12 March 2013

ತುಳುಗಾದೆ-೪೨






"ತೆಮ್ಮಲ್ಯೆತ್ತುದು ಪೂಂಕಿನ್ ಮರೆಪ್ಪಾಯಿ ಲೆಕ್ಖ"


{ ಇದು ಅನಾಚಾರ ಮಾಡಿ ಸುಭಗರಾಗುವ ಮಂದಿಗೆ ವಂಗ್ಯವಾಗಿ ಹೇಳಲಾಗುವ ಮೊನಚು ಮಾತು. ತಾವು ಪರಮ ಚೋರರಾಗಿದ್ದರೂ ಸಹ ಸತ್ಯಸಂಧರ ಹಾಗೆ ಕಪಟ ವೇಷ ಧರಿಸಿ ಇನ್ನಿತರರನ್ನ ಹುಡುಕಿ ಹುಡುಕಿ ಅವರಲ್ಲಿಯ ಗುಣ ದೋಷಗಳನ್ನ ಎತ್ತಿಯಾಡಿ ವಿವರಣೆ ಕೇಳುವ ಗಡವರಿಗೆ ನಮ್ಮ ಸಮಾಜದಲ್ಲಿ ಕಡಿಮೆಯೇನಿಲ್ಲವಲ್ಲ. ಅಂತವರ ಆಷಾಢಭೂತಿ ನಡುವಳಿಕೆ ಸಮಾಜದ ಕಣ್ಣಲ್ಲಿ ಸಾಕ್ಷಿ ಸಹಿತ ಸಾಬೀತಾದಾಗ ಈ ಗಾದೆಯನ್ನ ವ್ಯಂಗ್ಯೋಕ್ತಿಯಾಗಿ ಬಳಸಲಾಗುತ್ತದೆ.


ಕೆಮ್ಮು ಬಹಳ ಸಾರಿ ಕಷ್ಟದ ನೆಂಟನಂತೆ ಒದಗಿ ಬರುತ್ತದೆ. ಎಲ್ಲದರೂ ಹೋದಾಗ ಅಲ್ಲಿದ್ದವರ ಗಮನವನ್ನ ಕ್ಷಣದಲ್ಲಿ ಸೆಳೆಯಲು, ಎಲ್ಲೋ ನಮ್ಮ ಬಡಾಯಿ ಬಂಡವಾಳ ಬಯಲಾಗುವ ವಿಪತ್ತಿನ ಹೊತ್ತಲ್ಲಿ ಸದರಿ ಸಂಗತಿಯಿಂದ ಸ್ಥಳದಲ್ಲಿ ನೆರೆದಿರುವವರ ಗಮನ ತಪ್ಪಿಸಲು ಹೀಗೆ ಕೆಮ್ಮನ್ನ ಅನುಕೂಲ ಸಿಂಧುವಾಗಿ ಬೇಕಾದಾಗ ಬಳಸಿಕೊಳ್ಳಬಹುದು. ಯಾರೋ ಒಬ್ಬನಿಗೆ ವಿಪರೀತ ವಾಯು ಪ್ರಕೋಪದ ಸಮಸ್ಯೆಯಿತ್ತು. ಆತನ ಹಿಡಿತ ಮೀರಿ ಹೊತ್ತಲ್ಲದ ಹೊತ್ತಿನಲ್ಲಿ ಸಮಯ ಸಂದರ್ಭ ಒಂದನ್ನೂ ಲೆಕ್ಖಿಸದೆ ಅಪಾನವಾಯು ವಿಸರ್ಜನೆಯಾಗಿ ಸುತ್ತಲೂ ನೆರೆದವರು ಅದರ ಕಟು ಅಸಹ್ಯದ ದುರ್ವಾಸನೆಗೆ ಮುಖ ಕಿವಿಚಿಕೊಳ್ಳುವಂತಾಗುತ್ತಿತ್ತು. ಅಂತಹ ಪೇಚಿನ ಹೊತ್ತಿನಲ್ಲಿ ತಾನು ಜೋರಾಗಿ ಕೆಮ್ಮಿ ಕ್ಯಾಕರಿಸಿ ಉಳಿದವರ ಗಮನವನ್ನೆಲ್ಲ ಸಾಧ್ಯವಾದಷ್ಟು ಹೂಸಿನಿಂದಾಚೆಗೆ ಸೆಳೆದು ತಾನು ಬೀಸುವ ದೊಣ್ಣೆಯಿಂದ ಬಚಾವಾದೆ ಎನ್ನುವ ಹುಸಿ ಸಮಾಧಾನವನ್ನಾತ ಪಟ್ಟುಕೊಳ್ಳುತ್ತಿದ್ದನಂತೆ.


ಸದ್ಯ ಕನ್ನಡದ ವಿದ್ಯುನ್ಮಾದ ವಾರ್ತಾ ಮಾಧ್ಯಮಗಳ ಹೇಸಿಗೆಟ್ಟ ಕಥೆಯೂ ಅಂತಹದ್ದೆ ಆಗಿದೆ. ೯ನೆ ಸಂಖೆಯ ವಾರ್ತಾವಾಹಿನಿಯೊಂದರ ಮಾಜಿ ದೆಹಲಿ ಪ್ರತಿನಿಧಿಯಾಗಿದ್ದ, ಹಾಲಿ ಉಪ ಸಂಪಾದಕ-ನಿರೂಪಕನಾಗಿದ್ದ ವ್ಯಕ್ತಿಯೊಬ್ಬ "ಶಿವಾ" ಅಂತ ತಿನ್ನಬಾರದ "ಪ್ರಸಾದ"ವನ್ನ ತಿಂದು ಹಸಿಹಸಿಯಾಗಿ ಸಿಕ್ಕಿ ಹಾಕಿಕೊಂಡರೂ ಯಾವೊಬ್ಬ ಸಹವರ್ತಿ ವಾರ್ತಾ ವಾಹಿನಿಗಳೂ ಈ ಪ್ರಕರಣವನ್ನ ಇನ್ನಿತರ ಬೀದಿ ಜಗಳಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನೂ ನೀಡದೆ ಕಡೆಗಣಿಸಿವೆ. ಸದರಿ ಸಂಸ್ಥೆ ಕದ್ದು ಸಿಕ್ಕಿ ಹಾಕಿಕೊಂಡವನನ್ನ ಮನೆಗೆ ಕಳಿಸಿ ಕೈಮುಗಿದರೂ ಸಹ ಈ ಹೂಸಿನ ಅಸಹ್ಯ ವಾಸನೆ ಇನ್ನೂ ಆರಿಲ್ಲ. ಸಾಲದ್ದಕ್ಕೆ ನ್ಯಾಯದ ವಿಚಾರಕ್ಕೆ ಬಂದರೆ "ತನಗೊಂದು ಪರರಿಗೊಂದು" ಎನ್ನುವ ಧೋರಣೆಗೆ ಬದ್ಧವಾಗಿರುವ ಎಲ್ಲಾ ವಾರ್ತಾವಾಹಿನಿಗಳೂ ಅದ್ಯಾರೋ ಕಪಟ ಸನ್ಯಾಸಿಯ ಸಕಲ ಮರ್ಕಟ ನಡೆಯನ್ನ "ನಿತ್ಯ" ಕೆಮ್ಮಿದ್ದನ್ನೆ ಕೆಮ್ಮಿ ಜನರ ಗಮನವನ್ನ ಬೇರೆಡೆ ತಿರುಗಿಸುವ ಹೀನ ಪ್ರಯತ್ನದಲ್ಲಿ ಅವಿರತವಾಗಿ ನಿರತವಾಗಿವೆ. ಈ ಗಾದೆಯ ವಾಚ್ಯಾರ್ಥ ಹೀಗೆ ಇವತ್ತಿಗೂ ಪ್ರಸ್ತುತ.}


( ತೆಮ್ಮಲ್ಯೆತ್ತುದು ಪೂಂಕಿನ್ ಮರೆಪ್ಪಾಯಿ ಲೆಕ್ಖ! = ಕೆಮ್ಮನ್ನ ಕರೆದು ಹೂಸನ್ನ ಮರೆಸಿದ ಹಾಗೆ!.)

No comments: