24 September 2014

ಪುಸ್ತಕದೊಳಗೆ - ೯





"ಕಾಗದದ ದೋಣಿ"

( ಯಾನ ಒಂದು ಹಾಗೂ ಎರಡು.)

ಲೇಖಕ; ಮಧುಸೂದನ ಪೆಜತ್ತಾಯ,
ಪ್ರಕಾಶಕರು; ದೇಸಿ ಪುಸ್ತಕ,
ಪ್ರಕಟಣೆ; ೨೦೧೨,
ಕ್ರಯ; ರೂಪಾಯಿ ೧೮೦*೨.


 " ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಶಂಭು ಎಂಬ ಹುಡುಗನೊಬ್ಬ ನಮ್ಮ ಕ್ಲಾಸಿಗೆ ಸೇರಿಕೊಂಡ. ಆತನು ದೂರದ ಮಹಾರಾಷ್ಟ್ರದ ನಾಸಿಕ ಎಂಬ ಊರಿನಿಂದ ಬಂದು ನಮ್ಮ ಶಾಲೆಗೆ ಸೇರಿಕೊಂಡಿದ್ದ. ಆತ ಪ್ರಾಯದಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದು, ನನಗಿಂತ ಒಂದು ಅಡಿ ಎತ್ತರವಾಗಿದ್ದ. ನಮ್ಮ ಕ್ಲಾಸಿನ ಎಲ್ಲಾ ಆಟ ಓಟ ಸ್ಪರ್ಧೆಗಳಲ್ಲಿ ಅವನೇ ಮೊದಲಿಗನಾಗಿ ಬಿಟ್ಟ. ಆತನಿಗೆ ಆಟೋಟ ಸ್ಪರ್ಧೆಗಳಲ್ಲಿ ಮೊದಲ ಪಟ್ಟ ಸಿಕ್ಕರೂ, ಪಾಠಗಳಲ್ಲಿ ಆತ ಕೊನೆಯ ಪಟ್ಟದಲ್ಲಿ ಮೆರೆಯುತ್ತಾ ಇದ್ದ.  

ಅವನ ತಂದೆತಾಯಂದಿರು ನಾಸಿಕದಲ್ಲಿ ಒಂದು ಚಿಕ್ಕ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ಆತನು ಪೋಲಿ ಹುಡುಗರ ಜತೆಗೆ ಸೇರಿಕೊಂಡು ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲವಂತೆ. ಪ್ರತೀ ಕ್ಲಾಸಿನಲ್ಲೂ ಎರಡೆರಡು ವರ್ಷ ಕಳೆಯುತ್ತಿದ್ದನಂತೆ. ಆತನ ಪೋಲಿ ಸಹವಾಸ ಬಿಡಿಸುವ ಸಲುವಾಗಿ ಆತನ ತಂದೆ ತಾಯಂದಿರು ಅವನನ್ನು ನಮ್ಮ ಊರಾದ ದಕ್ಷಿಣ ಕನ್ನಡದ ಜಿಲ್ಲೆಯ ಕಿನ್ನಿಕಂಬಳದಲ್ಲಿರುವ ಆತನ ಅಜ್ಜಿಯ ಮನೆಗೆ ಸಾಗಹಾಕಿದ್ದರು. ನಾಸಿಕದಲ್ಲಿ ಆತ ಕಲಿಯುತ್ತಿದ್ದ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಹೇಳಿಕೊಡುತ್ತಿದ್ದರೂ, ಬಾಕಿಯ ಎಲ್ಲಾ ವ್ಯವಹಾರಗಳು ಮರಾಠಿ ಭಾಷೆಯಲ್ಲಿ ನಡೆಯುತ್ತಿದ್ದುವಂತೆ.

ನಮ್ಮ ಶಾಲೆಗೆ ಬಂದು ಸೇರುವಾಗ ಶಂಭುವಿಗೆ ಅತ್ತ ಮರಾಠಿಯೂ ಬರುತ್ತಿರಲಿಲ್ಲ, ಇತ್ತ ಕನ್ನಡವೂ ಓದಿ ಬರೆಯಲು ಬರುತ್ತಿರಲಿಲ್ಲ! ಆತನಿಗೆ ನಾಸಿಕದ ಆಡು ಭಾಷೆಯಾದ ಮರಾಠಿ ಭಾಷೆ ಮತ್ತು ಆತನ ಮಾತೃ ಭಾಷೆಯಾದ ತುಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಲು ಮಾತ್ರ ಬರುತ್ತಿತ್ತು. 

ಶಂಭುವಿನ ತಂದೆತಾಯಿಯರು ನಮ್ಮ ಶಾಲೆಗೆ ಬಂದು ನಮ್ಮ ಹೆಡ್ ಮಾಸ್ತರರನ್ನು ಅಂಗಲಾಚಿ ಕೇಳಿಕೊಂಡು ಕೊನೆಗೆ ನಮ್ಮ ಶಾಲೆಗೆ ಸೇರಿಸುವುದರಲ್ಲಿ ಯಸಸ್ವಿಗಳಾಗಿದ್ದರು. ಶಂಭುವನ್ನು ತಿದ್ದುವುದು, ಮತ್ತು ಅವನಿಗೆ ಕನ್ನಡದಲ್ಲಿ ಪಾಠ ಹೇಳಿಕೊಟ್ಟು ಉತ್ತಮ ವಿದ್ಯಾರ್ಥಿಯನ್ನಾಗಿ ಮಾಡುವುದು ನಮ್ಮ ಮಾಸ್ತರುಗಳಿಗೆ ದೊಡ್ಡ ಸವಾಲೇ ಆಗಿತ್ತು. ಆತನನ್ನು ನನ್ನ ಪಕ್ಕದಲ್ಲಿ ಕುಳ್ಳಿರಿಸಿ, ಆತನಿಗೆ ಕನ್ನಡ ಕಲಿಯಲು ಸಹಾಯ ಮಾಡುವಂತೆ ನನಗೆ ಹೆಡ್ ಮಾಸ್ತರರು ಆಣತಿ ಇತ್ತರು. ಶಂಭುವಿನ ಮನೆ ನಮ್ಮ ಮನೆಯ ಹತ್ತಿರದಲ್ಲೇ ಇತ್ತು. ಪ್ರತೀ ಸಾಯಂಕಾಲ ಶಾಲೆ ಬಿಟ್ಟಮೇಲೆ ನಮ್ಮ ಮನೆಗೆ ಬಂದು ನನ್ನ ಜತೆ ಸೇರಿ ಪಾಠ ಓದಲು ಮತ್ತು ಹೋಮ್ ವರ್ಕ್ ಮಾಡಲು ಶಂಭು ಆರಂಭಿಸಿದ. ಕ್ರಮೇಣ, ತನ್ನ ಕನ್ನಡ ಜ್ಞಾನವನ್ನು ತರಗತಿಯ ಮಟ್ಟಕ್ಕೆ ಸುಧಾರಿಸಿಕೊಂಡೂ ಬಿಟ್ಟ! ಆ ವರ್ಷ ಆತನು ನಾಲ್ಕನೇ ತರಗತಿಯಲ್ಲಿ ತೇರ್ಗಡೆಯಾಗಿಯೂ ಆಗಿ ಬಿಟ್ಟ! 

ನಮಗೆ ಬೇಸಿಗೆಯ ರಜೆ ಶುರುವಾಯಿತು. ಶಂಭು ನಮ್ಮ ಮನೆಗೆ ದಿನಾ ಆಡಲು ಬರುತ್ತಿದ್ದ. ಎಲ್ಲಿಂದಲೋ ಒಂದು ರಬ್ಬರ್ ಸಹಿತವಾದ ಕಬೆ ಕೋಲಿನ ಕವಣೆ ( ಕ್ಯಾಟಾಪುಲ್ಟ್ ) ಹೊಂದಿಸಿಕೊಂಡು ಬಂದು ಮಾವಿನ ಕಾಯಿ, ಗೇರು ಹಣ್ಣು ಮೊದಲಾದುವಕ್ಕೆ ಗುರಿಯಿಟ್ಟು ಬೀಳಿಸಿದ. ಕ್ರಮೇಣ ನನಗೂ ಆ ವಿದ್ಯೆ ಹೇಳಿಕೊಟ್ಟ. ಆ ಮೇಲೆ ಒಂದು ದಿನ ಅದೇ ಕವಣೆಯಿಂದ ಅಳಿಲು, ಗುಬ್ಬಚ್ಚಿ, ಪಾರಿವಾಳ ಮೊದಲಾದುವನ್ನು ತಾನು ಹೊಡೆದು ಶಿಕಾರಿ ಮಾಡುತ್ತಾ ಇದ್ದೇನೆ ಎಂದ. ಅವನ್ನು  " ನೀನೂ ಹೊಡೆ! " ಎಂದು ಪ್ರೇರೇಪಿಸಿದ.  ಅದಕ್ಕೆ ನಾನು ಒಪ್ಪದೇ " ನಾನು ಪ್ರಾಣಿ ಹಿಂಸೆ ಮಾಡುವುದಿಲ್ಲ, ಹಾಗೇನಾದರೂ ಮಾಡಿ, ಅದು ನನ್ನ ಅಜ್ಜಿಗೆ ಗೊತ್ತಾದರೆ, ಅಜ್ಜಿ ನನ್ನ ಜನ್ಮ ಜಾಲಾಡಿ ಬಿಡುತ್ತಾರೆ! " ಎಂದೆ. 

ಅವನಿಗೆ ನನ್ನ ಮಾತು ಬೇಸರ ಉಂಟುಮಾಡಿತೋ ಏನೋ! ಎರಡು ದಿನ ಶಂಭು ಆಡಲು ನಮ್ಮ ಮನೆ ಕಡೆಗೆ ಬರಲೇ ಇಲ್ಲ. ಆತನು ತನ್ನ ‘ಕವಣೆ ಶಿಕಾರಿ’ಯಲ್ಲಿ ನಿರತನಾಗಿರಬೇಕು ಎಂದು ನಾನೂ ಸುಮ್ಮನಿದ್ದೆ. ಮೂರನೇ ದಿನ ನಮ್ಮಲ್ಲಿಗೆ ಬಂದ ಶಂಭು " ನೋಡು ಮಧುಸೂದನ, ನಿನಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲಲು ಇಷ್ಟ ಇದ್ದಂತೆ ಇಲ್ಲ. ಆದರೆ, ನಿನಗೆ ಅಳಿಲು, ಮೊಲ, ನವಿಲು, ಪಾರಿವಾಳ, ಗಿಳಿ, ಮೈನಾ, ಕೋಗಿಲೆ ಮೊದಲಾದುವನ್ನು ಹಿಡಿದು ಸಾಕಲು ಇಷ್ಟವಿಲ್ಲವೇ? " ಎಂದು ಕೇಳಿದ. 

ನನಗೆ ಆತನ ಮಾತುಗಳನ್ನು ಕೇಳಿಯೇ ಉಮೇದು ಹುಟ್ಟಿತು! ನಮ್ಮ ಮನೆಯಲ್ಲಿದ್ದ ಬೆಕ್ಕು, ನಾಯಿ, ದನ, ಕರು, ಎಮ್ಮೆ ಇವುಗಳ ಜತೆಗೆ ಒಂದೆರಡು ಅಳಿಲುಗಳು, ಸುಂದರವಾದ ನವಿಲುಗಳು, ಮನುಷ್ಯನಂತೆ ಮಾತನಾಡುವ ಗಿಳಿಗಳು, ಮೈನಾ ಹಕ್ಕಿಗಳು ಮತ್ತು ಹಲವಾರು ಪಾರಿವಾಳಗಳು ಮುಂತಾದುವುಗಳನ್ನು ಹಿಡಿದು ಸಾಕ ಬೇಕೆಂಬ ಆಸೆ ಉಂಟಾಯಿತು. 

" ಅವನ್ನು ಹಿಡಿಯುವ ಬಗೆ ಹೇಗೆ? " ಎಂದು ಶಂಭುವನ್ನು ಕೇಳಿದೆ. ಅದಕ್ಕವನು " ನಿನಗೆ ನಾನು ಆ ಗುಟ್ಟು ಹೇಳಿಕೊಡುತ್ತೇನೆ! ಎಷ್ಟಾದರೂ ನೀನು ನನಗೆ ಪಾಠ ಕಲಿಯಲು ಸಹಾಯ ಮಾಡಿದ ಮಿತ್ರ. ನಿನಗೆ ನಾನು ಏನಾದರೂ ಪ್ರತ್ಯುಪಕಾರ ಮಾಡಲೇ ಬೇಕು ಎಂಬ ಇಚ್ಛೆಯಿದೆ. ನಾನು ನಮ್ಮೂರಿನ ಕಾಡುಗಳಿಗೆ ಬಂದು ಬೇಟೆಯಾಡುತ್ತಿದ್ದ  ಬ್ಯಾಡರ ಗುಂಪಿನ ಹುಡುಗರಿಗೆ ಎರಡು ಸೇರು ಅಕ್ಕಿ ಕೊಟ್ಟು, ಅವರಿಂದ ಚಿಕ್ಕ ಪ್ರಾಣಿ ಮತ್ತು ಪಕ್ಷಿಗಳನ್ನು ಹಿಡಿಯುವ ಎಲ್ಲಾ ಉಪಾಯಗಳನ್ನು ಕಲಿತಿದ್ದೇನೆ! " ಎಂದ. 

"ಅದೇನು ಉಪಾಯ ಮಾರಾಯ? " ಎಂದು ನಾನು ಉದ್ವೇಗ ಹತ್ತಿಕ್ಕಲಾರದೇ ಕೇಳಿದೆ. ಆದಕ್ಕೆ ಅವನು " ಅದುವೇ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳನ್ನು ಉರುಳು ಹಾಕಿ ಹಿಡಿಯುವ ಉಪಾಯ!  ಅದನ್ನು ನಿನಗೆ ನಾಳೆಯೇ ಹೇಳಿ ಕೊಡುತ್ತೇನೆ " ಎಂದು ಹೇಳಿದ. ಮರುದಿನ ತಾನು ಬರುವಾಗ ಅದಕ್ಕೆ ಬೇಕಾದ ಸಲಕರಣೆಗಳನ್ನು ತಯಾರಿ ಮಾಡಿ ಕೊಂಡು ಬರುವುದಾಗಿಯೂ ಹೇಳಿದ.

ಅಂದು ರಾತ್ರಿ ನನ್ನ ಕನಸಿನಲ್ಲಿ ನಾನೇ ‘ಕಯ್ಯಾರೆ ’ ಹಿಡಿದು ಸಾಕಿದ ಅಳಿಲು, ಮೊಲ, ಪಾರಿವಾಳ ಮೊದಲಾದುವು, ನಮ್ಮ ಮನೆಯ ಅಂಗಳದ ತುಂಬಾ ನಾನೇ ಹಿಡಿದು ಪಳಗಿಸಿದ ನವಿಲುಗಳೊಂದಿಗೆ ಸೇರಿಕೊಂಡು ಸುಶ್ರಾವ್ಯವಾಗಿ ಹಾಡುತ್ತಾ ಅನಂದವಾಗಿ ಕುಣಿದಾಡಿದ ಕನಸು ಬಿತ್ತು. 

"ನಾನು ಶಂಭುವಿನಿಂದ ಕಲಿಯಲಿರುವ ‘ಉರುಳು’ ಇಟ್ಟು ಪ್ರಾಣಿ ಪಕ್ಷಿಗಳನ್ನು ಹಿಡಿಯುವ ವಿದ್ಯೆಯ ಸಹಾಯದಿಂದ, ನನಗೆ ಬೇಕಾದಷ್ಟು ಮುದ್ದು ಪ್ರಾಣಿ ಪಕ್ಷಿಗಳನ್ನು ಹಿಡಿದು ಪ್ರೀತಿಯಿಂದ ಸಲಹುವೆ! " ಎಂದು ಹಿಗ್ಗಿ ಆ ದಿನ ಶಂಭು ಬರುವ ಸಮಯವನ್ನೇ ಕಾದು ಕುಳಿತೆ. ಕೊನೆಗೂ ಶಂಭು ಬಂದ! 

ನಾವಿಬ್ಬರೂ ಕೂಡಲೇ ಅವನ ಮತ್ತು ನಮ್ಮ ಮನೆಗಳ ನಡುವೆ ಇದ್ದ ಕುರುಚಲು ಗುಡ್ಡಕ್ಕೆ ಹೋಗಿ ಕುಳಿತೆವು. ನಾನು ಶಂಭುವಿನ ಕೈಯಲ್ಲಿ ಏನೂ ಕಾಣದಿದ್ದನ್ನು ಕಂಡು ಸ್ವಲ್ಪ ನಿರಾಶೆ ಗೊಂಡೆ.  
ಆಗ ಶಂಭು " ನೋಡು ಮಧುಸೂದನ, ಎಲ್ಲಾ ಸರಂಜಾಮು ನನ್ನ ಚಡ್ಡಿಯ ಜೇಬಿನಲ್ಲಿವೆ " ಎಂದು ತನ್ನ ಜೇಬಿನಲ್ಲಿನ ವಸ್ತುಗಳನ್ನು ಒಂದೊಂದಾಗಿ ಹೊರ ತೆಗೆದ. ಆ ವಸ್ತುಗಳಲ್ಲಿ ಒಂದು ಸಿಂಬೆ ತೆಳುವಾದ, ಆದರೆ ಬಲು ಗಟ್ಟಿಯಾದ ಕತಾಳೆ ನಾರಿನ ದಾರದ ಉಂಡೆ ಮತ್ತು ಕೆಲವು ವಿವಿಧ ರೀತಿಯ ಚಿಕ್ಕ ಚಿಕ್ಕ ಸನ್ನೆಕಡ್ಡಿಗಳನ್ನು ಹೊರತೆಗೆದ. ಆ ಕಡ್ಡಿಗಳನ್ನು ಸುತ್ತುಮುತ್ತ ಬೆಳೆದಿದ್ದ ಗಟ್ಟಿಜಾತಿಯ ಮರಗಿಡಗಳ ರೆಂಬೆಗಳಿಂದ ಸಂಗ್ರಹಿಸಿದ್ದ. "ಈ ಪುಟ್ಟ ಪುಟ್ಟ ಕಡ್ಡಿಗಳು ನಮ್ಮ ಉರುಳಿನ ಜಾಲದಲ್ಲಿ ಸನ್ನೆ ಕೋಲುಗಳಂತೆ ಕೆಲಸಮಾಡುತ್ತವೆ. " ಎಂದ. 
ಮೊದಲಿಗೆ ತೆಳ್ಳಗಿನ ಗಟ್ಟಿ ದಾರದ ಒಂದು ತುದಿಯನ್ನು ಒಂದು ಐದಾರು ಅಡಿ ಎತ್ತರ ಬೆಳೆದಿದ್ದ ಕಾಡುಗಿಡಕ್ಕೆ ಕಟ್ಟಿದ. ಇನ್ನೊಂದು ತುದಿಯನ್ನು ಕುಣಿಕೆ ಮಾಡಿ ಅದು ಭೂಮಿಯಿಂದ ಸರಿಯಾಗಿ ಎರಡು ಅಡಿ ಮೇಲೆ ನಿಲ್ಲುವ ರೀತಿಯಲ್ಲಿ ಗಂಟು ಹಾಕಿದ. ತಾನು ತಂದ ಚಿಕ್ಕ ಪುಟ್ಟ ಕಡ್ಡಿಗಳಲ್ಲಿ ಕೆಲವನ್ನು ಗಟ್ಟಿಯಾದ ನೆಲದಲ್ಲಿ ನಾಟಿಕೊಳ್ಳುವಂತೆ ಒಂದು ಕಲ್ಲಿನ ಸಹಾಯದಿಂದ ಬಡಿದು ಕೂರಿಸಿದ. ಕುಣಿಕೆಯ ಮೇಲ್ಭಾಗಕ್ಕೆ ಚಿಕ್ಕ " ಕುದುರೆ "  ಅಂದರೆ, ಇಂಗ್ಲಿಷ್ ಭಾಷೆಯಲ್ಲಿ ‘ಟ್ರಿಗ್ಗರ್’ಎಂದು ಕರೆಯಲ್ಪಡಬಹುದಾದ ‘ಅರ್ಧ ಇಂಚು’ ಉದ್ದದ ಕಡ್ಡಿಯನ್ನು ಗಂಟುಹಾಕಿ ಬಿಗಿದ. ನೆಲದಲ್ಲಿ ಹಾಕಿದ ಸನ್ನೆ ಕೋಲುಗಳ ಜಾಲದ ಮೇಲೆ ದಾರದ ಕುಣಿಕೆಯನ್ನು ಹರಡಿದ. ಕುಣಿಕೆಯ ಹರವಿನ ಮೇಲೆ ಕೆಲವು ತರಗೆಲೆಗಳನ್ನು ಹರಡಿ, ಆತನು ನೆಟ್ಟ ಸನ್ನೆ ಕಡ್ಡಿಗಳ ಜಾಲವನ್ನು ಮೇಲ್ನೋಟಕ್ಕೆ ಕಾಣದಂತೆ ಮರೆ ಮಾಡಿದ. 

" ಈಗ ನೋಡು, ನಮ್ಮ ಉರುಳು ತಯಾರಾಯಿತು. ನಿನಗೆ ಯಾವ ಪ್ರಾಣಿ ಪಕ್ಷಿಗಳನ್ನು ಹಿಡಿಯಬೇಕೋ,  ಅವುಗಳಿಗೆ ಪ್ರೀತಿಯಾದ ಆಹಾರವನ್ನು ತಂದು ಈ ಸನ್ನೆಕಡ್ಡಿಗಳ ಮೇಲೆ ಸುರಿದು ಬಿಟ್ಟರೆ ಆಯಿತು! ಆ ಆಹಾರವನ್ನು ತಿನ್ನಲು ಬಂದ ಪ್ರಾಣಿ ಪಕ್ಷಿಗಳು ಸಂಶಯ ಪಡದೆ ಈ ಸನ್ನೆಗಳನ್ನು ತುಳಿಯುತ್ತವೆ. ತುಳಿದೊಡನೇ ಈ ಉರುಳು ಅವುಗಳ ಕುತ್ತಿಗೆಗೆ ಅಥವಾ ಕಾಲಿಗೆ ಬಿಗಿದು ಕೊಳ್ಳುತ್ತದೆ. ಆಮೇಲೆ ನೀನು ಅವನ್ನು ಹಿಡಿದು ಗೂಡಿಗೆ ಹಾಕಿ ಸಾಕುತ್ತಾ ಬುದ್ಧಿ ಕಲಿಸಿ ಪಳಗಿಸಿದರೆ ಆಯಿತು! " ಎಂದ. 

ಆಗ ನಾನು " ಶಂಭೂ, ನಾನು ಉರುಳನ್ನು ಯಾವ ಜಾಗದಲ್ಲಿ ಹಾಕಲಿ? ನಿನ್ನಂತೆ ಎತ್ತರವಾದ ಗಿಡಗಳಿಗೆ ದಾರ ಬಿಗಿದು ಬಿಲ್ಲಿಗೆ ಕೂರಿಸಲು ನನಗೆ ಕಷ್ಟವಾಗಬಹುದು" ಎಂದು ಹೇಳಿದೆ. 
ಆಗ ಶಂಭು ನನಗೆ ಈ ರೀತಿ ಉತ್ತರಿಸಿದ " ನೋಡಪ್ಪಾ, ಮಧುಸೂದನ. ಎಲ್ಲಾ ವಿಚಾರಗಳನ್ನು ಮೊದಲಾಗಿ ಆಲೋಚಿಸಿಯೇ ಈ ಜಾಗದಲ್ಲಿ ಉರುಳು ಹಾಕಿ ತೋರಿಸಿದೆ. ಈಗ ಇದನ್ನು ಇಲ್ಲಿಯೇ ಬಿಡೋಣ. ಈ ಕುರುಚಲು ಕಾಡು ನಿನ್ನ ಅಜ್ಜನವರಿಗೆ ಸೇರಿದ ಜಾಗ. ಊರಿನಲ್ಲಿ ಕಾಣಸಿಗುವ ಎಲ್ಲಾ ತರಹದ ಪಕ್ಷಿಗಳು ಮತ್ತು ಪುಟ್ಟ ಪ್ರಾಣಿಗಳು ಈ ಜಾಗದಲ್ಲೇ ವಾಸವಾಗಿವೆ. ಅಪರೂಪದಲ್ಲಿ ಈ ಜಾಗೆಯಲ್ಲಿ ನವಿಲುಗಳನ್ನು ಕೂಡಾ ನೋಡಿದ್ದೇನೆ. ಇಲ್ಲಿ ಬೇರೆಯವರು ಬಂದು ನಿನ್ನ ಉರುಳಿಗೆ ಸಿಕ್ಕಿದ ಪ್ರಾಣಿ ಪಕ್ಷಿಗಳನ್ನು ಅಪಹರಿಸುವಂತಿಲ್ಲ. ಈ ಜಾಗಕ್ಕೆ ಸದ್ಯಕ್ಕೆ ನೀನೇ ಅಧಿಪತಿ. ಈಗ ಆಲೋಚನೆ ಮಾಡಿ ಯಾವ ಬೇಟೆ ನಿನಗೆ ಬೇಕು ಎಂದು ತೀರ್ಮಾನ ಮಾಡು. ಆ ಬೇಟೆಗೆ ತಕ್ಕ ಆಹಾರ ತಂದು ಇಲ್ಲಿ ಚೆಲ್ಲು. ನಿನ್ನ ಕೆಲಸ ಆಯಿತು ಎಂತಲೇ ತಿಳಿದುಕೋ! " ಎಂದ. 

ಆಗಲೇ, ಸಾಯಂಕಾಲದ ಆರು ಗಂಟೆ ಆಗುತ್ತಿತ್ತು. ನಾನು ಮೊದಲು " ಗಿಳಿಗಳನ್ನೇ ಹಿಡಿಯಬೇಕು! " ಎಂದು ತೀರ್ಮಾನ ಮಾಡಿ, ಗಿಳಿಗಳಿಗೆ ಪ್ರಿಯವಾದ ಕೆಂಪು ಮೆಣಸಿನ ಕಾಯಿಗಳನ್ನು ನಮ್ಮ ತರಕಾರಿ ಹಿತ್ತಿಲಿನ ಮೆಣಸಿನ ಗಿಡಗಳಿಂದ ಒಂದು ಬೊಗಸೆ ಆಗುವಷ್ಟು ಸಂಗ್ರಹಿಸಿ, ನಮ್ಮ ಉರುಳಿನ ಮೇಲೆಲ್ಲಾ ಚೆಲ್ಲಿದೆ.  ಇದಾದ ನಂತರ ಶಂಭು ನನಗೆ " ನಾಳೆಯ ದಿನ ಆಗಾಗ ಬಂದು ಗಿಳಿಗಳಿಗೆ ಸಂಶಯ ಬರದ ರೀತಿಯಲ್ಲಿ ದೂರದಲ್ಲೇ ನಿಂತು ಉರುಳಿನ ಕಡೆಗೆ ನೋಡುತ್ತಿರು. ಗಿಳಿ ಇಲ್ಲಿ ಸಿಕ್ಕಿಬಿದ್ದಿದ್ದರೆ ನನ್ನನ್ನು ಕರೆ! " ಎಂದು ಹೇಳುತ್ತಾ ತನ್ನ ಮನೆಯ ಕಡೆಗೆ ಓಡಿದ. 
ನಾನು ನಮ್ಮ ಮನೆಗೆ ಮರಳಿದೆ.

ಮನೆಗೆ ಬಂದನಂತರ ನನಗೆ ಗಿಳಿಯದೇ ಧ್ಯಾನ! ಸಾಯಂಕಾಲದ ದೇವರ ಭಜನೆಯನ್ನು ‘ತಪ್ಪಾಗಿ ಹಾಡಿ’ ಅಂದು ನನ್ನ ಅಕ್ಕಂದಿರು ಮತ್ತು ಅಣ್ಣಂದಿರ ಅಪಹಾಸ್ಯಕ್ಕೆ ಗುರಿಯಾದೆ.  ನಮ್ಮ ಊರಿನ ಮರಕೆಲಸದ ಬಡಗಿ ಸುಬ್ರಾಯ ಆಚಾರಿಯನ್ನು ಕಾಡಿ ಮರುದಿನವೇ " ಒಂದು ಗಿಳಿಯ ಗೂಡು ಮಾಡಿಸಿಕೊಳ್ಳಬೇಕು! " ಎಂದು ತೀರ್ಮಾನ ಮಾಡಿದೆ. ಆ ರಾತ್ರಿಯ ಕನಸುಗಳಲ್ಲಿ, ಬಹು ಸುಂದರವಾದ ಕೆಂಪು ಕೊಕ್ಕಿನ ಗಿಳಿಯನ್ನು ಹಿಡಿದು ಅವುಗಳ ಲಾಲನೆ ಪಾಲನೆ ಮಾಡುತ್ತಾ, ಹಾಸಿಗೆಯಲ್ಲಿ ಹೊರಳಾಡಿದೆ.

ಬೆಳಗ್ಗೆ ಬಹು ಬೇಗನೇ ಎದ್ದು ಉರುಳನ್ನು ನೋಡಿಕೊಂಡು ಬಂದೆ. ಎಲ್ಲಾ ಸಮರ್ಪಕವಾಗೇ ಇದ್ದಿತು.  ಆ ಮುಂಜಾನೆ ಅಷ್ಟು ಬೇಗನೆ ಯಾವ ಹಕ್ಕಿಗಳೂ ಎದ್ದು ಉಲಿಯಲು ಶುರುಮಾಡಿರಲಿಲ್ಲ. " ಪಾಪ ನಾನು ಹಿಡಿಯಲಿರುವ ಗಿಳಿ ಸ್ವಲ್ಪ ಹೊತ್ತು ನಿದ್ರೆಮಾಡಿ, ಆ ಮೇಲೆ ಖಂಡಿತಾ ಮೆಣಸು ತಿನ್ನಲು ಉರುಳಿನ ಹತ್ತಿರ ಬಂದೇ ಬರುತ್ತದೆ! " ಎಂದುಕೊಳ್ಳುತ್ತಾ ಮನೆಗೆ ಮರಳಿ ಹಲ್ಲುಜ್ಜಿ ಮುಖ ತೊಳೆದೆ. 

ಅನಂತರ ಪದೇ ಪದೇ ನನ್ನ ಉರುಳನ್ನು ವೀಕ್ಷಿಸಿ ನಿರಾಸೆಯಿಂದ ಮರಳಿ ಬರುತ್ತಿದ್ದೆ. ಸಾಯಂಕಾಲವಾಯಿತು. ಶಂಭು ಆಡಲು ನಮ್ಮ ಮನೆಯ ಹತ್ತಿರ ಬಂದ. " ಗಿಳಿ ಬರಲೇ ಇಲ್ಲ! " ನನ್ನ ದುಃಖ ಅವನಲ್ಲಿ ತೋಡಿಕೊಂಡೆ. 

ಅದಕ್ಕವನು, " ಆ ಹಾಳಾದ ಗಿಳಿಗಳು ವೇಗವಾಗಿ ಇತ್ತನೋಡದೇ, ಹಾರುತ್ತಾ, ಎಲ್ಲೋ ದೂರದ ಊರುಗಳಿಗೆ ಹೋಗಿರಬಹುದು. ಅವುಗಳನ್ನು ಮರೆತು ಈಗ ಪಾರಿವಾಳಗಳನ್ನೇ ಹಿಡಿಯೋಣ. ಸ್ವಲ್ಪ ಭತ್ತ ತಂದು ಉರುಳಿನ ಹತ್ತಿರ ಚೆಲ್ಲು! " ಎಂದ. ನಾನು ಅಂತೆಯೇ ಮಾಡಿದೆ. 

ಆದರೆ,  ಮರು ದಿನವೂ ಆದದ್ದು ನಿರಾಸೆ!  ಅಂದಿನ ಸಾಯಂಕಾಲ ಶಂಭು ಮತ್ತು ನಾನು ಉರುಳಿನ ಬಳಿಗೆ ಹೋಗಿ ನೋಡುತ್ತೇವೆ!  ಭತ್ತದ ಕಾಳುಗಳನ್ನು ಇರುವೆಗಳು ಹೊರುತ್ತಿದ್ದುವು! " ಇವುಗಳ ಮನೆ ಹಾಳಾಗ! ಇವು ಎಷ್ಟು ಭತ್ತ ಅವು ಹೊತ್ತಾವು? ಇನ್ನೂ ಸ್ವಲ್ಪ ತಂದು ಚೆಲ್ಲೋಣ! ನಾಳೆ ಪಾರಿವಾಳ ಅಲ್ಲದಿದ್ದರೆ ನವಿಲೇ ಬೀಳಬಹುದು! " ಎಂದ ಶಂಭು. 

ನಾನು ಯಾರಿಗೂ ಗೊತ್ತಾಗದ ರೀತಿಯಲ್ಲಿ ನಮ್ಮ ಮನೆಯ ಹಟ್ಟಿಯ ಪಕ್ಕದಲ್ಲಿದ್ದ ಕಣಜದಿಂದ ಒಂದು ಅರ್ಧ ಸೇರಿನಷ್ಟು ಭತ್ತವನ್ನು ನನ್ನ ಅಂಗಿಯ ಮುಂದಲೆಯಲ್ಲಿ ಹಾಕಿಕೊಂಡು ಬಂದು ಅಲ್ಲಿ ಚೆಲ್ಲಿದೆ. ಆದರೆ, ಮರುದಿನವೂ ಆದದ್ದು ನಿರಾಸೆಯೇ!  ಆ ಸಂಜೆಗೆ ಸಾಕಷ್ಟು ಭತ್ತದ ಕಾಳುಗಳನ್ನು ಇರುವೆಗಳು ಹೊತ್ತರೂ, ಇನ್ನಷ್ಟು ಉಳಿದಿದ್ದುವು. 

ಶಂಭು ಅಂದ " ಈ ನವಿಲು ಪಾರಿವಾಳಗಳನ್ನು ಮಾತ್ರ ನಂಬಬಾರದು! ಮೊಲಗಳಿಗೆ ಏನು ನಮ್ಮಲ್ಲಿ ಬರವೇ?  ಬೇಗ ಬೇಗನೆ ಸ್ವಲ್ಪ ಎಳೇ ಗರಿಕೆ ಹುಲ್ಲು ಕಿತ್ತು ಕೊಂಡು ಬರೋಣ! ಸುತ್ತಲೂ ಚೆಲ್ಲಿದರೆ ಈ ರಾತ್ರಿ ಮೊಲ ಸಿಗುವುದು ಮಾತ್ರ ಖಂಡಿತಾ. ಏಕೆಂದರೆ ಮೊಲಕ್ಕೆ ಎಳೇ ಗರಿಕೆ ಹುಲ್ಲೆಂದರೆ ಬಹಳ ಪ್ರೀತಿ! " ಎಂದ. ನಾವು ನೀರಿನ ತೋಡಿನ ಬಳಿ ಬೆಳೆದ ಗರಿಕೆ ಹುಲ್ಲು ಕಿತ್ತು ಅಲ್ಲೆಲ್ಲಾ ಹರಡಿ ನಮ್ಮ ಮನೆಗಳಿಗೆ ಹಿಂತಿರುಗಿ ಹೋದೆವು. 

ಆ ರಾತ್ರಿ ಹುಣ್ಣಿಮೆ! ಕಿಟಿಕಿಯಿಂದ ಪೂರ್ಣ ಚಂದ್ರ ಕಾಣಿಸುತ್ತಿದ್ದ. ಚಂದ್ರನ ಮೇಲಿನ ಮೊಲವನ್ನು ಕಂಡು, ಚಂದ್ರನಿಗೆ ಹೇಳಿದೆ " ನೋಡು ಚಂದ್ರ ಮಾಮಾ, ದೇವರ ದಯವಿದ್ದರೆ,  ನಾಳೆ ನಿನಗೆ ನನ್ನ ಮೊಲವನ್ನೂ ತೋರಿಸುತ್ತೇನೆ! " ಎಂದು.

ಮರುದಿನ ಬೆಳಗ್ಗೆ ಎಂದಿನಂತೆ ನಿರಾಸೆ! ಮೊಲ ರಾತ್ರಿ ನಮ್ಮ ಉರುಳಿನ ಬಳಿಗೆ ಬಂದಿರಲೇ ಇಲ್ಲ! ಈ ನಿರಾಸೆಗಳ ಜತೆಗೆ ಇನ್ನೊಂದು ದೊಡ್ಡ ನಿರಾಸೆ ಕಾದಿತ್ತು.

ಬೆಳಗ್ಗೆ ಹನ್ನೊಂದರ ಸಮಯಕ್ಕೆ ಶಂಭು ನಮ್ಮ ಮನೆಗೆ ಬಂದ. ನಾಸಿಕದಿಂದ ಆತನ ತಂದೆ ಬಂದಿದ್ದರು. ಆತನ ತಾಯಿಗೆ ಸೌಖ್ಯವಿಲ್ಲವಂತೆ!  ತನ್ನ ಒಬ್ಬನೇ ಮಗ ದೂರವಿರುವುದು ಆಕೆಗೆ ಸಹ್ಯವಾಗುತ್ತಿಲ್ಲವಂತೆ!ಅದಕ್ಕೋಸ್ಕರ ಆತನನ್ನು ಕರೆದೊಯ್ಯಲು ಬಂದಿದ್ದರು!

ಅದೇ ದಿನ ನನ್ನ ಪ್ರೀತಿಯ ಗೆಳೆಯ ಶಂಭುವು ತನ್ನ ತಂದೆಯೊಡನೆ ಮಂಗಳೂರಿನಿಂದ ಹೊರಡುವ ‘ಸಬರ್ಮತಿ’ ಎಂಬ ಸಿಂಧಿಯಾ ಸ್ಟೀಮ್ ಶಿಪ್ ಕಂಪೆನಿಯ ಹಡಗಿನಲ್ಲಿ ಬೊಂಬಾಯಿಯ ಮಾರ್ಗವಾಗಿ ನಾಸಿಕಕ್ಕೆ ಹೊರಟಿದ್ದ." ಮಧುಸೂದನ, ನಮ್ಮ ಉರುಳಿನ ಸಹಾಯದಿಂದ ಇಂದಲ್ಲ ನಾಳೆ ನೀನು ನಿನಗೆ ಬೇಕಾದ ಪ್ರಾಣಿ ಪಕ್ಷಿಗಳನ್ನು ಖಂಡಿತವಾಗಿ ಹಿಡಿಯುತ್ತಿ! ಅವನ್ನು ಚೆನ್ನಾಗಿ ಸಾಕಿಕೋ! ಯಾವತ್ತಾದರೊಂದು ದಿನ ನಾವು ಪುನಃ ಸಿಗೋಣ! " ಎಂದ ಶಂಭು ಕಣ್ಣಿನಲ್ಲಿ ನೀರು ಸುರಿಸುತ್ತಾ. ನಾನು ಕೂಡಾ ಗದ್ಗದಿತನಾಗಿ ಆತನನ್ನು ಬೀಳ್ಕೊಂಡೆ. 

ಆ ದಿನ ಮಧ್ಯಾಹ್ನ ತಿರುಗಿ ನಮ್ಮ ಉರುಳಿನ ಹತ್ತಿರಕ್ಕೆ ಹೋದೆ. ನಮ್ಮ ಉರುಳಿನ ಸುತ್ತ ನಾವು ಹಿಡಿಯ ಬಯಸುತ್ತಿದ್ದ ಎಲ್ಲಾ ತರಹದ ಪ್ರಾಣಿ ಪಕ್ಷಿಗಳಿಗೆ ಪ್ರಿಯವಾದ ಎಲ್ಲಾ ತರಹದ ಆಹಾರಗಳು ಯತೇಚ್ಛವಾಗಿ ಚೆಲ್ಲಿಕೊಂಡಿದ್ದುವು. ಆದರೆ ಯಾವ ಬೇಟೆಯೂ ನಮ್ಮ ಉರುಳಿಗೆ ಸಿಕ್ಕಿರಲಿಲ್ಲ.

ಆ ದಿನ ನನ್ನನ್ನು ಸಮಾಧಾನ ಪಡಿಸಲು ನನ್ನ ಪ್ರಾಣ ಮಿತ್ರ ಶಂಭುವೂ ಇರಲಿಲ್ಲ! ನಾನು ಆ ಸಾಯಂಕಾಲ ಬೇಸರ ಕಳೆಯುವುದಕ್ಕಾಗಿ ನಮ್ಮ ಉರುಳಿನ ಹತ್ತಿರ ನಿರಾಶೆಯಿಂದಲೇ ಹೋದೆ. ಅಲ್ಲಿ ನನಗೆ ಆಶ್ಚರ್ಯ ಕಾದಿತ್ತು! 

ಒಂದು ದೊಡ್ಡ ಪಕ್ಷಿ ನಮ್ಮ ಉರುಳಿಗೆ ಸಿಕ್ಕಿ ಬಿಡಿಸಿಕೊಳ್ಳಲು ಹೆಣಗುತ್ತಿತ್ತು! ನನ್ನ ಎದೆ ಉದ್ವೇಗದಿಂದ ನನ್ನ ಶರ್ಟಿನ ಗುಂಡಿಗಳು ಬಿಚ್ಚಿಕೊಳ್ಳುವಂತೆ ಹೊಡೆದುಕೊಳ್ಳುತ್ತಾ ಇತ್ತು!
ಸ್ವಲ್ಪ ಹತ್ತಿರ ಹೋಗಿ ಪರೀಕ್ಷಿಸಿ ನೋಡಿದೆ! ನಮ್ಮ ಉರುಳಿನಲ್ಲಿ ಸಿಕ್ಕಿ ಬಿದ್ದುದು ನಾವು ಹಿಡಿಯ ಬಯಸಿದ ಬೇಟೆ ಅಲ್ಲ!  ಅದು ನಮ್ಮ ಪಕ್ಕದ ಜಮೀನಿನ ಐತು ಶೆಟ್ಟಿಯ ಕೋಳಿ! ಅದರ ಹೆಸರು ‘ ಮೈರ ’. 

ಮೈರ ಒಂದು ಬಲವಾದ " ಕೋಳಿಕಟ್ಟದ ವೀರ ಹುಂಜ ". ಅದು ಐತು ಶೆಟ್ಟಿಯ ಬಗಲೇರಿ, ಹಲವು ಹಳ್ಳಿಗಳ ಕೋಳಿ ಪಂದ್ಯಗಳಿಗೆ ಹೋಗಿ, ಸೆಣೆಸಿ, ಪಂದ್ಯಗಳಲ್ಲಿ ವಿಜಯಿಯಾಗಿ ಐತುವಿಗೆ ಹಲವಾರು ಕೋಳಿಗಳ ಹೆಣಗಳನ್ನು ಉಡುಗೊರೆಯಾಗಿ ತಂದಿತ್ತು. ಈ ಕೋಳಿಯ ಪರಾಕ್ರಮದಿಂದ ಆತ ಕೋಳಿ ಪಂದ್ಯಗಳಲ್ಲಿ " ಬಾಜಿ " ಕಟ್ಟಿ ನೂರಾರು ರೂಪಾಯಿಗಳನ್ನು ಸಂಪಾದಿಸಿದ್ದನಂತೆ! 

ಐತು ಶೆಟ್ಟಿಯು ಈ ಹುಂಜ ಕೋಳಿಯನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನಂತೆ! ಅದಕ್ಕೆ ದಿನಾ ಕುಚ್ಚಿಲು ಅಕ್ಕಿಯ ಅರೆಬೆಂದ ‘ ಮುಗುಳನ್ನ ’ ಮಾಡಿ,  ಅದಕ್ಕೆ ಹಸನಾದ ಬೆಣ್ಣೆಯನ್ನು ಬೆರೆಸಿ, ದಿನಾ ಮುಂಜಾನೆ ತಾನೇ ಕಯ್ಯಾರೆ ತಿನ್ನಿಸುತ್ತಿದ್ದನಂತೆ! ಈ ಧಾಂಡಿಗ ಕೋಳಿ ತುಂಬಾ ದಷ್ಟ ಪುಷ್ಟವಾಗಿ ಬೆಳೆದು ಊರಿನ ಎಲ್ಲಾ ಮನೆಗಳ ಅಂಗಳಗಳನ್ನು ಸುತ್ತಿ ಪಾರುಪತ್ಯ ಮಾಡುತ್ತಿತ್ತು. 

ಈ ಕೋಳಿಯ ಉಪಟಳ ತಾಳದೆ, ಯಾರಾದರೂ ಅಕ್ಕ ಪಕ್ಕದ ಮನೆಗಳವರು ಅದನ್ನು ಕಲ್ಲೆಸೆದು ಓಡಿಸಿದ್ದು ಗೊತ್ತಾದರೆ, ಐತು ಶೆಟ್ಟಿಯು ಅಂಥವರ ಮೇಲೆ ಯುದ್ಧಸಾರಿ ಅವರನ್ನು ಹಿಗ್ಗಾ ಮುಗ್ಗ ಹೊಡೆದೇ ಬಿಡುತ್ತಿದ್ದನಂತೆ! 

ಒಂದು ಸಾರಿ ಇದೇ ಕೋಳಿಯು ನಮ್ಮ ಅಜ್ಜಿ ತಯಾರಿಸಿ ಒಣಗಲು ಹಾಕಿದ್ದ ಸಂಡಿಗೆಗಳನ್ನು ಮೆಲ್ಲಲು ಬಂದಿತ್ತು. ಅಜ್ಜಿಯವರು ನನ್ನನ್ನು ಆ ದಿನ ಒಂದು ತಟ್ಟೆಯಲ್ಲಿ ಬೆಲ್ಲ ಮತ್ತು ನೆಲಗಡಲೆ ಹಾಕಿ ತಿನ್ನಲು ಕೊಟ್ಟು ‘ ಸಂಡಿಗೆ ಕಾಯುವ ಡ್ಯೂಟಿಗೆ ’ ಹಚ್ಚಿದ್ದರು. ಈ ದುಷ್ಟ ‘ ಮೈರ ಕೋಳಿ ’ ಸಂಡಿಗೆ ರುಚಿನೋಡಲು ಬಂದಾಗ, ನಾನು ಅದನ್ನು " ಶು! ಶೂ! " ಎನ್ನುತ್ತಾ ಓಡಿಸಲು ಹೋದೆ. ಅದು ನನಗೆ ಹೆದರದೆ ತಿರುಗಿ ನಿಂತು, ತನ್ನ ಕೆಂಪು ಕಣ್ಣುಗಳನ್ನು ತಿರುವುತ್ತಾ "ಖೊಕ್, ಕೊಖ್ " ಎಂದು ತನ್ನ ಹಳದಿ ಬಣ್ಣದ ಕೊಕ್ಕುಗಳಿಂದ ನನ್ನನ್ನು ಕುಕ್ಕಲು ಬಂದಿತ್ತು. ಸಾಲದ್ದಕ್ಕೆ ಅದು ಅದರ ಭಯಂಕರವಾದ ಹಳದಿ ಬಣ್ಣದ ಕಾಲುಗಳಲ್ಲಿನ ‘ನಖಗಳನ್ನು’ ತೋರಿಸುತ್ತಾ ನನ್ನನ್ನು ಪರಚಲು ನನ್ನೆಡೆಗೆ ಹಾರಿ ಬಂದಿತ್ತು. ತನ್ನ ಬಲವಾದ ರೆಕ್ಕೆಗಳನ್ನು ಬೀಸಿ ನನಗೆ ಹೊಡೆಯಲು ಕೂಡಾ ಬಂದಿತ್ತು!

ನಾನು ಬಹಳ ‘ಬುದ್ಧಿವಂತ ’ ಹುಡುಗನಾದುದರಿಂದ, ಅದನ್ನು ಎದುರಿಸದೇ ‘ಪಲಾಯನ ಸೂತ್ರ ’ ಪಠಿಸಿ, ಅದರ ಭಯಂಕರ ಧಾಳಿಯಿಂದ ಬಚಾವ್  ಆಗಿದ್ದೆ. 

ಈಗ ಅದೇ ‘ ಮಹಾ ಕೋಳಿ ’ ನನ್ನ ಉರುಳಿಗೆ ಸಿಕ್ಕಿ ಒದ್ದಾಡುತ್ತಿದೆ! ಬಿಲ್ಲಿನ ಹಗ್ಗ ಸೆಟೆದು ಕೊಂಡು ಅದು ನೆಲದಿಂದ ಆರು ಇಂಚು ಮೇಲೆ ಕುತ್ತಿಗೆಗೆ ಹಗ್ಗ ಬಿಗಿದು ಒದ್ದಾಡುತ್ತಿದೆ. ತನ್ನನ್ನು ಕಾಪಾಡಿಕೊಳ್ಳಲು ನಾವು ಬಿಲ್ಲು ಕಟ್ಟಿದ ಕುರುಚಲು ಪೊದೆಯ ಒಂದು ರೆಂಬೆಯ ಮೇಲೆ ತನ್ನ ಕಾಲುಗಳನ್ನು ಊರಿಕೊಂಡು ‘ತ್ರಿಶಂಕು ಸ್ವರ್ಗ’ದ ಸುಖವನ್ನು ಅನುಭವಿಸುತ್ತಿದೆ! 

ಒಮ್ಮೆ ಅದು ಹೀಗೆಯೆ ಉರುಳಿಗೆ ಸಿಕ್ಕಿ " ಸತ್ತೇ ಹೋಗಬೇಕು! " ಅಂತ ಅನ್ನಿಸಿದರೂ, ಐತು ಶೆಟ್ಟಿಯ ನೆನಪು ಬಂದೊಡನೆ, ಅದಕ್ಕೆ ಕೆಟ್ಟದ್ದನ್ನು ಬಯಸುವ ವಿಚಾರವೇ ನನ್ನ ಮನಸ್ಸಿನಿಂದ ದೂರವಾಯಿತು." ಅಯ್ಯೋ! ಅದನ್ನು ಹೇಗಾದರೂ ಬಿಡಿಸಬೇಕು! " ಎಂದು ಹತ್ತಿರ ಹೋದರೆ, ಆ ಕೃತಘ್ನ ಕೋಳಿ ತನ್ನ ರೆಕ್ಕೆಗಳನ್ನು ಬೀಸಿ ನನಗೆ ಹೊಡೆಯಲು ಹವಣಿಸುತ್ತಿತ್ತು!

ಈ ಕೋಳಿ ನನ್ನ ಉರುಳಿಗೆ ಸಿಕ್ಕಿದ ವಿಚಾರ ನಮ್ಮ ಊರಿನ ಪೋಲಿ ಐತು ಶೆಟ್ಟಿಗೆ ಗೊತ್ತಾದರೆ, ಅವನು ನನ್ನನ್ನು ಜೀವಸಹಿತ ಬಿಡಲಾರ! ನಾನು ಏನಾದರೂ ಮಾಡಿ ಈ ಕೆಟ್ಟ ಕೋಳಿಯನ್ನು ಕೂಡಲೇ ಬಿಡುಗಡೆ ಮಾಡಬೇಕಿತ್ತು! ಅದು ಉರುಳಿಗೆ ಸಿಕ್ಕಿದ ವಿಚಾರ ಯಾರಿಗೂ ತಿಳಿಸುವಂತಿಲ್ಲ! ನಮ್ಮ ಉರುಳಿನ ಸಂಗತಿ ನನಗೆ ಮತ್ತು ಶಂಭುಗೆ ಮಾತ್ರ ಗೊತ್ತು. 

ಆತ ಈಗ ಹಡಗಿನಲ್ಲಿ ಕುಳಿತು ಸ್ವರ್ಗ ಸುಖ ಅನುಭವಿಸುತ್ತಾ ಬೊಂಬಾಯಿಗೆ ಹೋಗುತ್ತಿದ್ದಾನೆ! ನಾನು ಯಾರನ್ನು ಸಹಾಯಕ್ಕೆ ಕರೆಯಲಿ?  ನನ್ನ ಉರುಳು ಶಿಕಾರಿಯ ಗುಟ್ಟು ಎಂದಿಗೂ ಐತು ಶೆಟ್ಟಿಗೆ ಗೊತ್ತಾಗಬಾರದು!

ಸುಬ್ರಹ್ಮಣ್ಯಕ್ಕೆ ಹೋಗಿದ್ದಾಗನನಗೆ ಧಾರಾಕಾರವಾಗಿ ಕಣ್ಣಲ್ಲಿ ನೀರು ಬರಲು ಶುರುವಾಯಿತು. " ಈ ಕೋಳಿ ಒಮ್ಮೆ ಈ ಉರುಳಿನಿಂದ ತಪ್ಪಿಸಿ ಕೊಂಡರೆ ಸಾಕು! " ಎಂದು ದೇವರಲ್ಲಿ ಮೊರೆ ಇಟ್ಟೆ. ಆದರೆ, ಅದೇ ದೇವರು ಬಹಳ ದಿನಗಳಿಂದ ‘ ನನ್ನ ಆರ್ತ ಪ್ರಾರ್ಥನೆಗಳನ್ನು  ಕೇಳಿ ’ ಇಂದು ನನಗೆ ಬೇಟೆ ಕರುಣಿಸಿದ್ದ!  ಈಗ ಅವನು ಆ ಬೇಟೆಯನ್ನು ಹೇಗೆ ತಪ್ಪಿಸಿಕೊಂಡು ಹೋಗಲು ಬಿಟ್ಟಾನು? ದೇವರನ್ನು ಹೀಗೆ ಸುಖಾಸುಮ್ಮನೆ ದಣಿಸಲು ನಾನು ಎಷ್ಟರವನು?

ಆದ್ದರಿಂದ, " ಈಗ ದೇವರು ಖಂಡಿತಾ ನನ್ನ ಸಹಾಯಕ್ಕೆ ಬರುವುದಿಲ್ಲ! " ಎಂದು ಕೊಳ್ಳುತ್ತಾ,  " ಬೇರೆ ಏನಾದರೂ ಉಪಾಯ ತೋಚುವುದೇ? " ಎಂದು ಆಲೋಚಿಸಹತ್ತಿದೆ.

ಕೊನೆಗೂ ಹೊಳೆಯಿತು ಒಂದು ಉಪಾಯ!

ಒಂದೇ ಓಟಕ್ಕೆ ಮನೆಗೆ ಓಡಿ ನನ್ನ ಅಕ್ಕನ ಕಸೂತಿ ಪೆಟ್ಟಿಗೆಯಿಂದ ಅವಳ ದೊಡ್ಡ ಕತ್ತರಿಯೊಂದನ್ನು ಲಪಟಾಯಿಸಿ ತಂದೆ. ಉರುಳಿನ ಛಾಪಕ್ಕೆ ನಾವು ಬಗ್ಗಿಸಿದ ಪೊದೆಯ ಹಿಂಬದಿಯಿಂದ ಹೇಗೋ ನುಸುಳಿ ಉರುಳಿನ ಮೇಲ್ಭಾಗದ ಹಗ್ಗವನ್ನು ಕೋಳಿಯ ಕೊಕ್ಕಿನಿಂದ ಸಾಕಷ್ಟು ದೂರದಲ್ಲಿ ಕತ್ತರಿಸಿ ಬಿಟ್ಟೆ.  ಕೊನೆಗೂ, ಸಿಕ್ಕು ಬಿದ್ದಿದ್ದ ಕುಕ್ಕುಟ ವೀರನನ್ನು ಬಿಡುಗಡೆ ಮಾಡಿದೆ!

ಆ ಹುಂಜ ಕೋಳಿ ಸಂತೋಷದಿಂದ ಅರಚುತ್ತಾ ಐತು ಮನೆಯ ಕಡೆಗೆ ಓಡಿಯೇ ಹೋಯಿತು. ನನ್ನ ಪುಣ್ಯಕ್ಕೆ " ನನ್ನ ಮೇಲೆ ಧಾಳಿಮಾಡಲಿಲ್ಲವಲ್ಲಾ! " ಎಂದು ಅದಕ್ಕೆ ನಾನು ಮನದಲ್ಲೇ ವಂದಿಸಿದೆ! ಆದರೆ ಒಂದು ಅಚಾತುರ್ಯವಾಗಿತ್ತು! ಹಗ್ಗದ ಉರುಳಿನ ಭಾಗ ಮೈರನ ಕೊರಳಿನಲ್ಲೇ ಉಳಿದಿತ್ತು! ಅದನ್ನು ಬಿಡಿಸಿ ತೆಗೆಯಲು ನನ್ನಿಂದ ಸಾಧ್ಯವೇ ಇರಲಿಲ್ಲ. 

ಈಗ ಐತು ಆ ಹಗ್ಗದ ಮೂಲವನ್ನು ಪತ್ತೆ ಮಾಡಿದರೆ? ಅದಕ್ಕೂ ಒಂದು ಉಪಾಯ ಹೊಳೆಯಿತು.  ಈಗ ನಾನು ನಮ್ಮ ಉರುಳಿನ ಅಸ್ತಿತ್ವದ ಬಗ್ಯೆ ಏನೂ ಸಾಕ್ಷಿ ಉಳಿಸಬಾರದು!

ಕೂಡಲೇ, ನಮ್ಮ ಉರುಳಿನ ಎಲ್ಲಾ ಪರಿಕರಗಳನ್ನು ಕಷ್ಟಪಟ್ಟು ಬಿಚ್ಚಿದೆ. ಪ್ರಯಾಸದಿಂದ ಉಳಿದ ದಾರದ ತುಂಡನ್ನು ಹಿಡಿದು ಚಾಫು ಕಟ್ಟಿದ ಕಾಡು ಗಿಡದ ಗೆಲ್ಲನ್ನು ಪ್ರಯಾಸದಿಂದ ಬಗ್ಗಿಸಿ, ಆ ದಾರದ ತುಂಡನ್ನು ಕೂಡಾ ಬಿಚ್ಚಿದೆ.  ಅಲ್ಲಿ ನಾವು ತಂದು ಹಾಕಿದ್ದ ಸಕಲ ಬಗೆಯ ಪ್ರಾಣಿ ಪಕ್ಶಿಗಳಿಗೆ ಪ್ರಿಯವಾದ ಆಹಾರಗಳ ಸುಳಿವೇ ಕಾಣದಂತೆ, ಅವನ್ನು ಕಾಲಿನಿಂದ ಚಲ್ಲಾ ಪಿಲ್ಲಿಯಾಗಿಸಿದೆ. 

ನಾವು ಉರುಳು ಒಡ್ಡಲು ಉಪಯೋಗಿಸಿದ ಎಲ್ಲ ವಸ್ತುಗಳನ್ನೂ ಒಟ್ಟು ಸೇರಿಸಿ ನನ್ನ ಚಡ್ಡಿಯ ಜೇಬಿಗೆ ಸೇರಿಸಿಕೊಂಡೆ. ಮನೆಗೆ ಬಂದು ಅವನ್ನೆಲ್ಲಾ ನಮ್ಮ ಮನೆಯ ಬಚ್ಚಲಿನ ಒಲೆಗೆ ಹಾಕಿ ಸುಟ್ಟು ಬಿಟ್ಟೆ!  ಅಕ್ಕನ ಕತ್ತರಿಯನ್ನು ಸ್ವಸ್ಥಾನ ಸೇರಿಸುವುದು ಕಷ್ಟವಾಗಲಿಲ್ಲ.

ನನ್ನ ಮೈ ಸಂಪೂರ್ಣ ಬೆವರಿ ಒದ್ದೆಯಾಗಿತ್ತು. ಕೈಕಾಲು ತೊಳೆದುಕೊಂಡು, ನನ್ನ ಸ್ನಾನದ ಟವೆಲಿನಿಂದ ಮೈ ಚೆನ್ನಾಗಿ ಒರೆಸಿ ಕೊಂಡೆ. " ದೇವರೇ! ಇನ್ನೆಂದಿಗೂ ಉರುಳು ಇರಿಸುವ ಸಾಹಸ ಮಾಡುವುದಿಲ್ಲ. ಇದೊಂದು ಸಲಕ್ಕೆ ನನ್ನನ್ನು ಉಳಿಸಿಬಿಡು! " ಎಂದು ದೇವರನ್ನು ಪ್ರಾರ್ಥಿಸಿದೆ.

ಸಧ್ಯ, ದೇವರು ಕರುಣೆ ತೋರಿಸಿಯೇ ಬಿಟ್ಟ!

ಮರುದಿನ ನಮ್ಮ ಕೆಲಸದ ನಾಗು ಗೌಡನಿಂದ ಹಿಂದಿನ ದಿನ ಸಂಜೆ ನಡೆದ ಗಲಾಟೆಯ ಸಂಗತಿ ತಿಳಿಯಿತು. ಅದೇನೆಂದರೆ, ಐತು ಶೆಟ್ಟಿಯು ತನ್ನ ಕೋಳಿ ಪಂದ್ಯದ ‘ ಹಳೇ ದ್ವೇಷಿ’ಯಾದ ಕೊರಗ ಪೂಜಾರಿಯ ಮನೆಗೆ ಹೋಗಿ ಆತನನ್ನು ಹಿಗ್ಗಾ ಮುಗ್ಗ ಬಡಿದು " ಇನ್ನೊಮ್ಮೆ ನನ್ನ ಮೈರನನ್ನು ಉರುಳು ಇಕ್ಕಿ ಹಿಡಿಯಲು ಪ್ರಯತ್ನಿಸಿದರೆ, ನಿನ್ನನ್ನು ಕೊಂದುಹಾಕುವೆ!  ಜೈಲು ಸೇರಿದರೂ ಪರವಾಗಿಲ್ಲಾ! " ಎಂದು ಕೂಗಾಡಿದನಂತೆ. 

" ನನ್ನನ್ನು ಕಾಪಾಡಿದ ದೇವರು ಏಷ್ಟು ದಯಾಮಯನು! " ಎಂದು ಗುಟ್ಟಿನಲ್ಲಿ ದೇವರಿಗೆ ಕೈಮುಗಿದೆ. ನನ್ನಿಂದಾಗಿ ನಿರಪರಾಧಿಯಾದ ಕೊರಗ ಪೂಜಾರಿ ಪೆಟ್ಟು ತಿಂದ, ಸಹಸ್ರನಾಮವನ್ನೂ ಕೇಳಿದ! ಇದಕ್ಕೆ ಹೊಣೆ ನಾನು!  ಆದರೆ, ನನ್ನ ತಪ್ಪಿಗೆ ಕ್ಷಮೆ ಕೇಳುವ ಧೈರ್ಯ ನನಗಿರಲಿಲ್ಲ. 

ಇಂದು ಆ ಐತು ಶೆಟ್ಟಿ ಮತ್ತು ಕೊರಗ ಪೂಜಾರಿ ಇಬ್ಬರೂ ಜೀವಂತ ಇಲ್ಲ. 

ಎಂದಾದರೊಂದು ದಿನ ನಾನು ಸತ್ತು ‘ ನರಕಕ್ಕೆ ’ ( ಸ್ವರ್ಗಕ್ಕೆ ನನ್ನಂತಹರಿಗೆ ಪ್ರವೇಶ ಕೊಡುವುದಿಲ್ಲ! ) ಹೋದಾಗ ಅಲ್ಲಿ ‘ ಕೋಳಿ ಪಂದ್ಯ’ ನಡೆಯುವ ತಾವಿಗೆ ಹೋಗುತ್ತೇನೆ. ಅಲ್ಲಿ ಖಂಡಿತವಾಗಿ ಐತು ಶೆಟ್ಟಿ ಮತ್ತು ಕೊರಗ ಪೂಜಾರಿ ಸಿಕ್ಕೇ ಸಿಗುತ್ತಾರೆ. ಅವರಿಬ್ಬರಿಗೂ ಒಂದೊಂದು ಸಿಂಗಲ್ ಚಹಾ ಕುಡಿಸಿ, ನಾನು ನಿಜ ಸಂಗತಿಯನ್ನು ಅವರಿಗೆ ಹೇಳಿ, ನಾನು ಅವರಿಬ್ಬರ  ಕ್ಷಮೆ ಯಾಚಿಸಿ  ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ".



- ಮಧುಸೂದನ ಪೆಜತ್ತಾಯ.



 ಸುಲಲಿತ ಪ್ರಬಂಧದ ಶೈಲಿಯಲ್ಲಿ ಜೀವನಾನುಭವವನ್ನ ವಿವರಿಸುವ ಕನ್ನಡದದ ಅಪರೂಪದ ಲೇಖಕರಲ್ಲಿ ಒಬ್ಬರು ಮಧುಸೂದನ ಪೆಜತ್ತಾಯರು. ವಾಸ್ತವದಲ್ಲಿ ಕೃಷಿಕರಾಗಿರುವ ಅವರು ಸಾಹಿತ್ಯ ಕೃಷಿಗೆ ಇಳಿದದ್ದು ತೀರ ಇತ್ತೀಚಿಗೆ. ಅಂತರ್ಜಾಲದ ಸಾಹಿತ್ಯಿಕ ಪತ್ರಿಕೆಯಾಗಿದ್ದ "ಕೆಂಡಸಂಪಿಗೆ"ಗೆ ನಿಯಮಿತವಾಗಿ ಅಂಕಣ ಬರೆಯುವುದರ ಮೂಲಕ. ಅನಂತರ ತಮ್ಮ ಕೃಷಿ ಅನುಭವಗಳನ್ನ ಸತತವಾಗಿ 'ದಟ್ಸ್ ಕನ್ನಡ' 'ಕನ್ನಡ ಕಲಿ' 'ಕನ್ನಡ ಧ್ವನಿ' ಹಾಗೂ 'ಜಗಲಿ' ಅಂತರ್ಜಾಲ ಪುಟಗಳಿಗೂ ಬರೆದಿದ್ದರೆ. 'ವಿಜಯ ಕರ್ನಾಟಕ' ಹಾಗೂ ಕೃಷಿಕರ ಪತ್ರಿಕೆಯಾದ 'ಅಡಿಕೆ ಪತ್ರಿಕೆಗೂ' ನಿರಂತರವಾಗಿ ಬರೆದಿದ್ದಾರೆ.


ರಾಯಚೂರಿನ ಗಂಗಾವತಿ ಬಳಿಯ ಸಿಂಡಿಕೇಟ್ ಬ್ಯಾಂಕಿನ 'ತುಂಗಭದ್ರಾ ಫಾರ್ಮ್"ನ ವ್ಯವಸ್ಥಾಪಕರಾಗಿದ್ದ ಕಾಲದಿಂದ ಹಿಡಿದು ಈಗ ತಮ್ಮ ಸ್ವಂತದ ಕಳಸ ಬಳಿಯ ಬಾಳೆಹೊಳೆಯ 'ಸುಳಿಮನೆ ಎಸ್ಟೇಟ್'ನ ಕೃಷಿ ಚಟುವಟಿಕೆ ಹಾಗೂ ಅದರ ನೋವು ನಲಿವುಗಳ ಕುರಿತ ಅವರ ಬರಹಗಳು ಮಲೆನಾಡಿನ ಕುರಿತ ಅವರ ನಿಖರ ಗ್ರಹಿಕೆಯನ್ನ ಓದುಗರ ಮುಂದೆ ತೆರೆದಿಡುತ್ತವೆ. ಕನ್ನಡದ ಮಟ್ಟಿಗೆ ಕುವೆಂಪು, ಕಾಕೆಮಾನಿ, ಕೆದಂಬಾಡಿ ಜತ್ತಪ್ಪ ರೈ, ಕೋಟ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಬಿಳುಮನೆ ರಾಮದಾಸ್, ಗಿರಿಮನೆ ಶ್ಯಾಮರಾವ್, ಕಲ್ಕುಳಿ ವಿಠ್ಠಲ ಹೆಗ್ಗಡೆ, ಕಡಿದಾಳು ಶಾಮಣ್ಣ, ಡಾ ನಾ ಡಿ'ಸೋಝಾ ಹಾಗೂ ನಾಗೇಶ ಹೆಗಡೆಯವರ ಪರಿಸರ ಪ್ರೇಮಿ ಬರಹಗಳು ಕೊಡುವ ಸುಖಾನುಭವವನ್ನೆ ಪೆಜತ್ತಾಯರ ಕೃತಿಗಳ ಓದು ಸಹ ನೀಡುತ್ತದೆ.

"ನಮ್ಮ ರಕ್ಷ್ಗಕ ರಕ್ಷಾ" "ರೈತನಾಗುವ ಹಾದಿಯಲ್ಲಿ" "ಕಾಗದದ ದೋಣಿ ಯಾನ ೧ ಹಾಗೂ ೨" ಈ ವರೆಗಿನ ಅವರ ಪ್ರಕಟಿತ ಕೃತಿಗಳು. "ಕಾಗದದ ದೋಣಿ" ಅವರ ಬಾಲ್ಯದ ಅನುಭವಗಳು ಹಾಗೂ ಅವರ ಕೃಷಿ ಸಾಹಸಗಳ ಶಿರೂರು, ಗಂಗಾವತಿ ಹಾಗೂ ಸುಳಿಮನೆಗಳ ಕೇಂದ್ರಿತ ಚಟುವಟಿಕೆಗಳಿಂದ ಪ್ರೇರಿತವಾಗಿವೆ. ಬಿಡಿ ಬಿಡಿ ಬರಹಗಳ ರೂಪದಲ್ಲಿ ಪುಸ್ತಕ ಪ್ರಕಟವಾಗಿದ್ದು ಓದುಗರನ್ನ ನಲವತ್ತು ವರ್ಷ ಹಿಂದಿನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಪರಿಸರದ ಜೊತೆಗೆ ರಾಯಚೂರಿನ ಸುಡು ಬಿಸಿಲ ಬದುಕಿನ ಅದು ದರ್ಶನವನ್ನ ಮಾಡಿಸುತ್ತದೆ. ಆಂಗ್ಲ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿರುವ ಇವರು ಸಾಮಾನ್ಯವಾಗಿ ಬರೆಯುವುದು ಅದೆ ಭಾಷೆಯಲ್ಲಿ. ಅವರ VOYAGE OF A PAPER BOATನ ಮುಂದುವರೆದ ಯಾನ ೩ ಹಾಗೂ ೪ನ್ನ ಕನ್ನಡಕ್ಕೆ ತರುವ ಹೊಣೆ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅದರ ಕೆಲಸ ಈಗ ಬಹುತೇಕ ಮುಗಿದಿದೆ. ಇನ್ನು ಕನ್ನಡದ ಕೃತಿಗಳನ್ನ ಇಂಗ್ಲೀಷಿಗೆ ಅನುವಾದಿಸುವಲ್ಲಿ ಅವರ ಉತ್ಸಾಹ ಅದ್ವಿತೀಯ. ಈಗಾಗಲೆ ಡಾ ನಾರಾಯಣ ಭಟ್ಟ ಮೊಗಸಾಲೆಯವರ "ಉಲ್ಲಂಘನೆ" ಹಾಗೂ ಡಾ ನಾರ್ಬರ್ಟ್ ಡಿ'ಸೋಝರ "ಬಾಮಣ್" ಅವರ ಮೂಲಕ ಆಂಗ್ಲಾನುವಾದ ಗೊಂಡಿದ್ದು ಇನ್ನೇನು ಪ್ರಕಟಣೆಯ ಹೊಸ್ತಿಲಿನಲ್ಲಿವೆ. ಸದ್ಯ ಕೆ ಟಿ ಗಟ್ಟಿಯವರ "ಅರಗಿನ ಮನೆ"ಯ ಅನುವಾದ ಅವರಿಂದ ಸಾಗಿದೆ. ಇಷ್ಟಲ್ಲದೆ ಅವರ ಅಮೇರಿಕನ್ ಪೀಸ್ ಕೋರ್ ಗೆಳೆಯ ಕೆನ್ನೆತ್ ಜೊತೆಗೆ ಜಂಟಿಯಾಗಿ ಸರದಿ ಲೇಖನಗಳ ಮೂಲಕ ಗಂಗಾವತಿಯ ಕೃಷಿ ಅನುಭವಗಳನ್ನೂ ಬರೆದಿದ್ದು ಅದು ಅಮೇರಿಕದಲ್ಲಿ ಪ್ರಕಟಣೆ ಕಂಡಿದೆ.

ವಯಸ್ಸಿನ ಅವಕೃಪೆಯ ಕಾರಣ ಸದ್ಯ ಅವರ ಒಂದು ಕಿವಿ ತುಸು ಮಂದ, ಒಂದು ಕಣ್ಣು ಸಂಪೂರ್ಣ ಕತ್ತಲು ಹಾಗೂ ನಡುಗೆ ತುಸು ನಿಧಾನ ಆದರೆ ಇದೆಲ್ಲದರ ನಡುವೆಯೂ ಅವರ ಜೀವನ ಉತ್ಸಾಹ ಮಾತ್ರ ಬೆರಗು ಹುಟ್ಟಿಸುವಂತದ್ದು. "ನನ್ನನ್ನು ಯಾರಾದರೂ ಒಳ್ಳೆಯ ಬರಹಗಾರ ಅಲ್ಲ ಅಂದರೆ ಅಡಿ ಇಲ್ಲ, ಅದು ನಿಜವಿದ್ದೀತು! ಆದರೆ ಒಬ್ಬ ಒಳ್ಳೆ ಕೃಷಿಕ ಅಲ್ಲ ಅಂದರೆ ಮಾತ್ರ ಸಿಟ್ಟು ಬರುತ್ತದೆ?!" ಎನ್ನುವ ಪೆಜತ್ತಾಯರ ಮೂಲಕ ಸದ್ಯದಲ್ಲಿಯೆ ಇನ್ನಷ್ಟು ಕನ್ನಡದ ಬರಹಗಾರರು ಜಾಗತಿಕ ಓದುಗರನ್ನ ಮುಟ್ಟಲಿಕ್ಕಿದ್ದಾರೆ. ಅವರ ನೇರ ಬರಹಗಳೂ ಸಹ ಇನ್ನಷ್ಟು ಮೂಡಿಬರಲಿಕ್ಕಿದ್ದು ತಾನು ಒಳ್ಳೆಯ ಬರಹಗಾರನಲ್ಲ ಎನ್ನುವ ಅವರ ಸಿನಿಕ ಗ್ರಹಿಕೆಯನ್ನ ಸುಳ್ಳು ಮಾಡಲಿಕ್ಕಿವೆ.

No comments: