"ಒಣಸ್ ಸಟ್ಯಂಡ ಬಜಿ ದಿನ ಸೆಟ್ಯಂಡ್, ಬುಡೆದಿ ಸೆಟ್ಯಳಂಡ ಪೂರ ಜನ್ಮೊ ಸೆಟ್ಯಂಡ್"
{ ಬಾಳು ಅದೆಷ್ಟೆ ಕಿರಿದಾಗಿ ಮೇಲ್ನೋಟಕ್ಕೆ ಕಂಡರೂ ಸಹ ಅದು ಅನುಭವಿಸುವವರಿಗೆ ಸುದೀರ್ಘ ಪಯಣವಾಗಿರುತ್ತದೆ. ಅರಿತು ಜೊತೆಜೊತೆಗೆ ಬಾಳುವ ಸಂಗಾತಿ ಸಿಗದಿದ್ದ ಪಕ್ಷದಲ್ಲಿ ಬಾಳು ಗೋಳಾಗಿ ಪರಿವರ್ತನೆಯಾಗುವುದು ಸಹಜ. ಇದನ್ನೆ ವಿವೇಕವನ್ನಾಗಿ ಹೇಳುವ ಉಮೇದಿರುವ ಗಾದೆಯಿದು.
ಊಟ ಕೆಲವೊಮ್ಮೆ ಕಾರಣಾಂತರಗಳಿಂದ ಕೆಡುವುದುಂಟು. ಅಡುಗೆ ಮಾಡುವ ಕೈಯ ಮನಸು ಸಿಟ್ಟಾಗಿದ್ದರೆ ಅಡಿ ಹಿಡಿದೋ, ಸುಟ್ಟು ಹೋಗಿಯೋ ಅಡುಗೆ ಕುಲಗೆಟ್ಟು ಹೋಗಬಹುದು. ಅಲ್ಲದೆ ಅಪರೂಪಕ್ಕೆ ಅಡುಗೆಗೆ ಬಳಸುವ ತರಕಾರಿ ಅಥವಾ ಇನ್ನಿತರ ಸಾಮಗ್ರಿ ಹಾಳಾಗಿದ್ದರೂ ಸಹ ಮಾಡಿದ್ದ ಅಡುಗೆ ರುಚಿಗೆಟ್ಟು, ಶೀಘ್ರ ಹಳಸಿಹೋಗಿ ತಿನ್ನಲಾರದ ಸ್ಥಿತಿಗೆ ಮುಟ್ಟಿ ವ್ಯರ್ಥವಾಗಬಹುದು. ಹಾಗೇನಾದರೂ ಆದರೆ ಹಸಿದು ಬಂದ ಹೊಟ್ಟೆಗೆ ಹೊತ್ತಿಗೆ ಸರಿಯಾಗಿ ಅನ್ನ ಕಾಣಲಾಗದೆ ಆಂದಿನ ದಿನ ಮಾತ್ರ ಮಾನಸಿಕ ಕ್ಲೇಷ ಹೆಚ್ಚಿ ಹಾಳಾದ ಹಾಗೆ. ಮರುದಿನ ಅಂದಾದ ತಪ್ಪನ್ನ ಸುಧಾರಿಸಿಕೊಳ್ಳುವ ಅವಕಾಶ ಸದಾ ಇದ್ದೆ ಇರುತ್ತದೆ. ಆದರೆ ಹೆಂಡತಿ ಅಥವಾ ಬಾಳನ್ನ ಜೊತೆಯಲ್ಲೆ ಕಳೆಯಲು ನಿರ್ಧರಿಸಿದ ಜೀವನ ಸಂಗಾತಿ ಮನಸು ಕೆಡಿಸಿಕೊಂಡು ಮುನಿಸಿನಿಂದ ಸೆಟಗೊಂಡರೆ ಮಾತ್ರ ಇಡಿ ಜನ್ಮವೆ ಹಾಳಾಗುತ್ತದಂತೆ.
ಹೊರಗೆ ಸಿಗಲಾರದ ನೆಮ್ಮದಿಯನ್ನ ಎಲ್ಲರೂ ಹುಡುಕುವ ಒಂದೆ ಒಂದು ಸ್ಥಳ ಮನೆ. ಇಲ್ಲಿಯೂ ನಗುಮೊಗದ ಸ್ವಾಗತ ದೊರೆಯದೆ ನೆಮ್ಮದಿ ಮರೀಚಿಕೆಯಾದರೆ ಬಾಳು ಭೂಮಿಯ ಮೇಲೆಯೆ ನರಕವಾಗುವುದು ಶತಃಸಿದ್ಧ. ಹಾಗಾಗದಂತೆ ಹೊಂದಾಣಿಕೆಯಿಂದ ಅನುಸರಿಸಿಕೊಂಡು ಬಾಳಿನ ಕಡಲಿನಲ್ಲಿ ಖುಷಿಯ ಕೈದೋಣಿಯ ಹುಟ್ಟು ಹಾಕಬೇಕೆಂದು ಬುದ್ಧಿ ಹೇಳುತ್ತದೆ ಈ ಗಾದೆಯ ವಾಚ್ಯಾರ್ಥ.)
( ಒಣಸ್ ಸಟ್ಯಂಡ ಬಜಿ ದಿನ ಸೆಟ್ಯಂಡ್, ಬುಡೆದಿ ಸೆಟ್ಯಳಂಡ ಪೂರ ಜನ್ಮೊ ಸೆಟ್ಯಂಡ್ = ಊಟ ಕೆಟ್ಟರೆ ಬರಿ ದಿವಸ ಕೆಟ್ಟೀತು, ಹೆಂಡತಿ ಸಿಟ್ಟಲ್ಲಿ ಕೆಟ್ಟರೆ ಪೂರ್ತಿ ಜನ್ಮವೆ ಕೆಟ್ಟೀತು.)
No comments:
Post a Comment