18 February 2013

ತುಳುಗಾದೆ-೨೦





 "ನೀರ್'ದ ಮಿತ್'ದ ಕೋಪೊಡು ಪೀಂಕನ್ ದೆಕ್ಕುಜಿಡ ನಾದುನೇರೆಗ್?"


 { ಹಟ, ಗಾಳಿಯೊಂದಿಗೆ ಗುದ್ದಾಡುವ ಉತ್ಸಾಹ, ಫಲವಿಲ್ಲದ ದ್ವೇಷಗಳನ್ನ ಸಾಧಿಸುವ ಉಮೇದುಳ್ಳವರನ್ನ ಹಂಗಿಸಲು ಬಳಸುವ ಗಾದೆಯಿದು. ಹೆಚ್ಚಾಗಿ ಹಟದಲ್ಲಿ ರಚ್ಚೆ ಹಿಡಿಯುವ ಬಾಲರಿಗೆ, ರೊಚ್ಚಿನ ಹಟ ಸಾಧಿಸುವ ಬೆಳೆದ ಬಾಲವಿಲ್ಲದವರಿಗೆ ಬೈಯುವಾಗ ಈ ಗಾದೆಯನ್ನ ಹೇಳಲಾಗುತ್ತದೆ. ನೀರಿನ ಮೇಲೆ ಕೋಪಗೊಂಡವರ್ಯಾರೋ ಹೇತ ನಂತರ ಕುಂಡೆಯನ್ನ ತೊಳೆದುಕೊಳ್ಳದೆ ಮೇಲೆದ್ದರಂತೆ! ಆದರೆ ನೀರಿಗೆ ಅದರಿಂದೇನೂ ನಷ್ಟವಾಗಲಿಲ್ಲ. ಹೇಸಿಗೆಯಾಗಿ ನಾತದ್ದು ಕೋಪಗೊಂಡವರ ಕುಂಡೆಯೆ. ಹೀಗಾಗಿ ವ್ಯವಧಾನವಿಲ್ಲದೆ ಹಟ ಸಾಧಿಸಬಾರದು ಎನ್ನುತ್ತದೆ ಈ ಗಾದೆ.



 ಸಾಮಾನ್ಯವಾಗಿ ಹಿರಿಯರು ಬೈದರೆಂದು ಮಕ್ಕಳು ಊಟ ಬಿಟ್ಟು ಹೆದರಿಸುವುದುಂಟು. ನನ್ನ ಬಾಲ್ಯದಲ್ಲಿ ನಾನು ಈ ಅಸ್ತ್ರವನ್ನ ಮನೆಯಲ್ಲಿ ತಪ್ಪದೆ ಪ್ರಯೋಗಿಸುತ್ತಿದ್ದೆ. ಆದರೆ ಅದೆ ಆಮೇಲಾಮೇಲೆ ನನಗೆ ತಿರುಗು ಬಾಣವಾಯಿತು! ನಾನು ಉಣ್ಣದಿದ್ದರೆ ಅನ್ನಕ್ಕೇನೂ ನಷ್ಟವಾಗುತ್ತಿರಲಿಲ್ಲ. ಹಸಿವಿನಿಂದ ರಾತ್ರಿಯಿಡಿ ನನ್ನ ಹೊಟ್ಟೆಯೆ ಚುರುಗುಡುತ್ತಿತ್ತು. ಸಾಲದ್ದಕ್ಕೆ ಗಾಯದ ಮೇಲೆ ಬರೆಯೆಳೆದಂತೆ ಮನೆಯ ಹಿರಿಯರು ತಾವು ನನ್ನ ಕರೆವ ಶಾಸ್ತ್ರ ಮಾಡಿ ಬರದಿದ್ದಾಗ ತಾವು ಮುಲಾಜಿಲ್ಲದೆ ಉಂಡು ಮಲಗಿ ನನ್ನನ್ನ, ನನ್ನ ಹಟವನ್ನ ಹಾಸ್ಯ ಮಾಡುವಂತೆ ಗೊರಕೆ ಹೊಡೆಯುತ್ತಿದ್ದರು. ಮನೆಯಲ್ಲಿ ಹೆತ್ತವರ ಮೇಲೆ ಸಿಟ್ಟು ಮಾಡಿಕೊಂಡು ಪರೀಕ್ಷೆಗೆ ಸರಿಯಾಗಿ ಓದದೆ ಮರುದಿನ ನಾನೆ ಪರೀಕ್ಷೆ ಎದುರಿಸುವಾಗ ಕಕ್ಕಾಬಿಕ್ಕಿಯಾಗಿ ಪಡಬಾರದ ಪಾಡು ಪಟ್ಟಿದ್ದೂ ಇದೆ! 



ಹಾಗೆಯೆ ಕ್ಷುಲ್ಲಕ ಕಾರಣಕ್ಕಾಗಿ ಆತ್ಮೀಯರಲ್ಲಿ ಮುನಿಸಿಕೊಂಡು ಮಾತು ಬಿಡುವ ಮಹಾತ್ಮರಿಗೆ ಈ ಮಾತು ಅನ್ವಯಿಸುತ್ತದೆ. ಬಾಳು ಕಿರಿದು, ಅದರಲ್ಲಿ ಜಗಳವಾಡಲು ಹತ್ತುವರ್ಷ, ದ್ವೇಷ ಸಾಧಿಸಲು ಹತ್ತುವರ್ಷ, ಮಾತು ಮುರಿದುಕೊಂಡಿರಲು ಇನ್ನೊಂದು ಹತ್ತುವರ್ಷ ಖಂಡಿತಾ ನಮ್ಮ ಅಲ್ಪಾವಧಿಯ ಅಮೂಲ್ಯ ಬಾಳಿನಲ್ಲಿ ಖಂಡಿತ ಇಲ್ಲ. ಇದನ್ನರಿಯದ ಮೂಢರು ಸುಮ್ಮನೆ ತಮ್ಮ ನೆಮ್ಮದಿಯನ್ನ ಕೆಡಿಸಿಕೊಂಡು ತಮ್ಮ ಮನಸಿನ ನೆಮ್ಮದಿಗೂ ಕೊಳ್ಳಿಯಿಟ್ಟುಕೊಳ್ಳುತ್ತಾರೆ ಎಂದು ಗೇಲಿ ಮಾಡುತ್ತಲೆ ಎಚ್ಚರಿಸುತ್ತದೆ ಈ ಗಾದೆ. "ಬಡವನ ಕೋಪ ದವಡೆಗೆ ಮೂಲ" ಎನ್ನುವ ಕನ್ನಡದ ಗಾದೆಯೂ ಬಹುಷಃ ಹೇಳುವ ತತ್ವ ಇದೇನೆ.}


 ( ನೀರ್'ದ ಮಿತ್'ದ ಕೋಪೊಡು ಪೀಂಕನ್ ದೆಕ್ಕುಜಿಡ ನಾದುನೇರೆಗ್? = ನೀರ ಮೇಲಿನ ಸಿಟ್ಟಿಗೆ ಕುಂಡೆ ತೊಳೆಯದಿದ್ದರೆ ನಾರುವುದ್ಯಾರಿಗೆ?. )

No comments: