28 February 2013

ತುಳುಗಾದೆ-೩೦

 "ಅರಿ ಬಾರ್ ಇತ್ತುನೌಲು ಎಲಿ ಪೆರ್ಗುಡೆಲ್ ಕಮ್ಮಿಯೋ?" { ಇದು ಹಣ ಹಾಗು ಅಂತಸ್ತಿಗೆ ಮುತ್ತುವ ಅವಕಾಶವಾದಿ ಮನಸುಗಳನ್ನ ಹೀಯ್ಯಾಳಿಸುವುದಕ್ಕೆ ಹುಟ್ಟಿಕೊಂಡ ಗಾದೆ. ಯಾರಾದರೂ ಹಣ ಚಲ್ಲಲು ತಯಾರಾದರೆಂದರೆ ಸಾಕು ಅವರ ಸುತ್ತ ಅರ್ಜೆಂತ್ ಅಭಿಮಾನಿಗಳ ಹಿಂಬಾಲಕರ ಪಡೆಯೆ ಸಿದ್ಧವಾಗುತ್ತದೆ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುತ್ತುವ ಇವರೆಲ್ಲರ ಧ್ಯೇಯ ಹುಚ್ಚುಮುಂಡೆ ಮದುವೆಯಲ್ಲಿ ತಾವೂ ಗಂಟು ಕಳ್ಳರಾಗುವುದರ ಕಡೆಯೆ ಇರುತ್ತದೆ ಅನ್ನುವುದು ವಾಸ್ತವ. ಗಂಟು ಕರಗಿದೊಡನೆ ತಾವು ಹೊತ್ತು ಮೆರೆಸುತ್ತಿದ್ದ ಒಡೆಯನ ಋಣವನ್ನ ಇದ್ದಕ್ಕಿದ್ದಂತೆಯೆ ಹರಿದುಕೊಂಡು ಹೊಸ ರೊಕ್ಕಸ್ಥನ ತಲಾಶಿಗೆ ಹೊರಟು ಗುಂಪಿನಲ್ಲಿ ಗೋವಿಂದರಂತೆ ಗಂಟಲು ಹರಿದುಕೊಂಡು ಜೈಕಾರ ಕೂಗಿ ತಮ್ಮ ಕಿಸೆ ತುಂಬಿಸಿಕೊಳ್ಳುವ ಈ ಹುನ್ನಾರದ ಮಂದಿ ಹಿಂದೆಯೂ ಇದ್ದರು, ಇಂದೂ ಇರುತ್ತಾರೆ, ಮುಂದೆಯೂ ಇದ್ದೇ ಇರುತ್ತಾರೆ. ತುಳುನಾಡಿನಲ್ಲಿ ಅಕ್ಕಿಯನ್ನು ಕಳಸಿಗೆಯ ಲೆಕ್ಖದಲ್ಲಿ ಅಳೆದು ಮುಡಿಕಟ್ಟಿ ಅಟ್ಟದ ಮೇಲೆ ಕೂಡಿಡುವ ಕ್ರಮ ಇದೆ. ಈ "ಮುಡಿ" ನೋಡಲು ದೊಡ್ದ ಗಾತ್ರದ ಕಾಲ್ಚೆಂಡಿನಂತೆ ಕಾಣುವ ಹುಳ್ಳಿನಿಂದ ಕಲಾತ್ಮಕವಾಗಿ ಹೆಣೆದ ಒಂದು ಸುಭದ್ರ ದಾಸ್ತಾನು ಪೊಟ್ಟಣ. ಅದನ್ನ ಕೈಕತ್ತಿಯಂಚಲ್ಲಿ ಬಡಿಬಡಿದು ಕೈಯಲ್ಲೆ ಹೆಣೆದ ಕುಲ್ಲಿನ ಹಗ್ಗಗಳಲ್ಲಿ ಹಾಕಿ ಭದ್ರವಾಗಿ ಕಟ್ಟುವುದೂ ಸಹ ಒಂದು ಕಲೆ. ಹಾಗೆ ಕಟ್ಟಿದ ಮುಡಿಯಿಂದ ಕಾಳು ಅಕ್ಕಿಯೂ ಹೊರ ಬೀಲದು. ಆದರೆ ಅದೆಷ್ಟೆ ಜಾಗ್ರತೆ ವಹಿಸಿದರೂ ಹಾಳು ಮೂಷಿಕರಾಯರ ಕಾಟ ಮಾತ್ರ ರೈತರಿಗೆ ತಪ್ಪದು. ಘಟ್ಟದ ಮೇಲೆ ಅಕ್ಕಿ-ಭತ್ತವನ್ನ ಕೂಡಿಡುವ ರೈತನ ಪಣತ ಅಥವಾ ಅಟ್ಟದ ಮೇಲಿರಿಸಿದ ಇಲಿ ಹೆಗ್ಗಣಗಳಿಗೆ ಸೂಳೆಯ ಮನೆಯಿದ್ದಂತಿದ್ದರೆ ಘಟ್ಟದ ಕೆಳಗೆ ರೈತರ ಮನೆಯ ಅಟ್ಟಕ್ಕೆ ಆ ಪುಕ್ಕಟೆ ಅವಕಾಶ ಲಭ್ಯ!. ಹೊತ್ತಲ್ಲದ ಹೊತ್ತಿನಲ್ಲಿ ಬೆಳೆದ ರೈತನ ಅನುಮತಿಗೂ ಕಾಯದೆ ಪಣತಕ್ಕೆ ತೂತು ಕೊರೆದು ಮನಸಾರೆ ತೃಪ್ತಿಯಾಗುವಷ್ಟು ಮೆದ್ದು ಮತ್ತೆ ಬೇಕಾದಾಗ ಬಂದು ತಿಂದು, ಜೊತೆಗೆ ಸಾಧ್ಯವಾದಷ್ಟನ್ನ ಗಂಟು ಕಟ್ಟಿಕೊಂಡು ಹೋಗುವ ಗುಣ ಅವುಗಳದ್ದು. ಹಾಗೆಯೆ ಈ ಸಂತೆಯಲ್ಲಿ ಬರುವ ಗಂಟುಕಳ್ಳರ ಗುಣ ಸಹ. ಯಾವುದೆ ಬದ್ಧತೆಯಾಗಲಿ, ಪ್ರಾಮಾಣಿಕ ನಿಷ್ಠೆಯಾಗಲಿ ಇಲ್ಲದಿರುವ ಇವರು ಆ ಕ್ಷಣ ಆಗಬಹುದಾದ ಲಾಭದ ಮೇಲೆ ಮಾತ್ರ ಕಣ್ಣು ಇಟ್ಟಿರುತ್ತರೆ.
 ಯಾವುದೆ ದಢೀರ್ ಉಧ್ಭವ ಮೂರ್ತಿ ಸ್ವಾಮೀಜಿಯೋ, ಇಲ್ಲವೆ ಅರ್ಧರಾತ್ರಿಯಲ್ಲಿ ಹಣ ಹಂಚಿ ಹೆಸರುವಾಸಿಯಾದ ರಾಜಕಾರಣಿಯೋ ಪಡೆವ ಹಿಂಬಾಲಕರ ಗುಣಲಕ್ಷಣಗಳು ಇಂತದ್ದೆ. ಅವರಲ್ಲಿ ಅವಕಾಶವಾದದ ಪರಮಾವಧಿ ಸದಾ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿರುತ್ತದೆಯೆ ಹೊರತು ಯಾವುದೆ ಆದರ್ಶ ಅಥವಾ ಆತ್ಮ ಸಮರ್ಪಣೆಯ ಧ್ಯೇಯೋದ್ದೇಶಗಳಲ್ಲ. ಅಂತವರ ಬಗ್ಗೆ ಸದಾ ಎಚ್ಚರವಾಗಿರುವುದು ಉತ್ತಮ ಎನ್ನುವ ಪರೋಕ್ಷ ಎಚ್ಚರಿಕೆ ಕೊಡುತ್ತದೆ ಈ ಗಾದೆಯ ವಾಚ್ಯಾರ್ಥ. "ಸಂತೆಯಲ್ಲಿ ಗಂಟುಕಳ್ಳರು" ಎನ್ನುವ ಕನ್ನಡದ ನುಡಿಗಟ್ಟಿನ ಅರ್ಥವೂ ಅದೆ.}


 ( ಅರಿ ಬಾರ್ ಇತ್ತುನೌಲು ಎಲಿ ಪೆರ್ಗುಡೆಲ್ ಕಮ್ಮಿಯೋ? = ಅಕ್ಕಿ ಭತ್ತ ಇರುವಲ್ಲಿ ಇಲಿ ಹೆಗ್ಗಣಗಳು ಕಡಿಮೆಯಾ?.)

No comments: