24 September 2014

ಪುಸ್ತಕದೊಳಗೆ - ೧೫"ಕರ್ವಾಲೋ"


ಬರೆದಿರುವವರು; ಕೆ ಪಿ ಪೂರ್ಣಚಂದ್ರ ತೇಜಸ್ವಿ,
ಪ್ರಕಾಶಕರು; ಪುಸ್ತಕ ಪ್ರಕಾಶನ,
ಪ್ರಕಟಣೆ; ೧೯೭೯ ( ಮೊದಲ ಆವೃತ್ತಿ.)
೨೦೧೩ ( ಮೂವತ್ತೊಂದನೆಯ ಆವೃತ್ತಿ.),
ಕ್ರಯ; ನೂರಾಐದು ರೂಪಾಯಿ.


" ನಾನು ಮಂದಣ್ಣನ ಡ್ರಂ ಘಟನೆಯ ಅನಂತರ ಸುಮಾರು ದಿನ ಅವನನ್ನು ನೋಡಲೇ ಇಲ್ಲ. ಕರ್ವಾಲೋ ಮಾತ್ರ ತಮ್ಮ ಸಂಶೋಧನಾ ಕೇಂದ್ರದ ಹೊರಗೆ ಹಲೋ ಎದುರು ಕೈ ಬೀಸುತ್ತಾ ಆಗೀಗ ಕಾಣ ಸಿಗುತ್ತಿದ್ದರು.

ಹೀಗಿರಬೇಕಾದರೆ ಇನ್ನೊಮ್ಮೆ ಹಟಾತ್ತಾಗಿ ಮಂದಣ್ಣನನ್ನು ಸಂಧಿಸುವ ಯೋಗ ಒದಗಿ ಬಂತು. ಪ್ಯಾರ ಒಂದು ದಿನ ಅಕ್ಕಿಹಿಟ್ಟು ಮಾಡಿಸಿಕೊಂಡು ಬರಲು ನಮ್ಮೂರಿನಿಂದ ಐದಾರು ಮೈಲಿ ದೂರದಲ್ಲಿದ್ದ ನಾಗನಹಳ್ಳಿಗೆ ಹೋಗಿದ್ದ. ಅಕ್ಕಿಹಿಟ್ಟು ಮಾಡಿಸಿಕೊಂಡು ನಾಗನಹಳ್ಳಿ ಬಸ್ಟ್ಯಾಂಡಿನಲ್ಲಿ ಬಸ್ಸಿಗೆ ಕಾಯುತ್ತಾ ಮಂದಣ್ಣ ನಿಂತಿದ್ದನಂತೆ. ನಮ್ಮ ಮನೆಗೆ ಬಂದಿದ್ದಾಗ ಪ್ಯಾರ ನಮ್ಮ ಮನೆಗೆಲಸ ಮಾಡುತ್ತಿರುವುದನ್ನ ತಿಳಿದಿದ್ದ. ಆದ್ದರಿಂದ ಪ್ಯಾರನನ್ನು ಮಾತನಾಡಿಸಿದನಂತೆ. ಕೊಂಚ ಮಾತನಾಡಿದ ನಂತರ ಪ್ಯಾರನನ್ನು ಪಕ್ಕಕ್ಕೆ ಕರೆದು 'ಏನೋ ನಿಮ್ಮ ಸೌಕಾರ್ರು ಎನ್'ವಿ ತಗೋತಾರೇನೋ?' ಎಂದು ಪಿಸುಮಾತಿನಲ್ಲಿ ಕೇಳಿದನಂತೆ. ಅವನನ್ನ ಪಕ್ಕಕ್ಕೆ ಕರೆದು ಗುಟ್ಟಾಗಿ ಕೇಳಿದ ತರದಲ್ಲಿ ಎನ್'ವಿ ಅಂದರೆ ಯಾವುದೋ ಮಾದಕ ಪಾನೀಯವಿರಬೇಕೆಂದು ತಿಳಿದ ಪ್ಯಾರ 'ಛೇ ಛೇ ಅವರಿಗೆ ಅಂಥದ್ದೆಲ್ಲಾ ಅಭ್ಯಾಸ ಇಲ್ಲ' ಎಂದನಂತೆ.

'ಹಂಗಾರೆ ನಿಮ್ಮ ಸೌಕಾರ್ರು ಯಾವ ಜಾತಿಯೋ?' ಎಂದನಂತೆ.
ಪ್ಯಾರ 'ಗೌಡ್ರು' ಎಂದ.
'ಲಿಂಗಾಯ್ತ ಗೌಡ್ರ?'
'ಇಲ್ಲಪ್ಪಾ ಒಕ್ಕಲಿಗರು'
'ಹಂಗಾರೆ ಮಾವ್ಸ ತಿನ್ನಬೇಕಲ್ಲ?'
'ಓ ಅದಾ! ಅದು ತಿನ್ತಾರೆ!' ಎಂದು ಪ್ಯಾರ ಹೇಳಿದನಂತೆ.

'ಹಂಗಾರೆ ಪಿಗ್ಮಟನ್ ಸೊಲ್ಪ ನಾಳೆ ತಂದು ಕೊಡಲೇನೋ?' ಎಂದು ಕೇಳಿದ್ದಕ್ಕೆ ಪ್ಯಾರ 'ಓ ಆಗಲಿ' ಎಂದನಂತೆ. ಪ್ಯಾರ ನಡೆದಿದ್ದನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳಿದ.

'ಲೋ ಪ್ಯಾರ ಪಿಗ್ಮಟನ್ ಅಂದ್ರೇನು ಗೊತ್ತೇನೋ' ಎಂದೆ.

'ಮಟನ್ ಅಂದ್ರೆ ಮಾವ್ಸ ಅಲ್ಲೇನ್ ಸಾಮಿ, ನಮ್ಮ ಭಾವ ಮುಡುಗೆರೆಲಿ ಪೇನ್ಸಿ ಮಟ್ಟನ್ ಸ್ಟಾಲ್ ಇಟ್ಟಿದಾನೆ' ಎಂದ.

'ಮಂದಣ್ಣ ಹಂದಿ ಮಾಂಸಕ್ಕೆ ಪಿಗ್ಮಟನ್ ಅಂದಿದಾನೆ ಕಣೋ! ನಿನ್ಮನೆ ಹಾಳಾಗ, ಅವನ ಇಂಗ್ಲಿಷಿಗೆ ಬೆಂಕಿ ಹಾಕ, ಸಾಬರ ಬಾಯಿಗೆ ಹಂದಿಮಾಂಸ ಹಾಕಿ ಜಾತಿ ಕೆಡಿಸಿದರಂತ ಜಗಳ ತೆಗೆದೀಯ ಈಗ್ಲೆ ಹೇಳಿದೀನಿ' ಎಂದೆ.

'ಅಯ್ಯಯ್ಯೋ ಸುವ್ವರ್ ಮಾವ್ಸನೇನು ಸಾಮಿ, ಅರ್ರೆ ಇಸ್ಕಿ. ಮಂದಣ್ಣ ನನ್ನ ದೂರ ಕರ್ಕೊಂಡೋಗಿ ಕಿವಿಲಿ ಗುಟ್ನಲ್ಲಿ ಇಂಗ್ಲೀಷಲ್ಲಿ ಕೇಳಿದ್ದು ಒಳ್ಳೆಯದೆ ಆಯ್ತು'

'ಯಾಕೋ ಹಲ್ಕ. ಹಂಗಾದರೆ ತಿಂತಿಯೇನೋ? ನಿಮ್ಮಪ್ಪಾಮ್ಮನಿಗೆ ಗೊತ್ತಾಗಿ ಗಲಾಟೆ ಮಾಡಿದರೆ ಏನೋ ಗತಿ'

'ತಿನ್ನಾದು ಬಿಡಾದು ಬ್ಯಾರೆ ಇಚಾರ ಸಮಿ, ಅದನ್ನ ತಿಂಬೋರಿಗೆ ನಮ್ಜಾತಿ ಮಸಾಣದಲ್ಲಿ ಹೆಣ ಹೂಳೋದಕ್ಕೆ ಜಾಗ ಕೊಡಾಕಿಲ್ಲ. ಮಸೀದಿಲೊಂದು ಪೆಟ್ಗೆ ಇರತ್ತೆ, ಹೆಣ ತಗೊಂಡೊಗೊದಕ್ಕೆ. ಅದ್ನ ಕೊಡಲ್ಲ, ಬಾಳಾ ತಕ್ರಾರು ಮಾಡ್ತಾರೆ'

'ಅದನ್ನ ಯಾಕೆ ನಿಮ್ಜಾತಿಲಿ ತಿನ್ನೊಲ್ಲೋ?' ಎಂದೆ. 'ಅದು ಅಲ್ಲಾ ಕೈಲಿ ಬಿಸ್ಮಿಲ್ಲಾ ಮಾಡಿಸ್ಕಳಲಿಲ್ಲವಂತೆ, ಮಿಕ್ಕೋವೆಲ್ಲಾ ಮಾಡಿಸಿಕೊಂಡವಂತೆ. ಸುವ್ವರ್ ಅಲ್ಲಾಗೆ ಉಲ್ಟಾ ಹೊಡೆದಿದ್ರಿಂದ ಅದನ್ನ ತಿನ್ನ ಕೂಡದಂತಾ ಕಟ್ಟು ಮಾಡವ್ರೆ. ಸಣ್ಣ ಪುಟ್ಟ ಇಚಾರನೆಲ್ಲ ದೊಡ್ದು ಮಾಡಿ ತಿನ್ನಾಕೇ ಕೂಡ್ದಂತ ಮಾಡಿದರೆ ಹೇಗೆ ಸಾಮಿ?' ಎಂದ. ಅವನ ಧಾಟಿಯಲ್ಲಿ ಅವನು ತಿನ್ನೋದು ಪಬ್ಲಿಕ್ ಆಗಕೂಡದು ಅಂತಾ ಅಭಿಪ್ರಾಯವಿದ್ದಂತಿತ್ತು.

ಮಾರನೆ ದಿನ ಮಂದಣ್ಣ ಒಂದು ಚೀಲದಲ್ಲಿ ಪಿಗ್ಮಟನ್ ಹೊತ್ತುಕೊಂಡು ಬಂದ. ಚೀಲದಿಂದ ಕೆಂಬಣ್ಣದ ನೀರು ಇಳಿಯುತ್ತಿತ್ತು. ನಾನು ಕೊಂಚ ಜಿಗುಪ್ಸೆಯಿಂದ ಅವನ ಚೀಲದ ಕಡೆಗೆ ನೋಡಿದೆ. ನನ್ನ ನೋಟದ ಇಂಗಿತವನ್ನು ಅರಿತವನಂತೆ ಮಂದಣ್ಣ 'ಏನೂ ಹೆದರ್ಕೋಬೇಡಿ ಸಾರ್, ಭಾಳಾ ಒಳ್ಳೆ ಹಂದಿ! ಬರಿ ಚರುಬೀನೆ ಒಂದು ಗೇಣು ದಪ್ಪಾ ಇದೆ. ಒಳ್ಳೆ ಕೊಬ್ರಿ ಹಂಗಿದೆ. ಶಾಕ ತಾಗಿಸದೆ ತಿನ್ಬೋದು' ಎಂದು ಲಾಲಾಜಲ ಸಂಮಿಶ್ರಿತ ಬಾಯಲ್ಲಿ ಅದನ್ನ ಹೊಗಳತೊಡಗಿದ. 'ಒಳ್ಳೇದು ಕಣೋ, ಆದರೆ ಯಾರಿಗೂ ಹಂದಿ ಮಾಂಸ ತಂದುಕೊಟ್ಟೆ ಅಂತ ಹೇಳಬೇಡ ಕಣೋ' ಎಂದೆ.

ಅವನು ಆಶ್ಚರ್ಯದಿಂದ 'ಯಾಕೆ ಸಾರ್' ಎಂದು ಕೇಳಿದ. ನಾನು ಹಂದಿ ಮಾಂಸದ ಬಗ್ಗೆ ಉಂಟಾಗಿರುವ ಹಲವು ತೊಡಕುಗಳನ್ನು ವಿವರಿಸಿ, ಪ್ಯಾರನಿಗೆ ಅವನ ಮರಣಾನಂತರ ತೊಂದರೆಯಾಗಬಹುದೆಂದು ಹೇಳಿದೆ.


'ಅದ್ರಾಗೇನಿದೆ ಸಾರ್, ತಿನ್ತಕ್ಕಂತಾ ಪದಾರ್ಥ. ಕರ್ವಾಲೋ ಸಾಹೆಬ್ರಿಗೆ ಸಪ್ಲೈ ಕೊಡ್ತೀನಿ! ಮುಖ್ಯ ಅವನ ಜಾತಿವಸ್ತರು ತೊಂದರೆ ಕೊಡ್ತಾರೆ ಅಷ್ಟೆ!' ಎಂದು ತಾತ್ಸಾರದಿಂದ ಹೇಳಿದ.


'ನಿನ್ನ ಕೆಲಸದ ವಿಷಯ ಏನಾಯ್ತಯ್ಯಾ?' ಎಂದು ಕೇಳಿದ್ದಕ್ಕೆ 'ಎಲ್ಲಿ ಕೆಲಸಾ ಸಾರ್? ಅವತ್ತು ಜೇನು ಕೈಲಿ ಹೊಡೆಸಿಕೊಂಡ ಮೇಲೆ ಮಿನಿಷ್ಟ್ರಿಗೆ ಟಿಬಿಲಿ ವಾಂತಿ ಬೇಧಿ ಶುರುವಾಯ್ತಂತೆ! ಚಿಕ್ಕಮಗಳೂರು ಆಸ್ಪತ್ರೆಲಿ ಔಷಧಿ ಕೊಡೆಸೋಕ್ಕಂತ ಕೂಡ್ಲೆ ಅವರನ್ನ ತಗೊಂಡು ಹೋದರಂತೆ. ನಾನು ಬ್ಯಾಂಡು ಹೊತ್ಕೊಂಡು ಓಡೋಗ್ತಾ ಬಿದ್ದು ಕಾಲ ಉಗುರು ಕಿತ್ತು ಬ್ಯಾಡ ಫಜೀತಿ' ಎಂದ.

'ಅಲ್ಲೋ ನಿನ್ನ ಬ್ಯಾಂಡಿನ ಶಬ್ದಕ್ಕೇ ಜೇನುಗಳು ಹಾಗೆ ರೇಗಿದ್ದಂತೆ ಕಣೋ' ಎಂದೆ.

'ಅದು ಹ್ಯಾಗೆ ಸಾರ್! ಆ ಕಳ್ಮುಂಡೆ ಮಕ್ಳು ಸ್ಕೂಲು ಹುಡುಗರದೆ ಆ ಕಿತಾಪತಿ. ಅವರೆ ಯಾರೋ ಕಲ್ಲು ಹೊಡೆದಿದಾರೆ. ಜೇನು ಕಾಟ ಮುಗಿದ ಮೇಲೆ ಪೋಲಿಸ್ನೋರ ಕಾಟ ಶುರುವಾಗಿತ್ತು! ಸಿಕ್ ಸಿಕ್ಕೋರ್ನೆಲ್ಲಾ ಟೇಶನ್ನಿಗೆ ಎಳ್ಕೊಂಡು ಹೋದ್ರಂತೆ' ಎಂದ.

'ಇಲ್ಲಾ ಕಣೋ, ಕರ್ವಾಲೋ ಸಾಹೆಬರೆ ಹೇಳಿದರು. ನಿನ್ನ ಬ್ಯಾಂಡಿನ ಗಲಾಟೆಯಿಂದಾನೆ ಅಂತ' ಎಂದೆ.

'.....ಅಲ್ಲಾ ಬ್ಯಾಂಡು ಹೊಡೆದರೆ ಅದಕ್ಕೇನೂಂತೀನಿ' ಎಂದು ಯೋಚಿಸಿದ. ' ಸದ್ಯ ವಿಸ್ಯ ಆ ಪೋಲಿಸ್ನೋರಿಗೆ ಗೊತ್ತಾಗ್ಲಿಲ್ಲ, ಇಲ್ದಿದ್ರೆ ನನ್ಮುಕುಳಿ ಮೇಲೆ ಬ್ಯಾಂಡು ಬಜಾಯಿಸ್ತಿದ್ರು!' ಎಂದು ಸಮಾಧಾನ ತಾಳಿದ.


ಮಂದಣ್ಣ ಹಣ ತೆಗೆದುಕೊಂಡು ಹೋದ. ಅವನು ಹೋದ ಮೇಲೆ ನನಗೆ ಏನೋ ಹೊಳೆದಂತಾಯ್ತು ಮನಸ್ಸಿನಲ್ಲಿ. ಬಹುಷಃ ಈ 'ಪಿಗ್ಮಟನ್' ದೆಸೆಯಿಂದಲೆ ಇವನು ಕರ್ವಾಲೋರಿಗೆ ಆಪ್ತನಾಗಿರಬಹುದು ಎಂದು ಊಹಿಸಿದೆ. ಏಕೆಂದರೆ ಈ ಗುಳ್ಡು ಮಂದಣ್ಣನಿಗೂ ಆ ವಿಜ್ಞಾನಿಗೂ ಬೇರೆ ಯಾವುದೇ ರೀತಿಯ ಸಮಾನ ಮಾಧ್ಯಮ ನನಗೆ ಹೊಳೆಯಲಿಲ್ಲ.


ಆದರೆ ನನ್ನ ಊಹೆ ಸುಳ್ಳಾಗಿತ್ತು. ಏಕೆಂದರೆ ಒಂದು ವಾರದ ತರುವಾಯ ಕರ್ವಾಲೋರನ್ನು ನೋಡಲು ಹೋಗಿದ್ದೆ. ಕರ್ವಾಲೋ ಇರಲಿಲ್ಲ. ಕರ್ವಾಲೋ ಸಹಾಯಕ ಗೂಬೆ ಮೋರೆಯ ದಪ್ಪಗಾಜಿನ ಕನ್ನಡಕದ ನಾಗರಾಜ ಅವರು ಒಂದು ವಾರಕಾಲ ರಜಾಹಾಕಿ ಮಂದಣ್ಣನ ಜೊತೆ ಎತ್ತಲೋ ಹೋದರೆಂದು ಹೇಳಿದ. ನನಗೆ ಆಶ್ಚರ್ಯವಾಯಿತು. ಮಂದಣ್ಣನ ಜೊತೆ ಎಲ್ಲಿಗೆ ಹೋದರು ಕರ್ವಾಲೋ? ಎಂದು ಯೋಚಿಸಿದೆ. ಎಲ್ಲಿಗೆ ಹೋಗಿದ್ದಾರೆಂದು ಕೇಳಿದೆ. ಎಲ್ಲಿಗೋ ಗೊತ್ತಿಲ್ಲವೆಂದು ನಾಗರಾಜ ಹೇಳಿದ. ಅವನ ಅಸಡ್ಡೆ ಗಮನಿಸುವಷ್ಟು ಎದ್ದು ಕಾಣುತ್ತಿತ್ತು.

......

ಮಳೆಗಾಲ ಮುಗಿಯುತ್ತಾ ಬಂದಿತ್ತು. ಬೆಳಗ್ಯೆ ಎಲ್ಲಾ ಝಳಝಳ ಬಿಸಿಲು. ರಾತ್ರೆ ಮಾತ್ರಾ ಆಗೀಗ ಮಳೆ ಬರುತ್ತಿತ್ತು. ನಾನು ನನ್ನ ತೋಟವನ್ನು ಮಾರಿ ಬೇರೇನಾದರೂ ಮಾಡಬೇಕೆಂದು ನಿರ್ಧರಿಸಿದ್ದೆ. ಮೊದಲನೆಯದಾಗಿ ವ್ಯವಸಾಯದಿಂದ ಲಾಭ ಬರುವುದೆಂಬ ನಂಬಿಕೆ ನನ್ನೊಳಗೆ ನಶಿಸತೊಡಗಿತ್ತು. ಲಾಭ ಮಾಡುವುದಿರಲಿ ಬ್ಯಾಂಕಿನಲ್ಲಿ ಮಾಡಿಕೊಂಡ ಸಾಲದ ಬಡ್ಡಿ ಕಟ್ಟುತ್ತಾ ಹೆಚ್ಚೂ ಕಡಿಮೆ ಅಧಿಕಾರಶಾಹಿಯ ಜೀತದಾಳಾಗಿ ನಾನೂ ನನ್ನಂತ ಅನೇಕ ರೈತರೂ ಪರಿವರ್ತಿತರಾಗಿದ್ದರು. ಹಾಕಿದ ಲೆಕ್ಕಾಚಾರ ಒಂದೂ ಗುರಿ ತಲುಪುತ್ತಲೆ ಇರಲಿಲ್ಲ. ಅಕಸ್ಮಾತ್ ಕೊಂಚ ಕರಾರುವಕ್ಕಾಗಿ ಬೆಳೆ ಬಂದರೂ ಆ ವೇಳೆಗಾಗಲೆ ಹಣದುಬ್ಬರ, ಏರಿದ ಸಾಮಾನುಗಳ ಬೆಲೆ. ವಿಷದಂತೆ ಏರುತ್ತಿದ್ದ ಬ್ಯಾಂಕ್ ಬಡ್ಡಿದರ, ಅದನ್ನು ಕಬಳಿಸಿ ಬಿಡುತ್ತಿದ್ದವು. ಹೀಗಾಗಿ ಸದಾ ಮುಂದೆ ಸಿಕ್ಕುವ ಲಾಭದ ಮರೀಚಿಕೆಯ ಹಿಂದೆ ಆರ್ಥಿಕ ಬಿಕ್ಕಟ್ಟಿನ ಮರಳುಗಾಡಿನಲ್ಲಿ ಸಾಗುತ್ತಿದ್ದೆ.


ಇದರೊಂದಿಗೆ ಕಾಡಿನ ಮೌನ, ಏಕಾಂತ, ಗ್ರಾಮ ಜೀವನದ ಕಾರ್ಪಣ್ಯಗಳು, ಪೇಟೆಯ ಗಲೀಜು, ಹೊಗೆ, ಜನಜಂಗುಳಿಗಳಂತೆಯೆ ಏಕತಾನವಾಗಿ ಬೇಸರ ತರತೊಡಗಿದ್ದವು. ಕಾಡು ಮೊದಲಿನಂತೆ ಗೌಪ್ಯ, ಕುತೂಹಲ, ರಹಸ್ಯಗಳನ್ನೆಲ್ಲಾ ಕೆರಳಿಸದೆ ಜಡವಸ್ತುವಿನಂತೆ ಕಾಣತೊಡಗಿತ್ತು. ನನ್ನೊಳಗೇ ನಾನು ಮುಳುಗಿ ಹೋದೆ. ಅಂತರ್ಮುಖಿಯಾಗ ತೊಡಗಿದೆ, ಎಂದರೆ ತತ್ವಚಿಂತನೆ ಮಾಡುತ್ತಿದ್ದೆನೆಂದೇನೂ ಅಲ್ಲ. ಸದಾ ಲೆಕ್ಕಾಚಾರ, ಗುಣಾಕಾರ ಭಾಗಾಕಾರ ಹಾಕುತ್ತಾ, ಬಡ್ಡಿ ಸಾಲ ಇವುಗಳನ್ನು ಮೆಲಕುತ್ತಾ ನನಗೆ ಆರ್ಥಿಕ ಸ್ವಾತಂತ್ರ್ಯ ಬರುವ ಹೊತ್ತಿಗೆ ಎಷ್ಟು ಮುದಿಯಾಗಿರುತ್ತೇನೆ? ಡಯಾಬಿಟಿಸ್, ರಕ್ತದ ಒತ್ತಡ ಇತ್ಯಾದಿ ಯಾವ ಯಾವ ಕಾಹಿಲೆಗಳು ಆರಂಭವಾಗಿರುತ್ತವೆ? ಎಂದು ಯೋಚಿಸುತ್ತಾ ಕೊರಗುತ್ತಿದ್ದೆ. ಆದ್ದರಿಂದ ಈ ತೋಟವನ್ನೊಮ್ಮೆ ಮಾರಿದರೆ ಈ ನಿರುತ್ಸಾಹದ ಶರಧಿಯನ್ನು ದಾಟಿದಂತೆಯೆ ಎಂಬ ನಿರ್ಧಾರಕ್ಕೆ ಬಂದಿದ್ದೆ.

ಒಂದು ದಿನ ತೋಟ ಮಾರುವ ದಳ್ಳಾಳಿಯೊಬ್ಬರು ಬಂದು ತೋಟದ ವಿವರಗಳನ್ನು ನನ್ನ ಬಳಿ ಪಡೆದುಕೊಳ್ಳುತ್ತಿದ್ದರು. ಆಗ ನನಗೆ ದೂರದಲ್ಲಿ ಪ್ಯಾರ ದಾಪುಗಾಲು ಹಾಕುತ್ತಾ ಓಡೋಡಿ ಬರುತ್ತಿರುವುದು ಕಂಡಿತು. ಅವನು ಹತ್ತಿರ ಬಂದಾಗ ಮಾತು ನಿಲ್ಲಿಸಿ ನಾನು ಏನೆಂದು ಕೇಳಿದೆ.

'ಅಯ್ಯಾ ಕಿವಿ ಕಾಡೊಳಗೆ ಕೂತುಗೊಂಡು ಬೊಗಳುತ್ತಾ ಇದೆ. ಎಷ್ಟು ಕರೆದ್ರೂ ಬರೋದಿಲ್ಲ' ಎಂದ.


'ನೀನು ನಾಯಿ ಕರಕೊಂಡು ಯಾಕೋ ಹೋಗಿದ್ದೆ? ಕತ್ತೆ!' ಎಂದೆ. 'ಮಂಗನ್ನ ಓಡಿಸೋಕಂತ ಹೋಗಿದ್ದೆ. ಎಷ್ಟು ಬ್ಯಾಡಾಂತ ಓಡಿಸಿದರೂ ನನ್ನ ಹಿಂದೇನೆ ಬಂತು ಸಮಿ' ಅಂದ.

ಬಂದವರಿಗೆ 'ಒಂದು ನಿಮಿಷ ಕಾಯುತ್ತೀರಾ, ಕಾಡಿಗೆ ಹೋಗಿ ನಾಯಿ ಕರಕೊಂಡು ಬಂದು ಬಿಡ್ತೀನಿ' ಎಂದು ಹೇಳಿದೆ.

ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ಧಿವಂತಿಗೆಗಳನ್ನು ನೋಡಿ ಅನೇಕ ಬಾರಿ ನಾನು ಆಶ್ಚರ್ಯ ಪಡುತ್ತಿದ್ದೆ. ಕೇವಲ ಜಾನಪದ ಕಥೆಗಳಲ್ಲಿ, ದಂತಕಥೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು.


ಮನೆಯೊಳಗೆ ಹೋಗಿ ಕೋವಿ ತೆಗೆದುಕೊಂಡು, ಪ್ಯಾರನಿಗೆ 'ಎಲ್ಲಿ ತೋರಿಸು' ಎಂದು ಹೇಳಿ ಹೊರಟೆ. ಹಂದಿಯನ್ನೋ ಅಥವಾ ಇನ್ಯಾವುದಾದರೂ ಪ್ರಾಣಿಯನ್ನೋ ತಡೆದುಕೊಂಡಿರಬೇಕೆಂದು ಊಹಿಸಿದೆ. ಪ್ಯಾರ ನನ್ನನ್ನು ಕರೆದುಕೊಂಡು ಒಂದು ದಟ್ಟವಾದ ಜಿಗ್ಗಿನ ಕಾಡಿನತ್ತ ನಡೆದ. ಹಂದಿ ಹುಲಿ ಸೇರಿಕೊಳ್ಳಲು ಆ ಜಾಗ ಬಹಳ ಲಾಯಕ್ಕಾಗಿತ್ತು, ಪೊದರಿನೊಳಗಿಂದ ನಾಯಿ ಬೊಗಳುವ ಧ್ವನಿ ಕೇಳುತ್ತಿತ್ತು. ನಾನು ಗಟ್ಟಿಯಾಗಿ ಹಲವಾರು ಬಾರಿ 'ಏ ಕಿವಿ ಬಾ' ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಕೂಗಿದೆ. ಅದು ಬರಲೇ ಇಲ್ಲ ಬದಲಿಗೆ ಇನ್ನಷ್ಟು ಉತ್ತೇಜನಗೊಂಡು ಬೊಗಳತೊಡಗಿತು.


ಪ್ಯಾರನ ಕಡೆಗೆ ತಿರುಗಿ 'ಹಲ್ಕಾ ಬಡ್ಡಿಮಗನೆ, ಏಲಕ್ಕಿ ತೋಟಕ್ಕೆ ಹೋಗ್ತೀನಂತ ಹೇಳೀ ಇಲ್ಲಿಗ್ಯಾಕೋ ಬಂದೆ?' ಎಂದು ಬೈದೆ.

'ಇಲ್ರಯ್ಯಾ ನಾನು ಯಾಲಕ್ಕಿ ತೋಟದ ತಾವಾನೆ ಇದ್ದೆ. ಇದು ಯಾವಾಗ ಇಲ್ಲಿ ಬಂತೋ ಗೊತ್ತಿಲ್ಲ! ಅದನ್ನ ಕರಕೊಂಡು ಹೋಗಕ್ಕಂತ ಇಲ್ಲಿಗೆ ಬಂದೆ ಅಷ್ಟೆ' ಎಂದ

ಒಳಗೆ ಹೋಗಿ ನೋಡುವುದೊಂದೇ ಉಳಿಯಿತು. ಆದರೆ ಕಾಡಿನ ದಟ್ಟಣೆಯಲ್ಲಿ ಒಳಗೆ ಮೂಗು ಹಾಕುವುದಕ್ಕೂ ಜಾಗ ಇರಲಿಲ್ಲ.

'ಏ ಪ್ಯಾರ ಗಿಡ ಹತ್ತಿ ಏನಾದರೂ ಕಾಣುತ್ತ ನೋಡು' ಎಂದು ಸಮೀಪದಲ್ಲಿದ್ದ ಗಿಡ ತೋರಿಸಿದೆ.


ಪ್ಯಾರ ಲಗುಬಗೆಯಿಂದ ಹತ್ತಿದ.

'ಏನೋ ಏನಾದರೂ ಕಾಣುತ್ತೇನೋ?' ಕೆಳಗಿನಿಂದ ನಾನು ಕೇಳಿದೆ.

'ಕಾಣ್ತಿತೆ, ಏ ಕಿವಿ ತುತ್ ಥೇರಿ ಇಸ್ಕಿ! ಬಾರೋ ಇತ್ಲಾಗಿ' ಎಂದು ಮೇಲಿನಿಂದ ಪ್ಯಾರ ಕೂಗಿದ.

'ಅಲ್ಲಿ ನಿಂತ್ಕೊಂಡು ಬೊಗುಳ್ತಾ ಇದೆ, ಏನಕ್ಕೆ ಅಂತ ಗೊತ್ತಾಗುದಿಲ್ಲ. ನನ್ಕಡೆ ನೋಡ್ತು, ಬರಾಕಿಲ್ಲ' ಎಂದು ಹೇಳಿ ಇನ್ನೊಂದೆರಡು ಬಾರಿ 'ಕಿವಿ ಬಾ ಬಾ' ಎಂದು ಗದರಿಸಿದ.


'ಲೋ ಪ್ಯಾರಾ ಇನ್ನೇನೂ ಮಾಡಕ್ಕಾಗಲ್ಲ, ಒಳಗೆ ಹೋಗಿ ನೋಡೋಣ ನಡಿ ಎಂದೆ.

'ನಡೀರಿ ದೇವ್ರೆ ಗತಿ!' ಎಂದ.

ದಬಾಯಿಸ್ಕೊಂಡು ಬಲೆಯಂತೆ ಹಣೆದುಕೊಂಡಿದ್ದ ಆ ಲಾಂಟಾನದ ಜಿಗ್ಗಿನಲ್ಲಿ ಹೇಗೆ ಹೇಗೋ ದಾರಿ ಮಾಡಿಕೊಂಡು ಮುಂದುವರೆಯತೊಡಗಿದೆವು. ಮುಳ್ಳು ಚರ್ಮ ಹರಿಯುವಂತೆ ಗೀರಿದಾಗಲೆಲ್ಲ ಗಟ್ಟಿಯಾಗಿ ಕಿವಿಯನ್ನು ಕರೆಯುತ್ತಾ ಪ್ಯಾರನನ್ನೂ ಅದನ್ನೂ ಶಪಿಸುತ್ತಿದ್ದೆ. ನನ್ನ ಕೂಗನ್ನು ಕಿವಿ ಅದರ ಕೆಲಸಕ್ಕೆ ಉತ್ತೇಜನವೆಂದು ತಿಳಿದುಕೊಂಡಿತೇ ವಿನಃ ಹಿಂದಿರುಗಿ ಬರಲಿಲ್ಲ.

ಅಂತೂ ಯಮ ಸಾಹಸದಿಂದ ಅದು ಬೊಗಳುತ್ತಿದ್ದ ಜಾಗ ತಲುಪಿದೆವು. ಕಿವಿ ಒಂದು ಸಾರಿ ನಮ್ಮ ಕಡೆಗೆ ನೋಡಿ ಬಾಲವಲ್ಲಾಡಿಸಿ ಮತ್ತೆ ಬೊಗಳತೊಡಗಿತು! ಸರಿ ಹಂದಿಯೋ ಹಾವೋ ಅಥವಾ ಯಾವುದಾದರೂ ಪೆಟ್ಟುಬಿದ್ದ ಮಂಗನೋ ಇರಬೇಕೆಂದು ತಿಳಿದೆ, ಬಂದೂಕು ರಡಿ ಮಾಡಿಕೊಂಡೆ.


ಆದರೆ ಒಂದು ಮುಖ್ಯ ಸಮಸ್ಯೆ ಎಂದರೆ ಕಿವಿಯೊಡನೆ ಸೆಣೆಸಿ ನಿಂತಿದ್ದ ವೈರಿಯ ಕಿಂಚಿತ್ ದರ್ಶನವೂ ನಮಗಾಗದಿದ್ದುದ್ದು. ನಾನು ನಿಂತಲ್ಲಿಯೇ ಕಣ್ಣಲ್ಲಿ ಕಣ್ಣಿಟ್ಟು ಕಿವಿ ಬೊಗಳುತ್ತಿದ್ದ ಜಾಗವನ್ನು ಸಾದ್ಯಂತವಾಗಿ ಪರೀಕ್ಷಿಸಿದೆ ಒಂದು ತಾರೆ ಮರದ ಬುಡದತ್ತ ಬೊಗಳುತ್ತಿತ್ತು. ಆದರೆ ಆ ಕಡೆ ಕೊಂಚ ಗುರುಗಿ ಹುಳು ಇದ್ದುದ್ದರಿಂದಲೋ ಏನೋ ಯಾವುದೇ ಪ್ರಾಣಿ ನಮಗೆ ಕಾಣಲಿಲ್ಲ. ಕಿವಿ ಮಾತ್ರ ಒಂದೆ ಸಮ ಛಂಧೋಬದ್ಧವಾಗಿ ಆ ಕಡೆಗೆ ಬಾಯಿ ಮಾಡಿ ಬೊಗಳುತ್ತಲೇ ಇತ್ತು.

'ಲೋ ಪ್ಯಾರ ನಿನಗೇನಾದರೂ ಕಾಣುತ್ತೇನೋ?' ಎಂದೆ.

'ಕಾಣ್ತಿತೆ! ಆದ್ರೆ ಕಾಣಕಿಲ್ಲ!!' ಎಂದ.

ಪ್ಯಾರನ ಮಾತೋ! ಭಾಷೆಯನ್ನ ಅಷ್ಟೊಂದು ಅಸಡ್ಡೆಯಿಂದ ಉಪಯೋಗಿಸುವವರನ್ನು ನಾನು ನೋಡೇ ಇರಲಿಲ್ಲ. ಕನ್ನಡ ಭಾಷೆಯನ್ನು ಕುತ್ತಿಗೆ ಪಟ್ಟಿ ಹಿಡಿದು ದುಡಿಸುತ್ತಿದ್ದ.

'ಮತ್ತೆ ಕಾಣ್ತಿತೆ ಅಂದದ್ದು ಎಂತದನ್ನೋ ಅಯೋಗ್ಯ?'

'ಅಲ್ಲ ಸಮಿ ಕಾಣ್ತಿತೆ! ಆದ್ರೆ ಕಣ್ಗೆ ಏನೂ ಕಾಣಕ್ಕಿಲ್ಲ!!'

'ಹೋಗ್ಲಿ ಬಿಡು ನೀನು ಆ ಕಡೆಯಿಂದ ಸುತ್ತಿಕೊಂಡು ಬಾ, ನಾನು ಈ ಕಡೆಯಿಂದ ಬರ್ತೀನಿ. ಎಂಥದಾದರೂ ಕಂಡರೆ ಹೇಳು'

'ಆಯ್ತು ನಡೀರಿ' ಎಂದ.


ಇಬ್ಬರೂ ಮರದ ಬೇರೆ ಬೇರೆ ಪಾರ್ಶ್ವದಿಂದ ಸುತ್ತಿ ಹೊರಟೆವು. ನಾನಿನ್ನೂ ಅರ್ಧ ದಾರಿ ಕ್ರಮಿಸಿರಲಿಲ್ಲ 'ಓ ಬನ್ನಿ ಬನ್ನಿ ಸಮಿ, ಥತ್ ಥೇರಿ ಇಸ್ಕಿ ಮಾಕಿ! ಏ ಕಿವಿ ಬಾರೋ ಇತ್ಲಾಗಿ' ಎಂದು ಪ್ಯಾರ ಕೂಗಿದ್ದು ಕೇಳಿಸಿತು. ಅವನ ಮಾತಿನಿಂದಲೇ ಅಲ್ಲೇನೋ ಭಯಂಕರ ಪ್ರಾಣಿಯಿಲ್ಲ ಎಂದು ಖಾತ್ರಿಯಾಗಿ 'ಏನೋ ಅದು?' ಎನ್ನುತ್ತಾ ಧೈರ್ಯವಾಗಿ ಹಳುವಿನಲ್ಲಿ ಸಾಗಿದೆ.

'ಮಡ್ಕೆ ಸಮಿ! ಯಾರೋ ಕಳ್ಳನನ್ನ ಮಕ್ಳು ಭಟ್ಟಿ ಸರಾಪು ಕಾಯಿಸೋರದ್ದು ಕೆಲ್ಸ, ಏ ಕಿವಿ ಭಾಂಚೋತ್! ಒಳ್ಳೆ ಕೆಲ್ಸ ಕೊಟ್ಯಲ್ಲ' ಎಂದು ಕಿವಿಗೆ ಬೈದ.

ನಾನು ಒಳಗೆ ಹೋಗಿ ನೋಡುತ್ತೇನೆ ಯಾರೋ ಶರಾಬು ಕಾಯಿಸಿ ಮಡಿಕೆಯನ್ನು ಬೋರಲಿಟ್ಟಂತೆ ಕಾಣುತ್ತಿತ್ತು. ಕಿವಿಗೆ ಒಂದು ಸರಿಯಾಗಿ ಗುದ್ದಬೇಕೆಂಬಷ್ಟು ಕೋಪ ಬಂತು. ಆದರೆ ಕಿವಿ ಜೋರಾಗಿ ಬೊಗಳಿದಂತೆಲ್ಲಾ ಮಡಿಕೆಯೊಳಗಿಂದ ಹಿಸ್ ಎಂಬ ಸದ್ದು ಹಾವು ಭುಸುಗುಡುವಂತೆ ಬರುತ್ತಿತ್ತು. ನಾನು ಯಾವುದೋ ಹಾವೊಂದು ಮಡಿಕೆಯೊಳಗೆ ಸೇರಿದೆ ಎಂದು ತಿಳಿದು ಮಡಿಕೆಗೆ ಹತ್ತಿರ ಹತ್ತಿರ ಹೋದೆ. ಮಡಿಕೆಯೊಳಗಿಂದ ವಿದ್ಯುತ್ ಡೈನಮೋ ರೀತಿ ಸದ್ದು ಬರುತ್ತಿತ್ತು. ಅಷ್ಟರೊಳಗೆ ಪ್ಯಾರ 'ಅಯ್ಯಯ್ಯೋ ಜೇನು ಸಮಿ ಜೇನು' ಎಂದು ಕೂಗಿದ. ನೋಡಿದೆ, ಹೌದು! ಜೇನುಗಳು. ಒಂದೊಂದಾಗಿ ಬೋರಲಾದ ಮಡಿಕೆ ಬಾಯೊಳಗೆ ಹೋಗುತ್ತಾ ಇದ್ದವು. ಕಿವಿ ಬೊಗಳಿದಾಗಲೆಲ್ಲಾ ಅಷ್ಟೂ ಒಟ್ಟಿಗೆ ರೆಕ್ಕೆ ಝೇಂಕರಿಸಿ ಭುಸುಗುಡುವಂತೆ ಸದ್ದು ಹೊರಡಿಸುತ್ತಾ ಇದ್ದವು.


'ನೋಡಿದ್ರಾ ಸಮಿ! ಜೇನು ಕಂಡ್ರೆ ಹೇಳು ಅಂತ ಹೇಳಿದ್ರಲ್ಲ! ಕಿವಿನೆ ಕಂಡು ಹಿಡಿದ್ನಲ್ಲ ಈಗ! ನೋಡಿದ್ರಾ ಹೆಂಗೈತೆ ಇವನ ಬುದ್ಧಿ' ಎಂದ ಪ್ಯಾರ.

ಅಷ್ಟರೊಳಗೆ ಟುಯ್ ಎಂದು ತಂತಿ ಮೀಟಿದಂತೆ ಸದ್ದಾಯ್ತು. ಕಿವಿಯ ಬಳಿಯೆ ಆದ ಈ ಸದ್ದು ಏನೆಂದು ತಿಳಿಯಲು ಕಣ್ಣು ಹೊರಳಿಸುವಷ್ಟರಲ್ಲಿ ಫಟ್ ಎಂದು ಒಂದು ಜೇನು ತುಟಿಗೆ ಬಾರಿಸಿತು. 'ಅರ್ರರೆ' ಎಂದು ನಾನು ಏನೋ ಹೇಳಬೇಕೆಂದಿರುವಷ್ಟರಲ್ಲಿ ಫಟಫಟ ಜೇನುಗಳ ದಾಳಿ ಆರಂಭವಾಯ್ತು. ಕಂಬಿ ಕೀಳುವುದೊಂದನ್ನುಳಿದು ಬೇರೆ ಮಾರ್ಗವೆ ಇರಲಿಲ್ಲ.

'ಅರೆ ಇಸ್ಕಿ, ಅರೆ ಇಸ್ಕಿ, ಥತ್ತೆರಿ' ಎನ್ನುತ್ತಾ ಪ್ಯಾರ 'ಬನ್ನಿ ಸಮಿ, ಜೇನು ಭಾರಿ ರಾಂಗ್ ಆಗೋ ಹಂಗೆ ಕಾಣ್ತದೆ' ಎಂದು ಕೂಗಿದ. ಅವನಿಗೂ ಜೇನು ಕಚ್ಚ ತೊಡಗಿದ್ದವು. ಕಿವಿಗೂ ಒಂದೆರಡು ಜೇನು ಮೂತಿಗೆ ಬಾರಿಸಿರಬೇಕು. ಎಷ್ಟು ಕರೆದರೂ ಬಾರದಿದ್ದುದು ಮೂತಿ ಕೊಡಹುತ್ತಾ ದೆವ್ವ ಹಿಡಿದವರಂತೆ ಕ್ಷಣ ಮಾತ್ರದಲ್ಲಿ ಕಂಬಿ ಕಿತ್ತಿತು. ನಾನೂ ಪ್ಯಾರನೂ ಮುಳ್ಳು ಪೊದೆಗಳ ನಡುವೆ ಆದಷ್ಟು ವೇಗವಾಗಿ ಸುರಕ್ಷಿತ ಜಾಗ ಹುಡುಕಿಕೊಂಡು ಪಲಾಯನ ಮಾಡಿದೆವು.


ಪೊದೆಯಿಂದ ಹೊರಗೆ ಬಂದು ನೋಡುತ್ತೇನೆ, ಕಿವಿಯ ವಿಳಾಸವೆ ಇಲ್ಲ! ನಮ್ಮನ್ನು ತಂದು ಜೇನಿನ ಬಾಯಿಗೆ ಸಿಕ್ಕಿಸಿ ಅದು ಪಲಾಯನ ಸೂತ್ರ ಪಠಿಸಿತ್ತು.


ಕಾಡಿನಿಂದ ಹೊರಬಂದು ನಾನೂ ಪ್ಯಾರನೂ ಸಮಾಲೋಚನೆ ನಡೆಸಿದೆವು. ಯಾರೋ ಕಾಡಿನಲ್ಲಿ ಕದ್ದಿಟ್ಟ ಕಳ್ಳಭಟ್ಟಿ ಮಡಕೆಗೆ ಜೇನುಗಳು ಬಂದು ಕಟ್ಟಿಬಿಟ್ಟಿದ್ದಾವೆಂದೂ ತೀರ್ಮಾನಿಸಿದೆವು. ಪ್ಯಾರ ಹೇಳಿದ, ಮಂದಣ್ಣನಿಗೆ ಹೇಳಿ ಜೇನು ತೆಗೆಸೋಣ ಎಂದು. ಪ್ಯಾರನಿಗೆ ಜೇನುಗಳು ತುಂಬಾ ಕಚ್ಚಿರಲಿಲ್ಲ. ಆದರೆ ಕಣ್ಣಿನ ಬಳಿ ಹುಬ್ಬಿನ ಹತ್ತಿರ ಎರಡು ಕಚ್ಚಿ ಆಗಲೆ ನಿಂಬೆಕಾಯಿ ಗಾತ್ರಕ್ಕೆ ಊದಿತ್ತು. ನನ್ನ ತುಟಿ ಹನುಮಂತರಾಯನ ತುಟಿಯಂತಾಗಿತ್ತು.

ಇಬ್ಬರೂ ಕಿವಿ ಮಾಡಿದ ಕುಚೇಷ್ಟೆಗೆ ಬಯ್ಯುತ್ತಾ ಮನೆ ಕಡೆಗೆ ನಡೆದೆವು. ಮನೆಗೆ ಬಂದಾಗ ನಾವು ಕಾಯಲು ಹೇಳಿ ಕೂರಿಸಿದ್ದ ವ್ಯಕ್ತಿ ನಮ್ಮ ಬದಲಾದ ಮುಖ ಚೆಹರೆ ನೋಡಿ ಬಿದ್ದೂಬಿದ್ದೂ ನಕ್ಕರು.


- ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ.


 ಪ್ರಕೃತಿ ಚಿತ್ರಗಳನ್ನ ಲಘುವಾದ ಆಡು ಭಾಷೆಯಲ್ಲಿ ಸಶಕ್ತವಾಗಿ ತಮ್ಮ ಕಥೆ ಕಾದಂಬರಿಗಳಲ್ಲಿ ಬಿಂಬಿಸಿದ್ದ ತೇಜಸ್ವಿ ನಮ್ಮೆಲ್ಲರ ಮೆಚ್ಚಿನ ಕನ್ನಡದ ಸಾಹಿತಿ. ಅವರ ಕಥನ ಶೈಲಿಯ ರಮ್ಯತೆ ಹಾಗೂ ಹಾಸ್ಯ ಪ್ರಜ್ಞೆಗೆ ಮಾರು ಹೋಗದ ಕನ್ನಡ ಸಾಹಿತ್ಯ ಪ್ರೇಮಿಯೆ ಇರಲಿಕ್ಕಿಲ್ಲ. ಲೇಖಕ, ಸಾಮಾಜಿಕ ಹೋರಾಟಗಾರ, ಚಿಂತಕ, ಪ್ರಕೃತಿ ಪ್ರಿಯ, ಚಿತ್ರಕಾರ, ಸರೋದ್ ವಾದಕ, ಕೃಷಿಕ ಹೀಗೆ ಆಗಾಗ ವಿಭಿನ್ನ ಅವತಾರಗಳಲ್ಲಿ ಕಂಗೊಳಿಸಿ ನಮ್ಮನ್ನೆಲ್ಲ ಬೆಚ್ಚಿಬೀಳಿಸುತ್ತಿದ್ದ ಅವರ ಸಾಹಿತ್ಯ ಯಾತ್ರೆಯ ಅತ್ಯುತ್ತಮ ಕೃತಿಗಳಲ್ಲಿ ಒಂದು ಈ "ಕರ್ವಾಲೋ". ಕಳೆದ ಮೂವತ್ತೈದು ವರ್ಷಗಳಲ್ಲಿ ಬರೋಬ್ಬರಿ ಮೂವತ್ತೊಂದು ಬಾರಿ ಮರು ಪ್ರಕಟವಾಗಿರುವ ಈ ಕಿರು ಕಾದಂಬರಿ ಅವರ ಒಟ್ಟಾರೆ ಸಾಹಿತ್ಯ ಕೃತಿಗಳಲ್ಲಿಯೇ ಅತಿಹೆಚ್ಚು ಬಾರಿ ಮರು ಮುದ್ರಣ ಗೊಂಡಿರುವ ಪುಸ್ತಕವಾಗಿದೆ.


ವಯಕ್ತಿಕವಾಗಿ ನಾನು ತೇಜಸ್ವಿಯವರ ಅಸಂಖ್ಯಾತ ಯುವ ಮಿತ್ರರಲ್ಲಿ ಒಬ್ಬನಾಗಿದ್ದೆ ಎನ್ನುವ ಹೆಮ್ಮೆ ನನಗಿದೆ. ಅವರ ಬಾಳ್ವೆಯ ಕಡೆಯ ಐದು ವರ್ಷಗಳಲ್ಲಿ ಅವರೊಂದಿಗೆ ಒಂದು ಮಟ್ಟಿನ ಗಾಢ ಸ್ನೇಹ ಸಾಧಿಸಿದ್ದೆವು ನಾನು ಹಾಗೂ ರುದ್ರಪ್ರಸಾದ್. ಅವರಿಂದ ಈ ಹಂತದಲ್ಲಿ ಪರೋಕ್ಷವಾಗಿ ಕಲಿತದ್ದು ಬಹಳ ಇದೆ. 'ಕರ್ವಾಲೋ"ವನ್ನು ನಾನು ಮೊದಲಿಗೆ ಓದಿದ್ದು ೧೯೯೫ ರಲ್ಲಿ ಏಳನೆ ತರಗತಿಯ ಬೇಸಿಗೆ ರಜೆಯ ಅವಧಿಯಲ್ಲಿ ತೀರ್ಥಹಳ್ಳಿಗೆ ಹೋಗಿದ್ದಾಗ. ಆಗ ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿದ್ದ 'ಕರ್ವಾಲೋ' ನನಗೆ ಪುಟ್ಟಿಯ ಚೀಲದಲ್ಲಿ ಸಿಕ್ಕಿತ್ತು. ಮೊದಲ ಓದಿನಲ್ಲಿಯೆ ಮೋಡಿ ಹಾಕಿದ್ದ ಅದನ್ನು ಅನಂತರದ ದಿನಗಳಲ್ಲಿ ಅನೇಕ ಕಿರಿಯ ಮಿತ್ರರಿಗೆ ಓದಿನ ಆರಂಭಿಕ ಪುಸ್ತಕವನ್ನಾಗಿ ಪರಿಚಯಿಸಿದ್ದೇನೆ. ಆನಂತರದ ದಿನಗಳಲ್ಲಿ ಅವರ ಕನ್ನಡ ಸಾಹಿತ್ಯದ ಆಸಕ್ತಿ ಅಪಾರವಾಗಿ ಅರಳಿದ್ದನ್ನೂ ಗಮನಿಸಿದ್ದೇನೆ.


೧೯೮೦ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿಯ ಕ್ರಿಯಾಶೀಲ ಕೃತಿಯೆಂಬ ಅರ್ಹತೆಯಡಿಯಲ್ಲಿ ಪುರಸ್ಕೃತವಾಗಿದ್ದ ಈ ಕೃತಿ ಅನಂತರ ದಿನಗಳಲ್ಲಿ ಭಾರತದ ಅನೇಕ ಇನ್ನಿತರ ಭಾಷೆಗಳಿಗೆ ಅನುವಾದಗೊಂಡು ಜನ ಮನ್ನಣೆ ಗಳಿಸಿದೆ. ಅವರ ಇನ್ನಿತರ ಕಾದಂಬರಿಗಳಂತೆಯೆ ಸಾಮಾಜಿಕವಾಗಿ ಕ್ಷುದ್ರವಾಗಿ ಪರಿಗಣಿತವಾಗುವ ಹಾವುಗೊಲ್ಲರ ಎಂಕ್ಟ, ಫಾರೆಸ್ಟ್ ಗಾರ್ಡುಗಳ ಜೊತೆ ಹಾಸಿಗೆ ಹಂಚಿಕೊಳ್ಳುವ ಅವನ ಹೆಂಡತಿ, 'ಗರ್ಮಿ'ಯ ಹೊಡೆತಕ್ಕೆ ಸಿಲುಕಿ(?) ಸಿಕ್ಕಸಿಕ್ಕ ಹೆಂಗಸರನ್ನ ಹಾಗೂ ಮರಗಳನ್ನ ಸಲೀಸಾಗಿ ಹತ್ತಿ ಇಳಿಯುವ ಬಿರ್ಯಾನಿ ಕರಿಯಪ್ಪ, ಊರ ಗಮಾರ 'ಮೇರೇಜು' ಗಿರಾಕಿ ಮಂದಣ್ಣ, ಜೇನು ಸೊಸೈಟಿಯ ಲಕ್ಷ್ಮಣ, ಮನೆ ಕೆಲಸದ ಹೆಪ್ರ ಸಾಬರ ಹುಡುಗ ಪ್ಯಾರ, ಕಳ್ಳಭಟ್ಟಿ ಕಾಸುವ ಮಂದಣ್ಣನ ಹೆಣ್ಣು ಕೊಟ್ಟ ಮಾವ ನಾರ್ವೆಯ ಕುಡುಕ ರಾಮಯ್ಯ, ಮಂದಣ್ಣನ ದೊಡ್ಡ ಮೊಲೆಯ ಪ್ರೇಯಸಿ ಕಂ ಹೆಂಡತಿ ರಾಮಿ, ಸಮಯ ಸಾಧಿಸಿ ಚಾಡಿ ಚುಚ್ಚಿ ತನ್ನ ಬೇಳೆ ಬೇಯಿಸಿಕೊಳ್ಳುವ ಹಪಾಹಪಿಯಲ್ಲಿ ಕಾಯುವ ಸರಾಯಿ ಕಾಂಟ್ರಾಕ್ಟರ್ ಗೋವಿಂದಯ್ಯ, ಇದಕ್ಕೆಲ್ಲ ಕಳಶವಿಟ್ಟಂತೆ ಆಗಾಗ ಸಲ್ಲದ ಕಿತಾಪತಿ ಮಾಡುವ ನಾಯಿ ಕಿವಿ, ಇದೆಲ್ಲದರ ನಡುವೆ ಕಾಡಿನ ನಿಗೂಢತೆಯಲ್ಲಿ ವಿಸ್ಮಯವನ್ನರಸುವ ವಿಜ್ಞಾನಿ ಕರ್ವಾಲೋ, ಅವರ ನಮ್ರ ಶಿಷ್ಯ ಕ್ಯಾಮರಾ ಪ್ರಭಾಕರ, ಎಲ್ಲದರ ಮೂಲಾಧಾರವಾಗಿ ಮೂರರ ಮುಂದೆ ಏಳುಸೊನ್ನೆ ಹಾಕುವಷ್ಟು ವರ್ಷದ ಹಿಂದಿನ ಜೀವಿಯಾದ ಹಾರುವ ಓತಿ! ಒಟ್ಟ್ ರಾಶಿ ಹೀಗೆ ಒಂದಕ್ಕೊ ಪರಸ್ಪರ ಸೂತ್ರ ಸಂಬಂಧವೆ ಇಲ್ಲದಂತ ಪಾತ್ರಗಳ ನಿಲ್ಲದ ಪರಿಷೆ!

ಇದರ ನಿಗೂಢ ಜಗತ್ತಿನ ಸಾಕ್ಷಾತ್ ದರ್ಶನ ಮಾಡಿಕೊಳ್ಳಲಾದರೂ ಎಲ್ಲರೂ ಒಮ್ಮೆ ಓದಲೆ ಬೇಕಾದ ಕೃತಿ ಇದು. ಇದನ್ನೊಮ್ಮೆ ಓದಿ ಮುಗಿಸಿದ ಆಮೇಲೆ ನೀವು ತೇಜಸ್ವಿ ಕೃತಿಗಳಿಗೆ ಮಾದಕ ವ್ಯಸನಿಗಳಂತೆ ದಾಸರಾಗದಿದ್ದರೆ ಮತ್ತೆ ಹೇಳಿ!

No comments: