12 November 2015

ವಲಿ - ೨೭








ಕ್ರಿಸ್ತಶಕ ೬೨೭ ಹಾಗೂ ೬೨೮ರಲ್ಲಿ ಮದೀನಾ ನಗರಕ್ಕೆ ನಿರಾಶ್ರಿತನಾಗಿ ಬಂದ ಅರ್ಧ ದಶಕಗಳ ನಂತರದ ಮಹಮದ್ ಹಾಗೂ ಅವನ ಅನುಯಾಯಿಗಳ ಬಾಳ್ವೆ ಹೆಚ್ಚು ಕಿರಿಕಿರಿಯಿಲ್ಲದೆ ಸುಖವಾಗಿ ಸಾಗಿತು. ಈಗಲೆ ಆರು ವರ್ಷಗಳ ನಿರಾಶ್ರಿತ ಬಾಳ್ವೆ ಕಳೆದು ಹೋಗಿತ್ತು. ಮದೀನಾದ ಪ್ರಜೆಗಳ ಜಾನುವಾರುಗಳನ್ನು ಕದಿಯಲು ಕೊಳ್ಳೆಯೆ ಕುಲ ಕಸುಬಾಗಿದ್ದ ಕೆಲವು ಅಲೆಮಾರು ಬುಡಕಟ್ಟುಗಳು ಕಾಲಕಾಲಕ್ಕೆ ಇಡುತ್ತಿದ್ದ ಧಾಳಿಗಳನ್ನ ಹಿಮ್ಮೆಟ್ಟಿಸಿದ್ದು ಬಿಟ್ಟರೆ ಇನ್ನಿತರ ಕಾಳಗಗಳನ್ನ ಜರಗಿಸುವ ಯಾವ ಅವಶ್ಯಕತೆಯೂ ಮಹಮದನಿಗೆ ಕಂಡು ಬರಲಿಲ್ಲ. ಆದರೆ ಮಧ್ಯೆ ಬೆನ್ ಲಿಹ್ಯಾನ್ ಎನ್ನುವ ಅಲೆಮಾರಿ ಬುಡಕಟ್ಟಿನವರು ಬರ್ಬರವಾಗಿ ಧಾಳಿ ಇಟ್ಟು ಜಾನವಾರುಗಳನ್ನು ಲಪಟಾಯಿಸಲು ಸಂಚು ರೂಪಿಸುತ್ತಿದ್ದ ಸುದ್ದಿ ಗೂಢಚರರ ಮೂಲಕ ಅರಿವಾದೊಡನೆ ಮಹಮದ್ ತಾನೆ ಅವರ ಸೊಕ್ಕಿಳಿಸಲು ಅಣಿಯಾದ. ಮುಸಲ್ಮಾನರ ಪಡೆ ಅವರಿಗಿಂತಲೂ ಮೊದಲೆ ಬೆನ್ ಲಿಹ್ಯಾನರ ವಸತಿಗಳ ಮೇಲೆ ಮುಗಿಬಿದ್ದು ಅವರನ್ನ ದೋಚಲು ಹೊರಟಿರುವ ಸುದ್ದಿ ಅವರಿಗೂ ತಲುಪಿಯಾಗಿತ್ತು. ಹೀಗಾಗಿ ಮೊದಲು ಸಿರಿಯಾದತ್ತ ಪಯಣಿಸಿ ಕಡಲ ತೀರವನ್ನ ಬಳಸಿ ಅವರ ಗಮ್ಯದತ್ತ ಮುಸಲ್ಮಾನರ ಪಡೆ ಮುಟ್ಟುವ ಮೊದಲೆ ಇನ್ನೂ ಯುದ್ಧ ತಯ್ಯಾರಿ ಮಾಡಿರದ ಬೆನ್ ಲಿಹ್ಯಾನರು ಬೆಟ್ಟ ಗುಡ್ಡಗಳಲ್ಲಿ ತಲೆ ಮರೆಸಿಕೊಂಡು ಪಾರಾದರು.




ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮಹಮದನ ಪಡೆ ಮರಳಿ ಮದೀನಾ ಮುಟ್ಟಬೇಕಾಯಿತು. ಈ ನಿರಾಸೆಯಿಂದ ಹೊರಬರುವ ಮುನ್ನವೆ ಆತ ಓಯೈನಾ ಎಂಬ ಅರಬ್ಬಿ ಮುಖಂಡನ ಆಕ್ರಮಣವನ್ನ ಎದುರಿಸಬೇಕಾಯಿತು. ಆತ ತನ್ನ ಸೈನ್ಯದೊಂದಿಗೆ ಮದೀನಾಕ್ಕೆ ಸನಿಹದಲ್ಲಿದ್ದ ಅಲ್ ಘಾಬಾ ಬಯಲು ಪ್ರದೇಶವೊಂದರಲ್ಲಿ ಮೇಯುತ್ತಿದ್ದ ಒಂಟೆಗಳ ಹಿಂಡನ್ನ ಕದ್ದುಕೊಂಡು ಓಡಿಸಿ ಹೋದ. ಸಾಲದ್ದಕ್ಕೆ ತಡೇಯಲು ಬಂದ ತುರುಗಾಯಿಯನ್ನ ಕೊಂದು ಅವನ ಹೆಂಡತಿಯನ್ನು ಸಹ ಕಿತ್ತುಕೊಂಡು ಹೋದ. ಸುದ್ದಿ ಬಂದ ಕೂಡಲೆ ಮಹಮದ್ ತನ್ನ ಪಡೆಗಳೊಂದಿಗೆ ಈ ಕಳ್ಳನ ಬೆನ್ನತ್ತಿ ಹೋದ. ಆದರೆ ಆತನನ್ನ ಸೆರೆ ಹಿಡಿಯಲಾಗಲಿಲ್ಲ. ಒಂಟೆಗಳಲ್ಲಿಯೂ ಪೂರ್ತಿ ಮರು ವಶವಾಗಲಿಲ್ಲ.



ತನಗೆ ದಕ್ಕಿದ ಒಂಟೆಗಳೊಂದಿಗೆ ಮಹಮದ್ ಮರಳಿ ಮದೀನಾದ ಹಾದಿ ಹಿಡಿದಾಗ ಓಯೈನ ಸೆರೆಯಿಂದ ತಪ್ಪಿಸಿಕೊಂಡ ತುರುಗಾಯಿಯ ಹೆಂಡತಿ ಕೂಡಾ ತಪ್ಪಿಸಿಕೊಂಡು ಬಂದು ಇವರ ಸಂಗಡ ಸೇರಿದಳು. ಆಕೆ ಒಂದು ಒಂಟೆಯನ್ನ ಏರಿ ಈ ಸಾಹಸ ಕೈಗೊಂಡಿದ್ದಳು. ತಾನು ಪಾರಾದ ಸಂತೋಷಕ್ಕೆ ಆಕೆ ತನ್ನನ್ನು ಪಾರು ಮಾಡಿದ ಆ ಒಂಟೆಯನ್ನೆ ಕಡಿದು ದೇವರಿಗೆ ಬಲಿ ಕೊಡುವ ಪ್ರತಿಜ್ಞೆ ಮಾಡಿದಳು. ಈ ಸುದ್ದಿ ಅರಿತ ಮಹಮದ್ ಆಕೆಗೆ ಸರಿಯಾಗಿ ಬೈದ. ತನ್ನ ಜೀವ ಕಾಪಾಡಿದ ಒಂಟೆಯನ್ನ ಕೊಂದು ಕೃತಘ್ನತೆ ತೋರುವುದು ತರವಲ್ಲ ಎಂದು ಆತ ಆಕೆಯನ್ನ ತರಾಟೆಗೆ ತೆಗೆದುಕೊಂಡ. ಅವಳನ್ನ ಮಾತ್ರ ಮನೆಗೆ ಮರಳಲು ಸಮ್ಮತಿಸಿ ಆ ನಿಶ್ಪಾಪಿ ಒಂಟೆಯ ಪ್ರಾಣ ಉಳಿಸಿದ.


ಆ ವರ್ಷ ನೈಝಡ್ ಪ್ರದೇಶದಲ್ಲಿ ಬರಗಾಲ ತಾಂಡವವಾಡಿ ನೀರಿಗೆ ತತ್ವಾರವಾಗಿದ್ದರೆ ಮದೀನಾದ ಸುತ್ತಮುತ್ತಲಿನಲ್ಲಿ ಮಾತ್ರ ತಕ್ಕಮಟ್ಟಿಗೆ ಮಳೆಯಾಗಿ ಜನ ಜಾನುವಾರುಗಳಿಗೆ ಬೇಕಾದ ನೀರು ತುಂಬಿತ್ತು ಹಾಗೂ ಹುಲ್ಲು ಸಮೃದ್ಧವಾಗಿ ಬೆಳೆದಿದ್ದವು. ಮೇವಿನ ಕೊರತೆ ಅಲ್ಲಿನ ಯಾವ ಜಾನುವಾರುಗಳಿಗೂ ಉಂಟಾಗಿರಲಿಲ್ಲ. ಹೀಗಾಗಿ ನೈಝಡ್ ಪ್ರದೇಶದ ಒಕ್ಕಲಾದ ಘಟ್'ಫಾನರು ತಮ್ಮ ಜಾನವಾರುಗಳ ಹಸಿವು ತಣಿಸಲು ಮದೀನಾದ ಹುಲ್ಲುಗಾವಲಿನ ಮೇಲೆ ಕಣ್ಣು ಹಾಕಿದರು. ಅವರು ಯಾವುದೆ ಸ್ಥಳಿಯ ಆಕ್ಷೇಪಕ್ಕೂ ಜಗ್ಗದೆ ಅಲ್ಲಿಗೆ ನುಗ್ಗಿದ ಘಟ್'ಫಾನರು ಅಲ್ಲಿ ಬಂದು ಬೀಡು ಬಿಟ್ಟರು. ಮುಸಲ್ಮಾನರ ದೂರು ಮಹಮದನನ್ನು ಮುಟ್ಟಲು ಹೆಚ್ಚು ಹೊತ್ತು ತಗುಲಲಿಲ್ಲ. ನಿಜ ಸಂಗತಿ ಅರಿಯಲು ಮಹಮದ್ ಮುಸ್ಲಮಾ ಎನ್ನುವ ದೂತನ ನೇತೃತ್ವದಲ್ಲಿ ಒಂದು ಕಿರು ಪಡೆಯನ್ನ ಅಲ್ಲಿಗೆ ಅಟ್ಟಿದ. ಅಗತ್ಯವಿದ್ದರೆ ಅವರನ್ನ ಹೆಡೆಮುರಿಗೆ ಕಟ್ಟುವ ಆಜ್ಞೆಯನ್ನೂ ಮುಸ್ಲಮಾನಿಗೆ ಕೊಡಲಾಗಿತ್ತು. ಆದರೆ ಅವರ ಹಣೆಬರಹ ನೆಟ್ಟಗಿರಲಿಲ್ಲ.



ರಾತ್ರಿ ವೇಳೆ ಹೊಂಚು ಹಾಕಿ ಕಾದು ನಿಂತ ಘಟ್'ಫಾನರು ಈ ಪಡೆಯ ಒಬ್ಬನೂ ಉಳಿಯದಂತೆ ಕೊಚ್ಚಿ ಹಾಕಿದರು. ಆದರಲ್ಲಿ ತೀವೃವಾಗಿ ಗಾಯಗೊಂಡಿದ್ದ ಮುಸ್ಲಮಾನನ್ನ ಆ ದಾರಿಯಾಗಿ ಸಾಗುತ್ತಿದ್ದ ಆತನ ಸ್ನೇಹಿತನೊಬ್ಬ ಕಂಡು ಪ್ರಾಣ ಉಳಿಸಿ ಮದೀನಾಕ್ಕೆ ಎತ್ತಿಕೊಂಡು ಬಂದ. ಇದರಿಂದ ಕುಪಿತನಾದ ಮಹಮದ್ ತನ್ನ ಬಂಟ ಓಬೈದನ ನೇತೃತ್ವದಲ್ಲಿ ನಲವತ್ತು ಕದನ ಕಲಿಗಳ ಪಡೆಯನ್ನ ಕಳಿಸಿದ. ಆದರೆ ಅವರು ಅಲ್ಲಿಗೆ ಹೋಗಿ ಸೇರುವ ಹೊತ್ತಿಗೆಲ್ಲಾ ಘಟ್'ಫಾನರು ಅಲ್ಲಿಂದ ತಪ್ಪಿಸಿಕೊಂಡು ಪೇರಿ ಕಿತ್ತಿದ್ದರು.


ಕ್ರಿಸ್ತಶಕ ೬೨೭ರ ಸೆಪ್ಟೆಂಬರ್ ತಿಂಗಳಿನಲ್ಲಿ ಜರುಗಿದ ಒಂದು ನೆನಪಿಡಬೇಕಾದ ಸಂಗತಿಯನ್ನ ಇತಿಹಾಸಕಾರರಾದ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ದ ಪುಟ ಸಂಖ್ಯೆ ಮುನ್ನೂರಾ ನಲವತ್ತ ನಾಲ್ಕರಲ್ಲಿ ಪ್ರಸ್ತಾವಿಸಿದ್ದಾರೆ. ಇದು ಮಹಮದನ ಅಳಿಯ ಅಬ್ದುಲ್ ಆಸ್ ಕುರಿತದ್ದಾಗಿದೆ. ಮಹಮದ್ ತನ್ನ ಮೊದಲ ಹೆಂಡತಿ ಖತೀಜಾಳ ಮಗಳಾದ ಝೈನಬ್'ಳನ್ನು ಮೆಕ್ಕಾದ ವಾಸಿ ವ್ಯಾಪಾರಿ ವೃತ್ತಿಯ ಅಬ್ದುಲ್ ಆಸ್'ನಿಗೆ ಮದುವೆ ಮಾಡಿ ಕೊಟ್ಟಿದ್ದ. ಆದರೆ ಇಸ್ಲಾಂ ಎನ್ನುವ ನೂತನ ಧರ್ಮ ಸ್ಥಾಪಿಸಿದ ನಂತರ ಮಹಮದ್ ಮದೀನಾಕ್ಕೆ ಸ್ಥಳಾಂತರಗೊಂಡರೂ ಸಹ ಆಸ್ ಮತಾಂತರವೂ ಆಗಲಿಲ್ಲ ಹಾಗೂ ತನ್ನ ಹೆಂಡತಿಯನ್ನೂ ಆ ಕಾರಣಕ್ಕಾಗಿ ತ್ಯಜಿಸಲಿಲ್ಲ. ಮಹಮದನ ವೈರಿಗಳಾಗಿ ಪರಿವರ್ತಿತರಾಗಿದ್ದ ಖುರೈಷಿಗಳು ಈ ಬಗ್ಗೆ ಸೂಚನೆ ಕೊಟ್ಟಿದ್ದರೂ ಆತ ಅದನ್ನ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಹೆಂಡತಿಯನ್ನ ತ್ಯಜಿಸದ ಅಳಿಯನ ಈ ದೃಢ ನಿರ್ಧಾರ ಮಹಮದನಿಗೆ ಖುಷಿ ತಂದಿತ್ತು.


ಇಂತಹ ಆಸ್ ಬದರ್ ಯುದ್ಧದಲ್ಲಿ ಖುರೈಷಿ ಪಡೆಯ ಪರವಾಗಿ ಹೋರಾಡುವಾಗ ಮುಸಲ್ಮಾನರಿಗೆ ಸೆರೆ ಸಿಕ್ಕಿದ್ದ. ಯುದ್ಧ ನಿಯಮದಂತೆ ಆತನನ್ನ ಒತ್ತೆ ಹಣ ಕೊಟ್ಟು ಸೆರೆಯಿಂದ ಬಿಡಿಸಿಕೊಳ್ಳಲು ಝೈನಬ್ ತೀರ್ಮಾನಿಸಿದಳು. ಪತಿಯನ್ನ ಯುದ್ಧ ಬಂಧನದಿಂದ ಮುಕ್ತ ಮಾಡಲು ಕೊಡಬೇಕಾದ ಒತ್ತೆ ಹಣವನ್ನ ಒಗ್ಗೂಡಿಸಲು ತನ್ನೆಲ್ಲಾ ಸ್ವಂತದ ಆಸ್ತಿಯನ್ನ ಮಾರಲು ಅವಳು ನಿರ್ಧರಿಸಿದಳು. ಹಾಗೆ ಅವಳು ನೀಡಿದ ಸೊತ್ತಿನಲ್ಲಿ ಆಕೆಗೆ ಖತೀಜಾ ಪ್ರೀತಿಯ ಕೊಡುಗೆಯಾಗಿ ನೀಡಿದ್ದ ಬಂಗಾರದ ಸರವೂ ಸೇರಿತ್ತು. ಅದನ್ನ ನೋಡುತ್ತಲೆ ಮಹಮದನಿಗೆ ಸತ್ತ ಹೆಂಡತಿಯ ನೆನಪು ಮನಸಲ್ಲಿ ಮೂಡಿ ಬಂದು ಅಪಾರ ವೇದನೆಯಾಯಿತು.



ಹೀಗಾಗಿ ಆತ ಕೂಡಲೆ ವಿಶೇಷ ವ್ಯವಸ್ಥೆಯೊಂದಿಗೆ ಅಳಿಯನನ್ನ ಬಂಧಮುಕ್ತ ಗೊಳಿಸಿ ಯಾವುದೆ ಒತ್ತೆಹಣ ಪಡೆಯದೆ ಕಳುಹಿಸಿಕೊಟ್ಟ. ಆದರೆ ಕಳಿಸುವ ಮೊದಲು ಮೆಕ್ಕಾ ಮುಟ್ಟುತ್ತಲೆ ತನ್ನ ಮಗಳನ್ನು ಮದೀನಕ್ಕೆ ಕಳುಹಿಸಿ ಕೊಡಬೇಕೆಂಬ ಶರತ್ತನ್ನ ವಿಧಿಸಿದ. ಆಸ್ ಅದಕ್ಕೆ ಒಪ್ಪಿ ಕೊಟ್ಟ ಮಾತಿಗೆ ಬದ್ಧನಾಗಿ ಮೆಕ್ಕಾ ಮುಟ್ಟಿದವನೆ ತನ್ನ ಕಿರಿ ತಮ್ಮ ಕಿನಾನ್ ಜೊತೆ ಮಾಡಿ ಝೈನಬ್'ಳನ್ನು ಮದೀನಕ್ಕೆ ಕಳುಹಿಸಿಕೊಟ್ಟ. ಆದರೆ ಈ ನೂತನ ಬಾಂಧವ್ಯದ ಮರು ಬೆಸೆಯನ್ನ ಸಹಿಸಲಾಗದ ಖುರೈಷಿಗಳು ದಾರಿ ಮಧ್ಯದಲ್ಲಿಯೆ ಝೈನಬ್ ಏರಿದ್ದ ಒಂಟೆಯನ್ನ ತಡೆದು ಅದನ್ನ ತೀವೃವಾಗಿ ಘಾಸಿಗೊಳಿಸಿದರು. ಆದರೆ ಆಯುಧಪಾಣಿಯಾಗಿದ್ದ ಕಿನಾನ್ ಅತ್ತಿಗೆಯ ರಕ್ಷಣೆಗೆ ಹೋರಾಡುವ ಹುಮ್ಮಸ್ಸನ್ನು ತೋರಿಸಿದ್ದೆ ತಡ ಪುಂಡಾಟಕ್ಕೆ ಇಳಿದ ಖುರೈಷಿಗಳು ಓಡಿ ಹೋದರು.



ಈ ಘಟನೆಯಿಂದ ಯಾರಿಗೂ ಪ್ರಾಣಹಾನಿಯಾಗದಿದ್ದರೂ ಬೆದರಿದ ಒಂಟೆಯಿಂದ ಜಾರಿ ಕೆಳಗೆ ಬಿದ್ದಿದ್ದ ಝೈನಬ್ ತೀವೃ ಅಘಾತಕ್ಕೆ ಒಳಗಾಗಿದ್ದಳು. ಬಿದ್ದ ಏಟಿಗೆ ಗರ್ಭಿಣಿಯಾಗಿದ್ದ ಅವಳ ಗರ್ಭಸ್ರಾವವಾಗಿ ಹೋಯಿತು. ಈ ಪ್ರಕರಣದ ಸಂಗತಿ ಅರಿವಾಗುತ್ತಲೆ ಹೌಹಾರಿದ ಮೆಕ್ಕಾದ ಮುಖಂಡ ಅಬು ಸಫ್ಯಾನ್ ಕಿನಾನ್ ಹೋಗುವ ದಾರಿಯಲ್ಲಿಯೆ ತಡೆದು ಆತನನ್ನ ಮರಳಿ ಮೆಕ್ಕಗೆ ತಿರುಗಲು ಮನವೊಲಿಸಿದ. ಈ ದುರಂತದ ಅರಿವೇನಾದರೂ ಮಹಮದನಿಗಾದರೆ ಆತ ಕೆರಳಿ ಇನ್ನೊಂದು ಕಾಳಗವಾಗುವುದು ಅಬು ಸಫ್ಯಾನನಿಗೆ ಆ ಹೊತ್ತಿನಲ್ಲಿ ಬೇಡವಾಗಿತ್ತು. ಸದ್ಯ ಮನೆಗೆ ಮರಳಿ ಅನಂತರ ಕೆಲದಿನ ಅವಳ ಆರೋಗ್ಯ ಸುಧಾರಿಸುವವರೆಗೂ ಕಾದು ಅನಂತರ ಅವಳನ್ನ ಗುಪ್ತವಾಗಿ ಮದೀನಾ ಮುಟ್ಟಿಸುವ ಸಫ್ಯಾನನ ಸಲಹೆಗೆ ಕಿನಾನ್ ಒಪ್ಪಿದ. ಝೈನಬ್'ಳನ್ನೂ ಸಹ ಸಂತೈಸಲಾಯಿತು. ಮುಂದೆ ಕಿನಾನ್ ಈ ಹಿತವಚನಕ್ಕೆ ಅನುಸಾರವಾಗಿಯೆ ನಡೆದುಕೊಂಡು ಝೈನಬ್'ಳನ್ನ ಅವಳ ಅಪ್ಪನ ಮನೆಗೆ ರಹಸ್ಯವಾಗಿ ಮುಟ್ಟಿಸಿದ.



ಹೀಗೆ ಮದೀನಾ ಪಾಲಾದ ಝೈನಬ್ ಮುಸಲ್ಮಾನಳಾಗಿ ಅಲ್ಲಿಯೆ ಉಳಿದಳು. ಇದಾಗಿ ನಾಲ್ಕು ವರ್ಷಗಳ ನಂತರ ಪುನಃ ಆಬ್ದುಲ್ ಆಸ್ ಯುದ್ಧ ಖೈದಿಯಾಗಿ ಮಹಮದನ ಸೆರೆ ಸೇರಿದ. ವಾಸ್ತವವಾಗಿ ಆತ ಕ್ಯಾರವಾನ್ ಒಂದರ ರಕ್ಷಣೆಯ ಹೊಣೆ ಹೊತ್ತು ಮೆಕ್ಕಾದಿಂದ ಸಿರಿಯಾದತ್ತ ಹೊರಟಿದ್ದ. ಅದನ್ನು ಕೊಳ್ಳೆ ಹೊಡೆದ ಮುಸಲ್ಮಾನರು ಅವನನ್ನೂ ಸಹ ಸೆರೆ ಹಿಡಿದು ಮದೀನಾದತ್ತ ನಡೆಸಿ ಅಲ್ಲಿ ಸೆರೆಯಲ್ಲಿಟ್ಟರು. ಆತ ಸೆರೆಯಲ್ಲಿಯೆ ಗುಪ್ತವಾಗಿ ಝೈನಬ್'ಳಿಗೆ ಸುದ್ದಿ ಕಳಿಸಿದ. ಪುಳಕಿತಳಾದ ಅವಳು ಗಂಡನನ್ನು ಇರುಳಿನಲ್ಲಿಯೆ ಭೇಟಿ ಮಾಡಿ ಆತನ ಪ್ರಾಣ ರಕ್ಷಣೆಯ ಅಭಯವನ್ನ ನೀಡಿದಳು. ಮುಂಜಾನೆಯ ಪ್ರಾರ್ಥನೆಯ ನಂತರ ತನ್ನ ಖಾಸಗಿ ಕೋಣೆಯಿಂದ ಹೊರ ಬಂದ ಝೈನಬ್ ಮಸೀದಿಯಲ್ಲಿ ಎಲ್ಲರೆದುರು ಗಟ್ಟಿ ಧ್ವನಿಯಲ್ಲಿ ತಾನು ತನ್ನ ಪತಿಗೆ ಅಭಯ ನೀಡಿರುವ ಸಂಗತಿಯನ್ನ ಜಗಜ್ಜಾಹೀರುಗೊಳಿಸಿದಳು. ತನ್ನ ಮಗಳ ಮಾತಿನ ಕಟಿ ಬದ್ಧತೆ ತನಗೂ ಇರುವುದರಿಂದ ತಾನೂ ಸಹ ಅದಕ್ಕೆ ಬದ್ಧನಿದ್ದೇನೆ ಎಂದು ಮಹಮದ್ ಒಪ್ಪಿಕೊಂಡ.




ಆದರೆ ಮುಸಲ್ಮಾನನಾಗಿರದ ಆ ಕಾಫಿರನ ಬಳಿ ಇಸ್ಲಾಮಿನ ಅನುಯಾಯಿಯಾದ ತನ್ನ ಮಗಳು ಅತಿಥಿಯಾಗಿ ಮಾತ್ರ ಹೋಗಬಹುದೆಂದೂ, ಅವರು ಗಂಡ ಹೆಂಡಿರಾಗಿ ವರ್ತಿಸುವಂತಿಲ್ಲ ಎನ್ನುವ ತಾಕೀತು ಸಹ ಮಾಡಿದ. ಅವನ ಮಾತಿಗೆ ಆಕೆ ಸಮ್ಮತಿಸಿದಾಗ ಆಸ್'ನನ್ನು ಬಿಡುಗಡೆ ಮಾಡಲಾಯಿತು. ಮಹಮದನ ಔದಾರ್ಯಕ್ಕೆ ಮನಸೋತ ಆಸ್ ಸ್ವ ಇಚ್ಛೆಯಿಂದಲೆ ಮತಾಂತರವಾಗಿ ಮತ್ತೆ ಝೈನಬ್'ಳೊಂದಿಗೆ ತನ್ನ ವೈವಾಹಿಕ ಜೀವನವನ್ನ ಮದೀನಾದಲ್ಲಿಯೆ ಮುಂದುವರೆಸಿದ. ಆದರೆ ಹಿಂದಾಗಿದ್ದ ಗರ್ಭಸ್ರಾವದಿಂದ ತೀವೃ ಅಸ್ವಸ್ಥತೆಗೆ ಒಳಗಾಗಿದ್ದ ಝೈನಬ್ ಅದರ ನೋವನ್ನ ಪದೆ ಪದೆ ಅನುಭವಿಸುತ್ತಾ ನರಳುತ್ತಿದ್ದಳು. ಮುಂದಿನ ಎರಡು ವರ್ಷಗಳಲ್ಲಿ ಅದೆ ನೋವು ಅವಳ ಪ್ರಾಣದ ಆಹುತಿಯನ್ನೂ ಸಹ ಪಡೆಯಿತು.


ಈ ನಡುವೆ ಮಹಮದ್ ಆ ಕಾಲದ ಪ್ರಖ್ಯಾತ ಹಗೂ ಅಳಿವಿನಂಚಿನಲ್ಲಿದ್ದ ರೋಮನ್ ಸಾಮ್ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸಿದ. ಈ ಸಂಪರ್ಕ ಕ್ರಿಸ್ತಶಕ ಆರುನೂರಾ ಇಪ್ಪತ್ತೇಳರ ಅಕ್ಟೋಬರ್ ತಿಂಗಳಿನಲ್ಲಿ ನಡೆಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್. ಅದರ ಮರು ತಿಂಗಳಿನಲ್ಲಿಯೆ ದೂಮತ್ ಅಲ್ ಝಂಡಲ್ ಪ್ರದೇಶದ ಮೇಲೆ ಮಹಮದನ ಇನ್ನೊಂದು ದಂಡಯಾತ್ರೆ ಜರುಗಿತು. ಈ ಬಾರಿ ಧಾಳಿಯ ಉದ್ದೇಶ ಕೊಳ್ಳೆ ಆಗಿಲ್ಲದೆ ಕೇವಲ ಮತಾಂತರ ಮಾತ್ರ ಮಾಡುವುದಾಗಿತ್ತು. ಆ ಪ್ರದೇಶ ಬಹುಸಂಖ್ಯಾತ ಕ್ರೈಸ್ತರಿಂದ ತುಂಬಿತ್ತು. ಯಾವುದೆ ಠಕ್ಕು, ವಂಚನೆ ಹಾಗೂ ಮೋಸ ಎಸಗದಂತೆಯೂ, ಯಾವೊಬ್ಬ ಎಳೆಯ ಮಕ್ಕಳನ್ನ ಹಿಡಿದು ಹಿಂಸಿಸದಂತೆಯೂ ಮಹಮದ್ ತನ್ನ ಪಡೆಗೆ ಕಟ್ಟುನಿಟ್ಟಿನ ಸೂಚನೆ ಇತ್ತಿದ್ದ.



ಈ ಪ್ರಕಾರ ದೂಮತ್ ಅಲ್ ಝಂಡಲ್ ಪ್ರದೇಶ ಮುಟ್ಟಿದ ಮಹಮದನ ಸೈನ್ಯಾಧಿಕಾರಿ ಅಬ್ದುಲ್ ರೆಹ್ಯಾನ್ ಕೈಸ್ತ ಮುಖಂಡರನ್ನ ಕರೆಸಿ ಎಲ್ಲರೂ ಮರು ಮಾತಿಲ್ಲದೆ ಇಸ್ಲಾಮ್ ಸ್ವೀಕರಿಸುವಂತೆ ತಾಕೀತು ಮಾಡಿದ. ಅದಕ್ಕಾಗಿ ಮೂರು ದಿನಗಳ ವಾಯಿದೆಯನ್ನಾತ ಇತ್ತಿದ್ದ. ಅಬು ಅಸ್ಭಾಫ್ ಎನ್ನುವ ಕ್ರೈಸ್ತ ಮುಖಂಡ ಮೂರು ದಿನಗಳ ಒಳಗೆ ತನ್ನ ಸಮಾಜದಲ್ಲಿ ಚರ್ಚಿಸಿ ಮಹಮದನ ಶಕ್ತಿ ಹಾಗೂ ಮುಸಲ್ಮಾನರ ಬರ್ಬರತೆಗಳನ್ನ ವಿಮರ್ಶಿಸಿ ಇಸ್ಲಾಂ ಸ್ವೀಕರಿಸುವುದೆ ಕ್ಷೇಮ ಎನ್ನುವ ನಿರ್ಧಾರಕ್ಕೆ ಬಂದ. ರೆಹ್ಯಾನನಿಗೆ ಈ ಶರಣಾಗತಿಯ ಸುದ್ದಿಯನ್ನು ಮುಟ್ಟಿಸಲಾಯಿತು. ಆತನನ್ನ ಅನುಸರಿಸಿ ಅನೇಕ ಕ್ರೈಸ್ತರು ಮುಸಲ್ಮಾನರಾದರು. ಅಸ್ಭಾಫ್'ನ ಮಗಳನ್ನ ಅಬ್ದುಲ್ ರೆಹ್ಯಾನನಿಗೆ ಕೊಟ್ಟು ಮದುವೆ ಮಾಡಲಾಯಿತು. ಹೊಸ ಹೆಂಡತಿಯೊಂದಿಗೆ ರೆಹ್ಯಾನ್ ಪಡೆ ಹಿಂದಿರುಗಿಸಿ ಕೊಟ್ಟ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ಮದೀನಾ ಬಂದು ಮುಟ್ಟಿದ.


ಮತ್ತೆ ವ್ಯಾಪಾರದ ಪ್ರವೃತ್ತಿಗೂ ಮರಳಿದ್ದ ಮಹಮದ್ ಕ್ಯಾರವಾನ್'ಗಳನ್ನು ಕಟ್ಟಿ ದೂರ ದೇಶಗಳಿಗೆ ಅವನ್ನು ಕಳಿಸುವ ಹಾಗೂ ಅಲ್ಲಿ ವ್ಯಾಪಾರ ನಡೆಸುವ ಕ್ರಮವನ್ನೂ ಸಹ ರೂಢಿಸಿಕೊಂಡ. ಅದೆ ವರ್ಷದ ದಿಸೆಂಬರಿನಲ್ಲಿ ಮಹಮದನ ಸಾಕುಮಗ ಝೈದ್ ಸಿರಿಯಾಕ್ಕೆ ಹೋಗಲಿದ್ದ ಅಂತಹ ಕ್ಯಾರವಾನ್ ಒಂದರ ನೇತೃತ್ವ ವಹಿಸಿ ಹೋಗಿದ್ದ. ಆದರೆ ದಾರಿ ಮಧ್ಯೆ ಬೆನ್ ಫೆಝಾರ್ ಬುಡಕಟ್ಟಿನವರು ಈ ಕ್ಯಾರವಾನನ್ನು ದರೋಡೆ ಮಾಡಿದರು. ಆತನ ಸುಪರ್ದಿಯಲ್ಲಿದ್ದ ಕಟ್ಟ ಕಡೆಯ ವಸ್ತುವನ್ನೂ ಸಹ ಲೂಟಿ ಮಾಡಿದ ಅವರು ಅವನನ್ನು ಮಾತ್ರ ಘಾಸಿಗೊಳಿಸಿ ಜೀವಂತವಾಗಿ ಬಿಟ್ಟು ಬಿಟ್ಟರು. ಬದುಕಿದೆಯ ಬಡ ಜೀವವೆ ಎನ್ನುವಂತೆ ಮದೀನಾ ಸೇರಿಕೊಂಡ ಝೈದ್. ಆದ ಗಾಯಗಳಿಂದ ಚೇತರಿಸಿಕೊಂಡು ಸೇಡಿಗಾಗಿ ಹಾತೊರೆಯುತ್ತಾ ಕೂತ.



ಮಹಮದನ ಅಪ್ಪಣೆ ಪಡೆದು ಆ ಬೆನ್ ಫೆಜಾರ್ ಬುಡಕಟ್ಟಿನವರಿಗೆ ತಕ್ಕಪಾಠ ಕಲಿಸಲು ಹೊರಟ. ಕರಾರುವಾಕ್ಕಾಗಿ ಧಾಳಿಯನ್ನ ಸಂಘಟಿಸಿದ ಆತ ಈ ವಾರ್ತೆ ಎಲ್ಲಿಯೂ ಮೊದಲೆ ಸೋರಿಕೆ ಆಗದಂತೆ ಮುಂಜಾಗ್ರತೆ ವಹಿಸಿದ್ದ. ಆತನ ಅನಿರೀಕ್ಷಿತ ಧಾಳಿಯ ಮುಂದೆ ಬೆನ್ ಫೆಝಾರರು ನಿಸ್ಸಹಾಯಕಯಾಗಿ ಸೋತು ಶರಣಾದರು. ಈಗ ಪ್ರತಿಕಾರವಾಗಿ ಅವರ ಕೊಟ್ಟ ಕೊನೆಯ ಸೊತ್ತನ್ನೂ ಸಹ ವಶ ಪಡಿಸಿಕೊಳ್ಳಲಾಯಿತು. ಹೀಗೆ ಸೆರೆ ಹಿಡಿದ ಜನ ಹಾಗೂ ದನಗಳಲ್ಲಿ ಉಮ್ ಕಿರ್ಫಾ ಎನ್ನುವ ಕುಖ್ಯಾತ ಮಹಿಳೆಯೂ ಒಬ್ಬಳಾಗಿದ್ದಳು. ಅತ್ಯಂತ ಕ್ರೌರ್ಯಕ್ಕೆ ಹೆಸರುವಾಸಿಯಾದ ಹಿಂಸ್ರ ಪಶುವಿನಂತಹ ನಡುವಳಿಕೆಯ ಆಕೆ ಆ ದರೋಡೆಕೋರರ ಗುಂಪಿನ ಮುಖ್ಯಸ್ಥನ ಸೂಳೆಯಾಗಿದ್ದಳು.



ಅವಳಿಗೆ ಪ್ರಾಯ ಸಂದು ವಯೋ ವೃದ್ಧೆಯಾಗಿದ್ದರೂ ಕ್ರೌರ್ಯದಲ್ಲಿ ಮಾತ್ರ ಇನಿತೂ ಆಕೆಯ ವಿಕೃತಿ ತಗ್ಗಿರಲಿಲ್ಲ. ಆಕೆಯನ್ನ ಅಷ್ಟೆ ಕ್ರೂರವಾಗಿ ಝೈದ್ ನಡೆಸಿಕೊಂಡ. ಆಕೆಯನ್ನ ಬೋರಲಾಗಿ ಮಲಗಿಸಿ ಆಕೆಯ ಎರಡೂ ಕಾಲುಗಳನ್ನ ಎರಡು ಪ್ರತ್ಯೇಕ ಒಂಟೆಗಳ ಹಿಂಗಾಲುಗಳಿಗೆ ಕಟ್ಟಿದ! ಅವು ಎಳೆದೆಳೆದು ಮುಂದೆ ಸಾಗುತ್ತಿದ್ದಂತೆ ಅತ್ಯಂತ ದಾರುಣವಾಗಿ ಛಿದ್ರಗೊಂಡ ದೇಹದೊಂದಿಗೆ ಆಕೆ ಕೊನೆಯುಸಿರೆಳೆದಳು. ಆಕೆಯ ತಮ್ಮನನ್ನೂ ಸಹ ಕಣ್ಣು ಕೀಳಿಸಿ ಅದೆ ಸ್ಥಿತಿಗೆ ದೂಡಲಾಯಿತು. ಆದರೆ ಅವಳ ಮಗಳಿಗೆ ಮಾತ್ರ ಶಿಕ್ಷೆಯಿಂದ ವಿನಾಯತಿ ನೀಡಿ ಮುಂದೆ ಮಹಮದನ ಎಳೆಯ ಪತ್ನಿ ಆಯೆಷಾಳ ಆಪ್ತ ಸೇವೆಗೆ ಗುಲಾಮಳನ್ನಾಗಿ ನೇಮಿಸಲಾಯಿತು.


ಈಗ ಮಹಮದನ ದೃಷ್ಟಿ ಮತ್ತೆ ಯಹೂದಿಗಳತ್ತ ತಿರುಗಿತು. ಹಿಂದೆ ಬೆನ್ ಅನ್ ನದೀರ್ ಯಹೂದಿ ಬುಡಕಟ್ಟಿನವರನ್ನು ಆತ ಗಡಿಪಾರು ಮಾಡಿದ್ದನ್ನಷ್ಟೆ. ಅವರಲ್ಲಿ ಕೆಲವರು ಖೈಬರ್ ಪ್ರಾಂತ್ಯಕ್ಕೆ ತೆರಳಿ ಅಲ್ಲಿನ ತಮ್ಮ ಮತ ಬಾಂಧವರೊಂದಿಗೆ ವಾಸ್ತವ್ಯ ಹೂಡಿ ಅಲ್ಲಿಯೆ ನೆಲೆಗೊಂಡಿದ್ದರು. ಅಬು ರಫಿ ಎಂಬಾತ ಆ ಗುಂಪಿನ ಮುಖಂಡನಾಗಿದ್ದ. ಹಿಂದೆ ಖುರೈಷಿಗಳ ಪರವಾಗಿ ತನ್ನ ವಿರುದ್ಧ ಹೋರಾಡಿದ್ದವರು ಈಗ ಮತ್ತೆ ಪಿತೂರಿ ಮಾಡುತ್ತಿದ್ದಾರೆ ಎಂದೆ ರೊಳ್ಳೆ ತೆಗೆದ ಮಹಮದ್ ಅವರ ಮೇಲೆ ಹೊಸ ಆರೋಪ ಹೊರೆಸಿ ಧಾಳಿಗೆ ಮುಂದಾದ. ಅದಕ್ಕೆ ಪೂರ್ವಭಾವಿಯಾಗಿ ತನ್ನದೊಂದು ಕೊಲೆಗಡುಕರ ತಂಡವನ್ನು ಅಬು ರಫಿಯನ್ನ ಕೊಲ್ಲಲು ನೇಮಿಸಿದ. ನಿಷ್ಣಾತ ವೃತ್ತಿಪರ ಕೊಲೆಗಾರರೆ ತುಂಬಿದ್ದ ಆ ತಂಡದ ಮಂದಿ ನಟ್ಟ ನಡುರಾತ್ರಿ ಖೈಬರ್ ಸೇರಿಕೊಂಡರು.




ಆ ಕೊಲೆಗಾರರ ನೇತೃತ್ವ ವಹಿಸಿದ್ದವ ಯಹೂದಿ ನಡುವಳಿಕೆ ಹಾಗೂ ಮಾತಿನ ಧಾಟಿಯನ್ನ ಚೆನ್ನಾಗಿ ಅರಿತಿದ್ದ. ಆತ ರಫಿಯ ಮನೆ ಮುಂದೆ ನಿಂತು ವಿನಯ ನಟಿಸುತ್ತಾ ಬಾಗಿಲು ತೆಗೆಯುವಂತೆ ರಫಿಯ ಹೆಂಡತಿಯನ್ನು ವಿನಂತಿಸಿದ. ಏಮಾರಿದ ಆಕೆ ಅಮಾಯಕವಾಗಿ ಈ ಯಾಚನೆಯ ಧ್ವನಿಯನ್ನ ನಂಬಿ ಬಾಗಿಲು ತೆರೆದಳು. ತಕ್ಷಣ ಒಳ ನುಗ್ಗಿದ ಕೊಲೆಗಡುಕರು ಹರಿತವಾದ ಕತ್ತಿಯನ್ನ ತೋರಿಸಿ ಬೆದರಿಸಿ ಆಕೆಯನ್ನ ಸುಮ್ಮನಾಗಿಸುತ್ತಾ ಮಲಗಿದ್ದ ರಫಿಯ ಕತ್ತು ಕಡಿದು ತಲೆಯನ್ನು ಕಿತ್ತೊಗೆದು ಬಂದಂತೆಯೆ ಹಿಂದಿರುಗಿ ಹೋದರು! ಊರ ಸನಿಹದ ಬೆಟ್ಟದಲ್ಲಿ ಅಡಗಿ ರಾತ್ರಿ ಕಳೆದು ಬೆಳಗಾಗುವಾಗ ಮದೀನ ಮುಟ್ಟಿ ಮಹಮದನಿಗೆ ಈ ವರದಿಯನ್ನ ಒಪ್ಪಿಸಿದ್ದೆ ಆತ ಆನಂದ ತುಂದಿಲನಾದ.


ಆದರೆ ಕೇವಲ ಅಬು ರಫಿಯ ಕೊಲೆಯಿಂದ ಮಹಮದ್ ತೃಪ್ತನಾಗಲಿಲ್ಲ. ಬೆನ್ ಅನ್ ನದೀರ್ ಗುಂಪಿನ ಇನ್ನಿತರ ಮುಖಂಡರ ಜೊತೆ ಓಸೈರ್ ಮುಂತಾದವರು ಸಂಚು ಮಾಡುತ್ತಾ ಘಟ್'ಫಾನರ ಜೊತೆಗೂಡಿ ಮದೀನಾದ ಮೇಲೆ ಮುಗಿ ಬೀಳುವ ಬಾತ್ಮಿ ಅವನಿಗೆ ಬಂದು ಮುಟ್ಟಿದ್ದೆ ಇದಕ್ಕೆ ಕಾರಣ. ಆದರೆ ಅಬು ರಫಿಯ ಕೊಲೆಯಂತಹ ಮತ್ತೊಂದು ಯೋಜನೆ ಈಗ ಕಾರ್ಯ ಸಾಧುವಾಗುವುದಿಲ್ಲ ಅನ್ನುವುದು ಅವನಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಯಹೂದಿಗಳು ಆದ ಆ ಅನಾಹುತದ ನಂತರ ಎಚ್ಚರದಿಂದ ಇದ್ದರು. ಅಂತಹ ಭವಿಷ್ಯದ ದುರಂತಗಳನ್ನ ತಪ್ಪಿಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನೂ ಸಹ ತೆಗೆದುಕೊಂಡಿದ್ದರು. ಇದಕ್ಕಾಗಿ ಮಹಮದನ ಮೆದುಳು ಹೊಸತೊಂದು ಕುತಂತ್ರವನ್ನ ಹೆಣೆಯುವುದು ಅನಿವಾರ್ಯವಾಯಿತು. ಆ ಯೋಜನೆಯನುಸಾರ ತನ್ನ ಮೂವತ್ತು ಮುಸಲ್ಮಾನರ ನಿಯೋಗವೊಂದನ್ನ ಆತ ಅಬ್ದುಲ್ಲಾ ಇಬ್ನ್ ರವಾಹ್ ಎಂಬಾತನ ನೇತೃತ್ವದಲ್ಲಿ ಓಸೈರ್ ಬಳಿ ಕಳುಹಿಸಿದ. ಒಂದೊಮ್ಮೆ ಕಪ್ಪ ಕಾಣಿಕೆಗಳೊಂದಿಗೆ ಓಸೈರ್ ತನ್ನನ್ನ ಮದೀನದಲ್ಲಿ ಬಂದು ಕಂಡು ನಜರಾನಾ ಒಪ್ಪಿಸಿದರೆ ತಾನು ಖೈಬರ್ ಪ್ರಾಂತ್ಯಕ್ಕೆ ಅವನೆ ರಾಜನೆಂದು ಮಾನ್ಯ ಮಾಡುವುದಾಗಿ ಈ ನಿಯೋಗ ಸಂಧಾನ ನಡೆಸಿತು. ಅವನ ಜೀವದ ಅಭಯವನ್ನ ಆ ಮೂವತ್ತು ಮಂದಿಯ ಪಡೆ ಕೊಡುವುದಾಗಿಯೂ ಭರವಸೆ ನೀಡಲಾಯಿತು.


ಇದಕ್ಕೆ ಒಪ್ಪಿಗೆ ಸೂಚಿಸಿದ ಓಸೈರ್ ತನ್ನದೂ ಮೂವತ್ತು ಮಂದಿಯ ಪಡೆಯೊಂದನ್ನ ಕಟ್ಟಿಕೊಂಡು ಮದೀನಾಕ್ಕೆ ಹೊರಟ. ಪ್ರತಿಯೊಬ್ಬ ಯಹೂದಿಯನ್ನೂ ಒಬ್ಬೊಬ್ಬ ಮುಸಲ್ಮಾನನ ವಶ ನೀಡಿ ಅವರನ್ನ ಅಂತೆಯೆ ಒಂಟೆಯೆ ಮೇಲೆ ಜೊತೆಜೊತೆಯಾಗಿಯೆ ಕೂರಿಸಲಾಯಿತು. ಹೀಗೆ ಪ್ರಯಾಣ ಸಾಗುತ್ತಿದ್ದಾಗ ಧಾರಿ ಮಧ್ಯ ಓಸೈರ್ ತನ್ನ ಕತ್ತಿ ತೆಗೆಯಲು ಪ್ರಯತ್ನಿಸುತ್ತಿದ್ದಾನೆ ಎಂದು ದೊಡ್ದ ಧ್ವನಿಯಲ್ಲಿ ಆರೋಪಿಸುತ್ತಾ ಅಬ್ದುಲ್ಲಾ ತನ್ನ ಒಂಟೆಯಿಂದ ಏಕಾಏಕಿ ಕೆಳ ನೆಗೆದ. ವಾಸ್ತವದಲ್ಲಿ ಓಸೈರ್ ಕತ್ತಿ ತೆಗೆದೂ ಇರಲಿಲ್ಲ ಹಾಗೂ ಹಾಗೆ ಕತ್ತಿ ಹಿರಿಯಲು ಸಂಧಿಗಾಗಿ ಸಮ್ಮತಿಸಿ ಹೊರಟಿದ್ದ ಅವನಿಗೆ ಸಕಾರಣಗಳೆ ಇರಲಿಲ್ಲ!. ಆದರೆ ಈ ಕುಂಟು ನೆಪವನ್ನೆ ಮುಂದು ಮಾಡಿದ ಅಬ್ದುಲ್ಲಾ ಅತನನ್ನ ಕೆಡವಿ ಕಡಿದುರುಳಿಸಿದ. ಹುಡುಕಿದಾಗ ಅವನ ಬಳಿ ಯಾವುದೆ ಕತ್ತಿಯೂ ಪತ್ತೆಯಾಗಲಿಲ್ಲ! ಅಲ್ಲಿಗೆ ಇದು ಮುಸಲ್ಮಾನರ ಹಾಗೂ ಮಹಮದನ ಕುತಂತ್ರವೆನ್ನುವುದು ಸ್ಪಷ್ಟವಾಗಿ ಸಾಬೀತಾಯಿತು. ಆದರೆ ಸಾಯುವ ಮುನ್ನ ಓಸೈರ್ ಸಹಾ ತನ್ನ ಉದ್ದ ಒಂಟೆ ಓಡಿಸುವ ಕೋಲಿನಿಂದ ಅಬ್ದುಲ್ಲಾನ ಮಂಡೆಗೆ ಬೀಸಿ ಹೊಡೆದಿದ್ದ. ಇನ್ನುಳಿದ ಇಪ್ಪತ್ತೊಂಬತ್ತು ಮಂದಿ ಯಹೂದಿಗಳನ್ನೂ ಸಹ ಮುಸಲ್ಮಾನರು ಕತ್ತರಿಸಿ ಹಾಕಿದರು. ಸುದ್ದಿ ಮಹಮದನ ಕಿವಿಗೆ ಮುಟ್ಟಿದಾಗ ಆತ ಸಂಪ್ರೀತನಾದ.


ಇದೆ ಸಮಯದಲ್ಲಿ ಮರಳುಗಾಡಿನ ಇನ್ನೊಂದು ಅಲೆಮಾರಿ ಬುಡಕಟ್ಟು ಬೆದಾವಿನರಲ್ಲಿ ಎಂಟು ಮಂದಿ ಮಹಮದನ ಸಂಪರ್ಕ ಸಾಧಿಸಿ ಇಸ್ಲಾಮನ್ನು ಒಪ್ಪಿಕೊಂಡು ಮುಸಲ್ಮಾನರಾದರು. ಅವರು ಮದೀನಾದಲ್ಲಿ ಇರುವಾಗಲೆ ಖಾಯಲೆ ಬಿದ್ದರು. ಅವರನ್ನ ಉಪಚರಿಸುವಲ್ಲಿ ಯಾವುದೆ ಕೊರತೆಯಾಗದಂತೆ ಮಹಮದ್ ಎಚ್ಚರ ವಹಿಸಿದ. ತನ್ನ ಸುಪರ್ದಿಯಲ್ಲಿದ್ದ ಮದೀನಾ ಪಕ್ಕದ ಕೋಬಾದಲ್ಲಿ ಅವರನ್ನ ಚೇತರಿಸಿಕೊಳ್ಳಲು ಇರಿಸಲಾಯಿತು. ಅಲ್ಲಿ ಸೊಂಪಾಗಿ ಚಿಗುರಿದ್ದ ಹುಲ್ಲುಗಳನ್ನ ಮೇಯ್ದು ಪುಷ್ಠವಾಗಿದ್ದ ಒಂಟೆಗಳನ್ನ ಅವರ ವಶಕ್ಕೆ ನೀಡಲಾಯಿತು. ಅವುಗಳ ಸಮೃದ್ಧ ಹಾಲನ್ನ ಕುಡಿದು ಅವರು ಆರೋಗ್ಯ ಸುಧಾರಿಸಿಕೊಂಡರು. ಅವನ ಅಣತಿಯನ್ನು ಪಾಲಿಸಿದ ಬೆದಾವಿನರು ಮರಳಿ ಗಟ್ಟಿಮುಟ್ಟಾದರು. ಆದರೆ ಆರೋಗ್ಯ ಸುಧಾರಣೆಗೊಂಡ ನಂತರ ಮತ್ತೆ ಕೊಳ್ಳೆ ಹೊಡೆಯುವ ಅವರ ಮೂಲ ಪ್ರವೃತ್ತಿಗೆ ಅವರು ಮತ್ತೆ ಶರಣಾದರು.



ಅದರ ಅನುಸಾರ ಒಂಟೆಯನ್ನು ಕಾಯುತ್ತಿದ್ದ ತುರುಗಾಹಿಯನ್ನ ಕ್ರೂರವಾಗಿ ಕೊಡ ಅವರು ಒಂಟೆಗಳನ್ನ ಓಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು. ಈ ಸುದ್ದಿ ತಿಳಿದ ಮಹಮದ್ ಅವರ ಕೃತಘ್ನತೆ ಕಂಡು ಕೆರಳಿ ಕೆಂಡವಾದ. ಅವರನ್ನ ಬೆನ್ನಟ್ಟಲು ಪಡೆಯೊಂದನ್ನ ಕಳುಹಿಸಲಾಯಿತು. ಹೆಚ್ಚು ಶ್ರಮವಿಲ್ಲದೆ ಅವರು ಸೆರೆಯಾದರು. ಅವರನ್ನ ತಂದು ಮಹಮದನ ಮುಂದೆ ಕೈ ಕಟ್ಟಿ ಮಂಡಿಯ ಮೇಲೆ ನಿಲ್ಲಿಸಲಾಯಿತು. ಅವರು ತುರುಗಾಹಿಯನ್ನ ಕೊಂದ ವಿಧಾನದಲ್ಲಿಯೆ ಅವರ ಕೈ ಕಾಲನ್ನ ಕಡಿಸಿ ಕಣ್ಣು ಕೀಳಿಸಿದ. ಶವಗಳನ್ನು ಅಲ್ ಘಾಬಾ ಪ್ರದೇಶದಲ್ಲಿ ಎಸೆಯಲಾಯಿತು. ಆದರೆ ಈ ಕ್ರೂರ ಶಿಕ್ಷೆಗಳನ್ನ ಮರಣದಂಡನೆಯಿಂದ ಮುಂದೆ ಹೊರಗಿಡಲಾಯಿತು. ಕೇವಲ ಕತ್ತು ಕಡಿಯುವುದಕ್ಕಷ್ಟೆ ಇದನ್ನ ಸೀಮಿತಗೊಳಿಸಿಕೊಳ್ಳಲಾಯಿತು. ಆದರೆ ದೈಹಿಕ ಹಲ್ಲೆಗೆ ಮಾತ್ರ ದೈಹಿಕವಾಗಿ ಅದೆ ಅಂಗವನ್ನ ಊನ ಮಾಡುವ ಕಠಿಣ ಪದ್ಧತಿಯನ್ನ ಇಸ್ಲಾಮಿನಲ್ಲಿ ಮಹಮದ್ ಅಳವಡಿಸಿದ.



ಕಳ್ಳತನದ ಅಪರಾಧಕ್ಕೆ ಕೈ ಕಾಲನ್ನು ಕತ್ತರಿಸಿ ಹಾಕುವ ಕಟ್ಟುನಿಟ್ಟಾದ ಶಿಕ್ಷೆಯನ್ನ ಇಸ್ಲಾಮ್ ಅನುಸರಿಸುವಂತೆ ಮಾಡಲಾಯಿತು. ದರೋಡೆಕೋರರು ಸ್ತ್ರೀಯರೆ ಇರಲಿ ಅಥವಾ ಪುರುಷರೆ ಇರಲಿ ಅವರಿಗೆ ಇದರಿಂದ ಯಾವುದೆ ವಿನಾಯತಿಯನ್ನು ನೀಡಲಾಗಿರಲಿಲ್ಲ. ಖುರ್ಹಾನಿನ ಸುರಾ ಸಂಖ್ಯೆ ಮೂವತ್ತೆಂಟು ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಸುರಾ ೫/೩೮-೪೫ರಲ್ಲಿ ವಿಸ್ಕೃತವಾಗಿ ಇದನ್ನ ವಿವರಿಸಲಾಗಿದೆ. ಅದರಲ್ಲಿ ಹೇಳಿರುವಂತೆ "ಚೋರರು ಸ್ತ್ರೀಯರಾಗಿರಲಿ ಅಥವಾ ಪುರುಷರಾಗಿರಲಿ ಇಬ್ಬರ ಕೈಗಳನ್ನೂ ಸಹ ನಿರ್ದಾಕ್ಷಿಣ್ಯವಾಗಿ ಕಡಿದು ಬಿಡಿರಿ. ಅದು ಅವರ ಗಳಿಕೆಯ ಫಲ ಹಾಗೂ ಅಲ್ಲಾಹನು ಅಂತಹ ಅಧಮರಿಗೆ ವಿಧಿಸಿದ ಕಠಿಣ ಎಚ್ಚರಿಕೆ. ಅಲ್ಲಾಹನು ಮಹಾ ಪ್ರತಾಪಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ. ಅಲ್ಲಾಹನ ಆಜ್ಞೆ ಬರೆದಿರುವಂತಹ 'ಶೌರತ್' ಅವರ ಬಳಿಯಲ್ಲಿದ್ದೂ ಸಹ ಅವರು ಅದನ್ನು ಮೀರಿ ಹೋಗುತ್ತಿರುವಾಗ ನಿಮ್ಮನ್ನ ಅದಕ್ಕೆ ಮಧ್ಯಸ್ಥರನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ವಿಶ್ವಾಸಿಗಳೆ ಆಗಿರುವುದಿಲ್ಲ."


"ನಾವು 'ತೌರಾತ'ನ್ನು ಅವತ್ತೀರ್ಣಗೊಳಿಸಿದ್ದೆವು. ಅದರಲ್ಲಿ ಮಾರ್ಗದರ್ಶನ ಹಾಗೂ ಪ್ರಕಾಶವಿತ್ತು. ಮುಸಲ್ಮಾನರಾಗಿದ್ದು ಅಲ್ಲಾಹನ ಆಜ್ಞಾನುಸಾರಿಗಳಾಗಿದ್ದು ಬಂದ ಎಲ್ಲಾ ಪ್ರವಾದಿಗಳೂ ಸಹ ಯಹೂದಿಗಳ ವಾಜ್ಯಗಳನ್ನು ಇದರನುಸಾರವೆ ಇತ್ಯರ್ಥಗೊಳಿಸುತ್ತಿದ್ದರು. ಇದೆ ಕ್ರಮದಲ್ಲಿ ಅಬ್ದಾನಿಗೆ ಅಹ್'ಬಾರರೂ ಸಹ ತೀರ್ಪು ನೀಡುತ್ತಿದ್ದರು."


"ಏಕೆಂದರೆ ಅವರನ್ನು ದೇವಗ್ರಂಥದ ಸಂರಕ್ಷಕರನ್ನಾಗಿ ನೇಮಿಸಲಾಗಿತ್ತು. ಅದಕ್ಕೆ ಅವರು ಸಾಕ್ಷಿಯಾಗಿದ್ದರು. ಆದ್ದರಿಂದ ಯಹೂದಿಗಳೆ ನೀವು ಜನರನ್ನು ಭಯ ಪಡಿರಿ ಹಾಗೂ ನನ್ನ ಸೂಕ್ತಗಳನ್ನು ಅಲ್ಪ ಪ್ರತಿಫಲ ಪಡೆದು ಮಾರುವ ಪ್ರವೃತ್ತಿಯನ್ನು ನಿಲ್ಲಿಸಿರಿ. ಅಲ್ಲಾಹನು ಅವತ್ತೀರ್ಣಗೊಳಿಸಿದ ಕಾನೂನಿನ ಪ್ರಕಾರ ಶಿಕ್ಷೆಗಳನ್ನು ತೀರ್ಮಾನಿಸದವರೆ ಕಾಫಿರರು."


"ಜೀವಕ್ಕೆ ಬದಲು ಜೀವ, ಕಣ್ಣಿಗೆ ಬದಲು ಕಣ್ಣು, ಮೂಗಿಗೆ ಬದಲು ಮೂಗು, ಕಿವಿಗೆ ಬದಲು ಕಿವಿ, ಹಲ್ಲಿಗೆ ಬದಲು ಹಲ್ಲು, ಹಾಗೂ ಎಲ್ಲಾ ಗಾಯಗಳಿಗೆ ಪ್ರತಿಯಾಗಿ ಅದೆ ಗಾಯಗಳೆಂದು ಯಹೂದಿಗಳಿಗೆ ನಾವು 'ತೌರಾತ್'ನಲ್ಲಿ ಖಡ್ಡಾಯಗೊಳಿಸಿದ್ದೆವು. ಈ ಆಜ್ಞೆಯನ್ನು ಅನುಸರಿಸಲಿಚ್ಛಿಸದೆ ಯಾರಾದರೂ ಈ ಪ್ರತಿಕಾರವನ್ನು ದಾನ ಮಾಡಿದ್ಸರೆ ಅದು ಅವರ ಪಾಲಿನ ಪ್ರಾಯಶ್ಚಿತವಾಗುವುದು. ಅಲ್ಲಾಹನ ಮೂಲಕ ಅವತ್ತೀರ್ಣಗೊಂಡ ಕಾನೂನನ್ನ ಪಾಲಿಸದೆ ಮನಸ್ಸಿಗೆ ತೋಚಿದಂತೆ ಮುರಿಯುವವರೆ ಅಕ್ರಮಿಗಳು ಹಾಗೂ ಅವಿಶ್ವಾಸಿಗಳು."


ಇದೆ ವೇಳೆ ಮಹಮದನ ಕುಲ ವೈರಿ ಅಬು ಸಫ್ಯಾನನ ಕೊಲೆಗೂ ಸಹ ರಫಿಯಂತೆಯೆ ಪ್ರಯತ್ನಿಸಿ ವಿಫಲವಾದ ಪ್ರಕರಣವನ್ನು ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ದ ಪುಟ ಸಂಖ್ಯೆ ಮುನ್ನೂರಾ ಐವತ್ತೊಂದರಲ್ಲಿ ವಿವರವಾಗಿ ಸಾದರ ಪಡಿಸಿದ್ದಾರೆ. ಅದಕ್ಕಾಗಿ ಒಬ್ಬ ವೃತ್ತಿಪರ ಕೊಲೆಗಡುಕನನ್ನು ನೇಮಿಸಲಾಯಿತು. ಅಮ್ರ್ ಇಬ್ನ್ ಸಮಯ್ಯಾ ಎನ್ನುವ ಆತ ಮುಸಲ್ಮಾನನಾಗುವ ಮೊದಲೂ ಸಹ ಕೊಲೆಗಡುಕತನವನ್ನೆ ಬಾಳ್ವೆಯ ಜೀವನೋಪಾಯದ ವೃತ್ತಿಯನ್ನಾಗಿಸಿಕೊಂಡಿದ್ದ! ಮೆಕ್ಕಾದ ಕಾಬಾದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಅವನನ್ನು ಅಲ್ಲಿನ ಮಂದಿ ತಕ್ಷಣ ಗುರುತಿಸಿ ಆತನ ನಡುವಳಿಕೆಯ ಮೇಲೆ ಅನುಮಾನಗೊಂಡರು. ಇದರ ಸುಳಿವು ಸಿಗುತ್ತಿದ್ದಂತೆ ಆತ ಅಲ್ಲಿಂದ ಓಡಿ ಪಾರಾಗಿ ಮದೀನಾಕ್ಕೆ ಓಡಿ ಬಂಡ. ಅವನ ಉದ್ದೇಶಿತ ಕಾರ್ಯ ಕೈಗೂಡದಿದ್ದರೂ ಸಹ ದಾರಿಯಲ್ಲಿ ಅವನಿಗೆ ಎದುರಾದ ಮೂವರು ಖುರೈಷಿಗಳಲ್ಲಿ ಇಬ್ಬರ ಕಥೆಯನ್ನ ಅಲ್ಲಿಯೆ ಮುಗಿಸಿ ಇನ್ನೊಬ್ಬನನ್ನ ಸೆರೆ ಹಿಡಿದು ಮದೀನಕ್ಕೆ ಆತ ಎಳೆದು ತಂದ. ಅದೃಷ್ಟವಶಾತ್ ಹೀಗೆ ಅಬು ಸಫ್ಯಾನ್ ಕೊಲೆಯ ಸಂಚಿನಿಂದ ಪಾರಾದ.



( ಇನ್ನೂ ಇದೆ.)

No comments: