07 March 2013

ತುಳುಗಾದೆ-೩೭





"ಬದನೆ ಕೊರ್ದು ಗುದನೆ ಗೆತೊಂದಿನ ಲೆಕ್ಖಾಂಡ್"


{ ತುಳುನಾಡಿನ ಅತಿರೇಕದ ಮಳೆ ಮತ್ತು ಸೆಖೆಗೆ ಸಾಮಾನ್ಯವಾಗಿ ಹಸಿರು ತರಕಾರಿಗಳು ಬೆಳೆಯುವುದು ತುಸು ಕಷ್ಟ. ಈಗೀಗ ಪ್ರಯೋಗಶೀಲತೆ ಅಲ್ಲಲ್ಲಿ ನಡೆಯುತ್ತಿರುವುದು ಹೌದಾದರೂ ಘಟ್ಟದ ಮೇಲಿನ ನಳನಳಿಸುವ ಕಾಯಿ-ತರಕಾರಿಗಳ ಹೋಲಿಕೆಯಲ್ಲಿ ಇದು ಅನಾಕರ್ಷಕ ಅನ್ನುವುದಂತೂ ಸತ್ಯ. ಇಂತಹ ತರಕಾರಿಗೆ ಬರಗೆಟ್ಟ ತುಳು ನಾಡಿನ ಮಂದಿಗೆ ಸುಲಭವಾಗಿ ಒದಗಿ ಬರುವ ಹಿತ್ತಲ ತರಕಾರಿಗಳು ಸೌತೆ, ಕುಂಬಳ, ತೊಂಡೆ, ಬಸಳೆ ಹಾಗೂ ನುಗ್ಗೆ. ಅದರಲ್ಲೂ ಬಚ್ಚಲ ನೀರು ಹರಿಯುವಲ್ಲಿ ಹಾಕುವ ಬದನೆಗೆ ಯಾವೊಂದು ಕಾಳಜಿಯ ಆರೈಕೆಯನ್ನ ಮಾಡದಿದ್ದರೂ ಅದು ಸಿಕ್ಕ ಕಿರು ಅವಕಾಶದಲ್ಲಿಯೆ ಸಹವಾಸಿ ಬಸಳೆಯೊಂದಿಗೆ ವ್ಯಾಪಿಸಿ ಬೆಳೆಯುವುದುಂಟು. ಬದನೆಯನ್ನೆ ರೂಪದಲ್ಲಿ ಹೋಲುವ ಗುದನೆ ಎನ್ನುವ ತರಕಾರಿಯೂ ಒಂದಿದೆ. ಅದು ಕಾಡುಜಾತಿಯದ್ದು. ಗಾತ್ರದಲ್ಲಿ ವಿಪರೀತ ಚಿಕ್ಕದು. ಹಾಡಿಗಳಲ್ಲಿ, ದರ್ಕಾಸಿನ ಕುರುಚಲು ಕಾಡಿನಲ್ಲಿ ಗುದನೆಯನ್ನ ಕಾಣಬಹುದು. ಅದನ್ನ ತಿನ್ನುತ್ತರೊ ಇಲ್ಲವೊ ಗೊತ್ತಿಲ್ಲ ಆದರೆ ಅದನ್ನೂ ತಿನ್ನುತ್ತರೆ ಎಂದರೆ ಅವರು ತೀರ ಗತಿಗೆಟ್ಟವರು ಎನ್ನುವ ನಿಶ್ಕೃಷ್ಟ ಭಾವ ತುಳುನಾಡಿನವರಲ್ಲಿದೆ



ಮೌಲ್ಯಯುತವಾದ ಬದನೆಯನ್ನ ಕೊಟ್ಟು ಅದಕ್ಕೆ ಸರಿಸಾಟಿಯಲ್ಲದ ಗುದನೆಯನ್ನ ಬೇಡಿ ತರುವುದು ಅತಾರ್ಕಿಕ ಹಾಗೂ ಹಾಸ್ಯಾಸ್ಪದ. ಹಾಗೊಂದು ವೇಳೆ ಅರಿಯದೆ ಅಂತಹ ಪ್ರಮಾದ ಘಟಿಸಿದ್ದೆ ಹೌದಾದರೆ ಅದನ್ನ ನಮ್ಮ ಮೂರ್ಖತನ ಅಂದುಕೊಳ್ಳಬೇಕಷ್ಟೆ. ನಾವು ಮೋಸ ಹೋಗಿದ್ದರೆ ಮಾತ್ರ ದುಬಾರಿಯಾಗಿರುವುದನ್ನ ಕೊಟ್ಟು ಅಲ್ಪ ವಸ್ತುವೊಂದನ್ನ ಸಂಪಾದಿಸುತ್ತೇವಷ್ಟೆ. ಇದನ್ನೆ ಬದನೆ ಹಾಗು ಗುದನೆಗೆ ಹೋಲಿಸಿ ವಿವೇಕ ಹೇಳುತ್ತದೆ ಈ ಸರಳ ಗ್ರಾಮ್ಯ ಗಾದೆಯ ವಾಚ್ಯಾರ್ಥ.


ನಾವು ಜಾಗರೂಕರಾಗಿದ್ದಷ್ಟು ಹೊತ್ತು ಯಾರೂ ನಮ್ಮನ್ನ ಯಾಮಾರಿಸುವುದು ಅಸಾಧ್ಯ. ಕೊಂಚ ಎಚ್ಚರ ತಪ್ಪಿದರೆ ವ್ಯಾಪಾರ, ವ್ಯವಹಾರಗಳಲ್ಲಿ ಮೋಸ ಕಟ್ಟಿಟ್ಟ ಬುತ್ತಿ ಅನ್ನುವುದು ಲೋಕಾಚಾರ. ಇದನ್ನೆ ಕನ್ನಡದಲ್ಲಿ ಇನ್ನೊಂದು ಅರ್ಥ ಹೊಮ್ಮಿಸುತ್ತಾ "ಊದುವುದನ್ನ ಕೊಟ್ಟು ಬಾರಿಸುವುದನ್ನ ತಂದ ಹಾಗೆ" ಅಂತಲೂ ತುಳುನಾಡಿನಲ್ಲಿ ಹೇಳುವುದಿದೆ.}



( ಬದನೆ ಕೊರ್ದು ಗುದನೆ ಗೆತೊಂದಿನ ಲೆಕ್ಖಾಂಡ್! = ಬದನೆಯನ್ನ ಕೊಟ್ಟು ಗುದನೆಯನ್ನ ತಗೊಂಡ ಹಾಗಾಯ್ತು!.)

No comments: