02 March 2013

ನಮ್ಮ ಶಾಲೆ....







ಕಾಬೆಟ್ಟು ಶಾಲೆಯ "ಗಾನ ಕೋಗಿಲೆ" ರಾಧಿಕಾ ಶಣೈ ಅಜ್ಜನಿಗೆ ಸೇರಿದ ಗದ್ದೆಯ ಹಿತ್ತಲಿನಲ್ಲಿ ನುಸುಳಿ ಗದ್ದೆಯ ಬದುವಿನಲ್ಲೆ ನಡೆದು ರಾಧಿಕನೆಂದರೆ ಅದೇಕೋ(?) ನಾಚಿಕೊಳ್ಳುತ್ತಿದ್ದ ಅವಳಜ್ಜನ ಪಕ್ಕದ ಗದ್ದೆಯ ವರದರಾಜ ನಾಯಕನ ಅಜ್ಜನಿಗೆ ಸೇರಿದ್ದ ಸಣ್ಣ ದರ್ಕಾಸನ್ನ ದಾಟಿ ಗೋಡೆ ಹಾರಿದರೆ ನೇರ ನಮ್ಮ ಶಾಲೆಯ ಅಂಗಳ ಸೇರಿಕೊಳ್ಳುವುದು ಸಾಧ್ಯವಾಗುತ್ತಿದ್ದುದರಿಂದಲೂ, ನೇರ ಸರಕಾರಿ ರಸ್ತೆಯಲ್ಲಿ ಸಾಗಿ ಹೋದರೆ ಆಗುತ್ತಿದ್ದ ಎರಡು ಕಿಲೋಮೀಟರ್ ಅಂತರದಲ್ಲಿ ಅರ್ಧದಷ್ಟು ಉಳಿಯುತ್ತಿದ್ದುದರಿಂದಲೂ ನಾವು ಅದೆ ದಾರಿಯಾಗಿ ಶಾಲೆಗೆ ಹೋಗುತ್ತಿದ್ದೆವು.  'ಸುಮ್ಮನೆ' ಶಾಲೆಗಷ್ಟೆ ಹೋಗುತ್ತಿದ್ದರೆ ಚಿಂತೆಯಿರಲಿಲ್ಲ ಅನ್ನಿ, ಆದರೆ ನಮ್ಮ ಮಂಗಾಟಗಳು ತರೇವಾರಿ ರೀತಿಯವದ್ದಾಗಿದ್ದು ಅದರ ದಾಳಿಗೆ ನಲುಗಿ ರೋಸತ್ತು ಹೋದ ಶಣೈ ಮಾಮ ನಮ್ಮನ್ನೆಲ್ಲ  ಸರಾಸಗಟಾಗಿ ಅಜನ್ಮ ವೈರಿಗಳಾಗಿ ಪರಿಗಣಿಸುತ್ತಿದ್ದುದ್ದರಿಂದ ಅವರ ಆಕ್ಷೇಪದ ಪರಿಧಿಗೆ ಚೂರೂ ಸಂಬಂಧವೆ ಇಲ್ಲದ ವಿಚಿತ್ರ ಕೀಟಲೆಯ ಚಟಕ್ಕೆ ಬಿದ್ದಿದ್ದ ನಾನೂ ಸಹ ಅವರ ದೃಷ್ಟಿಗೆ ಅನುಮಾನಾಸ್ಪದ ಆಸಾಮಿಯಾಗಿಯೆ ಕಾಣಿಸುತ್ತಿದ್ದೆ. ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲ ಹಳದಿ ಬಣ್ಣವನ್ನೆ ಹೋಲುತ್ತದಲ್ಲ ಅದರಂತೆ!


ಸಾಮಾನ್ಯವಾಗಿ ಅವರ ಗದ್ದೆಯಲ್ಲಿ ಭತ್ತವೋ ಇಲ್ಲ ಹೆಸರು, ಉದ್ದು ಇವುಗಳಲ್ಲಿ ಒಂದು ಬೇಳೆಯೋ ಇಲ್ಲದಿದ್ದರೆ ಹುರುಳಿಯೋ ಹೀಗೆಯೆ ಯಾವುದಾದರೊಂದು ಬೆಳೆ ತಪ್ಪದೆ ಇದ್ದೇ ಇರುತ್ತಿತ್ತು. ಗದ್ದೆ ಪಕ್ಕದಲ್ಲಿ ಗಾತ್ರದಲ್ಲಿ ಕೆರೆಯಂತಿದ್ದ ಬಾವಿಗೆ ಜೋಡಿಸಿದ್ದ ಕರೆಂಟಿನ ಪಂಪು ಬಿಡುವಿಲ್ಲದೆ ಗದ್ದೆಯ ಪಕ್ಕದ ಸಣ್ಣ ಕಾಲುವೆಗಳಿಗೆ ಸ್ಪಟಿಕದಂತಹ ನೀರನ್ನ ಹರಿದು ಬಿಡುತ್ತಲೆ ಇರುತ್ತಿತ್ತು. ಕಾರ್ಕಳ ಪೇಟೆಯ ಮಧ್ಯೆ ಇಂತಹ ಗದ್ದೆಗಳಿರುತ್ತಿದ್ದುದು, ಅವುಗಳಿಂದ ಹೀಗೆ ಕೃಷಿ ಮಾಡಿ ಬೆಳೆ ಬೆಳೆಯುತ್ತಿದ್ದುದು ತೊಂಬತ್ತರ ದಶಕದ ಆರಂಭದ ವರ್ಷಗಳಲ್ಲಿ ಅತಿ ಸಾಮಾನ್ಯ ಆಗಿತ್ತು. ಈಗ ಅತಿ ನಗರೀಕರಣದ ಪರಿಣಾಮ ಪರಿಸ್ಥಿತಿಯಲ್ಲಿ ಬಹಳ ಬದಲಾವಣೆಯಾಗಿರಬಹುದು. ಹಸಿರುಕ್ಕಿಸುತ್ತಿದ್ದ ಗದ್ದೆಗಳಲ್ಲಿ ನಾಯಿಕೊಡೆಗಳಂತೆ ಉದ್ಭವಿಸಿರುವ ನಾನಾ ಅಳತೆಯ ನಿವೇಶನಗಳಲ್ಲಿ ಯಾರ್ಯಾರೋ ಗುರುತು ಪರಿಚಯವಿಲ್ಲದವರ ಚಿತ್ರವಿಚಿತ್ರ ಮನೆಗಳು ಹುಟ್ಟಿಕೊಂಡಿರಬಹುದು. ಆದರೆ ಆಗಿನ ಚಿತ್ರ ಮಾತ್ರ ಇನ್ನೂ ನನ್ನ ಮನಸಲ್ಲಿ ಹಚ್ಚೆ ಹಾಕಿದಂತೆ ಉಳಿದಿದೆ, ಹೊಸ ಕಾರ್ಕಳ ನನಗೆ ಅಪರಿಚಿತ. ಅದನ್ನ ಅರಿಯುವ ಆಸಕ್ತಿಯೂ ನನಗಿಲ್ಲ. ನನ್ನೊಳಗಿನ ಸುಂದರ ಊರಿನ ಚೌಕಟ್ಟು ಹಾಕಿರಿಸಿದ ಚಿತ್ರದ ಗಾಜು ಒಡೆದುಹೋದೀತು ಅನ್ನುವ ಭಯವೂ ಇದಕ್ಕೆ ಕಾರಣ.


ನಾನು ಆಗಿನಿಂದಲೆ ಒಂಟಿತನದ ಭಕ್ತ. ಕೆಲಸಕ್ಕೆ ಬಾರದ ಹಡೆ ಮಾತಾಡಿಕೊಂಡು ತಿರುಗಾಡುತ್ತಿದ್ದ ಅನೇಕ ಸಹಪಾಠಿಗಳ ಬಗ್ಗೆ ರೇಜಿಗೆ ಹುಟ್ಟುತ್ತಿತ್ತು. ನೇರ ರಸ್ತೆಯಲ್ಲಿ ಶಾಲೆಗೆ ಹೋಗುವುದಕ್ಕೆ ನನ್ನ ಮೊದಲ ಪ್ರಾಶಸ್ತ್ಯವಿರುತ್ತಿತ್ತು. ಕಾರಣ ಸರಳ, ದಾರಿಯಲ್ಲಿ 'ಸರಕಾರಿ ನೌಕರರ ಸಂಘ"ದ ಕಟ್ಟಡ ಸಿಗುತ್ತಿತ್ತು ಹಾಗೂ ಅಲ್ಲಿ ಮೂರ್ನಾಲ್ಕು ನಿಯತಕಾಲಿಕೆಗಳು ಪುಕ್ಕಟೆ ಓದಲಿಕ್ಕೆ ಸಿಗುತ್ತಿದ್ದವು. ದುಡ್ಡು ಕೊಟ್ಟು ಪತ್ರಿಕೆಗಳನ್ನ ಖರೀದಿಸುವ ಯೋಗ್ಯತೆಯಿಲ್ಲದಿದ್ದರೂ ಓದುವ ವಿಪರೀತ ಚಟಕ್ಕೆ ದಾಸನಾಗಿದ್ದ ನನಗೆ ಇದಕ್ಕಿಂತ ಆಕರ್ಷಕ ಜಾಗ ಸಿಗುವುದು ಸಾಧ್ಯವೂ ಇರಲಿಲ್ಲ ಅನ್ನಿ. ಹೀಗಿದ್ದರೂ ಗದ್ದೆಯ ಬದುವಿನಲ್ಲಿ ಆಗಾಗ ಸಾಗುವ ಅನಿವಾರ್ಯತೆಯೂ ನನಗಿತ್ತು. ಸ್ಕೌಟ್ ಸೇರಿದ್ದ ನನಗೆ ವಾರದಲ್ಲಿ ಮೂರು ದಿನದ ಅದರ ತರಬೇತಿ ತರಗತಿಗೆ ಹೋಗುವುದು ಖಡ್ಡಾಯವಾಗಿದ್ದು, ತಡವಾಗಿ ಹೋದರೆ ಶೇಖರ್ ಮಾಸ್ಟ್ರ ಸೀಟಿಯಲ್ಲಿರುತ್ತಿದ್ದ ಚಾಟಿ ನಿರ್ದಾಕ್ಷಿಣ್ಯವಾಗಿ ಬೆನ್ನ ಮೇಲಾಡುವ ಹೆದರಿಕೆಯೂ ಸೇರಿ ನಾನು ವಾರಕ್ಕೆ ಕನಿಷ್ಠ ಮೂರುದಿನವಾದರೂ ಈ ಅಡ್ಡದಾರಿ ಹಿಡಿಯುತ್ತಿದ್ದೆ.


ಶಾಲೆಯೆಂದರೆ ಖಾಸಗಿ ಶಾಲೆ, ಸರಕಾರಿ ಶಾಲೆಗಳೆಂದರೆ ಕೆಲಸಕ್ಕೆ ಬಾರದ ದನದ ಕೊಟ್ಟಿಗೆಗಳಿಗಿಂತ ಅತ್ತತ್ತ ಎನ್ನುವ ಹೆತ್ತಮ್ಮ ಬೆಳೆಸಿದ್ದ ಪೂರ್ವಾಗ್ರಹಗಳನ್ನೆಲ್ಲ ನಿಜವೆಂದೆ ನಂಬಿದ್ದ ನನ್ನ ಮಗು ಮನಸಿಗೆ ಕಾಬೆಟ್ಟು ಶಾಲೆ ಹಾಗೇನೂ ಕಾಣಲಿಲ್ಲ! ಅಲ್ಲಿಯೂ ನನ್ನ ತೀರ್ಥಹಳ್ಳಿಯ "ಸೇವಾಭಾರತಿ"ಯಲ್ಲಿದ್ದಂತಹ ಶಿಸ್ತೆ ಇತ್ತು ಮತ್ತು ಇಲ್ಲಿನ ಮಕ್ಕಳು ಅಲ್ಲಿನವರಷ್ಟೆ ತುಂಟರೂ ಪ್ರತಿಭಾವಂತರೂ ಆಗಿದ್ದರು. ಹಾಗೆ ನೋಡಿದರೆ ಅನಿವಾರ್ಯತೆಯಿಲ್ಲದಿದ್ದರೂ ಖಾಸಗಿ ಶಾಲೆಗಳ ಶಿಕ್ಷಕರಲ್ಲಿ ನಿರೀಕ್ಷಿಸಬಹುದಾದ ಕರ್ತವ್ಯ ನಿಷ್ಠೆಗಿಂತಲೂ ಹೆಚ್ಚು ಬದ್ಧತೆ ಇಲ್ಲಿನ ಶಿಕ್ಷಕರಿಗಿತ್ತು. ನಾನು ಇಂದು ರೂಢಿಸಿ ಬೆಳೆಸಿಕೊಂಡಿರುವ ಅನೇಕ ಶಿಸ್ತುಗಳನ್ನ ಕಲಿತದ್ದು ಅಲ್ಲಿಯೆ ಅನ್ನುವ ಹೆಮ್ಮೆ ನನಗಿದೆ. ಬೈಲೂರಿನಿಂದ ಬರ್ತಿದ್ದ ಶೇಖರ್ ಮಾಸ್ಟ್ರು, ಹೆಬ್ರಿಯಿಂದ ಬರ್ತಿದ್ದ ಶ್ಯಾಂ ಮಾಸ್ಟ್ರು, ಎಣ್ಣೆಹೊಳೆಯ ಲಕ್ಷ್ಮಿ ಟೀಚರ್, ಸಹಪಾಠಿ ಶ್ರೀಹರಿಯ ಅಮ್ಮ ಸುಮತಿ ಟೀಚರ್, ನನ್ನ ದೂರದ ಚಿಕ್ಕಮ್ಮ ಶೈಲಜ ಟೀಚರ್, ಕೃಷ್ಣವೇಣಿ ಟೀಚರ್, ರಾಧಾಬಾಯಿ ಟೀಚರ್, ಚಿಕ್ಕಂದಿನಿಂದಲೆ ನೋಡಿ ಸಲುಗೆಯಿದ್ದ ಬಾಲವಾಡಿಯ ರತ್ನಾವತಿ ಟೀಚರ್, ಅವರ ಆಯಾ ಶಬಾನಾ ಬೇಗಮ್, ಬೆಳ್ಳಿ ಕೂದಲಿನ ಕಂಚಿನ ಕಂಠದ ಲಲಿತಮ್ಮ ಬಾಯಿ ಟೀಚರ್, ಕುಂಟಾಡಿಯಿಂದ ಬರ್ತಿದ್ದ ಪೀಟಿ ಮಾಸ್ಟ್ರು ರಮೇಶ ಶೆಟ್ಟಿ, ನನ್ನ ಚಿಕ್ಕಮ್ಮ ನಾಗರತ್ನ ಟೀಚರ್. ಸಹಪಾಠಿ ಪ್ರದೀಪನ ಅಮ್ಮ ರಾಜಮ್ಮ ಟೀಚರ್ ಹೀಗೆ ಎಲ್ಲರೂ ತಮ್ಮ ಮಿತಿಯಲ್ಲಿ ತಮ್ಮೆಲ್ಲ ರಗಳೆ ರಾದ್ದಾಂತ, ಸಣ್ಣತನ, ಪರವಹಿಸುವಿಕೆಗಳೆಲ್ಲದರ ನಡುವೆ ನಮ್ಮ ಶಾಲೆಗೆ ಕಾರ್ಕಳ ತಾಲೂಕಿನ ಮಟ್ಟಿಗೆ ಒಂದು ಘನತೆ ತಂದು ಕೊಡುವಲ್ಲಿ ಶ್ರಮಿಸಿದ್ದು ಸುಳ್ಳಲ್ಲ.


ಮಕ್ಕಳ ಸಂಖ್ಯೆಯಲ್ಲಿ ತಾಲೂಕಿನಲ್ಲಿಯೆ ದೊಡ್ದ ಶಾಲೆಯಾಗಿದ್ದ ಊರಿನ ಇನ್ನೊಂದು ತುದಿಯಲ್ಲಿದ್ದ "ಪೆರ್ವಾಜೆ ಶಾಲೆ"ಗೆ ಮೊದಲಸ್ಥಾನ ಬಿಟ್ಟುಕೊಟ್ಟು ಎರಡನೆ ಸ್ಥಾನಕ್ಕೆ ಅನಿವಾರ್ಯವಾಗಿ ತೃಪ್ತಿ ಪಟ್ಟುಕೊಂಡಿದ್ದ ನಮ್ಮ ಶಾಲೆಗೆ ಇನ್ನುಳಿದಂತೆ ಪಠ್ಯೇತರ ಹಾಗೂ ಕ್ರೀಡೆಗಳ ಮಟ್ಟಿಗೆ ಪ್ರಬಲ ಪ್ರತಿಸ್ಪರ್ಧಿಗಳು ಪೆರ್ವಾಜೆಯವರೆ ಆಗಿರುತ್ತಿದ್ದರು. ಇನ್ನುಳಿದ ಚಿಲ್ಲರೆ ಸರಕಾರಿ ಹಾಗೂ ಖಾಸಗಿ ಶಾಲೆಗಳನ್ನ ನಾವೆಲ್ಲ ಲೆಕ್ಖಕ್ಕೆ ಇಟ್ಟುಕೊಂಡಿರಲಿಲ್ಲ! ಅವರನ್ನೆಲ್ಲ ನಾವು ಸಹನಟರನ್ನ ಕಾಣುವಂತೆ ನಿರ್ಲಕ್ಷ್ಯದಿಂದ ನೋಡುತ್ತಿದ್ದೆವು. ಅಪ್ಪಿ ತಪ್ಪಿ ತಾಲೂಕು ಮಟ್ತದ ಸ್ಪರ್ಧೆಗಳಲ್ಲಿ ನಮ್ಮವೆರಡು ಶಾಲೆಗಳ ಹೊರತು ಇನ್ಯಾವುದೊ ಪುಡಿ ಶಾಲೆಯವರು ಬಹುಮಾನ ಗೆದ್ದರೆ ಆಶ್ಚರ್ಯ ಪಡುವಷ್ಟು ತಾತ್ಸಾರ ಅವರೆಲ್ಲರ ಬಗ್ಗೆ ನಮಗಿತ್ತು.


ನನ್ನ ಶಾಲೆಯ ಘನತೆಗೆ ತಕ್ಕಂತೆ ನಾವೂ ಸಹ ಚನ್ನಾಗಿ ಓದುತ್ತಿದ್ದೆವು. ತಾಲೂಕು ಮಟ್ಟದಲ್ಲಿ ನಮ್ಮ ಅರ್ಭಟ ಎಲ್ಲಾ ರೀತಿಯಲ್ಲೂ ಇನ್ನಿತರ ಶಾಲೆಯವರನ್ನ ನಡುಗಿಸುವಂತೆ ಇರುತ್ತಿತ್ತು. ನಮ್ಮನ್ನ ಎದುರಿಸಿ ಬರುವ ಎದುರಾಳಿ ಶಾಲೆಯ ಬಡಪಾಯಿ ನಾವು ಕಾಬೆಟ್ಟು ಶಾಲೆಯವರು ಎನ್ನುವುದನ್ನ ಕೇಳಿಯೆ ಆರಂಭಕ್ಕೆ ಮುನ್ನವೆ ಅರ್ಧ ಸೋಲನ್ನ ಒಪ್ಪಿಕೊಂಡು ಬಿಡುತ್ತಿದ್ದ. ಹೋದಲೆಲ್ಲ ನಮಗೆ ಮಗ್ಗುಲ ಮುಳ್ಳಾಗಿದ್ದವರು, ನಮ್ಮ ದಿಗ್ವಿಜಯ ಯಾತ್ರೆಗೆ ದೊಡ್ಡ ತೊಡಕಾಗಿದ್ದವರು ಕೇವಲ "ಪೆರ್ವಾಜೆ ಶಾಲೆ"ಯ ಕೊರಮರು ಮಾತ್ರ.


ದಿನಾ ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಶಣೈ ಮಾಮನ ಗದ್ದೆಯಂಚಿನಲ್ಲಿ ಇನ್ನುಳಿದವರೆಲ್ಲ ಬಿಂಬುಳಿ, ಮಾವಿನ ಕಾಯಿ, ಬೊಂಬಾಯಿ ನಲ್ಲಿಕಾಯಿ, ಶಾಂತಿ ಕಾಯಿ, ಬಾಳೆಚಿಪ್ಪಿನ ದರೋಡೆಗೆ ಇಳಿಯುತ್ತಿದ್ದು ಅವರ ಕಾಟ ಕಿರುಕುಳದಿಂದ ರೋಸತ್ತ ಶಣೈ ಮಾಮ ನನ್ನನ್ನೂ ಸೇರಿ ಎಲ್ಲರ ಮೇಲೂ ಹದ್ದಿನ ಕಣ್ಣಿಟ್ಟಿರುತ್ತಿದ್ದರು. ಹಾಗಂತ ವರ ಗ್ರಧೃ ದೃಷ್ಟಿಯನ್ನ ಯಾಮಾರಿಸಿ ಹೊಂಚುಹಾಕಿ ಇವನ್ನೆಲ್ಲ ದೋಚುತ್ತಿದ್ದ ಕಳ್ಳ ಕೊರಮರಿಗೇನೂ ಕೊರತೆಯಿರಲಿಲ್ಲ. ಆದರೆ ಅದ್ಯಾವುದೂ ನನ್ನ ಆಯ್ಕೆಯಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಆಗಷ್ಟೆ ಹಾಲುಗಟ್ಟುತ್ತಿದ್ದ ಭತ್ತದ ತೆನೆಯನ್ನ ಸುಖಾ ಸುಮ್ಮನೆ ಕಿತ್ತು ಅದರೊಳಗಿನ ಹಾಲನ್ನ ಬರಗೆಟ್ಟವನಂತೆ ಚೀಪುತ್ತಿದ್ದುದ್ದು ಹೌದು ಆದರೆ ನನ್ನ ಆಸಕ್ತಿಯಿದ್ದುದು ಅವರ ತರಕಾರಿ ಹಿತ್ತಲಿನಲ್ಲಿ ಹಾರಾಡುತ್ತಿದ್ದ ಚಿಟ್ಟೆಗಳತ್ತ ಮಾತ್ರ. ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿದ್ದ ಚಿತ್ತಾರಗಳ ಚಿಟ್ಟೆಗಳನ್ನ ತಾಳ್ಮೆಯಿಂದ ಕಾದು ಹಿಡಿದಿಡುವ ವಿಚಿತ್ರ ಆಸಕ್ತಿ ನನ್ನದು. ನನ್ನ ಹುಚ್ಚಾಟಗಳನ್ನ ನೋಡಿ ನಾನೊಬ್ಬ ನಿರುಪದ್ರವಿ ಪ್ರಾಣಿಯೆಂದು ತೀರ್ಮಾನಿಸಿದ ಶಣೈ ಮಾಮ ಕಡೆಕಡೆಗೆ ನನ್ನನ್ನ ನಿರ್ಲಕ್ಷಿಸಿ ಆಗಾಗ ನಾನತ್ತ ಚಿಟ್ಟೆಗಳಿಗಾಗಿ ಠಳಾಯಿಸುತ್ತಿದ್ದರೂ ಅದನ್ನ ಗಂಭೀರ ಅಪರಾಧವನ್ನಾಗಿ ಪರಿಗಣಿಸುವುದನ್ನೆ ಬಿಟ್ಟುಬಿಟ್ಟರು.


ಈ ಸ್ವಾತಂತ್ರವನ್ನ ನಾನಂತೂ ಧಾರಾಳ ದುರುಪಯೋಗ ಪಡೆಸಿಕೊಳ್ತಿದ್ದೆ. ದಿನವೊಂದರಲ್ಲಿ ಹತ್ತಿಪ್ಪತ್ತು ಚಿತ್ತಾರದ ಚಿಟ್ಟೆಗಳನ್ನ ಹೊಂಚುಹಾಕಿ ಹಿಡಿದಿದ್ದೂ ಇದೆ. ಆಗಷ್ಟೆ ಹನಿದು ನಿಂತ ಇಬ್ಬನಿಯಲ್ಲಿ ನೆನೆದು ನಿಂತ ಕಾಲಿಗೆ ಕಚಗುಳಿಯಿಡುತ್ತಾ ಚುಚ್ಚುವ ಹಸಿರು ಹುಲ್ಲುಗಳ ನಡುವೆ ಮೆತ್ತಗೆ ಬತ್ತಲೆ ಪಾದದಲ್ಲಿ ಓಡಾಡುತ್ತಾ ಬೆಳಗ್ಯೆ ಎಂಟರ ಸುಮಾರಿಗೆ ಚಿಟ್ಟೆಯ ಬೇಟೆಯಾಡುವುದೆ ಒಂದು ಸುಖ. ಮಳೆಗಾಲದಲ್ಲಿ ಕೊಡೆ ಹಿಡಿದು ಛಲ ಬಿಡದ ತ್ರಿವಿಕ್ರಮನಂತೆ ಹಿಡಿದು ನನ್ನ ಕೈಲಿರುತ್ತಿದ್ದ ತೊಟ್ಟೆಯಲ್ಲಿ ತುಂಬಿಸಿಕೊಳ್ತಿದ್ದೆ. ಹಿಡಿದ ಅವೆಲ್ಲವನ್ನೂ ಶಾಲೆಯಲ್ಲಿ ಮಕ್ಕಳೆಲ್ಲ ಬಂದ ಮೇಲೆ ಅದೇನೋ ದಂಡು ಕಡಿದು ಬಂದವನ ಠೀವಿಯಲ್ಲಿ ಹಾರಬಿಟ್ಟು ಹಿಡಿದ ನನ್ನ ಸಾಹಸದ ಜಂಭ ಕೊಚ್ಚಿಕೊಂಡು ಬೀಗುತ್ತಿದ್ದೆ.


( ಇನ್ನೂ ಇದೆ.)

No comments: