08 March 2013

ನೆನ್ನೆ ನಿನ್ನ ಕನಸಾದ ಕಾರಣ ಬಹುಷಃ ನನ್ನ ಈ ಇಡಿ ದಿನ ಪ್ರಫುಲ್ಲ.....





ಕ್ಷಣವೂ ಕಣ್ಣ ಕದಲಿಸದೆ
ಮರೆತು ಕೂಡ ಅವೆಯಿಕ್ಕದೆ....
ಮನಸು ಕಾಣುವ ಕನಸಿಗೆ ಕೊನೆಯೆಂಬುದಿಲ್ಲ,
ಒಳಗೊಳಗೆ ಕಂಡು ಹೊರ ಹೇಳದೆ ಕಾಪಿಡುವ
ಈ ಕನಸುಗಳೆಲ್ಲ ಆಗಾಗ ಮರಿ ಹಾಕಿ,....
ಮನದ ಮನೆಯೊಳಗೆ ದ್ವಿಗುಣವಾಗುತ್ತಲೆ ಸಾಗುತ್ತವೆ/
ಮುಗಿಯದ ಪಯಣದಲ್ಲೆ ಇರುತ್ತೇನೆ
ನಡುವೆ ಆರಿದ ಮರುಭೂಮಿಯಿದೆ...
ಆರದ ಹಿಮದ ಬೆಟ್ಟವೂ ಸಹ
ನಿನ್ನ ನೆನಪಿನ ಹೊರೆಹೊತ್ತ ಮನಸಿಗೆ ಎರಡೂನು ಒಂದೆ ಅಲ್ಲವಾ?,
ಒಂಟಿ ಹಾದಿಯ ತುಂಬ ಆವರಿಸಿದ ಕತ್ತಲಿತ್ತು
ಸುತ್ತಲೂ ಇರುಳು ಕವಿದಿತ್ತು....
ನನ್ನ ಮನಸೊಳಗೆ ಮಾತ್ರ ನಿನ್ನ ಸ್ವಪ್ನದ ಕಿರು ಹಣತೆ
ಮಂದವಾಗಿಯಾದರೂ ಉರಿಯುತ್ತಾ ಅವುಗಳೊಂದಿಗೆ ಇರುಳಿಡಿ ಸೆಣೆಸುತ್ತಿತ್ತು//


ನಿನ್ನ ಪಾಲಿಗೆ ಗಹನ ವಿಚಾರವಿದಲ್ಲ
ಬಾಳ ಪರಿಧಿ ಇನ್ನೂ ವಿಶಾಲ ನಿಜ....
ಆದರೆ ಇದನ್ನೆ ಬಾಳ್ವೆಯ ಗುರಿಯಾಗಿಸಿಕೊಂಡ ಮನಕ್ಕೆ
ಇದರಿಂದ ಬೇರ್ಪಡೆ ಚಿರನಿದ್ರೆಯಲ್ಲಿ ಮಾತ್ರ,
ನಿರಾಸೆಯ ದಡದಲ್ಲಿ ಕುಳಿತು
ಕಣ್ಣೀರಾಗುವ ಕನಸುಗಳಿಗೆ....
ಆತ್ಮನಿವೇದನೆಗಾಗಿ ಒಂದೆ ಒಂದು ಆತ್ಮೀಯ ಹೆಗಲಿಲ್ಲ
ಇರುಳೆ ತುಂಬಿರುವ ಗೋಳ ಬಾಳಲ್ಲಿ ಬೇಕೆಂದರೂ ಒಂದೂ ಹಗಲಿಲ್ಲ/
ಈ ಖದೀಮ ಲೋಕದಲ್ಲಿ ಕನಸ ಅಪಹರಿಸುವವರೂ ಇದ್ದಾರಂತೆ
ನನ್ನ ಸ್ವಪ್ನಗಳನ್ನೆಲ್ಲ ಅನುಮತಿಯಿಲ್ಲದೆ ಅಪಹರಿಸಲು
ನಿನಗೆ ಮಾತ್ರ ಮುಕ್ತ ಪರವಾನಗಿಯಿದೆ....
ಇನ್ನುಳಿದವರು ಹೇಳಿ ಇದನ್ನೊಯ್ದರೂ ಅದು ಶುದ್ಧ ಕಳ್ಳತನ,
ಕಲಸುಮೆಲೋಗರವಾದ ಕನಸುಗಳನ್ನೆಲ್ಲ
ಗೋರಿ ರಾಶಿ ಹಾಕಿಕೊಂಡು ಕೂತವನಿಗೆ.....
ಔಷದಕ್ಕಾದರೂ ಒಂದು ಒಡೆಯದ ಸುಂದರ ಸ್ವಪ್ನ ದಕ್ಕ ಬಾರದಿತ್ತ?//


ನೀ ಬಿಟ್ಟು ಹೋದ ನಡು ಹಾದಿಯಲ್ಲಿ
ಗುರುತಿಗಾಗಿ ನನ್ನ ಕನಸೊಂದನ್ನ ಅಲ್ಲಿಯೆ ಬಿಟ್ಟು ಬಂದಿದ್ದೇನೆ....
ಮತ್ತದೆ ಬಾಳ ತಿರುವಿನಲ್ಲಿ ಸಾಗುವಾಗ
ಮರೆಯದೆ ನೀನದನ್ನ ನೇವರಿಸುತ್ತೀಯ ಅನ್ನುವ ಹಂಬಲದಲ್ಲಿ,
ನನಗೆ ನನ್ನ ನೋವುಗಳು ಅವತ್ತೂ ಮುಖ್ಯವಾಗಿರಲಿಲ್ಲ
ಇವತ್ತಿಗೂ ನಿನ್ನ ನಲಿವುಗಳಷ್ಟೆ ನನ್ನ ಸರ್ವಸ್ವ.....
ಈಗೀಗ ಕತ್ತಲು ಭಯ ಹುಟ್ಟಿಸುವುದಿಲ್ಲ
ಇಲ್ಲದ ಭೂತಗಳ ಭಯವೂ ನನಗಿಲ್ಲ....
ಒಂಟಿತನ ಹೊದ್ದ ಅಂತಃರ್'ಪಿಶಾಚಿಯಾಗಿ
ಅಲೆವ ನನ್ನ ಮನಸಿಗೆ ನೀ ಬಿಟ್ಟು ಹೋದ ಮೇಲೆ ಹೆದರಿಕೆಯ ಹಂಗು ಉಳಿದಿಲ್ಲ/
ಕವಿತೆಯಾಗಿ ಹರಿವ ನೋವುಗಳಲ್ಲೆಲ್ಲ
ಕಳೆದುಕೊಂಡ ಏನನ್ನೋ ಅರಸುವ ತಹತಹಿಕೆಯಿರುತ್ತದೆ.....
ಕದ ತಟ್ಟಿ ಬರದ ಕನಸುಗಳು ಯಾವಾಗಲೂ ಅನುಮತಿಗೂ ಕಾಯದೆ
ಹೊತ್ತಲ್ಲದ ಹೊತ್ತಿನಲ್ಲಿ ನನ್ನ ಹಾಯುತ್ತವೆ
ನಾನದರಲ್ಲಿ ಕರಗಿ ಕಣ್ಣೀರಾಗುವುದನ್ನೆ ಕಾದು ಅದರಲ್ಲಿ ತೋಯುತ್ತವೆ,
ತಂತು ಕಡಿದು ಹೋದರೇನು
ಮಾತು ಮೌನವಾದರೂನು....
ಸ್ವಪ್ನ ಸರೋವರದಲ್ಲಿ ತೇಲುತ್ತಿರುವ
ಕಾಗದದ ದೋಣಿ ಇನ್ನೂ ಮುಳುಗಿಲ್ಲ//


ಮನದ ನೊಂದ ಭಾವಗಳಿಗೆಲ್ಲ
ಬೆಚ್ಚನೆ ಚಾದರ ಹೊದೆಸಿ ತಟ್ಟಿ ಮಲಗಿಸುವ.....
ನಿತ್ಯದಿರುಳ ಕಾಯಕಕ್ಕೆ
ನಿನ್ನ ಹೆಸರಿನ ಜೋಗುಳ ಖಡ್ಡಾಯ,
ಜೀವನದ ಪ್ರತಿ ಹೊರಳಲ್ಲೂ ಒಂದೊಂದು ಗಲ್ಲಿಗಳಿವೆ
ಆದರೂ ಕಣ್ಗಳೆರಡು ಕಡೆಯವರೆಗೂ...
ಸಾಂಗತ್ಯ ನೀಡುವ ಒಂದೆ ಒಂದು ಖಾಸಗಿ ಕನಸಿನ ತಹತಹಿಕೆಯಲ್ಲಿದೆ/
ನಿತ್ಯ ನೀರು ಕಣ್ಗಳಿಂದ ಸೋರಿ ಹೋಗುತ್ತಿದೆ ಎನ್ನುವ ವ್ಯಥೆ
ನನಗಾದರೂ ಏಕೆ ಹೇಳು?
ಕಂಡು ಪ್ರೇರೇಪಿತನಾಗುತ್ತೇನೆ.....
ಖಚಿತ ಉದ್ದೇಶವಿಲ್ಲದೆ ಬಾನ ಬಿರಿದು
ನೆಲಕೆ ಸುರಿದು ಮುಗಿಸುದಿಲ್ಲವೆ ಮೋಡ ತನ್ನ ಬಾಳು?,
ಕಾದು ದಣಿದ ಮನಸಿಗೆ ತುಸುವೂ ದಣಿವರಿವಾಗದಂತೆ
ಕನಸಾಗಿ ಮೆಲ್ಲನೆ ನೇವರಿಸುವ ನೆನಪುಗಳಿಗೆ ಬಾಳು ಋಣಿ.....
ಮನಸದೆಷ್ಟೆ ಖಾಲಿ ಖಾಲಿಯಾಗಿ
ಏನೊಂದೂ ತೋಚದ ಕ್ಷಣದಲ್ಲೂ ನನಗೆ ನಿನ್ನದೆ ಧ್ಯಾನ//

No comments: