08 March 2013

ಮಾಸದ ನೆನಪಿನ ಮಾಸವೆ ಇದೆ ಸಂವತ್ಸರದುದ್ದ....
ನಿನ್ನೊಂದಿಗೆ ಹೊಸೆದ ಕನಸುಗಳಿಗೆಲ್ಲ
ನಿನ್ನದೆ ಹೆಸರು ಹಚ್ಚಿ.....
ನಿನ್ನೆದೆಯ ವಿಳಾಸಕ್ಕೆ ನಿತ್ಯ ಕಣ್ಣಂಚೆಯಲ್ಲಿ ಕಳಿಸಿ ಕನವರಿಸುತಿರುತೀನಿ
ನಿನಗವೆಲ್ಲ ಖಾತ್ರಿಯಾಗಿ ಮುಟ್ಟಿವೆಯಲ್ಲವಾ?,
ಸಾತ್ವಿಕ ಮನಸಲ್ಲಿ ಹುಟ್ಟಿದ್ದ ನಿರ್ಮಲ ಪ್ರೀತಿ
ಒಲವ ಕಾಲುವೆಯಲ್ಲಿ ಜೀವಜಲವಾಗಿ ಹರಿಯುವ.....
ಮುನ್ನವೆ ಬತ್ತಿ ಬರಿದಾಗಿ ಹೋಗಿದೆ/
ಸತ್ತ ಕನಸುಗಳ ಅಂತ್ಯ ಸಂಸ್ಕಾರಕ್ಕಾದರೂ
ನಾಲ್ಕು ಹನಿ ನಿನ್ನ ಕಣ್ಣೀರು ದಕ್ಕಿದರೆ ನನ್ನ ಸುಪ್ತ ಒಲವು ಧನ್ಯ.......
ಮನೆಯ ಕಿಟಕಿಯಾಚೆ ಆರ್ತವಾಗಿ ಕಿಚಗುಡುತ್ತಿರುವ ಹಕ್ಕಿಗೂ
ಯಾರದೋ ಒಲವಿನ ಹಕ್ಕಿಗಾಗಿ ನಿರೀಕ್ಷೆಯಿರಬಹುದ?,
ಕೆಲವೊಮ್ಮೆ ಸುಮ್ಮನೆ ಕೂತು
ನನ್ನೊಳಗೆ ನಾನು ಯೋಚಿಸುತ್ತೀನಿ.....
ನಿನ್ನ ನೆನಪಲ್ಲಿ ನಿತ್ಯ ನವೆಯುವುದು ಎಷ್ಟು ಸಾಧು?
ಉತ್ತರವೂ ಕೂಡಲೆ ಹೊಳೆಯುತ್ತೆ
ಮೀಸಲಾಗಿರುವಾಗ ಬಾಳು ನಿನಗಾಗಿ ಕನವರಿಸಬಲ್ಲೆ ಹೀಗೆಯೆ ಕಾದು,,,,
ಅಷ್ಟಕ್ಕೂ ನೀನೆ ತಾನೆ ನನ್ನ ಆತ್ಮದ ಬಂಧು//


ಮೆಲ್ಲಗೆ ಮೈ ಸೋಕುತ್ತಿರುವ
ತಂಪುಗಾಳಿಯ ಅಂತರಾಳದಲ್ಲಿ....
ನಿನ್ನದೆ ಪರಿಮಳದ ಒರತೆ ಉಕ್ಕುತ್ತಿರೋದು
ಕೇವಲ ನನ್ನ ಭ್ರಮೆಯಾಗಿರಲಿಕ್ಕಿಲ್ಲ,
ಹೊಸಲಿನಾಚೆಯ ನೆಲದ ಮೇಲೆ ನಾನೆ ಚಲ್ಲಿದ್ದ
ನೀರ ಮಡುವಿನಲ್ಲಿ ಮೂಡಿದ್ದು ಚಂದ್ರನ ಭ್ರಮೆಯೋ?
ಇಲ್ಲಾ ನಿಜಕ್ಕೂ ಶಶಿ ಇಳೆಯ ಮುತ್ತಿಕ್ಕುತ್ತಿದ್ದದನ್ನ ಕದ್ದು ಕಂಡೆನಾ?/
ಸುಗಂಧ ಕಳೆದುಕೊಂಡು
ಬರಿ ಬಣ್ಣ ಹೊತ್ತ ಸುಮ ನನ್ನ ಮನ....
ಗೊತ್ತಿಲ್ಲ
ನೀನಿಲ್ಲದ ಮುಂದಿನ ಬಾಳ ದಿನಗಳನ್ನ ಅದು ಹೇಗೆ ಕಳೆಯುತ್ತೀನ?,
ಗರಿಬಿಚ್ಚಲಾಗದೆ ಗಾಬರಿಯಿಂದ ಕೂತಿರುವ
ನನ್ನ ಎದೆಗೂಡೊಳಗಿನ ಹೂಮರಿ....
ಒಂದೊಮ್ಮೆ ಮೊದಲಿಗೆ ಹಾರುವಾಗ ಮರಳಿ ಬರುವ ಹಾದಿ ತಪ್ಪಿದರೆ
ನೆನ್ನೆದೆಯ ಗೂಡಲ್ಲಿ ಕ್ಷಣವಾದರೂ ಚೂರು ಜಾಗ ದಯಪಾಲಿಸುತ್ತೀಯ ಅದಕ್ಕೆ?//


ಕುಳಿತು ಆಲೋಚಿಸುತ್ತೇನೆ ಎಲ್ಲಿ ನಾ ತಪ್ಪಿದೆ?
ನಿನ್ನ ಕಣ್ಣಿಗೆ ಗುರತರ ಅಪರಾಧವಾಗಿ ಕಂಡಿರುವ.....
ನನ್ನ ನಡೆಯ ಯಾವುದರಲ್ಲಿ ಅಸಲಿಗೆ ನನ್ನ ತಪ್ಪಿದೆ?,
ಗಾನ ಸರೋವರದಲ್ಲಿ ಸುಮ್ಮನೆ ತೇಲುವ
ಕೆಸರ ಸಾಂಗತ್ಯದ ಕೋಮಲ ತಾವರೆ ಮೊಗ್ಗು ನನ್ನೊಳಗಿನ ಒಲವು...
ಅದು ಬೇರೆ ವಿಷಯ ಅರಳದ ಅದಕ್ಕಿದೆ ನೀ ನಿರಾಕರಿಸಿದ ನೋವು/
ಬಹು ದಿನಗಳಿಂದ ಮರೆಯಾಗಿ
ಕನಸಿನಲ್ಲಿ ಕಾಡಿದ್ದ ಪೂರ್ಣ ಚಂದ್ರನನ್ನ ಕಂಡೊಡನೆ.....
ಸಾಗರದ ಮನ ಒತ್ತಾಯವಾಗಿ
ಬಚ್ಚಿಟ್ಟ ಒಲವ ಒತ್ತಡದಿಂದ ಹುಚ್ಚೇಳುತ್ತದೆ,
ಸಾಗರದ ಎದೆಯ ಮೇಲೆ ಕತ್ತಲಲ್ಲಿ ಹೊಳೆವ ಹಣತೆಗಳಂತೆ
ತೇಲುತ್ತಾ ಸಾಗುವ ನೌಕೆಗಳದ್ದು....
ಕೊನೆಗಾಣದ ನಿರಂತರ ಪಯಣ/
ಕತ್ತಲ ಕಣಕಣದಲ್ಲೂ ಸುಖದ ಹಾದಿ ಹುಡುಕುವ ಇಳೆಯದ್ದು
ಒಂಥರಾ ಮುಚ್ಚಿಟ್ಟ ಕನಸ ಒಳಮನದ ಪುಳಕ....
ಸಂಗತಿ ಅದೇನೆ ಇದ್ದರೂ ಒಂದಂತೂ ಸ್ಪಷ್ಟ
ಮೌನ ನನ್ನದು... ಮಾತೆಲ್ಲ ನಿನ್ನದೆ
ನಲಿವು ನಿನ್ನದೆ.... ನೋವಿನ ಮಡುವಲ್ಲಿ ಸುಳಿಗೆ ಸಿಲುಕಿರೋದು ಮಾತ್ರ ನನ್ನೆದೆ//


ಮಲಗದ ಮನದ ಕಣ್ಣು ಬಳಲಿ
ಸೋತು ಹೋಗಿರುವಾಗಲೂ....
ನಿನ್ನ ನಿರಂತರ ಕನವರಿಕೆ ಮಾತ್ರ ಅದರೊಳಗೆ ಜೀವಂತ,
ಕೌತುಕದ ಅವಧಿ ಕಳೆದು
ಕತ್ತಲು ಕಾಲಿಟ್ಟಿದೆ ನನ್ನೆದೆಯಲ್ಲಿ....
ನಿನ್ನ ನೆನಪಿನ ಕಿರು ಹಣತೆಯಷ್ಟೆ
ಈಗ ನನ್ನ ಬಳಿಯಿರುವ ಬೆಳಕಿನ ಒರತೆ/
ಗಾಯದ ಮೇಲೆ ಸಿಹಿಯಾದ ಸಕ್ಕರೆ ಸವರಿದಂತೆ
ನೆನಪುಗಳು ವಿರಹದ ಬಾಧೆಯ ಮೇಲೆ ಹೊರೆಸಿದ್ದು ಉರಿ ನೋವನ್ನೆ....
ಕರಗದ ಕನಸಿನ ಹನಿಗಳೆಲ್ಲ ಕಣ್ಣಂಚಿನ ಇಬ್ಬನಿಗಳಾಗಿ
ನನ್ನ ನೋಡಿ ನಗುವಾಗ ನಯವಾಗಿ ನಾನೂ ಹುಸಿ ಹಾಸ ಹೊತ್ತು
ಮಾತು ಮರೆಸಿ ಅವಕ್ಕೆ ಇನ್ನೇನೋ ಸೊಗಸಾದ ಸುಳ್ಳು ಕಾರಣವನ್ನ ಹೇಳುತ್ತೇನೆ,
ಹುಸಿ ಸಂತಸದ ತೆರೆಯಾಚೆ
ನಿಜ ನೋವುಗಳನ್ನ ಅಡಗಿಸಿಟ್ಟ ನನ್ನ ಹತಾಶ ಪ್ರಯತ್ನಗಳು....
ಕೆಲವೊಮ್ಮೆ ಹಿಡಿತ ಮೀರಿ ಕಣ್ಣ ಹನಿಗಳಾಗಿ ಸೋಲುವುದುಂಟು//

No comments: