"ಸೈತಿನ ಕೋರಿಗ್ ಸೂತ ಪೋಡಿಗೆ ಇದ್ದಿ"
{ ಕಷ್ಟ ಬಾಳಲ್ಲಿ ಎಂದಾದರೊಮ್ಮೆ ಬಂದರೆ ಸಮಸ್ಯೆಯಿಲ್ಲ, ಆದರೆ ಪೂರ್ತಿ ಬಾಳೆ ಸಮಸ್ಯೆಗಳ ಆಗರವಾದರೆ! ಅಂತಹವರಿಗೆ ಯೋಚಿಸಿ ಮುಂದಡಿಯಿಡುವುದು ಮೂರ್ಖತನವೆನ್ನಿಸುವ ಸಿನಿಕತನ ಮನಮಾಡಿರುತ್ತದೆ. ಅವರ ಸಂಕಟದ ಬದುಕಿನಲ್ಲಿ ಕೊಂಚ ನೆಮ್ಮದಿಯಾದರೂ ಸಿಗುತ್ತದೆ ಎನ್ನುವ ಭರವಸೆ ದೊರೆತರೆ ಸಾಕು ಅಂತವರು ಯಾವುದೆ ಸಾಧ್ಯತೆಗಳನ್ನೂ ಅದು ಎಷ್ಟೆ ಕ್ಷುಲ್ಲಕವಾಗಿದ್ದರೂ, ಎಷ್ಟೆ ಅಪಾಯಕಾರಿಯಾಗಿದ್ದರೂ ಒಮ್ಮೆ ಅನುಸರಿಸಿ-ಪ್ರಯೋಗಿಸಿ ನೋಡಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಆರೋಗ್ಯ ತೀವೃವಾಗಿ ಹದಗೆಟ್ಟ ವ್ಯಕ್ತಿಗಳಿಗೆ ಯಾವುದಾದರೂ ಒಂದು ವೈದ್ಯ ಪದ್ಧತಿಯಿಂದ ಗುಣಕಾಣದೆ ಹೋದರೆ, ಇನ್ಯಾವುದಾದರೂ ಅನ್ಯ ವೈದ್ಯಪದ್ಧತಿಗಳಿಂದಲೋ ಇಲ್ಲವೆ ನಿರ್ದಿಷ್ಟ ವೈದ್ಯರ ಪರಿಣಾಮಕಾರಿ ಚಿಕಿತ್ಸೆಯಿಂದಲೋ ಅದೂ ಇಲ್ಲದಿದ್ದರೆ ಅದೆಲ್ಲೋ ಏಳು ಸಮುದ್ರದಾಚೆ ಸಿಗುವ ರಾಮಬಾಣದಂತಹ ಔಷಧದ ಬಗ್ಗೆ ಯಾರಾದರೂ ಸಲಹೆ ಕೊಟ್ಟರೆ ಖಂಡಿತ ಅದನ್ನವರು ಗಂಭೀರವಾಗಿ ಪರಿಗಣಿಸುತ್ತಾರೆ ಹಾಗೂ ಆ ಚಿಕಿತ್ಸೆ ದೊರೆಯುವ ಜಾಗ ಅದೆಷ್ಟೆ ದೂರವಾಗಿದ್ದರೂ, ಆ ಚಿಕಿತ್ಸೆ ಅದೆಷ್ಟೆ ದುಬಾರಿಯಾಗಿದ್ದರೂ ಒಮ್ಮೆ ಪ್ರಯೋಗಿಸಿ ನೋಡಿಯೆ ಬಿಡಲು ನಿರ್ಧರಿಸಿ ಕಾರ್ಯಪ್ರವರ್ತನಾಗುತ್ತಾನೆ.
ಅಂತೆಯೆ ಬಾಳಿನಲ್ಲಿ ಸೋತು ಹತಾಶರದ ವ್ಯಕ್ತಿಗಳ ಪಾಡು. ಯಾವೊಂದು ರೀತಿಯಲ್ಲೂ ಗೆಲುವು ಕೈಹಿಡಿಯದಾಗ ಹೇಗಾದರೂ, ಎಲ್ಲಾದರೂ ಗೆಲುವಿನ ಸಮೀಪ ಸುಳಿಯುವ ಅವಕಾಶ ಸಿಗುತ್ತದೆ ಎಂದರೆ ಸಾಕು ಆತ ಎಂತಹ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳಲು ಸಿದ್ಧನಾಗುತ್ತಾನೆ. ಇದು ಜೀವಿಗೆ ಸಹಜ ಪ್ರಾಕೃತಿಕ ಗುಣ. ಅದನ್ನೆ ಈ ಗಾದೆ ಇನ್ನೊಂದು ಉಪಮೆಯಲ್ಲಿ ಹೇಳುತ್ತದೆ.
ತುಳುನಾಡಿನ ಮಾಂಸಹಾರಪ್ರಿಯರ ನೆಚ್ಚಿನ ಖಾದ್ಯ ಕೋಳಿ ಮಾಂಸದಿಂದ ತಯಾರಿಸಿದ್ದು. ಕೋಳಿಯನ್ನ ಕೊಂದು ಮಾಂಸವಾಗಿ ಹದ ಮಾಡುವಾಗ ಎಲ್ಲಕ್ಕೂ ಕೊನೆಯಲ್ಲಿ ಅದರ ಮೈಮೇಲಿರುವ ಕೂದಲುಗಳನ್ನ ಇಲ್ಲವಾಗಿಸಲು ಉರಿವ ಬೆಂಕಿಯ ಜ್ವಾಲೆಗೆ ಆ ಸತ್ತ ಕೋಳಿಯನ್ನ ಒಡ್ಡಿ ಸುಟ್ಟು ಹೆರೆದು ತೆಗೆಯಲಾಗುತ್ತದೆ. ಜೀವಂತವಿರುವಾಗ ಬೆಂಕಿಯನ್ನ ಕಂಡರೆ ಅಂಜುವ ಪ್ರಕೃತಿ ಸಹಜ ಗುಣ ಹೊಂದಿರುವ ಕೋಳಿಗೆ ಸತ್ತ ಮೇಲೆ ಬೆಂಕಿ ಬೆದರಿಕೆಯಲ್ಲ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. "ನೀರಿಗಿಳಿದವರಿಗೆ ಚಳಿಯೇನು? ಮಳೆಯೇನು?" ಅನ್ನುವ ಕನ್ನಡದ ಗಾದೆಯ ಹಿಂದಿರುವ ಅರ್ಥವೂ ಅದೇನೆ.}
( ಸೈತಿನ ಕೋರಿಗ್ ಸೂತ ಪೋಡಿಗೆ ಇದ್ದಿ = ಸತ್ತ ಕೋಳಿಗೆ ಬೆಂಕಿಯ ಹೆದರಿಕೆ ಇಲ್ಲ.)
No comments:
Post a Comment