12 February 2013

ಎಂಡಿಎನ್ ನೆನಪಿನಲ್ಲಿ....


ದೇಶವನ್ನ ಕಂಡ ಕಂಡ ಹರಾಮಿಗಳೆಲ್ಲ ತಮ್ಮಪ್ಪನ ಮನೆಯ ಪಿತ್ರಾರ್ಜಿತ ಆಸ್ತಿಯೇನೋ ಎಂಬಂತೆ ಮನಸೋ ಇಚ್ಛೆ ವ್ಯವಸ್ಥಿತವಾಗಿ ಸರಕಾರ ಎನ್ನುವ ಸಂಘಟನೆ ಕಟ್ಟಿಕೊಂಡು ನಿರಂತರವಾಗಿ ಸುಲಿಯುತ್ತಿದ್ದಾರೆ. ನ್ಯಾಷನಲ್ ಲೆವೆಲ್ಲಿನಲ್ಲಿ ದೇಶದ ತಿಜೋರಿ ಕಾಯುವ ಹೊಣೆ ಹೊತ್ತ ಅಡ್ದ ಪಂಚೆಯುಟ್ಟ ಅಡ್ಡ ಕಸುಬಿಯೊಬ್ಬ, ಇಟಾಲಿಯನ್ ಮಾಫಿಯಾ ಡಾನ್ ಒಬ್ಬಳ ಹಿತಾಸಕ್ತಿಯನ್ನ ಕಾಯುತ್ತಾ, ತಾನೂ ಅವಳು ತಿಂದು ಬಿಟ್ಟ ಮೂಳೆಗಳನ್ನ ಚೀಪುತ್ತಾ ದೇಶವನ್ನ ದಿವಾಳಿ ಎಬ್ಬಿಸುತ್ತಿದ್ದಾನೆ. ಈಸ್ಟ್ ಇಂಡಿಯಾ ಕಂಪನಿ ಅನಂತರ ಬ್ರಿಟಿಷ್ ಸರಕಾರ ಹೀಗೆ ತಮಗೆ ಗೊತ್ತಿಲ್ಲದೆ ತಮ್ಮ ಹಿತಾಸಕ್ತಿಗಳು ಕೈಬದಲಾಗುತ್ತಿದ್ದ ದೊಂಬರ ಕತ್ತೆಯಾಗಿದ್ದ ಭಾರತ, ಈಗ ಪೇಟ ಸುತ್ತಿಕೊಂಡ ಮೌನಿ ಮಾನಗೇಡಿ ಹಾಗೂ ಆತನನ್ನ ಆಡಿಸುವ ಬೊಂಬೆಯಾಡಿಸುವ ದೇಶವನ್ನೆ ಖಾಸಗಿ ಜಹಗೀರು ಮಾಡಿಕೊಂಡಿರುವ 'ಗಾದಿ' ಗುತ್ತಿಗೆ ಹಿಡಿದ ಮಂದಿಯ ಕೃಪೆಯಿಂದ ಮತ್ತೆ ಇನ್ಯಾರದೋ ಸೊತ್ತಾಗುತ್ತಿದೆ.



ತಮಾಷೆಯೆಂದರೆ ತಾನು ಹೀಗೆ ಮಾರಾಟವಾಗುತ್ತಿರುವ ಸಂಗತಿ ಇನ್ನೂ ಅದರ ಅರಿವಿಗೆ ಬಂದಿಲ್ಲ. ಖಾಸಗಿಕರಣವೆಂಬ ಇವರಮ್ಮನ ಪಿಂಡದ ಚಾಕೊಲೇಟು ಮುಂದೆ ಚಾಚುವ, ತೋರಿಸಿ ಅದಕ್ಕಾಗಿ ಮುಂಚಾಚುವ ಮುಗ್ಧರ ಇಡಿ ಕೈಯನ್ನೆ ಕಡಿಯುವ ಖದೀಮ ಕಟುಕರ ಹುನ್ನಾರವಿದು. ಈಗ "ವಾಲ್'ಮಾರ್ಟ್"ನ ಗುಲ್ಲೆದ್ದಿದೆ. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಕನಿಷ್ಠ ಹಾನಿ.  ನಿತ್ಯದ ಕನಿಷ್ಠ ಅಗತ್ಯಗಳಾದ ನೀವು ಕುಡಿಯುವ ನೀರು, ಬಳಸುವ ವಿದ್ಯುತ್, ನಡೆಯುವ ದಾರಿ ಇವೆಲ್ಲವೂ ಅಮೇರಿಕಾ ದೈತ್ಯರ ವಶವಾಗಿ ಹೋಗಿವೆ. ನಾವು ನೀವು ಉಸಿರಾಡುವ ಗಾಳಿಗೆ ಯಾವಾಗ ಈ ದೊಣೆ ನಾಯಕರು ಕರ ನಿಗದಿ ಮಾಡುತ್ತಾರೊ ಗೊತ್ತಿಲ್ಲ! ಅವರು ಒಮ್ಮೆಲೆ ವಸೂಲಿಯ ಇಕ್ಕಳ ಹಿಡಿದು ಎಲ್ಲರ ಬೀಜ ಒಡೆಯಲು ಬರುವವರೆಗೂ ಯಾರಿಗೂ ಇದು ಅರ್ಥವಾಗದು.


 ಎಲ್ಲಾ ಸಬ್ಸಿಡಿಗಳಿಗೂ ಆಧಾರ್ ಕಾರ್ಡ್ ಖಡ್ಡಾಯ ಮಾಡಿರುವುದು ಅದರ ಮೊದಲ ಹಂತವಷ್ಟೆ, ಮುಂದೈತೆ ತಾಳಿ ಮಾಂಕಾಳಿ ಜಾತ್ರೆ. ಕಳೆದ ಶತಮಾನದ ಅಂತ್ಯದಲ್ಲಿ ಕೆಎಫ್'ಸಿ ಹಾಗೂ ಮ್ಯಾಕ್ ಡೊನಾಲ್ಡ್ ಹೆಸರಿನಲ್ಲಿ ದೇಶ ದೋಚುವುದಕ್ಕೆ ಹೊರಟವರ ಕೊಳ್ಳೆಕೋರರ ಜೋಪಡಿಗಳು ಮೊದಲಿಗೆ ನಮ್ಮಲ್ಲಿ ತಲೆ ಎತ್ತಿದಾಗಲೆ ಪ್ರತಿಭಟನೆ ತೀವೃವಾಗಿದ್ದಿದ್ದರೆ ಬಹುಶಃ ಈ ಹರಾಮಿಗಳಿಗೆ ಇಷ್ಟು ಮುಂದುವರೆಯುವ ಧೈರ್ಯ ಹುಟ್ಟುತ್ತಿರಲಿಲ್ಲ ಅನ್ನಿಸುತ್ತೆ. ಈಗ ತೂಬು ಒಡೆದು ಹೋಗಿದೆ. ದೇಶದ ಕೆರೆಯಲ್ಲಿ ಇನ್ನು ನೀರು ನಿಲ್ಲುವುದು ಕಷ್ಟ.



ಹಾಗಂತ ದೇಶಭಕ್ತ ಕ"ಮಲ" ಪಕ್ಷದ ಕೊರಮರೇನೂ "ಸಾದಾ ವತ್ಸಲೆ"ಯಾದ ಅವರ ಮಾತೃಭೂಮಿಯಾಗಿರುವ ಈ ದೇಶಕ್ಕೆ ಕನಕಾಭಿಷೇಕ ಮಾಡಿಸಿರಲಿಲ್ಲ. ಆ ಹುಟ್ಟು ದರೋಡೆಕೋರರು ದೇಶದ ಮೇಲೆ ಸುರಿದದ್ದೂ ಕೂಡ ಇಂತಹ ಅಡವಿನ ನಾತದ ಮಲವನ್ನೆ. ಸಾಲದ್ದಕ್ಕೆ ದೇಶದ ಒಡಲನ್ನೆ ಬಗೆಬಗೆದು ಮಾರಿ ತಮ್ಮ ಕಳ್ಳ ತಿಜೋರಿ ತುಂಬಿಕೊಂಡ ಹರಾಮನ ಸಂತಾನ ಇವರದ್ದು. ಒಟ್ಟಿನಲ್ಲಿ ಇಲ್ಲಿ ಪಕ್ಷ, ಪ್ರದೇಶದ ಪ್ರಶ್ನೆ ಬರುವುದಿಲ್ಲ. "ರಾಜಕಾರಣಿ" ಅನ್ನುವ ವಿಶೇಷ ತಳಿಯ ಗುಳ್ಳೆನರಿಗಳಿವು. ಕಡೆಯ ಕಿರುಮೂಳೆಗಳನ್ನೂ ಕಡಿದು -ಚೀಪಿ ಮುಗಿಯುವ ತನಕ ಈ ಹಸಿವು ಬಾಕ ತೋಳಗಳು ಊಟ ಬಿಟ್ಟು ಏಳುವ ಯಾವುದೆ ಲಕ್ಷಣಗಳಿಲ್ಲ.



 ಗಮನಿಸಿ ನೋಡಿ ಬೇಕಿದ್ದರೆ ಈ ಅಮೇರಿಕನ್ ದಾಭಾಗಳೆಲ್ಲ ನಮ್ಮ ಎಳೆಯರು ಓದುವ ಶಾಲಾ ಕಾಲೇಜುಗಳ ಆಸುಪಾಸಿನಲ್ಲೆ ಇವೆ! ಮೊದಲಿಗೆ ಎಳೆಯರ ರುಚಿ ಮೊಗ್ಗನ್ನ ಸಾಣೆ ಹಿಡಿದು ಅವರನ್ನ ತಮ್ಮ ರುಚಿಗೆ ದಾಸರನ್ನಾಗಿ ಮಾಡಿಕೊಳ್ಳುವ ಆರಂಭಿಕ ಮೆಟ್ಟಿಲವು. ಇಂತಹ ಕೋಳಿಯಂಗಡಿಯೊಂದಕ್ಕೆ ಇಪ್ಪತ್ತು ವರ್ಷಗಳ ಹಿಂದೆ ಮುಲಾಜಿಲ್ಲದೆ ಕಲ್ಲೆಸೆದು ನಮಗೆಲ್ಲ ಎಚ್ಚರಿಕೆಯ ಸೂಚನೆ ಕೊಟ್ಟಿದ್ದ ಪ್ರೊ, ಎಂ ಡಿ ನಂಜುಂಡಸ್ವಾಮಿ ಈ ಹೊತ್ತಿನಲ್ಲಿ ನೆನಪಾಗುತ್ತಾರೆ. ಅವರಿದ್ದಿದ್ದರೆ ಬೇರೊಂದು ತರದಲ್ಲಿ ಹೊಸತಾಗಿ ಪ್ರತಿಭಟನೆಯನ್ನ ಸಂಘಟಿಸುತ್ತಿದ್ದರೇನೋ! ಅಂದಹಾಗೆ ಇವತ್ತು ಅವರ ಜನ್ಮದಿನ. ಕನಿಷ್ಠ ಇವತ್ತಾದರು ಅವರನ್ನ ನೆನಪಿಸಿಕೊಳ್ಳದಿದ್ದರೆ ಹೇಗೆ? ಮತ್ತೊಬ್ಬ ಎಂಡಿಎನ್ ತುರ್ತಾಗಿ ಈ ದುರ್ಭಾಗ್ಯಕ್ಕೀಡಾಗಿರುವ ದೇಶದ ಮಾನವನ್ನುಳಿಸಲು ಬರಬೇಕಿದೆ.

( ಎಂ ಡಿ ಎನ್ ಸಂದರ್ಶನದ ತುಣುಕಿದು, ಆಸಕ್ತರಿಗಾಗಿ. http://www.youtube.com/watch?v=JpgrFcTrvNU )



No comments: