14 February 2013

ತುಳುಗಾದೆ-೧೩


"ಉಣೋಡು ತಿಣೋಡಂಟ ಎರ್ಮೆ ಕಟ್ಟೊಡು, ಕಂಜಿ ಕೈಕಂಜಿ ಬೋಡಂಟ ಪೆತ್ತ ಕಟ್ಟೊಡು." { ಸುಖ ಸಮೃದ್ಧಿಯ ಬಾಳು ಪ್ರತಿಯೊಬ್ಬ ಜೀವಿಯ ಸುಪ್ತ ಆಸೆ. ಅದರ ಕನಸಿನಲ್ಲಿ ಮುಂದಡಿಯಿಡುವ ಮಂದಿಗೆ ಈ ಗಾದೆ ಸರಿಯಾದ ಯೋಚನೆಯಲ್ಲಿ ದೀರ್ಘಕಾಲೀನ ಯೋಜನೆಯನ್ನ ಹಾಕಿಕೊಂಡು ಸಾಗುವಂತೆ ಸಲಹೆ ನೀಡುತ್ತದೆ ಈ ಗಾದೆ. ಉಂಡು ತಿನ್ನಲು ಬೇಕಾದಷ್ಟು ಬಹುಕಾಲ ಬೇಕಿದ್ದಲ್ಲಿ ಎಮ್ಮೆ ಕಟ್ಟಿ ಸಾಕಬೇಕಂತೆ. ಎಮ್ಮೆ ಹನ್ನೆರಡು ತಿಂಗಳ ದೀರ್ಘ ಅವಧಿಯ ಗರ್ಭ ಹೊತ್ತರೂ ಒಮ್ಮೆ ಗಬ್ಬವಾಗಿ ಕರು ಹಾಕಿದ ನಂತರ ಹೆಚ್ಚಿನ ಕಾಲ ಹಾಲು ಕರೆಯುತ್ತದೆ. ದನಕ್ಕೆ ಹೋಲಿಸಿದರೆ ಮಂದವಾಗಿರುವ ಎಮ್ಮೆಯ ಹಾಲಿಗೆ ಬೆಲೆಯೂ ಹೆಚ್ಚು. ಹೀಗಾಗಿ ಹೆಚ್ಚಿನ ಸಂಪಾದನೆ ಹಾಗೂ ಪೌಷ್ಟಿಕತೆಯತ್ತ ಮನಸಿದ್ದವರಾಗಿದ್ದರೆ ಅಂತವರು ಎಮ್ಮೆ ಕಟ್ಟಿ ಸಾಕುವುದು ಒಳಿತು. ಆದರೆ ಎಮ್ಮೆಯ ಹೋಲಿಕೆಯಲ್ಲಿ ದನ ಕಡಿಮೆ ಖರ್ಚಿನ ನಿರ್ವಹಣೆ ಬಯಸುತ್ತದೆ. ಅದರ ಗಬ್ಬದ ಅವಧಿ ಕೇವಲ ಒಂಬತ್ತೆ ತಿಂಗಳು. ಆದರೆ ದನದ ಸಂತಾನ ಶೀಘ್ರವಾಗಿ ಅಭಿವೃದ್ಧಿ ಹೊಂದುವುದು ಹೌದಾಗಿದ್ದರೂ ಅದರ ಕರಾವಿನ ಅವಧಿ ಕಿರಿದು. ಇದು ಕರಾವಿನ ಮೇಲೆ ಅವಲಂಬಿತವಾಗುವ ಯೋಚನೆಯಲ್ಲಿರುವ ಗೌಳಿಗರಿಗೆ ಸೂಕ್ತವಲ್ಲ. ಬೇಗ ಹಟ್ಟಿ ತುಂಬುವ ದನದ ಸಂತಾನ ರೈತಾಪಿಗಳಿಗೆ ಅತ್ಯಾನುಕೂಲ. ಒಂದು ಕಡೆ ಕೃಷಿ ಚಟುವಟಿಕೆಗಳಿಗೆ ಎತ್ತುಗಳು ಲಭ್ಯವಾಗುತ್ತವೆ. ಜೊತೆಗೆ ಹಟ್ಟಿ ತುಂಬುವ ದನದ ಸಂತಾನ ಗೊಬ್ಬರದ ಸಮಸ್ಯೆಗೆ ಸೂಕ್ತ ಉತ್ತರವಾಗಬಲ್ಲದು. ಹೀಗಾಗಿ ಮಾಡ ಬಯಸುವ ಕೆಲಸದ ಫಲಾಪೇಕ್ಷೆಯ ಖಚಿತ ರೂಪುರೇಷೆಯ ಅನುಸಾರ ಹುಷಾರಾಗಿ ಹೆಜ್ಜೆಯಿಡುವಂತೆ ಈ ಗಾದೆ ತನ್ನ ವಾಚ್ಯಾರ್ಥದಲ್ಲಿ ಪ್ರೇರೇಪಿಸುತ್ತದೆ.} ( ಉಣೋಡು ತಿಣೋಡಂಟ ಎರ್ಮೆ ಕಟ್ಟೊಡು, ಕಂಜಿ ಕೈಕಂಜಿ ಬೋಡಂಟ ಪೆತ್ತ ಕಟ್ಟೊಡು. = ಉಂಡು ತಿನ್ನ ಬೇಕಂತಿದ್ದರೆ ಎಮ್ಮೆ ಕಟ್ಟಬೇಕು, ಕರು ಪಶು ಬೇಕಂತಿದ್ದರೆ ದನ ಕಟ್ಟಬೇಕು.)

No comments: