24 September 2014

ಪುಸ್ತಕದೊಳಗೆ - ೧೩



"ಕೇಪಿನ ಡಬ್ಬಿ"

(ಕಥಾ ಸಂಕಲನ) 
ಬರಹ; ರೂಪಾಲಕ್ಷ್ಮಿ.

ಬರೆದಿರುವವರು; ಪದ್ಮನಾಭ ಭಟ್, ಶೇವ್ಕಾರ,
ಪ್ರಕಾಶಕರು; ಛಂದ ಪುಸ್ತಕ,
ಪ್ರಕಟಣೆ; ೨೦೧೪,
ಕ್ರಯ; ರೂಪಾಯಿ ೧೧೦.

ಇಡೀ ಊರಿಗೆ ಶಿಸ್ತಿಗೆ ಗಾಂಭಿರ್ಯತೆಗೆ ಹೆಸರಾಗಿದ್ದ ಅಪ್ಪ, ಶಾಲೆಯಲ್ಲಿ ತನ್ನ ಮಗ ಮತ್ತು ಬೇರೆ ಮಕ್ಕಳ ಮಧ್ಯೆ ಭೇದಭಾವ ಮಾಡುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಯಾರೇ ತಪ್ಪು ಮಾಡಿದರೂ ಅವರ ಜೊತೆ ನನಗೂ ಹೊಡೆಯುತ್ತಿದ್ದ ಅಪ್ಪ, ಕೊನೆಗೆ ತಾನೇ ಕಟ್ಟಿಕೊಂಡ ಹುಸಿಶಿಸ್ತಿನ ವೇಷದಿಂದ ಹೊರಬರಲಾರದೆ ಪ್ರತಿ ಕ್ಷಣ ನರಳುತ್ತಿದ್ದ ಅಪ್ಪ, ಈಗ ಎಲ್ಲ ‘ಮಾಸ್ತರಿಕೆಯ’ ಕಿರೀಟ, ಭುಜಕೀರ್ತಿ, ಎದೆ ಕವಚಗಳನ್ನು ಕಳಚಿಟ್ಟು ಯಾವುದೋ ಹುಡುಗನ ಜೊತೆ ಚಿಕ್ಕ ಮಕ್ಕಳಂತೆ ಅಂಗಳದ ತುಂಬೆಲ್ಲಾ ಓಡಾಡುತ್ತಾ ಆಡುತ್ತಿರುವುದನ್ನು ನೋಡಿದ ಶೇಖರನಿಗೆ ಇದು ತನ್ನ ಅಪ್ಪನೇ ಹೌದೋ ಅಲ್ಲವೋ ಎಂದೇ ಕ್ಷಣಕಾಲ ಅಜೀಬಾಯಿತು. ಈ ಕ್ಷಣವೇ ಅಪ್ಪನೆದುರು ಹೋಗಿ ನಿಂತರೆ ಹೇಗೆ ಅನ್ನಿಸಿತು. ಚಿಕ್ಕಂದಿನಿಂದ ನಾನು ಅನುಭವಿಸಿದ ಯಾತನೆ ಅವಮಾನಗಳ ಪ್ರತಿಕಾರಕ್ಕೆ ಇದು ಸರಿಯಾದ ಈ ಸಮಯ. ಸುಮ್ಮನೆ ನಾನು ಎದುರಿಗೆ ಹೋಗಿ ದಿಟ್ಟಿಸಿದರೂ ಸಾಕು, ಅಪ್ಪ ಇನ್ನೆಂದೂ ಏಳಲಾರದಂತೆ ಕುಸಿದುಹೋಗುತ್ತಾನೆ. ಅಲ್ಲಿ ನನ್ನ ಕಣ್ಣುಗಳು ಕೇಳುವ ಒಂದೊಂದು ಪ್ರಶ್ನೆಗಳೂ ಅವರ ರಾತ್ರಿಗಳನ್ನು ನರಕ ಮಾಡಿ ನರಳಿಸುತ್ತವೆ ಎಂತೆಲ್ಲಾ ಆಲೋಚನೆಗಳು ಮನಸಲ್ಲಿ ಸುಳಿಯಿತು. ಆದರೆ ಅಪ್ಪನನ್ನು ಹೊಸತಾಗಿ ಕಂಡ ಈ ಶುಭ್ರ ಬೆಳಕಿನ ಗಳಿಗೆಯೆದುರು ಅವೆಲ್ಲಾ ಬಣ್ಣ ಕಳೆದುಕೊಂಡ ಹಳೆ ಮುರುಕು ಆಟದ ಸಾಮಾನುಗಳಂತೆ ಟೊಳ್ಳುಟೊಳ್ಳಾಗಿ ಕಂಡವು. ಕೊಂಚ ಸರಿದ ಮೋಡದಿಂದ ಹೊರಬಂದ ಬಿಸಿಲಿನಲ್ಲಿ ಹೊಳೆಯುತ್ತ ಚಕ್ ನೆ ಎರಗಿ, ಸರಕ್ಕನೆ ಬಾಗಿ, ಸರಿದು, ಜಿಗಿದು ತಪ್ಪಿಸಿಕೊಳ್ಳುತ್ತಾ ಓಡುತ್ತಿದ್ದ ಮಾಸ್ತರ್ರು ಈ ಜಗತ್ತಿಗೆ ಸಂಬಂಧಪಡದವರಂತೆ ಈಗಷ್ಟೇ ತೆರೆದುಕೊಂಡ ಹೊಸ ದಾರಿಯಲ್ಲಿ ತಮ್ಮನ್ನು ಕಾಡುವ ಎಲ್ಲವನ್ನೂ ದಾಟುತ್ತಾ ಓಡುತ್ತಿರುವ ಸಾರ್ಥಕ ಪಥಿಕನಂತೆ ಕಂಡರು. ಶೇಖರ ಹಾಗೇ ಕಣ್ಮುಚ್ಚಿ ಕಂಡಿದ್ದನ್ನು ಮನಸ್ಸಲ್ಲಿ ತುಂಬಿಕೊಂಡು ಮತ್ತೆ ತಿರುಗಿ ನೋಡದೆ ಮನೆಕಡೆಗೆ ನಡೆದ.

ಮನೆಗೆ ಬಂದು ಮುಟ್ಟುವಷ್ಟರಲ್ಲಿ ಘಂಟೆ ಹನ್ನೆರಡಾಗಿತ್ತು. ಸುಮ್ಮನೆ ಬಾಗಿಲು ತೆರೆದು ಜಗುಲಿಯಲ್ಲಿ ಕೂತ. ಹೆಚ್ಚು ಹೊತ್ತು ಕೂರಲಾಗದೆ ಎದ್ದು ಅತ್ತಿತ್ತ ಅಡ್ಡಾಡಿದ. ಮೂಲೆಯಲ್ಲಿ ಪೇರಿಸಿಟ್ಟಿದ್ದ ಅಡಿಕೆ ಚೀಲವನ್ನು ಬಡಿದ. ಧೂಳು ಹಾರಿತು. "ಥೋ.. ಹೊತ್ತಾತು. ಅಡಿಗೆ ಏನೂ ಮಾಡಾಯ್ದ್ಲೆ.. ಇವ್ರ ಮಳ್ಳು ಕತೆ ಕಟ್ಕಂಡು ಕುಂತ್ರೆ ನಮಗೆ ಪುರೇಸುದಲ್ಲ...." ಎಂದು ಅಮ್ಮನ ರೀತಿಯಲ್ಲಿ ವೃಥಾ ಗಡಿಬಿಡಿಯನ್ನು ಆರೋಪಿಸಿಕೊಂಡು ಅಡುಗೆಮನೆಗೆ ಹೋಗಿ ಒಲೆಯಲ್ಲಿ ಬೆಂಕಿ ಹಾಕಿ ಅನ್ನಕ್ಕಿಟ್ಟ. ಇಷ್ಟುದಿನ ತೀವ್ರವಾಗಿ ದ್ವೇಷಿಸಲಾದರೂ ಒಬ್ಬ ಅಪ್ಪ ಇದ್ದ. ಆ ದ್ವೇಷದಲ್ಲಿಯಾದರೂ ಅವನು ನನಗೆ ಉತ್ಕಟವಾಗಿ ಸಂಬಂಧಿಸಿರುತ್ತಿದ್ದ. ಇಂದು ಅವನನ್ನೂ ಕಳೆದುಕೊಂಡೆ ಅನ್ನಿಸಿತು.

- ಪದ್ಮನಾಭ ಭಟ್ 

ಉತ್ತರ ಕನ್ನಡದ ಅಂಕೋಲೆಯ ಗಂಗಾವಳಿ ನದಿ ಸೆರಗಿನಲ್ಲಿನ ಶೇವ್ಕಾರ ಎಂಬ ಪುಟ್ಟ ಊರು. ಹುಟ್ಟಿದ್ದು ೧೯೯೦ ರಲ್ಲಿ. ಪಿಯುಸಿವರೆಗೆ ಊರಲ್ಲಿಯೇ ಓದು. ನಂತರ ಹುಬ್ಬಳ್ಳಿಯಲ್ಲಿ ಬಿ.ಎ. ಧಾರವಾಡ ಕರ್ನಾಟಕ ವಿಶ್ವಾವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ . ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ವೃತ್ತಿಬದುಕು ಆರಂಭಿಸಿದ್ದು ೨೦೧೩ ರಲ್ಲಿ. ಸಿನಿಮಾ, ರಂಗಭೂಮಿ, ಪರ್ಯಟನೆಗಳಲ್ಲಿಯೂ ಆಸಕ್ತ.

ವೈದೇಹಿಯವರ ಕಥೆಗಳಲ್ಲಿ ಪಾತ್ರಗಳ ಸ್ವಗತ ನಮ್ಮನ್ನು ಕಾಡುವಂತೆಯೇ, ಕೇಪಿನ ಡಬ್ಬಿಯ ಎಲ್ಲಾ ಕಥೆಗಳ ಪಾತ್ರಗಳು ನಮ್ಮನ್ನು ಕಾಡುತ್ತವೆ. ಆಲೋಚನೆಗೀಡಾಗುವಂತೆ ಮಾಡುತ್ತವೆ. ಕಣ್ಣೀರಿಳಿಸುತ್ತವೆ. ಇಷ್ಟವಾಗುತ್ತವೆ. ಮನುಷ್ಯ ಪೂರ್ವಾಗ್ರಹಪೀಡಿತನಾಗಿ, ತನ್ನ ಸುತ್ತಲಿನ ಸಂದರ್ಭಗಳನ್ನು ತನ್ನ ಮೂಗಿನ ನೇರಕ್ಕೆ ಗ್ರಹಿಸುವುದನ್ನು ಚಂದವಾಗಿ, ಚೊಕ್ಕವಾಗಿ ಪದ್ಮನಾಭ ಭಟ್ ತಮ್ಮ ಕಥೆಗಳಲ್ಲಿ ಕಟ್ಟಿಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾನು ಓದಿದ ಚಂದದ ಕಥಾಸಂಕಲನ ‘ಕೇಪಿನ ಡಬ್ಬಿ’.

No comments: