ ಕಳಿಸಿಕೊಡುವನು. ಚಿಕ್ಕಂದಿನಿಂದಲೂ ದೊಡ್ಡೂರುಗಳನ್ನೂ, ಪ್ರಕೃತಿ ಸೌಂದರ್ಯವನ್ನೂ ನೋಡಬೇಕೆಂಬ ನನ್ನ ಹುಚ್ಚು ಕುತೂಹಲವನ್ನೂ ಡಾರ್ಜಲಿಂಗ್, ಕಾಶ್ಮೀರಗಳಂತಹ ರಮ್ಯ ಪ್ರದೇಶಗಳಿಗೆ ಕಳಿಸಿಕೊಟ್ಟು ತೃಪ್ತಿ ಪಡಿಸಿದನು. ನಾನೂ ಅವನ ಮಾತಿಗೆ ವಿರುದ್ಧ ಹೋಗುತ್ತಿರಲಿಲ್ಲ. ಅವನ ವೈವಾಹಿಕ ಜೀವನದಲ್ಲಾಗಲಿ, ವ್ಯಾವಹಾರಿಕ ಜೀವನದಲ್ಲಾಗಲಿ ನಾನು ಕೈ ಹಾಕುತ್ತಿರಲಿಲ್ಲ. ನನ್ನಿಂದ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆ. ಆದರೂ ಇನ್ನೊಬ್ಬರಿಗೆ ತಗ್ಗಿ ಇದ್ದು ತನ್ನ ಜೀವಮಾನವನ್ನು ಇನ್ನು ಕಳೆಯುವ ಸಮಯ ಬಂತಲ್ಲಾ ಎಂದು ಒಳಗೊಳಗೆ ಬೇಯುತ್ತಿದ್ದೆ.

ಗುರುದತ್ತ ಮುಂಗೋಪಿಯೂ ಹೌದು, ಆದರೆ ಆತನ ಮನಸ್ಸು ಸ್ಪಟಿಕದಂತೆ ಸ್ವಚ್ಛವಾಗಿತ್ತು. ಪರನಿಂದೆ ಆತನಿಗೆ ಸಹಿಸುತ್ತಿರಲಿಲ್ಲ. ಆತನ ನಿರ್ಮಲವಾದ ಸ್ವಭಾವವೆ ಆತನನ್ನ ಕುತ್ತಿಗೆ ಗುರಿ ಮಾಡುತ್ತಿತ್ತು. ಅವನ ಹಿತಶತ್ರುಗಳು ಅವನನ್ನ ಹೊಗಳಿದಂತೆ ಮಾಡಿ ಮೋಸ ಮಾಡುತ್ತಿದ್ದರು. ಏನೆ ಆದರೂ ಪರೋಪಕಾರ, ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಊಟ ಹಾಕುವುದು ಅವರಿಗೆ ಪಾಠ ಶಾಲೆಯ ಖರ್ಚು ಕೊಡುವುದು ಮಾಡುವುದನ್ನ ಆತ ಬಿಡುತ್ತಿರಲಿಲ್ಲ. ಅದರೆ ಪ್ರತಿಫಲ ಬಯಸುತ್ತಿರಲಿಲ್ಲ. ತಾನು ಹೀಗೆ ಮಾಡಿದೆ ಎಂದೂ ಹೇಳಿಕೊಳ್ಲುತ್ತಿರಲಿಲ್ಲ. ಇದನ್ನೆ ಒಳಮುಚುಗ ಸ್ವಭಾವವೆಂದು ಕರೆದು ಆತನನ್ನು ಅಹಂಕಾರಿ ಎಂದು ಜರೆದವರೂ ಉಂಟು. ಆತನನ್ನು ಆತನ ಜೀವಮಾನದುದ್ದಕ್ಕೂ ಯಾರೊಬ್ಬರೂ ಸರಿಯಾಗಿ ತಿಳಿದುಕೊಳ್ಳಲಿಲ್ಲ. ಪದವಿಧರನಲ್ಲದಿದ್ದರೂ ಆತನಿಗೆ ಓದುವ ಹುಚ್ಚು ಬಹಳ. ಶೇಕ್ಸ್ಪಿಯರ್ಸ್, ಬರ್ನಾರ್ಡ್ ಷಾ, ಎಮಿಲ್ ಝೂಲಾ, ವುಡ್'ಹೌಸ್, ಟಾಲ್'ಸ್ಟಾಯ್, ಸ್ಟೆನ್'ಬೆಕ್ ಮೊದಲಾದವರ ಕೃತಿಗಳನ್ನ ಆತ ಅದೆಷ್ಟು ಬಾರಿ ಓದಿದ್ದನೋ ತಿಳಿಯದು. ಅಷ್ಟೊಂದು ನಂಬಿಕೆ ಇಲ್ಲದಿದ್ದರೂ ಖುರ್ಹಾನ್, ಬೈಬಲ್'ಗಳನ್ನೂ ಓದುತ್ತಿದ್ದನು. ತನಗೆ ತಿಳಿದಷ್ಟನ್ನು ತಿಳಿದ ಮಟ್ಟಿಗೆ ಜೀವನದಲ್ಲಿ ಅಚರಣೆಗೆ ತರಲು ಪ್ರಯತ್ನಿಸಿದನು. ಹಗಲು ರಾತ್ರಿ ಮನಸಿನಲ್ಲಿ ತನ್ನ ಚಿತ್ರಪಟದ ಬಗ್ಗೆಯೆ ತುಂಬಿಕೊಂಡಿರುತ್ತಿದ್ದನು. ಎದುರಿಗಿದ್ದವರನ್ನು ಮರೆತು ಇಇನ್ನೆಲ್ಲೋ ಧೇನಿಸುತ್ತಿರುವಂತೆ ಅವನ ಕಣ್ಣುಗಳು ಶೂನ್ಯ ದೃಷ್ಟಿಯನ್ನು ತೋರಿಸುತ್ತಿದ್ದವು. ಗೀತಾಳ ಸ್ವಭಾವ ಇದಕ್ಕೆ ವಿರುದ್ಧವಾಗಿತ್ತು. ಆಕೆ ತನ್ನ ಸುತ್ತಲೂ ಮಾಯಾಜಾಲವನ್ನು ಬೀಸಿ ತನ್ನನ್ನು ಥೈ ಥೈ ಕುಣಿಸುವ ವಂಚಕ ಸ್ನೇಹಿತರ ಬೆನ್ನು ಹತ್ತಿದ್ದಳು. ತೃಷ್ಣೆಯ ಶಮನಕ್ಕಾಗಿ ಮೃಗಜಲಕ್ಕೆ ಕೈ ಒಡ್ದಿ ನಡೆದಿದ್ದಳು. ತನ್ನ ಸುಖೋಪಭೋಗಗಳ ಮುಂದೆ ಆಕೆಗೆ ಏನೊಂದೂ ಕಾಣುತ್ತಿರಲಿಲ್ಲ. ದೈವದತ್ತವಾದ ದಿವ್ಯ ಕಂಠವೊಂದು ಅವಳಿಗಿತ್ತು. ಪಾರ್ಶ್ವ ಸಂಗೀತದಲ್ಲಿ ಲತಾ ಮಂಗೇಷ್ಕರಳ ನಂತರ ಇವಳ ಹೆಸರೆ ಪ್ರಸಿದ್ಧವಿತ್ತು. ಆದರೆ ಅದೃಷ್ಟವಿರಲಿಲ್ಲ. ಆಕೆಗೆ ಮನುಷ್ಯ ಸಹಜವಾದ ಅಂತಃಕರಣ ಪ್ರವೃತ್ತಿಯೆ ಇರಲಿಲ್ಲ. ಹೊರಮಿಂಚು, ಡೌಲು ಹಾಗೂ ಸವಿಮಾತು ಇವೆ ಅವಳನ್ನು ಆಕರ್ಷಿಸುತ್ತಿದ್ದವು. ಹೀಗಾಗಿ ಇಬ್ಬರ ಸ್ವಭಾವಗಳೂ ಎಂದೂ ಕೂಡಲೆ ಇಲ್ಲ. ಗುರುದತ್ತನ ಸರಳ ಸ್ವಭಾವ, ನಿರ್ಮಲ ಮನಸ್ಸನ್ನ ಅಕೆ ಎಂದೂ ತಿಳಿದುಕೊಳ್ಳಲೆ ಇಲ್ಲ. ತಿಳಿದು ಕೊಳ್ಳುವುದು ಅವಳ ಆಳವೂ ಅಲ್ಲ. ಹೀಗಿದ್ದೂ ಗುರುದತ್ತ ಅವಳಿಂದ ಏನನ್ನೂ ಮುಚ್ಚಿಡುತ್ತಲಿರಲಿಲ್ಲ. ಆಕೆ ಹತ್ತಿರ ಬಂದರೆ ಸಾಕು ಪ್ರತಿಯೊಂದನ್ನೂ ಆಕೆಗೆ ಹೇಳುತ್ತಿದ್ದನು. ಆಕೆಯ ಅಭಿಪ್ರಾಯ ಕೇಳುತ್ತಿದ್ದನು. ಉಶ್ಶೆಪ್ಪಾ! ಈಗ ಇಬ್ಬರೂ ಅನ್ಯೋನ್ಯತೆಯೊಂದಿರುವರಲ್ಲಾ! ಎಂದು ಉಸಿರು ಬಿಡುವಷ್ಟರಲ್ಲಿಯೆ ಮತ್ತೆ ಜಗಳ ಹುಟ್ಟಿಕೊಂಡಿರುತ್ತಿತ್ತು. ಜಗಳದ ಪರಿಣಾಮವೇನು? ಆಕೆ ತನ್ನ ತವರುಮನೆಗೆ ಹೊರಟು ಹೋಗಿ ಬಿಡುವುದು. ಇಲ್ಲಿದ್ದರೂ ಆಕೆಯ ಊಟ ಯಾವಾಗಲೂ ತಾಯಿಯ ಮನೆಯಿಂದಲೆ ಬರುತ್ತಿತ್ತು. ಈ ಗಂಡ - ಹೆಂಡಿರ ಜೀವನವೆಂದರೆ ನಮಗೊಂದು ಗೂಢವೆ ಆಗಿತ್ತು.


.........


ಒಮ್ಮೆ ಗುರುದತ್ತನು ಹೈದ್ರಾಬಾದಿಗೆ ಒಂದು ಚಿತ್ರಪಟದ ಬಿಡುಗಡೆಗೆ ಹೋದಾಗ ಒಂದು ತೆಲುಗು ಚಿತ್ರವನ್ನು ನೋಡಿದನಂತೆ. 'ರೋಜುಲು ಮರ್ಯಾವು' ಎಂಬುದು ಅದರ ಹೆಸರು. ಅದರಲ್ಲಿ ವಹೀದಾ ರೆಹಮಾನ್ ಎಂಬುವವಳು ನೃತ್ಯ ಮಾಡಿದ್ದುದು ಗುರುದತ್ತನಿಗೆ ತುಂಬಾ ಹಿಡಿಸಿತ್ತಂತೆ, ಕೂಡಲೆ ಅವಳನ್ನು ತನ್ನ ಮುಂದಿನ ಚಿತ್ರಕ್ಕೆ ಕಾಂಟ್ರಾಕ್ಟ್ ಮೂಲಕ ತೆಗೆದುಕೊಳ್ಳಬೇಕೆಂದು ಅನೇಕ ಸಲ ಅವಳ ತಾಯಿಯನ್ನು ಸಮಜಾಯಿಷಿಸಿದರೂ ಆಕೆ ಒಪ್ಪಲಿಲ್ಲವಂತೆ. ಒಮ್ಮೆ ತಲೆಯಲ್ಲಿ ಹೊಕ್ಕಿದ್ದನ್ನು ಸಹಸಾ ಬಿಡುವಂತವನೂ ಗುರುದತ್ತ ಅಲ್ಲ. ನಾನಾ ಉಪಾಯಗಳಿಂದ ತಾಯಿ-ಮಕ್ಕಳನ್ನು ಒಡಂಬಡಿಸಿ ಆಕೆಯ ಅನೇಕ ಕರಾರುಗಳಿಗೆ ಒಪ್ಪಿ, ಕಾಂಟ್ರಾಕ್ಟಿಗೆ ಆಕೆಯಿಂದ ಸಹಿ ಮಾಡಿಸಿಕೊಂಡೆ ಬೊಂಬಾಯಿಗೆ ಹಿಂದಿರುಗಿದನುಇವಳನ್ನು ಕೂಡಿಸಿಕೊಂಡು ತೆಗೆದ ಚಿತ್ರಪಟವೂ ಯಶಸ್ವಿಯಾಯಿತು. ಪ್ರತಿಯೊಬ್ಬರೂ ಮೊದಮೊದಲು ವಹೀದಾಳನ್ನು ತೆಗೆದುಕೊಂಡದ್ದಕ್ಕಾಗಿ ಗುರುದತ್ತನನ್ನು ಹೀಯ್ಯಾಳಿಸಿದ್ದರು. ಗುರುದತ್ತ ಅದಕ್ಕೆ ಕಿವಿಗೊಡಲಿಲ್ಲ. ಹೇಳಿದ ಕೆಲಸವನ್ನು ಶೀಘ್ರ ತಿಳಿದುಕೊಳ್ಳುವ ಬುದ್ಧಿ ಅವಳಿಗಿದೆಯೆಂದು ಹೇಳುತ್ತಿದ್ದ. ಆಗಿನ್ನೂ ಆಕೆಗೆ ಕೇವಲ ಹದಿನಾರು ವರ್ಷ ಪ್ರಾಯ. ಹೆಚ್ಚು ಕಲಿತವಳೂ ಅಲ್ಲ. ತಂದೆ ತೀರಿಕೊಂಡ ನಂತರ ಮನೆಯ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು. ಆಗ ಯಾರಿಂದಲೋ ಈ ಫಿಲ್ಮು ಜಗತ್ತು ಸೇರಿದಳು. ಗುರುದತ್ತ ಅವಳನ್ನು ಚಿತ್ರಪಟದಲ್ಲಿ ತಂದ ಬಳಿಕ ಚಿತ್ರಪಟ ವ್ಯವಸಾಯದಲ್ಲಿ ಗುರುದತ್ತನಲ್ಲಿದ್ದ ಜಾಣ್ಮೆ, ದಿಗ್ಧರ್ಶನ ಮಾಡುವ ಕಲೆ ಜನರ ಕಣ್ಣಿಗೆ ಹೊಡೆಯಿತು. ಆ ಫಿಲ್ಮು ತಂದ ಹಣದಿಂದ ತನ್ನ ಆಫೀಸಿನ ಎಲ್ಲಾ ಕೆಲಸಗಾರರಿಗೂ, ಮನೆಯಲ್ಲಿರುವ ಎಲ್ಲಾ ಆಳುಗಳಿಗೂ ಮೂರು ಮೂರು ತಿಂಗಳ ಬೋನಸ್ ಕೊಟ್ಟನು. ಯಾವಾಗಾದರೂ ಮೊದಲಿಗೆ ಸ್ಟೂಡಿಯೋದಲ್ಲಿರುವವರಿಗೆ ಸಂಬಳ ಕೊಟ್ಟು೭ ಕಡೆಗೆ ತನ್ನ ಮನೆಯ ಖರ್ಚಿಗೆ ಕೊಡುತ್ತಿದ್ದನು. ಷೂಟಿಂಗ್ ನಡೆಯುತ್ತಿರುವಾಗ ನಿಶ್ಯಬ್ಧತೆ ಇರಬೇಕು. ಸ್ವಲ್ಪ ಶಬ್ಧ ಅಥವಾ ಕೆಲಸದಲ್ಲಿ ಸ್ವಲ್ಪ ತಪ್ಪಾದರೆ ಸಾಕು ಹುಲಿಯಂತೆ ಗರ್ಜಿಸುವನು. ಎಲ್ಲರೂ ಇವನಿಗೆ ಹೆದರಿ ಸಾಯುತ್ತಿದ್ದರು. ಆದರೆ ಕೆಲಸ ತೀರಿದ ಬಳಿಕ ಗುರುದತ್ತ ಅವರ ಪರಮ ಮಿತ್ರ. ಅವರ ಸುಖ ದುಃಖ ಎಲ್ಲಾ ಕೇಳೀಕೊಳ್ಳುವನು. ಅವರಿಗೆ ಏನು ಬೇಕೋ ಅದನ್ನು ಒದಗಿಸುವನು. ಹೀಗಾಗಿ ಮೂರುನೂರು ಮಂದಿ ಕೆಲಸಗಾರರೂ ಆಫೀಸಿನ ಸಿಬ್ಬಂದಿಗಳೂ ಗುರುದತ್ತನನ್ನು ಅಷ್ಟೊಂದು ಶ್ರದ್ಧೆ ವಿಶ್ವಾಸಗಳಿಂದ ನೋಡಿಕೊಳ್ಳುತ್ತಿದ್ದರು. ಅವನಿಗೊಂದಷ್ಟು ತಲೆಶೂಲೆಯಿದ್ದರೆ ತಾವು ದೇವರಿಗೆ ಬೇಡಿಕೊಳ್ಳುವರು. ಪ್ರತಿ ವರ್ಷ ಒಬ್ಬ ಶಿಲ್ಪಿಯು ಗಣೇಶನ ಹಬ್ಬಕ್ಕೆ ಗಣಪತಿಯ ವಿಗ್ರಹ ಮಾಡಿ ತಂದುಕೊಟ್ಟು ತನ್ನ ಸಂಭಾವನೆ ಪಡೆಯುತ್ತಿದ್ದನು. ಆತನು ೧೯೬೩ರಲ್ಲಿ ತೀರಿಕೊಂಡದ್ದರಿಂದ ಅದೂ ನಿಂತು ಹೋಯಿತು.

ಗುರುದತ್ತನಿಗೆ ಚಿಕ್ಕ ಮಕ್ಕಳು ಎಂದರೆ ತೀರಿತು, ಬಹಳ ಪ್ರೀತಿ. ತನ್ನ ಹಿರಿಯ ಮಗ ತರುಣನ ಮೇಲಂತೂ ವಿಶೇಷ. ಏನೂ ಅವಕಾಶವಿಲ್ಲದಷ್ಟು ದುಡಿತವಿರುವ ತನ್ನ ಹೊತ್ತಿನಲ್ಲಿಯೆ ಒಂದಷ್ಟನ್ನು ಹೇಗಾದರೂ ಮಾಡಿ ಸ್ಮಯ ದೊರಕಿಸಿ ಅವನನ್ನು ಎತ್ತಿ ಆಡಿಸುವನು. ಅವನ ಮೇಲೆ ತನ್ನ ಪ್ರೀತಿಯ ಧಾರೆ ಸುರಿಸುವನು. ಅವನು ಆಗ ತಯಾರಿಸಿದ 'ಪ್ಯಾಸಾ' ಫಿಲ್ಮು ಅತ್ಯಂತ ಪ್ರಸಿದ್ಧಿ ಪಡೆಯಿತು. ಐಶ್ವರ್ಯ, ಹೆಸರು, ಜನ ಹೊಗಳಿಕೆ ಎಲ್ಲವನ್ನೂ ಅದು ತಂದಿತು.

ಲೋಣಾವಳಾದಲ್ಲಿ ಕೆಲವು ಎಕರೆ ಹೊಲ ಕೊಂಡು ಮೂರು ರೂಮನ್ನು ಅಲ್ಲಿ ಕಟ್ಟಿಸಿದ. ತನಗೆ ಬೇಸರವಾದಾಗ, ಪಿಚ್ಚರಿಗೋಸ್ಕರ ಏನಾದರೂ ಬರೆಯಬೇಕಾದಾಗ ಅಲ್ಲಿ ಹೋಗಿ ಇರುವನು. ತಾನೆ ಅಡುಗೆ ಮಾಡಿಕೊಳ್ಳುವನು. ನೋಡಿಕೊಳ್ಳಲು ಇಟ್ಟವರ ಜೊತೆ ಹೊಲದಲ್ಲಿ ದುಡಿಯುವನು.  ಅವರಿಂದ ಜೋಳದ ರೊಟ್ಟಿ ಅಥವಾ ಸಜ್ಜೆಯ ರೊಟ್ಟಿ ಇಸಕೊಂಡು ತಿನ್ನುವನು. ಅಲ್ಲಿ ತಾನೆ ತೋಡಿಸಿದ ಬಾವಿಯ ನೀರನ್ನು ತಾನೆ ಜಗ್ಗುವನು. ಅಕ್ಕಪಕ್ಕದ ಕೂಲಿ ಕುಂಬಳಿಯವರು ಬಂದರೆ ಅವರಿಗೂ ಹನಿಸುವನು. ಆ ಬಾವಿ ಅಲ್ಲಿಯವರಿಗೆಲ್ಲ ಪುಣ್ಯ ತೀರ್ಥದಂತಾಗಿತ್ತು. ಎಲ್ಲರೂ ನೀರು ಒಯ್ಯುವವರೆ. ಆ ಭೂಮಿಯಲ್ಲಿ ಬೆಳೆದು ಬಂದ ದವಸ ಧಾನ್ಯವನ್ನು ತಂಗಿ - ತಮ್ಮಂದರಿಗೂ ಹಂಚಿ ಉಳಿದಿದ್ದನ್ನು ಮನೆಗೆ ಕಳಿಸುವನು. ಇದೆಲ್ಲದರಿಂದ ಲೋಣಾವಾಳ ಗುರುದತ್ತನಿಗೆ ಪ್ರಾಣವಾಯಿತು.

ಆದರೆ ಅದೆ ಗೀತಾಳಿಗೆ ಪ್ರತಿರೋಧದ ಭಾವನೆಗೆ ಆಸ್ಪದ ಮಾಡಿಕೊಟ್ಟಿತು. ಹಳ್ಳಿಯ ಜೀವನವೆಂದರೆ ಮೂಗು ಮುರಿಯುವ ಸ್ವಭಾವ ಅವಳದು. ಇಷ್ಟಾಗಿ ಗುರುದತ್ತ ಯಾವುದರಲ್ಲಿ ಉತ್ಸಾಹ ತೋರಿಸುತ್ತಾನೋ ಅದರಲಿ ಅವಳಿಗೆ ನಿರುತ್ಸಾಹ. ಗಂಡ ಹೆಂಡತಿಯ ನಡುವಿನ ಈ ಜಗ್ಗಾಟದಲ್ಲಿಯೆ ತರುಣನ ನಂತರದ ಎರಡನೆಯ ಹುಡುಗ ಅರುಣ ಹುಟ್ಟಿದನು. ಇದು ೧೯೫೬ರಲ್ಲಿ. ಈ ಸಲವಾದರೂ ಹೆಣ್ಣು ಹುಟ್ಟಬಹುದೆಂಬ ಅವರಿಬ್ಬರ ಆಸೆ ಈಡೇರಲಿಲ್ಲ. ಈ ಮಧ್ಯೆ ಗುರುದತ್ತನು 'ಪಾಲಿಹಿಲ್ಸ್'ನಲ್ಲಿ ಒಂದು ನೂರು ವರ್ಷ ಹಳೆಯದಾದ ಬಂಗ್ಲೆಯೊಂದನ್ನು ಕ್ರಯಕ್ಕೆ ಕೊಂಡು ಅದರ ಮೇಲೆ ಸಾವಿರಗಟ್ಟಲೆ ಹಣ ಖರ್ಚು ಮಾಡಿ ತನಗೆ ಬೇಕಾದಂತೆ ಅದನ್ನು ಹೆಚ್ಚು ಕಡಿಮೆ ಮಾಡಿಕೊಂಡನು. ದೊಡ್ಡ ಮನೆಯಲ್ಲಿ ಒಮ್ಮೆ ಇರಬೇಕೆಂಬ ತನ್ನ ಮನೋವಾಂಛಿತವನ್ನು ಪೂರೈಸಿಕೊಂಡನು. ಗುಜರಾತದ ಹಸುಗಳು, ಸಾಯಾಮೀಜ ಬೆಕ್ಕು, ವಿವಿಧ ಜಾತಿಯ ನಾಯಿಗಳು, ಪಕ್ಷಿಗಳು, ಕೋತಿಗಳು, ಮೊಲಗಳು, ಇವೆಲ್ಲವನ್ನೂ ಮೀರಿ ಒಂದು ಹುಲಿಮರಿ! ಎಲ್ಲಾ ಬಂದು ಮನೆ ಸೇರುವಂತೆ ಮಾಡಿದನು. ಸಣ್ಣದೊಂದು ಸರ್ಕಸ್ಸೆ ನೆರೆದಂತಾಯಿತು. ಹುಲಿಮರಿಯು ಒಂದೊಮ್ಮೆ ಅರುಣನನ್ನು ನೆಕ್ಕಿತಂತೆ. ಕೂಡಲೆ ಅದನ್ನು ಯಾರಿಗೋ ಕೊಟ್ಟುಬಿಟ್ಟನು. ಧನ-ಧಾನ್ಯ, ಪಶು-ಪಕ್ಷಿ, ಮನೆ-ಮಕ್ಕಳು, ಸತಿ-ಸುತರು, ಈ ಎಲ್ಲಾ ಸುಖ ಸಮೃದ್ಧಿ ಯಾರಿಗೆ ಹೊಟ್ಟೆಕಿಚ್ಚು ತರುತ್ತಿತ್ತೋ ದೇವರಿಗೆ ಗೊತ್ತು. ಗೀತ ಹಿಂದೆ ಎಷ್ಟು ಸದ್ಗುಣಿಯಾಗಿದ್ದಳೋ ಅಷ್ಟೇ ಈಗ ನಾನಾ ತರಹದ ವ್ಯಸನಾಧೀನಳಾಗಿ ಅಲ್ಲದ ಸ್ನೇಹಿತರ ಕೂಡಿಕೊಂಡು ಬಂಗಾರದಂತಾ ತನ್ನ ಸಂಸಾರ ಸೌಧವನ್ನೆ ಹಾಳುಗೆಡವ ಹತ್ತಿದಳು. ಯಾವಾಗಲೂ ಅವಳ ಸುತ್ತ ವ್ಯಸನಿ ಗೆಳೆಯರು ನೆರೆದಿರುತ್ತಿದ್ದರು, ಹೆಣದ ಸುತ್ತ ಹದ್ದುಗಳು ನೆರೆದಂತೆ!


- ವಾಸಂತಿ ಪಡುಕೋಣೆ.


ಭಾರತೀಯ ಚಿತ್ರರಂಗವಿರಲಿ ಕಳೆದ ಶತಮಾನದ ಐವತ್ತರ ಹಾಗೂ ಅರವತ್ತರ ದಶಕದಲ್ಲಿ ತನ್ನ ನಿರ್ದೇಶನ ನೈಪುಣ್ಯದಿಂದ ಜಾಗತಿಕ ಚಿತ್ರರಂಗವೆ ಭಾರತದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ನಮ್ಮ ಪಡುಕೋಣೆಯ ಗುರುದತ್ತರದ್ದು. ಬೆಂಗಳೂರಿನಲ್ಲಿ ಹುಟ್ಟಿ ಕೊಲ್ಕೊತ್ತಾದಲ್ಲಿ ಬೆಳೆದು ಮುಂಬೈನಲ್ಲಿ ಕೀರ್ತಿಯ ಉತ್ತುಂಗಕ್ಕೇರಿ ಲೋಣಾವಳದ ಮಣ್ಣಿನಲ್ಲಿ ಮಣ್ಣಾದ ಅಲ್ಪ ಅವಧಿಯಲ್ಲಿಯೆ ಅತ್ಯುಗ್ರವಾಗಿ ಉರಿದು ನಿಗೂಢ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿ ಅತಿ ಶೀಘ್ರವಾಗಿ ಇನ್ನಿಲ್ಲವಾದರೂ ಇಂದಿಗೂ ತನ್ನ ಕಲಾ ಜಾಣ್ಮೆಗಾಗಿ ನೆನಪಿಸಲ್ಪಡುವ ಪಡುಕೋಣೆ ಮೂಲದ ಗುರುದತ್ ಚಿತ್ರ ನಿರ್ಮಾಣದ ವಿಷಯಕ್ಕೆ ಬಂದರೆ ತಮ್ಮ ಕಾಲಕ್ಕಿಂತ  ಕನಿಷ್ಠ ಐವತ್ತು ವರ್ಷ ಮುಂದೆ ಇದ್ದವರು.


ದೇಶ ವಿಭಜನೆಯ ನಂತರ ಲಾಹೋರಿನಿಂದ ಮುಂಬೈಗೆ ಸ್ಥಳಾಂತರಗೊಡಿದ್ದ ಹಿಂದಿ ಚಿತ್ರೋದ್ಯಮ ಆಗಿನ್ನೂ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸುವ ಶೈಶವಾವಸ್ಥೆಯಲ್ಲಿತ್ತು. ಅನೇಕ ಪ್ರತಿಭಾ ಸಂಪನ್ನರು ಧರ್ಮಾಧರಿತವಾಗಿ ರಚನೆಯಾದ ಪಾಕಿಸ್ತಾಸದಲ್ಲಿ ಇರಲು ಇಷ್ಟ ಪಡದೆ ಧರ್ಮಾತೀತ ಪ್ರಜಾಪ್ರಭುತ್ವ ಭಾರತದ ಕಡೆಗೆ ಮುಖ ಮಾಡಿದ್ದ ಹೊತ್ತದು. ಮುಂಬೈನಲ್ಲಿ ಸ್ಥಿತಗೊಂಡ ಹಿಂದಿ ಚಿತ್ರೋದ್ಯಮಕ್ಕೆ ಮದ್ರಾಸಿನಲ್ಲಿ ನೆಲೆಗೊಂಡು ಬೆಳೆದು ಬಲಿಷ್ಜ್ಠವಾಗಿದ್ದ ದಕ್ಷಿಣ ಭಾರತೀಯ ಚಿತ್ರೋದ್ಯಮ ಒಡ್ಡುತ್ತಿದ್ದ ಸಶಕ್ತ ಪೈಪೋಟಿಯನ್ನ ಎದುರಿಸಿ ತಾನೂ ಬೆಳೆದು ತೋರಿಸಬೇಕಾದ ಅನಿವಾರ್ಯತೆ ಇತ್ತು. ಗುರುದತ್ತ, ದೇವಾನಂದ, ಬಲರಾಜ ಸಹಾನಿ, ಪೃಥ್ವಿರಾಜ ಕಪೂರ್, ಬಿ ಆರ್ ಛೋಪ್ರಾರಂತಹ ಅನೇಕ ಖ್ಯಾತನಾಮರ ಕೊಡುಗೆಯ ಫಲವಾಗಿ ಮುಂಬೈ ಇಂದು ಜಾಗತಿಕ ಚಿತ್ರೋದ್ಯಮದ ಮುಖ್ಯ ಸ್ಥಳಗಳಲ್ಲೊಂದಾಗಿ ಗುರುತಿಸಪಡುತ್ತಿದೆ ಅಂದರೆ ಅದರಲ್ಲಿ ಅತಿಶಯೋಕ್ತಿ ಏನೂ ಇಲ್ಲ.

ಗುರುದತ್ ಜೀವಿತಾವಧಿ ಬರಿ ನಲವತ್ತು ವರ್ಷ ಅದರಲ್ಲಿ ಅರ್ಧಾಂಶ ಮಾತ್ರ ಆತನ ಚಿತ್ರಬಾಳ್ವೆ ಸಾಗಿತ್ತು. ಆರಂಭದಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಕಾಲ ವೃತ್ತಿ ನಿರ್ವಹಿಸಿದ ಗುರುದತ್ ಅನಂತರ ನಟ ಹಾಗೂ ಸಹ ನಿರ್ದೇಶಕನಾಗಿ ಚಿತ್ರೋದ್ಯಮಕ್ಕೆ ಅಡಿಯಿಟ್ಟರು. ಅಂದಿನ ಖ್ಯಾತ ಚಿತ್ರೋದ್ಯಮಿ ವಿ ಶಾಂತಾರಾಮರ ಪ್ರಭಾತ್ ಫಿಲಂಸ್ ಗರಡಿಯಲ್ಲಿ ಪಳಗಿದ ಗುರುದತ್ ಅಲ್ಲಿ ದೇವ್ ಆನಂದ್ ಹಾಗೂ ರೆಹಮಾನ್ ಎಂಬ ಜೊತೆಗಾರರೊಂದಿಗೆ ಸಂಪಾದಿಸಿದ ಸ್ನೇಹ ಮುಂದೆ ದೇವ್ ಆನಂದರ ನವಕೇತನ ಫಿಲಂಸ್'ಕ್ಕಾಗಿ 'ಬಾಝಿ' ನಿರ್ದೇಶಿಸುವುದರೊಂದಿಗೆ ಪರ್ಯಾವಸನಗೊಂಡಿತು. ಆರಂಭದಲ್ಲಿ ಛಾಯಾಗ್ರಹಣದತ್ತ ಒಲವು ತೋರಿದ್ದ ಗುರುದತ್ತರ ಆಸಕ್ತಿ ನಿಧಾನಕ್ಕೆ ನಿರ್ದೇಶನದತ್ತ ಕೇಂದಿತಗೊಂಡಿತು. ಮುಂದೆ ತನ್ನದೆ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ ಗುರುದತ್ ಛಾಯಾಗ್ರಾಹಕ ವಿ ಕೆ ಮೂರ್ತಿ, ಅಬ್ರಾರ್ ಆಳ್ವಿ, ರಾಜ್ ಖೋಸ್ಲಾ, ಓ ಪಿ ನಯ್ಯರ್'ರಂತಹ ಪ್ರತಿಭಾವಂತರ ಪಡೆ ಕಟ್ಟಿದರು. ಮುಂದಿನ ದಿನಗಳಲ್ಲಿ ಜಾನಿ ವಾಕರ್, ವಹೀದಾ ರೆಹಮಾನ್'ರಂತಹ ಪ್ರತಿಭಾವಂತ ನಟ ನಟಿಯರನ್ನೂ ತೆರೆಗೆ ಪರಿಚಯಿಸಿದ ಶ್ರೇಯವೂ ಅವರಿಗೆ ಸಲ್ಲುತ್ತದೆ. ಈ ತಂಡದೊಂದಿಗೆ ತಾವೆ ನಿರ್ಮಾಪಕನಾಗಿ ತಯಾರಿಸಿದ ಚಿತ್ರ 'ಸಿಐಡಿ' ಕೂಡಾ ದೇವ್ ನಾಯಕರಾಗಿ ನಟಿಸಿದ್ದ ಚಿತ್ರವಾಗಿತ್ತು.  

ಯಶಸ್ಸು ಹಾಗೂ ಸೋಲು ಆಗಾಗ ವೃತ್ತಿ ಬಾಳಿನುದ್ದ ಎದುರಿಸಿದ ಗುರುದತ್ ತಯಾರಿಸಿದ 'ಪ್ಯಾಸಾ' 'ಜಾಲ್' 'ಸಾಹಿಬ್ ಬೀವಿ ಔರ್ ಗುಲಾಮ್' 'ಕಾಗಜ್ ಕೆ ಫೂಲ್' 'ಆರ್ ಪಾರ್' 'ಸೈಲಾಬ್' ''ಚೌದುವೀಕಾ ಚಾಂದ್' ನಂತಹ ಕೆಲವೆ ಕೆಲವು ಚಿತ್ರಗಳನ್ನ ನಟ ನಿರ್ಮಾಪಕ ನಿರ್ದೇಶಕ ಹೀಗೆ ವಿಭಿನ್ನ ನೆಲೆಯಲ್ಲಿ ಬಿಟ್ಟು ಹೋಗಿದ್ದರೂ ಅವೆಲ್ಲ ಇಂದಿಗೂ ಶ್ರೇಷ್ಠತೆಯ ಮಾನದಂಡದಲ್ಲಿ ಉನ್ನತವಾಗಿ ನಿಲ್ಲುವಂತವೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ 'ಸಾಂಜ್ ಅಔರ್ ಸವೇರ' ಗುರುದತ್ ಕೊಟ್ಟಕೊನೆಗೆ ತೆರೆಯ ಮೇಲೆ ಕಾಣಿಸಿಕೊಂಡ ಚಿತರವಾಗಿತ್ತು.

ವಯಕ್ತಿಕ ಬದುಕಿನ ಏರುಪೇರು. ಗೀತಾದತ್ ( ರಾಯ್.) ಜೊತೆಗಿನ ವಿಫಲ ವಿವಾಹ, ವಹೀದಾ ರೆಹಮಾನ್ ಜೊತೆಗಿನ ಸಂಶಯಾಸ್ಪದ ಪ್ರೇಮ ಇವೆಲ್ಲ ಗುರುದತ್ತರಂತಹ ಅಂತರ್ಮುಖಿಯನ್ನ ಸಾವಿನ ಮನೆಗೆ ತಳ್ಳಿದವೇನೋ. ಈ ಬಗ್ಗೆ ಆಶಾ ಭೋಂಸ್ಲೆ ವಿವಿಧಭಾರತಿಯ ಸಂದರ್ಶನವೊಂದರಲ್ಲಿ ಹೇಳಿದ್ದನ್ನ ಕೇಳಿದ್ದೇನೆ. ಮೂಲತಃ ಬರಹಗಾರಳೆ ಅಲ್ಲದ ಗುರುದತ್ ತಾಯಿ ವಾಸಂತಿ ಪಡುಕೋಣೆ ತನ್ನ ಮಗನ ಬಗ್ಗೆ ಆತನ ಸಾವಿನ ನಂತರ ಬರೆತ ನೆನಹುಗಳು 'ನನ್ನ ಮಗ ಗುರುದತ್ತ'ದಲ್ಲಿ ಕಾಣಸಿಗುತ್ತವೆ. ಕನ್ನಡವನ್ನಷ್ಟೆ ಬರೆಯಲು ಅರಿತಿದ್ದ ಅವರ ಈ ಬರಹವನ್ನ ಗಿರೀಶ ಕಾರ್ನಾಡರ ಮುನ್ನುಡಿಯೊಂದಿಗೆ ಮೂವತ್ತೈದು ವರ್ಷಗಳ ಹಿಂದೆ ಧಾರವಾಡದಿಂದ ಮನೋಹರ ಗ್ರಂಥಮಾಲಾ ಪ್ರಕಟಿಸಿತ್ತು. ಸದ್ಯ ಪ್ರತಿಗಳು ಹುಡುಕಿದರೆ ಸಿಕ್ಕಾವು. ಈ ಪುಸ್ತಕ ಮರು ಮುದ್ರಣಗೊಂಡ ಸುಳಿವಿಲ್ಲ. ಗುರುದತ್ತರ ತಂಗಿ ಮಗಳು ಕಲ್ಪನಾ ಲಾಜ್ಮಿ ಇವತ್ತಿಗೆ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು.


ನಮ್ಮ ಪಾಣೆ ಮಂಗಳೂರಿನಿಂದ ಹೋಗಿ ಜಾಗತಿಕವಾಗಿ ಮಿನುಗಿದ ಗುರುದತ್ ಕಡೆಯವರೆಗೂ ಪಡುಕೋಣೆಯ ಕನ್ನಡಿಗನಾಗಿಯೆ ಮೆರೆದರೆ ನೆನ್ನೆ ಮೊನ್ನೆ ಕಣ್ಣು ಬಿಟ್ಟ ಲಂಬೂ ನಟಿಮಣಿಯೊಬ್ಬಳು ತನ್ನ ಮೂಲವನ್ನ ಪಡು'ಕೋಣ್?' ಎಂದು ಹಿಂದೀಕರಿಸಿಕೊಳ್ಳುವ ವಿಫಲ ಮಂಗಾಟಕ್ಕೆ ಇಳಿದಿರೋದು ವ್ಯಂಗ್ಯದ ನಗು ಉಕ್ಕಿಸುತ್ತದೆ. ಚಿತ್ರಾಭಿಮಾನಿಗಳಿಗೆ ಇದೊಂದು ಒಳ್ಳೆಯ ಓದು.

No comments: