10 March 2013

ತುಳುಗಾದೆ-೪೦







"ಗೆಜ್ಜೆ ಕಟ್ಟಿನೈಡ್ದ್ ಬೊಕ್ಕ ಲಜ್ಜೆ ನನ ದಾಯೆ?"


{ ಹಿಂದೆಲ್ಲ ಗೆಜ್ಜೆ ಕಟ್ಟಿ ಕುಣಿಯುವುದು ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿತ್ತು. ದೇವರ ಸೇವೆ ಅನ್ನುವ ಹೆಸರಿನಲ್ಲಿ ಗೆಜ್ಜೆ ಕಟ್ಟಿ ಕುಣಿವ ಅದರಲ್ಲೂ ವಿಶೇಷವಾಗಿ ಹೀಗೆ ಬಹಿರಂಗವಾಗಿ ಹೆಂಗಸರ ಶೀಲದ ಬಗ್ಗೆ ಅಡ್ಡ ಮಾತನಾಡುವವರು ಬೀದಿ ತುಂಬ ಧಾರಾಳ ಸಿಗುತ್ತಿದ್ದರು. ತಮ್ಮೊಳಗಿರುವ ಕಲೆಯ ಅಭಿವ್ಯಕ್ತಿಗಾಗಿ ತವಕ ಪಡುತ್ತಿದ್ದ ಇಂತಹ ಕಲಾವಿದರನ್ನ ತಾನೆ ದೇವರ ಅಂಶವೆಂದು ನಂಬಿಸಿ ದೈಹಿಕವಾಗಿ ಕಬಳಿಸಿ ನುಂಗಿ ನೊಣೆಯುತ್ತಿದ್ದ ಅರ್ಚಕನೆ ಈ ಪುಕಾರನ್ನ ಬಹಿರಂಗದಲ್ಲಿ ಮೆಲ್ಲನೆ ಹರಿಯ ಬಿಡುತ್ತಿದ್ದ. ಒಟ್ಟಿನಲ್ಲಿ ಗೆಜ್ಜೆ ಕಟ್ಟುವ ಹಂಬಲವಿದ್ದರೆ ಖಡ್ಡಾಯವಾಗಿ ಇಂತಹ ಅಪವಾದಗಳಿಗೆ ಬಲಿಯಾಗಲು ತಯಾರಾಗಿದ್ದು ಅಂತರಂಗದ ಲಜ್ಜೆಗೆ ಎಳ್ಳು-ನೀರು ಬಿಟ್ಟೆ ಮುಂದಡಿಯಿಡ ಬೇಕಿತ್ತು.


ಯಾವುದಾದರೂ ಕೆಲಸವನ್ನ ಅದೆಷ್ಟೆ ಮಂದಿಗೆ ಅಪಥ್ಯ ಅನ್ನಿಸುವಂತಹದ್ದು ಅದಾಗಿದ್ದರೂ ಮಾಡಲು ಉದ್ಯುಕ್ತವಾಗ್ಬೇಕಾದ ಪರಿಸ್ಥಿತಿಯಲ್ಲಿರುವ ಮಂದಿಯನ್ನ ಪ್ರೋತ್ಸಾಹಿಸಲು. ಅವರಲ್ಲಿರ ಬಹುದಾದ ಆತಂಕ, ಮಾನಸಿಕ ಕ್ಲೇಷ ಹುಟ್ಟಿಸುವಂತಹ ಸಂಶಯವನ್ನ ಹೊಡೆದೋಡಿಸಿ ಧೈರ್ಯ ತುಂಬಲಿಕ್ಕೆ ಈ ಗಾದೆಯ ಆಸರೆ ಪಡೆಯಲಾಗುತ್ತಿತ್ತು. ಆ ಮೂಲಕ ಅವರಲ್ಲಿದ್ದ ಅಳುಕನ್ನ ಹೋಗಲಾಡಿಸಿ ಹುಮ್ಮಸ್ಸು ತುಂಬುವ ಕಿರು ಪ್ರಯತ್ನ ಮಾಡಲಾಗುತ್ತಿತ್ತು. ಗೆಜ್ಜೆಯನ್ನ ಕಟ್ಟಿದ ಮೇಲೆ ಲಜ್ಜೆ ಇನ್ನೇಕೆ? ಅನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


ನಮ್ಮ ನಡೆ ನುಡಿ ನಮ್ಮಂತೆ ಇನ್ನಿತರಿಗೂ ಸಹನೀಯವೆ ಆಗಿರ ಬೇಕೆಂದೇನಿಲ್ಲ. ಸಂವೇದನೆ ಸಹಿತ ಸರಳ ನಡುವಳಿಕೆಯನ್ನೂ ಸಹ ಸಂಶಯದ ದೃಷ್ಟಿಯಿಂದ ದಿಟ್ಟಿಸಿ ಾದಕ್ಕೊಂದು ವಿಶೇಷ ರಂಗು ಹಚ್ಚಿ ಅದರಿಂದ ಹಿತ ಕಾಣದೆ ಆಂತರಿಕವಾಗಿ ನರಳುವವರು ನೂರು ಮಂದಿಯಿದ್ದರು. ಆದರೆ ಒಂದು ಕೆಲಸವನ್ನ ನಿರ್ವಸಿಸುವ ಹೊಣೆಯನ್ನ ಹೊತ್ತ ಮೇಲೆ ಅದನ್ನೆಂದೂ ಅರ್ಧಕ್ಕೆ ನಿಲ್ಲಿಸದೆ ತಾರ್ಕಿಕ ಅಂತ್ಯವೊಂದನ್ನ ಮುಟ್ಟಿಸುವ ತನಕ ತಣಿಯದೆ, ನಿರೀಕ್ಷಿತವೆ ಆದ ಲಘು ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿ ಕೊಳ್ಳದೆ, ಅಸಹನೆಯ ನುಡಿಗಳಿಗೆ ಪ್ರಾಮುಖ್ಯತೆ ಕೊಡದೆ ನಮ್ಮ ಪ್ರಾಮಾಣಿಕ ಪ್ರಯತ್ನವನ್ನ ಜಾರಿಯಲ್ಲಿಡ ಬೇಕು ಅನ್ನುವುದು ಈ ಗಾದೆಯ ಆಶಯ.}



( ಗೆಜ್ಜೆ ಕಟ್ಟಿನೈಡ್ದ್ ಬೊಕ್ಕ ಲಜ್ಜೆ ನನ ದಾಯೆ? = ಗೆಜ್ಜೆ ಕಟ್ಟಿಯಾದ ಮೇಲೆ ಲಜ್ಜೆ ಇನ್ನೇಕೆ? )

No comments: