20 February 2013

ತುಳುಗಾದೆ-೨೨





 "ಕಂಜಿದ ಅಂಬಿ ಕಳೊಕ್ಕು ಸುದ್ದ ಅತ್"


 { ಕಳ ಅಂದರೆ ಅಂಗಳ ಹಾಗೂ ಚಾವಡಿಯ ನೆಲವನ್ನ ಈ ಸಿಮೆಂಟು ಅನ್ನುವ ವಿಚಿತ್ರ ವಸ್ತು ತುಳುನಾಡಿಗೆ ಅಡಿಯಿಡುವ ಮೊದಲು ಶುದ್ಧವಾಗಿರಿಸಲು ಬಳಸುತ್ತಿದ್ದ ಮೂಲವಸ್ತು ದನದ ಸಗಣಿ. ಒಂದು ಬಗೆಯ ಕೀಟನಾಶಕದ ಗುಣವನ್ನ ಹೊಂದಿರುವ ಸಗಣಿಯನ್ನ ಕರಿಯೊಂದಿಗೆ ಬೆರೆಸಿ ಮಣ್ಣಿನಿಂದ ಮಾಡಲಾಗುತ್ತಿದ್ದ ಚಾವಡಿಯ ನೆಲದ ಮೇಲೆ ಸಾರಿಸಿ ಅನಂತರ ಅದರ ಮೇಲೆ ಗೇರು ಸಿಪ್ಪೆಯನ್ನ ಸುಟ್ಟು ತೆಗೆದ ಕಪ್ಪೆಣ್ಣೆಯನ್ನ ಹಚ್ಚಿ ಅದರ ಮೇಲೆ ಹೊಳೆ-ತೋಡುಗಳ ದಂಡೆಯಲ್ಲಿ ಸಿಗುವ ನುಣುಪಿನ ಕಲ್ಲುಗಳಲ್ಲಿ ತಿಕ್ಕಿತಿಕ್ಕಿ ಹೊಳೆಯುವ ನಯವಾದ ಕನ್ನಡಿಯಂತಹ ನೀರು ನಿರೋಧಕ ನೆಲವನ್ನ ಸಿದ್ಧ ಪಡಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಅಂಗಳದ ನೆಲಕ್ಕೆ ಕರಿ ಕದಡಿದ ಸಗಣಿಯನ್ನ ಸಾರಿಸಲಾಗುತ್ತಿದ್ದುದು ಹೌದಾದರೂ ಅಲ್ಲಿನ ನೆಲವನ್ನ ನಯಗೊಳಿಸುವ ಕ್ರಮವಿರಲಿಲ್ಲ. ಆಗಾಗ ಅಂಗಳದ ಕಳಕ್ಕೆ ಸಗಣಿ ಸಾರಿಸಿ ಶುದ್ಧಗೊಳಿಸುತ್ತಿದ್ದುದು ವಾಡಿಕೆ.


 ವಿಷಯ ಹೀಗಿದ್ದರೂ ಈ ಶುದ್ಧತೆಗೆ ಬೆಳೆದ ದನದ ಸಗಣಿಯೆ ಸೂಕ್ತ, ಹೊರತು ಅದರ ಕರುವಿನದಲ್ಲ! ಮನುಷ್ಯರಂತೆ ಮಲ ಹಾಕುವ ಕರುವಿನ ಸಗಣಿ ಒಳ್ಳೆಯ ಗೊಬ್ಬರವಾಗಬಲ್ಲದೆ ಹೊರತು ಶುದ್ಧತೆಗೆ ಅನರ್ಹ. ಅಂತೆಯೆ ಹಿರಿಯರ ಮಾತಿನ ನಡುವೆ ಬಾಯಿ ಹಾಕುವ ಪ್ರಾಪ್ತ ವಯಸ್ಕರಲ್ಲದ ಕಿರಿಯರ ನುಡಿಗಳಿಗೂ ಇರಬೇಕಾದ ಬೆಲೆ. ಅದರಲ್ಲಿ ಹುಡುಗುತನವಿರುತ್ತದೆಯೆ ಹೊರತು ಗಹನ ಚಿಂತನೆಯಿಲ್ಲದ ಅನುಭವ ಶೂನ್ಯವಾದ ಮಕ್ಕಳ ಮಾತುಗಳು ಯಾವುದೆ ದೂರದರ್ಶಿತ್ವವನ್ನ ಹೊಂದಿರುವುದು ಸಂಶಯ. ಕರುವಿನ ಮಲದಂತೆ ಕಿರಿಯರ ಮಾತು ಕೂಡ ಕಳದ ಶೋಭೆಗೆ ತಕ್ಕದಾದುದಲ್ಲ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


 ಒಂದೆ ಪದವಾದ ಕಂಜಿ ಅಂದರೆ ಕರುವನ್ನ ದನದ ಕರುವಿಗೂ, ಜನದ ಕರುಗಳಿಗೂ ಅನ್ವಯಿಸಿ ಚತುರವಾಗಿ ಹೇಳುವ ಈ ಗಾದೆ ವಯಸ್ಸಿಗೆ ಇರಬೇಕಾದ ವಿನಯವನ್ನ ನೆನಪಿಸುತ್ತಲೆ ಮನೆಯ ಕಿರಿಯರೆಡೆಗಿನ ಹಿರಿಯರ ಕಟ್ಟುನಿಟ್ಟಿನ ಶಿಸ್ತಿನ ಬೆಳವಣಿಗೆಯ ಬಗ್ಗೆ ಕಿವಿಮಾತು ಹೇಳುತ್ತದೆ.}


 ( ಕಂಜಿದ ಅಂಬಿ ಕಳೊಕ್ಕು ಸುದ್ದ ಅತ್ = ಕರುವಿನ ಸಗಣಿ ಅಂಗಳಕ್ಕೆ ಶುದ್ಧವಲ್ಲ.)

No comments: