20 March 2013

ತುಳುಗಾದೆ-೪೮
"ಕುಟ್ಟಿ ಕುಂದಾಪುರೊಗ್ ಪೋಯಿ ಲೆಕ್ಕೊಲಾ, ವೆಂಕು ಪಣಂಬೂರುಗ್ ಪೋಯಿ ಲೆಕ್ಖೊಲಾ ಆಂಡ್"{ ಇದೊಂದು ಅವಸರಗೇಡಿಗಳನ್ನ ಕುಚೋದ್ಯ ಮಾಡುವ ಹಾಸ್ಯದ ಗಾದೆ. ಯುಕ್ತಾ ಯುಕ್ತಾ ವಿವೇಚಿಸದೆ ಕಣ್ಣು ಕಟ್ಟಿದ ಗಾಡಿಯೆತ್ತಿನಂತೆ ಸರಿಯಾಗಿ ಪೂರ್ತಿ ವಿಷಯವನ್ನ ಅರಿತುಕೊಳ್ಳದೆ ಕೆಲಸದ ಕಳಕ್ಕೆ ಧುಮುಕುವ ಉತ್ಸಾಹಿಗಳ ಕಾಲೆಳೆಯುವುದಕ್ಕಾಗಿ ಈ ಗಾದೆ ಸೃಷ್ಟಿಯಾದಂತಿದೆ. ಕ್ರಮಬದ್ಧವಾಗಿ ಯೋಜಿಸಿ ಮುಂದಡಿಯಿಡದ ಪಕ್ಷದಲ್ಲಿ ಯಾವುದೆ ಕೆಲಸ ನಿಷಿತ ಗುರಿ ಮುಟ್ಟದೆ ಅರ್ಧದಲ್ಲೆ ನಿಲ್ಲಬಹುದು. ಹಾಗೊಂದು ವೇಳೆ ಕೊನೆ ಮುಟ್ಟಿಸಿದರೂ ಸಹ ಅದರ ಫಲಶ್ರುತಿ ಮಾತ್ರ ಶೂನ್ಯವಾಗಬಹುದು. ಅದೆ ಯೋಜಿಸಿ- ಸರಿಯಾಗಿ ಮತ್ತೊಮ್ಮೆ ಯೋಚಿಸಿ ಇಡುವ ಪ್ರತಿ ಹೆಜ್ಜೆಯೂ ಕನಿಷ್ಠ ಅಂದು ಕೊಂಡಷ್ಟಲ್ಲದಿದ್ದರೂ ಅದರ ಅರೆವಾಸಿಯಾದರೂ ಸಫ್ಲತೆಯನ್ನು ಸಿದ್ಧಿಸಿ ಕೊಡುತ್ತದೆ ಅನ್ನುವುದು ಶತವಾಸಿ ಖಂಡಿತ.


ಈ ಗದೆಯ ಎರಡು ಆವೃತ್ತಿಗಳು ತುಳುನಾಡಿನಲ್ಲಿ ಚಾಲ್ತಿಯಲ್ಲಿದ್ದು ಇಲ್ಲಿ ಆ ಎರಡೂ ಆವೃತ್ತಿಗಳನ್ನ ತುಳುವಿನಲ್ಲಿ ನೀಡಿದ್ದೇನೆ. ಆದರೆ ವಾಸ್ತವದಲ್ಲಿ ಮೇಲೆ ಬರೆದ ಗಾದೆಯ ಮೊದಲಾರ್ಧ ಕನ್ನಡದಲ್ಲಿ "ಕುಟ್ಟಿ ಕುಂದಾಪುರಕ್ಕೆ ಹೋದ ಹಾಗೆ" ಎಂದು ಬಳಕೆಯಲ್ಲಿದ್ದರೆ ಉತ್ತರಾರ್ಧ ಮಾತ್ರ ಶುದ್ಧ ತುಳುವಿನಲ್ಲಿಯೆ "ವೆಂಕು ಪಣಂಬೂರುಗ್ ಪೋಯಿ ಲೆಕ್ಖಾಂಡ್" ಎಂದು ಇಂದಿಗೂ ಚಾಲ್ತಿಯಲ್ಲಿದೆ. ಹೌದು, ಈ ಕುಟ್ಟಿ ಕುಂದಾಪುರಕ್ಕೂ, ವೆಂಕು ಪಣಂಬೂರಿಗೂ ಹೋದದ್ದದರೂ ಏಕೆ? ಎಂದು ಬಾಲ್ಯದಲ್ಲಿ ನಾನು ಅದೇನೋ ಒಂದು ಜೀವನ್ಮರಣದ ಪ್ರಶ್ನೆಯೆಂಬಂತೆ ಯೋಚಿಸುವುದು ಇತ್ತು! ಇದರ ಹಿನ್ನೆಲೆ ಅರಿವಾದದ್ದು ಇತ್ತೀಚೆಗಷ್ಟೆ, ಇಲ್ಲದಿದ್ದರೆ ಅಂತರ್ ಪಿಶಾಚಿಯಾಗಿ ಉಳಿದು ಹೋಗುತ್ತಿದ್ದೆನೇನೋ!! ಇಂದಿನ ದಿನಗಳಲ್ಲಿ ತುಳುನಾಡಿನ ತುದಿ-ಮೊದಲನ್ನ ಕೆಲವೆ ತಾಸುಗಳಲ್ಲಿ ಸಂಪರ್ಕಿಸುವುದು ಸುಲಭ ಸಾಧ್ಯವಾಗಿದೆ. ಇಲ್ಲಿನ ರಾಜ್ಯ, ರಾಷ್ಟೀಯ, ರೈಲು ರಸ್ತೆಗಳು ಅಷ್ಟು  ಯೋಗ್ಯವಾಗಿದೆ. ಆದರೆ ಇಲ್ಲಿ ಹೆಜ್ಜೆಗೊಂದರಂತೆ ಎದುರಾಗುವ "ಪಶ್ಚಿಮಘಟ್ಟದ ಪುಂಡು ನದಿಗಳ"ನ್ನ ದಾಟಿ ಒಂದೂರಿಂದ ಇನ್ನೊಂದೂರಿಗೆ ಸಂಪರ್ಕ ಸಾಧಿಸುವುದು ಸಾಹಸವೆ ಆಗಿದ್ದ ಶತಮಾನದ ಹಿಂದಿನ ದಿನಗಳಲ್ಲಿ ಈ ಗಾದೆಗೆ ಅದರದ್ದೆ ಆದ ಮಹತ್ವವಿತ್ತು. ಆಗ ತುಳುನಾಡೀನ ಉತ್ತರದ ತುದಿ ಕುಂದಾಪುರದಿಂದ ಹೊರಟು ಬಸ್ಸು, ದೋಣಿ, ಉಕ್ಕಡ, ಜಟಕಾ, ಸಂಕ ಹೀಗೆ ಸಿಕ್ಕ ಸಿಕ್ಕ ಅನುಕೂಲತೆಗಳನ್ನ ಬಳಸಿಕೊಳ್ಳುತ್ತ ಕೊಟ್ಟಕೊನೆಯ ಸುಳ್ಯವನ್ನ ಬಂದು ಸೇರುವಾಗ ವಾರವೂ ಆಗ ಬಹುದಿತ್ತು. ಮಳೆ-ಗಾಳಿಗಳಂತಹ ಪ್ರಕೃತಿ ವಿಕೋಪಗಳು ಎದುರಾದಲ್ಲಿ ಅದು ತಿಂಗಳಿಗೂ ಎಳೆಯ ಬಹುದಷ್ಟು ಸುದೀರ್ಘವಾಗುವ ಸಾಧ್ಯತೆಗಳೂ ಇಲ್ಲದಿರಲಿಲ್ಲ! ಕ್ಷಣಾರ್ಧದಲ್ಲಿ ಪ್ರಪಂಚದ ಇನ್ನೊಂದು ತುದಿ ಮುಟ್ಟುವ ಇಂದಿನ ತಲೆಮಾರಿಗೆ ಇದು ಹಾಸ್ಯಾಸ್ಪದವಾಗಿ ಗೋಚರಿಸಬಹುದು. ಅದರೆ ಅದು ಹಾಗಿದ್ದುದು ವಾಸ್ತವ ಹಾಗೂ ಅಂದಿನ ತುಳುನಾಡಿಗರಿಗೆ ಅದು ಬಾಳಿನ ಅತಿ ಸಹಜ ಅವಿಭಾಜ್ಯ ಅಂಗವೆ ಆಗಿತ್ತು.


ಅಂತಹ ವಿಪರೀತ ಕಾಲದಲ್ಲಿ ಕುಟ್ಟಿ ಹಾಗೂ ವೆಂಕು ಎನ್ನುವ ಇಬ್ಬರು ಪ್ರಭೃತಿಗಳು ಇದ್ದರಂತೆ. ಅವರು ರಾತ್ರಿ ಮಲಗಿದ್ದಾಗ ಕುಟ್ಟಿಯ ಅಪ್ಪ-ಅಮ್ಮ "ನಾಳೆ ಕುಟ್ಟಿಯನ್ನ ಕುಂದಾಪುರಕ್ಕೆ ಕಳಿಸಬೇಕು" ಅಂತ ಮಾತಾಡಿಕೊಂಡರಂತೆ. ಅಂತೆಯೆ ವೆಂಕುವಿನ ಅಮ್ಮ-ಅಪ್ಪ "ನಾಳೆ ನಮ್ಮ ವೆಂಕುವನ್ನ ಪಣಂಬೂರಿಗೆ ಕಳಿಸಬೇಕು" ಎಂದು ಮಾತಾಡಿಕೊಂಡರಂತೆ. ಅದು ಮಲಗಿದ್ದ ಕುಟ್ಟಿ ಹಾಗೂ ವೆಂಕುವಿನ ಕಿವಿಗೆ ಬಿದ್ದಿದೆ. ಬೆಳಗ್ಯೆ ಹೆತ್ತವರು ಎದ್ದು ನೋಡಿದರೆ ಕುಟ್ಟಿ ಹಾಗೂ ವೆಂಕು ಇಬ್ಬರೂ ಮಂಗಮಾಯ! ಕಾಣೆಯಾದ ಇಬ್ಬರೂ ಮೂರ್ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರಂತೆ! "ಎಲ್ಲಿಗೆ ಹೋಗಿದ್ದಿರೋ? ಊರೆಲ್ಲಾ ಹುಡುಕಿದೆವಲ್ಲ!" ಎಂದು ಕಂಗಾಲಾಗಿ ಕೇಳಿದರೆ "ನೀವೆ ಹೇಳಿದಿರಲ್ಲ ಅದಕ್ಕೆ ಕುಂದಾಪುರಕ್ಕೆ ಹೋಗಿ ಬಂದೆ ಎಂದು "ಕುಟ್ಟಿ"ಯೂ, ಪಣಂಬೂರಿಗೆ ಹೋಗಿ ಬಂದೆ ಎಂದು "ವೆಂಕು"ವೂ ಹೇಳಿದರಂತೆ! ಯಾಕೆ ತಾವಲ್ಲಿಗೆ ಹೋಗ ಬೇಕಿತ್ತು? ಹೋಗಿ ಅಲ್ಲಿ ಮಾಡಬೇಕಾದುದೇನಿತ್ತು? ಎನ್ನುವುದನ್ನ ಚೂರೂ ಲಕ್ಷಿಸದೆ ಈ ಮಡ್ದ ಸಾಂಬ್ರಾಣಿಗಳು ಸಾಕಷ್ಟು ಕಷ್ಟ-ನಷ್ಟವನ್ನ ಎದುರಿಸಿ ಅಲ್ಲಿಗೆ ಹೋಗಿ, ಹೋದಂತೆಯೆ ಮರಳಿ ಮನೆಗೆ ಬಂದು ಮುಟ್ಟಿದ್ದರು!. ಅವರನ್ನ, ಅವರಂತವರನ್ನ ಗೇಲಿ ಮಾಡಲು ಈ ಗಾದೆ ಹಾಗೆ ಹುಟ್ಟಿಕೊಂಡಿತಂತೆ.}


( ಕುಟ್ಟಿ ಕುಂದಾಪುರೊಗ್ ಪೋಯಿ ಲೆಕ್ಕೊಲಾ, ವೆಂಕು ಪಣಂಬೂರುಗ್ ಪೋಯಿ ಲೆಕ್ಖೊಲಾ ಆಂಡ್ = ಕುಟ್ಟೀ ಕುಂದಾಪುರಕ್ಕೆ ಹೋದ ಹಾಗೆಯೂ, ವೆಂಕು ಪಣಂಬೂರಿಗೆ ಹೋದ ಹಾಗೆಯೂ ಆಯ್ತು.)

No comments: