05 March 2013

ತುಳುಗಾದೆ-೩೫
"ಕಾರ್'ಡ್ ಪೀ ಆಂಡಂದ್ ಅಯಿನ್ ಕೊಯ್ದ್ ಅಡಿಯಕ್ಕರೆ ಆಪುಂಡಾ?"


{ ತುಳುನಾಡು ಇನ್ಯಾವುದೆ ವಿಷಯದಲ್ಲಿ ಅದೀಗ ಸೇರಿರುವ ಕರುನಾಡಿನ ಇನ್ನಿತರ ಭಾಗಗಳಿಗಿಂತ ಬಹಳಷ್ಟು ಶಿಸ್ತಿನಲ್ಲಿ ಮುಂದಿದ್ದರೂ ಶುಚಿತ್ವದ ಮಾನದಂಡದಲ್ಲಿ ಅನೇಕ ನ್ಯೂನತೆಗಳು ಇತರೆ ಕರುನಾಡಿನ ಭಾಗಗಳಂತೆ ಇಲ್ಲಿಯೂ ಧಾರಾಳವಾಗಿಯೆ ಇತ್ತು. ನೆರೆಯ ಮಲೆನಾಡಿನ ಘಟ್ಟದಿಂದ ಪಡು ಕಡಲಿನೆಡೆಗೆ ಧಾವಿಸುವ ನೀರಿನ ಸಮೃದ್ಧಿಯೊಂದು ಧಾರಾಳ ಇರುವ ಕಾರಣ ಇಲ್ಲಿ ಶುಚಿತ್ವದ ಕೊರತೆಗಳು ಅಷ್ಟಾಗಿ ಉಳಿದ ಹೊರಗಿನವರ ಗಮನಕ್ಕೆ ಮರೆಯಾಗಿರುತ್ತಿತ್ತು ಅನ್ನುವುದು ವಾಸ್ತವ. ಕಳೆದ ದಶಕಾಂತ್ಯದವರೆಗೂ ಇಲ್ಲಿ ಮನೆಗೊಂದು ಶೌಚಾಲಯವಿರಲೆ ಇಲ್ಲ! ತಮ್ಮ ತಮ್ಮ ಅನುಕೂಲತೆಗಳ ಅನುಸಾರ ಅವಸರವಾದವರು ನಸುಕಿನಲ್ಲೆದ್ದು ಒಂದೋ ತಮ್ಮ ದರ್ಕಾಸಿನಲ್ಲಿರುತ್ತಿದ್ದ ಗುಡ್ಡೆಗೋ ಇಲ್ಲವೆ ಮನೆಯ ಜಾಗದಂಚಿನಲ್ಲಿ ಪ್ರವಾಹಿಸಿತ್ತಿದ್ದ ತೋಡಿಗೋ (ಹಳ್ಳ) ಹೋಗಿ ನಿತ್ಯ ಕರ್ಮಕ್ಕೊಂದು ಗತಿ ಕಾಣಿಸಿ ಮರಳುತ್ತಿದ್ದರು. ಇದು ಅತಿ ಬಡವರಂತೆ ಸಿರಿವಂತ ಕುಳಗಳ ನಡುವೆಯೂ ಅತಿ ಸಾಮಾನ್ಯವಾದ ಸಂಗತಿಯೆ ಆಗಿತ್ತು. ನಾನೂ ನನ್ನ ಬಾಲ್ಯದಲ್ಲಿ ಗುಡ್ಡೆ ಮತ್ತು ತೋಡಿಗೆ ಅಡಿಗಡಿಗೆ ಎಡತಾಕಿದ್ದೇನೆ! ಈ ಗಾದೆ ಆ ಅನಾಗರಿಕ ಅಭ್ಯಾಸ ಸಾರ್ವತ್ರಿಕವಾಗಿದ್ದಾಗ ಹುಟ್ಟಿದ್ದಿರಬೇಕು.


ಕಾಡಿನ ದಾರಿಯಲ್ಲಿ ಒಂದು ಊರಿನಿಂದ ಇನ್ನೊಂದಕ್ಕೆ ಸಾಗಿ ಹೋಗುತ್ತಿದ್ದ ದಾರಿ ಹೋಕನೊಬ್ಬನಿಗೆ ಅಂಗಾಲಿಗೆ ಹೀಗೆ ಯಾರೊ ವಿಸರ್ಜಿಸಿ ಬಿಟ್ಟಿದ್ದ ಮಲ ಅನಿರೀಕ್ಷಿತವಾಗಿ ಪ್ರಮಾದವಶಾತ್ ತಗುಲಿ ಹೇಸಿಗೆಯಾಯಿತಂತೆ. ಹಾಗಂತ ಆತ ಅದೆಷ್ಟೆ ಆದ ಅಸಹ್ಯದ ಬಗ್ಗೆ ಮುಖ ಕಿವಿಚಿ ಹೇಸಿಕೊಂಡರೂ ಸಹ ಆತನ ಮೊದಲ ಆದ್ಯತೆ ಹತ್ತಿರ ಕಾಣುವ ಯಾರದ್ದಾದರೂ ಬಿಡಾರದ ಬಳಿ ಕೊಂಚ ನೀರನ್ನ ಯಾಚಿಸಿ ಅದನ್ನ ತೊಳೆದು ಮುಂದೆ ಸಾಗುವತ್ತ ಇರುತ್ತದೆ. ನೀರು ಕೊಟ್ಟು ಕಾಲಿಗಂಟಿದ ಹೊಲಸನ್ನ ತೊಳೆದು ಕೊಳ್ಳುವಂತೆ ಆ ಬಿಡಾರದಲ್ಲಿರುವವರು ಸಲಹೆ ಕೊಡುತ್ತಾರೆಯೆ ಹೊರತು ಇಡಿ ಅಂಗಾಲನ್ನೆ ಯಾರೂ ಕಿತ್ತು ಬಿಸಾಡಲಿಕ್ಕೆ ಹೇಳುವುದಿಲ್ಲ! ಕಾಲಿಗೆ ಹೇಲು ಅಂಟಿತೆಂದು  ಅದನ್ನ ಕೂಯ್ದು ತೆಗೆದೊಗೆಯಲು ಆಗುತ್ತದೆಯೆ ಎಂದು ಪ್ರಶ್ನಿಸುತ್ತದೆ ಈ ಗಾದೆ.


ತಾಳ್ಮೆ- ಸಂಯಮ ಬೋಧಿಸುವ ಒಳಗುಣ ಈ ಗಾದೆಯದ್ದು. ಯಾವುದೆ ಪ್ರಮಾದ ನಮ್ಮಿಂದಲೋ ಅಥವಾ ನಾವು ಬಲ್ಲವರಿಂದಲೋ ಘಟಿಸಿದಾಗ ಉದ್ವೇಗಕ್ಕೊಳಗಾಗಿ ಸಿಟ್ಟಿನ ವಶಕ್ಕೆ ಮನಸನ್ನ ಕುರುಡಾಗಿ ಒಪ್ಪಿಸದೆ ತಾಳ್ಮೆಯಿಂದ ಆದ ತಪ್ಪಿನ ಪುನರ್ವಿಮರ್ಶೆ ನಡೆಸಿ ಪರಿಹಾರ ಹುಡುಕುವ ಮಾರ್ಗೊಪಾಯಗಳನ್ನ ಚಿಂತಿಸಬೇಕೆ ಹೊರತು. ಆದ ಪ್ರಮಾದದ ರೂವಾರಿಯನ್ನ ಏನೊಂದೂ ವಿವೇಚಿಸದೆ ದಂಡಿಸುವುದು ತಪ್ಪು. ಕನ್ನಡದಲ್ಲೂ ತತ್ಸಮವಾದ "ನೆಗಡಿಯಾಯಿತೆಂದರೆ ಮೂಗನ್ನ ಕತ್ತರಿಸಿಕೊಳ್ಳಬಾರದು" ಎನ್ನುವ ಗಾದೆಯಿದೆ.}

( ಕಾರ್'ಡ್ ಪೀ ಆಂಡಂದ್ ಅಯಿನ್ ಕೊಯ್ದ್ ಅಡಿಯಕ್ಕರೆ ಆಪುಂಡಾ? + ಕಾಲಿಗೆ ಹೇಲಾಯಿತೆಂದು ಅದನ್ನ ಕೊಯ್ದು ಬಿಸಾಡಲು ಆಗುತ್ತದ?.)


No comments: