14 February 2013

ತುಳುಗಾದೆ-೧೭


"ಸೋರುನ ಇಲ್ಲಲಾ, ಓರುನ ಇಲ್ಲಲಾ ಒಂಜೆ" { ಸೋರುವ ಮನೆಯಲ್ಲಿ ಬಾಳುವುದು ಕಡು ಕಷ್ಟ, ಅದರಲ್ಲೂ ಮಲಗುವ ಹೊತ್ತಿನಲ್ಲಿ ರಾತ್ರಿಯಿಡಿ ಬಾನಿಗೆ ತೂತು ಬಿದ್ದಂತೆ ಮಳೆ ಹುಯ್ಯುವ ತುಳುನಾಡಿನ ಮಳೆಗಾಲದಲ್ಲಿ ಮನೆಯಲ್ಲಿ ಮಲಗಲೂ ಆಗದೆ, ನೀರು ತೊಟ್ಟಿಕ್ಕಿ ನೆಲದಲ್ಲಿ ಎದ್ದ ಕೆಸರಿನಲ್ಲಿಯೆ ತೂಕಡಿಸುತ್ತಾ ಕಾಲ ಹಾಕಬೇಕಾಗಿ ಬರುವುದು ಇದೆ. ಅದಕ್ಕೆಯೆ ಹಿಂದೆಲ್ಲ ಸಾಂಪ್ರದಾಯಿಕ ಮುಳಿಹುಲ್ಲಿನ ( ಭತ್ತದ ಹುಲ್ಲು ) ಮನೆಗಳೆ ಹೆಚ್ಚಾಗಿದ್ದ ಕಾಲದಲ್ಲಿ ಬೇಸಿಗೆಯಲ್ಲಿ ತಪ್ಪದೆ ಹಳೆಯ ಸೋಗೆ ಬದಲಿಸಿ ಸೂರಿಗೆ ಹಣೆದ ತೆಂಗಿನಗರಿಯ ಮಡಿಲನ್ನ ಮುಚ್ಚಿ ಭದ್ರವಾಗಿ ಹೊಸ ಹುಲ್ಲು ಹೊದೆಸಲಾಗುತ್ತಿತ್ತು. ಎಂತಹ ಕುಂಭದ್ರೋಣ ಮಳೆಗೂ ಹನಿ ನೀರೂ ಮನೆಯೊಳಗೆ ನುಗ್ಗದಂತೆ ಸೂರನ್ನ ತಪ್ಪದೆ ವರ್ಷವೂ ಬದಲಿಸಿ ಮನೆಯ ಭದ್ರತೆ ಕಾಪಾಡಿ ಕೊಳ್ಳಲಾಗುತ್ತಿತ್ತು. ನೆಲವನ್ನೂ ಸಹ ಕೆಮ್ಮಣ್ಣು ಬಳಿದು ಸಗಣಿಗೆ ಕರಿಹಚ್ಚಿ ಸಾರಿಸಿ ಗೇರಿನ ಎಣ್ಣೆಯನ್ನ ಕುಡಿಸಿ ಆಧುನಿಕ ಕಾಲದ ಮಾರ್ಬಲ್'ನಂತೆ ತಿಕ್ಕಿ ನಯಗೊಳಿಸಲಾಗುತ್ತಿತ್ತು. ಒಂದೊಮ್ಮೆ ಆರ್ಥಿಕ ಅಡಚಣೆಯಿಂದಲೋ, ಉಢಾಫೆಯಿಂದಲೋ ಇಲ್ಲಾ ಸೋಮಾರಿತನದಿಂದಲೋ ಈ ವಾಡಿಕೆಯ ದುರಸ್ತಿ ನಡೆಸದಿದ್ದ ಮನೆ ಜೋರು ಮಳೆಗೆ ಸೋರಿ ಕೆಸರಗದ್ದೆಯಂತಾಗುವುದು ಶತಸಿದ್ಧ. ಅಂತೆಯೆ ಸದಾ ಜಗಳ, ಮತ್ಸರದ ಹಗೆಯಂತಿರುವ ಮಂದಿ ಜೊತೆಗೆ ಒಂದೆ ಸೂರಿನಡಿ ಒತ್ತಾಯಕ್ಕೆ ಕಟ್ಟುಬಿದ್ದವರಂತೆ ಬಾಳುವುದೂ ಸಹ ಇಂತಹ ಸೋರುವ ಮನೆಯಲ್ಲಿ ಬಾಳುವಂತಹದ್ದೆ ಕೆಟ್ಟ ಅನುಭವ. ಅಲ್ಲಿ ಮನೆ ಕೆಟ್ಟರೆ ಇಲ್ಲಿ ಮನ ಕೆಡುತ್ತದೆ. ದಾಯಾದಿ ಮತ್ಸರವಿರುವ ಮನೆಯಲ್ಲಿನ ಒಡ ಹುಟ್ಟಿದವರು, ವಿಫಲ ವೈವಾಹಿಕ ಬಂಧನದಲ್ಲಿ ನರಳುವ "ಕೇವಲ ವಿವಾಹಿತರು' ಇಷ್ಟವಿಲ್ಲದೆಯು ಜೊತೆಗೆ ಬಾಳುವ ಗೆಳೆಯರು ಇವರಿಗೆಲ್ಲ ಮೇಲಿನ ಗಾದೆ ಸರಿಯಾಗಿ ಅನ್ವಯಿಸುತ್ತದೆ. ದೂರವಿದ್ದು ನೆಮ್ಮದಿಯಾಗಿರುವುದು ನೋವಿನ ಮಡುವಿಗೆ ತಳ್ಳಿದರೂ ವಿವೇಕಿಯಾದ ಅವರಲ್ಲೊಬ್ಬರು ದಿಟ್ಟ ನಿರ್ಧಾರ ತೆಗೆದುಕೊಂಡು ದೂರಾಗುವುದು ಉತ್ತಮ ಮತ್ತು ಕ್ಷೇಮ ಅನ್ನುತ್ತದೆ ಈ ಗಾದೆ.} ( ಸೋರುನ ಇಲ್, ಓರುನ ಇಲ್ ರಡ್ಡ್'ಲಾ ಒಂಜೆ = ಸೋರುವ ಮನೆಯೂ, ವಟಗುಡುವರಿರುವ ಮನೆ ಎರಡೂ ಒಂದೆ.)

No comments: