03 November 2015

ವಲಿ - ೨೩ಇದೆ ವೇಳೆಯಲ್ಲಿ ಮಹಮದನ ಎಳೆ ಪತ್ನಿ ಆಯೇಷಾ ಬಗ್ಗೆ ಜರುಗಿದ ಒಂದು ಘಟನೆಯನ್ನು ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ವಿವರಿಸುತ್ತಾರೆ. ಬೆನ್ ಮುಸ್ತಲಿಕ್'ರ ವಿರುದ್ಧದ ಯುದ್ಧಾಗಂಣಕ್ಕೆ ಆಯೇಷಾ ಕೂಡಾ ಮಹಮದನ ಜೊತೆಯಲ್ಲಿ ಹೋಗಿದ್ದಳು. ಸಾಮಾನ್ಯವಾಗಿ ಹೀಗೆ ಎಲ್ಲಾದರೂ ಮಹಮದನ ಪತ್ನಿಯರು ಆತನೊಂದಿಗೆ ಪರಿವಾರವಾಗಿ ಹೊರ ಊರುಗಳಿಗೆ ಹೋಗುವುದಾದರೆ ಅವರನ್ನ ಡೋಲಿಯೊಂದರಲ್ಲಿ ಕೂರಿಸಿ ಅದನ್ನ ಒಂಟೆಯ ಮೇಲೆ ಸಾಗಿಸಲಾಗುತ್ತಿತ್ತು. ಸಾರ್ವಜನಿಕರ ದೃಷ್ಟಿಗೆ ಬೀಳದಂತಿರಲು ಅದನ್ನು ಪರದೆಯಿಂದ ಮುಚ್ಚಿಡಲಾಗುತ್ತಿತ್ತು. ಒಂಟೆಯ ಮೇಲಿನಿಂದ ಕೆಳಗಿಳಿಸುವ ಮೇನೆಗಳನ್ನ ನೇರವಾಗಿ ಅವರು ತಂಗ ಬೇಕಾದ ಬಿಡಾರಗಳ ಮುಂದೆ ಕೊಂಡು ಹೋಗಿ ನಿಲ್ಲಿಸಲಾಗುತ್ತಿತ್ತು. ಅದರ ಮೂಲಕ ಪರದೆ ಸರಿಸಿ ಬಿಡಾರ ಹೊಕ್ಕುವ ಅವರ ಖಾಸಗಿತನವನ್ನು ಅತ್ಯಂತ ನಿಖರವಾಗಿ ಕಾಪಾಡಿಕೊಳ್ಳಲಾಗುತ್ತಿತ್ತು.


ಆದರೆ ಈ ಬಾರಿ ಮದೀನಾಕ್ಕೆ ಹಿಂದಿರುಗುವಾಗ ಮಾತ್ರ ಒಂದು ಎಡವಟ್ಟಾಯಿತು! ಯುದ್ಧ ಮುಗಿದು ಲೂಟಿಗೈದ ಎಲ್ಲಾ ವಸ್ತುಗಳ ಸಹಿತ ಸೆರೆಯಾದ ಶತ್ರುಪಡೆಯ ಹೆಂಗಸರು ಹಾಗೂ ಮಕ್ಕಳನ್ನ ಕೈಕಟ್ಟಿ ಮಹಮದ್ ಹಾಗೂ ಅವನ ಸೈನ್ಯ ಮರಳಿ ಮದೀನಾಕ್ಕೆ ಬಂದು ಮುಟ್ಟಿದರು. ಅವರ ಜೊತೆಯೆ ಅಯೇಷಾಳ ಮೇನೆಯನ್ನು ಹೊತ್ತಿದ್ದ ಒಂಟೆ ಸಹ ಮರಳಿ ಬಂತು, ಆದರೆ ಒಂಟೆಯನ್ನು ನಡೆಸಿಕೊಂಡು ಬಂದ ಸೇವಕ ಅವಳ ಮನೆ ಬಾಗಿಲಿನತ್ತ ಅದನ್ನ ನಡೆಸಿ, ಅದನ್ನ ಇನ್ನಿತರರು ಹೊತ್ತು ಸರಿಯಾಗಿ ಮನೆಯ ಬಾಗಿಲಿಗೆ ಹೊಂದಿಸಿ ಪರದೆ ಎತ್ತಿ ಹಿಡಿದರಾದರೂ ಅಯೇಷಾ ಅದೆಷ್ಟು ಹೊತ್ತು ಕಾದರೂ ಹೊರ ಬಂದು ಮನೆ ಹೊಕ್ಕಲೆ ಇಲ್ಲ! ವಾಸ್ತವಾಗಿ ಮೇನೆಯೊಳಗೆ ಅವಳು ಇರಲೆ ಇಲ್ಲ. ಇದಾಗಿ ಗೊಂದಲದ ಮನಸ್ಥಿತಿಯಲ್ಲಿ ಎಲ್ಲರೂ ಹುಡುಕಾಡಲು ಪರದಾಡುತ್ತಿದ್ದಾಗಲೆ ಸಫ್ಯಾನ್ ಎನ್ನುವ ಒಬ್ಬ ದಾರಿಹೋಕ ವಲಸೆಗಾರ ಅಲ್ಲಿ ಪ್ರತ್ಯಕ್ಷನಾದ. ಆತ ಹಿಡಿದು ತಂದ ಒಂಟೆಯ ಮೇಲೆ ಆಯೇಷಾ ಕೂತಿದ್ದಳು!


ಆತ ಅದಕ್ಕೆ ನೀಡಿದ ಕಾರಣ ಕುತೂಹಲಕರವಾಗಿತ್ತು ಹಿಂದಿನ ರಾತ್ರಿ ಹಿಂದಿರುಗಿ ಹೋಗುವ ಆಲೋಚನೆ ನಡೆಯುತ್ತಿದ್ದಾಗ ಯಾರಿಗೂ ಅರಿವಿಗೆ ಬಾರದಂತೆ ಆಯೇಷಾ ಒಬ್ಬಳೆ ತನ್ನ ಬಿಡಾರದಿಂದ ಕೊಂಚ ಹೊರ ಹೋಗಿದ್ದಳು. ಅಲ್ಲಿ ನಡೆದಾಡುವಾಗ ತನ್ನ ಕತ್ತಿನಲ್ಲಿದ್ದ ಮುತ್ತಿನಹಾರವನ್ನ ಅಲ್ಲೆಲ್ಲೋ ಕಳೆದು ಕೊಂಡಳಂತೆ! ವಾಪಾಸು ಬಿಡಾರ ಬಂದು ಮುಟ್ಟಿದಾಗ ಆದ ಪ್ರಮಾದದ ಅರಿವಾಯಿತು. ಹೀಗಾಗಿ "ಬಿಟ್ಟು ಬಂದಿದ್ದ" ಹಾರವನ್ನ ಪಡೆಯಲು ಮತ್ತೆ ಅಲ್ಲಿಗೆ ಮರಳಿದಳಂತೆ!. ಆದರೆ ಇದರ ಯಾವುದೆ ಸುಳಿವಿಲ್ಲದ ಮುಸಲ್ಮಾನರು ತಮ್ಮ ಸಹಜ ಪದ್ಧತಿಯಂತೆ ಆಕೆ ಮೇನೆಯೊಳಗೆ ಮಲಗಿರಬಹುದು ಎಂದು ಭಾವಿಸಿ ಅದನ್ನ ಎತ್ತಿ ಒಂಟೆಯ ಬೆನ್ನಿಗೆ ಬಿಗಿದರು. ಆಕೆ ಇನ್ನೂ ಹದಿಹರೆಯದ ಪುಟ್ಟ ಹುಡುಗಿಯಾಗಿದ್ದರಿಂದ ಆಕೆಯ ತೂಕವೆ ಅವರಿಗ್ಯಾರಿಗೂ ಅರಿವಾಗಲಿಲ್ಲ.


ಹೀಗಾಗಿ ಖಾಲಿ ಮೇನೆ ಹೊತ್ತ ಒಂಟೆ ಪಡೆಯೊಂದಿಗೆ ಮದೀನಾದತ್ತ ಸಾಗಿತು. ಇತ್ತ ಆಯೆಷಾ ಮರಳಿ ಬಿಡಾರವಿದ್ದ ಜಾಗಕ್ಕೆ ಬಂದಾಗ ಅಲ್ಲಿ ನರ ಮನುಷ್ಯರ ಸುಳಿವನ್ನ ಕಾಣದೆ ಕಂಗಾಲಾದಳು. ಅವಳಿಗೆ ವಿಪರೀತ ಗಾಬರಿಯಾಯಿತಂತೆ. ಈ ನಾಟಕೀಯ ಬದಲಾವಣೆ ಕಂಡು ಆಶ್ಚರ್ಯ ಪಟ್ಟ ಆಕೆ ಬೇರೆ ಉಪಾಯಗಾಣದೆ ತನ್ನ ಬಳಿ ಇದ್ದ ಬದ್ದ ಬಟ್ಟೆಗಳನ್ನೆಲ್ಲಾ ಮುಚ್ಚಿಕೊಂಡು ಅಲ್ಲಿಯೆ ಮಲಗಿ ನಿದ್ರಿಸಿದಳಂತೆ. ಮೇನೆಯಲ್ಲಿ ತನ್ನನ್ನ ಕಾಣದೆ ಜನ ಖಂಡಿತಾ ತನ್ನನ್ನು ಹುಡುಕಿಕೊಂಡು ಬಂದಾರು ಎಂದವಳು ಎಣಿಸಿದ್ದಳಂತೆ. ಆದರೆ ಆಕೆಯ ಭೇಟಿ ಮರುದಿನ ದಾರಿತಪ್ಪಿ ಆ ಹಾದಿಯಾಗಿ ಅಲೆದಾಡುತ್ತಿದ್ದ ಸಫ್ಯಾನನ ಜೊತೆಗಾಯಿತು. ಆಕೆಯ ಕಥೆ ಕೇಳಿ ಆಶ್ಚರ್ಯಚಕಿತನಾದ ಆತ ಆಕೆಯನ್ನ ಗೌರವಾದರಗಳಿಂದ ಒಂಟೆಯ ಮೇಲೆ ಕೂರಿಸಿ ತಾನು ಆಕೆಯ ಘನತೆಗೆ ಧಕ್ಕೆ ತಾರದಂತೆ ಹಾಗೂ ಗೌಪ್ಯತೆ ಕಾಪಾಡುವಂತೆ ಆಕೆಯತ್ತ ಮುಖ ಮಾಡದೆ ಗೌರವಾದಾರಗಳಿಂದ ಮದೀನಕ್ಕೆ ತಂದು ಮುಟ್ಟಿಸಿದನಂತೆ. ಇಷ್ಟು ಪ್ರವರ ಹೇಳಿ ಆತ ನಿಟ್ಟುಸಿರು ಬಿಟ್ಟ.ಮದೀನಾ ಮುಟ್ಟುವಾಗ ನಿಚ್ಚಳ ಹಗಲಾಗಿದ್ದು ಬೀದಿಯುದ್ದ ಜನರ ಕಣ್ಣಿಗೆ ಇವರಿಬ್ಬರೂ ಬಿದ್ದರು. ಗುಸುಗುಸು ಶುರುವಾಯಿತು. ಸ್ಥಳಿಯ ಅರಬ್ಬರ ಬಾಯಿಗೆ ಬಿದ್ದ ಈ ಸುದ್ದಿ ಮಹಮದನಿಗೆ ಬಂದು ಮುಟ್ಟಿದಾಗ ಆತ ಕಸಿವಿಸಿಗೊಂಡ. ಆಗಿನ್ನೂ ಕೇವಲ ಹದಿನಾಲ್ಕು ವರ್ಷ ಪ್ರಾಯದವಳಾಗಿದ್ದ ಆಯೇಷಾ ಈ ಕಾರಣದಿಂದ ಪತಿಯ ಅಸಡ್ಡೆಗೆ ಗುರಿಯಾಗಬೇಕಾಯಿತು. ಇದರಿಂದ ಮನನೊಂದ ಆಯೇಷಾ ತನ್ನ ತವರುಮನೆಯನ್ನ ಹೋಗಿ ಸೇರಿಕೊಂಡಳು. ಈ ವಿಷಯ ಖಚಿತವಾಗುತ್ತಲೆ ಆಡಿಕೊಳ್ಳುವವರ ಬಾಯಿಗೆ ಇದರಿಂದ ರಸಗವಳ ಸಿಕ್ಕಂತಾಗಿ ಓತಪ್ರೋತವಾದ ವದಂತಿಗಳು ಅಲ್ಲಿಲ್ಲಿ ಹರಿದಾಡ ಹತ್ತಿದವು. ಇದು ಕೇವಲ ಸಾಮಾನ್ಯ ಮಂದಿಗಷ್ಟೇ ಸೀಮಿತವಾಗಿರಲಿಲ್ಲ. ಮದೀನಾದ ಅರಬ್ಬಿ ಗಣ್ಯ ಅಬ್ದುಲ್ಲಾ ಇಬ್ನ್ ಒಬೈ, ಕವಿ ಹಸ್ಸನ್, ಝೈನಬ್'ಳ ತಮ್ಮ ಹಮ್ಝಾ ಇವರೆಲ್ಲಾ ಇದಕ್ಕೆ ಕೊಂಚ ಮಸಾಲೆ ಸೇರಿಸಿ ರೆಕ್ಕೆ ಪುಕ್ಕ ಕಟ್ಟಿದ ವದಂತಿಯ ಹಕ್ಕಿಗಳನ್ನ ನಾಲ್ಕು ಜನ ಸೇರಿದ್ದಲ್ಲಿ ಆಡುವ ಮೂಲಕ ಹಾರಿ ಬಿಟ್ಟರು. ಮಹಮದನ ಪ್ರತಿಷ್ಠೆಗೆ ಧಕ್ಕೆ ತರುವ ರೀತಿಯಲ್ಲಿ ಅದು ಶೀಘ್ರವಾಗಿ ಅತ್ತಿತ್ತ ಹರಿದಾಡ ಹತ್ತಿತು. ಇದರಿಂದ ಮಹಮದ್ ಅತೀವ ಚಿಂತಿತನಾದ.ಮಹಮದನ ವಿರುದ್ಧ ಟೀಕೆ ಟಿಪ್ಪಣಿ ಮಾಡುವವರಿಗೆ, ಆತನ ಪ್ರವಾದಿತನದ ಹೇಳಿಕೆಯನ್ನು ವಿಡಂಬನೆ ಮಾಡುತ್ತಿದ್ದವರಿಗೆ, ಆತನ ನಡತೆ ಹಾಗೂ ಅಭಿಪ್ರಾಯಗಳನ್ನು ಹಾಸ್ಯ ಮಾಡಿ ಹಂಗಿಸುತ್ತಿದ್ದವರಿಗೆ ಆಯೆಷಾಳ ಕಥೆ ಒಂದು ರಂಗುರಂಗಿನ ಸುದ್ದಿಯಾಗಿ ಪರಿಣಮಿಸಿತ್ತು. ಆವರೆಲ್ಲಾ ಮಹಮದ್ ಈ ಬಗ್ಗೆ ಯಾವ ಕ್ರಮ ಕೈಗೊಂಡಾನು? ಹೇಗೆ ತಾನೆ ಈ ಝಂಜಡದಿಂದ ಪರಿಹಾರ ಕಂಡಾನು ಎನ್ನುವ ಕೆಟ್ಟ ಕುತೂಹಲ ಇದ್ದೇ ಇತ್ತು. ಹಾಗೊಮ್ಮೆ ಆಕೆಯನ್ನ ಆದ ಪ್ರಮಾದಕ್ಕಾಗಿ ಶಿಕ್ಷಿಸಿದರೆ ತನ್ನ ನೆಚ್ಚಿನ ಬಂಟ, ಅನುಯಾಯಿ, ಮಿತ್ರ ಹಾಗೂ ಮಾವನೂ ಆಗಿದ್ದ ಅಬು ಬಕರನ ವಿರೋಧ ಕಟ್ಟಿಕೊಳ್ಳಬೇಕಾಗುತ್ತಿತ್ತು. ಹಾಗಂತ ಒಂದು ವೇಳೆ ಆಕೆಯನ್ನ ಕ್ಷಮಿಸಿ ಬಿಟ್ಟು ಬಿಟ್ಟರೆ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದಂತಾಗಿ ಕಂಡವರ ಹಾಸ್ಯ ಹಾಗೂ ಗೇಲಿಗೆ ಬಲಿಯಾಗ ಬೇಕಾಗುತ್ತಿತ್ತು. ಒಟ್ಟಿನಲ್ಲಿ ಅತ್ತ ದರಿ ಇತ್ತ ಪುಲಿ ಅನ್ನುವ ಪರಿಸ್ಥಿತಿಯಲ್ಲಿ ಆಗ ಅವನಿದ್ದ. ಅದೆರಡೂ ಬೇಡ ತಾನು ತಟಸ್ಥನಾಗಿರೋಣ ಅಂದರೆ ಅದೆ ಕಾರಣಕ್ಕೆ ನಗರದಲ್ಲಿ ಅಂತಃಕಲಹ ಭುಗಿಲೆದ್ದು ರಕ್ತಪಾತವಾಗಿ ಹಾದಿಬೀದಿಯ ರೋಷದ ಮಾತು"ಕಥೆ"ಗಳು ಹಿಂಸಾಚಾರಕ್ಕೆ ತಿರುಗುವ ಲಕ್ಷಣಗಳೂ ಕೂಡಾ ಕಂಡು ಬಂತು. ಇದೆಲ್ಲದರ ಪರಿಣಾಮ ಕವಿಗಳು ಆ ಬಗ್ಗೆ ಕುಕವಿತೆ ರಚಿಸಿ ಹಾಡಿಯಾರು ಎನ್ನುವ ಭಯ ಸಹ ಆತನನ್ನ ಆವರಿಸಿತು.ಹೀಗಾಗಿ ಈ ಲೋಕಾಪವಾದದಿಂದ ತಪ್ಪಿಸಿಕೊಳ್ಳಲು ಆತ ಮುಂದಾದ. ತಾನೆ ಮಸೀದಿಯ ಪ್ರಾರ್ಥನಾ ಸಭೆಯ ವೇಳೆ ಗದ್ದುಗೆ ಏರಿ ಕೂತಿದ್ದಾಗ ಜನರನ್ನ ಉದ್ದೇಶಿ ಸಿಅವರೆಲ್ಲರಿಗೂ ತನ್ನ, ಅಂದರೆ ಪ್ರವಾದಿಯ ಕುಟುಂಬದ ಬಗ್ಗೆ ಹಾದಿಬೀದಿಗಳಲ್ಲಿ ಹಗುರಾಗಿ ಹರಟಿ ವಿನಃ ಕಾರಣ ಗುಲ್ಲೆಬ್ಬಿಸಿದ ಅಧರ್ಮಿಗಳೆಂದು ಛೀಮಾರಿ ಹಾಕಿದ. ಇದನ್ನ ಆಶ್ಚರ್ಯಕರವಾಗಿ ಕೆಲವರು ಪ್ರತಿಭಟಿಸಿದರು! ಮಾತುಕತೆಯ ನಡುವೆ ವಾಗ್ವಾದಗಳಾಗಿ ಅದು ಮಾರಾಮಾರಿಗೆ ತಿರುಗುವ ಲಕ್ಷಣ ಕಂಡು ಬಂದಾಗ ಎಚ್ಚೆತ್ತ ಮಹಮದ್ ತಾನೆ ಮಧ್ಯ ಪ್ರವೇಶಿಸಿ ಅವರನ್ನ ಸಮಾಧಾನಗೊಳಿಸಿದ! ಮಸೀದಿಯಿಂದ ಕೆಲವರೊಡನೆ ಕೂಡಿ ನೇರ ಮಾವ ಅಬುಬಕರನ ಮನೆಗೆ ಆತ ತೆರಳಿದ. ಅಲ್ಲಿ ತನ್ನ ಹಿತೈಶಿಗಳಾದ ಅಲಿ ಹಾಗೂ ಒಸಾಮರೊಡನೆ ಸಮಾಲೋಚನೆ ನಡೆಸಿದ. ಅದರ ಅನುಸಾರ ಎಳೆ ಪತ್ನಿ ಆಯೆಷಾಳ ಕೋಣೆಗೆ ತೆರಳಿ "ದೇವರಿಗೆ ಹೆದರು! ನೀನು ತಪ್ಪು ಮಾಡಿರೋದೆ ಹೌದಾದರೆ ಆತನ ಮುಂದೆ ಅದನ್ನ ಒಪ್ಪಿ ಕ್ಷಮೆ ಕೇಳು" ಎಂದ.


ಅವನ ಆ ಮಾತುಗಳನ್ನ ಆಲಿಸಿದ ಆಯೇಷಾ ಬಿಕ್ಕಿಬಿಕ್ಕಿ ಅತ್ತಳು. ಅವಳ ಸ್ವಾಭಿಮಾನಕ್ಕೆ ಇದರಿಂದ ಧಕ್ಕೆಯಾಗಿತ್ತು. "ದೇವರ ಕ್ಷಮೆ ಕೇಳಲಿಕ್ಕೆ ನಾನೇನೂ ತಪ್ಪು ಮಾಡಿಲ್ಲ, ನಾನು ತಪ್ಪು ಮಾಡಿಲ್ಲ ಅನ್ನುವುದರ ಬಗ್ಗೆ ದೇವರಿಗೆ ಮಾತ್ರ ಅರಿವಿದೆ. ಸುಳ್ಳು ಸುಳ್ಳು ತಪ್ಪೊಪ್ಪಿಕೊಂಡರೂ ಅವನಿಗೆ ನನ್ನ ಸತ್ಯವಂತಿಕೆಯ ಅರಿವಿದ್ದೇ ಇರುತ್ತದೆ. ತಪ್ಪನ್ನ ನಾನು ಒಪ್ಪದಿದ್ದರೆ ನೀವ್ಯಾರೂ ಒಪ್ಪದಿರುವಂತೆಯೂ ಕಾಣುತ್ತಿಲ್ಲ! ಹೀಗಾಗಿ ನಾನು ಈಗ ಜೋಸಫ್'ನ ತಂದೆ ಹೇಳಿದಂತೆ 'ಸೈರಣೆ ಮಾತ್ರ ನನ್ನನ್ನು ಕಾಪಾಡುತ್ತದೆ, ದೇವರೆ ನನಗೆ ದಿಕ್ಕು'" ಎಂದು ಗಳಗಳನೆ ಅತ್ತಳು.ಅವಳ ಮಾತುಗಳನ್ನ ಕೇಳಿ ನೆರೆದ ಎಲ್ಲರೂ ಸ್ತಬ್ಧರಾದರು. ಇದನ್ನ ಅಲಿಸುತ್ತಿದ್ದಂತೆ ಮಹಮದ್ ಬವಳಿ ಬಂದವನಂತೆ ಕೆಳಕ್ಕುರುಳಿದ. ಅವನಿಗೆ ಬಟ್ಟೆ ಹೊದೆಸಿ ತಲೆಗೆ ದಿಂಬು ಕೊಟ್ಟು ಉಪಚರಿಸಿದರು. ಹಾಗೆಯೆ ಅವನನ್ನ ಕೆಲ ಹೊತ್ತು ಬಿಟ್ಟ ನಂತರ ಹಟಾತ್ತಾಗಿ ಅವನ ಚರ್ಯೆಯಲ್ಲಿ ನಾಟಕೀಯ ಬದಲಾವಣೆ ಕಂಡು ಬಂತು. ಆತ ನಿದ್ದೆಯಿಂದ ಎದ್ದೆವನಂತೆ ಕಣ್ಣು ಬಿಟ್ಟ. ಬೆವರಿನ ಹನಿಗಳು ಆತನ ಹಣೆಯ ಮೇಲೆ ಮೂಡಿದ್ದವು. ಉದ್ವೇಗಿತನಾಗಿ "ಆಯೇಷಾ ಸಂತೋಷ ಪಡು! ನಾನು ದೇವರನ್ನ ಸಂದರ್ಶಿಸಿ ಬಂದೆ! ಆತ ನಿನ್ನನ್ನ ನಿರಪರಾಧಿ ಎಂದು ಘೋಷಿಸಿದ್ದಾನೆ!" ಎಂದು ಬಹಿರಂಗವಾಗಿ ಸಾರಿದ. ಆತ ಅಂದು ಸಾರಿದ ಖುರ್ಹಾನಿನ ಸುರಾವೆ ಇಂದಿಗೂ ವ್ಯಭಿಚಾರದ ಕುರಿತು ಮುಸಲ್ಮಾನರು ಅನುಸರಿಸುತ್ತಿರುವ ಕಟ್ಟಳೆಯ ಸುರಾವಾಗಿದೆ ಎನ್ನುತ್ತಾರೆ ಸರ್ ಮ್ಯೂರ್ ತಮ್ಮ 'ಲಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಒಂದು ಹಾಗೂ ಎರಡರಲ್ಲಿ.ಹೀಗೆ ಹದಿನಾಲ್ಕು ವರ್ಷ ಪ್ರಾಯದ ಎಳೆ ಪತ್ನಿ ತನ್ನ ಪತಿಗಾಗಲಿ, ತಂದೆ ತಾಯಿಯರಿಗಾಗಲಿ ಮಣಿಯದೆ ಕೇವಲ ಅಲ್ಲಾಹನಿಗೆ ಮಾತ್ರ ಮಣಿದಳು.  ಆಕೆಯ ಭಕ್ತಿ ಹಾಗೂ ಗೌರವ ಕೇವಲ ಸರ್ವಶಕ್ತನಿಗೆ ಮಾತ್ರ ಸಂದಿತು. ಈ ಸಂದರ್ಭ ಕಳೆದ ನಂತರ ಮಹಮದ್ ತನ್ನ ಎಳೆಯ ಹೆಂಡತಿಯ ನಡತೆಯ ಬಗ್ಗೆ ಗುಲ್ಲೆಬ್ಬಿಸಿದ ವ್ಯಕ್ತಿಗಳನ್ನ ವಿಚಾರಣೆಗೆ ಒಳ ಪಡಿಸಿ ಕಠಿಣವಾಗಿ ಶಿಕ್ಷಿಸಿದ. ತನ್ನ ಇನ್ನೊಬ್ಬ ಹೆಂಡತಿ ಝೈನಬ್'ಳ ತಮ್ಮ ಹಮ್ಝಾ ಸಹ ಶಿಕ್ಷೆಯಿಂದ ಹೊರತಾಗಿರಲಿಲ್ಲ! ಅವರೆಲ್ಲರಿಗೂ ನಲವತ್ತು ಛಡಿ ಏಟಿನ ಶಿಕ್ಷೆ ವಿಧಿಸಲಾಯಿತು ಎನ್ನುತ್ತಾರೆ ಇತಿಹಾಸಕಾರ ಕ್ಯಾರನ್ ಅರ್ಮಸ್ಟ್ರಾಂಗ್ ತಮ್ಮ 'ಮಹಮದ್' ಕೃತಿಯ ಪುಟ ಸಂಖ್ಯೆ ೧೭೫ರಲ್ಲಿ.ಆದರೆ ಮದೀನಾದ ಗಣ್ಯ ಪ್ರಜೆ ಸಿರಿವಂತ ಅಬ್ದುಲ್ಲ ಇಬ್ನ್ ಒಬೈ ಹಾಗೂ ಕವಿ ಹಸ್ಸನ್ ಮಾತ್ರ ಈ ಶಿಕ್ಷೆಗೆ ಗುರಿಯಾದವರ ಪಟ್ಟಿಯಲ್ಲಿ ಇರಲಿಲ್ಲ. ಹೀಗೆಯೆ ಆತ ಅಯೇಷಾಳನ್ನು ತಂದು ಬಿಟ್ಟಿದ್ದ ಸಫ್ಯಾನ್ ಗುಲ್ಲೆಬ್ಬಿಸಿದ್ದಕ್ಕೆ ಸಿಟ್ಟಿಗೆದ್ದು ಕವಿ ಹಸ್ಸನ್'ನನ್ನು ಕತ್ತಿಯಿಂದ ಗಾಯಗೊಳಿಸಿ ಹಲ್ಲೆ ಮಾಡಿದ್ದನ್ನು ಪರಿಗಣಿಸಿ ಆತನನ್ನು ಸಂತೈಸಿ ಜಮೀನು ಹಾಗೂ ಆಸ್ತಿಯನ್ನ ಪರಿಹಾರ ರೂಪದಲ್ಲಿ ನೀಡಿ ಅವನನ್ನ ಸಂತೈಸಲಾಯಿತು. ಇದರಿಂದ ಸಂತೋಷಗೊಂಡ ಆ ಕವಿ ಮಹಾಶಯ ಯಾವ ನಾಲಗೆಯಿಂದ ಆಯೇಶಾಳನ್ನು ಹೀಗಳೆದು ಕವಿತೆ ಕಟ್ಟಿ ಹಾಡಿದ್ದನೋ ಅದೆ ಎಲುಬಿಲ್ಲದ ನಾಲಗೆಯಿಂದ ಆಕೆಯ ಅಂದ ಚೆಂದ ಹಾಗೂ ಸೌಂದರ್ಯವನ್ನ ಹಾಡಿ ಹೊಗಳಿ ಅಕೆಯ ಅಭಿಮಾನ ಗಳಿಸಿಕೊಂಡ!


( ಇನ್ನೂ ಇದೆ.)

No comments: