11 March 2013

ತುಳುಗಾದೆ-೪೧


"ಏರ್ ಲಾ ಇಜ್ಯಂದಾಂಡ ಮಾಮಿ ಮಗಲ್ ಆವೋಲಿಗೆ!"


{ ಸೋದರಿಕೆಯ ಸಂಬಂಧದ ಮೂಲಕ ವಿವಾಹ ಸಂಬಂಧ ಕುದುರಿಸುವುದು ಇನ್ನುಳಿದ ಎಲ್ಲೆಡೆಯಂತೆ ತುಳುನಾಡಿನ ಜನಪದರಲ್ಲಿಯೂ ರೂಢಿಯಲ್ಲಿತ್ತು. ಕಾಲಕ್ರಮೇಣ ಮತಾಂತರಕ್ಕೆ ಒಳಗಾದ ಇಲ್ಲಿನ ಕೆಲವರು ಇಸ್ಲಾಂ-ಕ್ರೈಸ್ತ ಮತಾನುಚಾರಣೆಯ ಅನುಸಾರ ಇದನ್ನ ತಾಯಿಯ ಒಡಹುಟ್ಟಿದ ಸಹೋದರರ, ತಂದೆಯ ಒಡ ಹುಟ್ಟಿದ ಸಹೋದರಿಯರ ಬದಲಾಗಿ ತಾಯಿಯ ಒಡ ಹುಟ್ಟಿದ ಸಹೋದರಿಯರ ಹಾಗೂ ತಂದೆಯ ಒಡ ಹುಟ್ಟಿದ ಸಹೋದರರ ಜೊತೆಗಿನ ವೈವಾಹಿಕ ಸಂಬಂಧವಾಗಿ ಬದಲಾದ ಆಚರಣೆಗ ಬದಲಿಸಿಕೊಂಡರೆ ವಿನಃ ಸಹೋದರಿಕೆಯ ವೈವಾಹಿಕ ಸಂಬಂಧಗಳು ರೂಢಿಯಿಂದ ತಪ್ಪಿಯಂತೂ ಹೋಗಲಿಲ್ಲ ಅನ್ನುವುದು ವಾಸ್ತವ. ಈ ರೀತಿಯ ವಿವಾಹಗಳು ಹಕ್ಕಿನವು ಎಂದೆ ಭಾವಿಸುತ್ತಿದ್ದ ಕಾಲವೂ ಒಂದಿತ್ತು, ಅದರ ಪಳಯುಳಿಕೆಗಳನ್ನ ಆಗಾಗ ನಾವು ಅಲ್ಲಲ್ಲಿ ಕಾಣುತ್ತೇವೆ ಸಹ. ಅದೇನೆ ಇದ್ದರೂ ಮೊದಲಿನ ಜನಪ್ರಿಯತೆ ಈ ಸಹೋದರಿಕೆಯ ಮದುವೆಗಳಿಗೆ ಉಳಿದಿಲ್ಲ.


ಒಬ್ಬ ಹುಡುಗ ತನ್ನ ಅತ್ತೆಯ ಮಗಳು ತನಗಾಗಿ ಬಾಲ್ಯದಲ್ಲಿಯೆ ಭವಿಷ್ಯದ ಮಡದಿಯಾಗಿ ಗೊತ್ತಾಗಿ ಮೌಕಿಕವಾಗಿ ಹಿರಿಯರ ಸಮ್ಮತಿ ಗಿಟ್ಟಿಸಿದ್ದರೂ ಬೇರೊಬ್ಬ ಹೆಣ್ಣಿನ ಮೋಹಕ್ಕೆ ಬಿದ್ದನಂತೆ. ಕ್ರಮೇಣ ಆ ಹೆಣ್ಣಿನ ಸುತ್ತ ಸುತ್ತಿ ಆಕೆಯ ಒಲವನ್ನ ಗಿಟ್ಟಿಸಿ ಕೊಂಡನಾದರೂ ಕಾರಣಾಂತರಗಳಿಂದ ಆ ಸಂಬಂಧ ಕೂಡಿ ಬರಲಿಲ್ಲ. ಜಾತಿ, ಅಂತಸ್ತು, ಮತ ಅಥವಾ ಇನ್ಯಾವುದೋ ಸಾಮಾಜಿಕ ಅನಿಷ್ಟದ ಕಾರಣಗಳಿಂದ ಈೊಲವು ಮದುವೆಯ ಮಟ್ಟಕ್ಕೆ ಏರುವ ಮೊದಲೆ ಅಸಾಧ್ಯವಾಗಿ ಕುಸಿದು ಬಿತ್ತು. ಅಂತಹದರಲ್ಲಿ ನಿರಾಶನಾದರೂ ಆ ಗಂಡು ಕುಸ್ತಿ ಕಳದಲ್ಲಿ ಚಿತ್ತಾಗಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ಬೀಗಿದ ಜಗಜಟ್ಟಿಯಂತೆ ಇವಳು ತಪ್ಪಿ ಹೋದರೇಂತೆ! ಇದ್ದಾಳಲ್ಲ ಅವಳು ಅತ್ತೆಯ ಮಗಳು ತನ್ನನ್ನೆ ನಂಬಿಕೊಂಡು ಎಂದು ಹುಸಿ ಬೀಗಿ ಸಮಾಧಾನ ಪಟ್ಟುಕೊಂಡನಂತೆ!


ಮಾತೃ ಮೂಲದ ಸಂಸ್ಕೃತಿಯೆ ಆವರಿಸಿಕೊಂಡಿರುವ ತುಳುನಾಡಿನಲ್ಲಿ ಈ ಗಾದೆಯ ಲಿಂಗಾಂತರ ವಾಗಬೇಕಿತ್ತಲ್ಲ ಅಂತ ನನಗನ್ನಿಸಿತು. "ಯಾರೂ ಇಲ್ಲದಿದ್ದರೆ ಅತ್ತೆಯ ಮಗಳೆ ಆದೀತು" ಅನ್ನುವುದಕ್ಕಿಂತ "ಏರ್ಲಾ ಇಜ್ಯಂದಾಂಡ ಅರ್ವತ್ತೆನೆ ಆವೊಲಿಗೆ!" ಅಂದರೆ "ಯಾರೂ ಇಲ್ಲದಿದ್ದರೆ ಮಾವನ ಮಗನೆ ಆಗಬಹುದಂತೆ!" ಅಂತಾಗ ಬೇಕಿತ್ತಲ್ಲ! ಅನ್ನುವ ಜಿಜ್ಞಾಸೆ ಮೂಡಿದ್ದೂ ಇದೆ. ಅದೇನೆ ಇದ್ದರೂ ಬಾಲ್ಯ ವಿವಾಹಗಳು ವ್ಯಾಪಕವಾಗಿದ್ದ ದಿನಗಳಲ್ಲಿ ಸದರಿ ಗಾದೆ ಹುಟ್ಟಿಕೊಂಡಿರಬಹುದೇನೋ. ಇತ್ತೀಚಿನ ದಿನಗಳಲ್ಲಿ ಜನಾಂಗ-ಭಾಷೆ-ದೇಶಗಳ ಎಲ್ಲೆ ದಾಟಿ ವೈವಾಹಿಕ ಸಂಬಂಧಗಳು ಕುದುರುತ್ತಿರುವಾಗ ಈ ಗಾದೆಗೆ ಅಷ್ಟೊಂದು ಮಹತ್ವವಿಲ್ಲ. ಒಂದು ವೇಳೆ ಅಷ್ಟಿಷ್ಟು ಇದ್ದರೂ ಸಹ ಲಿಂಗಾನುಪಾತದಲ್ಲಿ ಹೆಮ್ಮಕ್ಕಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿರುವ ಕಾಲದಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಬೇಡಿಕೆ ಹುಟ್ಟಿ ಹೀಗೆ ಕೊನೆಯ ಆಯ್ಕೆಯಾಗಿ ಉಳಿದು ಕಾಯುವ ಕರ್ಮದ ಅನಿವಾರ್ಯತೆ ಹುಡುಗರಷ್ಟು ಅವರಿಗಿಲ್ಲವಾಗಿ ಈ ಗಾದೆಯೆ ಅರ್ಥಹೀನವೆನ್ನಿಸಿ ಬಿಟ್ಟಿದೆ.}


( ಏರ್ ಲಾ ಇಜ್ಯಂದಾಂಡ ಮಾಮಿ ಮಗಲ್ ಆವೋಲಿಗೆ! = ಯಾರೂ ಇಲ್ಲಂತಾದರೆ ಅತ್ತೆ ಮಗಳು ಆದೀತಂತೆ!.)

No comments: