21 November 2015

ವಲಿ - ೩೩








ಮಹಮದ್ ಮೆಕ್ಕಾದಿಂದ ಮದೀನಾಕ್ಕೆ ಮರಳುವ ನಿರ್ಧಾರಕ್ಕೆ ಬಂದ ಹೊತ್ತಿಗೆ ಅನಿವಾರ್ಯವಾಗಿ ಮತ್ತೊಮ್ಮೆ ಶಸ್ತ್ರಧಾರಿಯಾಗಿ ಯುದ್ಧ ಕಣದಲ್ಲಿ ಧುಮುಕಿ ಹೋರಾಡುವ ಅನಿವಾರ್ಯತೆ ಒದಗಿ ಬಂತು. ಮೆಕ್ಕಾದ ಈಶಾನ್ಯ ದಿಕ್ಕಿನ ಗುಡ್ಡ ಪ್ರದೇಶದಲ್ಲಿ ಪ್ರಬಲರಾಗಿದ್ದ ಬೆನ್ ಹವಾಜಿನ್ ಬುಡಕಟ್ಟಿನವರು ವಾಸಿಸುತ್ತಿದ್ದರು. ಬಹುತೇಕ ಅರೇಬಿಯಾದ ಬುಡಕಟ್ಟುಗಳೆಲ್ಲಾ ಮಹಮದನ ಪಡೆಯ ಉಪಟಳಕ್ಕೆ ಹೆದರಿ ಮರು ಮಾತಿಲ್ಲದೆ ಇಸ್ಲಾಮನ್ನ ಒಪ್ಪಿಕೊಂಡು ಮುಸಲ್ಮಾನರಾಗಿದ್ದರೂ ಸಹ ಈ ಹವಾಜಿನರು ಮಾತ್ರ ಅದಕ್ಕೆಲ್ಲಾ ಸೊಪ್ಪು ಹಾಕದೆ, ಮಹಮದನ ಕಡೆಯಿಂದ ಮತಾಂತರಕ್ಕೆ ಬಂದ ಸೂಚನೆಗಳನ್ನೆಲ್ಲ ಲೆಕ್ಕಕ್ಕೂ ತೆಗೆದುಕೊಳ್ಳದೆ ತಮ್ಮ ಮೂಲ ವಿಗ್ರಹಾರಾಧಕ ಧರ್ಮವನ್ನೆ ನೆಚ್ಚಿಕೊಂಡು ನೆಮ್ಮದಿಯಾಗಿದ್ದರು.




ಆದರೆ ಅನಿರೀಕ್ಷಿತ ತಿರುವುಗಳನ್ನ ಒಳಗೊಂಡಿದ್ದ ಮಹಮದನ ಮೆಕ್ಕಾದ ಈ ಬರಿಯ ತೀರ್ಥ ಹಾಗೂ ದಂಡಯಾತ್ರೆ ಏಕಾಏಕಿ ಆತನ ಸರ್ವಾಧಿಕಾರದಲ್ಲಿ ಅಂತ್ಯವಾಗಿದ್ದು ಆ ಜನಾಂಗದ ಜನರನ್ನ ಸ್ವಲ್ಪ ಮಟ್ಟಿಗೆ ಭಯಭೀತಗೊಳಿಸಿತ್ತು. ಅವರು ಖುರೈಷಿಗಳೆ ಶರಣಾಗಿ ಹೊಸ ಧರ್ಮದ ಅನುಯಾಯಿಗಳಾಗಿದ್ದನ್ನು ಕಂಡು ತಕ್ಕಮಟ್ಟಿಗೆ ಆತಂಕಿತರೂ ಆಗಿದ್ದರು. ಅದೆ ಜನಾಂಗಕ್ಕೆ ಸೇರಿದ್ದ ಇನ್ನೊಂದು ಉಪ ಗೋತ್ರವಾದ ಬೆನ್ ಥಾಕಿಫ್ ಗುಂಪಿನ ಮಂದಿಗೂ ಸಹ ಇದೆ ಭೀತಿ ಮನದಲ್ಲಿ ಮನೆ ಮಾಡಿತ್ತು. ಹೀಗಾಗಿ ತಮ್ಮ ಪಾಡಿಗೆ ತಾವು ತಮ್ಮ ವಸತಿಗಳ ರಕ್ಷಣೆಯ ಏರ್ಪಾಡನ್ನ ಮಾಡಿಕೊಂಡರು. ತನಗೆ ಶರಣಾಗಿ ತನ್ನ ಕಾಲ ಬಳಿ ಮಂಡಿ ಊರಿಕೊಂಡು ಬಿದ್ದಿರುತ್ತಾರೆ ಎಂದು ಗ್ರಹಿಸಿದರೆ, ಅವರು ಹೀಗೆ ತನ್ನ ಆಜ್ಞೆಗಳನ್ನ ಸರಸಗಟಾಗಿ ಧಿಕ್ಕರಿಸಿ ಮುನ್ನಡೆದಿದ್ದು ಮಹಮದನನ್ನು ಅಪಾರವಾಗಿ ಕೆರಳಿಸಿತು. ಅವರ ಮೇಲೆ ದಂಡಯಾತ್ರೆ ನಡೆಸಿ ಅವರಿಗೆ ಒದ್ದು ಬುದ್ಧಿ ಕಲಿಸಲು ಅವನು ನಿರ್ಧರಿಸಿ ಬಿಟ್ಟ.


ಅವನ ಹನ್ನೆರಡು ಸಾವಿರ ಯೋಧರ ಪಡೆ ಬೆನ್ ಹವಾಜಿನರನ್ನ ಹೆಡೆಮುರಿಗೆ ಕಟ್ಟಲು ಹೊರಟಿತು. ಈ ಸುದ್ದಿ ತಿಳಿದ ಹವಾಜಿನರೂ ಸಹ ಆತ್ಮರಕ್ಷಣೆಗಾಗಿ ಮಲ್ಲಿಕ್ ಎಂಬ ವೀರಾಗ್ರಣಿಯ ನೇತೃತ್ವದಲ್ಲಿ ಔಟಸ್ ಎನ್ನುವ ಬಯಲಿನಲ್ಲಿ ಈ ಮುಸಲ್ಮಾನರ ಪಡೆಯನ್ನ ಎದುರಿಸಲು ಶಸ್ತ್ರಸನ್ನದರಾಗಿ ನಿಂತರು. ಕ್ರಿಸ್ತ ಶಕ ಆರುನೂರಾ ಮೂವತ್ತರ ಫೆಬ್ರವರಿ ತಿಂಗಳ ಒಂದನೆ ತಾರೀಖಿನಂದು ಎರಡೂ ಪಡೆಗಳು ರಣಭೂಮಿಯಲ್ಲಿ ಮುಖಾಮುಖಿಯಾದವು. ನಡೆದ ಭೀಕರ ಕಾಳಗದಲ್ಲಿ ಮೊದಲಿಗೆ ಮುಸಲ್ಮಾನರ ಪಡೆಗೆ ಹಿನ್ನಡೆಯೆ ಆಗಿತ್ತು. ಆದರೆ ಪಡೆಯ ನಟ್ಟ ನಡುವೆ ಇದ್ದ ಮಹಮದ್ 'ತಾನು ದೇವರ ಪ್ರವಾದಿ! ಓಡಬೇಡಿರಿ, ಜಯ ನಮಗೆ ಶತಸಿದ್ಧ' ಎಂದು ಗಂಟಲು ಹರಿದು ಹೋಗುವ ಹಾಗೆ ಹತಾಶೆಯಿಂದ ಕೂಗಿ ಪಲಾಯನಗೈಯುತ್ತಿದ್ದ ಯೋಧರನ್ನ ಹುರಿದುಂಬಿಸಿದ. ಅವನ ಉತ್ತೇಜನದ ನುಡಿಗಳು ಆಗಷ್ಟೇ ಮತಾಂತರವಾಗಿದ್ದ ಮೆಕ್ಕಾದ ಪ್ರಜೆಗಳ ಮೇಲೆ ಮೂರು ಕಾಸಿನ ಪರಿಣಾಮ ಬೀರದಿದ್ದರೂ ಸಹ ಮದೀನಾದ ಅವನ ಅನುಯಾಯಿಗಳು ಇದರಿಂದ ರೋಮಾಂಚಿತರಾದರು. ಅದೆ ಪುಳಕದ ಆವೇಶದಲ್ಲಿ ಹವಾಜಿನರ ಮೇಲೆ ಬರ್ಬರವಾಗಿ ಮುರಕೊಂಡು ಬಿದ್ದರು. ಅವರ ಕೆಚ್ಚೆದೆಯ ಹೋರಾಟ ಕಂಡು ಮೆಕ್ಕಾದವರೂ ಸಹ ಸ್ವಲ್ಪ ಹುಮ್ಮಸ್ಸಿಗೆ ಮರಳುವಂತಾಯಿತು.



'ನಾನು ದೇವರ ದೂತ! ತನ್ನ ಸೈನ್ಯಕ್ಕೆ ದೇವರ ಬೆಂಬಲ ನಿರಂತರವಾಗಿದೆ. ಅಲ್ಲಾಹನ ಕೃಪೆ ನಮ್ಮ ಮೇಲಿರುವಾಗ ಹೋರಾಡಿ ಜಯ ನಮ್ಮದೇನೆ ಶತಸಿದ್ಧ!' ಎಂದಾತ ಮಾಡಿದ ಅಬ್ಬರಕ್ಕೆ ಎಲ್ಲರೂ ಹುರಿದುಂಬಿತರಾಗಿ ಪ್ರಾಣದಾಸೆ ತೊರೆದು ಹೋರಾಡುವಂತೆ ಮಾಡಿತು. ಪಲಾಯನಗೈಯುವ ಸ್ಥಿತಿಯಲ್ಲಿದ್ದ ಮುಸಲ್ಮಾನರು ತಿರುಗಿ ಬಿದ್ದ ಹೊಡೆತಕ್ಕೆ ಹವಾಜಿನರು ಚೆಲ್ಲಾಪಿಲ್ಲಿಯಾದರು. ಅವರು ಹಿಮ್ಮೆಟ್ಟಿ ಮಹಮದನ ಸೈನ್ಯ ಜಯ ಸಾಧಿಸಿತು. ಯುದ್ಧ ಪಿಪಾಸುತನದಲ್ಲಿ ಉನ್ಮತ್ತರಾಗಿದ್ದ ಮುಸಲ್ಮಾನರು ಸಿಕ್ಕ ಸಿಕ್ಕವರನ್ನ ಎಲ್ಲರನ್ನೂ ಕೊಚ್ಚಿ ಕೊಂದರು. ಮಕ್ಕಳು ಹೆಂಗಸರು ಸಹ ಅವರ ಕರುಣೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಈ ಕ್ರೌರ್ಯತೆಯ ನಂತರ ಸುಮಾರು ಇಪ್ಪತ್ತನಾಲ್ಕು ಸಾವಿರದಷ್ಟು ಅಪಾರ ಒಂಟೆಗಳ ಗುಂಪು, ನಲವತ್ತು ಸಾವಿರ ಜಾನುವಾರುಗಳು ಹಾಗೂ ನಲವತ್ತು ಸಾವಿರ ಔನ್ಸ್'ಗಳಷ್ಟು ಚೊಕ್ಕ ಬೆಳ್ಳಿ ಮಹಮದನ ವಶವಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೮೦೪ರಲ್ಲಿ.



ಇದಷ್ಟೆ ಅಲ್ಲದೆ ಇನ್ನಷ್ಟು ತಲೆ ಮರೆಸಿಕೊಂಡು ಪ್ರಾಣ ಉಳಿಸಿಕೊಂಡಿದ್ದ ಸೆರೆಯಾಳುಗಳೂ ಸಹ ಅನಂತರ ಅವನ ಕೈ ವಶವಾದರು. ಅವರನ್ನ ಹುಡುಕಿಕೊಂಡು ಖಂಡಿತಾ ಬೆನ್ ಹವಾಜಿನರು ಬಿಡಿಸಿಕೊಳ್ಳಲು ಬಂದೆ ಬರುತ್ತಾರೆ. ಆಗ ಅವರ ಬಂಧುಗಳಿಂದ ಅಪಾರ ಒತ್ತೆ ಹಣವನ್ನೂ ಸಹ ವಸೂಲಿ ಮಾಡಬಹುದೆಂದು ಹಂಚಿಕೆ ಹಾಕಿಕೊಂಡು ಮಹಮದ್ ಕುಳಿತಿದ್ದ. ಅವನ ಪಡೆಯಲ್ಲೂ ಅಪಾರ ಪ್ರಾಣಹಾನಿ ಆಗಿತ್ತು. ಅವರೆಲ್ಲರೂ ಹೊಸತಾಗಿ ಇಸ್ಲಾಮ್ ಸ್ವೀಕರಿಸಿ ಮುಸಲ್ಮಾನರಾಗಿ ಅವನ ಹಿಂಬಾಲಕರಾಗಿದ್ದರು. ಅವರೆಲ್ಲರ ಕುಟುಂಬಸ್ಥರಿಗೆ ಧೈರ್ಯ ಹಾಗೂ ಸಾಂತ್ವಾನ ತುಂಬುವ ಕಾರಣಕ್ಕಾಗಿ ಮಹಮದ್ ವಿಶೇಷ ಪ್ರಾರ್ಥನಾ ಸಭೆಯನ್ನ ಏರ್ಪಡಿಸಿದ. ಯುದ್ಧದಲ್ಲಿ ಸಂದ ಜಯಕ್ಕೆ ಅಲ್ಲಾಹನೆ ನೇರ ಕಾರಣ ಎಂದು ಬಲವಾಗಿ ನಂಬಿದ್ದ ಮಹಮದ್ ಖುರ್ಹಾನಿನ ಸುರಾ ಸಂಖ್ಯೆ ೯/೨೫ರಲ್ಲಿ ಅದನ್ನ ಸುದೀರ್ಘವಾಗಿ ವಿವರಿಸಿದ್ದಾನೆ.


ಬೇಗ ಅರೇಬಿಯಾದ ಉದ್ದಗಲಕ್ಕೂ ಇಸ್ಲಾಮನ್ನ ಪಸರಿಸಿಯೆ ತೀರುವ ಛಲ ಅವನಲ್ಲಿ ಮೂಡಿತ್ತು. ತಾನು ಹಿಂದೆ ಯುದ್ಧ ಜರುಗಿಸಿ ಗೆದ್ದಿದ್ದರೂ ಸಹ ಮತಾಂತರ ಮಾಡದೆ ಬಿಟ್ಟಿದ್ದ ಬುಡಕಟ್ಟಿನವರನ್ನೆಲ್ಲಾ ಮುಸಲ್ಮಾನರಾಗಿಸಿಯೆ ತೀರಲು ಆತ ನಿರ್ಧರಿಸಿದ. ಈ ನಿಟ್ಟಿನಲ್ಲಿ ಆತನ ಮೊದಲ ಗುರಿ ಅಲ್ ತೈಫ್ ಆಗಿತ್ತು. ಮರಳಿ ಆತನ ಪಡೆ ಆ ಕೋಟೆಗೆ ಲಗ್ಗೆ ಇಟ್ಟಾಗ ಕೋಟೆಯ ಮೇಲಿನಿಂದ ವಿಷ ಸವರಿದ ಮೊನೆಯ ಬಾಣಗಳು ಅವನ ಪಡೆಯನ್ನು ಎದುರುಗೊಂಡವು. ಅನೇಕ ಹೆಣಗಳು ಹೋರಾಟಕ್ಕೂ ಮುನ್ನವೆ ಉರುಳಿದವು. ಸೈನ್ಯ ಹಿಮ್ಮೆಟ್ಟುವುದು ಅನಿವಾರ್ಯವಾಯಿತು. ಹೀಗಾಗಿ ಬೇರೊಂದು ಯುದ್ಧತಂತ್ರಕ್ಕೆ ಮೊರೆ ಹೋಗುವುದು ಆತನಿಗೆ ಅನಿವಾರ್ಯವಾಯಿತು.


ಅವನು ತನ್ನ ನವ ಬೆಂಬಲಿಗರಾಗಿ ಪರಿವರ್ತಿತರಾಗಿದ್ದ ಕೋಟೆ ಏರಿ ಯುದ್ಧ ಮಾಡುವ ನೈಪುಣ್ಯತೆ ಇದ್ದ ಮೆಕ್ಕಾ ಸಮೀಪದ ಕೆಲವು ಕಾಟು ಬುಡಕಟ್ಟಿನ ಮಂದಿಯನ್ನ ಅಲ್ಲಿಗೆ ಕರೆಸಿದ. ಅವರು ಕೋಟೆಯ ಮೇಲೆ ಕವಣೆ ಕಲ್ಲನ್ನು ಗುರಿಯಿಟ್ಟು ಹೊಡೆಯುವುದರಲ್ಲಿ ನಿಪುಣರಾಗಿದ್ದರು. ಅಲ್ಲದೆ ತಲೆಯ ಮೇಲೆ ಗುರಾಣಿ ತಟ್ಟೆಗಳನ್ನ ಒತ್ತೊತ್ತಾಗಿ ಪೇರಿಸಿ ಸೈನಿಕರನ್ನ ಮುನ್ನುಗ್ಗುವಂತೆ ಮಾಡುವುದರಲ್ಲಿ ನಿಷ್ಣಾತರೂ ಆಗಿದ್ದರು. ಆದರೆ ಈ ಬಗ್ಗೆ ಕೋಟೆಯೊಳಗಿದ್ದವರಿಗೆ ಸುಳಿವು ದೊರಕಿ ಅವರು ಮುಂಜಾಗ್ರತೆ ವಹಿಸಿದರು. ಸುಡು ಕಬ್ಬಿಣದ ಉಂಡೆಗಳನ್ನ ಮೇಲಿನಿಂದ ಶತ್ರು ಪಾಳಯದ ಮೇಲೆ ಬೇಕಾಬಿಟ್ಟಿ ಸುರಿಯಲಾಯಿತು. ಮಹಮದನ ಪಡೆ ದಿಕ್ಕಾಪಾಲಾಗಿ ಓಡಿ ಹೋಯಿತು.


ಮಹಮದ್ ಇದರಿಂದ ವಿಪರೀತ ವಿಚಲಿತನಾದ. ಈ ಅಲ್ ತೈಫ್ ಅವನ ಪಾಲಿಗೆ ಕಗ್ಗಂಟಾಯಿತು. ಹೇಗಾದರೂ ಸರಿ ಉಪಾಯ ಹೂಡಿ ಆ ಕೋಟೆಯೊಳಗಿದ್ದ ಮಂದಿಯನ್ನ ಮಣಿಸಲೆ ಬೇಕಿತ್ತವನಿಗೆ. ಇದಕ್ಕಾಗಿ ಉಪಾಯ ಹಣೆಯಲು ಅವರ ಬಾಳ್ವೆಯ ರೀತಿ ರಿವಾಜುಗಳನ್ನ ಹಾಗೂ ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ವಿವರವಾಗಿ ಆತ ಮಾಹಿತಿ ಕಲೆ ಹಾಕಿದ. ಅವರು ಪ್ರಕೃತಿ ಆರಾಧಕರಾಗಿದ್ದು ಕೋಟೆಯ ಹೊರ ವಲಯದಲ್ಲಿದ್ದ ಅವರ ತೋಟ ಹಾಗೂ ಖರ್ಜೂರದ ಫಲವತ್ತಾದ ಮರಗಳನ್ನ ಕಡಿದು ನಾಶ ಪಡಿಸಿದರೆ ಅವರು ಶರಣಗತಿ ಸೂಚಿಸುವುದು ಅನಿವಾರ್ಯವಾಗುತ್ತದೆ ಎಂದಾತ ಹಂಚಿಕೆ ಹಾಕಿದ. ಅವನ ಈ ಹಾಲಾಲುಕೋರ ಹಂಚಿಕೆ ಖಚಿತ ಫಲ ನೀಡಿತು.




ಕೋಟೆಯೊಳಗಿದ್ದ ಅಸಹಾಯಕ ನಿಶ್ಪಾಪಿಗಳು ದೇವರ ಮೇಲೆ ಭಾರ ಹಾಕಿ ತಮ್ಮ ಹಾಗೂ ತಮ್ಮ ತೋಟಗಳ ಸಂರಕ್ಷಣೆಗೆ ದೀನವಾಗಿ ಮೊರೆಯಿಟ್ಟರು. ಅವರ ಆರ್ತ ಧ್ವನಿ ದಯನೀಯವಾಗಿತ್ತು. ಅವರ ವೇದನೆಯ ಮೊರೆ ಮಹಮದನನ್ನೂ ತುಸು ತಟ್ಟಿತು. ಆತ ತೋಟದ ನಾಶವನ್ನ ತತ್ಕಾಲಿಕವಾಗಿ ನಿಲ್ಲಿಸಲು ಆದೇಶಿಸಿದ. ಆದರೆ ಅವರನ್ನ ಕೋಟೆಯಿಂದ ಹೊರಗೆಳೆಯುವ ಮಾರ್ಗೋಪಾಯಗಳು ಮಾತ್ರ ಆತನಿಗೆ ಹೊಳೆಯಲೆ ಇಲ್ಲ. ಬೆದಾವಿನರೊಟ್ಟಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ. ಆಗ ಬಂದ ಒಂದು ಸಲಹೆ ಅಮೂಲ್ಯವಾಗಿತ್ತು. 'ಒಂದು ನರಿ ತನ್ನ ಬಿಲದಲ್ಲಿ ಅಡಗಿ ಕುಳಿತಿದ್ದರೆ ಅದನ್ನ ಮೇಲೆ ಬಿದ್ದು ಹಿಡಿಯಲು ಬಹಳ ಕಾಲ ಬೇಕಾಗುತ್ತದೆ! ಅದನ್ನ ಹಾಗೆಯೆ ಬಿಟ್ಟರೆ ನಿನಗೇನೂ ನಷ್ಟವಿಲ್ಲ, ಹಸಿವಾದಾಗ ಅದು ಹೊರಬರಲೆ ಬೇಕಲ್ಲವೆ?' ಅನ್ನುವ ಮೌಲಿಕವಾದ ಸಮರ ಸಲಹೆಯನ್ನವರು ಮಹಮದನಿಗೆ ಕೊಟ್ಟರು. ಅದು ಅವನ ಮನಸ್ಸಿಗೂ ಸಹ ಬಂದಿತು.


ಅದರನುಸಾರ ಆತ ಅಲ್ ತೈಫಿಗೆ ಹಾಕಿದ್ದ ಮುತ್ತಿಗೆಯನ್ನು ತೆಗೆದು ಸೇನೆಯನ್ನು ಅಲ್ ಜಿರಾನ ಎನ್ನುವ ಇನ್ನೊಂದು ಸಮೀಪದ ಜಾಗಕ್ಕೆ ಸ್ಥಳಾಂತರಿಸಿದನು. ಅಲ್ಲಿ ಬೆನ್ ಹವಾಜಿನ್ ಸೆರೆಯಾಳುಗಳನ್ನ ಸಹ ಇಡಲಾಗಿತ್ತು. ಅವರ ವಿಲೇವಾರಿಯತ್ತ ಮಹಮದ್ ಈಗ ಗಮನ ಕೊಟ್ಟ. ಸೆರೆಯಾಳುಗಳನ್ನ ಬಿಡಿಸಿಕೊಳ್ಳಲು ಪ್ರವಾಹೋಪಾದಿಯಲ್ಲಿ ಹವಾಜಿನರಲ್ಲಿ ಉಳಿದ ಇನ್ನಷ್ಟು ಮಂದಿ ಬಂದು ಅವನ ಕಾಲಿಗೆ ಸಹ ಬಿದ್ದರು. ಬೇಡಿಕೊಂಡರು. ಆ ಮಂದಿಯಲ್ಲಿದ್ದ ಒಬ್ಬ ಮುದುಕಿ ತಾನು ಬಾಲ್ಯಕಾಲದಲ್ಲಿ ಮಹಮದನನ್ನು ಎತ್ತಿ ಆಡಿಸಿದ್ದ ಅವನ ದೊಡ್ದಪ್ಪನ ಮನೆಯ ಸೌಕರಳಾಗಿದ್ದೆ ಎಂದು ಮುಸಲ್ಮಾನ ಸೈನಿಕರನ್ನು ಹೆದರಿಸಿದಳು! ಅವಳನ್ನು ಮಹಮದನ ಸನ್ನಿಧಾನಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಆಕೆಯ ಗುರುತು ಹಿಡಿದ ಮಹಮದ್ ಆಕೆಯ ಮಾತುಗಳು ನಿಜವೆಂದು ಒಪ್ಪಿಕೊಂಡು ತನ್ನೊಂದಿಗೆ ಆಕೆಯನ್ನೂ ಮದೀನಕ್ಕೆ ಕರೆದೊಯ್ಯುವ ಭರವಸೆ ಇತ್ತು ಬಂಧ ಮುಕ್ತಗೊಳಿಸಿದ.



ಈ ಸುದ್ದಿ ಹವಾಜಿನರಲ್ಲಿ ಜನಜನಿತವಾಗಿ ಆತನ ಕೃಪಾಶಿರ್ವಾದಕ್ಕಾಗಿ ಅವರೂ ಹಾತೊರೆದರು. ಆ ಮೂಲಕವಾದರೂ ಕ್ಷಮೆ ಗಿಟ್ಟಿಸಿ ತಮ್ಮ ಬಂಧಿತ ಬಂಧು ಮಿತ್ರರನ್ನು ಬಿಡಿಸಿಕೊಂಡು ಹೋಗಲವರು ಹವಣಿಸಿದರು. ಅವರ ಅಹವಾಲುಗಳನ್ನ ಆಲಿಸುವಾಗ ನಿಜಕ್ಕೂ ಮಹಮದ್ ಮರುಕಗೊಂಡ. ನಿಮಗೆ ನಿಮ್ಮ ಆಸ್ತಿ ಹಾಗೂ ಬಂಧುಗಳಲ್ಲಿ ಯಾವುದು ಹೆಚ್ಚು ಎಂದಾಗ ಅವರೆಲ್ಲರೂ ಬಂಧುಗಳು ಎಂದರು. ಈ ಭಾವುಕ ಮಾತುಗಳು ಅವನನ್ನು ಸಹ ಆಕರ್ಷಿಸಿತು. ತನ್ನ ಪಾಲಿನ ಸೆರೆಯಾಳುಗಳನ್ನ ಬಿಡುಗಡೆ ಮಾಡಿದನಷ್ಟೆ ಅಲ್ಲದೆ ಇನ್ನಿತರ ವಶದಲ್ಲಿಲಿದ್ದ ಸೆರೆಯಾಳುಗಳನ್ನೂ ಸಹ ಆಜ್ಞೆಯೊಂದನ್ನ ಜಾರಿ ಮಾಡಿ ಬಿಡುಗಡೆ ಮಾಡಿಸಲು ಕಾರಣನಾದ. ಈ ಒತ್ತೆ ಹಣದ ಆಸೆಗೆ ಬೀಳದೆ ಬಿಡುಗಡೆ ಮಾಡಲು ಆತನ ಅನುಯಾಯಿಗಳು ಸಮ್ಮತಿಸಿದರಾದರೂ ಸಹ ಕೊಳ್ಳೆ ಹೊಡೆದ ಆಸ್ತಿಪಾಸ್ತಿ ಸ್ವತ್ತುಗಳನ್ನ ಹಾಗೂ ಧನ, ಜಾನುವಾರುಗಳನ್ನ ಬಿಟ್ಟು ಕೊಡಲು ಮಾತ್ರ ಸುತರಂ ಒಪ್ಪಲಿಲ್ಲ.


ಅದಕ್ಕೆ ಮಣಿದ ಮಹಮದ್ ಎಂದಿನಂತೆ ಐದನೆ ಒಂದು ಭಾಗವನ್ನ ಪ್ರವಾದಿಯ ಪಾಲಾಗಿ ಉಳಿಸಿಕೊಂಡು ಉಳಿದ ಎಲ್ಲಾ ಚರಾಚರ ಲೂಟಿಯ ಸೊತ್ತುಗಳನ್ನ ಅವರೆಲ್ಲರಲ್ಲೂ ಸಮಭಾಗ ಮಾಡಿ ಹಂಚಿದ. ಅದರಲ್ಲಿ ಯಾವ ತಾರತಮ್ಯವೂ ತೋರಲಿಲ್ಲ. ಅದುವರೆಗೂ ತನ್ನ ಶತ್ರುಗಳಾಗಿದ್ದು ಇತ್ತೀಚೆಗಷ್ಟೆ ಮುಸಲ್ಮಾನರಾಗಿದ್ದ ಮಾಜಿ ಖುರೈಷಿ ಮುಖಂಡ ಅಬು ಸಫ್ಯಾನ್ ಹಾಗೂ ಅವನ ಮಕ್ಕಳಿಗೂ ಆ ಆಸ್ತಿ ಹಾಗೂ ಜಾನುವಾರುಗಳ ಕೊಳ್ಳೆಯ ಪಾಲು ಸಿಕ್ಕಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೧೪ರಲ್ಲಿ. ಆದರೆ ಈ ಹಂಚಿಕೆ ಅದೆಷ್ಟೆ ಸಮಾನ ಹಾಗೂ ಪ್ರಾಮಾಣಿಕವಾಗಿದ್ದರೂ ಮದೀನಾದ ಪ್ರಜೆಗಳು ಮಾತ್ರ ಅಸಂತುಷ್ಟರಾದರು. ಅವರ ಪ್ರಕಾರ ಕಷ್ಟಕಾಲದಲ್ಲಿ ಸೋತು ಸೊರಗಿದ್ದ ಮಹಮದನನ್ನು ಆದರಿಸಿ ಆಶ್ರಯ ನೀಡಿ ಕಾಪಾಡಿದ್ದ ಅವರನ್ನು ಮಹಮದ್ ಕಡೆಗಣಿಸಿದ್ದ. ತನ್ನ ಮೂಲ ಊರಾದ ಮೆಕ್ಕಾದ ನವ ಮತಾಂತರಿತರಾದ ತನ್ನದೆ ಖುರೈಷಿ ಕುಲದವರೊಂದಿಗೆ ಶಾಮೀಲಾಗಿ ಬೇಕಂತಲೆ ಅವರಿಗೆ ಅಗತ್ಯಕ್ಕಿಂತ ಅಧಿಕ ಪ್ರಾಮುಖ್ಯತೆಯನ್ನ ನೀಡಿದ್ದ.


ಖುರೈಷಿಗಳ ಪರವಾಗಿ ಪಕ್ಷಪಾತದ ವರ್ತನೆ ತೋರುತ್ತಿದ್ದಾನೆ ಎನ್ನುವ ಆಪಾದನೆ ಎದ್ದು ಗುಸುಗುಸು ಹಬ್ಬಿತು. ಪರಿಸ್ಥಿತಿ ಅತೃಪ್ತಿಯ ಕಾರಣ ಭುಗಿಲೆದ್ದು ಪರಿಸ್ಥಿತಿ ಕೈ ಮೀರುವ ಮುನ್ನ ಮದೀನಾದ ಒಬ್ಬ ಪ್ರತಿಷ್ಠಿತ ಮುಸಲ್ಮಾನನಾದ ಸಾದ್ ಒಬ್ನ್ ಒಬಾದ್ ಮಹಮದನ ಬಳಿ ಸಾರಿ ಆ ವಿಷಯವನ್ನವನ ಗಮನಕ್ಕೆ ತಂದ. ಪರಿಸ್ಥಿತಿಯ ಗಹನತೆಯನ್ನ ಅರಿತ ಮಹಮದ್ ತಕ್ಷಣ ಅವರನ್ನೆಲ್ಲಾ ಉದ್ದೇಶಿಸಿ ಮಾತನಾಡಿ ಭರವಸೆ ತುಂಬಲು ಪ್ರಯತ್ನಿಸಿದ. ತಾನು ಎಂದೆಂದಿಗೂ ಮದೀನಾದ ನೆಲಕ್ಕೆ ಹಾಗೂ ಅಲ್ಲಿನ ನಿವಾಸಿಗಳಿಗೆ ಚಿರ ಋಣಿ. ತನ್ನ ಕಷ್ಟ ಕಾಲದಲ್ಲಿ ಆಸರೆ ನೀಡಿದ ಅಲ್ಲಿನ ಆದರ ಹಾಗೂ ಸಾಂತ್ವಾನವನ್ನ ಎಂದಾದರೂ ಮರೆಯಲು ಸಾಧ್ಯವೆ? ಎಂದು ನಾಟಕೀಯವಾಗಿ ಅವರನ್ನ ಪ್ರಶ್ನಿಸಿದ. ಬಹಿಷ್ಕಾರಕ್ಕೊಳಗಾಗಿ ನರಳುತ್ತಿದ್ದ ತನ್ನನ್ನ ಪ್ರೀತಿ ವಿಶ್ವಾಸದಿಂದ ಕಂಡು ಸಲಹಿದ ಮದೀನವನ್ನು ಕಡೆಗಣಿಸಲು ಅಸಾಧ್ಯ ಎಂದಾತ ಭಾವುಕನಾಗಿ ನುಡಿದ. ಆತನ ಕಳಕಳಿಯ ಕೃತಜ್ಞತಾಪೂರ್ವಕ ನುಡಿಗಳು ಸರಿಯಾಗಿ ಮುಟ್ಟಬೇಕಾದ ಗುರಿಯನ್ನ ಹೋಗಿ ಮುಟ್ಟಿತ್ತು. ಅವನನೊಂದಿಗೆ ಭಾವುಕರಾಗಿ ತಾವೂ ಕಂಬನಿಗೆರೆದ ಮದೀನಾದ ವಾಸಿಗಳು ತಾವು ಈ ಉತ್ತರದಿಂದ ನಾವೆಲ್ಲಾ ಸಂತೃಪ್ತರಾಗಿದ್ದೇವೆ! ತಮ್ಮ ಮನದಲ್ಲಿದ್ದ ಶಂಕೆ ದೂರಾಗಿದೆ ಎಂದು ಒಕ್ಕೊರಲಿನಿಂದ ಸಾರಿದರು.


ಆದರೆ ಎಲ್ಲರನ್ನೂ ಏಕಕಾಲದಲ್ಲಿ ಸಂಭಾಳಿಸುವುದು ಆತನಿಗೆ ಕಡುಕಷ್ಟವಾಯಿತು. ಹೀಗಾಗಿ ಎಂದಿನ ಚಾಳಿಯಂತೆ ಆತ ದೈವವಾಣಿಗೆ ಮೊರೆ ಹೋದ. ತನಗೆ ದೊರಕಿದ ಪ್ರವಾದಿಯ ಪಾಲಾದ ಒಟ್ಟು ಕೊಳ್ಳೆಯ ಐದನೆ ಒಂದು ಭಾಗದಲ್ಲಿ ಸಕಲವೂ ಬಡವರ ಹಾಗೂ ನಿರ್ಗತಿಕರ ವೆಚ್ಚಕ್ಕಾಗಿ ಮೀಸಲು. ಇತರರ ಹೃದಯಗಳನ್ನ ಗೆಲ್ಲಲು ಸೆರೆಯಾದ ಎಲ್ಲಾ ಬಂಧಿಗಳನ್ನ ಬಿಡಿಸಲು ಸಾಲ ಬಾಧೆಯಿಂದ ನರಳುತ್ತಿರುವವರನ್ನ ಅದರಿಂದ ಮುಕ್ತರನ್ನಾಗಿಸಲು, ದೇವರ ಸೇವೆಗೈಯಲು ಹಾಗೂ ಪ್ರಯಾಣಿಕರ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲು ವಿನಿಯೋಗಿಸಬೇಕೆಂದು ದೈವವಾಣಿ ದೊರಕಿತು. ಖುರ್ಹಾನಿನ ಸುರಾ ಸಂಖ್ಯೆ ೯/೫೮ರಲ್ಲಿ ಇದನ್ನ ಗಮನಿಸಬಹುದು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೨೩ರಲ್ಲಿ.


ಇದನ್ನ ಆತ ಸೆರೆಯಾದ ಬೆನ್ ಹವಾಜಿನರಿಗೂ ಅನ್ವಯಿಸಿದ. ಒಂದೊಮ್ಮೆ ಅವರೆಲ್ಲಾ ಇಸ್ಲಾಮಿಗೆ ಶರಣಾದರೆ ಅವರಿಗೂ ಕೊಡುಗೆಗಳು ಕಾದಿವೆ ಎಂದು ಮಹಮದ್ ಅವರ ನಾಯಕ ಮಲ್ಲಿಕನಿಗೆ ತಿಳಿಸಿದ. ಸೋತು ಸುಣ್ನವಾಗಿದ್ದ ಪಡೆಯ ಮುಖಂಡ ಮಲ್ಲಿಕ್ ಅನಿವಾರ್ಯವಾಗಿ ಸಮ್ಮತಿ ಸೂಚಿಸಿ ಸಂತೋಷದಿಂದಲೆ ಮುಸಲ್ಮಾನನಾಗಿ ಮತಾಂತರವಾದ. ಅವನ ಪಾಲಿಗೆ ನೂರು ಒಂಟೆಗಳ ಕೊಡುಗೆ ಹಾಗೂ ಮಹಮದನ ಸಹಾಯ ಹಸ್ತ ಕೂಡಲೆ ಒಲಿದು ಬಂತು! ಅವರಿಂದ ಹೊಡೆದ ಕೊಳ್ಳೆಯಲ್ಲಿ ಅವರಿಗೆ ಕೊಡುಗೆಯನ್ನ ದಯಪಾಲಿಸಲಾಗಿತ್ತು ಅನ್ನುವುದು ಇಲ್ಲಿ ಗಮನಾರ್ಹ. ಅಲ್ ಜಿರಾನ್ ಕೋಟೆಯನ್ನ ಕೊಳ್ಳೆ ಹೊಡೆದ ಲೂಟಿಯ ವಸ್ತುಗಳನ್ನೆಲ್ಲ ವಿಲೆವಾರಿ ಮಾಡಿದ ಮಹಮದ್ ಮೆಕ್ಕಾದ ಆ ವರ್ಷದ ಯಾತ್ರೆ ಆಲ್ಲಿಗೆ ಮುಗಿಯಿತೆಂದು ಘೋಷಿಸಿ ಮರಳಿ ಮದೀನಾದತ್ತ ಹೆಜ್ಜೆ ಹಾಕಿದ.


ಮಹಮದನ ವಶಕ್ಕೆ ಬರುವವರೆಗೂ ಮೆಕ್ಕಾ ಒಂದು ಧಾರ್ಮಿಕ ಹಾಗೂ ವ್ಯಾಪಾರಿ ಕೇಂದ್ರವಾಗಿ ವಿಜೃಂಭಿಸಿತ್ತು. ಅವನ ಆಗಮನಕ್ಕೂ ಹಿಂದೆ ಸಾರ್ಥದ ನಿಲ್ದಾಣವಾಗಿದ್ದ ಅದು ಬಹುತೇಕ ವ್ಯಾಪಾರಿ ಗುಂಪುಗಳಿಂದ ಗಿಜಿಗುಡುತ್ತಿತ್ತು. ಆದರೆ ಆತ ಕಪಿಮುಷ್ಠಿಗೆ ಸಿಲುಕಿದ ನಂತರ ಅದರ ವ್ಯಾಪಾರಿ ಪ್ರಾಮುಖ್ಯತೆ ಮರೆಯಾಗಿ ಕ್ರಮೆಣ ಇನ್ನಿಲ್ಲವಾಗಿ ಹೋಗಿ ಕೇವಲ ಧಾರ್ಮಿಕ ಯಾತ್ರಾಕ್ಷೇತ್ರವೆಂಬ ಮಾನ್ಯತೆ ಮಾತ್ರ ಶಾಶ್ವತವಾಗುಳಿಯಿತು. ಆದರೆ ವಾಸ್ತವದಲ್ಲಿ ನಗರದ ಬೆಳವಣಿಗೆಗೆ ಅದು ಅನುಕೂಲಕರವಾಗಿಯೆ ಪರಿಣಮಿಸಿತು. ಕಾಲಾಂತರದಲ್ಲಿ ಇಸ್ಲಾಮ್ ತನ್ನ ಬರ್ಬರತೆಯ ಮೂಲಕ ಲೋಕದುದ್ದ ಹರಡತೊಡಗಿದಾಗ ಅದರ ಅನುಯಾಯಿಗಳ ಸಂಖ್ಯೆ ಹೆಚ್ಚಿತಷ್ಟೆ. ಅವರೆಲ್ಲರೂ ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ಯಾತ್ರಿಸುವ ಖಡ್ಡಾಯದ ಜೀವನ ವಿಧಿಗೆ ಬದ್ಧರಾಗಿದ್ದರು. ಅವರೆಲ್ಲರೂ ಇತ್ತ ಕಾಣಿಕೆ ಹಾಗೂ ತಂದು ಸುರಿದ ದ್ರವ್ಯ ಧನ ರಾಶಿಯಿಂದ ಮೆಕ್ಕಾ ಸಮೃದ್ಧವಾಗತೊಡಗಿತು.



ಕ್ರಮೇಣ ಪ್ರಪಂಚದಾದ್ಯಂತ ಎದ್ದು ನಿಂತ ಮುಸಲ್ಮಾನ ರಾಜ್ಯಗಳ ಸುಲ್ತಾನರು ಅಪಾರ ಪ್ರಮಾಣದ ಧಾರ್ಮಿಕ ಕಾಣಿಕೆಗಳನ್ನಿಲ್ಲಿಗೆ ತಂದು ಸುರಿದರು. ಇಸ್ಲಾಮಿನ ಕೇಂದ್ರ ವ್ಯಕ್ತಿಗಳಾಗಿ ಮೆರೆದ ಖಲೀಫರುಗಳಂತೂ ತಮ್ಮ ರಾಜಾದಾಯದ ಬಹು ಪಾಲನ್ನ ಆ ನಗರವನ್ನ ಶೃಂಗರಿಸಲು ವೆಚ್ಚ ಮಾಡಿ ಆನಂದಿಸಿದರು. ಮಹಮದ್ ಅದನ್ನು ಕೇವಲ ಇಸ್ಲಾಮಿನ ರಾಜಧಾನಿಯಾಗಿ ಘೋಷಿಸಿ ಮುಸಲ್ಮಾನೇತರರನ್ನ ಅಲ್ಲಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ. ಮುಸಲ್ಮಾನ ಸಾಮ್ರಾಜ್ಯಶಾಹಿಯ ರಾಜಧಾನಿಗಳು ಕಳೆದ ಶತಮಾನದ ಆರಂಭದ ಇಪ್ಪತ್ತೆರಡು ವರ್ಷಗಳವರೆಗೂ ಜಗತ್ತಿನ ನಾನಾ ನಗರಗಳಿಗೆ ಸ್ಥಳಾಂತರವಾದರೂ, ಸದ್ಯ ಅದರ ಹಿಡಿತ ಅನಧಿಕೃತವಾಗಿ ರಿಯಾದಿನಲ್ಲಿದ್ದರೂ ಆಳುವ ದೊರೆಗಳಲ್ಲಿ ಯಾರೊಬ್ಬರೂ ಮೆಕ್ಕಾವನ್ನ ಮರೆಯಲಿಲ್ಲ. ತಮ್ಮ ರಾಜಧಾನಿಗಳಷ್ಟೆ ಅಕ್ಕರೆ ಹಾಗೂ ಅಸ್ಥೆಯಿಂದ ಮೆಕ್ಕಾವನ್ನು ಸಹ ಅವರೆಲ್ಲಾ ಸಿಂಗರಿಸಿ ತೃಪ್ತಿ ಪಟ್ಟರು.


ಅವರೆಲ್ಲರ ತನು ಮನ ಧನದ ಬೆಂಬಲದಿಂದ ಒಂದಾನೊಂದು ಕಾಲಕ್ಕೆ ಮಹಮದನ ನಿದ್ದೆ ಗೆಡಿಸಿದ್ದ ಮೆಕ್ಕಾ, ಆತನ ರಕ್ತಕ್ಕಾಗಿ ಹಪಾಹಪಿಸಿದ್ದ ಮೆಕ್ಕಾ, ಆತನನ್ನ ನಿರ್ದಾಕ್ಷಿಣ್ಯವಾಗಿ ಒದ್ದು ಓಡಿಸಿದ್ದ ಮೆಕ್ಕಾ, ಅವನ ನವ ಧಾರ್ಮಿಕತೆ ಹಾಗೂ ನಂಬಿಕೆಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದ ಮೆಕ್ಕಾ ಇದೀಗ ಇಸ್ಲಾಮಿನ ಉನ್ಮತ್ತಾಭಿಮಾನದ ನಗರವಾಗಿ ಬೆಳೆದು ಉಳಿಯಿತು. ಇಂದಿಗೂ ಅಲ್ಲಿನ ಪ್ರಾವಿತ್ರ್ಯತೆ ಹಾಗೂ ಮೌಲಿಕತೆ ತುಸುವೂ ಕುಂದು ಕಂಡಿಲ್ಲ. ಇನ್ನಿತರ ಮತಾವಲಂಭಿಗಳು ತಮ್ಮ ಜನ್ಮಸಿದ್ಧ ಹಕ್ಕಾಗಿದ್ದರೂ ಅ ನಗರವನ್ನ ಪ್ರವೇಶಿಸದಂತೆ ಮುಸಲ್ಮಾನರು ಮತಾಂಧತೆಯಲ್ಲಿ ಪ್ರತಿಬಂಧಿಸುತ್ತಾರೆ ಅನ್ನುವುದನ್ನ ಬಿಟ್ಟರೆ ಮೆಕ್ಕಾದ ಹಿರಿಮೆ ಅಂದಿದ್ದಷ್ಟೆ ಇಂದೂ ಉಳಿದಿದೆ. ವಾಸ್ತವದ ಭೂತಗನ್ನಡಿಯಲ್ಲಿ ನೋಡಿದರೆ ಮಹಮದ್ ಆ ಪವಿತ್ರ ನಗರಕ್ಕೆ ಕೊಟ್ಟದ್ದಕ್ಕಿಂತ ಆತ ಆ ಧಾರ್ಮಿಕ ಅಯಸ್ಕಾಂತೀಯ ಪ್ರಭಾವದಿಂದ ಬಾಳಿನುದ್ದ ಪಡೆದದ್ದೆ ಹೆಚ್ಚು ಎನ್ನುವುದು ಸುಸ್ಪಷ್ಟವಾಗುತ್ತದೆ.


( ಇನ್ನೂ ಇದೆ,)

No comments: