19 March 2013

ಹಳೆಯ ನೆನಪುಗಳ ಗುಂಗಿನಲ್ಲಿ.....




ಇತ್ತೀಚಿನ ಕೆಲವು ಸನ್ನಿವೇಶಗಳ ಆಧಾರದಲ್ಲಿ ಹೇಳೋದಾದರೆ ಈ ನಡುವೆ ವಿಪರೀತ ಭಾವುಕನಾಗಿ ವರ್ತಿಸಲಿಕ್ಕೆ ತೊಡಗಿದ್ದೇನೆ ಅಂತ ಅನ್ನಿಸಲಿಕ್ಕೆ ತೊಡಗಿದೆ. ಹಳೆಯ ಕೆಲವು ಹಿತವಾದ ನೆನಪುಗಳು ಮುದಗೊಳ್ಳುವಂತೆ ಮಾಡುತ್ತಲೆ ಅದನ್ನ ಯಾರಲ್ಲಾದರೂ ಹೇಳಿಕೊಳ್ಳುವಾಗ ಅಥವಾ ರಸ್ತೆಯಲ್ಲಿ ಬೈಕೋಡಿಸುವಾಗಲೋ, ಅಡುಗೆ ಮಾಡುವಾಗಲೋ, ಮನೆಯಂಗಳದ ಮಕ್ಕಳಂತ ಪುಟ್ಟಪುಟ್ಟ ಸಸಿಗಳ ದೇಖಾರೇಕಿ ಮಾಡ್ವಾಗಲೋ, ಒಬ್ಬನೆ ಕೂತು ಭಾವುಕ ಗೀತೆಗಳನ್ನ ಆಲಿಸುವಾಗಲೋ ನನ್ನೊಳಗೆ ನಾನು ಗತ ಬಾಳಿನ ಪುಟ ತಿರುಗಿಸಿ ನೊಡುವಾಗ ಕಣ್ಣು ತನ್ನಿಂದ ತಾನೆ ತುಂಬಿ ಬರುತ್ತದೆ. ಸಣ್ಣ ವಯಸ್ಸಿನ ಉತ್ಸಾಹದ ಚಿಲುಮೆಗಳಾದ ಜೀವಂತ ಗೊಂಬೆಗಳಂತಹ ಮಕ್ಕಳನ್ನ ಕಾಣುವಾಗ ಅದೇನೋ ಮಮತೆ ಉಕ್ಕಿ ಬಂದಂತಾಗಿ ಕಣ್ಣೀರು ಬರುವಷ್ಟು ಮನಸ್ಸು ಮಗುವಾಗುತ್ತದೆ. ನಾನು ಕನ್ನಡಕ್ಕೆ ಅನುವಾದಿಸುತ್ತಿರುವ ಪೆಜತ್ತಾಯರ "ವೋಯೇಜ್ ಆಫ್ ಪೇಪರ್ ಬೋಟ್"ನ ಅವರಮ್ಮನ ಬಗೆಗಿನ ಭಾಗವನ್ನ ಅನುವಾದಿಸುವಾಗ, ಅವರ ಮೆಚ್ಚಿನ ಗಿಳಿ ಅವರನ್ನ ವರ್ಷಗಳ ನಂತರ ಗುರುತಿಸಿದ ಭಾಗಗಳನ್ನ ಅಕ್ಷರಗಳಾಗಿಸುವಾಗ ಭಾರವಾದ ಮನಸಿನಿಂದ ಅತ್ತಿದ್ದೇನೆ.



ನನ್ನ ಅಜ್ಜನ ತಮ್ಮ "ಕೊಪ್ಪ ಚಿಕ್ಕಪ್ಪ"ನ ವಿಷಯದಲ್ಲೂ ಮೊನ್ನೆ ಹೀಗೆ ಆಯ್ತು. ನಾನು ಮನೆಯ ಹಿರಿಯ ಮೊಮ್ಮಗ, ಕೊಪ್ಪ ಚಿಕ್ಕಪ್ಪನ ಮೊದಲ ಮೊಮ್ಮಗಳು ಪವಿತ್ರ ನನ್ನಿಂದ ವರ್ಷಕ್ಕೆ ಹಿರಿಯವಳು. ನಾವಿಬ್ಬರು ಬಿಟ್ಟರೆ ಬಹುಷಃ ಈ ಅಣ್ಣ ತಮ್ಮಂದಿರ ಇನ್ಯಾವ ಮೊಮ್ಮಕ್ಕಳಿಗೂ ಕೊಪ್ಪ ಚಿಕ್ಕಪ್ಪನ ಒಡನಾಟ ಲಭ್ಯವಾಗಲಿಲ್ಲ. ಅವರ ಎರಡನೆ ಮಗಳು ಕಾಮಾಕ್ಷಕ್ಕನ ಮಗ ಅಭಿ ಹಾಗೂ ನನ್ನ ಚಿಕ್ಕಮ್ಮನ ಮಗಳು ಹರಿಣಿಗೆ ಅವರು ಎತ್ತಿ ಆಡಿಸಿದ್ದು ನೆನಪಿರಲಾರದಷ್ಟು ಸಣ್ಣ ವಯಸ್ಸು ಅವರು ಸಾಯುವಾಗ. ಪವಿತ್ರ ಅವರನ್ನ ಅಜ್ಜ ಅಂತಲೆ ಕರೆಯುತ್ತಿದ್ದರೂ ನಮ್ಮ ಮನೆಯಲ್ಲಿ ನಾನೊಬ್ಬನೆ ಮೂರನೆ ತಲೆಮಾರಿನವ ಮೊದಲು ಹುಟ್ಟಿದ್ದ ಕಾರಣ ನನ್ನಿಂದ ಚೂರೆಚೂರು ಪ್ರಾಯದಲ್ಲಿ ಹಿರಿಯರಾಗಿದ್ದ ಚಿಕ್ಕಮ್ಮಂದಿರನ್ನ ಹಾಗೂ ಮಾವಂದಿರನ್ನ ಅನುಕರಿಸಿ ಚಿಕ್ಕಪ್ಪ ಅಂತಲೆ ಕಡೆಯವರೆಗೂ ಕರೆಯುತ್ತಿದ್ದೆ. ಅವರು ಕೊಪ್ಪದಲ್ಲಿ ವಾಸವಿದ್ದ ಕಾರಣ ನಮ್ಮ ಪಾಲಿಗವರು "ಕೊಪ್ಪ ಚಿಕ್ಕಪ್ಪ!". ಬೆಳ್ಳನೆ ಹತ್ತಿಯಂತಹ ಕೂದಲ ಚಿಕ್ಕಪ್ಪನ ಮಾತುಗಳೂ ಕೂಡ ಮೃದು, ಅಷ್ಟೆ ಸಿಟ್ಟಿನ  ಮನುಷ್ಯ ಅವರು. "ಶಂಕರ್ ಕಂಪನಿ"ಯ ಜನಪ್ರಿಯ ಬಸ್ ಚಾಲಕರಾಗಿದ್ದ ಕೊಪ್ಪ ಚಿಕ್ಕಪ್ಪ ಕಡೆಯುಸಿರೆಳೆವಾಗಲೂ ತಮ್ಮ ಸ್ಟಿಯರಿಂಗನ್ನ ಕೈಯಲ್ಲಿಯೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅವರ ಬಗ್ಗೆ ನಾನು ನನ್ನ ಬ್ಲಾಗಿನಲ್ಲಿ ವಿವರವಾಗಿ ಬರೆದಿದ್ದೇನೆ. ಮುಂದೆಯೂ ಬರೆಯಲಿಕ್ಕೆ ಸುಮಾರಿದೆ. ಮೊನ್ನೆ ವಾರಪತ್ರಿಕೆಯೊಂದು ತನ್ನ ವಾರ್ಷಿಕ ಸಂಚಿಕೆಯಲ್ಲಿ ಮಲೆನಾಡಿನ ಬಗ್ಗೆ ಪ್ರಕಟಿಸಿದ್ದ ಕೆಲವು ಲೇಖನಗಳನ್ನ ಓದುತ್ತಿದ್ದಾಗ 'ಸುಂದರ್, ಶಿವಮೊಗ್ಗ' ಎನ್ನುವವರು ಬರೆದ "ಮಲೆನಾಡಿನ ಒಡನಾಡಿಗಳು" ಎನ್ನುವ ಲೇಖನದಲ್ಲಿ ಕೊಪ್ಪ ಚಿಕ್ಕಪ್ಪನ ಪ್ರಸ್ತಾಪ ಕಂಡು ಅದನ್ನ ಓದಿ ಭಾವುಕನಾದೆ. ಆ ಕೃತಜ್ಞತೆಯ ಸ್ಮ್ರರಣೆ ಹೊತ್ತ ಲೇಖನ ಆಪ್ತ ಎನ್ನಿಸಿ ನನ್ನ ಹಿಡಿತ ಮೀರಿ ಕಣ್ಣು ಉಕ್ಕಿ ಬಂತು, ಕಂಠ ಗದ್ಗದವಾಯಿತು. ಇದು ಅತಿರೇಕ ಅನ್ನಿಸುವಷ್ಟರ ಮಟ್ಟಿಗೆ ಇತ್ತೀಚಿಗೆ ಕಣ್ಣಂಚು ಒದ್ದೆಯಾಗುತ್ತಿದೆ.


ಅದೇ ಲೇಖನವನ್ನ ಯಥಾವತ್ ಅಕ್ಷರಕ್ಕಿಳಿಸುತ್ತಿದ್ದೇನೆ. ಮುಂದಿನ ಸಾಲುಗಳು ಸುಂದರ್'ರವು. ನನ್ನ ಮನಸಿನ ಪುಟಗಳನ್ನ ತಿರುವಲು ಸಹಕಾರಿಯಾದ ಆ ಬರಹಕ್ಕೆ ನಾನವರಿಗೆ ಕೃತಜ್ಞ.



"ಮಲೆನಾಡಿನ ಒಡನಾಡಿಗಳು"



ಚುಮುಚುಮು ಚಳಿಯಲ್ಲಿ ಕಣ್ಣುಜ್ಜಿಕೊಂಡು ಮನೆಯಂಗಳಕ್ಕೆ ಬಂದು ಕಣ್ಬಿಟ್ಟು ನೋಡಿದರೆ ದೂರದಲ್ಲಿ ಸದಾ ಗಗನಚುಂಬಿಯಾಗಿ ನಿಂತ ಬೆಟ್ಟ. ಸದಾ ಮೋಡಗಳಿಂದ ಆವೃತ್ತವಾಗಿ ಇದ್ದಕಿದ್ದಂತೆ ಧೋ ಎಂದು ಮಳೆ ಸುರಿದ ನಂತರ ತೊಳೆದಿಟ್ಟ ಶಿಲೆಯಂತೆ ಕಾಣಿಸುವ ಆ ಬೆಟ್ಟ ಮೋಡಗಳನ್ನ ಬಿತ್ತರಿಸಿ ಮಳೆ ಸುರಿಸುವ ಒಂದು ಕಾರ್ಖಾನೆಯೆ ಇರಬೇಕೆಂದು ನಾನು ಭಾವಿಸಿಕೊಂಡಿದ್ದೆ. ಅದುವೆ 'ಕುಂದಾದ್ರಿ ಬೆಟ್ಟ'.


ಆ ಬೆಟ್ಟದ ಪಾದದಂತೆ ಹರಡಿಕೊಂಡಿರುವ ಗದ್ದೆ ಬಯಲಿನ ಅಂಚಿನಲ್ಲಿರುವ ಹುಲ್ಲಿನ ಮನೆಯಲ್ಲಿ ನಮ್ಮ ವಾಸ. ಮನೆ ತುಂಬ ಜನ, ಕೊಟ್ಟಿಗೆ ತುಂಬ ಜಾನುವಾರು, ಗದ್ದೆ ತುಂಬ ಪೈರು.... ಇಲ್ಲಿ ಕಳೆದ ಬಾಲ್ಯದ ದಿನಗಳು ಎಂದಾದರು ಮರೆಯಲುಂಟೆ? ಬರಿ ಮನುಷ್ಯರು ಮಾತ್ರವಲ್ಲ ಮಲೆನಾಡಿನ ಮಕ್ಕಳೆಂದರೆ ಅವರು ಪ್ರಾಣಿ-ಪಕ್ಷಿ, ಗಿಡ-ಮರ, ಸಕಲ ಜೀವರಾಶಿಗಳ ಮಾತುಗಳನ್ನೂ ಬಲ್ಲ ವಿಶಾರದರು. ಮನುಷ್ಯರೊಂದಿಗೆ ಎಷ್ಟು ಪ್ರೀತಿಯಿಂದ ಮಾತಾಡಬಲ್ಲರೊ ತಮ್ಮ ಕೊಟ್ಟೀಗೆಯ ಜಾನುವಾರುಗಳೊಂದಿಗೂ ಅಷ್ಟೆ ಆದರದಿಂದ ಮಾತನಾಡಬಲ್ಲರು. ಮಲೆನಾಡಿನ ಮಕ್ಕಳ ಮೂಗು-ಕಣ್ಣು-ಕಿವಿ ಎಲ್ಲವೂ ಬಹಳ ಚುರುಕು. ಇಲ್ಲೆಲ್ಲೋ ಜೇನಿದೆ! ಇಲ್ಲೆಲ್ಲೋ ಹಲಸು ಹಣ್ಣಾಗಿದೆ, ಇಲ್ಲೆಲ್ಲೋ ಇಪ್ಪೆ ಹೂ ಬಿಟ್ಟಿದೆ ಎಂದೆಲ್ಲಾ ಅವುಗಳಿಗೆ ಗೊತ್ತಾಗುತ್ತದೆ. "ಯಾಕೋ ಉಡಿ ಅಲ್ಲಾಡಿದಂಗ್ ಆತದಲ್ಲ" ಎಂದು ಗುಮಾನಿಯಿಲ್ಲದೆ ಕರಾರುವಕ್ಕಾಗಿ ಅಲ್ಲಿ ಹಾಗೆಯೆ ಆಗಿರುತ್ತದೆ. ಗಾಳಿ-ಬೆಳಕು ಮುತ್ತಿಟ್ಟು ಸಾಕಿದ ಮಕ್ಕಳು ನಾವು.


ಆ ದಿನಗಳಲ್ಲಿ ನಮ್ಮ ಅಲಾರಾಂ ಎಂದರೆ ಕೋಳಿಯ ಕೂಗು ಮಾತ್ರ.ನಮ್ಮ ಗಡಿಯಾರವೆಂದರೆ ಸೂರ್ಯನ ಬೆಳಕಿಗೆ ಅಂಗಳದಲ್ಲಿ ಅಥವಾ ಮನೆಯ ಗೋಡೆಯ ಮೇಲೆ ಬೀಳುತ್ತಿದ್ದ ನೆರಳು ಮಾತ್ರ. ನೆರಳು ಎಷ್ಟು ಮುಂದೆ ಬಂದಿದೆ? ಎಂಬುದರ ಮೇಲೆ ಈಗ ಎಷ್ಟು ಘಂಟೆಯಾಯಿತು ಎಂದು ಹೇಳುವ ಕಾಲಜ್ಞಾನಿಗಳು ನಾವಾಗಿದ್ದೆವು. ಇದು ಬಿಟ್ಟರೆ ನಮ್ಮ ಮನೆಗೆ ಶಬ್ದ ಕೇಳುವಷ್ಟು ದೂರದಲ್ಲಿ ಹಾದು ಹೋಗುತ್ತಿದ್ದ ಟಾರು ರಸ್ತೆಯಲ್ಲಿ ಸಂಚರಿಸುವ ಕೆಲವು ಬಸ್ಸುಗಳ ಹಾರನ್ ಕೂಡ ಗಡಿಯಾರದ ಘಂಟೆಯ ನಾದದಂತೆ ಮನೆಗೆ ಸಮಯ ಹೇಳುತ್ತಿದ್ದವು. ಇಂತ ಹಾರನ್ ಇದೆ ಬಸ್ಸಿನದು ಎಂದು ಹೇಳುವ ಶಬ್ದವೇಧಿಗಳು ನಾವಾಗಿದ್ದೆವು.


ಬೆಳಗ್ಯೆ ಎದ್ದು ಗದ್ದೆಯ ಹಿತ್ತಲಿಗೆ ನೀರು ಹಾಕಿ ಸ್ನಾನಕ್ಕೆ ಹೋಗಬೇಕೆನ್ನುವಾಗ ಪೆಪ್ಪರೆ ಪೆಪ್ಪ ಪಾಂಯ್ ಪಾಂಯ್... ಎನ್ನುವ ಶಬ್ದ ಕಿವಿಗೆ ಬಿದ್ದರೆ "ಓಹ್ಹೋ... ಕಣ್ಣನ ಬಸ್ಸು ಬಂತು. ಘಂಟೆ ಏಳಾಯ್ತು, ಹೊತ್ತಾಯ್ತು." ಅಂತ ನಮ್ಮ ಗಡಿಬಿಡಿ ಶುರುವಾಗುತ್ತಿತ್ತು.

ಇನ್ನು ತಿಂಡಿ ತಿಂದು ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಗದ್ದೆ ಬಯಲಿನಲ್ಲಿ ಓಡುವಾಗ ಗದ್ದೆ ಬಯಲಿನಲ್ಲಿ ಬೆಳೆದ ಹಿಡಿ ಹುಲ್ಲಿನ ಹೂಗಳು, ಅದರ ಮೇಲೆ ಪೋಣಿಸಿದ ಮಂಜಿನ ಮುತ್ತುಗಳು ನಮ್ಮ ಬಟ್ಟೆಗೆಲ್ಲ ಮೆತ್ತಿಕೊಂಡು ಮುತ್ತಿಕ್ಕುತ್ತಿದ್ದವು. ಹೀಗೆ ಹೊಸರೊಡ್ಲು ಗದ್ದೆ ಬಯಲಿನಲ್ಲಿ ಓಡುವಾಗ ನಮ್ಮ ಮೈಯೆಲ್ಲಾ ಕಿವಿ. ಸುಮಾರು ಒಂದು ಕಿಲೋಮೀಟರ್ ದುರದ ಬ್ರಹ್ಮನ ಉಬ್ಬಿನಲ್ಲಿ ಆ ಬಸ್ಸು ಏದುಸಿರು ಬಿಡುವ ಶಬ್ದ ನಮ್ಮ ಕಿವಿಗೆ ಕೇಳಿಸಿದರೆ ಇವತ್ತು ಬಸ್ಸು ಗ್ಯಾರೆಂಟಿ ಸಿಗುತ್ತದೆ ಎಂದು ಅರ್ಥ, ಇಲ್ಲವಾದರೆ ಏಳು ಕಿಲೋಮೀಟರ್ ನಡೆದೆ ಶಾಲೆಗೆ ಹೋಗಬೇಕಲ್ಲ!


ಆ ಬಸ್ಸಿನ ಡ್ರೈವರ್ ವೆಂಕಟ್ರಮಣ ಸ್ವಲ್ಪ ಕುಳ್ಲನೆಯ ವ್ಯಕ್ತಿ. ಅವರಿಗೆ ಕ್ಲಚ್ಚು-ಬ್ರೇಕು ಸರಿಯಾಗಿ ಕಾಲಿಗೆ ಸಿಗ್ತಿರಲಿಲ್ಲವಂತೆ. ಆದ್ದರಿಂದ ಆ ಬಸ್ಸಿನ ಶಬ್ದ ಯಾವಾಗಲೂ ಸ್ವಲ್ಪ ಬಿಟ್ಟು ಬಿಟ್ಟು ಉಸಿರಾಡುವ ದಮ್ಮು ರೋಗಿಯ ಉಬ್ಬಸದ ಹಾಗೆ ಇರುತ್ತಿತ್ತು.


ನಮ್ಮೂರಿನಿಂದ ಹಾದು ಹೋಗುವ ಎಲ್ಲಾ ಬಸ್ಸುಗಳಿಗೂ ನಮ್ಮದೆ ನಾಮಕರಣ. ಕಣ್ಣನ ಗಾಡಿ, ಬೀರೂರ್ ಮಂಜಣ್ಣ ಗಾಡಿ, ನಾಗಪ್ಪ ಹೆಗಡೇರ ಬಸ್, ಗಜಾನನ ಮಾಮಿ ಬಸ್, ಹರಿಶ್ಚಂದ್ರಂಣ್ಣ ಬಸ್, ಸಿಎಂಟಿ ಮುಂತಾಗಿ ಇಟ್ಟಿದ್ದೆವು. ಒಂದೊಂದು ಬಸ್ಸುಗಳು ಕೂಡ ನಮ್ಮ ನಿತ್ಯದ ಒಡನಾಡಿಗಳಾಗಿ ಅವುಗಳಿಗೂ ಒಂದೊಂದು ವ್ಯಕ್ತಿತ್ವದ ಆರೋಪಣವಿತ್ತು. ಶಾಲೆಗೆ ಬೇಕಾದ ಪುಸ್ತಕಗಳನ್ನ ತಂದು ಕೊಡುವ ತಿಪ್ಪೆಸ್ವಾಮಿ ಕಂಡೆಕ್ಟರ್, ಅಜ್ಜಿಯ ಬಿಪಿ ಮಾತ್ರೆ ತಂದು ಕೊಡುವ ಕಣ್ಣನ್ ಡ್ರೈವರ್, ಮಕ್ಕಳನ್ನ ಜಾಗ್ರತೆಯಿಂದ ಊರಿಂದೂರಿಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಡ್ರೈವರ್ ಮಂಜಣ್ಣ, ಏನಾದರೂ ಪಾರ್ಸೆಲ್ ಕೊಟ್ಟರೆ ಬಸ್ಸನ್ನು ಮನೆಯೆದುರೆ ನಿಲ್ಲಿಸಿ ಹಾರನ್ ಮಾಡಿ ಮನೆಯೊಳಗೆ ತಲುಪಿಸುತ್ತಾರೆಂದು ಖ್ಯಾತಿ ಪಡೆದ ನಾಗಪ್ಪ ಹೆಗಡೇರು ಎಲ್ಲಾ ನಮ್ಮವರೆ. ಕೊನೆಗೆ ಲಾಸ್ಟ್ ಗಾಡಿ ಹರಿಶ್ಚಂದ್ರಣ್ಣ ಬಸ್ ಬಂದರೆ ಒಂಬತ್ತು ಘಂಟೆಯಾಯ್ತು, ಇನ್ನು ಮಲಗುವ ಸಮಯ ಅಂತಲೆ ಅರ್ಥ. ಅಕಸ್ಮಾತ್ ನಾವು ಎಚ್ಚರವಿದ್ದರೂ 'ಸಾಕ್ ಸಾಕ್ ಓದಿದ್ ಸಾಕ್! ಹರೀಶ್ಚಂದ್ರಣ್ನ ಬಸ್ ಬಂತು. ಚಿಮಣಿ ಕೆಡ್ಸಿ ಮಲ್ಕಳಿ, ಸೊಸೈಟಿಲಿ ಸರಿಯಾಗಿ ಸೀಮೆಎಣ್ಣೆನೂ ಕೊಡಲ್ಲ" ಎಂದು ದೊಡ್ಡವರು ಗದರಿಸುತ್ತಿದ್ದರು. ನಾವೂ "ಎನ್ ಅರ್ಧಾರಾತ್ರಿವರೆಗೆ ನಿದ್ದೆಗೆಟ್ಟು ಓದಿ ರಾಜ್ಯ ಆಳ್ಬೇಕಾ!" ಎಂದು ಹಾಯಾಗಿ ಕಂಬಳಿ ಹೊದ್ದು ಮಲಗುತ್ತಿದ್ದೆವು. ಹೀಗೆ ಅಂದಿನ ಗಡಿಯಾರಗಳು ಕಮ್ ನಮ್ಮ ಒಡನಾಡಿಗಳು ಆಗಿದ್ದ ಬಸ್ಸುಗಳ ಬಗ್ಗೆ ಹೇಳುತ್ತಾ ಹೋದರೆ ಅದೆ ಒಂದು ಕಥಾನಕವಾದೀತು.


ಮೊದಲೆಲ್ಲ ಊರಿಗೆ ಬಸ್ಸು ಬಂದು ಹೋಗುವುದೆ ಒಂದು ಸಂಭ್ರಮ ಮತ್ತು ಅಚ್ಚರಿಯಾಗಿದ್ದರಿಂದ ಎಲ್ಲರಿಗೂ ಅವರವರ ಮನೆಯೆದುರೆ ಬಸ್ಸು ನಿಂತರೆ ಏನೋ ಒಂದು ಹೆಮ್ಮೆ! ಹಾಗಾಗಿ ಬಸ್ಸು ಮಾರು ಮಾರಿಗೂ ನಿಲ್ಲುತ್ತಿತ್ತು. ಆದರೆ ಬಸ್ಸಿನ ಸಮಯ ಪಾಲನೆಯಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ದ ಕಣ್ಣನ್ ಡ್ರೈವರ್ ಮಾತ್ರ  ಜನ ಒಂದೆ ಸ್ಟಾಪಿನಲ್ಲಿ ನಿಲ್ಲದೆ ಮಾರು ಮಾರಿಗೂ ಕೈ ಅಡ್ಡ ಹಾಕುತ್ತಿದ್ದುದನ್ನು ಕಂಡು ಬಹಳ ಸಿಟ್ಟು ಮಾಡಿಕೊಳ್ಳುತ್ತಿದ್ದರು. "ಏನು ನೀನು ಕೊಡುವ ಐವತ್ತು ಪೈಸೆಗೆ ನನ್ನ ಐದುನೂರು ರೂಪಾಯಿ ಬ್ರೇಕು ಹಾಳು ಮಾಡ ಬೇಕನ?" ಎಂದು ತಮ್ಮ ಮಲಯಾಳಿ ಕನ್ನಡದಲ್ಲಿ ಅಬ್ಬರಿಸುತ್ತಿದ್ದರು. ಒಮ್ಮೊಮ್ಮೆ ತುಂಬ ಸಿಟ್ಟು ಬಂದರೆ ಸ್ಟಾಪಿನಲ್ಲಿ ನಿಲ್ಲದೆ ಕಂಡಲ್ಲಿ ಕೈ ಅಡ್ಡ ಹಾಕುವವರನ್ನ ಬಿಟ್ಟು ಬರುವುದೂ ಉಂಟು. ಬಸ್ಸು ಬಸ್ಟ್ಯಾಂಡ್ ಬಿಟ್ಟು ಊರ ಹೊರಗೆ ದಾಟುವವರೆಗೂ ಕಂಡೆಕ್ಟರ್ ಫುಟ್'ಬೋರ್ಡಿನಲ್ಲಿ ನಿಂತು ಆಗಾಗ ಹಿಂದಕ್ಕೆ ನೋಡುತ್ತಿರಬೇಕು. ಇಲ್ಲದಿದ್ದರೆ ಕಣ್ಣನ್'ನ ಬೈಗುಳ ಗ್ಯಾರೆಂಟಿ. "ಯಾರಾದರೂ ಬಸ್ಸಿಗಂತ ಓಡಿ ಬರ್ತಿರ್ತಾರೆ, ಸ್ವಲ್ಪ ತಲೆ ಹೊರ್ಗೆ ಹಾಕಿ ನೋಡ" ಎನ್ನದೆ ಬಿಡುತ್ತಿರಲಿಲ್ಲ. ಆದರೆ ಅಂತಹ ಕಣ್ಣನ್ ಬಸ್ಸು ಶಿವಮೊಗ್ಗ ಸಿಟಿಯಿಂದ ನಮ್ಮೂರ ಬಸ್ಟ್ಯಾಂಡಿಗೆ ಬಂದು ನಿಂತ ಕ್ಷಣ ನೀವು ನೋಡಬೇಕು. ಅವರ ಅಂಗಿ ತುಂಬ ಜೇಬುಗಳು. ಮೇಲೆರಡು, ಕೆಳಗೆರಡು, ಪ್ಯಾಂಟು ಜೇಬು ಎಲ್ಲವೂ ಭರ್ತಿ ಭರ್ತಿ. ಬಸ್ಸು ನಿಂತ ತಕ್ಷಣ ಅವರನ್ನ ಮುತ್ತಿಕೊಳ್ಳುವ ಜನ. " ತಗ ಇದು ನಿನ್ನದು, ಇದು ಅವನದು, ಇದು ಅವನಿಗೆ ಕೊಡು, ಇದು ಶ್ಯಾಮನ ಅಂಗಡಿದು, ಇದು ಖಾದ್ರಿಸಾಬರ ಅಂಗಡಿಗೆ" ಎಂದು ಅವರವರ ಅಂಚೆ ಬಟವಾಡೆ ಶುರುವಾಗುತ್ತಿತ್ತು. ಆತ ತುಂಬ ಕಟ್ಟುನಿಟ್ಟಿನ ಮನುಷ್ಯ. ಹಣೆಗೆ ವಿಭೂತಿ, ಮಧ್ಯದಲ್ಲೊಂದು ಗಂಧದ ಬೊಟ್ಟು, ದಪ್ಪಕ್ಕೆ ಹುರಿಗಟ್ಟಿದ ಬಿಳಿಮೀಸೆ, ಅವರ ಖಡಕ್ ಇಸ್ತ್ರಿ ಮಾಡಿದ ಖಾಕಿ ಯೂನಿಫಾರಂ, ಅದರ ಮೇಲೊಂದು ದೊಡ್ದ ಮೆಡಲ್'ನಂತಿದ್ದ ಬ್ಯಾಡ್ಜ್, ಅದರಲ್ಲಿ ಏನು ಬರೆದಿತ್ತೋ ಕಡೆಗೂ ಓದಲಾಗಲೆ ಇಲ್ಲ! ಅವರ ಮೇಲಿನ ಭಯಕ್ಕೆ.


ಇನ್ನು ನಾಗಪ್ಪ ಹೆಗಡೆರ ಬಸ್ಸೆ ಒಂದು ಮಜಾ. ಅದಕ್ಕೆ ಸಮಯದ ಹಂಗೆ ಇರಲಿಲ್ಲ."ಬದುಕು ಜಟಕಾ ಬಂಡಿ"ಯೆಂದು ಡಿವಿಜಿಯವರು ಇದೇ ಬಸ್ಸನ್ನ ನೋಡಿ ಬರೆದಿರಬೇಕು! ಅವರಿಗೆ ಜನ ಮಾರು ಮಾರಿಗೆ ಕೈ ಅಡ್ದ ಹಾಕಿ ನಿಲ್ಲಿಸಿದರು ಏನು ಬೇಜಾರಿಲ್ಲ. ಸದಾ ಹಸನ್ಮುಖಿಯಾಗಿ ಬಸ್ಸಿಗೆ ಹತ್ತಿದವರೆಲ್ಲರ ಉಭಯ ಕುಶಲೋಪರಿ ವಿಚಾರಿಸುವುದರಲ್ಲಿ ಅವರಿಗೆ ಅತೀವ ಆಸಕ್ತಿ. "ಈ ಸಾರಿ ಅಡಿಕೆ ರೇಟು ಏರುತ್ತಾ? ಇಳಿಯುತ್ತಾ?" "ಭತ್ತ ಯಾವಾಗ ಕೊಟ್ರೆ ಒಳ್ಳೇದು?" "ಅವರ ಲೈನಿನಲ್ಲಿ ಬರುವ ಮನೆಗಳಲ್ಲಿ "ಯಾರ್ಯಾರಿಗೆ ಮದುವೆ ಆಗಿದೆ? ಯಾ ಆಗಿಲ್ಲ?" "ಮಕ್ಕಳ ಸಮಾಚಾರವೇನು?" "ಯಾವ ಖಾಯಿಲೆಗೆ ಯಾವ ಡಾಕ್ಟರ್ ಆಗಬಹುದು?" "ಯಾರ್ಯಾರು ಮದುವೆಗೆ ರಡಿಯಿದಾರೆ?" ಫುಲ್'ಡೀಟೇಲ್ಸ್ ಅವರ ಬಳಿ! ಇಂತಹ ಜನಾನುರಾಗಿ ಹೆಗಡೆರು ಒಂದು ದಿನ ಹಾಗೆ ನಸುನಗುತ್ತಾ ಡ್ರೈವ್ ಮಾಡುತ್ತಿದ್ದವರು ಗಾಡಿಯನ್ನ ಸೈಡಿಗೆ ನಿಲ್ಲಿಸಿ ಸ್ಟೆಯರಿಂಗ್ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದರೆಂಬ ಸುದ್ದಿ ನನ್ನನ್ನು ಬಹಳ ದಿನಗಳವರೆಗೆ ಕಾಡದೆ ಬಿಡಲಿಲ್ಲ. ನಮ್ಮಜ್ಜಿಯಂತೂ "ಪುಣ್ಯಾತ್ಮ ನೋಡು, ಯಾರಿಗೂ ತೊಂದ್ರೆ ಮಾಡ್ದೆ ಹಾಗೆ ಹೋಗ್ಬಿಟ್ಟ" ಎಂದು ಊರಿಗೆ ಹೋದಾಗ ಹೇಳಿದ ಮಾತು ಇನ್ನೂ ನೆನಪಿದೆ.


ಅಂದಿನ ಕಾಲದ ಡ್ರೈವರ್'ಗಳಿಗೆ ಮಲೆನಾಡಿನಲ್ಲಿ ಸಿಗುತ್ತಿದ್ದ ರಾಜ ಮರ್ಯಾದೆಯನ್ನು ಸ್ವತಃ ಒಬ್ಬ ಡ್ರೈವರ್ರ ಮಗನಾಗಿ ನಾನೂ ಕಂಡಿದ್ದೇನೆ. ಸ್ವಲ್ಪ ಮಟ್ಟಿಗೆ ದ್ರಾವಿಡ ಬಣ್ಣದ ಆಫ್ರಿಕನ್ ಗುಂಗುರು ಕೂದಲಿನ ನನ್ನ ತಂದೆಗೆ ತನ್ನ ಸಹಪಾಠಿಗಳಿಂದ "ಮಿನುಗು ತಾರೆ ಕಲ್ಪನ" ಎಂದೆ ಕರೆಸಿಕೊಳ್ಳುತ್ತಿದ್ದ ನನ್ನಮ್ಮನನ್ನು "ದ್ರೈವರ್" ಎಂಬ ಒಂದೆ ಕಾರಣಕ್ಕೆ (ಏರೋಪ್ಲೇನ್ ಪೈಲೆಟ್ ತರಾ!) ನಮ್ಮಜ್ಜ ಮದುವೆ ಮಾಡಿ ಕೊಟ್ಟರಂತೆ! ತಮ್ಮ ಬಸ್ಸಿನಲ್ಲಿ ಓಡಾಡುತ್ತಿದ್ದ ಶಾಲಾ ಮಕ್ಕಳಿಗೆ, ದೂರದೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದವರಿಗೆ, ಉದ್ಯೋಗದಲ್ಲಿದ್ದವರಿಗೆ ಎಲ್ಲರಿಗೂ ಪರಮಾಪ್ತರಾಗಿ ಬಾಳಿದ್ದ ನನ್ನ ತಂದೆ ತಮ್ಮ ಇಳಿವಯಸ್ಸಿನ ದಿನಗಳಲ್ಲಿ "ಈಗ ಯಾರೂ ಡಿಮ್ ಡಿಪ್ ಮಾಡುವುದೆ ಇಲ್ಲ. ಯಾವ ತರ ಡ್ರೈವಿಂಗ್ ಮಾಡ್ತಾರೋ ಏನೋ? ರಾತ್ರೆ ಹೊತ್ತು ಡ್ರೈವಿಂಗ್ ಮಾಡುವಾಗ ಎದುರುಗಡೆಯ ಗಾಡಿ ಹೆಡ್'ಲೈಟ್ ಕಣ್ಣಿಗೆ ಚುಚ್ಚಿದ ಹಾಗಾಗುತ್ತೆ. ಕಣ್ಣು ಬಿಡುವುದಕ್ಕೆ ಆಗಲ್ಲ" ಎನ್ನುತ್ತಿದ್ದರು. "ನನ್ನಂತವರಿಗೆ ಇನ್ನು ಮುಂದೆ ಡ್ರೈವಿಂಗ್ ಕಷ್ಟ" ಎಂದು ಒಲ್ಲದ ಮನಸ್ಸಿನಿಂದಲೆ ತಮ್ಮ ಪ್ರೀತಿಯ ಕೆಲಸವನ್ನ ಬಿಟ್ಟು ಬಿಟ್ಟರು.





ಮಲೆನಾಡಿನಲ್ಲಿ ಹುಟ್ಟಿ ಬೆಳೆದು ನಾಲ್ಕೈದು ದಶಕಗಳನ್ನ ಕಳೆದಿರುವ ನನಗೆಮಲೆನಾಡಿನ ಇಂದಿನ ವಿದ್ಯಾಮಾನಗಳು ಯುಕ್ತಾ ಯುಕ್ತಾ ವಿವೇಚನೆಯಿಲ್ಲದ ಡಿಮ್ ಡಿಪ್ ಮಾಡದ ಹೆಡ್'ಲೈಟಿನ ಬೆಳಕಿನಂತೆಯೆ ಕಣ್ಣು ಚುಚ್ಚುತ್ತಿವೆ. ಕೃಷಿಯಿಂದ ವಿಮುಖರಾಗಿ, ಸಂಬಂಧಗಳೆ ಕಣ್ಮರೆಯಾಗಿ ಮಲೆನಾಡು ಬರಿದಾಗುತ್ತಿರುವ ಈ ಹೊತ್ತಲ್ಲಿ ನಮ್ಮೆಲ್ಲರ ಆತಂಕವನ್ನು ಅರಿತು ಡಿಮ್ ಡಿಪ್ ಮಾಡುವ ಡ್ರೈವರ್ ಯಾರು?  ಎಂದು ಹುಡುಕುತ್ತಿದ್ದೇನೆ.

No comments: