13 March 2013

ತುಳುಗಾದೆ-೪೩
"ಕಾಡ್'ದ ಭೂತೊಗ್ ಕೋಲ ಕೊರಡ! ಕಡು ಮೈತಿನೈಟೆ ಕುಡ ಗಾಲ ಪಾಡಡ!!"


{ ಜಗತ್ತಿನಲ್ಲಿರುವ ದೇವಾನುದೇವತೆಗಳೆಲ್ಲ ನೆಲೆಯಾದ ಸ್ಥಳದಂತೆ ಹೊರಗಿನವರ ಪಾಲಿಗೆ ಗೋಚರಿಸುವ ತುಳುನಾಡಿನಲ್ಲಿ ದೇವರಿಗಿಂತ ತುಳುವರ ಪಿತೃ ದೈವಗಳನ್ನ ಪ್ರತಿನಿಧಿಸುವ ಭೂತಗಳಿಗೆ ಜಾಸ್ತಿ ಮನ್ನಣೆಯಿದೆ. ವರ್ಷಕ್ಕೊಮ್ಮೆ ಭೂತಗಳಿಗೆ ಹೊತ್ತ ಹರಕೆಯನ್ನ ಮುಟ್ಟಿಸುವ ಒಂದು ಸಾಂಸ್ಕೃತಿಕ ಆಚರಣೆಯೆ ಕೋಲ. ತನ್ನ ಸಂಕಟದ ಕಾಲದಲ್ಲಿ ಭೂತಗಳ ಮೊರೆ ಹೋಗಿ ಅದು ಪರಿಹಾರವಾದ ನಂತರ ಭೂತಗಳಿಗೆ ನಿಯತ್ತಾಗಿ ಹರಕೆ ತೀರಿಸುವುದು ಕೋಲದ ಕ್ರಮ. ಇಲ್ಲಿ ದೇವರನ್ನು ನಂಬದವರೂ ಭೂತಗಳ ಮುಂದೆ ನಡು ಬಗ್ಗಿಸಿ ನಿಲ್ಲುವ ವಿಸ್ಮಯಗಳು ಕಾಣ ಸಿಗುತ್ತವೆ. ಗುತ್ತು- ಬರ್ಕೆ-ಬೀಡು ಮುಂತಾದ ಅಧಿಕಾರ ಕೇಂದ್ರಗಳ ಚುಕ್ಕಾಣಿ ವಹಿಸಿಕೊಂಡ ಬ್ರಾಹ್ಮಣ- ಬಂಟ- ಜೈನರಿಗೆ ಅಲ್ಲಿನ ಭೂತಗಳ ದೇಖಾರೇಖಿಯ ಹೊಣೆಗಾರಿಕೆಯೂ ಕರ್ತವ್ಯದಂತೆ ದಾಟುವುದರಿಂದ ಅವುಗಳ ಕೋಲ ಕೊಡುವುದು ಅವರ ಜವಾಬ್ದಾರಿ. ಇಂತಹ ದೊಡ್ದ ಮನೆಗಳಲ್ಲಿ ಭೂತಕ್ಕೆ ಪ್ರತ್ಯೇಕ ಕೋಣೆ ಮೀಸಲಿರುತ್ತದೆ ಹಾಗೂ ಅಲ್ಲಿ ಭೂತಗಳ ಸಾಂಕೇತಿಕ ಮಂಚ ಅಥವಾ ಉಯ್ಯಾಲೆಯೂ ಇರುತ್ತವೆ. ಅಂತೆಯೆ ಕೊರಗರು ತಮ್ಮ ಗುಡಿಗಳಲ್ಲಿ ಅಂದರೆ ಗುಡಿಸಲುಗಳಲ್ಲಿ ಭೂತವನ್ನ ನಂಬಿ ಕೂರಿಸಿದ ಮಣೆಯನ್ನಿಟ್ಟುಕೊಂಡಿರುವ ಕ್ರಮವಿದೆ. ಮುಸಲ್ಮಾನ ಹಾಗೂ ಕ್ರೈಸ್ತರು ಊರೊಟ್ಟಿನ ಗೆರೋಡಿ, ತಾನಗಳಲ್ಲಿ ನಡೆಯುವ ಕೋಲಗಳಲ್ಲಿ ಭಯ ಭಕ್ತಿಯಿಂದ ಪಾಲ್ಗೊಂಡು ತಾವು ಹೊತ್ತ ಹರಕೆಯನ್ನ ತೀರಿಸುತ್ತಾರೆ. ಒಟ್ಟಾರೆ ಇಲ್ಲಿನ ಭೂತಗಳಿಗೆ ಜಾತಿ, ಮತ, ಅಂತಸ್ತು ಹಾಗೂ ಲಿಂಗ ಭೇದವಿಲ್ಲವೆ ಇಲ್ಲ! ಇದು ವೈದಿಕ ಪೂರ್ವ ತುಳುನಾಡಿನ ಪ್ರಕೃತಿ ಆರಾಧನಾ ಪದ್ದತಿಯ ಪಳಯುಳಿಕೆಯಾಗಿರಲಿಕ್ಕೂ ಸಾಕು. ಭೂತಗಳಲ್ಲೂ ಕೂಡ ಆಂತರಿಕವಾಗಿ ಭೇದಭಾವಗಳು ಅನ್ವಯವಾಗುವುದಿಲ್ಲ. ಗಂಡು, ಹೆಣ್ಣು, ಅರ್ಧನಾರಿ ಹಾಗೂ ಅರ್ಧ ಮಾನವ- ಅರ್ಧ ಮೃಗ ಹೀಗೆ ವೈವಿಧ್ಯಮಯ ಭೂತಗಳು ಇಲ್ಲಿನ ಮಂದಿಗೆ ಅಭಯ ನೀಡುತ್ತವೆ. ಪಂಜುರ್ಲಿ, ಕಲ್ಕುಡ, ಕಲ್ಲುಟ್ಟಿ, ಜುಮಾದಿ, ಲಕ್ಕೆಸರಿ, ಕೊಡಮಣಿತ್ತಾಯ, ಗುಳಿಗ, ವಿಷ್ಣುಮೂರ್ತಿ, ಆಲಿಭೂತ ಹಾಗೂ ಕೊರಗರ ತನಿಯಜ್ಜ ಹೀಗೆ ಜಾತಿ-ಮತಗಳ ಹಂಗಿಲ್ಲದ ಅಸಂಖ್ಯ ಭೂತಗಳು ಇಲ್ಲಿ ಆರಾಧಿಸಲ್ಪಡುತ್ತವೆ. ವೈದಿಕತೆಯ ವಕ್ತಾರಿಕೆ ವಹಿಸಿಕೊಂಡಿರುವ ಬ್ರಾಹ್ಮಣರಿಂದ ಹಿಡಿದು ಶೂದ್ರಾತಿಶೂದ್ರ ಕೊರಗರವರೆಗೆ ಎಲ್ಲರೂ ಕೋಲದಲ್ಲಿಯೆ ನಮಾಜು ಮಾಡುವ ಮುಸಲ್ಮಾನ ಆಲಿಭೂತದ ಸಹಿತ ಈ ಎಲ್ಲಾ ಭೂತಗಳಿಗೆ ನಾನಾ ರೂಪದ ಹರಕೆ ಕಟ್ಟಿ ಅವನ್ನ ಕಷ್ಟಪಟ್ಟಾದರೂ ತೀರಿಸುತ್ತಾರೆ! ಇದು ಇಲ್ಲಿನ ಸಾಮಾಜಿಕ ಅನನ್ಯತೆ.


ಆದರೆ ಈ ಭಯ ಭಕ್ತಿ ಅದೇನೆ ಇದ್ದರೂ ಅವೆಲ್ಲ ಕೇವಲ ಊರಿನೊಳಗಿರುವ ಭೂತಗಳಿಗೆ ಮಾತ್ರ ಸೀಮಿತವಾಗಿದ್ದರೆ ಸಾಕು ಎನ್ನುವ ವಿವೇಕ ಹೇಳುತ್ತದೆ ಈ ಗಾದೆಯ ಪೂರ್ವಾರ್ಧ. ಕಾಡಿನಲ್ಲಿ ಸಾಗುವಾಗ ನಮಗೆ ಅಲ್ಲಿ ಯಾವುದಾದರೂ ಭೂತದ ನೆಲೆ ಸೂಚಿಸುವ ಕಲ್ಲುಗುಂಡಿನ ನಿಶಾನೆ ಕಾಣ ಸಿಗಬಹುದು. ಹಾಗಂತ ಅವಕ್ಕೂ ಹರಕೆ ಹೊತ್ತು ಎಡೆಯಿಟ್ಟು ವರ್ಷಾವಧಿ ಕೋಲವನ್ನ   ಸಲ್ಲಿಸಬೇಕಿಲ್ಲ. ಕಾಡಿನಲ್ಲೆ ಬಹುಕಾಲವಿರುವ ಈ ಭೂತಗಳು ಸ್ವಭಾವದಲ್ಲೂ ಒರಟುತನವನ್ನ ರೂಢಿಸಿಕೊಂಡಿರಬಹುದು. ಅಂತವಕ್ಕೆ ಅತಿ ಓಲೈಕೆ ಮಾಡುವ ಬದಲು ಒದ್ದು ಬುದ್ಧಿ ಕಲಿಸುವುದೆ ಒಳ್ಳೆಯದು ಅನ್ನುತ್ತದೆ ಈ ಗಾದೆಯ ಮೊದಲರ್ಧ! ಅಂದರೆ ನಾವು ವ್ಯವಹರಿಸುವ ವ್ಯಕ್ತಿಗಳು ಸಭ್ಯ ನಾಗರೀಕರಾಗಿದ್ದರೆ ಅವರಲ್ಲಿ ಮೃದು ನಡುವಳಿಕೆ ಸಮಂಜಸ. ಒಂದುವೇಳೆ ಅವರು ಒರಟರಾಗಿದ್ದರೆ ಅವರಿಗರ್ಥವಾಗುವ ಕಠಿಣ ಭಾಷೆಯಲ್ಲಿಯೆ ಅವರಿಗೆ ಬುದ್ಧಿ ಕಲಿಸಬೇಕು.ಅಂತೆಯೆ ಬೇಸಿಗೆಯಲ್ಲಿ ಬಹುಪಾಲು ಬತ್ತಿ ಬರಿದಾಗಿರುವ ತೋಡು, ಕೆರೆ, ಹಳ್ಲ, ಹೊಳೆಗಳಲ್ಲಿನ ನೀರು ನಿಂತ ಮಡುಗಳಲ್ಲಿ ಇರುವ ಸಿಹಿ ನೀರಿನ ಮೀನುಗಳನ್ನ "ಕಡು ಹಾಕಿ" ಹಿಡಿದು ತಿನ್ನುವ ಬೇಟೆಯ ಕ್ರಮವೊಂದು ಮಲೆನಾಡು ಹಾಗೂ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಮೀನಿನ ದೇಹ ಪ್ರಕೃತಿಗೆ ಮಾರಕ ವಿಷವಾದ ಕಾರೆ ಮತ್ತಿತರ ಮರಗಳ ಕಾಯಿ ಅಥವಾ ತೊಗಟೆಯನ್ನ ಚನ್ನಾಗಿ ಜಜ್ಜಿ ಅದನ್ನ ಮೀನಿರುವ ಮಡುಗಳಲ್ಲಿ ಕದಡಿದರೆ ಸಾಕು ಅಲ್ಲಿ ಆಶ್ರಯ ಪಡೆದ ಮೀನುಗಳೆಲ್ಲ ಅಮಲೇರಿಯೋ, ಸತ್ತೋ ಹೊಟ್ಟೆ ಮೇಲಾಗಿ ನೀರಲ್ಲಿ ತೇಲುತ್ತವೆ. ಅಂತಹ ಮೀನುಗಳನ್ನ ಹಾಗೆಯೆ ಎತ್ತಿಕೊಳ್ಳಬಹುದು, ಅದಕ್ಕಾಗಿ ಮತ್ತೆ ಗಾಳ ಇಳಿಸಬೇಕಿಲ್ಲ. ಅಂದರೆ ಒಮ್ಮೆ ನಮ್ಮ ಋಣಕ್ಕೆ ಸಿಲುಕಿ ಸಾಲಗಾರನಾಗಿಯೋ, ಇಲ್ಲಾ ಮರ್ಜಿಗೆ ಒಳ ಪಡುವ ಸಹಾಯ ಪಡೆದೋ ನಮ್ಮ ಅಡಿಯಾಳಾಗುವ ಮಂದಿಯನ್ನ ಮತ್ತೆ ವಿಶೇಷವಾಗಿ ಬೇಕಾದಾಗ ಬಗ್ಗಿಸಲು ಬಲಪ್ರಯೋಗ ಮಾಡಬೇಕಾಗಿಲ್ಲ. ಎಷ್ಟೆಂದರೂ ಅವರು ನಮ್ಮ ಮಾತು ಮೀರಲಾರರು ಎನ್ನುವ ಅರ್ಥ ಹೊಮ್ಮಿಸುತ್ತದೆ ಈ ಗಾದೆಯ ಉತ್ತರಾರ್ಧ.}( ಕಾಡ್'ದ ಭೂತೊಗ್ ಕೋಲ ಕೊರಡ! ಕಡು ಮೈತಿನೈಟೆ ಕುಡ ಗಾಲ ಪಾಡಡ!! = ಕಾಡಿನ ಭೂತಕ್ಕೆ ಕೋಲ ಕೊಡಬೇಡ! ಕಡು ಸುರಿದಕಡೆ ಮತ್ತೆ ಗಾಳ ಹಾಕಬೇಡ!!.)

No comments: