07 March 2013

".... ಟೇಕ್ ಇಟ್ ಈಝೀ ಊರ್ವಶಿ?!"







ಓದಿನಲ್ಲಿ ಮುಂದಿದ್ದ ನಾನು ಕಾರ್ಕಳದ ಹಾಸ್ಟೆಲ್ಲಿನಲ್ಲಿ ತೀರಾ ಪರಕೀಯ ಭಾವದಿಂದ ನರಳುತ್ತಿದ್ದೆ. ಕಾರ್ಕಳ, ಬೆಳ್ತಂಗಡಿ, ಕುಂದಾಪುರ ತಾಲೂಕುಗಳ ಗಡಿಯಂಚಿನ ಗ್ರಾಮಗಳ ಹಿಂದುಳಿದ ಗಿರಿಜನರೆ ಅಲ್ಲಿದ್ದ ಐವತ್ತು ಮಕ್ಕಳಲ್ಲಿ ಶೇಕಡಾ ತೊಂಬತ್ತೊಂಬತ್ತರಷ್ಟಿದ್ದು ನನ್ನಂತಹ ಸಮಾಜದ ದೃಷ್ಠಿಯಲ್ಲಿನ ಉನ್ನತ ಜಾತಿಯ ಹುಡುಗರು ನಾನೂ ಸೇರಿ ಮೂವರಿದ್ದೆವು. ಕುಂದಾಪುರದ ಆರ್ಡಿಯ ಶಂಕರ ಮತ್ತು ಸಂತೋಷ ಇನ್ನಿಬ್ಬರು. ಆರ್ಥಿಕ ದುಸ್ಥಿತಿ ಮನೆಯಲ್ಲಿದ್ದದ್ದರಿಂದ ಸರಕಾರಿ ಕೃಪಾಕಟಾಕ್ಷ ಬಯಸಿ ಬಂದ ಅವರಿಬ್ಬರೂ ವಯಸ್ಸಿನಲ್ಲಿ ನನಗಿಂತ ವರ್ಷಕ್ಕೆ ಹಿರಿಯರು. ಇಬ್ಬರೂ ಭುವನೇಂದ್ರ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿಗಳು. ಅಲ್ಲಿದ್ದ ಉಳಿದ ಎಲ್ಲರ ಕೌಟುಂಬಿಕ ಹಿನ್ನೆಲೆಯ ಕಾರಣ ಅವರಲ್ಲಿ ಪಡಿ ಮೂಡಿದ್ದ ಒರಟುತನ, ಕುಗ್ರಾಮವೊಂದರಿಂದ ಬಂದ ಅವರಿಗೆ ಕಾರ್ಕಳದಂತಹ "ಶಹರ"(?)ದಲ್ಲಿ ಕಣ್ಣಿ ಹರಿದ ಕರುವಿನಂತಾದ ಮನಸ್ಥಿತಿ ದಯ ಪಾಲಿಸಿದ ಸ್ವೇಚ್ಛಾಚಾರದ ನಡುವಳಿಕೆ. ಸರಕಾರಿ ಸಹಕಾರ ಅದೆಷ್ಟೇ ಇದ್ದರೂ ಓದಿನ-ವಿದ್ಯಾಭ್ಯಾಸದ ಕುರಿತು ಇರುತ್ತಿದ್ದ ಅಸಡ್ಡೆ. ಮಕ್ಕಳು ಓದಿ ಕಲಿತು ದುಡಿಯುವ ಮಟ್ಟಕ್ಕೆ ಮುಟ್ಟಿ ತಮ್ಮ ಹಾಗೆ ಕಾಡುಮೇಡಿನಲ್ಲಿ ಕಾಲ ಹಾಕದೆ ಶಹರ ಸೇರಿ ನಾಗರೀಕರಾಗಲಿ ಎನ್ನುವ ಆಶಯ ಹೊತ್ತು ಅವರು ಕೇಳಿದಾಗಲೆಲ್ಲ ದೂಸರಾ ಮಾತನಾಡದೆ ತಾವು ಮೈಮುರಿದು ಕಷ್ಟದಿಂದ ಸಂಪಾದಿಸಿದ ನೂರಿನ್ನೂರು ರುಪಾಯಿಗಳನ್ನ ಕೊಟ್ಟು ಅದರ ವಿಲೇವಾರಿ ಹೇಗಾಗುತ್ತದೆ ಎನ್ನುವ ಕಲ್ಪನೆಯಿಲ್ಲದೆ ಮತ್ತೆ ಕಾಡಿಗೆ ಮರಳುತ್ತಿದ್ದ ಅವರ ಮುಗ್ಧ ಪೋಷಕರು. ಇವೆಲ್ಲ ನನ್ನ ಮನಸಿನಲ್ಲಿ ಅವರೆಲ್ಲರ ಬಗ್ಗೆ ರೇಜಿಗೆ ಮೂಡಿಸಿ ನಾನು ಆದಷ್ಟು ಅವರ್ಯಾರೊಂದಿಗೂ ಬೆರೆಯದೆ ಬೇರೆಯಾಗಿಯೆ ಇರುತ್ತಿದ್ದೆ. ಹೀಗಾಗಿ ಅವರ ನಡುವೆ ನಾನೊಬ್ಬ ಗೇಲಿಯ ವಸ್ತು! 


ಅವರೆಲ್ಲರಿಂದ "ಗಾಂಧಿ" ಎನ್ನುವ ಪುಕ್ಕಟೆ ಅಭಿದಾನ ಕೊಡಲ್ಪಟ್ಟ ನಾನು ನನ್ನ ಹವ್ಯಾಸಗಳು ಅವರಿಗೆ ಅನುಕರಣೀಯವೆನಿಸಿದರು ಸಹ ಅವರದ್ದು ಅದನ್ನ ಮಾಡಲಾರದ ಅಸಹಾಯಕತೆ. ಅವರಷ್ಟು ಚನ್ನಾಗಿ ಬಯಲಿನಲ್ಲಿ ಆಡಲಾಗದೆ ಕಬಡ್ದಿ, ವಾಲಿಬಾಲಿನಲ್ಲಿ ಮೂಲೆ ಗುಂಪಾದ ನನ್ನ ಒಳಮನದ ಅವ್ಯಕ್ತ ಆಕ್ರೋಶ ಇವೆಲ್ಲ ನನ್ನನ್ನ ಅವರಿಂದ ಸಮಾನಂತರದಲ್ಲಿಟ್ಟಿದ್ದವು. ನನ್ನ ಜನ್ಮಜಾತ ಅತಿನಾಗರೀಕ ನಡುವಳಿಕೆ, ನಡೆ ಅವರಿಗೆ ಬೆರಗಿನ ಜೊತೆಗೆ ಭಯ ಹುಟ್ಟಿಸಿ ನನ್ನ ಬಗ್ಗೆ ಗೌರವಾದರ ಹುಟ್ಟಿಸುತ್ತಿದ್ದರೆ, ನನಗೆ ಅವರ ಕೊಳಕುತನ, ಅವರಲ್ಲಿ ಹಟಾತ್ತನೆ ಮೂಡುತ್ತಿದ್ದ ಅನಾಗರಿಕ ವರ್ತನೆ ಜಿಗುಪ್ಸೆ ಹುಟ್ಟಿಸುತ್ತಿತ್ತು. ಹೀಗೆ ಅದೇನೆ ಭಿನ್ನಭಿಪ್ರಾಯಗಳು ನನ್ನ ಹಾಗು ಅವರ ಇದ್ದರೂ ಜೊತೆಗೆ ಇರುವಷ್ಟು ಕಾಲ ಸಹಬಾಳ್ವೆ ಮಾಡುವ ಅನಿವಾರ್ಯತೆ ಎರಡೂ ಕಡೆಯವರಿಗೆ ಇದ್ದುದರಿಂದ ಹೊಂದಾಣಿಕೆ ಅನಿವಾರ್ಯವೆ ಆಗಿತ್ತು. 


ಶಾಲೆಯ ಪರೀಕ್ಷೆ, ಅಕ್ಷರ ಮಾರ್ಗದ ಮೂಲಕ ತೋರಬಹುದಾದ ಯಾವುದೆ ಸೃಜನಶೀಲತೆಗಳಿಗೆ ಅವರಲ್ಲಿ ಯಾರೊಬ್ಬರೂ ನನಗೆ ಸರಿಸಾಟಿಯಾಗಿರಲಿಲ್ಲ. ತಿಂಗಳಿಗೊಮ್ಮೆ ನಡೆಯುತ್ತಿದ್ದ ಕಿರು ಪರಿಕ್ಷೆಗಳಲ್ಲಿ ಇಪ್ಪತೈದಕ್ಕೆ ಇಪ್ಪತೆರಡೋ, ಇಪ್ಪತ್ತಮೂರೋ ಬಂತಲ್ಲ ಅಂತ ನಾನು ಗೋಳಿಡುತ್ತಿದ್ದರೆ ಬಹುತೇಕ ಹತ್ತು ದಾಟಲಾರದ ಅವರೆಲ್ಲ ಹುಮ್ಮಸ್ಸಿನಿಂದ ಬೀಗುತ್ತಿದ್ದರು! ಅರ್ಧ ವಾರ್ಷ್ರಿಕ ಪರೀಕ್ಷೆಯಲ್ಲಿ ಕಡೆಯ ವಿಷಯ ಬರೆದು ರಸ್ತೆಯುದ್ದ ಪ್ರಶ್ನೆ ಪತ್ರಿಕೆಯನ್ನ ತಿರುವುತ್ತಾ ನನಗೆ ಈ ವಿಷಯದಲ್ಲಿ ಎಷ್ಟು ಅಂಕ ಬಂದೀತಪ್ಪ! ಅಂತ ನಾನು ಧ್ಯಾನಿಸುತ್ತಿರುವಾಗ ಅವರೆಲ್ಲ ಆ ಬಗ್ಗೆ ಚೂರೂ ತಲೆ ಕೆಡಿಸಿಕೊಳ್ಳದೆ ತಮ್ಮ ಇದ್ದಬದ್ದ ವಸ್ತುಗಳನ್ನೆಲ್ಲ ಪೆಟ್ತಿಗೆಯಲ್ಲಿ ತುಂಬಿ ಬೀಗ ಜಡಿದು ಊರಿಗೆ ಹೋಗಲು ಬಸ್ ಕಾಯುತ್ತಾ ನಿಂತಾಗಿರುತ್ತಿತ್ತು! ವಾರ್ಷಿಕ ಪರೀಕ್ಷೆಯ ಮುಗಿವ ಹೊತ್ತಿನಲ್ಲಿ ನೂರಕ್ಕೆ ತೊಂಬತ್ತರ ಮೇಲೆಯೆ ಎಲ್ಲಾ ವಿಷಯಗಳಲ್ಲಿ ಗಳಿಸುವುದು ಖಚಿತವಿದ್ದರೂ ನೂರಕ್ಕೆ ಎಷ್ಟು ಕಡಿಮೆ ಬಂದು ನಾಲಾಯಕ್ಕಾಗಿ ಉಳಿದು ಹೋಗುತ್ತೀನೋ ಎನ್ನುವ ಧಾವಂತದಲ್ಲಿ ನಾನು ಕುಗ್ಗಿ ಕಂಗಾಲಾಗಿ ಹೋಗುತ್ತಿದ್ದರೆ ಅವರಲ್ಲಿ ಅನೇಕರು ಕನಿಷ್ಠ ಉತ್ತೀರ್ಣವಾಗುವ ಭರವಸೆ ಸಹ ಇಲ್ಲದಿದ್ದರೂ ಆ ವರ್ಷದ ಎಲ್ಲಾ ಪುಸ್ತಕಗಳನ್ನೂ ಸರಾಸಗಟಾಗಿ ಗುಜರಿಯವರಿಗೆ ತೂಕಕ್ಕೆ ಎಸೆದು ಅವರೆಲ್ಲ ಹಾಸ್ಟೆಲ್ಲಿಗೆ ಗೋಲಿ ಹೊಡೆದು ಇನ್ನೆರಡು ತಿಂಗಳು ಮನೆಯಲ್ಲಿ ಹೇಗೆ ಸುಖವಾಗಿರಬಹುದು ಎನ್ನುವ ಘನಘೋರ ಚರ್ಚೆಯಲ್ಲಿ ಮುಳುಗಿರುತ್ತಿದ್ದರು. ಒಟ್ಟಿನಲ್ಲಿ ಹಾಸ್ಟೆಲ್ ಸೇರಿರುವ ಅಸಲು ಉದ್ದೇಶವನ್ನ ಈಡೇರಿಸಿಕೊಳ್ಳುವುದರ ಪ್ರಾಮಾಣಿಕ ಪ್ರಯತ್ನವೊಂದರ ಹೊರತು ಇನ್ನೆಲ್ಲ ತರಲೆಗಳಲ್ಲಿ ಯಾವಾಗಲು ಅವರೆಲ್ಲ ತಲ್ಲೀನರಾಗಿರುತ್ತಿದ್ದುದು ಸಾಮಾನ್ಯವಾಗಿ ಕಾಣಲು ಅಲ್ಲಿ ಸಿಗುತ್ತಿದ್ದ ದೃಶ್ಯ. ಹೀಗಾಗಿ ನನ್ನದು ಮತ್ತವರೆಲ್ಲರದು ಬೇರೆ ಬೇರೆ ದಿಕ್ಕು.


ಆದರೆ ಪರೀಕ್ಷ್ಜೆ ಹತ್ತಿರವಾದಂತೆ ನನ್ನ ತರಗತಿಯವರಿರಲಿ, ನನ್ನಿಂದ ಹಿರಿಯ ತರಗತಿಯಿಲ್ಲಿದ್ದ ಅವರಲ್ಲನೇಕರು ನನ್ನ ಮುಂದೆ ಮಾರ್ಜಾಲ ಸನ್ಯಾಸಿಗಳಂತೆ ಶರಣಾಗುತ್ತಿದ್ದರು. ಗಣಿತ, ವಿಜ್ಞಾನ, ವಿಶೇಷವಾಗಿ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕನಿಷ್ಠ ಪಾಸಾಗುವಷ್ಟು ಅಂಕ ಗಳಿಸಲಿಕ್ಕೆ ನನ್ನ ಅರ್ಜೆಂಟ್ ಮನೆಪಾಠ ಅವರಲ್ಲನೇಕರಿಗೆ ಅನಿವಾರ್ಯವಾಗಿರುತ್ತಿತ್ತಲ್ಲ! ಹೀಗಾಗಿ ನನ್ನ ಕತ್ತೆ ಕಾಲನ್ನ ಕಟ್ಟುತ್ತಿದ್ದರು. ಅವರ ಆ ಅತಿ ವಿನಯವೆಲ್ಲ ಕೇವಲ ತೋರಿಕೆಯದ್ದು ಎನ್ನುವ ಖಚಿತ ಅರಿವಿದ್ದರೂ ಮನಸಿನಲ್ಲಿ ಯಾವುದೆ ಕಹಿಯುಟ್ಟುಕೊಳ್ಳದೆ ನನಗರ್ಥವಾದಷ್ಟನ್ನ, ಅವರ ಪಠ್ಯ ಪುಸ್ತಕ ಓದಿ ನಾನು ಅರ್ಥ ಮಾಡಿಕೊಂಡಷ್ಟನ್ನ ಪ್ರಾಮಾಣಿಕವಾಗಿ ಅವರಿಗೆ ಹೇಳಿಕೊಡುವ ಪ್ರಯತ್ನವನ್ನಂತೂ ಅಲ್ಲಿದ್ದ ಮೂರು ವರ್ಷವು ಮಾಡಿದ್ದೇನೆ. ಈ ಮನೆಪಾಠದ ಪರಿಣಾಮವೆ ಅವರಲ್ಲಿ ಒರಟಗ್ರೇಸರನಾಗಿದ್ದ ಉಮೇಶನನ್ನು ನನ್ನ ವಿಧೇಯ ಸ್ನೇಹಿತನಾಗುವಂತೆ ಮಾಡಿದ್ದು! ಅವನ ಮೂಲಕ ನಾನಲ್ಲಿದ್ದ ಕೊನೆಯವರ್ಷ ೧೯೯೫ರ ಸೆಪ್ಟಂಬರಿನ ಹೊತ್ತಿಗೆ ಅವನ ಸಂಬಂಧಿಕ ಜಯಂತನೂ ನನ್ನ ಅನುಯಾಯಿಯಾದ. ಅಲ್ಲಿಗೆ ಅವರ ಗ್ಯಾಂಗಿನಿಂದ ಆಗುತ್ತಿದ್ದ ಸಣ್ಣಪುಟ್ಟ ಕಿರುಕುಳಗಳು ಕಡೆಯ ಆರು ತಿಂಗಳು ಕದನ ವಿರಾಮ ಘೋಶಣೆಯಾಗಿ ನೆಮ್ಮದಿಯ ವಾತಾವರಣ ನೆಲೆಸಿತು. 



ಈ ಉಮೇಶನ ಪುಸಲಾವಣೆಯಿಂದಲೆ ನನ್ನ ಕಾರ್ಕಳ ವಾಸದ ಕಡೆಯ ತಿಂಗಳು ನಾನೂ ಅವನು ಹಾಕಿದ ತಾಳಕ್ಕೆ ತಲೆಯಾಡಿಸಿ ಕುಣಿದೆ. ಮೂರುವರ್ಷ ಸಿನೆಮಾ ಮಂದಿರ ಎಡತಾಕದ ಸಂತನಂತೆ ಬಾಳಿದ್ದ ನನಗೂ ಒಂದು ಖತರ್ನಾಕ್ ಸಿನೆಮಾ ತೋರಿಸಿ ಅಷ್ಟು ದಿನ ಕಾಯ್ದುಕೊಂಡು ಬಂದಿದ್ದ ನನ್ನ ಸಿನೆಮಾ ಮಡಿಯನ್ನ ಒಂದು ನೊಣದಂತಹ ಸಿನೆಮಾ ನೋಡಲು ಸಿನೆಮಾ ಟಾಕಿಸನ್ನೊಮ್ಮೆ ಹೊಕ್ಕಿಸಿ, ಪಾಪಿ ಉಮೇಶ ನನ್ನ ಜಾತಿಗೆಡೆಸಿಯೆ ಬಿಟ್ಟ! ಅಲ್ಲಿಯವರೆಗೂ ಶಾಲೆಯಲ್ಲಿ ಕಡಿಮೆ ಸಿನೆಮಾ ಮಂದಿರದಲ್ಲಿ ಜಾಸ್ತಿ ಎನ್ನುವಂತಿದ್ದ ಉಮೇಶ ಮತ್ತವನ ಬಳಗದವರಿಗೆ ವಾರದ ಮೊದಲ ದಿನವೆ ಸಿನೆಮಾ ಮಂದಿರಗಳತ್ತ ಠಳಾಯಿಸುವ ಅವರಿಗೆ ಸಿನೆಮಾವೆಂದರೆ ಮಾರು ದೂರ ಉಳಿಯುತ್ತಿದ್ದ ನಾನು ವಿಚಿತ್ರ ಪ್ರಾಣಿಯಂತೆ ಕಂಡಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. 


ಕಾರ್ಕಳದಲ್ಲಿ ಪ್ರತಿ ಶನಿವಾರ ಸಂತೆ. ಹೀಗಾಗಿ ಅಲ್ಲಿನ "ರಾಧಿಕಾ" ಹಾಗೂ "ಜೈಹಿಂದ್" ಟಾಕೀಸುಗಳಲ್ಲಿ ಸಿನೆಮಾ ತೆರೆ ಕಾಣುತ್ತಿದ್ದುದು ಅಂದೆ. ಅಲ್ಲಿ ವಾರಕ್ಕೊಮ್ಮೆ ಬದಲಾಗುವ ಕನ್ನಡ ಚಿತ್ರಗಳಲ್ಲಿ ಆ ಕಾಲದ ಬೇಡಿಕೆಯ ತಾರೆಗಳಾದ ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ವಿನೋದ್ ರಾಜ್, ರಾಘವೇಂದ್ರ ರಾಜ್'ಕುಮಾರ್, ಶಿವರಾಜ್ ಕುಮಾರ್, ಪ್ರಭಾಕರ್ ಹಾಗೂ ರಾಜ್ ಕುಮಾರ್'ರ ಅಭಿನಯವನ್ನ ನೋಡಿ ಉತ್ಸಾಹಿತರಾಗುತ್ತಿದ್ದ ಇವರಲ್ಲಿ ಅನೇಕರು ಕಾರ್ಕಳ ಬಸ್ಟ್ಯಾಂಡ್ ಬಳಿ ಅದೆಲ್ಲೋ ಸಂದಿಗೊಂದಿಯಲ್ಲಿದ್ದ "ಕಾಮತ್ ಮಿನಿ ಸ್ಟುಡಿಯೋ"ದಲ್ಲಿ ಅಥವಾ ಅದಿನ್ನೆಲ್ಲೋ ಇದ್ದ "ಲೂಯಿಸ್ ಮಿನಿ ಸ್ಟುಡಿಯೋ"ದಲ್ಲಿ ಪ್ರದರ್ಶಿಸಲಾಗುತ್ತಿದ್ದ "ವಯಸ್ಕರರಿಗಾಗಿ ಮಾತ್ರ" ಚಿತ್ರಗಳನ್ನ ನೋಡಲಿಕ್ಕೂ ಹಂಬಲಿಸಿ  ಚಿತ್ರದ ನಡುವೆ ಅಚಾನಕ್ಕಾಗಿ ತೋರಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದ ನೀಲಿಚಿತ್ರಗಳ ಅಶ್ಲೀಲ ದೃಶ್ಯಗಳನ್ನ ನೋಡಲಿಕ್ಕೆ ಹಾತೊರೆದು ರೋಮಾಂಚಿತರಾಗುತ್ತಿದ್ದರು. ಹಾಗೊಮ್ಮೆ ನೋಡಿ ಬಂದರೆಂದರೆ ಸಾಕು ಹಾಸ್ಟೆಲ್ಲಿನ ಬಿಡುವಿನ ಅವಧಿಗಳಲ್ಲೆಲ್ಲ ನಾಲ್ಕಾರು ಮಂದಿ ಸೇರಿ ಆ "ರಸವತ್ತಾದ" ಅನುಭವದ ಬಗ್ಗೆ ಸುದೀರ್ಘ ಚರ್ಚೆ- ಸಂವಾದ ನಡೆಸುತ್ತಿದ್ದರು. ಇವನ್ನೆಲ್ಲ ಕೇಳಿದರೂ ಕೇಳಿಸದವನಂತೆ ನಾನು ಕಿವುಡುತನ ನಟಿಸುತ್ತಿದ್ದೆ. ಶಾಲೆಯ ಮಕ್ಕಳಿಗಾಗಿ ಏರ್ಪಡಿಸಿದ್ದ ವಿಶೇಷ ದರದ ಮಕ್ಕಳ ಚಿತ್ರ ಕೋಳಿಯೊಂದರ ಕಥೆ ಹೊಂದಿದ್ದ "ಸುಲ್ತಾನ"ವನ್ನ ಅಲ್ಲಿ ತೋರಿಸಿದ್ದರಿಂದ ಈ "ಕಾಮತ್ ಸ್ಟುಡಿಯೋ"ವನ್ನ ಬಾಳಿನಲ್ಲಿ ಒಮ್ಮೆ ಕಾಬೆಟ್ಟು ಶಾಲೆಯಿಂದ ಕರೆದುಕೊಂಡು ಹೋದಾಗ ಮಾತ್ರ ಹೊಕ್ಕು ಗೊತ್ತೆ ವಿನಃ ಇವತ್ತಿಗೂ ನನಗೆ "ಲೂಯಿಸ್ ಸ್ಟುಡಿಯೋ" ಯಾವ ದಿಕ್ಕಿಗಿದೆ ಅನ್ನುವುದೆ ಗೊತ್ತಿಲ್ಲ! ಇನ್ನು ಏಕಮುಖ ಸಂಚಾರದ ಕಾರಣ ಕಾಬೆಟ್ಟಿನಿಂದ ಕಾರ್ಕಳ ಬಸ್ಟ್ಯಾಂಡಿಗೆ ಹೋಗುವಾಗ "ಜೈಹಿಂದ್"ನ್ನ, ಮರಳಿ ಅಲ್ಲಿಂದ ಬಸ್ಸೇರಿ ಕಾಬೆಟ್ಟಿಗೆ ಬರುವಾಗ "ರಾಧಿಕಾ"ವನ್ನ ನೋಡಿಯಷ್ಟೆ ಗೊತ್ತಿತ್ತು. ಆದರೆ ಅಪ್ಪಿತಪ್ಪಿಯೂ ಅವುಗಳ ಆವರಣದೊಳಗೆ ಹೆಜ್ಜೆಯಿಟ್ಟಿರಲೆ ಇಲ್ಲ.  .  


ಸಿನೆಮಾ ನನ್ನ ಮಟ್ಟಿಗೆ ಅಸ್ಪರ್ಶ್ಯವೆಂದೇನು ಇದರ ಅರ್ಥವಲ್ಲ. ಬಾಲ್ಯದಲ್ಲಿ ತೀರ್ಥಹಳ್ಳಿಯಲ್ಲಿದ್ದಾಗ ಕದ್ದು ಸಿನೆಮಾಕ್ಕೆ ಹೋಗುತ್ತಿದ್ದ ಚಿಕ್ಕಮ್ಮಂದಿರಿಗೆ ಮನೆಯಲ್ಲಿ ಅವರ ಈ ಕದ್ದುಮುಚ್ಚಿ ಮಾಡುವ ದುಷ್ಕೃತ್ಯವನ್ನ ಬಯಲು ಮಾಡುವ ಬೆದರಿಕೆ ಹಾಕಿ ಥೇಟ್ "ಆತ್ಮಹತ್ಯಾ ಬಾಂಬರ್"ನಂತೆ ಗೋಚರಿಸುತ್ತಿದ್ದರಿಂದಲೋ ಏನೊ ಅವರು ಕರೆದೊಯ್ದು ನಾನು ನೋಡಿದ್ದ "ಆನಂದ್" "ಕೃಷ್ಣಾ ನೀ ಕುಣಿದಾಗ" "ಕೃಷ್ಣಾ ರುಕ್ಮಿಣಿ" "ಮೈನೆ ಪ್ಯಾರ್ ಕಿಯಾ" "ಕಯಾಮತ್ ಸೆ ಕಯಾಮತ್ ತಕ್" "ರಥ ಸಪ್ತಮಿ" ಮುಂತಾದ ಸಿನೆಮಾಗಳನ್ನ ನೋಡಿದ ಅನುಭವ ದಂಡಿಯಾಗಿದೆ. ಟಿವಿಯೆಂಬ ಮಾಯಾ ಪೆಟ್ತಿಗೆ ನಮ್ಮೂರಿಗೆ ದಾಳಿಯಿಟ್ಟ ದಿನಗಳಲ್ಲಿ ಶ್ರೀನಿವಾಸ ಶೆಟ್ಟರ ಹೋಂ ಥಿಯೇಟರಿನಲ್ಲಿ ನೋಡಿ ಮರುಳಾಗಿದ್ದ ರಾಜ್ ಕಪೂರ್ ಚಿತ್ರಗಳ ಸರಣಿ, ಇನ್ನು ಕೇಬಲ್ ಸಹಿತ ಮನೆಗೆ ಟಿವಿ ಬಂದ ಮೇಲಂತೂ ಸೋನಿ, ಝೀ, ಎಂಟಿವಿಯಲ್ಲಿ ಪ್ರತಿನಿತ್ಯ ನೋಡಲು ಸಿಗುತ್ತಿದ್ದ ಹೊಚ್ಚ ಹೊಸ ಚಿತ್ರಗಳ ಜಾಹಿರಾತು ತುಣುಕುಗಳು, ಜೊತೆಗೆ ಆಗಾಗ ಅಮ್ಮ ಅವರ ಗೆಳತಿಯರೊಂದಿಗೆ ಹೋಗುವಾಗ ಕರೆದುಕೊಂಡು ಹೋಗಿ ತೋರಿಸಿದ್ದ "ಮಾಯಾ ಬಜಾರ್", "ಅಪೂರ್ವ ಸಹೋದರಂಗಳ್" "ಪಂಚಾಗ್ನಿ" "ಕೆರಳಿದ ಸಿಂಹ" ಹೀಗೆ ಅರೆನಿದ್ರೆ ಅರೆ ಎಚ್ಚರದಲ್ಲಿ ಅಜೀರ್ಣವಾಗುವಷ್ಟು ಕನ್ನಡ , ತಮಿಳು, ತೆಲುಗು, ಮಲಯಾಳಂ ಚಿತ್ರಗಳನ್ನ ನೋಡಿ ನಲಿದಾಗಿತ್ತು! 


ಕಾರ್ಕಳದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದ್ದ ಇವರ ಸಿನೆಮಾಸಕ್ತಿ ನನ್ನ ತೀರ್ಥಹಳ್ಳಿಯ ಸಿನೆಮಾನುಭವಗಳ ಮುಂದೆ ತೀರ "ಸಿಂಗನ ಮುಂದೆ ಮಂಗ"ನಂತಹದು. ಸನ್, ಝೀಯಂತಹ ಖಾಸಗಿ ವಾಹಿನಿಗಳ ರುಚಿಗೊತ್ತಿದ್ದ ನನಗೆ ದೂರದರ್ಶನದ "ಚಿತ್ರ ಮಂಜರಿ"ಗೆ ಬರಗೆಟ್ಟವರಂತೆ ಕಾದು ಅದರಲ್ಲಿ ತೋರಿಸುತ್ತಿದ್ದ "ತನಿಖೆ"ಯಂತಹ ಕಿತ್ತು ಹೋದ ಸಿನೆಮಾಕ್ಕೆ ಅದರ ನಿರ್ಮಾಪಕ-ನಿರ್ದೇಶಕ-ನಟ ಎಲ್ಲವೂ ಆಗಿದ್ದ ಗುಲ್ಜಾರ್ ಖಾನ್ ಎಂಬ ನಟ ಭಯಂಕರ ಸ್ವತಃ "ಘಾ"ಯಕನೂ ಆಗಿ ರೋಧಿಸುವಂತೆ ಹಾಡುತ್ತಿದ್ದುದನ್ನೂ ತನ್ಮಯರಾಗಿ ನೋಡಿ ನಲಿಯುವುದನ್ನ ನೋಡುವಾಗಲೆಲ್ಲ ಇವರೆಲ್ಲರ ಕಲಾಭಿರುಚಿಯ ಬಗ್ಗೆಯೆ ಗುಮಾನಿ ಹುಟ್ಟುತ್ತಿತ್ತು!. ಸರಕಾರ ಕೊಟ್ಟಿದ್ದ ಟಿವಿಯಲ್ಲಿ ಅವರು ಚಿತ್ರಹಾರ್, ಚಿತ್ರಮಂಜರಿಗಳನ್ನೋ- ಸಿನೆಮಾ ಅಥವಾ ಕ್ರಿಕೆಟಿನ ನೇರ ಪ್ರಸಾರವನ್ನೋ ನೋಡುತ್ತಾ ಕಾಲ ಹಾಕುವಾಗ ಶಂಕರ, ಸುರೇಶ ಪುಜಾರಿ, ಸಂತೋಷ ಮತ್ತು ನಾನು ನಾವು ನಾಲ್ವರು ಮಾತ್ರ  ಹಾಲಿನ ಮತ್ತೊಂದು ಮೂಲೆಯಲ್ಲಿ ಪುಸ್ತಕದ ಒಳಗೆ ತಲೆ ತೂರಿಸಿ ಈ ಅಗ್ಗದ ಸಿನೆಮಾಕರ್ಷಣೆಗಳಿಂದ ಪಾರಾಗಲು ಪರದಾಡುತ್ತಿದ್ದೆವು.


ಒಂದೊಮ್ಮೆ ನಾನೂ ಅವರೆಲ್ಲರಷ್ಟೆ ಸಿನೆಮಾ ಶೋಕಿಲಾಲನಾಗಿರುತ್ತಿದ್ದರೂ ಸಹ ನನಗೆ ಹಾಗೆಲ್ಲ ಅವರೆಲ್ಲರಂತೆ ಬೇಕಾಬಿಟ್ಟಿ ಸಿನೆಮಾ ನೋಡುವ ಆರ್ಥಿಕ ಅನುಕೂಲತೆಗಳೂ ಇದ್ದಿರಲಿಲ್ಲ. ಆಗಾಗ ಖಾಲಿಯಾಗಿ ಸತಾಯಿಸುತ್ತಿದ್ದ ಪೆನ್ನಿನ ಮತ್ತೊಂದು ರೀ-ಫಿಲ್ಲನ್ನ ಕಿಣಿಯವರ ಅಂಗಡಿಯಿಂದ ಕೊಂಡುಕೊಳ್ಳಲಿಕ್ಕೂ ಚಿಕ್ಕಮ್ಮನ ಮುಂದೆ ಇಡಿ ಮೈಯನ್ನ ಹಿಡಿ ಮಾಡಿಕೊಂಡು ಅವರ ಸ್ಟಾಫ್ ರೂಮಿಗೆ ಹೋಗಿ ಬೇಡ ಬೇಕಾಗುತ್ತಿತ್ತು. ಆ ಐವತ್ತು ಪೈಸೆ ಪಡೆವಾಗ ಆಗುತ್ತಿದ್ದ ಮುಜಗರ, ಅವರ ಸಹುದ್ಯೋಗಿಗಳ ವ್ಯಂಗ್ಯ ಭರಿತ ದೃಷ್ಟಿ, ಮಾತಿನ ಕೊರಂಬಿನ ತಿವಿತ ಇವೆಲ್ಲ ರೋಸಿ ಹೋಗುವಂತೆ ಮಾಡುತ್ತಿತ್ತು. ಇನ್ನು ಸಿನೆಮಾ ಬಗ್ಗೆ ಆಲೋಚಿಸುವುದನ್ನಂತೂ ಮಹಾ ಪಾಪವೆಂದೆ ನಂಬಿದ್ದೆ. ದಸರೆಯ ಸಮಯ ನಮ್ಮ ಹಾಸ್ಟೆಲ್ಲಿನಲ್ಲಿ ಲಕ್ಷ್ಮಿ ಪೂಜೆ ಮಾಡುವ ನೆಪದಲ್ಲಿ ಪ್ರತಿಯೊಬ್ಬರೂ ಚಂದಾ ಹಾಕಿ ರಜೆಗೆ ಮನೆಗೆ ಹೋಗುವ ಹಿಂದಿನ ದಿನ ಭರ್ಜರಿ ಹಬ್ಬ ಮಾಡಿ ಆಗ ಬಾಡಿಗೆಗೆ ಸಿಗುತ್ತಿದ್ದ ವಿಸಿಪಿ ಹಾಗು ಬಣ್ನದ ಟಿವಿ ತರಿಸಿ ಅದರಲ್ಲಿ ಈ ಚಂದಾ ಹಣವನ್ನೆ ಖರ್ಚು ಮಾಡಿಸಿ ಸಿಗುತ್ತಿದ್ದ ಹೊಚ್ಚ ಹೊಸ ಚಲನಚಿತ್ರಗಳ ಕ್ಯಾಸೆಟ್'ಗಳನ್ನ ನೋಡಿ ನಲಿಯುತ್ತಿದ್ದರು. 


ನಾವು ಹತ್ತರ ಮೇಲೆ ಅದೇನೆ ಆದರು ಎಚ್ಚರವಿರಲಾರದ ಎಳೆಯರೆಲ್ಲ ಮಲಗಿದನಂತರ ಆ ಹಿರಿಯ ಗಡವರೆಲ್ಲ ಅದರ ಜೊತೆಗೆ ತಂದಿರುತ್ತಿದ್ದ "ನೀಲಿ ಚಿತ್ರ"ಗಳನ್ನು ಹಾಕಿಕೊಂಡು ನೋಡುತ್ತಾರೆ ಎನ್ನುವ ದಟ್ಟ ಗುಮಾನಿ ಏಳುವಂತೆ ಗುಸುಗುಸು ಚಾಲ್ತಿಯಲ್ಲಿತ್ತು. ಮೊದಲ ವರ್ಷ ಈ ಬಾಬ್ತು ಹತ್ತು ರೂಪಾಯಿಯನ್ನೂ, ಎರಡನೆ ವರ್ಷ ಹದಿನೈದು ರೂಪಾಯಿಯನ್ನೂ ಹಾಗೂ ಕಡೆಯವರ್ಷ ಇಪ್ಪತೈದು ರೂಪಾಯಿಗಲನ್ನೂ ಸಂಗ್ರಹಿಸಿದ್ದರೆಂದು ನೆನಪು. ಇಡಿ ವಿದ್ಯಾರ್ಥಿ ಸಮೂಹದಲ್ಲಿ "ಚಂದಾ"ಮಾಮನಾಗಿರದ ಏಕೈಕ ಪ್ರಭೃತಿ ನಾನಾಗಿದ್ದೆ! ಮೊದಲ ವರ್ಷ ಈ ಬಗ್ಗೆ ಸ್ಟಾಫ್ ರೂಮಿನಲ್ಲಿ "ಹೀಗೆ ಕೇಳ್ತಿದಾರೆ ಕೊಡಬೇಕಂತೆ" ಅಂತ ಕೇಳಿದ್ದಕ್ಕೆ " ನೀನಲ್ಲಿ ಓದಕ್ಕೆ ಹೋಗೋದೋ? ಇಲ್ಲ ಸಿನೆಮಾ ನೋಡಕ್ಕಾ?! ಕೊಡಲ್ಲ ಅಂತ ಹೇಳು" ಅಂತ ಸರಿಯಾಗಿ ಉಗಿದಟ್ಟಿಸಿಕೊಂಡಿದ್ದೆ. ಲಕ್ಷ್ಮಿ ಪೂಜೆ ಮಾಡಿ ಲಕ್ಷ್ಮಿ ಪುತ್ರರಾಗುವ ಅವಸರದಲ್ಲಿದ್ದ ಸಂಘಟಕರಿಗೆ ಇಲ್ಲಿ ಬಂದು ಅದೆ ವರದಿ ಒಪ್ಪಿಸಿದಕ್ಕೆ ಇವರೆಲ್ಲರೂ ಇನ್ನಷ್ಟು ಆಡಿಕೊಂಡು ನನ್ನ ಇನ್ನಷ್ಟು ದೂರವಿಟ್ತರು! ಒಟ್ಟಿನಲ್ಲಿ ಎರಡೂ ಕಡೆ ಸತ್ಯ "ಹರ್ಷ"ಚಂದ್ರನಾದ ತಪ್ಪಿಗೆ ಇಬ್ಬರಿಂದಲೂ ನನಗೆ ಮಂಗಳಾರತಿ ಬೇರೆಬೇರೆ ರೀತಿಯಲ್ಲಿ ಆಯ್ತು! ಅಲ್ಲದೆ ಈಗ ಯೋಚಿಸಿ ನೋಡಿದರೆ ತೊಂಬತ್ತರ ದಶಕದ ಪೂರ್ವಾರ್ಧದಲ್ಲಿ ಹತ್ತು ರೂಪಾಯಿಗೆ ಇಂದಿನ ನೂರು ರುಪಾಯಿಯ ಬೆಲೆಯಿತ್ತು ಅನ್ನಿಸುತ್ತದೆ. ಚಿಕ್ಕಮ್ಮನ ವಾದದಲ್ಲಿ ತೀರ ತೆಗೆದು ಹಾಕುವ ತರ್ಕವೇನೂ ಇದ್ದಿರಲಿಲ್ಲ ಅನ್ನಿಸುತ್ತೆ.


ಇಷ್ಟೆಲ್ಲ ಸುಭಗನಾಗಿದ್ದವ ಕಡೆಗೊಂದು ಸಾರಿ ಈ ನಿಷೇಧಿತ ವಲಯವನ್ನ ಭಂಡ ದೈರ್ಯ ಮಾಡಿ ಕಾರ್ಕಳ ಬಿಡುವ ಕೊನೆಯೆರಡು ತಿಂಗಳು ಬಾಕಿಯಿರುವಾಗ ದಾಟಿ ನೋಡಿಯೆ ಬಿಟ್ಟೆ. ಆದರೆ ಈ ಸಾಹಸವನ್ನ ಯಾವುದೋ ಚಿಲ್ಲರೆ ಮೂರನೆ ದರ್ಜೆಯ ಸಿನೆಮಾದ ಸಲುವಾಗಿ ಮಾಡಿದ್ದಲ್ಲ ಅನ್ನುವ ಕಳ್ಳ ಸಮಾಧಾನವೊಂದು ಮಾತ್ರ ನನಗಿದೆ. ಕಾರ್ಕಳದ ರಾಧಿಕಾ ಟಾಕೀಸಿಗೆ "ಕಾದಲನ್" ಬಂದಿತ್ತು. ಆಗ ಊರೆಲ್ಲ ರೆಹೆಮಾನನ "ಮುಕ್ಕಾಲ ಮುಕ್ಕಾಬಲಾ"ದ ಸಂಕ್ರಮಣ ಕಾಲ. ಗಣಪತಿ ಪೆಂಡಾಲಿನಿಂದ ಹಿಡಿದು ದೇವಸ್ಥಾನದ ಉತ್ಸವದ ಧ್ವನಿ ವರ್ಧಕಗಳೂ ಕೂಡ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಮುಕ್ಕಾಬಲಾ" ಊಳಿಡಲು ಕಾತರವಾಗಿ ಕಾಯುತ್ತಿರುತ್ತಿದ್ದವು. ಶಾಲೆಗಳ ಪ್ರತಿಭಾ ಪ್ರದರ್ಶನದಲ್ಲೂ ನೃತ್ಯ ಕಲಾಕೋವಿದರಿಂದ "ಮುಕ್ಕಾಬಲಾ"  ಕಡೆಯ ಖಡ್ಡಾಯ ಐಟಂ ನರ್ತನವಾಗಿರುತ್ತಿದ್ದ ಪರ್ವ ಕಾಲ ಅದು! ಈ ಮುಕ್ಕಾಬಲಾ ಹಾಡಿರುವ ಸಿನೆಮಾವನ್ನ ಕದ್ದು ನೋಡುವ ದೊಡ್ದ ಮನಸು ಅದರ ಸಕಲ ಖರ್ಚು ವೆಚ್ಚವನ್ನೂ ವಹಿಸಲು ಕಾತರರಾಗಿದ್ದ ಜಯಂತ ಹಾಗೂ ಉಮೇಶನ ಪುಸಲಾವಣೆಗೆ ಬಲಿಯಾಗಿ ಕಡೆಗೂ ಮಾಡಿದೆ. ವಾರ್ಷಿಕ ಪರೀಕ್ಷೆಗೆ ಕೇವಲ ಮೂರು ದಿನ ಬಾಕಿಯಿತ್ತು!


ಆ ಸಂಜೆ ಯಾವುದೋ ಮಾಡಬಾರದ ಕೃತ್ಯ ಮಾಡುತ್ತಿರುವ ಹೆದರಿಕೆಯಲ್ಲಿ ಸಂಜೆ ಎಲ್ಲರೂ ಪ್ರಾರ್ಥನೆಗೆ ಕುಳಿತಾಗ ಮೊದಲೆ ಉಮೇಶ ನಿರ್ಧರಿಸಿದಂತೆ ನಾವು ಮೂವರು ಮಾತ್ರ ನಿಧಾನ ಹೊರ ನುಸುಳಿ ಕೊಂಡೆವು. ಘಂಟೆ ಆರಾಗಿತ್ತು. ಆರೂ ಮೂವತ್ತಕ್ಕೆ ಸಿನೆಮಾ, ನಾಲ್ಕು ಕಿಲೋಮೀಟರ್ ಓಡೋಡಿಯೆ ಥಿಯೇಟರ್ ತಲುಪುವ ತನಕ ನನಗೆ ದಾರಿಯಲ್ಲಿ ಪರಿಚಿತರ್ಯಾರಾದರೂ ಕಂಡು ನನ್ನ ಈ ಹಾಲಾಲುಕೋರತನವನ್ನ ಪತ್ತೆ ಹಚ್ಚಿ ಪೊಲೀಸರಿಗೆ ಹಿಡಿದು ಕೊಟ್ಟರೆ(?) ಏನಪ್ಪಾ ಗತಿ ಅನ್ನುವ ಶಂಕೆಯೊಂದಿಗೆ ಮನಸು ಪುಕಪುಕ ಅನ್ನ ತೊಡಗಿತು. ನನ್ನ ಹೃದಯದ ಬಡಿತ ಸ್ಪಷ್ಟವಾಗಿ ನನಗೆ ಕೇಳುತ್ತಿತ್ತು. ಟಾಕೀಸು ಹೊಕ್ಕು ಅರ್ಧಗಂಟೆಯವರೆಗೂ ನನಗೆ ಮಾಡುತ್ತಿರುವ ಕಳ್ಳ ಕೆಲಸದ ಹಿನ್ನೆಲೆಯಲ್ಲಿ ಹುಟ್ಟಿದ ಹೆದರಿಕೆಯ ಕಾರಣ ಜೀವದಲ್ಲಿ ಜೀವ ಇರಲಿಲ್ಲ. ಅದಾಗಲೆ ಸಿನೆಮಾ ಕಾರ್ಕಳಕ್ಕೆ ಬಂದು ಹತ್ತಿರ ಹತ್ತಿರ ತಿಂಗಳ ಮೇಲಾಗಿದ್ದರಿಂದ ಟಾಕೀಸಿನ ಒಳಗೆ ಅಷ್ಟೇನೂ ಜನ ಸಂದಣಿಯಿದ್ದಿರಲಿಲ್ಲ. ಮಧ್ಯಂತರಕ್ಕೆ ಬೆಳಕು ಹಾಕಿದಾಗ ಯಾವೊಂದು ಪರಿಚಿತ ಮುಖಗಳ ದರ್ಶನವೂ ಆಗದೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಸುಟ್ಟು ತಿನ್ನಲಿಕ್ಕೆ ನಾಕಕ್ಷರ ತಮಿಳು ಅರ್ಥವಾಗದಿದ್ದರೂ ವಡಿವೇಲನ ಮಂಗಾಟದ ಹಾಸ್ಯ, ಗಾಜಿನ ಮಾಡಿರುವ ಬಸ್ಸಿನ ಮೇಲೆ ಪ್ರಭುದೇವ ಕುಣಿದ " ಊರ್ವಶಿ, ಊರ್ವಶಿ" ಹಾಡಿನ ರಿದಂ, "ಎನ್ನವಳೆ ಅಡಿ ಎನ್ನವಳೆ" ಹಾಡಿನ ಕಲ್ಪನೆ ಬಹಳ ಇಷ್ಟವಾಯ್ತು. ಕೆಲವು ಪದಗಳು ತುಳುವಿನಲ್ಲೂ ಇದ್ದವು ಅಷ್ಟಿಷ್ಟು ಅರ್ಥವಾದವು. ಆದರೆ ತಲೆಬುಡ ತಿಳಿಯದಿದ್ದರೂ ಸಿನೆಮವನ್ನ ಆಸ್ವಾದಿಸಲು ನಮ್ಮಂತಹ ಕಳ್ಲ ರಸಿಕ ಶಿಕಾಮಣಿಗಳಿಗೆ ಅದೊಂದು ಅಡ್ಡಿಯಂತನಿಸಲಿಲ್ಲ. ಇವತ್ತಿಗೂ ಮದರಾಸಿಗೆ ಹೋದಾಗಲೆಲ್ಲ ನನ್ನ ಕಣ್ಣುಗಳು ನಿಜವಾಗಿಯೂ ಇದೆ ಎಂದೆ ಮನಸು ಭ್ರಮಿಸಿರುವ ಆ ಗಾಜಿನ ಮಾಡಿನ ಬಸ್ಸಿಗಾಗಿ ಹುಡುಕುತ್ತದೆ!.



ಆದರೆ ವಾಪಾಸು ಅದೆ ಗುಂಗಿನಲ್ಲಿ ಮರಳಿ ಬಂದವರಿಗೆ ಮಾತ್ರ ಅಘಾತ ಕಾದಿತ್ತು. ತಾಲೂಕಿನ ಕ್ಷೇತ್ರ ಶಿಕ್ಷಣ ವೀಕ್ಷಕರೊಬ್ಬರು ಅನಿರೀಕ್ಷಿತವಾಗಿ ರಾತ್ರಿ ಒಂಬತ್ತರ ವೇಳೆಗೆ ಶಿಸ್ತು ತಪಾಸಣೆಯ ದಾಳಿಯಿಟ್ಟಿದ್ದರು! ಅದರ ಸೂಚನೆ ಗೇಟಿನಲ್ಲೆ ದೊರೆಯಲಾಗಿ ಹಿಂದಿನ ದರೆ ಹಾರಿ  ಎದ್ದುಬಿದ್ದು ಆಗಷ್ಟೆ ಒಂದಕ್ಕೆ ಹಿಂಬದಿಯ ಶೌಚಾಲಯಕ್ಕೆ ಹೋಗಿ ಬಂದ ಸೋಗು ಹಾಕುತ್ತಾ ಓದಿನ ಮೇಜಿನ ಎದುರು ಕಳ್ಳ ಬೆಕ್ಕುಗಳಂತೆ ಮೂವರೂ ಬಂದು ಕುಕ್ಕರಿಸಿದೆವು. ಅಂದಿನ ನಮ್ಮ ನಟನೆ ಎಷ್ಟು ಸಹಜವಾಗಿತ್ತೆಂದರೆ ಅವರೂ ಸಹ ಸುಲಭವಾಗಿ ಯಾಮಾರಿ ಬಿಟ್ಟರು! ಅಂತೂ ಮಹಾ ವಿಪತ್ತೊಂದರಿಂದ ಅಂದು ಪಾರಾಗಿದ್ದೆವು. ಮೂರು ದಿನ ಕಳೆದು ಶುರುವಾದ ಜಿಲ್ಲಾ ಮಟ್ಟದಲ್ಲಿ ನಡೆದಿದ್ದ ಏಳನೆ ತರಗತಿಯ ಪರೀಕ್ಷೆಯಲ್ಲಿ ನಾನು ಎರಡನೆ ಸ್ಥಾನ ಗಳಿಸಿದ್ದೆ ಅನ್ನುವುದಷ್ಟೆ ತೃಪ್ತಿ. 


ಚಿಕ್ಕಮ್ಮನ ವರ್ತನೆಯಲ್ಲಿ ಕಾಣಿಸಿದ ಕೆಲವು ಬದಲಾವಣೆಗಳು, ಹೆಚ್ಚುತ್ತಿದ್ದ ಚಿಕ್ಕಪ್ಪನ ಸಿಡಿಸಿಡಿ ಕಾರ್ಕಳದಲ್ಲಿ ಇದು ನನ್ನ ಕಡೆಯ ವರ್ಷ ಅನ್ನುವ ಸೂಚನೆ ಅದಾಗಲೆ  ನನ್ನ ಸುಪ್ತ ಮನಸಿಗೆ ತಲುಪಿಸಿತ್ತು. ಪ್ರತಿ ರಜೆಯಲ್ಲೂ ಎಲ್ಲರಿಗಿಂತ ಕಟ್ಟಕಡೆಗೆ ಹಾಸ್ಟೆಲ್ಲಿನಿಂದ ಜಾಗ ಖಾಲಿ ಮಾಡುತ್ತಿದ್ದ ನಾನು ಈ ಸಾರಿ ಮಾತ್ರ ಮಂಗಳೂರಿನ ಆಶ್ರಮದಲ್ಲಿದ್ದ ಸಂದರ್ಶನದ ಕಾರಣ ಎಲ್ಲರಿಗಿಂತ ಮೊದಲಿಗೆ ಹೊರಟೆ. ಬೆಳಗ್ಗಿನ ಗಂಜಿ ಊಟಕ್ಕೆ ಎಲ್ಲರೂ ಕೂತಿದ್ದಾಗ ನಾನು ಗಾಡಿ ಬಿಡುವ ನಿರ್ಧಾರ ಮಾಡಿದೆ. ಅಷ್ಟೇನೂ ಹೊಂದಾಣಿಕೆ ಅಲ್ಲಿದ್ದಷ್ಟು ಕಾಲ ಅಲ್ಲಿದ್ದವರೊಂದಿಗೆ ನನಗೆ ಇಲ್ಲದಿದ್ದರೂ ಬಿಡುವಾಗ ಮಾತ್ರ ಮನ ಅದೇಕೋ ಭಾವುಕತೆಯಿಂದ ಭಾರವಾಗಿ ಕಣ್ಣು ಮಂಜಾಗಿತ್ತು. ಯಾರಿಗೂ ಹೇಳದೆ ಹೋಗಬೇಕಂತಿದ್ದವನಿಗೆ ಉಮೇಶ ಮತ್ತು ಜಯಂತನಿಗೂ ಹೇಳದೆ ಹೋಗುವುದು ಸಾಧ್ಯವಾಗಲಿಲ್ಲ. ಅವರಿಬ್ಬರೂ ಬೆಳಗಿನ ಅನ್ನ ಬಿಟ್ಟು ನನ್ನ ಬೀಳ್ಕೊಡಲಿಕ್ಕೆ ಕಂಪೌಂಡಿನ ಕೊನೆಯವರೆಗು ಬಂದರು. ಈಗ ಪಕ್ಕಾ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಾಗಿರುವ ಆಗ ಕೇವಲ ಕಚ್ಚಾ ರಸ್ತೆಯಾಗಿದ್ದ ಹಾದಿಯಲ್ಲಿ ಹೆಜ್ಜೆ ಹಾಕುವ ಮೊದಲು ಉಮೇಶ ಮತ್ತು ಜಯಂತನನ್ನ ತಬ್ಬಿಕೊಂಡು ಗಳಗಳ ಅತ್ತೆ. ಒಂದಷ್ಟು ದೂರ ಸಾಗಿ ಹಿಂತಿರುಗಿ ದಿಟ್ಟಿಸಿದಾಗ ಇನ್ನೂ ಅವರಿಬ್ಬರು ಅಲ್ಲಿಯೆ ನಿಂತು ಕೈ ಬೀಸುತ್ತಲೆ ಇದ್ದರು. ಉಮೇಶ ಕಣ್ಣೊರೆಸಿಕೊಳ್ಳುತ್ತಿದ್ದ. ಅದಾಗಿ ಇಂದಿಗೆ ಇಪ್ಪತ್ತು ವರ್ಷ ಸವೆದು ಹೋಗಿದೆ ಅವರಿಬ್ಬರು ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೊ ಗೊತ್ತಿಲ್ಲ. ಅವರಿಬ್ಬರ ಕಣ್ಣೀರು ಸುರಿಸುತ್ತಾ ವಿದಾಯದ ಕೈ ಬೀಸುತ್ತಿರುವ ದೃಶ್ಯ ಮಾತ್ರ ಮತ್ತೆ ಮತ್ತೆ ನೆನಪಾಗಿ ಕಣ್ಣು ಮಂಜಾಗುತ್ತದೆ.



( ಇನ್ನೂ ಇದೆ.)

No comments: