28 November 2015

ವಲಿ - ೩೭








ಈಗ ಅರೇಬಿಯಾದ ಧಾರ್ಮಿಕ ನಾಯಕತ್ವದ ಜೊತೆಗೆ ಸೈನಿಕ ಬಲದ ಮುಖ್ಯಸ್ಥನಾಗಿಯೂ ಮಹಮದ್ ಹೊರ ಹೊಮ್ಮಿದ್ದ. ಆತನ ಪ್ರಬಲ ವಿರೋಧಿಗಳಾಗಿದ್ದ ಖುರೈಷಿಗಳೂ ಸಹ ಈಗ ಅವನ ಅಡಿಯಾಳುಗಳಾಗಿ ಆತನ ಪಾಳಯದ ಬೆಂಬಲಕ್ಕೆ ಬಂದ ಕಾರಣದಿಂದ ಆತನಿಗೆ ಎದುರಾಗಿ ವಾದಿಸುವ ಅಥವಾ ಹೋರಾಡುವ ಸ್ಥೈರ್ಯವುಳ್ಳ ಯಾರೊಬ್ಬರೂ ಸಹ ಆರನೆ ಶತಮಾನದ ಅರೇಬಿಯಾ ಪ್ರಸ್ಥಭೂಮಿಯಲ್ಲಿ ಇರಲೆ ಇಲ್ಲ. ಸಹಜವಾಗಿ ಆತನ ಪ್ರತಿಷ್ಠೆ ಮರುಭೂಮಿಯಾಚೆಗೂ ಹರಡಿ ಮದೀನಾದಲ್ಲಿ ಅನೇಕ ಹೊರ ರಾಜ್ಯಗಳ ರಾಯಭಾರ ಕಛೇರಿಗಳೂ ಸಹ ಆರಂಭಗೊಂಡವು. ಹಾಗೆ ರಾಯಭಾರ ಹೊತ್ತು ಬಂದವರನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಸ್ವದೇಶಕ್ಕೆ ಅವರು ಹಿಂದಿರುಗುವಾಗ ಅವರ ಅಂತಸ್ತಿಗೆ ತಕ್ಕಂತಹ ಉಡುಗೊರೆಗಳೊಂದಿಗೆ ಬೀಳ್ಕೊಟ್ಟ. ಅರೇಬಿಯಾದ ಶರಣಾಗತ ಬುಡಕಟ್ಟುಗಳಲ್ಲಿ ಅನೇಕ ಗುಂಪುಗಳಿಗೆ ಆಂತರಿಕ ಸ್ವಾತಂತ್ರ್ಯವನ್ನೂ ಸಹ ನೀಡಿದ. ಅವರಿಂದ ಕಾಲಾಕಾಲಕ್ಕೆ ಕಪ್ಪಕಾಣಿಕೆಗಳನ್ನ ನಿಯಮಿತವಾಗಿ ಒಪ್ಪಿಸಿಕೊಳ್ಳುತ್ತಾ ಗೌರವದಿಂದಲೆ ಆ ಜನಾಂಗಗಳನ್ನೂ ಸಹ ನಡೆಸಿಕೊಂಡ.


ಕ್ರಿಸ್ತಶಕ ಆರುನೂರಾ ಮೂವತ್ತರ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಸಾಮ್ರಾಜ್ಯಶಾಹಿತ್ವವನ್ನ ಇನ್ನಷ್ಟು ಹಿಗ್ಗಿಸಲು ಆತ ಒಂದು ಪ್ರಬಲ ದಂಡನ್ನ ಸಿರಿಯಾದ ಗಡಿ ಪ್ರದೇಶಕ್ಕೆ ಕೊಂಡೊಯ್ಯಲು ನಿರ್ಧರಿಸಿದ. ಅಲ್ಲಿ ಕೆಲವು ಬುಡಕಟ್ಟುಗಳು ಹೆಚ್ಚು ಪ್ರಬಲವಾಗಿದ್ದುದರಿಂದ ಅವರನ್ನು ಹತ್ತಿಕ್ಕುವ ಉದ್ದೇಶ ಈ ದಂಡಿನ ಧಾಳಿಯ ಹಿಂದಿತ್ತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೦ರಲ್ಲಿ. ಆ ಪ್ರದೇಶಗಳೆಲ್ಲಾ ರೋಮನ್ ಸಾಮ್ರಾಜ್ಯದ ಅವಿಭಾಜ್ಯ ಅಂಗಗಳಾಗಿದ್ದು ತನ್ನ ಗಡಿ ಮೇರೆಯ ಎಲ್ಲಾ ನಾಯಕರಿಗೂ ಮಹಮದನ ದಂಡಯಾತ್ರೆಯ ಬಾತ್ಮಿ ತಿಳಿದ ರೋಮನ್ ಚಕ್ರವರ್ತಿ ಎಚ್ಚರಿಕೆಯ ಸಂದೇಶ ರವಾನಿಸಿದ. ಸೂಕ್ತ ರಕ್ಷಣಾ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ಅದರಲ್ಲಿ ಸೂಚಿಸಲಾಗಿತ್ತು. ಮಹಮದ್ ಕೂಡಾ ಈ ಬಾರಿ ಅದ್ವಿತೀಯವಾದ ಸಂಖ್ಯೆಯಲ್ಲಿಯೆ ಸೈನ್ಯವನ್ನು ಜಮಾಯಿಸಲು ನಿರ್ಧರಿಸಿದ್ದ. ಹೀಗಾಗಿ ಪಡೆಯಲ್ಲಿ ಯೋಧರಾಗಿ ಶಾಮೀಲಾಗಲು ತನ್ನ ಎಲ್ಲಾ ಹಿತೈಶಿಗಳಿಗೆ, ಕುಲ ಬಾಂಧವರಿಗೆ, ಬೆಂಬಲಿತ ಬುಡಕಟ್ಟುಗಳ ಮುಖಂಡರಿಗೆ ಹಾಗೂ ತನ್ನ ಅಧೀನದಲ್ಲಿದ್ದ ಎಲ್ಲಾ ಪ್ರದೇಶಗಳ ಮುಖಂಡರುಗಳಿಗೆ ಮಹಮದ್ ಆಜ್ಞಾಪಿಸಿದ.


