14 March 2013

ತುಳುಗಾದೆ-೪೪

"ಏಡ್ ಪೋಯಿನ ಕಾಡ್ ಹಾಳ್'ಗೆ, ಕೊಂಕಣಿ ಪೋಯಿನ ಊರು ಹಾಳ್'ಗೆ"{ ಇದೊಂದು ಹೊಟ್ಟೆಕಿಚ್ಚಿನಿಂದ ಹುಟ್ಟಿದ ಗಾದೆ ಅನ್ನಿಸುತ್ತದೆ. ಬಹುಷಃ ಈ ಗಾದೆಯ ವಯಸ್ಸು ಸುಮಾರು ಐದು ಶತಮಾನಗಳಾಗಿರಬಹುದು. ನಂಜಿನ ನಾಲಗೆಗಳು ತುಳುನಾಡಿನಲ್ಲಿ ಸಂಪೂರ್ಣ ನಿರ್ಮೂಲವಾಗುವ ತನಕವೂ ಇನ್ನಷ್ಟು ಶತಮಾನಗಳು ಇದರ ಆಯುಷ್ಯ ಮಾತ್ರ ಗಟ್ಟಿ ಅನ್ನಿಸುತ್ತದೆ. ೧೪೯೮ರಲ್ಲಿ ಪೋರ್ತುಗೀಝರು ಕಲ್ಲಿಕೋಟೆಯ ತಟದ ಮೇಲೆ ಕಾಲಿಟ್ಟಲ್ಲಿಂದ ಎಲ್ಲದಕ್ಕೂ ಶ್ರೀಕಾರ ಬಿತ್ತು. ಅಲ್ಲಿಯವರೆಗೆ ಅರ್ಬ್ಬಿ ವ್ಯಾಪಾರಿಗಳಿಗೆ ವ್ಯಾಪಾರದ ನೆಲೆಯಾಗಿ ಮಾತ್ರ ಗೋಚರಿಸಿದ್ದ ಭಾರತ ಉಪಖಂಡ ಪೋರ್ತುಗೀಝರ ನಂತರ ಸಾಲಾಗಿ ಬಂದ ಯುರೋಪಿಯನ್ನರಿಗೆ ರಾಜಕೀಯವಾಗಿ ವಶಪಡಿಸಿಕೊಂಡು ಆಳಿ ಮನಸೋ ಇಚ್ಛೆ ದೋಚಬಹುದಾದ ಮುಕ್ತ ಖಜಾನೆಯಾಗಿ ಗೋಚರಿಸಿತು. ಹೀಗಾಗಿ ರಣಹೇಡಿಗಳಾದ ಭಾರತೀಯರು ಸುಲಭವಾಗಿ ಸೋತು ಭಾರತ ಪರತಂತ್ರಕ್ಕೆ ತನ್ನನ್ನ ತಾನು ಒಪ್ಪಿಸಿಕೊಂಡಿತು. ಕ್ರಮೇಣ ಪೋರ್ತಗೀಝರು ಪಶ್ಚಿಮ ಕರಾವಳಿಯ ಗುಂಟ ಉತ್ತರಕ್ಕೆ ಸರಿದು ತುಳುನಾಡಿನುದ್ದ ತಮ್ಮ ಭಂಡಸಾಲೆ ಆಂದರೆ ಅಂಗಡಿಗಳನ್ನ ತೆರೆಯುತ್ತಾ ಕೊನೆಗೆ ಗೋವಾದಲ್ಲಿ ತಮ್ಮ ನೆಲೆ ಕಟ್ಟಿಕೊಂಡರು. ಮುಂದೆ ಕೆಲವೆ ವರ್ಷಗಳಲ್ಲಿ ಕೇವಲ "ಕೋಳಿ ಜನಾಂಗ"ದ ಮೀನುಗಾರರ ಕುಗ್ರಾಮವಾಗಿದ್ದ ತೀರ ಪ್ರದೇಶವೊಂದನ್ನ ವ್ಯವಸ್ಥಿತ ನಗರವಾಗಿ ಕಟ್ಟಿದರು. ಅದನ್ನೆ ನಾವು ಇಂದು ಮುಂಬೈ ಎಂದು ಕರೆಯುತ್ತಿದ್ದೇವೆ!


ಈಗ ವಿಷಯಕ್ಕೆ ಬರೋಣ. ಭಾರತಕ್ಕೆ ಮೊದಲ ಅಡಿಯಿಡುವವರೆಗೂ "ಜೀಸಸ್" ಒಬ್ಬನೆ ದೇವ ಎಂದು ನಂಬಿ ಗೊತ್ತಿದ್ದ ಏಕ ದೈವಾರಾಧಕರಾದ ಪೋರ್ತುಗೀಝರಿಗೆ ಇಲ್ಲಿನ ಹೆಜ್ಜೆಗೊಂದು ದೈವದ ಪ್ರಸ್ತುತಿ ಹಾಗೂ ಅದರಾಯ್ಕೆಯ ಆರಾಧನೆಗಳ ರೂಢಿಯಿರುವ, ಆದಾಗ್ಯೂ ತಮ್ಮನ್ನ ತಾವು ಒಂದೆ ಜನಾಂಗವೆಂದು ಕರೆದುಕೊಳ್ಳುವ ಸ್ಥಳಿಯರನ್ನ ಕಂಡು ಕೆಕರುಮೆಕರು ಗೊಳ್ಳುವಂತಾಯಿತು. ಅವರ ಪ್ರಕಾರ ಇಷ್ಟೊಂದು ದೇವರು ಇರುವುದೆ ಮೊದಲನೆಯದಾಗಿ ಅಸಾಧ್ಯ, ಹಾಗೊಂದು ವೇಳೆ ಇದ್ದರೂ ಅವರನ್ನೆಲ್ಲ ಪೂಜಿಸುವ ಮಂದಿ ಒಂದೆ ಜನಾಂಗವಾಗಿ ಏಕರೂಪ ಜೀವನಕ್ರಮದ ಸಮಾಜದಲ್ಲಿ ಒಟ್ಟೊಟ್ಟಿಗೆ ಸಹಬಾಳ್ವೆ ಮಾಡುವುದಂತೂ ಪರಮ ಗೊಂದಲದ ಅನಾಗರೀಕತೆಯಾಗಿತ್ತು. ಹೀಗೆ ಅವರ ಪ್ರಕಾರ ಧಾರ್ಮಿಕವಾಗಿ ಹಾದಿ ತಪ್ಪಿದ "ಅನಾಗರೀಕ ಭಾರತೀಯ"ರನ್ನ ಪರಮ ದಯಾಳು ಜೀಸಸ್ ಕ್ರೈಸ್ತನ ಸುವಾರ್ತೆಗಳಿಗೆ ಅಧೀನರನ್ನಾಗಿ ಮಾಡಿ, ಕ್ರೈಸ್ತ ಮತ ದೀಕ್ಷಾ ಸ್ನಾನವನ್ನ ಮಾಡಿಸಿ ಏಕದೇವೋಪಾಸನೆಯತ್ತ ತಿರುಗಿಸಿ ಅವರನ್ನೆಲ್ಲ "ಸರಿ ಮಾಡುವ" ಆಲೋಚನೆ ಗೋವೆಯನ್ನ ಕಬಳಿಸಿದ ಆಳರಸ ಪೋರ್ತುಗೀಝರಲ್ಲಿ ಹುಟ್ಟಿತು. ಆದರೆ ಅವರು "ಸರಿ ಮಾಡಲು" ಅನುಸರಿಸಿದ ಕ್ರಮಗಳು ತೀರ ಅನೈತಿಕವಾಗಿದ್ದವು, ಸಾಲದ್ದಕ್ಕೆ ಅದಕ್ಕಾಗಿ ಅವರು ಬಳಸಿದ ಒತ್ತಾಯದ ಮತಾಂತರದ ವಿಧಾನ ಕ್ರೌರ್ಯದ ಪರಮಾವಧಿಯನ್ನ ಮುಟ್ಟಿತು. ಹೀಗಾಗಿ ಗೋವೆಯ ಮುಖ್ಯ ವಾಹಿನಿಯವರಾಗಿದ್ದ ಗೌಡ ಸಾರಸ್ವತ ಬ್ರಾಹ್ಮಣರು, ಕುಣುಬಿಗಳು, ಸಿದ್ಧಿಗಳು ಇವರಲ್ಲಿ ಅನೇಕರು ಶರಣಾಗತಿಯಿಂದ ಆಗಬಹುದಾದ ಮತಾಂತರಕ್ಕೆ ಹೆದರಿ ಸ್ವಂತ ನೆಲವನ್ನ ತ್ಯಜಿಸಿ ಉಟ್ಟ ಬಟ್ಟೆಯಲ್ಲೆ ತಮ್ಮ ಕುಲದೈವಗಳಾದ "ಶಾಂತೇರಿ ಕಾಮಾಕ್ಷಿ" "ರವಳನಾಥ" "ಮದನಂತೇಶ್ವರ" ರನ್ನಷ್ಟೆ ಜೊತೆಗೆ ಹೊತ್ತುಕೊಂಡು ದಕ್ಷಿಣ ದಿಕ್ಕಿಗೆ ವಲಸೆ ಬಂದರು. ಇವರಲ್ಲಿ ಪ್ರಮುಖವಾಗಿ ಹೀಗೆ ದೇಶಭ್ರಷ್ಟರಾದವರಲ್ಲಿ ಬಹುಪಾಲಿದ್ದವರು ಗೌಡ ಸಾರಸ್ವತ ಬ್ರಾಹ್ಮಣರು. ಗೌಡದೇಶ ಅಂದರೆ ಇಂದಿನ ಬಂಗಾಳಕ್ಕೆ ಸರಸ್ವತಿ ನದಿ ತಟದಿಂದ ಅಂದರೆ ಇಂದಿನ ಗುಜರಾತ ಹಾಗೂ ರಾಜಸ್ಥಾನದ ಗಡಿಭಾಗದಿಂದ ವಲಸೆ ಹೋಗಿ ಬಾಳುತ್ತಿದ್ದವರನ್ನ ಪರಶುರಾಮ ತಂದು ಗೋವೆಯಲ್ಲಿ ನೆಲೆ ನಿಲ್ಲಿಸಿದ ಅನ್ನುವ ನಂಬಿಕೆ ಅವರಲ್ಲಿರುವ ಕಾರಣ ಅವರನ್ನ ಗೌಡ ಸಾರಸ್ವತರು ಎಂದು ಕರೆಯಲಾಗುತ್ತದೆ.


ಹೀಗೆ ದೇಶಾಂತರವಾಗಿ ಹೊಸ ನೆಲೆ ಅರಸುತ್ತಾ ಮಠಗ್ರಾಮ ಅಂದರೆ ಇಂದಿನ ಮಡ್ಗಾಂವ್'ನಿಂದ ಹೊರಟ ಅವರು ನಡೆಯುತ್ತಲೆ ತಮ್ಮ ಕಾರಣಿಕ ನಾಗ್ಡೋ ಬೇತಾಳನ ಆದೇಶದಂತೆ ಕರುನಾಡ ಕಾರವಾರದಿಂದಾರಂಭಿಸಿ ತುಳುನಾಡ ಬಸರೂರು, ಬಾರ್ಕೂರು, ಕೋಡಿಯಾಲ ಅಂದರೆ ಮಂಗಲೂರಿನ ಮೂಲಕ ಹಾದು ಮಲಯಾಳದ ಕೊಚ್ಚಿಯವರೆಗೂ ಹರಡಿ ಹಂಚಿ ಅಲ್ಲಲ್ಲಿ ನೆಲೆಗೊಂಡರು. ಕ್ರಮೇಣ ಕರುನಾಡ ಮಲೆನಾಡಿನ ಮೂಲಕ ಪ್ರಪಂಚದಾದ್ಯಂತ ಹರಡಿಕೊಂಡರು. ಬರಿಗೈಯಲ್ಲಿ ಹೀಗೆ ಅಪರಿಚಿತ ದೇಶಕ್ಕೆ ಬಂದ ಇವರನ್ನ ಸ್ಥಳಿಯ ಕರುನಾಡ-ತುಳುನಾಡ-ಮಲಯಾಳದ ಬ್ರಾಹ್ಮಣರು ತಮ್ಮ ಸರಿಸಮರಾಗಿ ಪರಿಗಣಿಸಲಿಲ್ಲ. ಇನ್ನು ಇಲ್ಲಿನ ಬ್ರಾಹ್ಮಣರೇತರರು ತಮ್ಮಂತೆ ಮೀನು ತಿನ್ನುವ ಈ "ಶೂದ್ರ ಬ್ರಾಹ್ಮಣ"ರಿಗೆ ಉನ್ನತ ದರ್ಜೆ ಕೊಡಲು ಸುತಾರಂ ನಿರಾಕರಿಸಿದರು. ಗೋವೆಯ ತಮ್ಮ ಮಾತೃಭಾಷೆಯಾದ ಕೊಂಕಣಿಯನ್ನಾಡುತ್ತಿದ್ದ ಅವರನ್ನ ಉಳಿದೆಲ್ಲ ಸ್ಥಳಿಯರಿಂದ ಕೊಂಕಣರೆಂದು ಎದುರಿಗೆ ಬಹುವಚನದಲ್ಲೂ, ಕೊಂಕಣಿಯೆಂದು ಅವರ ಬೆನ್ನ ಹಿಂದೆ ಏಕವಚನದಲ್ಲಿಯು ಅವರು ಕರೆಸಿಕೊಂಡರು. ಹೀಗಾಗಿ ಪುರೋಹಿತರಾಗುವ ಅವಕಾಶದಿಂದ ವಂಚಿತರಾದ ಇವರು ಸಿಕ್ಕ ಅವಕಾಶಗಳನ್ನೆ ಬಳಸಿ ತಮ್ಮ ಹೆಂಡಿರ ಮಕ್ಕಳ ಮೈಮೇಲಿದ್ದ ಅಳಿದುಳಿದ ಬಂಗಾರವನ್ನೆ ಬಂಡವಾಳವಾಗಿ ತೊಡಗಿಸಿ ವ್ಯಾಪಾರ ಅದರಲ್ಲೂ ಬಡ್ಡಿ ಲೇವಾದೇವಿಯ ವ್ಯಾಪಾರಕ್ಕೆ ಇಳಿದರು. ತಟ್ಟಿ ಕಟ್ಟಿ ಊಟದ ಮನೆ ತೆರೆದು ಅನ್ನದ ವ್ಯಾಪಾರ ಕಲಿಸಿದರು. ನಮ್ಮ ಸುತ್ತ ಮುತ್ತಲಿರುವ ಪೈ, ಶಣೈ, ರಾವ್, ಪ್ರಭು, ಪಡಿಯಾರ್, ನಾಯಕ್, ಕಿಣಿ, ಕಾಮತ್, ಭಟ್, ಮಲ್ಯ, ಹೆಗ್ಡೆ ಮುಂತಾದ ಅನೇಕ ಕುಲನಾಮ ಹೊಂದಿದ ಕೊಂಕಣಿಗ ಪ್ರಸಿದ್ಧರನ್ನ ಕಾಣಬಹುದು. ಸಾಲ ಬೇಕಾದಾಗ ಅವರ ಮುಂದೆ ಕೈಚಾಚಿ ಒಪ್ಪಿದ ಬಡ್ಡಿಯನ್ನ ಕಾಲಕ್ಕೆ ಸರಿಯಾಗಿ ಕಟ್ಟಲಾಗದೆ ತಮ್ಮ ಅಡವಿಟ್ಟ ಚಿರ ಚರ ಸೊತ್ತುಗಳನ್ನ ಕಳೆದುಕೊಂಡವರು ಈ ಗಾದೆಯನ್ನ ತಮ್ಮ ಆಸ್ತಿಗಳನ್ನ ಸ್ವಂತ ಮಾಡಿಕೊಂಡು ಬೆಳೆದು ಕಾಲಕ್ರಮದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯರಾದ ವಲಸಿಗ ಕೊಂಕಣಿಗರ ಏಳ್ಗೆಯನ್ನ ಕಂಡು ಹೊಟ್ಟೆಯುರಿ ತಾಳಲಾರದೆ ಹುಟ್ಟಿಸಿರುವ ಗಾದೆ ಇದಾಗಿರಬಹುದು ಅನ್ನಿಸುತ್ತದೆ. ಸಿಕ್ಕಿದ್ದ ಹಸಿರನ್ನೆಲ್ಲ ಮೆಯ್ದು ಸಪಾಟು ಮಾಡಿ ಬಿಡುವ ಆಡು ಹೊಕ್ಕ ಕಾಡಿನಂತೆ ಸಿಕ್ಕಿದ್ದನ್ನೆಲ್ಲ ಕಬಳಿಸಿ ಹೊಟ್ಟೆ ಹೊರೆದುಕೊಳ್ಳುವ ಕೊಂಕಣಿ ಹೊಕ್ಕ ಊರು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.}( ಏಡ್ ಪೋಯಿನ ಕಾಡ್ ಹಾಳ್'ಗೆ!, ಕೊಂಕಣಿ ಪೋಯಿನ ಊರು ಹಾಳ್'ಗೆ!! = ಆಡು ಹೊಕ್ಕ ಕಾಡು ಹಾಳಂತೆ! ಕೊಂಕಣಿ ಹೊಕ್ಕ ಊರು ಹಾಳಂತೆ!! )

1 comment:

anagha kirana said...

ಹೌದು, ಅದು ಸಹಜ. ಹೆಮ್ಮೆ ಪಡಲು, ಕೊಂಕಣಿಗರನ್ನ ಅಭಿಮಾನಿಸಲು ಹಲವಾರು ಕಾರಣಗಳಿವೆ. ಆರ್ಥಿಕವಾಗಿ ಹೀನಸ್ಥಿತಿಯಲ್ಲಿದ್ದ ಕಾರಣ ಬದುಕಿನಲ್ಲಿ ಹೋರಾಡಿ ಮುನ್ನುಗ್ಗುವುದು ಅವರಿಗೆ ಅನಿವಾರ್ಯವೆ ಆಗಿತ್ತು. ಹೀಗಾಗಿ ನಿರ್ವಸತಿಗ- ನಿರ್ಗತಿಕ -ಆಶ್ರಿತರ ಹೀನ ಮಟ್ಟದಿಂದ ಸ್ವ ಪ್ರತಿಭೆ ಮೆರೆದು ಸ್ಥಳಿಯ ಸಮಾಜದ ಉನ್ನತ ಗೌರವಾನ್ವಿತ ಸ್ಥಾನಗಳಿಗೆ ಅವರಲ್ಲಿ ಅನೇಕರು ಏರಿ ಹೋಗಿದ್ದಾರೆ. ಆರ್ಥಿಕವಾಗಿ ಬಲವಾದ "ಕೆನರಾ ಬ್ಯಾಂಕ್" "ಸಿಂಡಿಕೇಟ್ ಬ್ಯಾಂಕ್" "ಯುನೈಟೆಡ್ ಬ್ರೀವರಿಜ್"ನಂತಹ ಸಾಮ್ರಾಜ್ಯಗಳನ್ನೆ ಕಟ್ಟಿದ್ದಾರೆ. ಆರಂಭದಲ್ಲಿ ಅದವರ ವಯಕ್ತಿಕ ಅಳಿವು ಉಳಿವಿನ ಪ್ರಶ್ನೆಯಾಗಿದ್ದರೂ ಕ್ರಮೇಣ ಅದರಿಂದ ಲೋಕೋಪಕಾರ ಧಾರಾಳವಾಗಿದೆ.ಕರಾವಳಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಡಿ ದಕ್ಷಿಣ ಭಾರತದಲ್ಲಿ ಆರೋಗ್ಯ ಸೇವೆಗಳು ವೆಲ್ಲೂರು ಬಿಟ್ಟರೆ ಇನ್ನೆಲ್ಲಾ ಕಡೆ ಶೈಶವಾಸ್ಥೆಯಲ್ಲಿದ್ದಾಗ, ಬೆಂಗಳೂರು, ಹೈದರಾಬಾದ್, ಮದರಾಸ್ ನಂತಹ ಶಹರಗಳೆ ಸಮೂಹ ಆರೋಗ್ಯ ವಿಷಯದಲ್ಲಿಐನ್ನೂ ಅಂಬೆಗಾಲಿಡುತ್ತಿದ್ದಾಗ ಉಡುಪಿ ತಾಲೂಕಿನ ಕುಗ್ರಾಮ ಮಣಿಪಾಲವನ್ನ ವಿಶ್ವದರ್ಜೆಯ ಆರೋಗ್ಯ ಸೇವೆಗಳ ಕೇಂದ್ರ ಸ್ಥಾನವನ್ನಾಗಿಸಿದ್ದು ತೋನ್ಸೆಯ ಮಾಧವ ಪೈ ಮತ್ತವರ ಸಹೋದರರ ಸಂಘಿಕ ಯತ್ನ. ಅವರಂದು ಆರಂಭಿಸಿದ "ಉದಯವಾಣಿ ಪತ್ರಿಕಾ ಸಮೂಹ" ಇಂದಿಗೆ ನಾಡಿನ ಮುಂಚೂಣಿಯ ಮಾಧ್ಯಮ ಸಂಸ್ಥೆ. ಮಗ ವಿಜಯ ಮಲ್ಯ ಶೋಕಿಲಾಲನಾಗಿ ಅಪ್ಪನ ಆಸ್ತಿಯನ್ನ ಒಂದೊಂದಾಗಿ ಕಳೆದು ದಿವಾಳಿಯಾಗುತ್ತಿದ್ದರೂ ವಿಠ್ಠಲ ಮಲ್ಯರು ಬೆಂಗಳೂರಿನಲ್ಲಿ ಮೆರೆದದ್ದನ್ನ ಮರೆಯಲಾಗುವುದಿಲ್ಲ. ಸತೀಶ್ ಪೈ ಸದ್ಯ ಬೆಂಗಳೂರಿನ ಭೂ ಮಾರಾಟ ಸಾಮ್ರಾಜ್ಯದ ಅನಭಿಶಕ್ತ ದೊರೆ. ಇವೆಲ್ಲ ಕಿರು ಅವಧಿಯಲ್ಲಿ ಸಾಧಿಸಿದ್ದಾರೆಂದರೆ ಸಾಮ-ದಾನ-ಭೇದ-ದಂಡ ಹೀಗೆ ಎಲಾ ಸಾಧ್ಯತೆಗಳನ್ನೂ ಅವರು ಅನುಸರಿಸಿ ಯಶಸ್ಸಿನ ಏಣಿಯನ್ನ ಸಫಲವಾಗಿ ಏರಿದ್ದಾರೆ. "ವ್ಯಾಪಾರಂ ದ್ರೋಹ ಚಿಂತನಂ" ಅಂತ ನಾವು ಒಪ್ಪಿಕೊಂಡಿರುವಾಗ ಇವರ ಅಲ್ಪದ್ರೋಹದ ವ್ಯಾಅಪಾರಿ ತೀಕ್ಷ್ಣ ಬುದ್ಧಿಮತ್ತೆಯನ್ನ ಕಂಡು ಮತ್ಸರ ಪಡುವುದು ಹಾಸ್ಯಾಸ್ಪದವಲ್ಲವ? ಅದೇನೆ ಇದ್ದರೂ ಈ ಗಾಅದೆ ಮೂಲತಃ ಇಲ್ಲಿನವರೆ ಆದ, ಕೊಂಕಣಿಗರನ್ನ ಇನ್ನೂ "ಹೊರಗಿನವರು" ಎಂದೆ ತಮ್ಮ ಅಂತರಾಳದಲ್ಲಿ ಭಾವಿಸಿರುವ ಮಂದಿಯ ಸುಶುಪ್ತ ಮನಸಿನ ವಿಕಾರಕ್ಕೊಂದು ಸಾಕ್ಷಿ ಈ ಗಾದೆ.


( ಇದು ಫೇಸ್'ಬುಕ್ಕಿನಲ್ಲೂ ಹಾಕಿದ್ದ ಇದೆ ಗಾದೆಗೆ ಪ್ರತಿಕ್ರಿಯೆ ನೀಡಿದ ಗೆಳೆಯರೊಬ್ಬರಿಗೆ ನೀಡಿದ್ದ ಉತ್ತರ.)