14 February 2013
ತುಳುಗಾದೆ-೧೬
"ಕಡಲ್ಡ್ ಏತ್ ನೀರ್ ದಿಂಜುಡಿತ್ತುಂಡಲಾ, ನಮ ಗಿಂಡಿಡ್ ಪತ್ತುನಾತೆ ಕೊಣತು ಬರೋಳಿ!"
{ ಆಸೆ ಮನುಷ್ಯ ಪ್ರಾಣಿಯ ಸಹಜ ಗುಣ. ಆದರೆ ಅತ್ಯಾಸೆಯ ದುರಾದೃಷ್ಟಕರ ಗುಣ ಕೆಲವರಲ್ಲಿ ಧಾರಾಳವಾಗಿರುವುದೂ ಉಂಟು. ಅಂತಹ ದುರಾತ್ಮರಿಗೆ ವಿವೇಕ ಹೇಳುವ ಪ್ರಯತ್ನ ಮಾಡುತ್ತದೆ ಈ ಗಾದೆ. ಯಾರಿಗೆ, ಯಾವಾಗ, ಎಷ್ಟು ಸಿಕ್ಕಬೇಕು ಅಂತ ಅವರ ಭಾಗ್ಯದಲ್ಲಿ ಬರೆದಿದೆಯೋ ಅದಷ್ಟು ತಪ್ಪದೆ ಅವರ ಕೈ ಸೇರಿಯೇ ಸೇರುತ್ತದೆ ಎನ್ನುವುದು ಸನಾತನ ಆಚರಣೆಗಳನ್ನ ಗಾಢವಾಗಿ ನಂಬುವ ನಮ್ಮ ದೇಶದ ಆರ್ಷೇಯ ನಂಬಿಕೆಗಳಲ್ಲೊಂದು.
ಇದು ವಿದ್ಯೆ, ಕೌಟುಂಬಿಕ ಪ್ರೀತಿ, ಯಶಸ್ಸು, ಶಾಂತಿ ಹಾಗು ಸಂಪತ್ತು ಇವೆಲ್ಲದ್ದಕ್ಕೂ ಸರಿಯಾಗಿ ಅನ್ವಯಿಸುತ್ತದೆ. ಮೇಲಿನ ಎಲ್ಲವೂ ಎಂದಿಗೂ ಬತ್ತಲಾಗದ ಕಡಲಿಗೆ ಸಮ. ಅದನ್ನ ನಾವು ಕಣ್ಣರಳಿಸಿ ಕಾಣ ಬಹುದಷ್ಟೆ ಹೊರತು ಇಡಿ ಕಡಲೆ ನನ್ನದಾಗಲಿ ಎನ್ನುವ ದುರಾಸೆ ಪಡಕೂಡದು. ಕದಲಿನ ತೀರಕ್ಕೆ ಹೋದವ ತನ್ನ ಕೈಯಲ್ಲಿರುವ ಚೊಂಬಿನಿಂದ ಅದರಲ್ಲಿ ತುಂಬುವಷ್ಟೆ ನೀರನ್ನ ಮೊಗೆದು ತರಲಾಗುವುದು, ಇಡಿ ಕಡಲನ್ನ ಖಂಡಿತ ಅಲ್ಲ. ಅಂತೆಯೆ ಈ ಎಲ್ಲಾ ಭಾಗ್ಯಗಳೂ ಪ್ರತಿಯೊಬ್ಬರ ಪಾಲಿಗೆ ಅನ್ನುವ ವಾಚ್ಯಾರ್ಥ ಈ ಗಾದೆಯದ್ದು.
ಇದರ ಅರಿವಿದ್ದೂ ಅಥವಾ ಅರಿವಿರದೆಯೋ ಕೆಲವು ಕೊರಮರು ದುರಾಸೆಯಿಂದ ಸಿಕ್ಕಿದ್ದನ್ನೆಲ್ಲ ಯೋಗ್ಯತೆ ಮೀರಿ ದೋಚುವ ಹುನ್ನಾರಕ್ಕಿಳಿಯುತ್ತಾರೆ. ಉದಾಹರಣೆಗೆ ನಮ್ಮ ಆಳುವ ಮಂದಿಯನ್ನೆ ತೆಗೆದು ಕೊಳ್ಳಿ. ನಾಡನ್ನ ದೋಚಿದ ಅವರ ಅಕ್ರಮ ಸಂಪತ್ತು ಅವರ ಹತ್ತು ತಲೆಮಾರಿಗೆ ಕೂತು ಉಂಡರೂ ಸಾಕಾಗಿ ಉಳಿಯುವಷ್ಟಾಗಿದ್ದರೂ ಅವರ ದ್ರವ್ಯ ದಾಹಕ್ಕೆ ಮಿತಿಯೆ ಇರುವುದಿಲ್ಲ. ಸತ್ತರೆ ಅವರ ಹೆಣವನ್ನ ಪೂರ್ತಿ ಹಣದ ಕಟ್ಟಿನಲ್ಲಿಯೆ ಸುಟ್ತು ಬೂದಿ ಮಾಡುವಷ್ಟು ಆಗಲೆ ದೋಚಿ ಮುಗಿದಿದ್ದರೂ ಮತ್ತಷ್ಟು ಮೊಗೆದು ಲಪಟಾಯಿಸುವ ಅವರ ಅತಿಯಾಸೆಗೆ ಕೊನೆ ಮೊದಲಿರುವುದಿಲ್ಲ. ಆದರೆ ಕಡೆಗೂ ಆ ಅಕ್ರಮ ಗಳಿಕೆಗಳೆಲ್ಲ ನಾಯಿ ನರಿ ಪಾಲಾಗಿ ಅವರಿಗೆ ತಮ್ಮ ಹಣೆಯಲ್ಲಿ ಬರೆದಿರುವಷ್ಟೆ ದಕ್ಕುವುದು ಖಾತ್ರಿ ಅನ್ನುತ್ತದೆ ಈ ವಿವೇಕಪೂರ್ಣ ಗಾದೆ.}
( ಕಡಲ್ಡ್ ಏತ್ ನೀರ್ ದಿಂಜುಡಿತ್ತುಂಡಲಾ, ನಮ ಗಿಂಡಿಡ್ ಪತ್ತುನಾತೆ ಕೊಣತು ಬರೋಳಿ! = ಸಮುದ್ರದಲ್ಲಿ ಎಷ್ಟು ನೀರು ತುಂಬಿದ್ದರೂ, ನಮ್ಮ ಚೊಂಬಿನಲ್ಲಿ ತುಂಬುವಷ್ಟನ್ನೆ ಕೊಂಡು ಬರಬಹುದು.)
Subscribe to:
Post Comments (Atom)
No comments:
Post a Comment