ಎಲ್ಲಾ ಕಡೆಗಳಿಂದ ಸೂಕ್ತ ಪ್ರತಿಸ್ಪಂದನೆ ಬಂದರೂ ಸಹ ಮದೀನಾದ ಪ್ರಜೆಗಳಿಂದ ಹಾಗೂ ಬೆದಾವಿನರಿಂದ ಮಾತ್ರ ನಿರಾಶಾದಾಯಕ ಪ್ರತ್ಯುತ್ತರ ಬಂದಿತು. ಅವರಿಬ್ಬರೂ ಅವನ ಯುದ್ಧೋತ್ಸಾಹದ ಕರೆಗೆ ಕೂಡಲೆ ಪ್ರತಿಸ್ಪಂದಿಸಲಿಲ್ಲ. ಸಿರಿಯಾದ ಗಡಿ ಮದೀನಾದಿಂದ ಬಹು ದೂರವಿದ್ದು ಬಿಸಿಲಝಳವನ್ನು ಸಹಿಸಲು ಅವರಲ್ಲಿ ಯಾರೂ ತಯ್ಯಾರಿಲ್ಲದಿದ್ದುದೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಮಹಮದನಿಗೆ ಇದರಿಂದ ಮುಖಭಂಗವಾದರೂ ಆತ ಮದೀನಾದ ಪ್ರಜೆಗಳ ಮೇಲೆ ನಿರಾಶೆಯನ್ನ ವ್ಯಕ್ತ ಪಡಿಸುವ ಸ್ಥಿತಿಯಲ್ಲಿರಲಿಲ್ಲ. ಎಷ್ಟೆಂದರೂ ಅವರು ತನಗೂ, ತನ್ನ ಆರಂಭಿಕ ಅನುಚರರಿಗೂ ಕಷ್ಟಕಾಲದಲ್ಲಿ ಅನ್ನ ಬಟ್ಟೆ ಕೊಟ್ಟ ಉದಾರಿ ಆಶ್ರಯದಾತರಾಗಿದ್ದರು. ಆದರೆ ಬೆದಾವಿನರ ಬಗ್ಗೆ ಮಾತ್ರ ಅಂತಹ ಯಾವುದೆ ಮುಲಾಜನ್ನ ಆತ ಇಟ್ಟುಕೊಳ್ಳಲಿಲ್ಲ. ಮಹಮದನ ಇನ್ನಿತರ ಅನುಯಾಯಿಗಳು ಉತ್ಸಾಹದಿಂದಲೆ ಮಹಮದನ ಈ ದಂಡಯಾತ್ರೆಗೆ ಬೆಂಬಲ ಸೂಚಿಸಿ ತನು ಮನ ಧನದಿಂದ ಅತನ ಕರೆಗೆ ಸ್ಪಂದಿಸಿದರು.



ಮದೀನಾ ನಗರದ ಹೊರ ಭಾಗದಲ್ಲಿ ಸೈನ್ಯವನ್ನು ಜಮಾಯಿಸಲಾಯಿತು. ಮಹಮದನ ಮಾವ ಅಬು ಬಕರನನ್ನು ದಂಡಿನ ಪ್ರಾರ್ಥನಾ ವಿಧಿಗಳನ್ನ ನಿರ್ವಹಿಸಲು ನೇಮಿಸಲಾಯಿತು. ಮಹಮದನ ಅಳಿಯ ಅಲಿಯನ್ನು ಮದೀನಾದಲ್ಲಿಯೆ ಉಳಿಸಿ ಕುಟುಂಬದ ರಕ್ಷಣೆಯ ಹೊಣೆಯನ್ನ ಅವನ ಹೆಗಲಿಗೆ ಹೊರೆಸಲಾಯಿತು. ಜಮಾಯಿಸಿದ್ದ ಸೈನ್ಯದ ಅಂದಾಜು ಸಂಖ್ಯೆ ಮೂವತ್ತು ಸಾವಿರಕ್ಕೂ ಅಧಿಕವಿದ್ದು ಅರೇಬಿಯಾದ ಇತಿಹಾಸದಲ್ಲಿಯೆ ಅಷ್ಟು ಅಪಾರ ಪ್ರಮಾಣದ ಸೈನ್ಯ ಎಂದೂ ನೆರೆದಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೩ರಲ್ಲಿ. ಈ ಬಲಿಷ್ಠ ದಂಡು ಶಸ್ತ್ರ ಸನ್ನದವಾಗಿ ಸಿರಿಯಾದತ್ತ ಹೊರಟಿತು. ದಾರಿ ಮಧ್ಯೆ ಅಲ್ ಹಿಜ್ರ್ ಕಣಿವೆಯಲ್ಲಿ ಅದು ತಂಗಿತು. ಅಲ್ಲಿ ನೀರಿನ ಬಾವಿಗಳಿಗೆ ಕೊರತೆ ಇಲ್ಲದಿದ್ದರೂ ಆ ತನಕ ಶತ್ರು ಪಾಳಯದ ವಶದಲ್ಲಿದ್ದ ಅಲ್ಲಿನ ಬಾವಿಗಳ ನೀರಿಗೆ ವಿಷ ಬೆರೆಸಿರಬಹುದು ಎನ್ನುವ ಊಹಾಪೋಹದ ಗಾಳಿಸುದ್ದಿ ಭಯಂಕರವಾಗಿ ಹರಡಿ ಅವರ್ಯಾರೂ ಆ ನೀರನ್ನು ಉಪಯೋಗಿಸುವ ಗೋಜಿಗೆ ಹೋಗದೆ ಅತಿ ಸಂಕಷ್ಟಕ್ಕೆ ಒಳಗಾದರು. ಆದರೆ ಅದೃಷ್ಟವಾಶಾತ್ ಆ ರಾತ್ರಿ ಉತ್ತಮ ಮಳೆಯಾಗಿ ಅವರೆಲ್ಲರ ನೀರಿನ ಅವಶ್ಯಕತೆ ಪೂರೈಸಿತು. ಮಹಮದನ ಪ್ರಾರ್ಥನೆಗೆ ಓಗೊಟ್ತಟ್ಟ ದೈವ ಕೃಪೆ ತೋರಿ ಮಳೆ ಬರಿಸಿದ್ದರಿಂದಲೆ ಈ ಚಮತ್ಕಾರವಾಯಿತು ಅನ್ನುವ ನಂಬಿಕೆ ಸೈನ್ಯದಲ್ಲಿ ಆಗ ಹುಟ್ಟಿತು.



ಅಲ್ಲಿಂದ ಮುಂದೆ ಸಾಗಿದ ದಂಡು ತೆಬೂಕ್ ಎನ್ನುವ ಇನ್ನೊಂದು ಭಾಗದಲ್ಲಿ ಬೀಡು ಬಿಟ್ಟಿತು. ಅಲ್ಲಿ ವೃಕ್ಷ ಸಂಪತ್ತು ಹಾಗೂ ಜಲ ಮೂಲದ ಆಸರೆಗಳು ಅಪಾರವಾಗಿದ್ದು ಅವರಿಗೆ ಅಲ್ಲಿನ ವಾತಾವರಣ ನೆಮ್ಮದಿ ತಂದಿತು. ಸೈನ್ಯ ಬೀಡು ಬಿಡಲು ಅದು ಪ್ರಶಸ್ತ ಸ್ಥಳವಾಗಿತ್ತು. ತನ್ನ ಬೇಹು ಪಡೆ ರೋಮನ್ ಚಕ್ರವರ್ತಿಯ ಪ್ರತ್ಯರ್ಥದ ಸುದ್ದಿ ಸುಳ್ಳು ಅದೆಲ್ಲಾ ಊಹಾಪೋಹ ಎನ್ನುವ ಖಚಿತ ಮಾಹಿತಿಯನ್ನ ತಂದು ಮುಟ್ಟಿಸಿದಾಗ ಮಹಮದ್ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಹತ್ತಿರದಲ್ಲೆ ಇದ್ದ ಅಲ್ ದೂಮಾ ಪ್ರದೇಶದ ಮೇಲೆ ಆರಂಭಿಕ ಧಾಳಿಯನ್ನ ಸಂಘಟಿಸಲಾಯಿತು. ಖಲೀದ್ ಯಶಸ್ವಿಯಾಗಿ ತನ್ನ ಪಡೆಯೊಂದಿಗೆ ಆ ಪ್ರಬಲ ಸಂಸ್ಥಾನವನ್ನು ಮಣಿಸಿ ಮರಳಿ ಬಂದ. ಸುತ್ತಲಿನ ಯಹೂದಿ ಹಾಗೂ ಕ್ರೈಸ್ತ ಸಂಸ್ಥಾನಗಳಲ್ಲಿ ಹಲವರನ್ನು ಸಾಮಂತರನ್ನಾಗಿಸಿ ಅಪಾರ ಕಪ್ಪ ಕಾಣಿಕೆಗಳನ್ನು ಅವರಿಂದ ಪಡೆದು ಅದೆ ವರ್ಷದ ದಿಸೆಂಬರ್ ತಿಂಗಳಿನಲ್ಲಿ ಮಹಮದನ ಪಡೆ ಹೆಚ್ಚು ಹಾನಿಗೊಳಗಾಗದೆಯೆ ಮರಳಿ ಮದೀನವನ್ನು ಮುಟ್ಟಿತು.



ಈ ದಂಡಯಾತ್ರೆ ಮಹಮದನ ನೇತೃತ್ವದಲ್ಲಿ ಕೈಗೊಂಡ ಕಟ್ಟಕಡೆಯ ಯುದ್ಧ ಕಾರ್ಯಾಚರಣೆಯಾಗಿತ್ತು. ಅನಂತರ ಯಾವುದೆ ರಣರಂಗಕ್ಕೂ ಸ್ವತಃ ಮಹಮದ್ ಸೈನ್ಯವನ್ನು ಮುನ್ನಡೆಸಲಿಲ್ಲ. ದಣಿದು ಮುದಿಯಾಗಿದ್ದ ದೈಹಿಕ ಕಾರಣಗಳು ಹಾಗೂ ಮಾಗುತ್ತಿದ್ದ ಪ್ರಾಯ ಅವನಿಗೆ ಅಂತಹ ದುಸ್ಸಾಹಸಗಳನ್ನು ಕೈಗೊಳ್ಳಲು ಪೂರಕವಾಗಿಟ್ಟಿರಲಿಲ್ಲ.  ಈ ಕೊನೆಯ ದಂಡಯಾತ್ರೆಯ ಹಿನ್ನೆಲೆಯಲ್ಲಿ ಒಂದು ಗಮನೀಯ ಘಟನೆ ಘಟಿಸಿತ್ತು. ವಾಡಿಕೆಯಂತೆ ತನ್ನ ಹಿಂಬಾಲಕ ಬುಡಕಟ್ಟುಗಳಿಗೆಲ್ಲಾ ಮಹಮದ್ ಯುದ್ಧದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟಿದ್ದನಷ್ಟೆ. ಹಾಗೆ ಆಹ್ವಾನ ಪಡೆದವರಲ್ಲಿ ಪ್ರಬಲನಾದ ಅಲ್ ಝೆಡ್ ಬಿನ್ಖೈಸ್ ಸಹ ಒಬ್ಬನಾಗಿದ್ದ. ಆದರೆ ಆತ ಆ ಕರೆಯನ್ನ ಸರಾಸಗಟಾಗಿ ನಿರಾಕರಿಸಿದ್ದ.



ಆತ ಅದಕ್ಕಾಗಿ ತನ್ನ ಕಚ್ಚೆ ಹರುಕತನ ಹಾಗೂ ಸ್ತ್ರೀ ಲೋಲುಪತೆಯ ಕಾರಣವನ್ನೆ ಭಿಡೆಯಿಲ್ಲದೆ ನೀಡಿದ್ದ ಸಹ! ತಬೂಕ್ ಪ್ರಾಂತ್ಯದ ಮೇಲೆ ಧಾಳಿ ಕೈಗೊಳ್ಳುವ ಅಸಲು ವಿಚಾರವನ್ನ ಮುಚ್ಚಿಟ್ಟು ಮಹಮದ್ ಕೇವಲ ಬೆಜಂಟೈನ್ ನಿಯಂತ್ರಣದ ಸ್ಥಳಗಳಿಗೆ ಮಾತ್ರ ಧಾಳಿ ಸಂಘಟಿಸುವ ವಿಚಾರ ತಿಳಿಸಿ ಮೋಸ ಮಾಡಿದ್ದಾನೆ ಎಂದು ಆತ ಖಾಸಗಿಯಾಗಿ ಆರೋಪಿಸಿದ. ಅದೆಲ್ಲಾ ತನ್ನ ಹುಡುಗಿಯರ ಹುಚ್ಚನ್ನ ಅರಿತು ಮಾಡಿದ ಕುತಂತ್ರ! ಗ್ರೀಕ್ ಪ್ರದೇಶದ ಹೆಂಗಸರು ಸಹಜ ಸುಂದರಿಯರು, ಅವರ ಆಕರ್ಷಣೆಗೆ ಜೊಲ್ಲು ಸುರಿಸಿಕೊಂಡು ನಾನು ಆ ರಣ ಕಣಕ್ಕೆ ಇಳಿಯಲಿ ಎನ್ನುವ ಉದ್ದೇಶದಿಂದ ಮಹಮದ್ ತನಗೆ ಆಸೆ ಹುಟ್ಟಿಸಲು ಈ ಕಥೆ ಹೆಣೆದಿದ್ದಾನೆ ಎಂದು ಆತ ಯುದ್ಧಕ್ಕೆ ತೆರಳಲು ನಿರಾಕರಿಸಿದ. ಅಂತಃಪುರವೆ ತನಗೆ ಯುದ್ಧ ಭೂಮಿಯಿಂದ ಹಿತ ಎಂದಾತ ಮಾರೋಲೆ ಕಳಿಸಿದ! ಇದರ ಕುರುಹಾಗಿ ಖುರ್ಹಾನಿನ ಸುರಾ ಸಂಖ್ಯೆ ೯/೪೯ನ್ನ ಆಸಕ್ತರು ಗಮನಿಸಬಹುದು.


ಮಹಮದ್ ಕೈಗೊಂಡಿದ್ದ ಈ ತಬೂಕ್ ದ್ಮ್ಡಯಾತ್ರೆಯ ಅವಧಿ ಅರೇಬಿಯ್ತಾ ಪ್ರಸ್ಥಭೂಮಿಯಲ್ಲಿ ಕಡು ಬೇಸಗೆಯ ಕಾಲವಾಗಿತ್ತು. ಈ ಸುಡು ಬಿಸಿಲಿನಲ್ಲಿ ಸದುದ್ದೇಶಕ್ಕಗಿಯೆ ಆಗಿದ್ದರೂ ಸಹ ತೆರೆದ ಬಯಲಿನಲ್ಲಿ ಕಾದಾಡುವುದೆಂದರೆ ಯಾರಿಗೂ ಅಸಹನೀಯವೆ ಆಗಿತ್ತು. ಮದೀನಾದ ಮುಸಲ್ಮಾನೇತರ ಅವಿಶ್ವಾಸಿಗಳಿಗೂ ಈ ಕಾರಣದಿಂದಲೆ ಅದರಲ್ಲಿ ಕಿಂಚಿತ್ ಆಸಕ್ತಿಯೂ ಹುಟ್ಟಿರಲಿಲ್ಲ. ಹೀಗಾಗಿ ಅವರೂ ಸಹ ಈ ಆಹ್ವಾನವನ್ನು ಸರಾಸಗಟಾಗಿ ನಿರಾಕರಿಸಿದ್ದರು. ಅದನ್ನೂ ಸಹ ಖುರ್ಹಾನಿನ ಸುರಾ ಸಂಖ್ಯೆ ೯/೮೧ರಲ್ಲಿ ಆಸಕ್ತರು ಗಮನಿಸಬಹುದು.


ಹತ್ತು ಹದಿನೈದು ದಿನಗಳನ್ನ ತಬೂಕಿನಲ್ಲಿ ಕಳೆದು ಮರಳಿ ಮದೀನಾದ ಹಾದಿ ಹಿಡಿದಿದ್ದಾಗ ಅವನ ಸಾಗುವಿಕೆಯ ಸುಳಿವು ಹಿಡಿದ ಸ್ಥಳಿಯ ಅದ್ ದಿರಾರ್ ಬುಡಕಟ್ಟಿನ ಮಂದಿ ಅವನನ್ನು ಭೇಟಿ ಮಾಡಿ, ತಾವು ನೂತನವಾಗಿ ನಿರ್ಮಿಸಿದ ಮಸೀದಿಗೆ ಭೇಟಿ ನೀಡುವಂತೆ ವಿನಂತಿಯ ಆಹ್ವಾನ ಕೊಟ್ಟರು. ಅಸ್ವಸ್ಥರು ಹಾಗೂ ಬಡವರಿಗಾಗಿ ನಿರ್ಮಿಸಿಲಾಗಿದ ಅಲ್ಲಿ ಮಹಮದ್ ತಂಗಿ ಪ್ರಾರ್ಥನೆಯ ವಿಧಿಗಳನ್ನ ನಿರ್ವಹಿಸಲಿ ಅನ್ನುವ ಮನೋಭಿಲಾಶೆ ಅವರೆಲ್ಲರಿಗೂ ಇತ್ತು. ಆದರೆ ದೈವವಾಣಿಯ ಪ್ರಕಾರ ಮಹಮದ್ ಆ ಮಸೀದಿ ಅವಿಶ್ವಾಸಿಗಳ ನಿರ್ಮಾಣವಾಗಿದೆ ಎಂದು ಸಾರಿ ಆ ಆಹ್ವಾನವನ್ನು ತಿರಸ್ಕರಿಸಿದ. ಸಾಲದ್ದಕ್ಕೆ ಅದನ್ನು ಕೆಡವಲು ಅಲ್ಲಾಹನು ಸಂದೇಶ ರವಾನಿಸಿದ್ದಾನೆ ಎಂದಾತ ತಿಳಿಸಿ ಅವರೆಲ್ಲರನ್ನೂ ಕಂಗಾಲುಗೊಳಿಸಿಬಿಟ್ಟ! ಈ ದೈವ ಸಂದೇಶದ ಆದೇಶದಂತೆ ಆತನ ಸೈನಿಕರು ಆ ಹೊಚ್ಚಹೊಸ ಇಡಿ ಮಸೀದಿಯನ್ನೆ ಸುಟ್ಟು ಭಸ್ಮ ಮಾಡಿ ಅದರ ಕುರುಹುಗಳನ್ನೆಲ್ಲಾ ಇನ್ನಿಲ್ಲವಾಗಿಸಿಬಿಟ್ಟರು! ಅದನ್ನೆ ಮುಸಲ್ಮಾನ ಪ್ರಪಂಚ ಇಂದು 'ಕೇಡಿನ ಮಸೀದಿ' ಅಥವಾ 'ಮಸ್ಝಿದ್ ಎ ದೀದಾರ್' ಎಂದು ಗುರುತಿಸುತ್ತದೆ.


ದೂಮಾದಲ್ಲಿನ ಕ್ರೈಸ್ತ ರಾಜ ಒಕೈಧೀರ್ ಹಾಗೂ ಅವನ ಸಹೋದರರನ್ನು ಸೆರೆ ಹಿಡಿಸಿ ಖಾಲಿದ್ ಅವರ ಖಜಾನೆಯ ದೋಚಿದ ಅಪಾರ ಸಂಪತ್ತಿನೊಂದಿಗೆ ಮದೀನಕ್ಕೆ ನಡೆಸಿಕೊಂಡು ಬಂದಿದ್ದ. ಅಲ್ಲಿ ಮಹಮದ್ ಅವರನ್ನ ಇಸ್ಲಾಮಿಗೆ ಮತಾಂತರ ಮಾಡಿ ಅವರಿಬ್ಬರ ಜೀವವನ್ನ ಉಳಿಸಿದ. ಇದೆ ಸಮಯದಲ್ಲಿ ಮದೀನಾದಲ್ಲಿ ತನ್ನನ್ನ ಧಿಕ್ಕರಿಸಿ ನಡೆದಿದ್ದ ಅವಿಶ್ವಾಸಿಗಳ ಬಗ್ಗೆ ಮಹಮದನ ಮನಸ್ಸಿನಲ್ಲಿ ಸುಶುಪ್ತವಾಗಿದ್ದ ಸಿಟ್ಟು ದೈವವಾಣಿಯ ರೂಪದಲ್ಲಿ ಹೊರ ಹೊಮ್ಮಿ ಬಂತು! ಅವರ ಆಶಾಢಭೂತಿ ನಡುವಳಿಕೆಗಳನ್ನ, ಉದಾಸೀನತೆಯ ಉತ್ತುಂಗವನ್ನ ಹಾಗೂ ಮಹಮದನ ದಂಡಯಾತ್ರೆಯ ಬಗ್ಗೆ ಅವರು ಪ್ರಕಟ ಪಡಿಸಿದ ನಿರುತ್ಸಾಹವನ್ನ ದೈವವಾಣಿಯ ಮೂಲಕ ಖುರ್ಹಾನಿನ ಸುರಾ ಸಂಖ್ಯೆ ೯/೩೮, ೫/೪೧,೪೨,೮೨ ಹಾಗೂ ೮೫ರಲ್ಲಿ ಮಹಮದ್ ಕಟುವಾಗಿ ಖಂಡಿಸಿದ.



ಇನ್ನು ಮರುಭೂಮಿಯ ಬೆದಾವಿನರ ಅವಿಧೇಯತೆಯ ಬಗೆಗಂತೂ ಎಲ್ಲೆ ಮೀರಿದ ಹತಾಶೆಯ ಸಿಟ್ಟನ್ನ ಮಹಮದ್ ಹೊರಹಾಕಿದ. ಅವರನ್ನ ಚಂಚಲಚಿತ್ತ, ಹಟಮಾರಿ, ಅಜ್ಞಾನಿ ಹಾಗೂ ಅವಿಶ್ವಾಸಿಗಳೆಂದು ನೇರವಾಗಿ ತನ್ನ ಸುರಾಗಳಲ್ಲಿ ದೈವದ ಮಾತಿನ ಮೊಹರಿನೊಂದಿಗೆ ಆತ ಬೈದ. ಅವರ ಅಂತ್ಯ ನರಕದ ಸುಡು ಜ್ವಾಲೆಯಾಗಿದೆ ಎಂದು ಶಾಪವಿತ್ತ. ಅವರನ್ನು ಹೇಯಕರವಾದ ಜನಾಂಗದವರು ಕೊಳಕರು ಹಾಗೂ ಅವಲಕ್ಷಣದ ಅಧಮರು ಎಂದೆಲ್ಲಾ ನಿಂದಿಸಿದ ಸುರಾ ಸಂಖ್ಯೆ ೯/೯೦-೯೧ನ್ನು ಆತ ದೇವರ ಹೆಸರಿನಲ್ಲಿ ತಾನೆ ಸೃಷ್ಟಿಸಿ ಪಡೆದುಕೊಂಡ! ಈ ಸಿಟ್ಟಿನ ಉರಿ ಅಷ್ಟಕ್ಕೆ ಶಮನವಾಗದೆ ಅವರು ತಮ್ಮ ಉಪಯೋಗಕ್ಕೆಂತು ಕೋಬಾ ನಗರದಲ್ಲಿ ನಿರ್ಮಿಸಿಕೊಂಡಿದ್ದ ಮಸೀದಿಯನ್ನ ಕಾರಣವೆ ಇಲ್ಲದೆ ಕೆಡವಿಸುವ ಮಟ್ಟಿಗೆ ಜ್ವಲಿಸಿ ಅರ್ಭಟಿಸಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೩೭ರಲ್ಲಿ. ಮಹಮದನ ಅಸಂತೋಷ ಒಂದೊಮ್ಮೆ ಅವಿಶ್ವಾಸಿಗಳೆಂದು ಆತನಿಂದ ಕರೆಸಿಕೊಂಡು ಆಶಾಢಭೂತಿಗಳೆಂದು ಜರಿಸಿಕೊಂಡವರ ಮೇಲೆ ಹರಿದರೆ ಅದರ ಪರಿಣಾಮ ಏನಾಗಬಹುದು ಅನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿತ್ತು.



ಮದೀನಾದ ಗಣ್ಯ ಹಾಗೂ ಮಹಮದನ ಕಪಟದ ಪ್ರಬಲ ಟೀಕಾಕಾರನೂ ಆಗಿದ್ದ ಅಬ್ದುಲ್ಲಾ ಇಬ್ನ್ ಒಬೈ'ನ ಮರಣ ಈ ತಬೂಕ್ ಯಾತ್ರೆಯಿಂದ ಮಹಮದ್ ಹಿಂದಿರುಗಿದ ಎರಡು ತಿಂಗಳ ಅನಂತರ ಆಯಿತು. ಅನೇಕ ಸಂದರ್ಭಗಳಲ್ಲಿ ಯಹೂದಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಬ್ದುಲ್ಲಾ ಇಬ್ನ್ ಒಬೈ ಅವರ ಪರವಾಗಿ ಮಹಮದನ ಗೂಂಡಾಗಿರಿಯನ್ನ ವಿರೋಧಿಸಿ ವಾದಿಸಿದ್ದ. ಅವರ ವಿನಾಶ ಹಾಗೂ ಸಾಮೂಹಿಕ ಕೊಲೆಯನ್ನ ತಪ್ಪಿಸಿದ್ದು ಮಹಮದನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅದೇನೆ ಅಸಂತೋಷ ಮನದೊಳಗೆ ಮನೆ ಮಾಡಿದ್ದರೂ ಸಹ ಮೇಲ್ನೋಟಕ್ಕೆ ಆತನೊಂದಿಗೆ ಸಭ್ಯವಾಗಿ ಸೌಹಾರ್ದತೆಯೊಂದಿಗೆ ಮಹಮದ್ ವ್ಯವಹರಿಸುತ್ತಿದ್ದ. ಇದಕ್ಕೆ ಕಾರಣ ಅತಿ ಸರಳವಾಗಿತ್ತು. ಅಬ್ದುಲ್ಲಾ ಇಬ್ನ್ ಒಬೈ ಕೂಡಾ ಅಪಾರ ಬೆಂಬಲಿಗರನ್ನ ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಂದಿದ್ದು ಅವರೆಲ್ಲಾ ಅವನನ್ನು ಅಪಾರವಾಗಿ ಗೌರವಿಸುತ್ತಿದ್ದರು ಹಾಗೂ ಯಾವುದೆ ಕಾರಣಕ್ಕೂ ಅಂತಹ ಪ್ರಬಲನೊಬ್ಬನನ್ನ ತನ್ನ ಸ್ಥಳಿಯ ವಿರೋಧಿಯನ್ನಾಗಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಮಹಮದನೂ ಆಗ ಇರಲಿಲ್ಲ. ಹೀಗಾಗಿ ಅತಿ ಚಾಣಾಕ್ಷತೆಯಿಂದ ಆತನೊಂದಿಗೆ ಒಂದು ಅನುಬಂಧದ ಜಾಲವನ್ನ ಹೆಣೆದು ಅದು ಎಂದಿಗೂ ಕಡಿದು ಬೀಳದಂತೆ ಮಹಮದ್ ಮುಂಜಾಗ್ರತೆ ವಹಿಸಿದ್ದ.



ಆದರೆ ಈಗ ಅವನ ನೈಸರ್ಗಿಕ ಅಂತ್ಯವೂ ಆಗಿ ಹೋಗಿ ಆಂತರಿಕ ವಲಯದಲ್ಲಿ ಮಹಮದನ ಪಾಲಿನ ವಿರೋಧಿಗಳೆಲ್ಲಾ ಸರಾಸಗಟಾಗಿ ನಿರ್ನಾಮವಾಗಿ ಹೋಗಿದ್ದರು. ಆತನ ಧರ್ಮ ವಿಸ್ತರಣೆಯ ಹೆಸರಿನ ತೋಳ್ಬಲ ಪ್ರದರ್ಶನಕ್ಕೆ ಈಗ ಇನ್ಯಾವ ಅಡ್ಡಿ ಆತಂಕಗಳೂ ಉಳಿದಿರಲಿಲ್ಲ. ಇಸ್ಲಾಮಿನ ಹಾದಿ ಈಗ ಸುಗಮವಾಗಿತ್ತು. ಮಹಮದ್ ಮದೀನಾದ ಸರ್ವಾಧಿಕಾರಿಯಾದದ್ದು ಹೀಗೆ. ಅಲ್ಲಿಂದ ಹೊರಟ ಆತನ ಕೀರ್ತಿಯ ಕಹಳೆ ಅರೇಬಿಯಾದ ದಕ್ಷಿಣದ ತುದಿಯಿಂದ ಹಿಡಿದು ಸಿರಿಯಾದ ಗಡಿ ಭಾಗದವರೆಗೂ ಅನುರಣಿಸಿತು. ಈ ಕಾರಣದಿಂದ ಇಸ್ಲಾಮಿನ ಅನುಯಾಯಿಗಳಿಗಂತೂ ಇನ್ನು ಧರ್ಮ ಸಂಸ್ಥಾಪನೆಗೆ ಆಯುಧಗಳ ಅಗತ್ಯ ಅಷ್ಟಾಗಿ ಕಂಡು ಬಾರದೆ ಅವರೆಲ್ಲಾ ಅವನ್ನ ಮಾರಲು ಸಿದ್ಧರಾದರು! ಆದರೆ ಇದರಿಂದ ವಿಚಲಿತನಾದ ಮಹಮದ್ ಹಾಗೆಲ್ಲಾ ಹುಚ್ಚಾಟಕ್ಕಿಳಿಯಬಾರದಾಗಿ ಅವರೆಲ್ಲರನ್ನೂ ನಿರ್ಬಂಧಿಸಿದ. ಕ್ರೈಸ್ತ ವಿರೋಧಿಗಳಲ್ಲಿ ಕೊಟ್ಟ ಕೊನೆಯವನು ಜೀವಂತವಾಗಿರುವವರೆಗೂ ತನ್ನ ಯಾವೊಬ್ಬ ಅನುಯಾಯಿಯೂ ಸಹ ಧರ್ಮ ಸಂಗ್ರಾಮವನ್ನ ನಿಲ್ಲಿಸಬೇಕಾಗಿಲ್ಲ!' ಎನ್ನುವ ಜೆಹಾದಿನ ಕರೆಯನ್ನಾತ ನೀಡಿದ. ಹೀಗಾಗಿ ಸತತವಾಗಿ ಯುದ್ಧ ಸನ್ನದರಾಗಿಯೆ ಉಳಿಯಬೇಕೆಂಬ ಆಜ್ಞೆ ಆತನಿಂದ ಹೊರಟಿತು.



ಆದರೆ ಎಲ್ಲಾ ತನ್ನ ಅನುಯಾಯಿಗಳೂ ಸಹ ರಣರಂಗದಲ್ಲಿ ಕಾರ್ಯಾಚರಿಸುವುದು ಖಡ್ಡಾಯವಲ್ಲ ಎಂತಲೂ ಆತ ಇದೆ ಸಂದರ್ಭದಲ್ಲಿ ತಿಳಿಸಿದ. ಕೆಲವು ಅಕ್ಷರಸ್ಥರೂ ಆದ ತನ್ನ ಬುದ್ಧಿವಂತ ಅನುಯಾಯಿಗಳು ಧಾರ್ಮಿಕ ವ್ಯಾಸಾಂಗದಲ್ಲಿ ತೊಡಗಿ ತನ್ನ ಉಪದೇಶಾಮೃತವನ್ನ ಸತತವಾಗಿ ಅಧ್ಯಯನ ಮಾಡುತ್ತಾ ಮನನ ಮಾಡಿಕೊಳ್ಳಬೇಕೆಂದು ಆತ ಆದೇಶಿದ. ಅವರ ಧರ್ಮ ಬೋಧನೆಯ ಅತ್ಯುತ್ತಮ ಅಂಶಗಳನ್ನ ಇನ್ನಿತರ ಶ್ರೀಸಾಮಾನ್ಯರ ಮನದಲ್ಲೂ ಅಗಾಗ ಬಿತ್ತುತ್ತಾ, ಧರ್ಮವನ್ನ ಉಳಿಸಿ ಬೆಳೆಸುವ ಹೊಣೆಗಾರಿಕೆ ಅಂತಹ ಜ್ಞಾನ ಜಿಜ್ಞಾಸುಗಳದ್ದಾಗಿರುತ್ತದೆ ಎಂದಾತ ವಿವರಿಸಿದ. ಖುರ್ಹಾನಿನ ಸುರಾ ಸಂಖ್ಯೆ ೯/ ೧೨೩ರಲ್ಲಿ ಈ ಹಿತೋಪದೇಶವನ್ನು ಆಸಕ್ತರು ಗಮನಿಸಬಹುದು.



( ಇನ್ನೂ ಇದೆ.)

No comments: