16 November 2015

ವಲಿ - ೩೧ಹಿಂದಿನ ವರ್ಷ ಅಲ್ ಹೊದೈಬಿಯಾದಲ್ಲಿ ಖುರೈಷಿಗಳೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದದ ಪ್ರಮುಖ ಅಂಶವಾದ ಹಝ್ಝ್ ಯಾತ್ರೆ ಮಾಡುವ ಈ ಸಾಲಿನ ಹಂಗಾಮಿನ ದಿನಗಳು ಓಡೋಡುತ್ತ ಬಂದಿದ್ದವು. ದಿಗ್ವಿಜಯ ಯಾತ್ರೆಗಳಲ್ಲಿ ಮಗ್ನನಾಗಿದ್ದ ಮಹಮದ್ ಅದನ್ನ ಮಾಡದಿರಲು ಕಾರಣಗಳೆ ಇರಲಿಲ್ಲ. ಈ ಬಾರಿ ಉಮ್ರಾ ಅಂದರೆ ಚಿಕ್ಕ ಯಾತ್ರೆಯನ್ನು ಮಾತ್ರ ಮಾಡಲು ನಿರ್ಧರಿಸಿದ ಮಹಮದ್ ತನ್ನ ಎರಡು ಸಾವಿರ ಅನುಯಾಯಿಗಳೊಂದಿಗೆ ಮೆಕ್ಕಾದತ್ತ ಸಾಗಿದ. ಶಾಂತಿ ಒಪ್ಪಂದದ ಶಿಸ್ತಿನ ನಿಯಮಗಳ ಪ್ರಕಾರ ಯಾತ್ರಿಕರು ತಮ್ಮ ಆತ್ಮ ರಕ್ಷಣೆಗಾಗಿ ಕೇವಲ ಒಂದೊಂದು ಆಯುಧಗಳನ್ನ ಮಾತ್ರ ಜೊತೆಗೆ ಇಟ್ಟುಕೊಳ್ಳಬಹುದಿತ್ತು. ಆದರೆ ಮಹಮದ್ ತನ್ನ ಬದಲಾಗಿದ್ದ ಅಂತಸ್ತಿಗೆ ತಕ್ಕಂತೆ ಪ್ರತ್ಯೇಕ ಅಂಗರಕ್ಷಕ ಪಡೆಯನ್ನೆ ಸುಸಜ್ಜಿತವಾದ ಆಯುಧಪಾಣಿಗಳೊಂದಿಗೆ ಜೊತೆಗಿರಿಸಿಕೊಂಡಿದ್ದ. ಈ ಬೆಂಗಾವಲು ಪಡೆ ಪ್ರತ್ಯೇಕವಾಗಿ ಬಲಿ ಕೊಡುವ ಉದ್ದೇಶದಿಂದ ಅರವತ್ತು ಒಂಟೆಗಳನ್ನೂ ಸಹ ತಮ್ಮ ಬೆನ್ನಿಗೆ ಕಟ್ಟಿಕೊಂಡು ಹೊರಟಿದ್ದವು.


ಹೆಚ್ಚು ಗೊಂದಲಕ್ಕೆ ಅವಕಾಶ ನೀಡಲಾಗದಂತೆ ಖುರೈಷಿಗಳು ಮಹಮದನ ಯಾತ್ರೆಗೆ ಅವಕಾಶ ಮಾಡಿಕೊಟ್ಟರು. ಆತ ಮೆಕ್ಕಾದಲ್ಲಿ ಯಾತ್ರಿಸುವ ಸಂದರ್ಭದಲ್ಲಿ ತಾವು ತಮ್ಮ ಪಾಡಿಗೆ ಮೆಕ್ಕಾ ತೊರೆದು ಸಮೀಪದ ಬೆಟ್ಟ ಪ್ರದೇಶದಲ್ಲಿ ತತ್ಕಾಲಿಕ ವಸತಿಯನ್ನ ಹೂಡುವಷ್ಟು ಔದಾರ್ಯದಿಂದಲೂ ಅವರು ನಡೆದುಕೊಂಡರು. ಬರೊಬ್ಬರಿ ಏಳು ವರ್ಷಗಳ ನಂತರ ಮಹಮದ್ ಮೆಕ್ಕಾವನ್ನು ಪ್ರವೇಶಿಸುವ ಭಾಗ್ಯವನ್ನ ಮರಳಿ ಪಡೆದಿದ್ದ. ತನ್ನ ಎರಡು ಸಾವಿರ ಸಹ ಯಾತ್ರಿಕರೊಂದಿಗೆ ಭಾವುಕನಾಗಿಯೆ ಆತ ಪಟ್ಟಣವನ್ನು ಪ್ರವೇಶಿಸಿದ.


ಏಳು ವರ್ಷಗಳ ನಂತರ ಕಾಬಾ ಗುಡಿಯ ದರ್ಶನವನ್ನು ಮಹಮದ್ ಮಾಡಲಿದ್ದ. ಯಾತ್ರಿಕರ ಉಡುಪಾದ ಪಂಚೆ ಹಾಗೂ ಶಾಲನ್ನ ಧರಿಸಿದ್ದ ಮಹಮದ್ ಉತ್ಸಾಹದಿಂದಲೆ ಒಂಟೆಯೇರಿ ಕಾತರನಾಗಿ ಕಾಬಾದ ಎದುರು ಬಂದನು. ಆತ ಗುಡಿಯನ್ನ ಪ್ರವೇಶಿಸಲಿಲ್ಲ. ಒಂಟೆಯಿಂದ ಆತ ಕೆಳಗಿಳಿಯಲಿಲ್ಲ. ಅದರ ಮೇಲೆ ಕುಳಿತೆ ತನ್ನ ಕೈಕೋಲಿನಿಂದ ಗುಡಿಯ ಮೂಲೆಯಲ್ಲಿದ್ದ ಕರಿಕಲ್ಲನ್ನ ಭಕ್ತಿ ಪೂರ್ವಕವಾಗಿ ಆತ ಸ್ಪರ್ಶಿಸಿದ. ನಿಯಮಾನುಸಾರ ನಡೆಸಬೇಕಾದ ಏಳು ಪ್ರದಕ್ಷಿಣೆಗಳನ್ನ ಒಂಟೆಯ ಮೇಲೆ ಕುಳಿತಿದ್ದೆ ಆತ ನಡೆಸಿದ. ಮಹಮದನ ಒಂಟೆಯನ್ನ ಮುನ್ನಡೆಸುತ್ತಿದ್ದ ಅಬ್ದುಲ್ಲಾ ವೀರೋಚಿತವಾದ, ಯುದ್ಧ ಪ್ರೇರಕ ಹಾಡಿನ ಸಾಲುಗಳನ್ನ ದೊಡ್ದ ಧ್ವನಿಯಲ್ಲಿ ಮೊಳಗಿಸುತ್ತಾ ಸಾಗುತ್ತಿದ್ದ. ಇದರಿಂದ ಕುಪಿತನಾದ ಮಹಮದ್ ಅವನನ್ನ ತಡೆದು 'ಅವನಿಲ್ಲದೆ ಇನ್ಯಾರೂ ಇಲ್ಲ! ಬೇರೆ ಇನ್ಯಾರೂ ಅಲ್ಲ, ತನ್ನ ಸೇವಕರನ್ನು ಕಾಪಾಡಿ ಉದ್ಧರಿಸುವವನು ಬೇರೆ ಇನ್ಯಾರೂ ಅಲ್ಲ! ಅವನಲ್ಲದೆ ಇನ್ಯಾರು ಮೋಸ ಕೂಟವನ್ನು ಹಿಮ್ಮೆಟ್ಟಿಸಿದವನು?' ಎಂದು ಧ್ವನಿ ಎತ್ತರಿಸಿ ಘರ್ಜಿಸಿದನು. ನೆರೆದ ಬೆಂಬಲಿಗರು ಇದಕ್ಕೆ ಉತ್ಸಾಹದ ಧ್ವನಿಗೂಡಿಸಿದರು. ಅವರೆಲ್ಲರ ಈ ಸಂತಸದ ಕೂಗು ಸುತ್ತಲ ಬೆಟ್ಟಗುಡ್ಡಗಳಲ್ಲಿ ಮಾರ್ದನಿಸಿತು.ಪ್ರದಕ್ಷಿಣೆ ಮುಗಿದ ನಂತರ ಮಹಮದ್ ಊರ ಪಕ್ಕದ ಶಿಖರಗಳಾದ ಮರ್ವಾ ಹಾಗೂ ಸಫಾದ ನಡುವೆಯೂ ಸಹ ಒಂಟೆಯನ್ನೇರಿದ್ದಂತೆಯೆ ಏಳೇಳು ಬಾರಿ ಹೋಗಿ ಬಂದ. ಅದೊಂದು ಯಹೂದಿ ಕುಲದ ಪ್ರಾಚೀನ ಆಚರಣ ಪದ್ಧತಿಯಾಗಿತ್ತು. ಮರ್ವಾದ ಶಿಖರದ ಮೇಲೆ ಜೊತೆಗೆ ತಂದಿದ್ದ ಎಲ್ಲಾ ಒಂಟೆಗಳ ಬಲಿಯನ್ನ ಕೊಡಲಾಯಿತು. 'ಇದು ಬಲಿ ಕೊಡಲು ಪ್ರಶಸ್ತ ಸ್ಥಳ ಹಾಗೂ ಇದಷ್ಟೇ ಅಲ್ಲದೆ ಮೆಕ್ಕಾದ ಪ್ರತಿಯೊಂದಿಂಚು ನೆಲವೂ ಸಹ ಬಲಿಗೆ ಹೇಳಿ ಮಾಡಿಸಿದ್ದೇ ಆಗಿದೆ' ಎಂದು ಮಹಮದ್ ಘೋಷಿಸಿದ. ವಾಡಿಕೆಯಂತೆ ತನ್ನ ಮುಡಿ ಕೊಟ್ಟು ತಲೆ ಬೋಳಿಸಿಕೊಂಡ. ಅಲ್ಲಿಗೆ ಆತನ ಚಿಕ್ಕ ಯಾತ್ರೆಯ ವಿಧಿಗಳೆಲ್ಲಾ ಶಾಸ್ತ್ರೋಕ್ತವಾಗಿ ನೆರವೇರಿದವು. ಗಮನಿಸಿ, ಆತ ತನ್ನ ಯಾತ್ರಾ ನಿಯಮಗಳನ್ನೇನೂ ಪ್ರಕಟಿಸದೆ ಆವರೆಗೂ ಜಾರಿಯಲ್ಲಿದ್ದ ಇಸ್ಲಾಂ ಪೂರ್ವದ ಪ್ರಾಚೀನ ಪದ್ಧತಿಯ ಅನುಸಾರವೆ ತನ್ನ ಯಾತ್ರೆಯನ್ನ ನಡೆಸಿದ್ದ. ಆತನ ಇಸ್ಲಾಮ್ ಕೂಡಾ ಮುಂದೆ ಅದೆ ಪದ್ಧತಿಗಳಿಗೆ ಜೋತು ಬಿತ್ತು.


ಮಾರನೆಯ ದಿನ ಮುಂಜಾವಿನಲ್ಲಿ ಮಹಮದ್ ಕಾಬಾ ಗುಡಿಯ ಒಳಾಂಗಣಕ್ಕೆ ಬಂದ. ಗುಡಿಯ ಮೇಲ್ಛಾವಣಿ ಏರಿದ ಅತ ತಾನೆ ಸ್ವತಃ ಮುಂದಾಗಿ ಪ್ರಾರ್ಥನೆಯ ಕರೆಯಾದ ಆಝಾನನ್ನ ನೀಡಿದ. ಮದೀನಾದ ತನ್ನ ಸ್ವಂತ ಮಸೀದಿಯಲ್ಲಿ ನಡೆಸಿ ಕೊಡುತ್ತಿದ್ದ ಕ್ರಮದಲ್ಲಿಯೇ ಇಲ್ಲಿಯೂ ಆತ ಪ್ರಾರ್ಥನೆಗಳನ್ನ ನಡೆಸಿಕೊಟ್ಟ. ಪ್ರಾಚೀನ ಕಾಲದ ಎಲ್ಲಾ ವಿಧಿಯಾಚರಣೆಗಳನ್ನೂ ಸಹ ಚಾಚೂ ತಪ್ಪದೆ ನಡೆಸಿ 'ದೇವರೊಬ್ಬನೆ! ನಾನವನ ಪ್ರವಾದಿ?!' ಎಂದು ದೊಡ್ಡ ಗಂಟಲಿನಲ್ಲಿ ಘೋಷಿಸಿದ. ಕಾಬಾದ ಗುಡಿಯೊಳಗೆ ಅಲ್ಲಾಹನದೂ ಸೇರಿ ಇದ್ದ ಒಟ್ಟು ಮುನ್ನೂರಾ ಅರವತ್ತು ನಾನಾ ದೇವರ ಮೂರ್ತಿಗಳು ಈ ಘೋಷಣೆಗೆ ಮೂಕ ಸಾಕ್ಷಿಗಳಾಗಿ ನಿಂತಿದ್ದವು! ಹಲವಾರು ವಿಗ್ರಹಗಳ ಮುಂದೆ ಮೂರ್ತಿ ಪೂಜನೆಯನ್ನೆ ವಿರೋಧಿಸುತ್ತಿದ್ದ ಮಹಮದ್ ಈ ಪ್ರಾರ್ಥನೆಗಳನ್ನ ಶ್ರದ್ಧಾ ಪೂರ್ವಕವಾಗಿ ನಡೆಸಿಕೊಟ್ಟದ್ದು ಒಂದು ಚರಿತ್ರಾರ್ಹ ಘಟನೆಯಾಗಿತ್ತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಎಂಬತ್ತೆಂಟರಲ್ಲಿ.ಮೆಕ್ಕಾದ ಮಾರುಕಟ್ಟೆ ಪ್ರದೇಶದಲ್ಲಿ ಒಂಟೆ ಚರ್ಮದಿಂದ ರಚಿಸಲಾಗಿದ್ದ ಗುಡಾರದಲ್ಲಿ ಮಹಮದ್ ಆ ಅವಧಿಯುದ್ದ ತಂಗಿದ್ದ. ಆತ ಯಾವುದೆ ಸಂಬಂಧಿಕರ ಮನೆಗೆ ಹೋಗಲೂ ಇಲ್ಲ, ಹೋಗುವ ಇಚ್ಛೆಯನ್ನೂ ಸಹ ವ್ಯಕ್ತ ಪಡಿಸಲಿಲ್ಲ. ಆದರೆ ತನ್ನನ್ನ ಕಾಣಲು ಅವರಾಗಿಯೆ ಹುಡುಕಿಕೊಂಡು ಬಂದ ರಕ್ತ ಸಂಬಂಧಿ ಖುರೈಷಿಗಳೊಂದಿಗೆ ಕುಶಲ ಸಂಭಾಷಣೆಗಳನ್ನು ಸಹಜವಾಗಿಯೆ ನಡೆಸಿ ಸತ್ಕರಿಸಿ ಬೀಳ್ಕೊಟ್ಟ. ಇದೆ ಅವಧಿಯಲ್ಲಿ ಮತ್ತೊಮ್ಮೆ ಆತನಿಗೆ 'ಶಾದಿ ಭಾಗ್ಯ'(?) ಒದಗಿ ಬಂತು! ತನ್ನ ಚಿಕ್ಕಪ್ಪ ಅಲ್ ಅಬ್ಬಾಸನ ಹೆಂಡತಿಯ ತಂಗಿಯಾಗಿದ್ದ ಇಪ್ಪತ್ತಾರು ವರ್ಷಗಳ ವಿಧವೆ ಮೈಮುನ್ನೀಸಳೊಂದೆಇಗೆ ಆತ ವಿವಾಹ ಸಮಾಗಮವನ್ನು ಕುದುರಿಸಿದ. ಮೂರು ದಿವಸದ ಈ ಅವಧಿಯಲ್ಲಿ ಆತ ಮತ್ತೊಮ್ಮೆ ಹಸೆಮಣೆ ಏರಲು ತಯ್ಯಾರಾದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿಯಾದ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ಏಳುನೂರಾ ಐವತ್ತಾರರಲ್ಲಿ.


ಈ ಮೂರು ದಿನಗಳಿಗೆ ಮಾತ್ರ ಆತ ಅಲ್ಲಿ ತಂಗಲು ಅನುಮತಿ ಇದ್ದು ಅದನ್ನ ವಿಸ್ತರಿಸುವಂತೆ ಕೇಳಿಕೊಂಡರೂ ಯಾವುದೆ ಪ್ರಯೋಜನವಾಗಲಿಲ್ಲ. ಕೂಡಲೆ ಮೆಕ್ಕಾ ತ್ಯಜಿಸಿ ಮದೀನಾದತ್ತ ಹೊರಡುವಂತೆ ಖುರೈಷಿಗಳಿಂದ ಅವನಿಗೆ ಆಜ್ಞೆ ಬಂತು. ಕನಿಷ್ಠ ನಿಶ್ಚಯವಾಗಿರುವ ಮೈಮುನ್ನಿಸಾಳೊಂದಿಗಿನ ಮದುವೆಯನ್ನ ಮುಗಿಸಿಕೊಂಡಾದರೂ ಹೊರಡಲು ಅನುಮತಿಸಿ ಎಂದು ಮನವಿ ಮಾಡಿಕೊಂಡರೂ ಅದಕ್ಕೂ ಯಾವುದೆ ಪುರಸ್ಕಾರ ಸಿಗಲಿಲ್ಲ. ಬೇರೆ ದಾರಿ ಕಾಣದೆ ಅಸಹಾಯಕನಾದ ಮಹಮದ ತನ್ನ ಗುಡಾರ ಕಿತ್ತು ಮೆಕ್ಕಾದ ಗಡಿ ದಾಟಿ ಹೊರ ನಡೆದ. ಅಲ್ಲಿಂದ ಹತ್ತು ಮೈಲಿ ದೂರವಿದ್ದ ಸರೀಫ್ ಎನ್ನುವ ಜಾಗದಲ್ಲಿ ತತ್ಕಾಲಿಕ ವಸತಿ ಏರ್ಪಡಿಸಿಕೊಳ್ಳಲಾಯಿತು. ಮಹಮದ್ ಹಾಗೂ ಮೈಮುನ್ನಿಸಾಳ ಮದುವೆ ಅಲ್ಲಿಯೆ ಜರುಗಿತು.ಮಾರನೆಯ ದಿನ ಆತನ ಪರಿವಾರ ನವ ವಧುವಿನೊಂದಿಗೆ ಮದೀನಾಕ್ಕೆ ಹಿಂದಿರುಗಿ ಬಂತು. ಈ ಮೈಮುನ್ನಿಸ ಮಹಮದನ ಮರಣದ ನಂತರವೂ ಐವತ್ತು ವರ್ಷ ಬಾಳಿ ಬದುಕಿದ್ದಳು. ಆಕೆಯ ಕೊನೆಯ ಆಸೆಯ ಪ್ರಕಾರ ಆಕೆಯನ್ನ ಆಕೆ ಹಾಗೂ ಮಹಮದ್ ವಿವಾಹವಾಗಿದ್ದ ಸರೀಫ್'ನಲ್ಲಿಯೆ ಹೂತು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ದ ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ಮುನ್ನೂರಾ ಎಂಬತ್ತೊಂಬತ್ತರಲ್ಲಿ.


ಮೈಮುನ್ನೀಸಾ ಮಹಮದನ ಅಂತಃಪುರ ಸೇರುವಾಗ ಮಹಮದನ ಹೆಂಡತಿಯರ ಸಂಖ್ಯೆ ಝೈನಬ್'ಳ ಸಾವಿನೊಂದಿಗೆ ಎಂಟಕ್ಕೆ ಕುಸಿದಿತ್ತು. ಹೀಗಾಗಿ ಅಧಿಕೃತ ಪತ್ನಿಯರ ಸಂಖ್ಯೆ ಒಂಬತ್ತಕ್ಕೆ ಸ್ಥಿರವಾಯಿತು. ಸೂಳೆಯರೂ ಸಹ ರೆಹಾನಾ ಹಾಗೂ ಮೇರಿ ಇಬ್ಬರೆ ಆಗಿದ್ದರು. ಮೈಮುನ್ನೀಸಾಳ ಜೊತೆಗೆ ಅವಳ ತಂಗಿಯರಾದ ಉಮ್ರಾಹ್ ಹಾಗೂ ಸಲ್ಮಾ ಸಹ ಇಸ್ಲಾಮ್ ಸ್ವೀಕರಿಸಿ ಮದೀನಾ ವಾಸಿಗಳಾಗಳು ಹೊರಟಿದ್ದರು. ಅಲಿ, ಜಾಫರ್ ಹಾಗೂ ಝೈದ್ ನಡುವೆ ಅವರನ್ನ ಮನದನ್ನೆಯರನ್ನಾಗಿ ಮಾಡಿಕೊಳ್ಳುವ ಹಂಬಲ ಮೂಡಿದ್ದನ್ನ ಗಮನಿಸಿದ ಮಹಮದ್ ಪೈಪೋಟಿ ಏರ್ಪಟ್ಟು ಅದು ಪರಸ್ಪರ ಕಚ್ಚಾಟಕ್ಕೆ ತಿರುಗುವ ಮುನ್ನವೆ ಉಪಾಯವಾಗಿ ಅವರಿಬ್ಬರನ್ನೂ ಸಹ ಜಾಫರನಿಗೆ ಮದುವೆ ಮಾಡಿಸಿಕೊಟ್ಟ. ಅಬಿಸೀನಿಯಾದ ನೂತನ ವಲಸಿಗನಿಗೆ ಕೊಟ್ಟ ಅತ್ಯುತ್ತಮ ಕೊಡುಗೆಗಳು ಅದಾಗಿದ್ದವು.ಮೆಕ್ಕಾ ಯಾತ್ರೆಯಿಂದ ಮರಳಿ ಬಂದಾದ ನಂತರ ಮೆಕ್ಕಾದ ಸಾಮಾಜಿಕ ವಲಯದಲ್ಲಿಯೂ ಸಹ ಮಹಮದನ ಪ್ರಭಾವ ಸಹಜವಾಗಿ ಹೆಚ್ಚಾಗಿತ್ತು. ಆಂತರಿಕ ಕಚ್ಚಾಟ, ಒಳಜಗಳ, ಅಶಾಂತಿ ಹಾಗೂ ಹಣಕಾಸಿನ ಕಾರಣಕ್ಕೆ ಹುಟ್ಟಿಕೊಳ್ಳುತ್ತಿದ್ದ ಕ್ಷೋಭೆಗಳಿಂದ ರೋಸಿ ಹೋಗಿದ್ದ ಅಲ್ಲಿನ ಅನೇಕ ಪ್ರತಿಷ್ಠಿತರಿಗೆ ಸಹ ಇಸ್ಲಾಮಿನ ಸೆಳೆತ ಹುಟ್ಟಿಕೊಳ್ಳಲು ಶುರುವಾಯಿತು. ಮಹಮದ್ ಹೇಳುವ ಪ್ರಕಾರ ಅದು ಶಾಂತಿ ಸಾರುವ ಧರ್ಮವೆ ಆಗಿದ್ದರೆ ಅದನ್ನ ಅನುಸರಿಸಿ ಶಾಂತ ಚಿತ್ತ ಸಮಾಜವನ್ನ ರೂಪಿಸಿಕೊಳ್ಳುವುದರಲ್ಲಿ ಏನು ತಪ್ಪು? ಎಂದವರಲ್ಲಿ ಕೆಲವರು ವಿಚಾರ ಮಂಥಿಸ ಹತ್ತಿದರು. ಮಹಮದ್ ಹೇಳುವ ಶಾಂತ ಸಹಬಾಳ್ವೆ, ಸಾರುತ್ತಿದ್ದ ಧಾರ್ಮಿಕ ತತ್ವಗಳು, ಅವನು ಅಲ್ಪ ಕಾಲದಲ್ಲಿ ಹೆಚ್ಚು ಶ್ರಮವಿಲ್ಲದೆ ಗಳಿಸಿದ ಹಣ ಬಲ, ವೃದ್ಧಿಸುತ್ತಿದ್ದ ಅವನ ಇಸ್ಲಾಮಿನ ಸಂಖ್ಯಾ ಬಲ ಹಾಗೂ ಅರೇಬಿಯಾದ ಪ್ರಸ್ಥಭೂಮಿಯಾದ್ಯಂತ ಹರಡುತ್ತಿದ್ದ ಅವನ ಪ್ರತಿಷ್ಠೆ ಇವೆಲ್ಲಾ ಸೇರಿ ಅವರ ಮನಸ್ಸು ಸಹ ಅವನತ್ತ ವಾಲುವಂತಾಗಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.


ಮೆಕ್ಕಾ ಯಾತ್ರೆ ಮುಗಿಸಿ ಮದೀನಾಕ್ಕೆ ಮರಳಿದ ಮಹಮದ ಅದೆ ವರ್ಷ ಅಂದರೆ ಕ್ರಿಸ್ತಶಕ ಅರುನೂರಾ ಇಪ್ಪತ್ತೇಳರ ಏಪ್ರಿಲ್ ತಿಂಗಳಿನಲ್ಲಿ ಬೆನ್ ಸುಲೈಮ್ ಬುಡಕಟ್ಟಿನವರ ಮೇಲೆ ದಂಡೆತ್ತಿಕೊಂಡು ಹೋದ. ಆದರೆ ಅದು ಅಷ್ಟೊಂದು ಪರಿಣಾಮಕಾರಿ ಸಾಫಲ್ಯವನ್ನೇನೂ ಗಿಟ್ಟಿಸಲಿಲ್ಲ. ಇದಾದ ಒಂದು ತಿಂಗಳೊಳಗೆ ಬೆನ್ ಲಾತ್ ಹಾಗೂ ಬೆನ್ ಮುರ್ಯಾ ಬುಡಕಟ್ಟಿನವರ ಮೇಲೆಯೂ ಆತನ ದಿಗ್ವಿಜಯ ಯಾತ್ರೆ ಸಾಗಿತು. ಆ ಯುದ್ಧ ಅತ್ಯಂತ ಯಶಸ್ವಿಯಾಗಿ ಅವರ ಅಸ್ತಿಪಾಸ್ತಿ, ಜನ, ಜಾನುವಾರು ಹಾಗೂ ಭೂಮಿ ಹೀಗೆ ಲಾಭದ ಹೊಳೆಯೆ ಕೊಳ್ಳೆಯ ರೂಪದಲ್ಲಿ ಹರಿದು ಬಂತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೭೫೭ರಲ್ಲಿ.


ಮುಂದೆ ಧಾಳಿ ಸಿರಿಯಾದ ಗಡಿ ಪ್ರದೇಶವಾದ ಧಾತ್ ಆಟ್ಲಾಹ್ ಮೇಲೂ ಮುಂದುವರೆಯಿತು. ಆದರೆ ಅಲ್ಲಿ ಮಹಮದನ ನಿರಂತರ ವಿಜಯಿ ಪಡೆ ಮುಖಭಂಗವನ್ನು ಅನುಭವಿಸಬೇಕಾಯಿತು. ಪರಾಭವವನ್ನು ಹೊತ್ತು ಮದೀನಕ್ಕೆ ಹಿಂದಿರುಗುವುದು ಅನಿವಾರ್ಯವಾಯಿತು. ಧಾಳಿ ಇಟ್ಟ ಪಡೆಗೆ ಪಡೆಯೆ ಹತವಾಗಿ ಯೋಧರಲ್ಲಿ ಒಬ್ಬೆ ಒಬ್ಬ ಜೀವ ಉಳಿಸಿಕೊಂಡು ಪಾರಾಗಿ ಓಡಿ ಬಂದ. ಈ ಸೋಲು ವಿಜಯದ ಅಲೆಯಲ್ಲಿ ತೇಲುತ್ತಲಿದ್ದ ಮಹಮದನಿಗೆ ಸಖೇದಾಶ್ಚರ್ಯವನ್ನು ತಂದಿತು. ಇದೆ ಸಂದರ್ಭದಲ್ಲಿ ರೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಬಸ್ರಾ ರಾಜ್ಯದ ರಾಜಕುಮಾರನಿಗೆ ದೌತ್ಯ ಕಳುಹಿಸಿದ್ದ ರಾಯಭಾರಿಯನ್ನು ಮೂಠಾ ಎಂಬಲ್ಲಿನ ದಾರಿ ಮಧ್ಯದಲ್ಲಿ ಸ್ಥಳಿಯ ಮುಖಂಡ ದೋಚಿ ಹತ್ಯೆ ಮಾಡಿದ ಸುದ್ದಿಯೂ ಬಂದು ಮಹಮದ್ ಕ್ರೋಧಗೊಂಡ. ಈ ಹತ್ಯೆಯ ಸೇಡನ್ನ ತೀರಿಸಿಕೊಳ್ಳಲು ಕ್ಷಿಪ್ರವಾಗಿ ಮೂರು ಸಾವಿರ ಯೋಧರ ಪಡೆಯೊಂದನ್ನ ಆತ ಸಿದ್ಧ ಪಡಿಸಿದ. ಅದಕ್ಕೆ ತನ್ನ ತನ್ನ ಸಾಕು ಮಗ ಝೈದ್'ನನ್ನೆ ಸೇನಾನಿಯಾಗಿ ನೇಮಿಸಿದ.


ಒಂದೊಮ್ಮೆ ಆತ ಯುದ್ಧಭೂಮಿಯಲ್ಲಿಯೆ ಸತ್ತರೆ ಆತನ ಜಾಗಕ್ಕೆ ಜಾಫರನನ್ನು ನೇಮಿಸಲಾಯಿತು. ಒಂದು ವೇಳೆ ಅವನೂ ಹೋರಾಡುವಾಗಲೆ ಸತ್ತರೆ ಅವನ ಜಾಗಕ್ಕೆ ಅಬ್ದುಲ್ಲಾ ಇಬ್ನ್ ರೆವಾಹನನ್ನು ನೇಮಿಸಲಾಯಿತು. ಹೀಗೆ ನೇಮಕದ ಮೇಲೆ ನೇಮಕಗಳಾದ ಶಸ್ತ್ರಸಜ್ಜಿತ ಮುಸಲ್ಮಾನರ ಅಪಾರ ಸೈನ್ಯ ಸಿರಿಯಾದ ಗಡಿಯತ್ತ ತಿರುಗಿತು. ಯೋಧರ ಆತ್ಮಸ್ತೈರ್ಯವನ್ನು ಹೆಚ್ಚಿಸುವ ಸಲುವಾಗಿ ಆರಂಭದಲ್ಲಿ ಸೈನ್ಯದ ಚುಕ್ಕಾಣಿಯನ್ನ ತಾನೆ ವಹಿಸಿಕೊಂಡ ಮಹಮದ್ ಮದೀನಾದಿಂದ ಕೆಲವು ಮೈಲಿಗಳ ದೂರದವರೆಗೆ ತಾನೆ ಅವರನ್ನೆಲ್ಲಾ ಮುನ್ನಡೆಸಿ ಶುಭ ಹಾರೈಸಿ ದಾರಿ ಮಧ್ಯದಿಂದಲೆ ಮರಳಿ ಸುರಕ್ಷಿತವಾಗಿ ಮನೆ ಸೇರಿಕೊಂಡ!ಇತ್ತ ಶುರಾಬಿಲ್ ಈ ಪ್ರತಿಕಾರಕ್ಕಾಗಿ ಮುಸಲ್ಮಾನರ ಸೈನ್ಯ ತಮ್ಮತ್ತ ತಿರುಗಿರುವ ಸುದ್ದಿಯನ್ನು ತಿಳಿದು ಧೃತಿಗೆಡಲಿಲ್ಲ. ತಮ್ಮ ಬುಡಕಟ್ಟಿನ ಎಲ್ಲಾ ಯೋಧರೂ ಭೀಕರ ಕಾಳಗಕ್ಕೆ ಅಣಿಯಾಗುವಂತೆ ಸೂಚನೆಯನ್ನಾತ ಕೊಟ್ಟ. ಅವರೂ ಸಹ ಮುಸಲ್ಮಾನ ಸೇನೆಗೆ ಸರಿಸಮವಾಗಿಯೆ ಜಮಾಯಿಸಿ ಬರುವ ಶತ್ರುಗಳಿಗಾಗಿ ಕಾದು ಕೂತರು. ಮುಸಲ್ಮಾನರ ಸೈನ್ಯ ಗಡಿಭಾಗವನ್ನ ಮುಟ್ಟುವ ಹಂತದಲ್ಲಿದ್ದಾಗ ಸೇನಾನಿ ಝೈದ್ ಈ ವಿಷಯವನ್ನ ಅರಿತು ಒಳಗೊಳಗೆ ಅಂಜಿ ಗಾಬರಿಗೊಳಗಾದ. ಗೆಲುವಿನ ಸಾಧ್ಯತೆಯ ಬಗ್ಗೆ ಅವನ ಮನದಲ್ಲಿ ಶಂಕೆ ಮೂಡತೊಡಗಿತು.ಶೂರಾಬಿಲ್'ನ ನೆಲೆ ವಾಸ್ತವದಲ್ಲಿ ರೋಮನ್ ಸಾಮ್ರಾಜ್ಯದ ಒಂದು ಭಾಗವೆ ಆಗಿತ್ತು. ಅವರ ಯುದ್ಧ ಸನ್ನದ ಸ್ಥಿತಿಯನ್ನ ಕಣ್ಣಾರೆ ಕಂಡ ಝೈದ್ ಕೆಂಗೆಟ್ಟ. ಅವರಿಗೇನೋ ಅದು ಮನೆಯ ಅಂಗಳವಾಗಿತ್ತು, ಆದರೆ ಇವರು ಬಹುದೂರ ಮರಳುಗಾಡಿನ ಹಾದಿ ಸವೆಸಿ ಸುಸ್ತಾಗಿ ಹೋಗಿದ್ದರು. ಆತ ತನ್ನ ಆಪ್ತೇಷ್ಟರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿ, ಮಹಮದನಿಗೆ ಈ ಬಗ್ಗೆ ಹಾಗೂ ಸದ್ಯದ ಪರಿಸ್ಥಿಯ ಬಗ್ಗೆ ಒಂದು ಸಂದೇಶ ಕಳುಹಿಸಿ ಅವನ ಸಲಹೆ ಪಡೆದು ಮುಂದುವರೆದರೆ ಒಳ್ಳೆಯದಲ್ಲವೆ? ಎನ್ನುವ ಪ್ರಸ್ತಾಪವನ್ನ ಆತ ಮುಂದಿಟ್ಟ. ಆತನ ಅಂಜುಬುರುಕತನವನ್ನ ಅಬ್ದುಲ್ಲಾ ಇಬ್ನ್ ರವಾಹ್ ತೀವೃವಾಗಿ ಖಂಡಿಸಿ, ಬಂದಿರುವುದೆ ಅವನ ಆಜ್ಞೆಯ ಮೇಲೆ ಎಂದಾಗಿರುವಾಗ ಈ ಕೊನೆ ಕ್ಷಣದ ಕೊಸರಾಟವಾದರೂ ಏಕೆ? ಹೋರಾಟದ ಕಣಕ್ಕೆ ಧುಮುಕುವುದೆ ಸೂಕ್ತ ಎಂದಾತ ಸಮರೋತ್ಸಾಹವನ್ನ ಪ್ರಕಟಿಸಿದ. ಅದಕ್ಕೆ ಎಲ್ಲರ ಸಹಸಮ್ಮತಿ ದೊರೆತ ಕಾರಣ ಝೈದ್'ಗೆ ಹೋರಾಡದೆ ವಿಧಿಯೆ ಉಳಿಯಲಿಲ್ಲ.ಮೃತ ಸಮುದ್ರ ಅಥವಾ ಡೆಡ್ ಸೀ ತಟದಲ್ಲಿ ಇಂದಿರುವ ಇಸ್ರೇಲ್ ಹಾಗೂ ಜೋರ್ಡಾನ್ ಗಡಿ ಭಾಗದಲ್ಲಿ ಎರಡೂ ಸೈನ್ಯಗಳು ಮುಖಾಮುಖಿ ಸಂಧಿಸಿದವು. ರೋಮನ್ ಪಡೆಗಳ ಸಹಕಾರದಿಂದ ಶುರಾಬಿಲ ಮುಸಲ್ಮಾನ ಪಡೆಯನ್ನ ಹಿಮ್ಮೆಟ್ಟಿಸುತ್ತ ಬಂದ. ಸೋಲಿನ ರುಚಿ ಕಾಣ ತೊಡಗಿದ ಪಡೆ ಮೂಠಾದ ಬಳಿ ಲಂಗರು ಹಾಕಿತು. ಅಲ್ಲಿಗೂ ಅಟ್ಟಿಸಿಕೊಂಡು ಬಂದು ಕಂಡವರನ್ನ ಶುರಾಬಿಲ್ ಪಡೆ ಕೊಚ್ಚುತ್ತಾ ಬಂತು. ಝೈದ್ ಶುರಾಬಿಲ್ ಕತ್ತಿಗೆ ಸಿಕ್ಕಿ ಹತನಾದ. ಅವನ ಸ್ಥಾನಕ್ಕೆ ಏರಿದ ಜಾಫರ್ ಸಹ ಹೋರಾಟದ ಹಾದಿಯಲ್ಲಿ ಸತ್ತು ಹೋದ. ಅವನ ನಂತರದ ನಾಯಕ ಅಬ್ದುಲ್ಲಾ ಇಬ್ನ್ ರವಾಹ್ ಪಡೆಯ ನೇತೃತ್ವ ವಹಿಸಿಕೊಂಡು ಶತ್ರು ಪಡೆಗಳ ಮೇಲೆ ಮುಗಿ ಬಿದ್ದನಾದರೂ ಅವನ ಆಟವೂ ಹೆಚ್ಚು ಹೊತ್ತು ಸಾಗದೆ ಆತನೂ ಸತ್ತು ನೆಲಕ್ಕೆ ಒರಗಿದ. ಮಹಮದನ ಮುಸಲ್ಮಾನ ಸೈನ್ಯದ ಪಾಳ್ಯವನ್ನು ಶುರಾಬಿಲ್ ಪಡೆ ನುಚ್ಚುನೂರು ಮಾಡಿ ಬಿಸಾಕಿತು. ಈ ಸೋಲಿನ ಸಾಧ್ಯತೆಯನ್ನ ಊಹಿಸಿಯೆ ಮಹಮದ್ ಉಪಾಯವಾಗಿ ಬಲಿ ಪ್ರಾಣಿಗಳನ್ನಾಗಿ ಅವರನ್ನೆಲ್ಲಾ ಹೋರಾಡಲು ಕಳುಹಿಸಿ, ತಾನು ಮಾತ್ರ ಸುರಕ್ಷಿತವಾಗಿ ಮದೀನದಲ್ಲಿಯೆ ಉಳಿದಿದ್ದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ದ ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ತೊಂಬತ್ತಾರರಲ್ಲಿ.


ಅಳಿದುಳಿದ ಬೆರಳೆಣಿಕೆಯಷ್ಟು ಮುಸಲ್ಮಾನ ಯೋಧರೊಂದಿಗೆ ಬದುಕಿ ಉಳಿದಿದ್ದ ಅನಂತರದ ಹಂತದ ನಾಯಕ ಖಲೀದ್ ತಲೆ ತಪ್ಪಿಸಿಕೊಂಡು ಮದೀನಕ್ಕೆ ಓಡಿ ಬಂದು ಮುಟ್ಟಿದ. ಸೋತು ಸುಣ್ನವಾಗಿ ಮರಳಿಬಂದ ತನ್ನ ಸೈನ್ಯವನ್ನು ಮಹಮದ್ ಸಂತೈಕೆಯ ಧ್ವನಿಯಲ್ಲಿ ಉತ್ತೇಜಿಸುತ್ತಲೆ ನಗರಕ್ಕೆ ಬರ ಮಾಡಿಕೊಂಡ. ತನ್ನ ಕುಲ ಬಾಂಧವರಾದ ಜಾಫರ್, ಝೈದ್ ಹಾಗೂ ಅಬ್ದುಲ್ಲಾನ ದಾರುಣ ಸಾವಿನ ಸುದ್ದಿ ಮಾನಸಿಕವಾಗಿ ಆತನನ್ನು ಘಾಸಿಗೊಳಿತು. ತನ್ನ ಗಂಡನಿಗಾಗಿ ಕಾದು ಕುಳಿತಿದ್ದ ಆಸ್ಮಾಳಿಗೆ ಸುದ್ದಿ ತಿಳಿಸಲು ಸ್ವತಃ ತೆರಳಿದ ಮಹಮದ್ ಅಲ್ಲಿ ಗಂಟಲುಬ್ಬಿ ಬಂದು ಮಾತನಾಡಲಾಗದೆ ಅವಳ ಎಳೆ ಮಕ್ಕಳನ್ನ ತಬ್ಬಿಕೊಂಡು ರೋಧಿಸಿದ. ಹೀಗೆ ಸಾವಿನ ಸಂಗತಿ ಅಲ್ಲಿ ಬಿತ್ತರಗೊಂಡಿತು. ಅಲ್ಲಿಂದ ಮಹಮದನ ಸವಾರಿ ಝೈದ್ ಬಿಡಾರದತ್ತ ಹೊರಟಿತು. ಅದಾಗಲೆ ಸುದ್ದಿ ಅರಿತಿದ್ದ ಝೈದ್'ನ ಪುಟ್ತ ಮಗಳು ಮಹಮದನನ್ನು ಕಾಣುತ್ತಲೆ ಆತನ ತೆಕ್ಕೆಗೆ ಬಿದ್ದು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವಳೊಂದಿಗೆ ಸೇರಿ ತಾನೂ ತನ್ನ ಆತ್ಮೀಯ ಮಿತ್ರನ ಸಾವಿನ ಶೋಕದಲ್ಲಿ ಮಹಮದ್ ಕಣ್ಣೀರಿನಲ್ಲಿ ಮಿಂದೆದ್ದ.ಜಾಫರನ ವಿಧವೆ ಆಸ್ಮಾ ಮಹಮದನ ಮಾವ ಅಬು ಬಕರ್'ನನ್ನು ಮದುವೆಯಾದಳು. ಅವನೂ ಸತ್ತ ನಂತರ ಮಹಮದನ ಅಳಿಯ ಅಲಿಯ ಮನೆಯನ್ನು ಮಡದಿಯಾಗಿ ತುಂಬಿದಳು. ಅವಳಿಗೆ ಅವರಿಬ್ಬರಿಂದಲೂ ಒಟ್ಟು ಐದು ಮಕ್ಕಳಾದವು. ಮೂಠಾ ಯುದ್ಧದ ಘೋರ ಪರಾಭವ ಏರುತ್ತಿದ್ದ ಮಹಮದನ ಪ್ರತಿಷ್ಠೆಗೆ ತೀವೃ ಹಿನ್ನೆಡೆಯನ್ನು ಉಂಟು ಮಾಡಿತ್ತು. ಈ ಪರಿಸ್ಥಿತಿಯ ಲಾಭ ಪಡೆಯಲು ಹಲವರು ಹವಣೆಸಿದರು. ಬೆದಾವಿನರು ಅದರಲ್ಲಿ ಪ್ರಮುಖರಾಗಿದ್ದರು. ಕಬ್ಬಿಣ ಕಾದಾಗಲೆ ಬಡಿಯಬೇಕು ಎನ್ನುವುದನ್ನ ಅರಿತಿದ್ದ ಅವರು ಏಕಾಏಕಿ ಮದೀನಾದ ಮೇಲೆ ಧಾಳಿ ಎಸಗಲು ಸಿದ್ಧರಾಗುತ್ತಿರುವ ಸಂಗತಿ ಗೂಢಚರರ ಮೂಲಕ ಮಹಮದನಿಗೆ ಬಂದು ಮುಟ್ತಿತು. ಇದರಿಂದ ರೊಚ್ಚಿಗೆದ್ದ ಆತ ಅದಕ್ಕೂ ಮೊದಲೆ ಅವರನ್ನ ಹಣೆದು ಬಿಸಾಡಲು ಪಡೆಯೊಂದನ್ನ ಸಿದ್ಧ ಪಡಿಸಿ ಅಮ್ರ್ ಎಂಬಾತನ ನೇತೃತ್ವದಲ್ಲಿ ಅದನ್ನ ಬೆದಾವಿನರ ವಿರುದ್ಧ ಛೂ ಬಿಟ್ಟ. ಆತ ಸಿರಿಯಾದ ಗಡಿಯವರೆಗೆ ಪ್ರಯಾಣಿಸಿದನಾದರೂ ಅದು ತನ್ನ ಕೈಲಿರುವ ಪಡೆಯಿಂದ ಮಾತ್ರ ಸಾಧ್ಯವಾಗುವ ಸಂಗತಿ ಅಲ್ಲ ಅನ್ನುವ ವಿವೇಕ ಅವನಿಗೆ ಶೀಘ್ರದಲ್ಲಿಯೆ ಮೂಡಿತು. ಇನ್ನಷ್ಟು ಯೋಧರನ್ನ ಕಳಿಸಿರೆಂದು ಆತ ಮೊರೆ ಇಟ್ತ. ಮಹಮದ್ ಕೂಡಲೆ ಬಂದ ಸಹಾಯದ ಸಂದೇಶಸ ಬೆನ್ನಿಗೆ ಅಬು ಒಬೈದ್ ನೇತೃತ್ವದಲ್ಲಿ ಒಂದು ಪಡೆಯನ್ನ ರವಾನಿಸಿದ.ಸಮರಾಂಗಣದಲ್ಲಿ ಯಾರು ಸೇನೆಯನ್ನ ಮುನ್ನಡೆಸಬೇಕು? ಅನ್ನುವ ವಿಷಯದಲ್ಲಿ ಅಮ್ರ್ ಹಾಗೂ ಅಬು ಒಬೈದ್ ನಡುವೆ ತಿಕ್ಕಾಟ ನಡೆಯಿತಾದರೂ,ಕಡೆಗೆ ಒಬೈದ್ ನಾಯಕನಾಗುವಲ್ಲಿ ಸಫಲನಾದ. ಆತನ ಮುಖಂಡತ್ವದಲ್ಲಿ ಬೆದಾವಿನರ ಸೊಕ್ಕನ್ನ ಯಶಸ್ವಿಯಾಗಿ ಅಡಗಿಸಲಾಯಿತು. ಸಿರಿಯಾದ ಈ ಗಡಿಭಾಗ ಈಗ ಅಧಿಕೃತವಾಗಿ ಮಹಮದನ ಅಧಿಪತ್ಯಕ್ಕೆ ಒಳ ಪಟ್ಟಿತು. ಮಹಮದನ ಶ್ರಮ, ಆತನ ಹಿಂಬಾಲಕರ ಬಲಿದಾನ, ಅವರೆಲ್ಲರೂ ಇಸ್ಲಾಮಿನ ಮೇಲಿಟ್ಟಿದ್ದ ನಿಷ್ಠೆ ಹಾಗೂ ಅವರೆಲ್ಲರ ಒಟ್ಟಾರೆ ಸಾಹಸಗಳೆಲ್ಲವೂ ಸೇರಿ ಅರೇಬಿಯಾ ಪ್ರಸ್ಥಭೂಮಿಯ ಉದ್ದಗಲಕ್ಕೂ ಈಗ ಇಸ್ಲಾಮ್ ಸಾಮ್ರಾಜ್ಯ ಹರಡಿತ್ತು. ಸಿರಿಯಾ ಅದರ ಗಡಿ ಭಾಗವಾಗಿ ಮಾನ್ಯವಾಯ್ತು.


ಅಲ್ ಮುಕ್'ದಾದ್ ಬಿನ್ ಅಮ್ರ್.
ಅಬ್ದುಲ್ಲಾ ಬಿನ್ ಮಸೂದ್.
ಹಂಝಾ ಬಿನ್ ಅಬ್ದುಲ್ ಮುಖ್ತಾಲಿಬ್.
ಅಬುದಾರ್ ಅಲ್ ಘಿಫಾರಿ.
ಅಮ್ಮಾರ್ ಬಿನ್ ಯಾಸಿರ್.
ಅಲಿ ಬಿನ್ ಅಬು ತಾಲಿಬ್.
ಹುದೈಫ್ ಬಿನ್ ಅಲ್ ಎಮಾನ್.
ಜಾಫರ್ ಬಿನ್ ಅಬು ತಾಲಿಬ್.
ಬಿಲಾಲ್ ಬಿನ್ ರವಾಹ್ ಹಾಗೂ
ಉಮರ್ ಬಿನ್ ಅಲ್ ಖತ್ತಾಬ್ ಈ ಕೀರ್ತಿ ಪತಾಕೆಯನ್ನ ಅಲ್ಲೆಲ್ಲಾ ಹಬ್ಬಿಸಿದ ಖ್ಯಾತಿಗೆ ಅಸಲು ಹಕ್ಕುದಾದರಾಗಿರುತ್ತಾರೆ ಅನ್ನುತ್ತಾರೆ ಇತಿಹಾಸಕಾರ ಅಬ್ ಶಾನವಲ್ ತಮ್ಮ ಕೃತಿ 'ದ ಮಿನಿಸ್ಟರ್ಸ್ ಅರೌಂಡ್ ದ ಪ್ರಾಪೆಟ್' ಕೃತಿಯ ಪುಟ ಸಂಖ್ಯೆ ಐದರಿಂದ ಏಳರ ನಡುವೆ.


( ಇನ್ನೂ ಇದೆ.)

No comments: