13 November 2015

ವಲಿ - ೨೮








ಇದೀಗ ಮಹಮದ್ ಹಾಗೂ ಆತನ ನೂತನ ಮತ ಇಸ್ಲಾಮಿನ ಅನುಯಾಯಿಗಳಾದ ನವ ಮತಾಂತರಿತರು ಮದೀನಾಕ್ಕೆ ನಿರಾಶ್ರಿತರಾಗಿ ಓಡಿ ಬಂದು ಅಲ್ಲಿ ಬೇರು ಬಿಟ್ಟು ಪೊಗದಸ್ತಾಗಿ ಸಾಮಾಜಿಕವಾಗಿ ಬೆಳೆದು ಆರು ವರ್ಷಗಳೆ ಕಳೆದಿದ್ದವು. ಅದೇನೆ ಯಶಸ್ಸು ಹಾಗೂ ಸಾಧನೆಯನ್ನ ತಾನು ಗಳಿಸಿದ್ದರೂ ಸಹ ವಾರ್ಷಿಕವಾಗಿ ನಡೆಯುತ್ತಿದ್ದ ಮೆಕ್ಕಾದ ಪವಿತ್ರ ತೀರ್ಥಯಾತ್ರೆಯನ್ನ ಈ ಅವಧಿಯಲ್ಲಿ ಒಮ್ಮೆಯೂ ಮಾಡಲಾಗದೆ ಮಹಮದ್ ಪರಿತಪಿಸುತ್ತಿದ್ದ. ಯಾತ್ರೆ ಮಾಡುವುದು ಅತ್ತಲಾಗಿರಲಿ ಕಾಬಾ ಗುಡಿಯ ಹತ್ತಿರವೂ ಸಹ ಆತನಿಗಲ್ಲ ಆತನ ನೆರಳಿಗೂ ಈ ಆರು ವರ್ಷಗಳಲ್ಲಿ ಸುಳಿಯಲು ಆಗಿರಲಿಲ್ಲ. ತನ್ನ ಸಾಮಾಜಿಕ ಹಾಗೂ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಕಾಬಾ ದರ್ಶನವನ್ನ ತಾನು ಮಾಡಲಾಗುತ್ತಿಲ್ಲವೆಂಬ ನಿರಂತರ ಕೊರಗು ಆತನನ್ನ ಕಾಡುತ್ತಿತ್ತು.



ಮೆಕ್ಕಾದ ಕಾಬಾಕ್ಕೆ ಯಾತ್ರಿಸಿ ಅಲ್ಲಿ ಆರಾಧನೆ ನಡೆಸುವ ಮಹತ್ವಾಕಾಂಕ್ಷೆಯನ್ನ ಆತನ ಮನ ಹೊತ್ತಿತ್ತು. ಈ ಆರಾಧನೆಗೆ ಅಡ್ಡಿಯಾಗಿದ್ದ ಖುರೈಷಿಗಳನ್ನ ಆತ ಖುರಹಾನಿನ ಸುರಾಗಳ ಮೂಲಕ ಮನಸಾರೆ ಶಪಿಸಿದ. ಅವರ ಈ ನಡೆಯನ್ನ ಕಟು ನುಡಿಗಳಲ್ಲಿ ಖಂಡಿಸಿದ. ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಬಾಯಿ ಮಾತಿನ ಮೂಲಕ ಮಾತ್ರ ಸಿಟ್ಟು ಹೊರಹಾಕುವ ಪರಿಸ್ಥಿತಿಯಲ್ಲಿ ಇದ್ದದ್ದೂ ಸಹ ಇದಕ್ಕೆ ಕಾರಣವಾಗಿದ್ದಿತು ಅನ್ನುತ್ತಾರೆ ಇತಿಹಾಸಕಾರ ಡಿ ಲೆಸ್ಸಿ ಒ ಲೆರ್ರಿ ತಮ್ಮ ಕೃತಿ 'ಇಸ್ಲಾಮಿಕ್ ಥಾಟ್ ಎಂಡ್ ಇಟ್ಸ್ ಪ್ಲೇಸ್ ಇನ್ ಹಿಸ್ಟರಿ'ಯ ಪುಟ ಸಂಖ್ಯೆ ಐವತ್ತೊಂಬತ್ತರಲ್ಲಿ.


ಈ ಮೆಕ್ಕಾ ಭೇಟಿಯ ಆರಾಧನೆಯ ಬಯಕೆ ಉತ್ಕಟವಾಗಿ ಆತನನ್ನು ಕಾಡತೊಡಗಿದ್ದಾಗ ಆತ ಕನಸು ಮನಸಿನಲ್ಲೂ ಅದನ್ನೆ ಧ್ಯಾನಿಸುತ್ತಿದ್ದ. ಹೀಗಿರುವಾಗ ಒಂದು ರಾತ್ರಿ ತಾನು ಮೆಕ್ಕಾದ ಯಾತ್ರೆ ಕೈಗೊಂಡು ಅಲ್ಲಿ ಕಾಬಾದ ಸುತ್ತ ವಿಧಿವತ್ತಾಗಿ ಏಳು ಬಾರಿ ಪ್ರದಕ್ಷಿಣೆ ನಡೆಸಿ ಪ್ರಾಣಿ ಬಲಿಯನ್ನೂ ಸಹ ನೀಡಿ ಹಿಂದಿರುಗಿದಂತೆ ಕನಸು ಕಂಡ. ಮಾರನೆ ಬೆಳಗ್ಯೆ ಈ ಬಗ್ಗೆ ತನ್ನ ಅನುಯಾಯಿಗಳೊಂದಿಗೆ ಈ ಕನಸಿನ ಬಗ್ಗೆ ವಿವರವಾಗಿ ಚರ್ಚಿಸಿದ. ತನ್ನ ಕನಸನ್ನು ನಿಜವಾಗಿಸಿಕೊಳ್ಳಬೇಕು ಹೀಗಾಗಿ ಮೆಕ್ಕಾದ ಯಾತ್ರೆ ಮಾಡಲೇಬೇಕು ಎಂದು ಅಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಅದು ಪವಿತ್ರ ಮಾಸವಾಗಿತ್ತು. ಹೀಗಾಗಿ ಅರೇಬಿಯಾದ ಜನರು ಆ ತಿಂಗಳಿನಲ್ಲಿ ಯಾವುದೆ ಹಿಂಸಾಚಾರದ ಕೃತ್ಯ ನಡೆಸುವಂತಿರಲಿಲ್ಲ.



ಈ ವಾರ್ಷಿಕ ತೀರ್ಥಯಾತ್ರೆಯನ್ನು ಯಾತ್ರೆಯನ್ನ ಚಿಕ್ಕಯಾತ್ರೆ ಹಾಗೂ ದೊಡ್ದ ಯಾತ್ರೆ ಎಂದು ಎರಡಾಗಿ ವಿಭಾಗಿಸಿ ಆಚರಣೆಗಳಲ್ಲಿಯೂ ಸಹ ಸಣ್ಣಪುಟ್ಟ ವ್ಯತ್ಯಾಸಗಳನ್ನು ಅದರಲ್ಲಿ ಅಡಕಗೊಳಿಸಿ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಅದನ್ನ ಅನುಸರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಕಾರಣದಿಂದ ಅದೆ ತಿಂಗಳಿನಲ್ಲಿ ಯಾತ್ರೆ ಕೈಗೊಳ್ಳಲು ಮಹಮದ್ ನಿರ್ಧರಿಸಿದ. ಆ ನಿರ್ಧಾರ ಕೇವಲ ಯಾತ್ರೆಗೆ ಸೀಮಿತವಾಗಿದ್ದರಿಂದ ಮೆಕ್ಕಾದ ಒಡೆಯರಾದ ಖುರೈಷಿಗಳೂ ಸಹ ಅದನ್ನ ವಿರೋಧಿಸಲಾರರು ಎಂದಾತ ಭಾವಿಸಿದ. ಗಮನಿಸಿ, ಮೆಕ್ಕಾದ ತೀರ್ಥಯಾತ್ರೆ ಹಝ್ ಇದು ಇಸ್ಲಾಮಿನ ಪದ್ಧತಿ ಅಲ್ಲ. ಇಸ್ಲಾಮ್ ಆರಂಭವಾಗುವ ಮೊದಲೆ ಹೀಗೆ ಯಾತ್ರೆ ಕೈಗೊಳ್ಳುವ ಹಾಗೂ ಏಳೇಳು ಬಾರಿ ಗುಡಿಯ ಸುತ್ತ ಸುತ್ತುವ, ಕರಿ ಶಿಲೆಗೆ ಮುತ್ತಿಕ್ಕುವ, ಕಾಳಿಯನ್ನ ಹೋಲುತ್ತಿದ್ದ ಅಲ್ ಲಾಟ್ ಎಂಬ ಹೆಣ್ಣು ದೇವತೆಗೆ ಪ್ರಾಣಿಬಲಿ ನೀಡುವ ಹಾಗೂ ಸೈತಾನ ಪ್ರತಿಮೆಗೆ ( ಸದ್ಯ ಕಂಭಕ್ಕೆ.) ಕಲ್ಲೆಸೆಯುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಮುಸಲ್ಮಾನರಿಗೆ ಅದೆ ಪದ್ಧತಿಯನ್ನ ನಕಲು ಮಾಡಿ ಅನುಸರಿಸಲು ಮಹಮದ್ ಕರೆ ಕೊಟ್ಟಿದ್ದನೆ ಹೊರತು ಇದೇನೂ ಇಸ್ಲಾಮಿನ ಕಲ್ಪನೆ ಅಲ್ಲವೆ ಅಲ್ಲ. ಸದ್ಯ ಅದನ್ನೆ ಇಸ್ಲಾಮಿನ ಆಚರಣೆ ಎನ್ನುವ ಭ್ರಮೆಯಲ್ಲಿ ಕುರುಡಾಗಿ ಅನುಸರಿಸಲಾಗುತ್ತಿದೆ.



ತನ್ನ ಒಂದೂವರೆ ಸಾವಿರ ಅನುಯಾಯಿಗಳೊಂದಿಗೆ ಮಹಮದ್ ಈ ಮೆಕ್ಕಾ ಯಾತ್ರೆ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡ. ತಾನೂ ಸಹ ಇನ್ನಿತರ ಯಾತ್ರಿಕರಂತೆ ಬಿಳಿ ಪಂಚೆ ಉಟ್ಟು, ಮೈ ಮೇಲೆ ಬಿಳಿ ಶಾಲು ಹೊದ್ದು ಸ್ವಂತದ ಒಂಟೆ ಏರಿ ಆತ ಹೊರಟ. ತನ್ನ ಹೆಂಡತಿಯರಲ್ಲಿ ಉಮ್ ಸಲ್ಮಾಳನ್ನು ಮಾತ್ರ ತನ್ನೊಂದಿಗೆ ಆತ ಕರೆದೊಯ್ದಿದ್ದ. ಯಾತ್ರಿಕರ ತಂಡ ಮೆಕ್ಕಾದೆಡೆಗೆ ಸಾಗಿತು. ಈ ಸುದ್ದಿ ಅರಿವಿಗೆ ಬಂದಾಗ ಮೊದಲಿಗೆ ಸಹಜವಾಗಿ ಖುರೈಷಿಗಳು ಆತಂಕಿತರಾದರು. ಅವರ ಮನಸ್ಸು ಆತನ ಯಾತ್ರೆಯ ಪ್ರಾಮಾಣಿಕತೆಯನ್ನು ಸಂಶಯಿಸಿತು. ಆತ ಅದೇನೆ ಶಾಂತಿ ಮಂತ್ರ ಪಠಿಸಿದ್ದರೂ ಅದನ್ನವರು ನಂಬಲು ತಯ್ಯಾರಿರಲಿಲ್ಲ. ಹೀಗಾಗಿ ಊರಿನ ಎಲ್ಲರೂ ಶಸ್ತ್ರಸಜ್ಜಿತರಾಗಿ ಅವನ ದಂಡನ್ನ ತಡೆಯಲು ತಯ್ಯಾರಾದರು.



ಅದೇನೇ ಆದರೂ ಪವಿತ್ರ ಮಾಸ ಎನ್ನುವುದನ್ನೂ ಸಹ ಮರೆತು ಹೋರಾಡಿ ರಕ್ತಪಾತ ಮಾಡಿಯಾದರೂ ಸರಿ ಮಹಮದ್ ಹಾಗೂ ಅವನ ಬಂಟರು ಮೆಕ್ಕಾ ಪ್ರವೇಶಿಸದಂತೆ ತಡೆಯಲೆಬೇಕೆಂದು ಅವರೆಲ್ಲಾ ಪಣ ತೊಟ್ಟರು. ಊರ ಹೊರಗೆ ಖುರೈಷಿ ಪಡೆ ಮಹಮದನನ್ನು ಎದುರುಗೊಳ್ಳಲು ಬಂದು ಜಮಾಯಿಸಿತು. ನಡು ದಾರಿಯಲ್ಲಿ ಓಸ್ಫಾನ್'ನಲ್ಲಿ ಬೀಡುಬಿಟ್ಟಿದ್ದ ಮಹಮದನಿಗೂ ಈ ಸಂಗತಿ ತನ್ನ ಗೂಢಚರರ ಮೂಲಕ ಅರಿವಾಗಿ ಸಾಂಪ್ರದಾಯಿಕವಾಗಿ ಮುಖ್ಯರಸ್ತೆಯಲ್ಲಿಯೆ ಸಾಗಿದರೆ ಏನಾದರೂ ಅನಾಹುತವಾದರೂ ಆಶ್ಚರ್ಯವಿಲ್ಲವೆಂದು ತರ್ಕಿಸಿದ ಆತ ಪರ್ಯಾಯ ಮಾರ್ಗವೊಂದನ್ನ ಹಿಡಿದು ಮೆಕ್ಕಾದ ದಿಕ್ಕಿನತ್ತ ಮುಂದುವರೆದ. ಇತ್ತ ಖುರೈಷಿಗಳು ಊರ ತಲೆ ಬಾಗಿಲಿನಲ್ಲಿ ಆತನ ನಿರೀಕ್ಷೆಯಲ್ಲಿ ಕಾಯುತ್ತಿದ್ದರೆ ಈತ ಊರಿನ ಇನ್ನೊಂದು ದಿಕ್ಕಿನ ದುರ್ಗಮ ಹಾದಿಯನ್ನ ಅನುಸರಿಸಿ ಊರ ಹತ್ತಿರವೆ ಸಾಗುತ್ತಿದ್ದ. ಅಲ್ ಹೊದೈಬಿಯಾ ಎನ್ನುವ ಇನ್ನೊಂದು ಬದಿಯ ಬಯಲು ಪ್ರದೇಶವನ್ನವನು ಬಂದು ಮುಟ್ಟಿದ. ಆತನ ಒಂಟೆ ಅಲ್ಲಿ ನಿಂತಿತು.



ಅದು ದೈಹಿಕ ಆಯಾಸದಿಂದ ನಿಂತದ್ದಲ್ಲ, ತನಗೆ ದೇವರ ಆಜ್ಞೆಯಾಗಿದೆ ಈ ಸ್ಥಳದಲ್ಲಿ ತಂಗಲು. ಹೀಗಾಗಿ ಒಂಟೆಯೂ ಅದನ್ನ ಅರಿತು ನಿಂತಿದೆ! ಹೀಗಾಗಿ ಇಲ್ಲಿಯೆ ತಂಗುವ ಎಂದಾತ ಅನುಯಾಯಿಗಳಿಗೆ ಘೋಷಿಸಿದ. ಜಲಮೂಲಗಳನ್ನ ಅರಸಲಾಯಿತು ಕೆಲವು ಬತ್ತಿದ ಬಾವಿಗಳು ಪತ್ತೆಯಾದವು. ಅವನ್ನ ಇನ್ನಷ್ಟು ಕೆದಕಿದಾಗ ನೀರಿನ ಸೆಲೆ ಉಕ್ಕಿತು. ಅವರೆಲ್ಲ ಸಂತುಷ್ಟರಾಗಿ ಅಲ್ಲಿಯೆ ಲಂಗರು ಹಾಕಿದರು. ತತ್ಕಾಲಿಕವಾಗಿ ಅಲ್ಲಿಯೆ ಗುಡಾರಗಳನ್ನ ಕಟ್ಟಿಕೊಳ್ಳಲಾಯಿತು. ಈ ಸಂಗತಿ ಖುರೈಷಿಗಳಿಗೆ ತಿಳಿದಾಗ ಅವರು ಮೊದಲಿಗೆ ಆಶ್ಚರ್ಯ ಚಕಿತರಾದರು. ಅವರ ಪಡೆ ಅಲ್ಲಿಗೂ ಧಾವಿಸಿಬಂತು. ಅನಿರೀಕ್ಷಿತ ರೀತಿಯಲ್ಲಿ ತಮಗಿಂತ ಮೊದಲು ಆತನ ಈ ಬಳಸುದಾರಿ ಹಿಡಿದು ಮೆಕ್ಕಾ ಮುಟ್ಟಿದ ತಂತ್ರದ ಮರ್ಮವನ್ನು ಅರಿಯಲು ತಮ್ಮೊಳಗೆ ಸಮಾಲೋಚಿಸಿ ನಿಯೋಗವೊಂದನ್ನ ಮಹಮದನ ಬಳಿ ಕಳುಹಿಸಲಾಯಿತು. ಬುದೈಲ್ ಎನ್ನುವ ಖುರೈಷಿ ಮುಖಂಡನ ನೇತೃತ್ವದಲ್ಲಿ ಬಂದ ಈ ನಿಯೋಗವನ್ನು ಎದುರುಗೊಂಡ ಮಹಮದ್ ತನ್ನ ಈ ಯಾತ್ರೆ ಕೇವಲ ಶಾಂತ ಉದ್ದೇಶದ್ದು ಎನ್ನುವುದನ್ನ ಸ್ಪಷ್ಟ ಪಡಿಸಿದ. ಹಾಗೊಂದು ವೇಳೆ ತನ್ನ ಭಕ್ತಿಯ ಅಭಿವ್ಯಕ್ತಿಗೆ ಯಾರಾದರೂ ತಡೆಯೊಡ್ದಿದರೆ ತಾನೂ ಸಹ ರಕ್ತಪಾತಕ್ಕೆ ಹೇಸುವುದಿಲ್ಲ ಎಂದಾತ ನಿರ್ಧಾರದ ಧ್ವನಿಯಲ್ಲಿ ಸ್ಪಷ್ಟ ಪಡಿಸಿದ.




ಬುದೈಲ್ ಹಿಂದಿರುಗಿ ಈ ಮಾತನ್ನ ಖುರೈಷಿಗಳಿಗೆ ದಾಟಿಸಿದ ನಂತರ ಅದರ ಸಾಧ್ಯಾಸಾಧ್ಯತೆಗಳನ್ನ ವಿವರವಾಗಿ ಚರ್ಚಿಸಿ ಖುರೈಷಿಗಳು ಓರ್ವಾ ಎನ್ನುವ ಇನ್ನೊಬ್ಬ ದೂತನನ್ನು ಅವನ ಬಳಿ ಕಳುಹಿಸಿದರು. ಆತ ಮೆಕ್ಕಾದ ಗಣ್ಯವಕ್ತಿಯಾಗಿದ್ದ ಹಾಗೂ ಮುಖಂಡ ಅಬು ಸಫ್ಯಾನನ ಅಳಿಯನೂ ಆಗಿದ್ದ. ಮಹಮದನ ಬಿಡಾರದಲ್ಲಿ ಅವನೊಡನೆ ಸಮಾಲೋಚಿಸುವಾಗ ಆತ ಸೂಕ್ಷ್ಮವಾಗಿ ಮಹಮದನ ಅನುಯಾಯಿಗಳ ಗುಣ ನಡತೆಯನ್ನೂ ಸಹ ಗಮನಿಸುತ್ತಿದ್ದ. ಅವರೆಲ್ಲಾ ವಿಪರೀತ ವಿನೀತರೂ ಆಜ್ಞಾನುವರ್ತಿಗಳು ಆಗಿದ್ದು ಆತನೊಂದಿಗೆ ವಿಪರೀತ ಪ್ರೀತಿ ಗೌರವ ಹಾಗೂ ಆದರಗಳೊಂದಿಗೆ ಅವನೊಂದಿಗೆ ವರ್ತಿಸುತ್ತಿದ್ದರು ಎನ್ನುವುದು ಆತನಿಗೆ ಅರಿವಾಯಿತು.



ಮಹಮದನ ಪ್ರವಾದಿತ್ವದ ಬಗ್ಗೆ ಅವರೆಲ್ಲಾ ಗಾಢ ನಂಬಿಕೆ ಇಟ್ಟಿರುವುದರಿಂದಲೆ ಈ ಪರಿ ಭಕ್ತಿಯಿಂದ ವರ್ತಿಸುತ್ತಾರೆ ಎನ್ನುವುದನ್ನ ಆತನ ಮನಸ್ಸು ಗ್ರಹಿಸಿತು. ಈ ಅಭಿಪ್ರಾಯವನ್ನೆ ಮರಳಿ ಬಂದ ಆತ ಖುರೈಷಿಗಳಿಗೂ ಅರುಹಿದ. ಆದರೆ ಅವರಲ್ಲಿ ಯಾರೊಬ್ಬರೂ ಈ ಮಾತಿನಿಂದ ವಿಚಲಿತರಾಗಲಿಲ್ಲ. ಯಾವುದೆ ಕಾರಣಕ್ಕೂ ಪೂರ್ವಾನುಮತಿ ಪಡೆಯದೆ ಆತ ಯಾತ್ರೆ ಕೈಗೊಳ್ಳುವಂತಿಲ್ಲ ಎನ್ನುವುದನ್ನ ಅವರು ಸ್ಪಷ್ಟ ಪಡಿಸಿದರು. ಬೇಕಿದ್ದರೆ ಬರುವ ವರ್ಷ ಆತ ಯಾತ್ರೆಗೆ ಬರಬಹುದಂತಲೂ ಅದಕ್ಕೆ ಸೂಕ್ತ ಶರತ್ತುಗಳನ್ನ ವಿಧಿಸಲಾಗುವುದೆಂದೂ ತಿಳಿಸಲಾಯಿತು. ಈ ವರ್ಷ ಮಾತ್ರ ಆತ ಮೆಕ್ಕಾ ಪ್ರವೇಶಿಸುವುದು ಅಸಾಧ್ಯ ಎನ್ನುವ ಸೂಚನೆಯನ್ನವನಿಗೆ ರವಾನಿಸಲಾಯಿತು. ಅವನು ಇನ್ನೂ ಇದಕ್ಕೆ ಒತ್ತಾಯಿಸಿದರೆ ಈ ವರ್ಷದ ಯಾತ್ರೆಯನ್ನೆ ಸಂಪೂರ್ಣವಾಗಿ ರದ್ದು ಪಡಿಸಲು ಖುರೈಷಿಗಳು ನಿರ್ಧರಿಸಿದರು.


ಈ ನಡುವೆ ಮೆಕ್ಕಾ ಅಸುಪಾಸಿನ ಬೆದಾವಿನ್ ಬುಡಕಟ್ಟಿನವರು ಸಹ ಈ ಬಾರಿ ಯಾತ್ರೆಗೆ ಸನ್ನದ್ಧರಾಗಿ ಬಂದಿದ್ದರು. ಅವರು ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಸಿಡಿದೆದ್ದರು. ವಾಸ್ತವದಲ್ಲಿ ಖುರೈಷಿಗಳೊಂದಿಗೆ ಬೆದಾವಿನರು ಸ್ನೇಹ ಸಂಬಂಧ ಹೊಂದಿದ್ದರು. ಈಗ ಸಿದ್ಧರಾಗಿ ಬಂದ ನಂತರ ಯಾತ್ರೆ ಸಾಧ್ಯವಿಲ್ಲ ಎಂದರೆ ಏನರ್ಥ? ಮಹಮದ್ ಎನ್ನುವ ಒಬ್ಬ ವ್ಯಕ್ತಿಯ ದೆಸೆಯಿಂದ ನಾವೆಲ್ಲಾ ಏಕೆ ಸಂತ್ರಸ್ತರಾಗಬೇಕು? ಇದೆಂತಹ ಅರಾಜಕ ನಿರ್ಧಾರ? ಎಂದವರು ಆಕ್ಷೇಪಿಸಿದರು. ಆದರೆ ಅವರ ಈ ವಿರೋಧ ಮಾತ್ರ ಖುರೈಷಿಗಳನ್ನ ವಿಚಲಿತಗೊಳಿಸಿತು. ಒಂದೊಮ್ಮೆ ಅವರು ತಮ್ಮನ್ನ ಬಿಟ್ಟು ಹಿಂದಿರುಗಿ ಹೋದರೆ ಮಹಮದನಿಗೆ ತಮ್ಮ ಮೇಲೆ ಧಾಳಿ ನಡೆಸಲಿಕ್ಕೆ ಮುಕ್ತ ಆಹ್ವಾನವನ್ನ ನೀಡಿದಂತಾಗುತ್ತದೆ ಎಂದವರು ಹೆದರಿದರು.



ಹೀಗಾಗಿ ಬೆದಾವಿನ್ ಮುಖಂಡರಲ್ಲಿ ಸಮಾಧಾನದ ಮಾತನ್ನ ಆಡಿದ ಖುರೈಷಿಗಳು ಮರಳಿ ಅವರಲ್ಲಿ ಸಂಧಾನ ನಡೆಸಿ ಮಹಮದನನ್ನು ಮಣಿಸಲು ಪ್ರಯತ್ನಿಸುವುದಾಗಿ ಮಾತುಕೊಟ್ಟರು. ಹೀಗಾಗಿ ಯಾರಾದರೂ ಮಹಮದನ ದೂತರು ಸಂಧಾನಕ್ಕೆ ಮೆಕ್ಕಾಕ್ಕೆ ಬರಬಹುದು ಎಂದು ತಿಳಿಸಲಾಯಿತು. ಮಹಮದ್ ತನ್ನ ನೆಚ್ಚಿನ ಬಂಟ ಹಾಗೂ ಅಳಿಯನೂ ಆಗಿದ್ದ ಓಥ್ಮನ್'ನನ್ನು ಅಲ್ಲಿಗೆ ಕಳುಹಿಸಲು ನಿರ್ಧರಿಸಿದ. ಮೆಕ್ಕಾದಲ್ಲಿ ಓಥ್ಮನ್'ನನ್ನ ನೆಂಟರಿದ್ದು ಅವರು ಆತನ ಸುರಕ್ಷತೆಯ ಹೊಣೆ ಹೊತ್ತದ್ದರಿಂದ ಈ ನಿರ್ಧಾರಕ್ಕೆ ಬರಲಾಯಿತು. ಅಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಬು ಸಫ್ಯಾನನಿಗೆ ಓಥ್ಮನ್ ತಮ್ಮದು ಕೇವಲ ಶಾಂತ ಚಿತ್ತ ಯಾತ್ರೆ ಮಾತ್ರ ಅನ್ನುವುದನ್ನ ಮನವರಿಕೆ ಮಾಡಿಕೊಟ್ಟ.


ಆದರೆ ಆತನ ಯಾವುದೆ ಓಲೈಕೆಯ ಮಾತುಗಳೂ ಸಹ ಪ್ರಯೋಜನಕ್ಕೆ ಬರಲಿಲ್ಲ. ಬೇಕಿದ್ದರೆ ಓಥ್ಮನ್ ಯಾತ್ರೆ ಕೈಗೊಳ್ಳಬಹುದೆಂದೂ ಆದರೆ ಮಹಮದ್ ಯಾವುದೆ ಕಾರಣಕ್ಕೂ ಈ ಸಾರಿ ಯಾತ್ರೆ ಮಾಡುವಂತಿಲ್ಲವೆಂದು ಕಟ್ಟುನಿಟ್ಟಾಗಿ ತಿಳಿಸಲಾಯಿತು. ಇತ್ತ ಮಹಮದನ ಬಿಡಾರದಲ್ಲಿ ಓಥ್ಮನ್ ಸಂರಕ್ಷಣೆಯ ಬಗ್ಗೆ ವಿಪರೀತ ಆತಂಕ ಮನೆಮಾಡಿತ್ತು. ಆತನ ಕೊಲೆಯಾಗಿರಬಹುದೆ? ಎನ್ನುವ ಊಹಾಪೋಹದಲ್ಲಿ ಅವರೆಲ್ಲಾ ಉದ್ವಿಗ್ನರಾಗಿ ಕಾಯುತ್ತಾ ಕೂತಿದ್ದರು. ಆತಂಕಿತನಾಗಿದ್ದ ಮಹಮದ್ ಅಲ್ಲಿನ ಅಕೇಶಿಯಾ ಮರದ ನೆರಳಿನಲ್ಲಿ ಗುಂಪುಗಟ್ಟಿ ಕೂತು ತನ್ನ ಎಲ್ಲಾ ಅನುಯಾಯಿಗಳಿಂದ ಕೈ ಮೇಲೆ ಕೈ ಹಾಕಿಸಿ ಭಾಷೆ ತೆಗೆದುಕೊಂಡ. ಹಾಗೊಂದು ವೇಳೆ ಓಥ್ಮನ್ ಕೊಲೆಯಾಗಿದ್ದರೆ ಪ್ರತಿಯೊಬ್ಬರೂ ಕದನ ಜರುಗಿಸಿ ಖುರೈಷಿಗಳ ಮೇಲೆ ಪ್ರತಿಕಾರ ಜರುಗಿಸಬೇಕೆಂದು ಆಣೆ ಹಾಕಿಸಿಕೊಳ್ಳಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ "ದ ಸೀಲ್ಡ್ ನೆಕ್ಟರ್" ಕೃತಿಯ ಪುಟ ಸಂಖ್ಯೆ ಆರುನೂರಾ ಎಪ್ಪತ್ತಾರರಲ್ಲಿ.



ಮಹಮದನ ಪರಿವಾರ ಹೀಗೆ ತಳಮಳಗೊಂಡು ಎಲ್ಲೆಲ್ಲೂ ರಣೋತ್ಸಾಹ ಯುದ್ಧ ಪಿಪಾಸುತನ ಹೆಡೆ ಎತ್ತಲು ಹವಣಿಸುತ್ತಿರುವಾಗ ವಿಠಲಾಚಾರಿ ಸಿನೆಮಾದ ಧಡೀರ್ ದೇವರಂತೆ ಓಥ್ಮನ್ ಅಲ್ಲಿ ಅವರ ಮುಂದೆ ಪ್ರತ್ಯಕ್ಷಗೊಂಡ! ಆತ ಕ್ಷೇಮವಾಗಿ ಮರಳಿ ಬಂದದ್ದನ್ನ ನೋಡಿ ಅವರೆಲ್ಲಾ ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.




ಹೀಗೆ ಮಹಮದ್ ಹಾಗೂ ಖುರೈಷಿಗಳ ನಡುವಿನ ಸಂಧಾನ ಪ್ರಕ್ರಿಯೆ ಇನ್ನಷ್ಟು ಲಂಭಿಸಿತು. ಅನೇಕ ಬೈಠಕ್'ಗಳು ನಡೆದು ಮತ್ತಷ್ಟು ಚೌಕಾಸಿಯ ಮಾತುಕಥೆಗಳು ನಡೆದವು. ಸಂಧಾನದ ಫಲವಾಗಿ ಒಂದು ಶಾಂತಿ ಒಪ್ಪಂದ ಏರ್ಪಟ್ಟು ಅದಕ್ಕೆ ಇತ್ತಂಡಗಳೂ ಸಹ ಅವಕ್ಕೆ ಸಹಿ ಹಾಕಿದವು. ಅದರ ನಿಯಮಾವಳಿ ಅನುಸಾರ ಮುಂದಿನ ಹತ್ತು ವರ್ಷಗಳ ಕಾಲ ಯಥಾ ಪರಿಸ್ಥಿತಿಯನ್ನು ಕಾಯ್ದುಕೊಂಡು ಶಾಂತಿ ಕಾಪಾಡಿಕೊಳ್ಳಬೇಕಿತ್ತು. ಮಹಮದ್ ಯಾವುದೆ ಕಾರಣಕ್ಕೂ ಖುರೈಷಿಗಳ ಯಾವುದೆ ಕ್ಯಾರವಾನ್'ಗಳನ್ನ ಈ ಅವಧಿಯಲ್ಲಿ ಲೂಟಿ ಹೊಡೆಸುವಂತಿರಲಿಲ್ಲ. ಮೆಕ್ಕಾದ ಮುಸಲ್ಮಾನರಿಗೂ ಸಂಪೂರ್ಣ ಸ್ವಾತಂತ್ರ ನೀಡಿ ಅವರು ಬಯಸಿದಾಗ ಮದೀನಾಕ್ಕೂ ಹೋಗಿ ಬರಲು ಅವಕಾಶ ನೀಡಲಾಯಿತು. ಮಹಮದ್ ಮುಂದಿನ ವರ್ಷ ಮೂರು ದಿನಗಳ ಮಟ್ಟಿಗೆ ಮಾತ್ರ ಚಿಕ್ಕ ಯಾತ್ರೆಯಾಗಿ ಮೆಕ್ಕಾ ತೀರ್ಥಯಾತ್ರೆ ಮಾಡಬಹುದು ಎಂದು ತಿಳಿಸಲಾಯಿತು.


ಈ ಮಾತಿನಿಂದ ಮಹಮದ್ ಸಂತೃಪ್ತನಾದ, ತಾನು ತಂಗಿದ್ದ ಅಲ್ ಹೊಬೈದಿಯಾದಲ್ಲಿಯೆ ಆತ ಯಾತ್ರೆಯ ಎಲ್ಲಾ ವಿಧಿ ವಿಧಾನಗಳನ್ನೂ ಸಹ ಪೂರೈಸಿದ. ಒಂದು ರೀತಿಯಿಂದ ನೋಡಿದರೆ ಇದು ಮಹಮದನಿಗೆ ರಾಜತಾಂತ್ರಿಕವಾಗಿ ದಕ್ಕಿದ್ದ ಮೊತ್ತಮೊದಲ ಗೆಲುವಾಗಿತ್ತು. ಇಷ್ಟು ದೂರ ಪ್ರಯಾಸದ ಪ್ರಯಾಣ ಕೈಗೊಂಡು ಬಂದಿದ್ದರೂ ಸಹ ಯಶಸ್ವಿಯಾದ ಯಾತ್ರೆ ಮಾಡಲಾಗದ ಬಗ್ಗೆ ಆತನ ಹಿಂಬಾಲಕರಿಗೆ ಅತೀವ ಬೇಸರವಿದ್ದರೂ ಮಹಮದ್ ಮಾತ್ರ ತನ್ನ ಮಹತ್ವಪೂರ್ಣ ಗೆಲುವಿಗೆ ಒಳಗೊಳಗೆ ಸಂಭ್ರಮಿಸಿದ. ಕಾರಣ ಸರಳ. ಆತನನ್ನೂ ಸಹ ಒಬ್ಬ ಸ್ವತಂತ್ರ ರಾಜಕೀಯ ಶಕ್ತಿಯಾಗಿ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುವುದರ ಮೂಲಕ ಖುರೈಷಿಗಳು ಮಾನ್ಯ ಮಾಡಿದ್ದರು.



( ಇನ್ನೂ ಇದೆ.)

No comments: