24 September 2014

ಪುಸ್ತಕದೊಳಗೆ - ೬


"ಯುಗಾಂತ"
ಲೇಖಕಿ; ಇರಾವತಿ ಕರ್ವೆ,
ಪ್ರಕಾಶಕರು; ಕೇಂದ್ರ ಸಾಹಿತ್ಯ ಅಕಾಡಮಿ ( ಒಂದು ಬಾರಿ.)
ಓರಿಯಂಟಲ್ ಲಾಂಗ್'ಮೆನ್ ( ಒಂದು ಬಾರಿ.)
ಅಭಿನವ ( ಎರಡು ಬಾರಿ.),
ಪ್ರಕಟಣೆ; ೧೯೬೬,
ಕ್ರಯ; ರೂಪಾಯಿ ೧೫೦.
" ಇವತ್ತು ಎಲ್ಲರೂ ಹಿಮಾಲಯದ ಬುಡವನ್ನು ಬಿಟ್ಟು ಪರ್ವತ ಏರಲು ಪ್ರಾರಂಭಿಸಿದರು. ಕೆಳ ಭಾಗದ ಕುಟೀರಗಳಲ್ಲಿ ಅವರನ್ನು ಕಾಯುವ ಕೆಲಸದಾಳುಗಳು, ಸೇವಕರು ಇದ್ದರು. ಹತ್ತಿರದಲ್ಲಿಯೆ ಋಷಿ ಕುಟೀರಗಳು. ಧರ್ಮ ಮತ್ತವನ ತಮ್ಮಂದಿರು ಅವರನ್ನ ನೋಡಲಿಕ್ಕೆ ಎರಡು ಸಲ ಬಂದು ಹೋಗಿದ್ದರು. ಏರಿಳಿತವಿಲ್ಲದ ಶಾಂತಮಯ ಬಾಳು ಅಲ್ಲಿ ಅವರದ್ದಾಗಿತ್ತು. ಧೃತರಾಷ್ಟ್ರ, ಗಾಂಧಾರಿ, ವಿದುರ, ಕುಂತಿಯರಿಗೆ ಒಂದೊಂದಾಗಿ ದಿನಗಳು ಕಳೆದು ಹೋಗುತ್ತಿದ್ದವು. ಋಷಿಗಳೊಂದಿಗೆ ವಿದುರ ಧೃತರಾಷ್ಟ್ರರು ಒಂದಿಲ್ಲೊಂದು ವಿಷಯಗಳ ಬಗ್ಗೆ ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದರು. ಗಾಂಧಾರಿ ಹಾಗೂ ಕುಂತಿ ಅದನ್ನ ಕೇಳುತ್ತಾ ಮೌನವಾಗಿ ಕುಳಿತುಕೊಳ್ಳುವರು.ಅವರ ಬಾಳಿನ ಹೊರ ಮುಖದಲ್ಲಿ ಕಾಣುತ್ತಿದ್ದ ಈ ಶಾಂತ ಸ್ಥಿತಿಗೆ ಅವರನ್ನ ಹೊರಗಿನ ಜನರು ಕಾಣಲು ಬಂದಾಗಲೆಲ್ಲ ಭಂಗವಾಗುತ್ತಿತ್ತು. ಹಾಗೆ ಈಗ ರಾಜರಾಗಿರುವ ಕುಂತಿಯ ಮಕ್ಕಳು ಕಾಣಲು ಬಂದಾಗಲೆಲ್ಲ ಬರಿ ಕಲರವವೆ ಅಲ್ಲೆಲ್ಲ ತುಂಬಿಕೊಳ್ಳುತ್ತಿತ್ತು. ಹಿರಿಯರ ಪಾದದಡಿಯಲ್ಲಿ ಮಕ್ಕಳು ಬಂದು ತಮ್ಮ ತಲೆಯನ್ನಿರಿಸುವಾಗ ಅವರವರ ಭಾವಕ್ಕೆ ತಕ್ಕ ಏರಿಳಿತಗಳು ಅವರವರ ಹೃದಯದಲ್ಲಿ ಮೂಡುತ್ತಿತ್ತು. ಆದರೂ ಮೇಲ್ನೋಟಕ್ಕೆ, ಕೇವಲ ಬರಿ ತೋರಿಕೆಗೆ ಅವರೆಲ್ಲರೂ ಮಕ್ಕಳೆಲ್ಲ ಹೋದ ಮೇಲೆ ಶಾಂತ ಚಿತ್ತವನ್ನ ನಟಿಸುತ್ತಿದ್ದರು. ಆದರೆ ಮನದೊಳಗಿನ ಬೇಗುದಿಯನ್ನ ಸ್ಥಿಮಿತಕ್ಕೆ ತರಲು ಅವರೆಲ್ಲರಿಗೂ ತುಂಬಾ ಕಷ್ಟವಾಗುತ್ತಿತ್ತು.
ಇವತ್ತೂ ಸಹ ರಾಜಕುಮಾರರೆಲ್ಲ ತಮ್ಮ ತಮ್ಮ ರಾಣಿಯರೊಂದಿಗೆ ಹಸ್ತಿನಾಪುರದಿಂದ ಬಂದಿದ್ದಾರೆ. ಆಗ ಯಾವುದೋ ಒಂದು ವಿಚಾರದ ಬಗ್ಗೆ ದೃಢ ನಿರ್ಧಾರಕ್ಕೆ ಬಂದ ಧೃತರಾಷ್ಟ್ರ ಧರ್ಮರಾಜನೊಂದಿಗೆ ಹೀಗಂದ; "ಯುಧಿಷ್ಠಿರ ಇದು ನಿಜವಾಗಿಯೂ ಬಾಳಿನ ಕೊನೆಯ ಆಶ್ರಮವಲ್ಲ. ಈಗ ನಾವು ನಾಲ್ವರೂ ಒಂದು ಕುಟೀರವನ್ನ ಕಟ್ಟಿಕೊಂಡು ವಾಸಿಸಲು ಬಿಡು. ಅರಮನೆಯ ಸುಖದಲ್ಲಿ ಬಾಳಿದ ನಮಗೆ ಈ ಆರು ತಿಂಗಳಲ್ಲಿ ಕಾಡು ಅಭ್ಯಾಸವಾಗಿದೆ. ಇನ್ನೂ ಮೇಲಿನ ಅರಣ್ಯಕ್ಕೆ ನಮ್ಮನ್ನ ಸಾಗಲು ಬಿಡು. ಅದೆ ಒಳ್ಳೆಯದು ಅಂತನ್ನಿಸುತ್ತದೆ". ಹೀಗಂದ ಕ್ಷಣ ಧರ್ಮನೂ ಸೇರಿ ಉಳಿದೆಲ್ಲರೂ ಈ ಕಠಿಣ ನಿರ್ಧರವನ್ನ ಕೈ ಬಿಡುವಂತೆ ಅವರೆಲ್ಲರನ್ನೂ ಪರಿಪರಿಯಾಗಿ ಒತ್ತಾಯಿಸುತ್ತಾರೆ. ಆದರೆ ಅವರಿದಕ್ಕೆ ಕಿವಿಗೊಡುವುದಿಲ್ಲ. ಧರ್ಮ ವಿದುರನ ಮುಖ ನೋಡುತ್ತಾನೆ. ಆಗ ವಿದುರ "ಅವನು ಹೇಳುವುದು ಸರಿ ಎನ್ನಿಸುತ್ತದೆ, ಧರ್ಮಾ ನೀನೀಗ ನಮ್ಮನ್ನು ಬೀಳ್ಕೊಡಲೇ ಬೇಕು, ಧರ್ಮದ ಸಾರವನ್ನ ಚನ್ನಾಗಿ ಅರಿತ ನೀನೆ ಏಕೆ ಮತ್ತೆ ಪ್ರಾಪಂಚಿಕತೆಗೆ ನಮ್ಮನ್ನು ಎಳೆಸಲು ಹವಣಿಸುತ್ತಿದ್ದೀಯ? ಕಡೆಗೆ ನೀನೂ ಸಹ ನಮ್ಮ ಬೆನ್ನಿಗೆ ಅಂಟಿಕೊಂಡಿರಬಾರದು". ವಿದುರ ಹೀಗನ್ನುತ್ತಲೆ ಕುಂತಿಯ ಕಣ್ಣುಗಳು ತುಂಬಿ ಬಂದವು. ಅವಳೂ ಸಹ ಆ ಅಭಿಪ್ರಾಯಕ್ಕೆ ಸಹಮತವನ್ನ ಕಟ್ಟಿದ ಕಂಠದಲ್ಲಿಯೆ ವ್ಯಕ್ತಪಡಿಸಿದಳು. ಆದರೆ ಗಾಂಧಾರಿಯ ಅಭಿಪ್ರಾಯವನ್ನ ಯಾರೊಬ್ಬರೂ ಕೇಳಲೇ ಇಲ್ಲ! ಕುರುಡ ಗಂಡನ ಅಭಿಪ್ರಾಯವೆ ಅವಳದು ಎಂದು ಅವರಿಗವರೆ ಗ್ರಹಿಸಿಕೊಂಡು ಬಿಟ್ಟರು".
- ಇರಾವತಿ ಕರ್ವೆ.
ಪ್ರತಿಯೊಬ್ಬ ಭಾರತೀಯ ಗಂಭೀರ ಓದುಗನನ್ನ ಒಂದಿಲ್ಲೊಂದು ಬಾಳ ಘಟ್ಟದಲ್ಲಿ ಕಾಡುವ ಎರಡು ಕೃತಿಗಳು "ರಾಮಾಯಣ" ಹಾಗೂ "ಮಹಾಭಾರತ". ಮೊದಲನೆಯದು ಸಂಪೂರ್ಣ ರಮ್ಯ ಕಥನ, ಅತಿಮಾನುಷ ಶಕ್ತಿ ಹಾಗೂ ಚಮತ್ಕಾರಿ ವ್ಯಕ್ತಿ ವಿಷಯಗಳಿಂದ ತುಂಬಿ ಹೋಗಿ ನಂಬಲು ಅಸಂಗತವಾದ ಪುರಾಣದ ಕಗ್ಗವಾಗಿದ್ದರೆ, ಎರಡನೆಯದು ಅಪ್ಪಟ ಮಾನವ ಸಂವೇದನೆಗಳ, ಪೈಪೋಟಿ, ಮತ್ಸರ, ಹೋರಾಟ ಹಾಗೂ ಮೇಲಾಟಗಳ ಈ ಮಣ್ಣಿಗೆ ಅಂಟಿದ ಕಥೆ ಆಗಿದ್ದು. ಕಾಲಾಂತರದಲ್ಲಿ ಅದರ ಹಲವು ಪಾತ್ರಗಳನ್ನ ಅರೆತುಂಬಿದ ಮಡಿಕೆಯಂತಹ ಕೆಲವು ತಲೆಗಳು ದೈವತ್ವಕ್ಕೆ ಏರಿಸಿ ಅತಿಮಾನುಶ ಶಕ್ತಿಗಳ ಪ್ರಭಾವಳಿಯನ್ನ ಆ ಪಾತ್ರಗಳಿಗೆ ತೊಡಿಸಿದರೂ ಅದು ನಮ್ಮ ಇತಿಹಾಸದ ಒಂದು ಭಾಗವೆ ಅನ್ನಿಸುವಷ್ಟು ಅದರ ಕಥನ ಸಹಜವಾಗಿದೆ.
ಹೆಸರಾಂತ ಭಾರತೀಯ ಸಮಾಜ ಶಾಸ್ತ್ರಜ್ಞೆ ಶ್ರೀಮತಿ ಇರಾವತಿ ಕರ್ವೆ ಈ ಹುಸಿ ಪ್ರಭಾವಳಿಗಳನ್ನೆಲ್ಲ ಬದಿಗಿರಿಸಿ ಮಹಾಭಾರತದ ಒಂದೊಂದೆ ಮುಖ್ಯ ಪಾತ್ರಗಳನ್ನ ಸವಿವರವಾದ ವಿಮರ್ಶೆಗೆ ಒಳ ಪಡಿಸಿ ಅವುಗಳ ಮನೋ ವ್ಯಾಪಾರವನ್ನ ವಿಶ್ಲೇಷಣೆಗೆ ಒಡ್ಡಿ ಬರೆದ ತರ್ಕಬದ್ಧ ಪುಸ್ತಕವೆ "ಯುಗಾಂತ". ಮೂಲ ಮರಾಠಿ ಭಾಷೆಯಲ್ಲಿ ಅವರು ಬರೆದಿದ್ದ 'ಯುಗಾಂತ' ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೬೭ರಲ್ಲಿ ಬಂದ ನಂತರ ಮೊದಲು ಆಂಗ್ಲಕ್ಕೂ ಅನಂತರ ಸರಸ್ವತಿ ರಿಸಬೂಡಾರ ಅನುವಾದದ ಮೂಲಕ ಕನ್ನಡಕ್ಕೆ ಹಾಗೂ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೂ ಸಾಹಿತ್ಯ ಅಕಾಡಮಿಯ ಮೂಲಕ ಮುಟ್ಟಿತ್ತು. ಮುಂದೆ ಓರಿಯಂಟಲ್ ಲಾಂಗ್'ಮೆನ್ ಇದೆ ಕೃತಿಯನ್ನ ಹೆಚ್ ಎಸ್ ಶಿವಪ್ರಕಾಶರ ಅನುವಾದದ ಮೂಲಕ ಕನ್ನಡದಲ್ಲಿ ಪ್ರಕಟಿಸಿತ್ತು. ಆದರೆ ಅವೆರಡೂ ಅವೃತ್ತಿಗಳ ಪ್ರತಿಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಇತ್ತೀಚೆಗೆ ಕಳೆದ ಇರಾವತಿ ಕರ್ವೆಯವರ ನೇರ ಶಿಷ್ಯರಾಗಿದ್ದ ಶ್ರೀಪತಿ ತಂತ್ರಿಯವರು ಅನುವಾದಿಸಿದ ಇದೆ ಕೃತಿಯನ್ನ ಅಭಿನವ ಪ್ರಕಾಶನ ಪ್ರಕಟಿಸಿದೆ. ಈ ಮೂರೂ ಆವೃತ್ತಿಗಳನ್ನ ಓದಿರುವ ನನಗೆ ವಯಕ್ತಿಕವಾಗಿ ಶಿವಪ್ರಕಾಶರ ಅನುವಾದ ಮೂಲಕ್ಕೆ ಹೆಚ್ಚು ನಿಷ್ಠವಾಗಿದೆ ಎಂದು ಅನ್ನಿಸುತ್ತದೆ. ಹಾಗಂತ ಇನ್ನುಳಿದ ಬಾಕಿ ಎರಡು ಪುಸ್ತಕಗಳು ಕಳಪೆ ಎಂದು ಅರ್ಥವಲ್ಲ. ಇದೆ ಕೃತಿಯಿಂದ ಪ್ರಭಾವಿತರಾದ ಅದೆಷ್ಟೋ ಲೇಖಕರು ಇದನ್ನ ಆಧರಿಸಿ ತಮ್ಮದೆ ಕಥೆ ಕಾದಂಬರಿಗಳನ್ನ ಬರೆದಿದ್ದಾರೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಡಾ ಎಸ್ ಎಲ್ ಭೈರಪ್ಪರ ಮೇರುಕೃತಿ "ಪರ್ವ" ಅದೆ ಸಾಲಿಗೆ ಸೇರುತ್ತದೆ. ಮಹಾಭಾರತದ ವಸ್ತುನಿಷ್ಠ ಅರಿವಿಗೆ "ಯುಗಾಂತ"ವೂ ಒಂದು ಸರಳ ದಾರಿ.

No comments: