"ಏರಿ ತಿಂನ್ತುನಾಯೆ ಮುರು ಮಾರುವೆ, ಬೀಜ ತಿಂನ್ತುನಾಯೆ ಬೋರಿ ಮಾರುವೆ"
{ 'ಏರಿ' ಅನ್ನುವುದು ಒಂದು ಜಾತಿಯ ಮೀನು ಸಮುದ್ರದ ಒಡಲಿಗೆ ಸಿಹಿನೀರ ಒರತೆಯಾದ ನದಿ ಸೇರುವ ಕಡವಿನಲ್ಲಿ ಸಿಗುವ ಈ ತಳಿಯ ಮೀನು ಬಹಳ ರುಚಿಯಂತೆ. ಅದನ್ನೊಮ್ಮೆ ತಿಂದವನ ನಾಲಗೆ ಅದರ ರುಚಿಗೆ ದಾಸಾನುದಾಸನಾಗಿ ಮುಂದೆ ಅದನ್ನ ತಿನ್ನುವ ಅವಕಾಶ ಸಿಗುತ್ತದಂತಾದರೆ ಸಾಲ ಮಾಡಿಯಾದರೂ, ಅದು ಸಿಗದ ಪಕ್ಷದಲ್ಲಿ ತನ್ನ ಕಿವಿಯಲ್ಲಿರುವ ಬಂಗಾರದ ಮುರುವನ್ನಾದರೂ ಮರು ಆಲೋಚಿಸದೆ ಅಡವಿಟ್ಟೋ ಇಲ್ಲವೆ ಮಾರಿಯಾದರೂ ಏರಿಯನ್ನ ಕೊಂಡು ತನ್ನ ನಾಲಗೆ ಚಪಲವನ್ನ ತೀರಿಸಿಕೊಳ್ಳುತ್ತಾನೆ. ಅದರ ರುಚಿಯ ಮೋಡಿ ಅಂತದ್ದು. ತುಳುನಾಡಿನಲ್ಲಿ ಲಿಂಗಬೇಧವಿಲ್ಲದೆ ಎಲ್ಲಾ ಮಕ್ಕಳಿಗೂ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಹೆಣ್ಣು ಮಕ್ಕಳಿಗೆ ಓಲೆಯನ್ನೂ, ಗಂಡು ಮಕ್ಕಳಿಗೆ ಬಂಗಾರದ ಮುರುವನ್ನೂ ಹಾಕುವ ಸಂಪ್ರದಾಯವಿತ್ತು. ಅದನ್ನ ಮಾರಿಕೊಳ್ಳುವುದು ದಿವಾಳಿತನದ ಲಕ್ಷಣ ಎನ್ನುವ ತುಚ್ಛ ಭಾವನೆ ಇದೆ. ಹೀಗಾಗಿ ನಾಲಗೆ ರುಚಿಗೆ ಸೋತ ಮನುಷ್ಯ ಮುರು ಮಾರಲೂ ಹಿಂಜರಿಯಲಾರ ಎನ್ನುವ ವ್ಯಂಗ್ಯ ಇನ್ನುಳಿದ ಎಲ್ಲಾ ಮಾನವ ಸಹಜ ದೌರ್ಬಲ್ಯಗಳಿಗೂ ಅನ್ವಯಿಸಿ ಹೇಳಬಹುದಾಗಿದೆ.
ಅಂತೆಯೆ ತುಳುನಾಡಿನ 'ಗೋಂಕು' ಅಂದರೆ ಕರುನಾಡಿನ 'ಗೇರುಹಣ್ಣು'. ಅದರ ಬೀಜ ತುಳುನಾಡಿನ ಶೈಲಿಯ ಕನ್ನಡದಲ್ಲಿ 'ಗೋವೆ ಬೀಜ'ವೆಂದು ಕರೆಸಿಕೊಳ್ಳುತ್ತದೆ. ದಕ್ಷಿಣ ಅಮೇರಿಕೆ ಮೂಲದ ಗೇರುಬೀಜ ಗೋವೆ ಮಾರ್ಗವಾಗಿ ದೇಶಭ್ರಷ್ಟ ಕೊಂಕಣಿಗರ ಮೂಲಕ ತುಳುನಾಡಿಗೆ ಅಲ್ಲಿಂದ ಮುಂದೆ ಕೇರಳಕ್ಕೆ ಪಸರಿಸಿತು. ಹೀಗಾಗಿ ಅದನ್ನ ತುಳುನಾಡಿನ ಕನ್ನಡಿಗರು 'ಗೋವೆ ಬೀಜ'ವೆಂದು ಕರೆದರು. ಅದರ ಬೀಜವನ್ನ ಅಡುಗೆಗೆ ವಿವಿಧ ಪಲ್ಯಗಳ ತಯಾರಿಯಲ್ಲಿ ಹಸಿಯಾಗಿಯೂ, ಸಿಹಿ ಮತ್ತು ಖಾರದ ತಿಂಡಿಗಳಲ್ಲಿ ಒಣಗಿಸಿಯೂ ಬಳಸಲಾಗುತ್ತದೆ. ರುಚಿಯಲ್ಲಿ ಸರಿಸಾಟಿಯಿಲ್ಲದ ಗೋವೆ ಬೀಜವನ್ನ ಹುರಿದು ಉಪ್ಪು-ಖಾರದ ಪುಡಿ ಬೆರೆಸಿ ಮುಕ್ಕುವವರೂ ಇದ್ದಾರೆ. ಬಹುಶಃ ಅದರ ರುಚಿಗೆ ಮಾರು ಹೋಗದವರು ಯಾರೂ ಇರಲಿಕ್ಕಿಲ್ಲ. ಅದರ ರುಚಿಗೆ ದಾಸನಾದವ ತನ್ನ ಎತ್ತನ್ನ ಮಾರಿಯಾದರೂ ಅದನ್ನ ಕೊಂಡೆ ತೀರುತ್ತಾನಂತೆ. ಭಾರತದ ಇನ್ಯಾವುದೆ ಪ್ರದೇಶದಂತೆ ಕೃಷಿಯನ್ನೆ ಉಸಿರಾಗಿರಿಸಿಕೊಂಡಿರುವ ತುಳುನಾಡಿನ ಕೃಷಿಕ ತನ್ನ ಗದ್ದೆ ಹೂಡುವ ಮೂಲಾಧಾರ ಎತ್ತುಗಳನ್ನೋ, ಇಲ್ಲವೆ ಕೋಣಗಳನ್ನೋ ಬಾಯಿ ಚಪಲಕ್ಕಾಗಿ ಮಾರಿ ಹಾಕಿದನೆಂದರೆ ಅವನಿಗೂ, ಅವನ ಮನೆಯವರಿಗೂ ಮುಂದೆ ಮತ್ತೊಂದು ಜೋಡಿ ಎತ್ತನ್ನ ಹೊಂದಿಸುವವರೆಗೆ ವರ್ಷಪೂರ್ತಿ ಬಾಯಿಗೆ ಮಣ್ಣೆ ಗತಿ! ಒಟ್ಟಿನಲ್ಲಿ ಯಾವುದೆ ಚಟಕ್ಕೆ ದಾಸಾನುದಾಸರಾದ ಮಂದಿ ತಮ್ಮ ಚಟ ತೀರಿಕೆಗೆ ಯಾವ ಮಟ್ಟವನ್ನಾದರೂ ಮುಟ್ಟಿಯಾರು ಎಂದು ಛೇಡಿಸಲು ಈ ಮಾತನ್ನ ತುಳುನಾಡಿನಲ್ಲಿ ಬಳಸಲಾಗುತ್ತದೆ.
ನನ್ನ ಅನುಭವದಲ್ಲಿ ಹೇಳುವುದಾದರೆ ನಾನು ಇಲ್ಲಿಯವರೆಗೆ ತಿಂದ ರುಚಿಯ ಉತ್ತುಂಗದ ತಿನಿಸು "ಕೇವಿಯರ್". ಮೊದಲ ಬಾರಿಗೆ ಇದನ್ನ ಮೆದ್ದುದರ ರುಚಿಗೆ ಮಾರು ಹೋದವ ಇನ್ನೊಂಚೂರು ಕೇವಿಯರ್ ಕರುಣಿಸುವುದಾದರೆ ನಾನು ಪ್ರಯಾಣಿಸುತ್ತಿದ್ದ ಲುಫ್ತಾನ್ಸಾ ಏರ್'ಲೈನ್ಸ್'ನ ಗಗನಸಖಿಯ ಜೀತ ಮಾಡಲೂ ತಯ್ಯಾರಾಗಿದ್ದೆ!. ಇದಾಗಿ ಎಂಟು ತಿಂಗಳಿಗೆ ಬೆಂಗಳೂರಿನ 'ತಾಜ್ ಬೈ ವಿವಂತಾ' ಹೊಟೆಲಿನಲ್ಲಿ ನಡೆದ್ದಿದ್ದ ಪ್ರತಿಷ್ಠಿತ ಪತ್ರಿಕೆಯೊಂದರ ಸಂತೋಷಕೂಟಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ಸಿಕ್ಕಿತಲ್ಲ ಅಪರೂಪಕ್ಕೆ ಅಲ್ಲೂ ಈ ಪಾಪಿ(?) ಕೇವಿಯರ್. ಪ್ರಸಾದದಂತೆ ಬಡಿಸಿದ್ದ ಅದನ್ನ್ನ ಒಂದೆ ಒಂದು ಸೌಟಿನಷ್ಟು ಬಡಿಸಿದ್ದರೂ ಸಾಕಿತ್ತು ಅದಕ್ಕೆ ಬದಲಾಗಿ ಅಲ್ಲಿಯೆ ಬಾಂಡಲೆ ತಿಕ್ಕಿಕೊಂಡು ಕಾಲ ಹಾಕಲೂ ನಾನು ಹಿಂಜರಿಯುತ್ತಿರಲಿಲ್ಲ!!! ಅಷ್ಟು ರುಚಿ ಅದರದ್ದು. ಅಂದ ಹಾಗೆ 'ಕೇವಿಯರ್" ಅಂದರೆ 'ಪಕ್ವವಾಗದ ಸಾಲೊಮನ್ ಮೀನಿನ ಸಂಸ್ಕರಿತ ಮೊಟ್ಟೆಗಳು". ಕಾಸ್ಪಿಯನ್ ಸಮುದ್ರದಲ್ಲಿ ಮಾತ್ರ ಸಿಗುವ ಅವು ನೋಡೊದಕ್ಕೆ ಪಪ್ಪಾಯಿ ಬೀಜಗಳ ತರಹ ಕಾಣ್ತದೆ.}
( ಏರಿ ತಿಂನ್ತುನಾಯೆ ಮುರು ಮಾರುವೆ, ಬೀಜ ತಿಂನ್ತುನಾಯೆ ಬೋರಿ ಮಾರುವೆ = ಏರಿ ತಿಂದವನು ಕಿವಿಯೊಡವೆ ಮಾರುವ, ಗೇರುಬೀಜ ತಿಂದವನು ಎತ್ತನ್ನೆ ಮಾರುವ.)
No comments:
Post a Comment