24 March 2013

ತುಳುಗಾದೆ-೫೨










"ಬ್ಯಾರಿ ಭೂತ ಕಟ್ಟಿ ಲೆಕ್ಖೋ"



{ ತನ್ನದಲ್ಲದ, ತನಗೆ ಬಾರದ ಕೆಲಸದಲ್ಲಿ ಅಧಿಕ ಪ್ರಸಂಗಿಯಾಗಿ ಮೂಗು ತೂರಿಸುವ ಮಂದಿಗೆ ಹೀಗೆ ಹೇಳಿ ಹೀಗೆಳೆಯುವ ಪದ್ಧತಿ ತುಳುನಾಡಿನಾದ್ಯಂತ ಇದೆ. ಇಂದಿನ ಕರುನಾಡ ಕರಾವಳಿ ಸಹಿತ ಕೇರಳದ ಕರಾವಳಿಯುದ್ದಕ್ಕೂ ವ್ಯಾಪಿಸಿಕೊಂಡಿರುವ ಮುಸಲ್ಮಾನರಲ್ಲಿ ಒಂದು ಅಸ್ಮಿತೆಯಿದ್ದು ಅದು ಭಾರತೀಯ ಉಪಖಂಡದ ಇನ್ನಿತರ ಮುಸಲ್ಮಾನರಿಂದ ಅವರನ್ನ ಪ್ರತ್ಯೇಕವಾಗಿಸಿದೆ. ಇನ್ನಿತರ ಭಾರತದಂತೆ ಇಲ್ಲಿ ಮುಖ್ಯವಾಹಿನಿಯಿಂದ ಮುಸಲ್ಮಾನರನ್ನು ಪ್ರತ್ಯೇಕಿಸಿ ನೋಡುವುದು ಕಷ್ಟ ಸಾಧ್ಯ. ಕೋಮು ಸ್ವಾರ್ಥ ಪೀಡಿತ ರಾಜಕೀಯ ಪುಢಾರಿಗಳ ಹಾಗೂ ಅಗ್ಗದ ಧರ್ಮಪಿಪಾಸು ಮುಲ್ಲಾಗಳ ಪುಸಲಾವಣೆಯಿಂದ ಇಂದಿನ ಮುಸಲ್ಮಾನ ತರುಣರು ಹಾದಿ ತಪ್ಪಿದ ಹೋರಿಗಳಾಗುತ್ತಿರುವುದು ನಿಜವಾದರೂ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ. ಸ್ವಾರ್ಥಿಗಳ ದುರ್ಬೋಧನೆಗೆ ಹಿತ್ತಾಳೆ ಕಿವಿಯಾಗುವ ಮುಂಚೆ ಮುಸಲ್ಮಾನ ಬಿಸಿರಕ್ತದ ಯುವಕರು ಯುಕ್ತಾಯುಕ್ತತೆಯನ್ನ ವಿವೇಚಿಸಿದರೆ ಮುಂದಾದರೂ ಮತ್ತೆ ಸಮರಸ್ಯ ಮರುಕಳಿಸೀತು.

ಅದೇನೆ ಇರಲಿ ಈ ಗಾದೆಯ ಮೂಲವನ್ನ ಕೆದಕುವ ಮುನ್ನ ಕರಾವಳಿಯ ಮುಸಲ್ಮಾನರ ಹಿನ್ನೆಲೆಯತ್ತ ಸ್ವಲ್ಪ ಬೆಳಕು ಚಲ್ಲೋಣ. ಭಾರತೀಯ ಉಪಖಂಡಕ್ಕೆ ಯುರೋಪಿಯನ್ನರು ಅಧಿಕೃತವಾಗಿ ಸಮುದ್ರಮಾರ್ಗದ ಮೂಲಕ ಆಗಮಿಸಿ ರಾಜಕೀಯವಾಗಿ ಇಲ್ಲಿ ಪ್ರಬಲವಾಗುವದಕ್ಕಿಂತಲೂ ಎರಡು ಸಾವಿರ ವರ್ಷದ ಹಿಂದಿನಿಂದಲೂ ಅರಬ್ಬಿ ವ್ಯಾಪಾರಿಗಳು ಇಲ್ಲಿನ ವ್ಯಾಪಾರಿ ಸರಂಜಾಮುಗಳ ಖರೀದಿಗಾಗಿ ಪದೆಪದೆ ಅರಬ್ಬಿನಿಂದ ಭಾರತದ ಕರಾವಳಿಗೆ ಹಾಯಿದೋಣಿಗಳನ್ನೇರಿ ಬರುವ ರೂಢಿಯಿತ್ತು. ಆಗಿನ್ನೂ ಇಸ್ಲಾಂ ಹುಟ್ಟಿರಲಿಲ್ಲ. ಅದಕ್ಕೂ ಅರುನೂರು ವರ್ಷ ಹಿಂದಿನಿಂದ ಬೆಸೆದು ಬಂದ ವ್ಯಾಪಾರಿ ಸಂಬಂಧವಿದು. ಹೀಗೆ ಬಂದವರು ಇಲ್ಲಿಯೆ ತಿಂಗಳಾನುಗಟ್ಟಲೆ ಬಾಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದ್ದರಿಂದ ಸ್ಥಳಿಯ ಹೆಂಗಸರೊಂದಿಗೆ ವೈವಾಹಿಕ ಹಾಗೂ ತತ್ಕಾಲಿಕ ಪರಸ್ಪರ ಸಮ್ಮತವಾದ ಲೈಂಗಿಕ ಸಂಬಂಧ ಹೊಂದುವ ಪರಿಪಾಠ ಬೆಳೆಯಿತು. ಉತ್ತರಕನ್ನಡದಲ್ಲಿ ಹೀಗೆ ವ್ಯಾಪಾರಿ ಅರಬ್ಬಿಗಳನ್ನ ವರಿಸಿದವರಲ್ಲಿ ಜೈನ ಹಾಗೂ ಜಾತಿ ಬಹಿಷೃತ ಬ್ರಾಹ್ಮಣ ಬಾಲ ವಿಧವೆಯರು ಹೆಚ್ಚಾಗಿದ್ದರೆ, ಉತ್ತರದ ಕಾಸರಕೋಡದಿಂದ ದಕ್ಷಿಣದ ಕಾಸರಗೋಡಿನ ತನಕ ದಕ್ಷಿಣ ಕನ್ನಡದಲ್ಲಿ ಮೀನು ಹಿಡಿಯುವ ಕುಲ ಕಸುಬಿನ ಮೊಗವೀರ ಹಾಗೂ ಮೂರ್ತೆ ಕೆಲಸದ ಅಂದರೆ ಈಚಲ ಮರದಲ್ಲಿ ಕಳ್ಳು ಕಟ್ಟುವ ಕುಲಕಸುಬಿನ ಬಿಲ್ಲವರ ಹೆಂಗಸರನ್ನು ಇವರು ನಿಖಾ ಮಾಡಿಕೊಳ್ಳುವ ರೂಢಿ ಜಾರಿಗೆ ಬಂದಿತು. ಕಾಸರಗೋಡಿನಿಂದ ಆಚೆಗೆ ಚಂದ್ರಗಿರಿಹೊಳೆಯಿಂದ ದಕ್ಷಿಣಕ್ಕೆ ನಾಯರ್ ಹಾಗೂ ಈಳವ ಹೆಣ್ಣುಮಕ್ಕಳು ಅರಬಿಗಳ ಹೆಂಡತಿಯರಾದರು. ಈಗಲೂ ಉತ್ತರಕನ್ನಡದ ನವಾಯತ ಮುಸಲ್ಮಾನರಲ್ಲಿ ನೀರನ್ನ ಸೋಸಿ ಕುಡಿಯುವ, ಸಂಜೆ ಸೂರ್ಯ ಕಂತುವ ಮೊದಲೆ ಲಘು ಉಪಹಾರ ಸೇವಿಸುವ ಜೈನ ಆಚರಣೆಗಳ ಹಾಗೂ ಮದುವೆಯ ನಂತರ ಹೆಣ್ಣುಮಕ್ಕಳು ತಾಳಿಬೊಟ್ಟಿನ ಕರಿಮಣಿ ಧರಿಸುವ ಬ್ರಾಹ್ಮಣ ಆಚರಣೆಗಳು ಪಳಯುಳಿಕೆಯಂತೆ ಉಳಿದುಕೊಂಡಿವೆ. ತುಳುನಾಡಿನ ಮಂದಿ ಬ್ಯಾರಕ್ಕೆ ಅಂದರೆ ವ್ಯಾಪಾರಕ್ಕೆ ತುಳುನಾಡಿಗೆ ಬಂದವರ ಸಂತಾನ ಇವರು ಎನ್ನುವ ಅರ್ಥದಲ್ಲಿ ಇವರ ಸಮುದಾಯವನ್ನ ಬ್ಯಾರಿಗಳೆಂದು ಗುರುತಿಸಿದರು, ಇವರಲ್ಲಿ ಬಿಲ್ಲವ ಹಾಗೂ ಮೊಗವೀರ ದೇಹಭಾಷೆಯ ಕುರುಹುಗಳನ್ನ ಈಗಲೂ ಗುರುತಿಸಬಹುದು. ಅಂತೆಯೆ ಮಲಯಾಳ ನಾಡಿನ ಮಲಬಾರಿನಾಚೆಯ ಮಾಪಿಳ್ಳೆಗಳಲ್ಲಿ ಈಳವ ಹಾಗೂ ನಾಯರ್ ಚರ್ಯೆ ಎದ್ದು ಕಾಣುತ್ತದೆ. ಇಸ್ಲಾಂ ಅರಬ್ಬಿಸ್ಥಾನದಲ್ಲಿ ಬೇರುಬಿಟ್ಟ ನಂತರ ಇಸ್ಲಾಂನ್ನ ಅನುಸರಿಸ ತೊಡಗಿದ ಕೊಂಕಣಿ ಮನೆಭಾಷೆಯ ನವಾಯತ, ತುಳು-ಕನ್ನಡ-ಮಲಯಾಳಂ ಬೆರೆತ ಬ್ಯಾರಿ ಭಾಷೆ ಮಾತನಾಡುವ ಬ್ಯಾರಿಗಳು ಹಾಗೂ ಅಪ್ಪಟ ಮಲಯಾಳಿ ಮನೆಭಾಷೆಯಾಗಿರುವ ಮಾಪಿಳ್ಳೆಗಳು ಇವರೆಲ್ಲರೂ ಸಾಮಾನ್ಯವಾಗಿ ವ್ಯಾಪಾರ ಹಾಗೂ ಮೀನುಗಾರಿಕೆಯನ್ನೆ ಕುಲಕುಸುಬಾಗಿ ಬೆಳೆಸಿಕೊಂಡು ಬಂದವರು.



ಈಗ ಗಾದೆಗೆ ಮರಳೋಣ ತುಳುನಾಡಿನ ಭೂತಗಳಲ್ಲಿ ಬ್ಯಾರಿ ಸಮುದಾಯದ ಬೊಬ್ಬರ್ಯ ಭೂತನಿದ್ದರೂ, ಮಲಯಾಳದ ದಯ್ಯಂನಲ್ಲಿ ಮಾಪಿಳ್ಳೆಗಳ ಸಮುದಾಯದ ಆಲಿ ಭೂತ ಆರಾಧಿಸಲ್ಪಡುತ್ತಿದ್ದರೂ ಸಹ ಅವರ ಸಮುದಾಯದವರು ಭೂತಕ್ಕೆ ಪಾತ್ರಧಾರಿಯಾಗಿ ವೇಷ ಕಟ್ಟುವ ಸಂಪ್ರದಾಯವಿಲ್ಲ. ರಾಜನ್ ದೈವಗಳೆ ಇರಲಿ ಅಥವಾ ಕ್ಷುಲ್ಲಕ ಪುಡಿ ಭೂತಗಳೆ ಇರಲಿ ಭೂತದ ಪಾತ್ರಧಾರಿಯಾಗಿ ದೈವ ಮಾಧ್ಯಮರಾಗುವ ಹಕ್ಕು ಮತ್ತು ಅಧಿಕಾರವಿರುವುದು ಪರವ-ಪಂಬದ-ನಲಿಕೆ ಜನಾಂಗದವರಿಗೆ ಮಾತ್ರ. ಭೂತ ಕಟ್ಟಿ ಕುಣಿಯುವುದೊಂದು ವಿಶಿಷ್ಟ ಸಾಂಪ್ರದಾಯಿಕ ಕಲಾ ಪ್ರಕಾರ. ಅವರಿಗೆ ಮೀಸಲಾಗಿರುವ ಈ ಕುಲಕಸುಬಿನಲ್ಲಿ ಬ್ಯಾರಿಯೊಬ್ಬ ಮೂಗು ತೂರಿಸಿದರೆ ಅದು ದೊಂಬರಾಟದಂತಾಗಿ ಹಾಸ್ಯಾಸ್ಪದವಾಗುತ್ತದೆ. ಅದೆ ಬಗೆಯಲ್ಲಿ ಒಂದು ವೇಳೆ ಬ್ಯಾರಿಗಳ ಕುಲ ಕಸುಬಾದ ವ್ಯಾಪಾರದಲ್ಲಿ ಪರವ ಪಂಬದರು ತಲೆಹಾಕಿದರೂ ಅದು ಕನಿಕರ ಹುಟ್ಟಿಸುವ ಮಟ್ಟಿಗೆ ತಮಾಷೆಯಾಗುತ್ತದೆ. ಅಂದರೆ ತಮ್ಮದಲ್ಲದ ಕಸುಬಿಗೆ ನಾವು ಅಡಿಯಿಟ್ಟು ಕೈಸುಟ್ಟುಕೊಂಡು ಸೋಲಬಾರದು ಎನ್ನುವುದೆ ಈ ಗಾದೆಯ ನೈಜ ಅರ್ಥ.}



( ಬ್ಯಾರಿ ಭೂತ ಕಟ್ಟಿ ಲೆಕ್ಖೋ = ಬ್ಯಾರಿ ಭೂತ ಕಟ್ಟಿದ ಹಾಗೆ.)

No comments: