01 March 2013

ತುಳುಗಾದೆ-೩೧




"ಗಾಡಿಗ್ ಕಟ್ದಿನ ಎರು ಪಡ್ಕೆ ಮೈತಿ ಲೆಕ್ಖೋ"



{ ಕೆಲವೊಮ್ಮೆ ಅನಗತ್ಯ ಹರಟೆಕೋರರ ಹರಕು ಬಾಯಿಗೆ, ಲಂಗು ಲಗಾಮಿಲ್ಲದ ಹರಕು ಬಾಯಿಯ ಬಡಬಡಿಕೆಯನ್ನ ಹೀಯ್ಯಾಳಿಸುವುದಕ್ಕೆ ಬಳಸುವ ವ್ಯಂಗ್ಯದ ಉಪಮೆಯನ್ನ ಹೊತ್ತ ಗಾದೆಯಿದು. ಕೆಲಸಕ್ಕೆ ಬಾರದ, ಲಘುವಾದ, ತೂಕವಿಲ್ಲದ ಹಾಳು ಮೂಳುಗಳನ್ನೆಲ್ಲ ಕಂಡಕಂಡಲ್ಲಿ ಒದರಿ ತಮ್ಮ ತೂಕವನ್ನೂ ಇಳಿಸಿಕೊಂಡು ಸಮಾಜದ ಕಣ್ಣಲ್ಲಿ ಅಲ್ಪರೆನೆಸಿಕೊಳ್ಳುವವರನ್ನ ತಾಳ್ಮೆ ಕಳೆದುಕೊಂಡ ಬಾಯಿಹರುಕರ ಅನಿವಾರ್ಯ ಕೇಳುಗರು ಈ ರೀತಿ ಅವರಿಗೆ ಹೋಲಿಸಿ ಜರೆಯುತ್ತಾರೆ.

ಗಾಡಿಗೆ ಕಟ್ಟಿದ ಎತ್ತಿನ ಜೋಡಿಗೆ ತನ್ನ ಕೆಲಸದ ನೊಗಕ್ಕೆ ಕೊಟ್ಟ ಹೆಗಲಿನಿಂದ ಹೊತ್ತ ಮೂಕಿಯ ಭಾರವನ್ನಿಳಿಸಿ ಕೊಳ್ಳುವತನಕ ದುಡಿವಿರದ ದುಡಿಮೆಯೆ ಗತಿ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಸಗಣಿಯೋ, ಉಚ್ಚೆಯೋ ತುರ್ತಾಗಿ ಬಂದರೂ ಪಕ್ಕಕ್ಕೆ ಹೋಗಿ ಅದನ್ನ ಪೂರೈಸಿಕೊಳ್ಳಲು ಬಿಡುವು ಸಿಗಲಾರದಲ್ಲ. ಕಟ್ಟಿಕೊಂಡು ಬಾಧೆ ಪಡಲು ಮರ್ಯಾದೆಯನ್ನ ನಟಿಸುವ ಮನುಷ್ಯ ಪ್ರಾಣಿಗಳಿಗಿರುವ ಹುಸಿ ಗಾಂಭೀರ್ಯವೂ ಅವಕ್ಕಿಲ್ಲ! ಹೀಗಾಗಿ ಭಾರ ಹೊತ್ತು ಗಾಡಿಯೆಳೆಯುತ್ತಾ ಸಾಗುವಾಗಲೆ ಹಾದಿಯುದ್ದ ತೀರ್ಥದಂತೆ ಮೂತ್ರವನ್ನ, ಪ್ರಸಾದದಂತೆ ಸಗಣೀಯನ್ನ ಇಷ್ಟಿಷ್ಟೆ ಉದುರಿಸಿಕೊಳ್ಳುತ್ತಾ ಎತ್ತಿನ ಜೋಡಿ ಕರ್ತವ್ಯ ಪ್ರಜ್ಞೆ ಮೆರೆಯುತ್ತವೆ! ಆದರೆ ಕಾಡು ಹರಟೆ ಕುಟ್ಟುವ ಸೋಮಾರಿಗಳಿಗೆ ಇಂತಹ ಕರ್ತವ್ಯದ ಭಾರವೇನೂ ಇಲ್ಲದಿದ್ದರೂ ಊರ ಸುದ್ದಿಗೆ ಮತ್ತಷ್ಟು ರಂಗು ತುಂಬುತ್ತಾ ಮನೆಮನೆಯ ಅಂಗಳಕ್ಕವನ್ನ ದಾಟಿಸಿ ಪುಕ್ಕಟೆ ಕೂಳು ಕತ್ತರಿಸಿ ಬರುತ್ತಿದ್ದ ಕಾಲದಲ್ಲಿ ಈ ಹೋಲಿಕೆಯ ಗಾದೆ ಹುಟ್ಟಿರಬಹುದು. ಇಂದಿಗೂ ಹಳ್ಳಿಯ ಪಂಚಾಯ್ತಿ ಕಟ್ಟೆಗಳಲ್ಲಿ, ಬಸ್ಟ್ಯಾಂಡ್ಗಳ ಬಳಿ ಅಥವಾ ನಾಲ್ಕು ಮಂದಿ ಸೇರುವ ತಟ್ಟಿಯ ಚಾಅಂಗಡಿಗಳಲ್ಲಿ ಬಂದವರನ್ನೆಲ್ಲ ಪುಕ್ಕಟೆ ಮನರಂಜಿಸುವ ಇಂತಹ ಒಬ್ಬಿಬ್ಬರಾದರೂ ಬಾಯಿಬುಡುಕ ಸೋಮಾರಿ ಸಿದ್ಧರನ್ನ ಕಾಣಬಹುದು.


ಹೆಚ್ಚಾಗಿ ಈ ಲಕ್ಷಣ ನಮ್ಮ "ಜನಪ್ರಿಯ" ರಾಜಕಾರಣಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಇಲ್ಲವೆ ಪ್ರಚಾರದ ತೆವಲಿಗೆ ಬಿದ್ದ ತೆರೆಯ ಮೇಲಿನ ನಟರು, ಅಗ್ಗದ ಪ್ರಚಾರಪ್ರಿಯ ಮಠಾಧಿಪತಿಗಳು ಈ ಗಾದೆಗೆ ಹೇಳಿ ಮಾಡಿಸಿದಂತೆ ಕಂಡರೆ ನಿಮ್ಮ ದೃಷ್ಟಿ ಇನ್ನೂ ಮಂದವಾಗಿಲ್ಲ ಅಂತಾರ್ಥ! ಕೆಲವರಿಗಂತೂ ಬಡಪಾಯಿ ಮೈಕು ಕೈಗೆ ಸಿಕ್ಕರೆ ಸಾಕು ಒಂದೆ ಸಮ ಪೂರ್ಣವಿರಾಮ, ಕಮ ಒಂದೂ ಇಲ್ಲದ ಓತಪ್ರೋತ ಮಾತಿನ ಬಂಡಿ ಜರುಗಲು ಶುರು. ಇಂತವರಿಗೆ ಗಡಿಯಾರವಲ್ಲ, ದಿನದರ್ಶಿಕೆಯೆ ಮುಂದೊಡ್ಡಿದರೂ ತಮ್ಮ ಬಾಯಿ ಭೈರಿಗೆಯಿಂದ ಕುಯ್ಯುವುದನ್ನ ನಿಲ್ಲಿಸಲಾರರು.}


( ಗಾಡಿಗ್ ಕಟ್ದಿನ ಎರು ಪಡ್ಕೆ ಮೈತಿ ಲೆಕ್ಖೋ = ಗಾಡಿಗೆ ಕಟ್ಟಿದ ಎತ್ತು ಉಚ್ಚೆ ಹೊಯ್ದ ಹಾಗೆ! )



No comments: