27 February 2013

ತುಳುಗಾದೆ-೨೯






  "ಪಿಲಿತ್ತ ಕುಂಞಿ ನಾಕ್ ಆಂಡ ದಾನೆ? ಬೋರಿ ಆಂಡ ದಾನೆ?"


 { ಸಂಬಂಧವಿಲ್ಲದ ವಿಷಯವನ್ನ ಪ್ರಸ್ತಾವಿಸುವಾಗ ಹೇಳಲಾಗುವ ಮಾತಿದು. ಉಪಯೋಗಕ್ಕೆ ಬಾರದ ಸಂಗತಿಗಳು ಪ್ರಪಂಚದಲ್ಲಿ ನಿತ್ಯ ನೂರು ಘಟಿಸುತ್ತವೆ. ಅವೆಲ್ಲವೂ ಧರೆಯ ಮೇಲಿರುವ ಪ್ರತಿಯೊಬ್ಬರಿಗೂ ಅಗತ್ಯವಾದುದೇನೂ ಆಗಿರಲಾರದು. ಯಾವುದೆ ರೀತಿಯಲ್ಲಿ ನಮ್ಮನ್ನ ಪ್ರಭಾವಿಸದ ಪರೋಕ್ಷ ಸಂಗತಿಗಳ ಪ್ರಸ್ತಾಪ ಮನೆಯ ಮಾತುಕಥೆಯಲ್ಲಿ ಎದ್ದಾಗ ಸಾಮಾನ್ಯವಾಗಿ ಮೇಲಿನ ಮಾತನ್ನ ಹೇಳಿ ಅತ್ಯುತ್ಸಾಹದಿಂದ ಆ ಸಂಗತಿಯ ಗಂಟು ಬಿಚ್ಚಲು ರಣೋತ್ಸಾಹದಿಂದ ಹೊರಟವರ ಗಂಟಲನ್ನ ಸಾಮಾನ್ಯವಾಗಿ ಮುಚ್ಚಿಸಲಾಗುತ್ತದೆ.


 ಹುಲಿಯೊಂದು ಕಾಡಿನಲ್ಲಿ ಮರಿಯಿಟ್ಟಿತಂತೆ. ಆ ಮರಿಗಳು ಹೆಣ್ಣಾದರೂ ಸರಿ ಗಂಡಾದರೂ ಸರಿ ನಾಮಾನ್ಯ ರೈತಾಪಿಯ ಪಾಲಿಗೆ ಎರಡೂ ಸಹ ಒಂದೆ! ಹುಲಿಮರಿಗಳು ಹೆಣ್ಣಾದ ಮಾತ್ರಕ್ಕೆ ಅವನ್ನ ತಂದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಹಾಲು ಕರೆಯುವಂತಿಲ್ಲ! ಗಂಡಾದ ಮಾತ್ರಕ್ಕೆ ಹಿಡಿಸಿತಂದು ಬೀಜ ಒಡೆಸಿ ಲಾಳ ಕಟ್ಟಿಸಿ ಗದ್ದೆ ಹೂಡಲು ನೇಗಿಲಿಗೆ ಜೊತೆಯಾಗಿ ಕಟ್ಟುವುದೂ ಸಹ ಅಸಾಧ್ಯ!! ಅದೃಷ್ಟಕ್ಕೆ ಬೆಂಕಿ ಬಿದ್ದರೆ ಮುಂದೊಮ್ಮೆ ಬೆಳೆದು ದೊಡ್ಡವಾದ ಮೇಲೆ ಹಾದಿತಪ್ಪಿ ಬೇಟೆಯನ್ನರಸಿ ಹಸಿವಿನಿಂದ ಕೆಂಗೆಟ್ಟರವು ತನ್ನ ಕರಾವಿನ ಕೊಟ್ಟಿಗೆಗೆ ಧಾಳಿಯಿಟ್ಟರೆ ತಾನೆ ಕೆಡಬೇಕಾದೀತು. ಹುಲಿ ಮರಿಗಳ ಲಿಂಗ ಕಟ್ಟಿಕೊಂಡು ನಮಗೇನೆನ್ನುವ ದುಡಿಯುವ ವರ್ಗದ ನಿಷ್ಠುರ ನುಡಿಯಿದರ ಹಿಂದಿದೆ.



 ಅಂದಿನ ಅನ್ನ ಅಂದೆ ದುಡಿಯುವ ಅನಿವಾರ್ಯತೆಯುಳ್ಳ ಬಡ ವರ್ಗದ ಮಂದಿಗೆ ಈ ಕೆಲಸಕ್ಕೆ ಬಾರದ ಸಂಗತಿಗಳು ಅನ್ಗತ್ಯವಾಗಿ ಕಾಣುತ್ತವೆ. ಅಲ್ಲೆಲ್ಲೋ ಜಪಾನಿನ ಮೇಲೆ ಅದ್ಯಾವುದೋ ಅಮೇರಿಕ ಅಣುಬಾಂಬ್ ಒಗೆದರೆ ತನಗದರಿಂದೇನು? ಅನ್ನುವ ಲೆಕ್ಕಾಚಾರದ ಬುಡದಿಂದ ಹುಟ್ಟಿದ ಆಲೋಚನೆಯ ಮೊಳಕೆಯಿದು. ಅಂದಹಾಗೆ 'ನಾಕ್' ಎಂದರೆ ತುಳುವಿನಲ್ಲಿ ಹೆಣ್ಣುಕರು ಅಥವಾ ದನ, ಬೋರಿಯೆಂದರೆ ಗಂಡುಕರು ಅಥವಾ ಎತ್ತು.}


 ( ಪಿಲಿತ್ತ ಕುಂಞಿ ನಾಕ್ ಆಂಡ ದಾನೆ? ಬೋರಿ ಆಂಡ ದಾನೆ? = ಹುಲಿಯ ಮರಿ ಹೆಣ್ಗರಾದರೇನು? ಗಂಡ್ಗರಾದರೇನು? )

No comments: