01 November 2015

ವಲಿ - ೨೧







ಮಾರನೆಯ ದಿನ ಮಸೀದಿಯಲ್ಲಿ ಪ್ರಾರ್ಥನಾ ವಿಧಿಗಳನ್ನ ಪೂರೈಸಿ ಆದ ನಂತರ ಮಹಮದ್ ತನ್ನವರ ಹತ್ಯೆಗೈದ ದುರುಳರನ್ನ ದೇವರು ಅತ್ಯಂತ ಕಠಿಣವಾಗಿ ದಂಡಿಸಬೇಕೆಂದು ಬಹಿರಂಗವಾಗಿ ಬಿನ್ನವಿಸಿದ. ಆ ನಲವತ್ತರ ತಂಡದಲ್ಲಿ ಇಬ್ಬರು ಮಾತ್ರ ಆಕಸ್ಮಿಕವಾಗಿ ಉಳಿದುಕೊಂಡಿದ್ದರಲ್ಲ, ಅವರಲ್ಲಿ ಒಬ್ಬನಾಗಿದ್ದ ಅಮೀರ್ ಒಬ್ನ್ ಒಮೈರ್. ಆತ ಕದ್ದು ಜೀವ ಉಳಿಸಿಕೊಂಡು ಮದೀನಕ್ಕೆ ಓಡಿ ಬರುವಾಗ ಬೆನ್ ಅಮೀರ್ ಬುಡಕಟ್ಟಿನ ವ್ಯಕ್ತಿಗಳಿಬ್ಬರು ದಾರಿಯಲ್ಲಿ ಮಲಗಿರುವುದನ್ನು ಕಂಡು ರೋಷ ತಾಳಲಾಗದೆ ಅವರಿಬ್ಬರನ್ನೂ ಕೊಂದೆಸೆದ. ಆದರೆ ಮದೀನಾಕ್ಕೆ ಮರಳಿ ಈ ವಿಷಯವನ್ನು ಮಹಮದನಿಗೆ ಅರುಹಿದಾಗ ಆತ ಕೋಪದಿಂದ ಒಮೈರನ ಮೇಲೆ ಸಿಡಿದೆದ್ದ. ವಾಸ್ತವದಲ್ಲಿ ಆ ಇಬ್ಬರೂ ಹಿಂದಿನ ದಿನ ಮಹಮದನನ್ನು ಮುಖತಃ ಭೇಟಿಯಾಗಿ ಇಸ್ಲಾಮಿಗೆ ಮತಾಂತರವಾಗಿ ಮರಳಿ ತಮ್ಮ ಊರಿನತ್ತ ಹೊರಟಿದ್ದರು! ಇದರ ಸುಳಿವಿಲ್ಲದ ಒಮೈರ್ ಅವರನ್ನ ಕಡಿದಿದ್ದ. ಹೀಗಾಗಿ ಅರಿವಿನ ಕೊರತೆಯಿಂದಾದ ಈ ಘೋರ ಪಾತಕಕ್ಕೆ ಬದಲಾಗಿ ಮಹಮದನ ಕಡೆಯಿಂದ ಸತ್ತವರ ಕುಟುಂಬಕ್ಕೆ ಅರೇಬಿಯಾದ ಸಾಮಾಜಿಕ ಪದ್ಧತಿಯ ಅನುಸಾರ 'ರಕ್ತ ಧನ'ವನ್ನು ಪರಿಹಾರ ರೂಪದಲ್ಲಿ ಕೊಡಲು ತೀರ್ಮಾನಿಸಲಾಯಿತು.


ಈ ಕಾರಣಕ್ಕಾಗಿ ಆತ ಬೆನ್ ಅಲ್ ನದಿರ್ ಕುಲದ ಯಹೂದಿಗಳ ಸಹಾಯ ಪಡೆಯಲು ಇಚ್ಛಿಸಿದ. ಅದಕ್ಕೂ ಕಾರಣ ಇತ್ತು. ಈ ಸತ್ತು ಹೋದವರ ಕುಲ ಬೆನ್ ಅಮೀರರೊಂದಿಗೆ ಬೆನ್ ಅಲ್ ನದೀರರ ಬಾಂಧವ್ಯ ಸೌಹಾರ್ದಯುತವಾಗಿತ್ತು. ಮಹಮದ್ ತಾನೆ ಖುದ್ದಾಗಿ ಯಹೂದಿಗಳ ವಸತಿಯತ್ತ ಸಾಗಿ ಯಹೂದಿ ಮುಖಂಡರ ಸಹಾಯವನ್ನ ಅಪೇಕ್ಷಿಸಿದಾಗ ಅವರೂ ಸಹ ಹೆಚ್ಚು ಕೊಸರಾಡದೆ ಒಪ್ಪಿಕೊಂಡರು. ಮದೀನಾದಿಂದ ಬಂದ ಈ ಅತಿಥಿಗೆ ಔತಣ ನೀಡಲು ಯಹೂದಿಗಳು ಸಿದ್ಧತೆ ನಡೆಸುತ್ತಿದ್ದರು. ಆದರೆ ಮಾತುಕತೆಯ ನಡುವೆ ಏಕಾಏಕಿ ಮಹಮದ್ ದಿವಾನಖಾನೆಯಿಂದ ಎದ್ದು ಹೊರ ನಡೆದ. ಬಹು ಹೊತ್ತು ಕಾದರೂ ಅವನು ಮರಳಿ ಬರಲಿಲ್ಲ. ಸುತ್ತಮುತ್ತಲೂ ಸಹ ಅವನ ಸುಳಿವು ಯಾರಿಗೂ ಸಿಗಲಿಲ್ಲ. ಅವನು ಮದೀನಕ್ಕೆ ಮರಳಿದ್ದ. ಇದನ್ನ ಕೇಳಿ ಯಹೂದಿಗಳು ಕಾರಣವೆ ಇಲ್ಲದೆ ಹೀಗೆ ಮಾತುಕತೆ ಮೊಟಕುಗೊಳಿಸಿ ಓಡಿ ಹೋದ ಮಹಮದನ ನಡತೆಯ ಬಗ್ಗೆ ಸಂಶಯಪಟ್ಟರು. ಇತ್ತ ಮದೀನಾದಲ್ಲಿ ಆ ಯಹೂದಿಗಳು ತನಗೆ ಕೇಡು ಬಯಸಿದ್ದರು, ಅದರ ಸೂಚನೆ ದೇವರಿಂದ ಸಿಕ್ಕ ಕಾರಣ ತತ್ ತಕ್ಷಣ ನಾನಲ್ಲಿಂದ ಹೊರಟು ಬಂದೆ ಎಂದ ಮಹಮದ್.


ಆದರೆ ಆತನ ಪ್ರಲಾಪ ಅಷ್ಟಕ್ಕೆ ನಿಲ್ಲಲಿಲ್ಲ. ಮದೀನಾ ಹೊರವಲಯದಲ್ಲಿರುವ ಆ ಯಹೂದಿಗಳು ಪರಮ ಕೇಡಿಗರಾಗಿದ್ದು ಇನ್ನು ಹತ್ತು ದಿನದಲ್ಲಿ ತಿರುಗಿ ನೋಡದೆ ಅಲ್ಲಿಂದ ಅವರು ಹೊರಟು ಹೋಗಬೇಕೆಂದು ಏಕಪಕ್ಷೀಯವಾದ ಫರ್ಮಾನನ್ನ ಸಹ ಆತ ಹೊರಡಿಸಿದ. ಇದು ಯಹೂದಿಗಳಿಗೆ ಅಘಾತ ತಂದಿತು. ಸುಖಾಸುಮ್ಮನೆ ಸಹಾಯ ಕೇಳಿಕೊಂಡು ಬಂದವನಿಂದ ತಮಗಾಗುತ್ತಿರುವ ಅನ್ಯಾಯ ಅವರಿಗೆ ಅಸಹನೀಯ ಅನ್ನಿಸಿತು. ಹಾಗೊಂದು ವೇಳೆ ಅವರು ಅಲ್ಲಿಂದ ಕಾಲ್ತೆಗೆಯದೆ ಹಟ ಕಟ್ಟಿ ಅಲ್ಲಿಯೆ ಉಳಿದರೆ ಅವರೆಲ್ಲರನ್ನೂ ಹತ್ಯೆಗೈಯಲಾಗುವುದು ಎನ್ನುವ ತನ್ನ ನಿರ್ಧಾರವನ್ನು ಬೆನ್ ನದೀರ್ ಯಹೂದಿಗಳಿಗೆ ಸಾರಲು ತನ್ನ ದೂತನೊಬ್ಬನನ್ನು ಮಹಮದ್ ಅವರ ವಸತಿಯತ್ತ ಕಳುಹಿಸಿದ. ಇದರಿಂದ ಹತಾಶರಾದ ಯಹೂದಿಗಳು ಒಂದು ನಿಯೋಗ ಕಟ್ಟಿಕೊಂಡು ಬಂದು ಮಹಮದನನ್ನೆ ಕಂಡು ತಾವು ತಲೆಮಾರುಗಳಿಂದ ಅರಬ್ಬರೊಂದಿಗೆ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಇರುವ ಸಂಗತಿಯನ್ನ ಹೇಳಿಕೊಂಡರು. ಆದರೆ ಮಹಮದ್ ಕಲ್ಲಾಗಿದ್ದ. ಅವರ ಪ್ರಾರ್ಥನೆಗಳಿಗೆಲ್ಲ ಕಿವುಡನಂತೆ ವರ್ತಿಸಿದ ಆತ "ಈಗ ಹೃದಯ ಬದಲಾಗಿದೆ!" ಎನ್ನುವ ಒಂದೆ ಮಾತನ್ನ ನಿಷ್ಠುರವಾಗಿ ನುಡಿದು ಎದ್ದು ಒಳ ನಡೆದ.



ಈಗ ಅವರ ಸಹಾಯಕ್ಕೆ ಯಾರೂ ಬಾರದಿರುವ ಸನ್ನಿವೇಶ ಸೃಷ್ಟಿಯಾಗಿತ್ತು. ಅಂತಹ ಕತ್ತಲಿನಲ್ಲೂ ಆಶಾಕಿರಣದಂತೆ ಅವರಿಗೆ ಒದಗಿ ಬಂದವನು ಮದೀನಾದ ಗಣ್ಯ ವ್ಯಕ್ತಿ ಅಬ್ದುಲ್ಲ ಇಬ್ನ್ ಒಬೈ. ಆತ ಮಹಮದನ ಈ ಗೂಂಡಾಗಿರಿಯನ್ನ ಕಿಂಚಿತ್ತೂ ಸಹಿಸಲಿಲ್ಲ. ಮಹಮದ್ ತಮ್ಮೂರಿಗೆ ಬರುವವರೆಗೂ ನಾವೆಲ್ಲಾ ಅಕ್ಕಪಕ್ಕದ ಯಹೂದಿಗಳೊಂದಿಗೆ ಹಿತವಾಗಿಯೆ ಇದ್ದೆವಲ್ಲ! ಎಂದಾತ ವಾದಿಸಿದ. ಕೂಡಲೆ ಇಂತಹ ಹೀನ ಆಜ್ಞೆಯನ್ನ ಹಿಂತೆಗೆದುಕೊಳ್ಳಬೇಕು ಎಂದಾತ ಮಹಮದನನ್ನು ಆಗ್ರಹಿಸಿದ. ಹೀಗೆಲ್ಲಾ 'ವಿಶ್ವಾಸಘಾತ'ದ ಕುಂಟು ನೆಪ ಹೂಡಿ ಸ್ಥಳಿಯ ಸಾಮಾಜಿಕ ಅನುಬಂಧಗಳನ್ನ ಹಾಗೂ ಸಮರಸ್ಯವನ್ನ ಕದಡಬಾರದು ಎನ್ನುವ ಅಬ್ದುಲ್ಲಾನ ಮನವಿಯನ್ನ ಮಹಮದ್ ಉದ್ದೇಶಪೂರ್ವಕವಾಗಿ ಉಪೇಕ್ಷಿಸಿದ. ಹೀಗಾಗಿ ಉಪಾಯವಿಲ್ಲದೆ ಯಹೂದಿಗಳು ಊರು ಬಿಡಲು ಅನಿವಾರ್ಯವಾಗಿ ನಿರ್ಧರಿಸಿದರು.



ಆದರೆ ಅವರಿಗೆ ಮಹಮದನ ಉಪಟಳದ ಅಸಲಿಯತ್ತಿನ ಅರಿವು ಇನ್ನೂ ಆಗಿರಲಿಲ್ಲ. ತಮ್ಮ ಪಾಡಿಗೆ ತಾವು ನೆಲೆ ಬದಲಿಸುವ ಸನ್ನಾಹದಲ್ಲಿದ್ದರೂ ಸಹ ಅವರನ್ನ ಬೆದರಿಸಿ ಓಡಿಸಲು ಮಹ್ಮದ್ ನಿರ್ಧರಿಸಿದ. ಅವರ ವಸತಿಗಳಿಗೆ ಮಹಮದನ ಪುಂಡ ಮುಸಲ್ಮಾನ ಪಡೆಯನ್ನು ಇವರೆ ಏಕಪಕ್ಷೀಯವಾಗಿ ವಿಧಿಸಿದ್ದ ಹತ್ತು ದಿನಗಳ ಗಡುವಿನ ಅವಧಿ ಮುಗಿಯುವ ಮುನ್ನವೆ ಲಗ್ಗೆ ಹಾಕಿ ಕೂತರು! ಆಗ ಅವರ ರಕ್ಷಣೆಗೆ ಅಬ್ದುಲ್ಲ ಇಬ್ನ ಒಬೈ ಸಹ ಇರಲಿಲ್ಲ. ಆತ ಪರವೂರಿಗೆ ವ್ಯಾಪಾರಕ್ಕಾಗಿ ಕ್ಯಾರವಾನಿನೊಂದಿಗೆ ಸಾಗಿದ್ದ. ಇತ್ತ ಇನ್ನೊಂದು ಹತ್ತಿರದಲ್ಲಿಯೆ ವಾಸವಿದ್ದ ಯಹೂದಿ ಬುಡಕಟ್ಟು ಬೆನ್ ಕೊರೈಝಾರು ಕೂಡಾ ಅವರ ಸಹಾಯಕ್ಕೆ ಬರಲಿಲ್ಲ. ಅವರಿಗೂ ಮಹಮದನ ಮುಸಲ್ಮಾನ ಪಡೆಗಳಿಗೂ ನಡುವೆ ಯುದ್ಧ ಒಪ್ಪಂದವೊಂದು ಆಗಿದ್ದು ಅದರ ಪ್ರಕಾರ ಅವರು ತಟಸ್ಥರಾಗಿ ಉಳಿದರು. ಆದರೆ ಈ ತಾಟಸ್ಥ್ಯದ ಘೋರ ಪ್ರತಿಫಲವನ್ನು ಅತಿ ಶೀಘ್ರದಲ್ಲಿ ನಾವೂ ಸಹ ಉಣ್ಣಲಿಕ್ಕಿದ್ದೇವೆ ಅನ್ನುವ ಕನಿಷ್ಠ ಅರುವು ಸಹ ಅವರಿಗೆ ಇರಲಿಲ್ಲ.


ತನ್ನ ಆಜ್ಞೆಯನ್ನ ಮೀರಿದ ಆರೋಪ ಹೊತ್ತ ಬೆನ್ ನದೀರರರೊಡನೆ ಹೋರಾಡಲು ತನ್ನ ಪಡೆಗಳಿಗೆ ಆಜ್ಞಾಪಿಸಿದ ಮಹಮದನ ಯೋಧರೊಂದಿಗೆ ಯಹೂದಿಗಳೂ ಸಹ ಅನಿವಾರ್ಯವಾಗಿ ಕಾದಾಡ ತೊಡಗಿದರು. ಇದರಿಂದ ರೋಷಗೊಂಡ ಮಹಮದನ ಪಡೆ ಬೆನ್ ನದೀರರ ಖರ್ಜೂರದ ತೋಟಗಳಿಗೆ ಲಗ್ಗೆ ಇಟ್ಟು ನಿರ್ದಾಕ್ಷಿಣ್ಯವಾಗಿ ಫಲ ಭರಿತ ವೃಕ್ಷಗಳ್ನ್ನು ಕಡಿದುರುಳಿಸ ತೊಡಗಿದರು. ಇದರಿಂದ ಕೆಂಗೆಟ್ಟ ಯಹೂದಿಗಳು ಇದು ಅನ್ಯಾಯವೆಂದು ರೋಧಿಸುತ್ತಲೆ ಪ್ರವಾದಿ ಮೋಸೆಸ್ ಕಾಲದಿಂದಲೂ ಹೀಗೆ ಫಲ ಹೊತ್ತ ಸಸ್ಯಗಳನ್ನ ಕಡಿದು ಕೆಡವುವುದು ಯುದ್ಧ ನೀತಿಗೆ ವಿರುದ್ಧ ಎನ್ನುವುದನ್ನ ಗಟ್ಟಿ ಧ್ವನಿಯಲ್ಲಿ ಜ್ಞಾಪಿಸ ಹತ್ತಿದರು. ಆದರೆ ತನ್ನ ಈ 'ಅನೈತಿಕ ಹಾಗೂ ಅನಾಚಾರದ ವಿಧ್ವಂಸಕ ಕಾರ್ಯ'ವನ್ನ 'ದೈವವಾಣಿಯಾಗಿದೆ' ಎಂದು ಚುಟುಕಾಗಿ ಉತ್ತರಿಸಿ ಮಹಮದ ಮುಂದುವರೆಸಲು ಮುಸಲ್ಮಾನ ಯೋಧರಿಗೆ ಸೂಚನೆ ಕೊಟ್ಟ. ಹೀಗೆ ಅನ್ಯಾಯದ ಅನೀತಿಯ ನಡೆಗಳಿಗೂ ಸಹ ಆತ ದೈವವಾಣಿಯ ಮೊಹರನ್ನ ಒತ್ತಿ ಅಧಿಕೃತಗೊಳಿಸಿಬಿಟ್ಟ ಎನ್ನುತ್ತಾನೆ ತನ್ನ 'ಸೀಲ್ಡ್ ನೆಕ್ಟರ್' ಕೃತಿಯ ಐನೂರಾ ತೊಂಬತ್ತೈದನೆ ಪುಟದಲ್ಲಿ ಇತಿಹಾಸಕಾರ ಅಲ್ ಮುಬಾರಖಿ. ಐಡಿಐಬಿಯ ಕೃತಿ ಸಹ ಈ ಹೀನಾಯ ಕಾರ್ಯದ ಚಿತ್ರಣವನ್ನ ಓದುಗರಿಗೆ ನೀಡುತ್ತದೆ. 



ಹೀಗೆ ತಮ್ಮದೆ ಧರ್ಮಕ್ಕೆ ಸೇರಿದ ಇನ್ನೊಂದು ಬುಡಕಟ್ಟಿನ ಜನರ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೂ ಅವರ ಸಹಾಯಕ್ಕಾಗಿ ಧಾವಿಸದೆ ನಪುಂಸಕರಂತೆ ಚೆಂದ ನೋಡುತ್ತಾ ಕುಳಿತ ಸುತ್ತಲಿನ ಇನ್ನಿತರ ಯಹೂದಿಗಳ ಹೇಡಿತನವನ್ನ ವಿವರವಾಗಿ ಇತಿಹಾಸಕಾರ ಮಾರ್ಗೋಲಿಯತ್ ವರ್ಣಿಸಿದ್ದಾನೆ. ಈ ಅನಾಚಾರದ ಮುತ್ತಿಗೆ ಸುಮಾರು ಮೂರು ವಾರಗಳವರೆಗೆ ನಿರಂತರವಾಗಿ ಮುಂದುವರೆದಾಗ ಅನಿವಾರ್ಯವಾಗಿ ಯಹೂದಿಗಳು ಶರಣಾದರು. ತಮ್ಮ ಖರ್ಜೂರದ ತೋಟಗಳೂ ಸಹ ಹಾಳು ಬಿದ್ದು ಹೋಗಿರುವಾಗ ಇನ್ನು ಅಲ್ಲಿದ್ದು ತಾನೆ ಏನು ಪ್ರಯೋಜನ? ಅಲ್ಲಿಂದ ತೆರಳಿ ನೆಮ್ಮದಿಯ ತಾಣ ಅರಸುವುದೆ ಕ್ಷೇಮ ಅನ್ನುವ ನಿಲುವಿಗೆ ಅವರು ಬಂದರು. ಅದನ್ನ ಮಹಮದನಿಗೆ ತಿಳಿಸಿದಾಗ ಅದಕ್ಕಾಗಿಯೆ ಕಾದು ಕುಳಿತಿದ್ದ ಆತ ಮುಗುಳ್ನಕ್ಕ. ಅವರಿಗೆ ಕ್ಷಮಾದಾನವನ್ನಿತ್ತು ಅಲ್ಲಿಂದ ಪೇರಿ ಕೀಳಲು ಅವಕಾಶ ಕಲ್ಪಿಸಿಕೊಟ್ಟ. ಅವರೆಲ್ಲರೂ ನಿಸ್ಸಹಾಯಕರಾಗಿ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಸಿರಿಯಾದತ್ತ ಚಲಿಸಿ ಕಣ್ಮರೆಯಾದರು.


ಈ ಬೆನ್ ನದೀರರ ಆಸ್ತಿಪಾಸ್ತಿಗಳೆಲ್ಲಾ ಪುಗಸಟ್ಟೆಯಾಗಿ ಮಹಮದನಿಗೆ ವರದಾನದಂತೆ ದೊರಕಿತು. ಅವರ ವಾಸದ ಸ್ಥಳ ಜಮೀನು ಇವೆಲ್ಲಾ ಪುಕ್ಕಟೆಯಾಗಿ ಯಾವುದೆ ಶ್ರಮವಿಲ್ಲದೆ ಮುಸಲ್ಮಾನರ ಕೈವಶವಾಗಿತ್ತು. ಆಗ ಮಹಮದ್ ತನಗೆ ಆ ಹಿಂದೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಸಿಕ್ಕಿದ್ದ ದೈವವಾಣಿಯನ್ನ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿ ಹೊಸತಾಗಿ ಒಂದು ನಿಯಮವನ್ನ ರೂಪಿಸಿಕೊಂಡ. ಪ್ರತ್ಯೇಕವಾಗಿ ಇದಕ್ಕೂ ಒಂದು ದೈವವಾಣಿಯನ್ನ ಪಡೆದು ಅದರ ಅನುಸಾರ ಅದರಲ್ಲಿ ದೊಡ್ದ ಪಾಲೊಂದನ್ನ ತಾನು ವಶಪಡಿಸಿಕೊಂಡು ಉಳಿದಿದ್ದನ್ನ ತನ್ನ ಸಂಗಡಿಗರಿಗೆ ಹಂಚಿದ. ಆಶ್ಚರ್ಯಕರವಾಗಿ ಹೀಗೆ ಫಲಾನುಭವಿಗಳಾದ ನಿರಾಶ್ರಿತರ ಜೊತೆಗೆ ಇಬ್ಬರು ಮದೀನಾ ವಾಸಿಗಳೂ ಸಹ ಸೇರಿದ್ದರು. ಈ ಪ್ರಕರಣದ ದೈವವಾಣಿಗಳನ್ನ ಆಸಕ್ತರು ಖುರ್ಹಾನಿನ ಸುರಾ ಸಂಖ್ಯೆ ೫೯/೬-೨೪ರಲ್ಲಿ ಗಮನಿಸಬಹುದು. ಇದರಲ್ಲಿ ತಾನು ಯಹೂದಿ ಬೆನ್ ನದಿರ್ ಬುಡಕಟ್ಟಿನ ಮೇಲೆ ನಡೆಸಿದ ಹಲ್ಲೆ ಕಾಳಗ ಹಾಗೂ ಅವರ ತೋಟಗಳನ್ನ ಹಾಳುಗೆಡವಿದ್ದಕ್ಕೆಲ್ಲಾ ದೈವವಾಣಿಯ ಹೆಸರಿನಲ್ಲಿ ಸಮರ್ಥನೆ ನೀಡಲಾಗಿದೆ.



ಈ ನತದೃಷ್ಟ ಯಹೂದಿಗಳಲ್ಲಿ ಕೇವಲ ಇಬ್ಬರು ಮಾತ್ರ ಇಸ್ಲಾಮಿನ ಅನುಯಾಯಿಗಳಾಗಲು ಒಪ್ಪಿದ್ದರಿಂದ ಅವರನ್ನ ಅಲ್ಲಿಯೆ ಉಳಿಯಲಿಕ್ಕೆ ಅನುಮತಿಸಲಾಯಿತು. ಬೆನ್ ಅನ್ ನದೀರರನ್ನ ಓಡಿಸಿದ್ದರಿಂದ ಮಹಮದನಿಗೆ ಇನ್ನೊಂದು ದೊಡ್ದ ಮಟ್ಟಿನ ಲಾಭವೂ ಸಹ ಆಗಿತ್ತು. ಅವರು ತಲೆತಲಾಂತರಗಳಿಂದ ಇನ್ನಿತರ ಅರೇಬಿಯನ್ ಬುಡಕಟ್ಟುಗಳ ಮುಸಲ್ಮಾನೇತರರೊಂದಿಗೆ ಇಟ್ಟುಕೊಂಡಿದ್ದ ಸ್ನೇಹ ಸಂಬಂಧ ಅವರ ವಲಸೆಯೊಡನೆ ಕೊನೆಗೊಂಡಿತ್ತು. ಹೀಗಾಗಿ ತನ್ನ ನೂತನ ಧರ್ಮದ ಪ್ರಚಾರಕ್ಕೆ ಇದನ್ನ ಮಹಮದ್ ಸಶಕ್ತರಾಗಿ ಬಳಸಿಕೊಳ್ಳಲು ಸಾಧ್ಯವಾಯಿತು. ಹೀಗೆ ಅವನಿಗೆ ಹಾಗೂ ಅವನ ಅನುಚರರಿಗೆ ಇದ್ದ ಸಣ್ಣಪುಟ್ಟ ಅಡ್ಡಿ ಆತಂಕಗಳೆಲ್ಲ ಮರೆಯಾಗಿ ಹೋಗಿ ಅವರೆಲ್ಲ ಸುಖ ಶಾಂತಿ ನೆಮ್ಮದಿ ಕಂಡರು. ಮಹಮದನಿಗೆ ದೊರೆತ ಈ ಜಯ, ಆತಂಕ ನಿವಾರಣೆ ಹಾಗೂ ದೇವರ ಶಕ್ತಿ ಸಾಮರ್ಥ್ಯದ ವರ್ಣನೆ ಖುರ್ಹಾನಿನಲ್ಲಿ ವಿವರವಾಗಿ ಮೂಡಿಬಂದಿದೆ ಎನ್ನುತ್ತಾನೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತನ್ನ ತನ್ನ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಇನ್ನೂರಾ ಎಂಬತ್ತ ನಾಲ್ಕರಲ್ಲಿ.


ಬೆನ್ ಅನ್ ನದೀರರ ಪ್ರಕರಣ ಮುಗಿದ ನಂತರದ ಒಂದೂವರೆ ವರ್ಷಗಳು ಯಾವುದೆ ಯುದ್ಧದ ಸೊಲ್ಲಿಲ್ಲದೆ ಮದೀನದಲ್ಲಿ ಸುಖ ಶಾಂತಿ ನೆಲೆಸಿತ್ತು. ಆದರೆ ಇತ್ತ ಮೆಕ್ಕಾದ ಅಬು ಸಫ್ಯಾನ ಮಾತ್ರ ತನ್ನ ಹಳೆಯ ಒಂದು ವರ್ಷದ ನಂತರ ಸಂಧಿಸುವ ಯುದ್ಧದ ಪಂಥಾಹ್ವಾನವನ್ನ ಮರೆತಿರಲಿಲ್ಲ. ಒಂದು ವರ್ಷ ಸರಿದು ಹೋಗಿ ಬಹಳ ಸಮಯವೆ ಆಗಿದ್ದರೂ ಸಹ ಮರಳಿ ತಾನು ಯುದ್ಧಕ್ಕೆಣಿಸಲು ಆತ ನಿರ್ಧರಿಸಿದ. ಬದರ್ ಯುದ್ಧ ಭೂಮಿಯಲ್ಲಿ ಮತ್ತೆ ಯುದ್ಧವನ್ನ ಮುಂದುವರೆಸುವ ಮಾಹಿತಿಯನ್ನಾತ ಮಹಮದನಿಗೆ ದೂತರ ಮೂಲಕ ಮುಟ್ಟಿಸಿದ. ಆದರೆ ಕ್ರಿಸ್ತಶಕ ಆರುನೂರಾ ಇಪ್ಪತ್ತೈದರಲ್ಲಿ ಅರೇಬಿಯಾದಲ್ಲಿ ಬರಗಾಲ ತಾಂಡವವಾಡಿದ್ದರಿಂದ ಈ ಯುದ್ಧವನ್ನ ಇತ್ತಂಡಗಳೂ ಸ್ವಲ್ಪ ಕಾಲಕ್ಕಾಗಿ ಮುಂದೂಡಿದವು.


ಆದರೆ ಮೆಕ್ಕಾದವರು ಮತ್ತೆ ಯುದ್ಧಾಹ್ವಾನ ಕಳಿಸಿದ ನಂತರ ಮದೀನಾದವರು ವಿಪರೀತ ಗಾಬರಿಗೊಂಡರು. ಮಹಮದ್ ಯಾವುದೆ ಬಗೆಯಲ್ಲಿ ಎದೆ ಗುಂದಲಿಲ್ಲ ಬದರ್'ನತ್ತ ಸುಮಾರು ಸಾವಿರದೈನೂರು ಯೋಧರ ಪಡೆಯೊಂದನ್ನು ಆತ ಹೊರಡಿಸಿದ. ಒಟ್ಟು ಎಂಟು ದಿನ ಅಲ್ಲಿ ಮಹಮದನ ಪಡೆ ಠಿಕಾಣಿ ಹೂಡಿದರೂ ಸಹ ಮೆಕ್ಕಾದ ಖುರೈಷಿಗಳ ಸುಳಿವಿರಲಿಲ್ಲ. ಒಟ್ಟು ಎಂಟು ದಿನಗಳವರೆಗೆ ಅಬು ಸಫ್ಯಾನನ ಪಡೆಯನ್ನ ಕಾಯುತ್ತಾ ಇರಿಸಿ, ಜೊತೆಗೆ ತಾನು ತಂದಿದ್ದ ಸರಕಿನ ಸಂತೆ ಏರ್ಪಡಿಸಿ ಅಪಾರ ಲಾಭಗಳಿಸಿಕೊಂಡು ಬದರ್'ನಿಂದ ಮರಳಿ ಖುಷಿಯಿಂದಲೆ ಮಹಮದ್ ಮದೀನಾ ಮುಟ್ಟಿದ. ಯಾವುದೆ ಹಾನಿಯನ್ನ ಎದುರಿಸದೆ ಆತನ ಈ ಎರಡನೆ ಬದರ್ ಯಾತ್ರೆ ಸಹ ಸಫಲವಾಗಿತ್ತು. ಈ ಸರಳ ಯಾತ್ರೆಯ ಸಂತಸವನ್ನ ದೈವವಾಣಿಯ ರೂಪದಲ್ಲಿ ಮಹಮದ್ ಖುರ್ಹಾನಿನ ೩/೧೬೬ನೆ ಸುರಾದಲ್ಲಿ ಹಂಚಿಕೊಂಡಿದ್ದಾನೆ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ.


ಕ್ರಿಸ್ತಶಕ ೬೨೬ರಲ್ಲಿ ಮಹಮದನ ಇನ್ನೊಂದು ದಂಡಯಾತ್ರೆ ನಡೆಯಿತು. ಬೆನ್ ಘಟಾಫನ್ ಬುಡಕಟ್ಟಿನವರು ಸಂಶಯ ಹುಟ್ಟಿಸುವ ರೀತಿಯಲ್ಲಿ ಮದೀನಾಕ್ಕೆ ಸಮೀಪ ನೆರೆದಿದ್ದನ್ನ ತನ್ನ ಗೂಢಚರರ ಮೂಲಕ ಅರಿತ ಮಹಮದ್ ಸುಮಾರು ನಾಲ್ಕುನೂರು ಯೋಧರ ಪಡೆಯೊಂದಿಗೆ ಅವರ ವಸತಿಯ ಮೇಲೆ ಯಾವುದೆ ಪೂರ್ವ ಸೂಚನೆ ಕೊಡದೆ ಮುಗಿಬಿದ್ದ. ಈ ಅನಿರೀಕ್ಷಿತ ದಾಳಿಯ ಹೊಡೆತ ತಾಳಲಾರದೆ ಗಂಡಸರೆಲ್ಲ ಬೆಟ್ಟ ಗುಡ್ಡಗಳ ಕೊರಕಲುಗಳನ್ನ ಏರಿ ತಲೆತಪ್ಪಿಸಿಕೊಂಡರು. ಅವರ ಬಿಡಾರದಲ್ಲಿ ಉಳಿದ ಮಹಿಳೆಯರನ್ನ ಹಾಗೂ ಮಕ್ಕಳನ್ನ ಮಹಮದ್ ಮದೀನಾಕ್ಕೆ ಹೊತ್ತು ತರುವಂತೆ ಪಡೆಗೆ ಆಜ್ಞಾಪಿಸಿದ. ಇದೆ ಸಮಯ ಆತ ಹೊಸತೊಂದು ಕಾನೂನನ್ನ ಜಾರಿಗೆ ತಂದ. ಅದನ್ನ "ಅಪಾಯದ ಕಾನೂನು" ಎಂದು ಕರೆಯಲಾಯಿತು. ಒಂದು ವೇಳೆ ಶತ್ರು ಸೇನೆ ತಮ್ಮ ಹೆಂಗಸರನ್ನ ಉಳಿಸಿಕೊಳ್ಳಲು ಮುಗಿಬಿದ್ದರೆ ಅವರನ್ನ ಎದುರಿಸಿ ಹೋರಾಡಲು ಪ್ರತ್ಯೇಕ ಪಡೆಯೊಂದನ್ನ ಸಜ್ಜುಗೊಳಿಸಿ ಅವರನ್ನು ಮುಖ್ಯ ಪಡೆಯಿಂದ ಬೇರ್ಪಡಿಸಿರಿಸಿದ. ಸಾರ್ವಜನಿಕ ಪ್ರಾರ್ಥನಾ ವಿಧಿಯನ್ನ ಮಾರ್ಪಡಿಸಿ ಎರಡೆರಡು ಬಾರಿ ಪ್ರಾರ್ಥಿಸುವ ಅವಕಾಶವನ್ನಿದು ಪಡೆಗಳಿಗೆ ಕಲ್ಪಿಸುತ್ತಿತ್ತು. ಒಂದು ಪಡೆ ಪ್ರಾರ್ಥಿಸುವಾಗ ಇನ್ನೊಂದು ಪಡೆ ಕಾವಲು ಕಾಯುವಂತೆ ವ್ಯವಸ್ಥೆ ರೂಪಿಸಲಾಯಿತು. ಇದನ್ನೂ ಸಹ ಖುರ್ಹಾನಿನ ಸುರಾದ ಮೂಲಕ ಅಧಿಕೃತಗೊಳಿಸಲಾಯಿತು.



ಅದೆ ವರ್ಷದ ಜುಲೈ ತಿಂಗಳಲ್ಲಿ ಆತನ ಇನ್ನೊಂದು ದಂಡಯಾತ್ರೆ ನಡೆಯಿತು. ಸಿರಿಯಾದ ಗಡಿಯಲ್ಲಿಂದ ಹಿಡಿದು ಕೆಂಪು ಸಮುದ್ರದ ಹಾಗೂ ಪರ್ಷಿಯನ್ ಕೊಲ್ಲಿಯ ನಡುವಿನ 'ದೂಮಾ' ಎನ್ನುವ ಓಯಸಿಸ್ ಈ ಬಾರಿ ಮುಸಲ್ಮಾನರ ಧಾಳಿಗೆ ತುತ್ತಾಯಿತು. ಆ ಓಯಸಿಸ್ಸಿನ ಜನರು ವಾಸ್ತವದಲ್ಲಿ ದರೋಡೆಕೋರರಾಗಿದ್ದರು. ಅ ಹಾದಿಯಲ್ಲಿ ಸಾಗುವ ಕ್ಯಾರವಾನ್'ಗಳನ್ನ ಅವರು ಲೂಟಿ ಹೊಡೆಯುವುದನ್ನೆ ಕಾಯಕ ಮಾಡಿಕೊಂಡಿದ್ದರು. ಅವರನ್ನ ಹೀಗೆ ಬಿಟ್ಟರೆ ಮುಂದೆ ಮದೀನಾ ನಗರದ ಮೇಲೂ ಅವರು ಧಾಳಿ ಮಾಡುವ ಭೀತಿ ಇತ್ತು. ಆದರೆ ಮಹಮದನ ಸುಸಜ್ಜಿತ ಪಡೆ ದೂಮಾದತ್ತ ಚಲಿಸುವ ಸುದ್ದಿ ಅರಿತ ಆ ದರೋಡೆಕೋರ ಜನಾಂಗ ಕೂಡಲೆ ಅಲ್ಲಿಂದ ಕಾಲ್ಕಿತ್ತರು. 



ದುಮಾತಲ್ ಝಂಡಾಲ್ ದಂಡಯಾತ್ರೆಯ ಯಶಸ್ಸು ಒಂದು ರೀತಿಯಲ್ಲಿ ಮಹಮದ್ ಹಾಗೂ ಮುಸಲ್ಮಾನರಿಗೆ ಮಹತ್ವಪೂರ್ಣದ್ದಾಗಿತ್ತು. ದೂರದ ಸಿರಿಯಾದವರೆಗೂ ಸಾಗಿ ಬಂದ ಅವನ ಪಡೆಯ ಧೈರ್ಯ ಕಂಡು ಅರಿತ ಅನೇಕರಲ್ಲಿ ಆತನ ಕೀರ್ತಿ ಸಾಹಸಗಳ ಕಥೆ ಹಬ್ಬಿತು. ಆತನ ಶಕ್ತಿಯ ಅರಿವಾದವರ ಮನದಲ್ಲಿ ಭೀತಿ ಸಹ ಹರಡಿತು. ಜೊತೆಗೆ ಆತನ ಪಡೆಗೂ ಅತಿ ದೂರದ ದಂಡಯಾತ್ರೆಗಳಿಂದ ಆಗುವ ಆರ್ಥಿಕ ಲಾಭದ ಅನುಭವವಾಯಿತು.



( ಇನ್ನೂ ಇದೆ.)

No comments: