08 March 2013

ಹುಡುಕುವಲ್ಲಿ ಸಿಗದ ಹಿಡಿ ಕನಸು, ಅದ್ಯಾವುದೊ ಮನಸಿನಲ್ಲಿ ಅಡಗಿದೆ.....ಆ ರಾತ್ರಿ ಬಹಳ ಮೌನವಿತ್ತು
ಸ್ವಂತ ನೆರಳಿಗೂ ಅವಕಾಶವೀಯದ ಗಾಢ ಕತ್ತಲೆ,
ಅದೊಂದು ಕಣ್ಣ ಕಿಟಕಿಯಲ್ಲಿ ಮಾತ್ರ ಸಣ್ಣ ಬೆಳಕ ಕೋಲು
ನೆಟ್ಟಿರುಳಲ್ಲೂ ನನ್ನ ಹಾದಿಗೆ ಆಶಾಕಿರಣವಾಗಿ ಗೋಚರಿಸುತ್ತಿತ್ತು,,,,,
ಮರಳಿ ನೀ ಕಳಿಸಿದ್ದ ಲಕೋಟೆಯಲ್ಲಿ
ಹರಿದು ಕಳಿಸಿದ್ದ ನನ್ನೆದೆಯ ನಾಲ್ಕು ಸಾಲು ಗೀಚಲಾಗಿದ್ದ ಪತ್ರದ ಚೂರುಗಳಿದ್ದವು,
ನಾನು ಮರುಳ ನಿನ್ನ ಉತ್ತರ ಬಂದಿತೆಂದು ಅಳತೆ ಮೀರಿ ವ್ಯಥಾ ಸಂಭ್ರಮಿಸಿದ್ದೆ/
ಗುರಿತಪ್ಪಿದ ಹುಸಿ ಅನುಭವವಾದರೂ
ಗೊತ್ತಿದೆ ನನಗೆ ನನ್ನ ಒಲವಿನ ಬಾಣಗಳೆಲ್ಲ....
ನಿನ್ನೆದೆಯ ಬತ್ತಳಿಕೆಯನ್ನೆ ಹೋಗಿ ಸೇರುತ್ತಿವೆಯಂತ,
ಕಲೆಗಟ್ಟಿದ ಮನದ ಕರವಸ್ತ್ರದ ತುಂಬ
ಆ ಕ್ಷಣ ನಿನ್ನೊಂದಿಗೆ ಹಂಚಿಕೊಂಡ ನನ್ನ ಬೆವರ ಸುವಾಸನೆಯೆ ತುಂಬಿದೆ!.....
ಕವಿತೆಯ ಸಾಲುಗಳಲ್ಲಿ ಹೊಸೆದ ನಿನ್ನ ನೆನಪಿನ ಚಾದರಕ್ಕೆ
ನಿನ್ನ ಮೈಗಂಧ ಅಂಟಿದೆ...
ಅದಕ್ಕೆ ನಿನ್ನೆದೆ ಮಿಡಿತದ ನಂಟಿದೆ//ಕಲರವಕ್ಕೆಡೆಯಿಲ್ಲದಷ್ಟು ಕಳವಳ ಎದೆ ಮನೆಯ ಆವರಿಸಿದ್ದರೂ
ನಾನು ನಿರೀಕ್ಷೆಯ ಹುಲ್ಲುಕಡ್ದಿಯಾಸರೆಯಲ್ಲಿ.....
ಹಿಡಿ ಜೀವವನ್ನ ಹಿಡಿದಿಟ್ಟುಕೊಂಡಿದ್ದೇನೆ,
ತಣ್ಣಗೆ ಕೊರೆವ ನೆನಪಿನ ಹಿಮನದಿ
ನನ್ನೊಳಗೆ ಮೌನವಾಗಿ ....
ನಿನ್ನ ನೆನಪುಗಳನ್ನ ಹೊತ್ತು ಹರಿಯುತ್ತಿದೆ/
ನಿಜವಾಗಿಯೂ ಹುಸಿಯನಾಡದ
ನನ್ನ ಮನಸಿನಾಳದ ನಾದ ನಿನ್ನೆದೆಯದೆ ಮಿಡಿತ...
ಅನವರತ ಮನ ಕನವರಿಸುವ ಸ್ವಪ್ನಗಳಿಗೆಲ್ಲ
ಸೂಕ್ತ ನೆಲೆಯಿಲ್ಲದೆ ಅವೆಲ್ಲವೂ ಅನಾಥ,
ಕನಸನಾಡಿಸುವ ಆಕ್ಷಾಂಶೆಗಳಿಗೆ
ನಿರೀಕ್ಷೆಯ ಕೊನೆಯ ಕೂಸೆಂದರೆ ಮಾತ್ರ ವಿಪರೀತ ಮಮತೆ//


ಕರಗಿ ಹೋದ ನಿರೀಕ್ಷೆಯ ಕ್ಷಣಗಳೆಲ್ಲ
ಹನಿಗಳಾಗಿ ಕಣ್ಣ ಆಣೆಕಟ್ಟೆಯನ್ನ ನಿರಂತರ ತುಂಬುತ್ತಿವೆ....
ಒಲವ ಗ್ರಹಿಕೆಯಾಳದಲ್ಲಿ ಇಳಿದು
ಪರವಶವಾದ ಮನಸಿನ ಚಿರ ಹಕ್ಕುಸ್ವಾಮ್ಯ ಇದೀಗ ಕೇವಲ ನಿನ್ನದು,
ಕನಸು ಕನಸಾಗಿಯೆ ಕನಸೊಳಗೆ
ಮುರುಟಿ ಹೋಗುತ್ತಿದ್ದರೂ....
ಅದನ್ನ ಮತ್ತೆ ಅರಳಿಸಲಾಗದ ಅಸಹಾಯಕ ಮನ ಮೌನ/
ಗುರುತು ಹಿಡಿಯಲಾರದಷ್ಟು ಮಾಸಿ ಹೋಗಿರುವ
ಮನದ ಭಿತ್ತಿಯ ಮೇಲೆಲ್ಲ ನೀ ಗೀಚಿದ....
ಒಲವಿನ ಚಿತ್ರಗಳು ಇನ್ನೂ ಉಳಿದೆ ಇವೆ,
ಕಾತರಕ್ಕೆ ಹುಟ್ಟಿದ ಕನಸುಗಳ ಆಯುಷ್ಯ
ಅತ್ಯಲ್ಪ ಎನ್ನುವ ಅರಿವಿದ್ದರೂ ಮಾಡಿದ....
ಒಲವೆಂಬ ಮಧುರ ತಪ್ಪಿಗೆ ವಿರಹದ ಶಿಕ್ಷೆ ನಿರೀಕ್ಷಿತವೆ ತಾನೆ?//ಕನವರಿಕೆ ಕನಸಾಗಿಯೆ ಕಳೆದು ಹೋದ ಬರಡು ಬಾಳಲ್ಲಿ,
ನಿರೀಕ್ಷೆಯೊಂದು ಪಕ್ಕಾ ಅಪಹಾಸ್ಯ....
ಕೆಲವು ಕ್ಷಣಗಳ ದೂರ
ಶಾಶ್ವತ ಕಂದಕ ನಿನ್ನೊಳಗೆ ಮೂಡಿಸಿದ್ದರೂ....
ನನ್ನ ಮನಸಿನ್ನೂ ಮೊದಲಿನಂತೆ ಹಸನಾಗಿಯೆ ಇದೆ,
ಉಗುರು ಬೆಚ್ಚಗಿನ ನೆನಪುಗಳಲ್ಲಿ
ಮೊಂಡ ಮನಸನ್ನ ನೆನೆ ಹಾಕಿಕೊಂಡು ನಿನ್ನೊಲವ ಬಿಸಿ ಹನಿಗಳಲ್ಲಿ....
ತೋಯುತ್ತಾ ಮೀಯಲು ಕಾದು ಕನವರಿಸುತ್ತಿದ್ದೇನೆ/
ತಣ್ಣಗೆ ನನ್ನೊಳಗಿಳಿದಿರುವ ನೀನು ಆಗಾಗ
ಕನವರಿಕೆಯಾಗಿ ನನ್ನನ್ನ ಬೆಚ್ಚಗಾಗಿಸುತ್ತೀಯ....
ನೆನಪಾಗಿ ಹುಚ್ಚನ್ನನ್ನಾಗಿಸುತ್ತೀಯ,
ಕರಗುವ ಹಗಲಿಗೆ ಇರುಳಿನ ತೋಳಲ್ಲಿ
ನೆಮ್ಮದಿಯ ನಿದಿರೆ ಕಾದಿದೆ....
ಹೋದಲ್ಲೆಲ್ಲ ಮೊಣಕಾಲುದ್ದ ಸಂಕಟದ ಸೆಲೆಯಿರುವ
ನನಗೆ ಆ ಅದೃಷ್ಟವೂ ಇಲ್ಲವಲ್ಲ!//

No comments: