03 March 2013

ನಾನೊಬ್ಬ ಕಳ್ಳನು....





ಬಾಲ್ಯದಲ್ಲಿ ನನಗೆ ಸಿಕ್ಕಾಪಟ್ಟೆ ತಿನ್ನುವ ಚಟ, ಅದರಲ್ಲೂ "ಗಿಣ್ಣು"ವಿನ ಗೀಳು ವಿಪರೀತವಾಗಿತ್ತು. ನನ್ನಿಂದ ಕೆಲಸ ತೆಗೆಯಬೇಕಾದ ಸಂದರ್ಭಗಳಲ್ಲಿ ನನ್ನ ಹೆತ್ತಮ್ಮ ಅದಕ್ಕೊಪ್ಪದ ನನ್ನನ್ನ ಹೆದರಿಸಿ ಹೊಡೆದು ಬಡಿದು ಹಿಂಸಿಸಿಯೂ ಅಸಹಾಯಕಳಾಗಿ ಕೈಚಲ್ಲಿ ಕೂತರೆ ನನ್ನ 'ಅಮ್ಮ' (ಅಜ್ಜಿ) ಮಾತ್ರ ಅನಾಯಾಸವಾಗಿ ಮೊದಲು ಹೊಗಳಿ ಹೊನ್ನಶೂಲಕ್ಕೇರಿಸಿ, "ಗಿಣ್ಣು"ವನ್ನ ನನಗಾಗಿಯೆ ಮಾಡಿಡುವ ಅಮಿಷದ ಬಲೆಗೆ ಬೀಳಿಸಿ ಕಾರ್ಯಸಿದ್ಧಿಸಿಕೊಳ್ಳುತ್ತಿದ್ದರು. ಹೊಗಳಿಕೆಗೆ ಉಬ್ಬಿ ಹೋಗುವ ನನ್ನ ಬಾಲ್ಯದ ದೌರ್ಬಲ್ಯವನ್ನ ಚನ್ನಾಗಿ ಅರಿತಿದ್ದ ಅವರು ನನ್ನನ್ನ ಮೃದು ಮಾತುಗಳಲ್ಲಿ ಸ್ತುತಿಸಲು, ನನ್ನ ಕಾರ್ಯ ಕೌಶಲ್ಯವನ್ನ ಮೆಚ್ಚಿ ಕೇಳುವ ಮೊದಲೆ ಶಹಭಾಸ್ ಅನ್ನಲಾರಂಭಿಸಿದರೆಂದರೆ ಯಾವುದೋ ಹೊಸ ಕೆಲಸಕ್ಕಿಳಿಸಲು ಪ್ರೇರೇಪಿಸಲು ತಮ್ಮ ತಲೆ ಖರ್ಚು ಮಾಡುತ್ತಿದ್ದಾರೆ ಅಂತಲೆ ಅರ್ಥ. ಸಾಲದ್ದಕ್ಕೆ ಆ ಕಾಲದಲ್ಲಿ ನಾವು ಮನೆಯಲ್ಲಿ ದನ ಸಾಕಿ ಹಾಲು ಮಾರುತ್ತಿದ್ದರಿಂದ ನಮ್ಮ ಕೊಟ್ಟಿಗೆಯಲ್ಲಿದ್ದ ಯಾವಳಾದಳೊಬ್ಬ ಮಹಾತಾಯಿ ವರ್ಷದ ಮುನ್ನೂರವತ್ತೈದು ದಿನವೂ ಸರದಿ ಪ್ರಕಾರ "ಗಬ್ಬ"ದ ಅವಧಿಯಲ್ಲಿರುತ್ತಿದ್ದು ಯಾವುದೆ ಕ್ಷಣ ಸುಖ ಪ್ರಸವಕ್ಕೆ ಈಡಾಗಿ ಅವಳು ಹೆತ್ತ ಮಕ್ಕಳ ಜೊತೆ ನಮ್ಮಂತಹ ದತ್ತು ಪುತ್ರರಿಗೂ ಹಾಲುಣಿಸಲು ಸದಾ ತಯ್ಯಾರಾಗಿರುತ್ತಿದ್ದಳು. ಹೀಗಾಗಿ ಗಿಣ್ಣುವಿಗೇನೂ ನಮ್ಮಲ್ಲಿ ಬರವಿರುತ್ತಿರಲಿಲ್ಲ.



ಹೀಗೆ ನನ್ನಂತಹ ಸ್ವಯಂ ಸೇವಕ(?)ನಿಗೆ ಸದಾ ಬಿಡುವಿರದ ಕೆಲಸ ವಿದ್ದೆ ಇರುತ್ತಿತ್ತು. ಕೊಪ್ಪರಸ್ತೆಯಲ್ಲಿದ್ದ ಸೊಸೈಟಿಯಿಂದ ಅಕ್ಕಿ, ಗೋಧಿ, ರಾಗಿ, ಸಕ್ಕರೆ, ಸೀಮೆಎಣ್ಣೆ ತರಲು ಹೋಗುವ ಅಮ್ಮನ ತೈನಾತಿಯಾಗಿ ಹೋಗಿ ಮನೆಗೆ ಬರುವಾಗ ಆಟೋ ಹಿಡಿಯುವುದು. ಸಿಪಿಸಿ ಅಂಗಡಿಗೆ ಹೋಗಿ ದನಗಳಿಗೆ ಪೌಷ್ಟಿಕ ಕಡ್ಡಿಹಿಂಡಿ ಹೊತ್ತು ತರುವುದು, ಮಾರಿಗುಡಿ ಎದುರಲ್ಲಿದ್ದ ಶೆಟ್ಟರ ಮಿಲ್ಲಿಗೆ ಆರಿಸಿದ ಅಕ್ಕಿ ಗೋಧಿ ಹೊತ್ತು ಅದರ ಹಿಟ್ಟು ಮಾಡಿಸಿ ತರುವುದು, ಮಿಲ್ ರಸ್ತೆಯಲ್ಲಿದ್ದ ಅಕ್ಕಿ ಗಿರಣಿಗೆ ಹೋಗಿ ಕೊಟ್ಟಿಗೆಯ ಬಂಧುಗಳಿಗಾಗಿ ತೌಡು ಕೊಂಡು ತರುವುದು. ದೇವಸ್ಥಾನಕ್ಕೆ ಕೊಟ್ಟ ಹಣ್ಣು-ಕಾಯಿ ಆದ ಮೇಲೆ ಅದನ್ನ ಮನೆಗೆ ಸಾಗಿಸುವುದು. ಮಿಲ್ಲಿನ ಹಿಂದೆ ಧಾರಾಳ ಬಿದ್ದಿರುತ್ತಿದ್ದ ಉಮಿ ಹೊತ್ತು ಬಚ್ಚಲ ಒಲೆಯ ಹತ್ತಿರ ಅದನ್ನ ಒಟ್ಟುವುದು, ಮನೆಸುತ್ತಲ ಗಿಡಗಳಿಗೆ ನೀರು ಹಾಕುವುದು, ಆಗಾಗ ಬೇಕಾಗುವ ಅರ್ಜೆಂಟ್ ಚಿಲ್ಲರೆ ವಸ್ತುಗಳಿಗಾಗಿ ಬಾಬಣ್ಣನ ಅಂಗಡಿಗೆ ದಾಂಗುಡಿಯಿಡುವುದು, ಚಿಕ್ಕಮ್ಮಂದಿರ ಗೆಳತಿಯರ ಮನೆಗೆ ಹೊತ್ತಲ್ಲದ ಹೊತ್ತಿನಲ್ಲಿ ಪರವಾನಗಿ ರಹಿತ ಅಂಚೆಯಣ್ಣನಾಗಿ "ಇವತ್ತು ಕ್ಲಾಸ್ ಬಂಕ್ ಮಾಡಿ ಪಿಚ್ಚರ್'ಗೆ ಹೋಗಣ್ವಾ! "ರವಿಚಂದ್ರಣ್"ನ 'ಅಂಜದಗಂಡು' ವೆಂಕಟೇಶ ಟಾಕೀಸಿಗೆ ಬಂದಿದೆ?!" ತರಹದ ತುರ್ತಿನ ಹಾಗು ಹಿರಿಯರ ಕೈಗೆ ಸಿಕ್ಕರೆ ಮಹಾ ವಿಪತ್ತಿನದೂ ಆಗಬಹುದಾದ ಗುಪ್ತ ಲಿಖಿತ ಟೆಲಿಗ್ರಾಂ ಮಾಹಿತಿಗಳನ್ನ ಸೀಕ್ರೆಟ್ ಏಜೆಂಟನಂತೆ ಎಲ್ಲರ ಕಣ್ಣು ತಪ್ಪಿಸಿ ಸಂಬಂಧ ಪಟ್ಟವರಿಗಷ್ಟೆ ಮುಟ್ಟಿಸುವುದು, ಹಿರಿಯರಿಂದ "ಶಾಲೆಗೆ ಹೋಗುತ್ತಿದ್ದ ಪೋರಿಯರಾದ ಅವರೆಲ್ಲ ಇವನ್ನ ಓದಿದರೆ ಕೆಡುತ್ತಾರೆ" ಎನ್ನುವ ತರಹದ ಗಾಢ ಗುಮಾನಿಯಿದ್ದ ಆರೋಪ ಹೊತ್ತ 'ರಾಗಸಂಗಮ' 'ಹಂಸರಾಗ' ಅಪರೂಪಕ್ಕೆ 'ಸ್ಪೈ' ತರಹದ ಮನೆಯ ಕಾನೂನಿನ ಮಟ್ಟಿಗೆ ಖಡ್ಡಾಯವಾಗಿ ಬ್ಯಾನ್ ಮಾಡಿರುವ "ನಿಷೇಧಿತ ಸಾಹಿತ್ಯ"(?!)ಗಳನ್ನ ಅವರ ನಡುವೆ ನುರಿತ ಸ್ಮಗ್ಲರನಂತೆ ಕಳ್ಳ ಸಾಗಣೆ  ಮಾಡುವುದು, ಕಿರಿಯ ಚಿಕ್ಕಮ್ಮನ ಕಿರಿಕಿರಿ ತಾಳಲಾರದೆ ಸದ್ದ ಅವಳು ಮೇಯುತ್ತಿದ್ದ ಅವಳ ಡ್ರಗ್ ಆಗಿದ್ದ ಶುಂಟಿ ಪೆಪ್ಪರ್'ಮೆಂಟ್ ತರಲು ಗೂಡಂಗಡಿಗೆ ಅಡಿಗಡಿಗೆ ಹೋಗಿ ಹೈರಾಣಾಗುವುದು, ಅಮ್ಮ ಕರೆದ ಹಾಲನ್ನ ವರ್ತನೆಯ ಮನೆಗಳಿಗೆ ಹಂಚಿ ಬರುವುದು, ಇಷ್ಟೆಲ್ಲ ಬಿಡುವಿರದ ಚಟುವಟಿಕೆಗಳ ನಡುವೆ ಸಿಗುವ ಕಿರು ಅವಧಿಯಲ್ಲಿ ಬೆನ್ನು ಮುರಿದು ಹೋಗುವಷ್ಟು ಪೆಟ್ಟು ತಿನ್ನಲು ಸಕಾರಣ ಹಾಗು ಪುರಾವೆಗಳನ್ನ ಸೃಷ್ಟಿಸುವಂತೆ ಬೀದಿಯಲ್ಲಿ/ ಮನೆಯೊಳಗೆ ಸೊಕ್ಕುವುದು ಹೀಗೆ ಅನವರತ ಕಾರ್ಯಭಾರ ಆಗೆಲ್ಲ ನನ್ನ ಹೆಗಲ ಮೇಲಿದ್ದು ಆ ಮೂಲಕ ನನ್ನ ಜಿಹ್ವಾ ಚಾಪಲ್ಯ ತಕ್ಕ ಮಟ್ಟಿಗೆ ಗಿಣ್ಣುವಿನಿಂದ ತಣಿಯುತ್ತಿತ್ತು. ಅಮ್ಮ ಕೊಡುತ್ತಿದ್ದುದು ನೇರ ಮಾರುಕಟ್ಟೆಯ ಗಿಣ್ಣುವಾಗಿದ್ದರೆ ಚಿಕ್ಕಮ್ಮಂದಿರದು ಅಮ್ಮ ಇಲ್ಲದ ಅವಧಿ ನೋಡಿ ಅಡುಗೆಮನೆಯ ಮರದ ಕಪಾಟಿನಿಂದ ಲಪಟಾಯಿಸಿದ ಕಾಳಸಂತೆಯ ಕಳ್ಳ ಮಾಲು ಆಗಿರುತ್ತಿತ್ತು ಅನ್ನೋದಷ್ಟೆ ಅವುಗಳ ನಡುವಿನ ಮೂಲಭೂತ ವ್ಯತ್ಯಾಸ. ಆದರೆ ಸಿಕ್ಕಾಗ ಮುಕ್ಕಿ ಸೀರುಂಡೆಯಾಗಿಸಿಕೊಳ್ಲುವ ಹಪಾಹಪಿಯಲ್ಲಿರುತ್ತಿದ್ದ ನನಗೆ ರುಚಿಯಲ್ಲಿ ಅವೆರಡರ ನಡುವೆ ಭಿನ್ನತೆಯಿದೆ ಅಂತ ಯಾವತ್ತೂ ಅನ್ನಿಸಿಯೆ ಇಲ್ಲಪ್ಪ!


ಹೀಗೆ "ಸುಖವಾಗಿ" ನನ್ನ ಹೊತ್ತು ಕಳೆಯುತ್ತಿದ್ದ ಸಮಯದಲ್ಲೆ ಮೂಡುಬಿದ್ರಿಯಲ್ಲಿದ್ದ ಅಮ್ಮನ ತವರಿನ ಆಸ್ತಿ ಅವರ ಪಾಲಿನದ್ದು ಅವರಿಗೆ ಸಿಗುವುದಕ್ಕೂ, ಅಜ್ಜನ ನಿವೃತ್ತಿ ಶಕೆ ಒಟ್ಟಿಗೆ ಆರಂಭವಾಯ್ತು. ಒಟ್ಟಿನಲ್ಲಿ ನನ್ನ ದುರ್ದೆಸೆ ಆರಂಭವಾಯ್ತು. ನಾನು ಅಮ್ಮನಿಗೆ ಅಂಟಿ ಬೆಳೆದಿದ್ದೆ. ತೀರ್ಥಹಳ್ಳಿಯಲ್ಲಿ ನನ್ನ ಅಸ್ತಿತ್ವ ಅಮ್ಮನ ವಾಸ್ತವ್ಯ ಅಲ್ಲಿಯೆ ಹೌದಾ? ಅಲ್ಲವಾ? ಎನ್ನುವ ಸವಾಲಿನ ಮೇಲೆ ಅವಲಂಬಿಸಿತ್ತು. ಆಗೆಲ್ಲ ಬೆಂಗಳೂರಿನಲ್ಲಿದ್ದ ಅಪ್ಪ ಶಾಶ್ವತವಾಗಿ ಮರಳಿ ಮನೆ ಸೇರಿಕೊಂಡು ಹೆತ್ತಮ್ಮ ಮತ್ತವರ "ಸುಖ ಸಂಸಾರ"ಕ್ಕೆ ಇನ್ನೊಂದು ಮಗುವಾಗಿ ನಾನು ಅವರಿಗೂ ಬೇಡದವನೆ ಆಗಿ ಬಿಟ್ಟಿದ್ದೆ. ಅಮ್ಮ ಮೂಡುಬಿದ್ರಿಗೆ ಸ್ಥಳಾಂತರಗೊಳ್ಳುವ ನಿರ್ಧಾರಕ್ಕೆ ಬರುವಾಗ ಕಾರ್ಕಳದಲ್ಲಿದ್ದ ನನ್ನ ಹಿರಿಯ ಚಿಕ್ಕಮ್ಮನ ಎರಡನೆ ಮಗಳು ಒಂದುವರ್ಷದ ಕೈಗೂಸು. ಅವಳ ದೇಖಾರೇಖಿ, ಅವರ ಮನೆಯಲ್ಲಿ ಉದ್ದೇಶಿಸಿದ್ದ ನಾಗ ಪ್ರತಿಷ್ಟಾಪನೆ, ಉಪಾಧ್ಯಾಯಿನಿಯಾಗಿದ್ದ ಆಕೆಯ ವೃತ್ತಿ ಭಡ್ತಿಗಾಗಿ ಆಕೆ ತೆಗೆದುಕೊಳ್ಳಬೇಕಿದ್ದ ಬಿಏ ಪರೀಕ್ಶೆಯ ತಯ್ಯಾರಿ, ಮನೆಯಲ್ಲಿ ಆಗ ಇದ್ದ ಮಗುವಾಡಿಸುವವರ ಕೊರತೆ, ನನಗೆ ಸಿಕ್ಕಿದ್ದ ಶಾಲೆಯ ಬೇಸಿಗೆ ರಜೆ ಹೀಗೆ ಎಲ್ಲಾ ಸಕಾರಣಗಳು ಒಟ್ಟೊಟ್ಟಿಗೆ ಒದಗಿ ಬಂದು ತೀರ್ಥಹಳ್ಳಿಯ ಅಗಸರ ಕತ್ತೆಯಾಗಿದ್ದ ನಾನು ಕಡೆಗೂ ಕಾರ್ಕಳದ ದೊಂಬರ ಪಾಲಾದೆ. ಅನಾಯಾಸವಾಗಿ ಆದ ಈ ಅದಲು ಬದಲಿನಲ್ಲಿ ನನ್ನ ಅಭಿಪ್ರಾಯಕ್ಕೆ ಕವಡೆ ಕಿಮ್ಮತ್ತೂ ಇರಲಿಲ್ಲ! ತೀರ್ಥಹಳ್ಳಿಯಿಂದ ೧೯೯೨ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಗಡಿಪಾರಾದ ನಾನು ದೇಶಭ್ರಷ್ಟನಾಗಿ ಹಿಡಿ ಅನ್ನ ಮತ್ತು ಆಸರೆ ಬಯಸಿ ಕಾರ್ಕಳ ಸೇರಿದ್ದು ಹೀಗೆ.


ಹುಟ್ಟಿದ ಆಮೇಲಿನ ಮೊದಲ ದಶಕ ಕಳೆದಿದ್ದ, ಪ್ರಪಂಚವನ್ನ ಪುಟ್ಟ ಕಂಗಳಿಂದ ನೋಡಿ ಎಲ್ಲದರಲ್ಲೂ ಹೊಸತನ್ನೆ ಕಂಡು ಅರಿಯುತ್ತಿದ್ದ, ನನ್ನ ಪ್ರೀತಿಯ "ಗಣಪತಿ ಕಡ್ಲೆ ಬಪಮ"ನಿದ್ದ, ಬಾಲಮಿತ್ರ-ಚಂದಾಮಾಮಗಳ ಭಂಡಾರವಿದ್ದ ಅವರ ಮನೆಯಿದ್ದ, ಟಿವಿ ರಾಮಾಯಣ ಮಹಾಭಾರತಗಳನ್ನ ನೋಡಿ ಹರುಕು ಮುರುಕು ಹಿಂದಿ ಕಲಿಸಿ ನನ್ನನ್ನು ಬಟ್ಲರ್ ಹಿಂದಿ ಪಂಡಿತನಾಗಿಸಿದ್ದ ಹುಟ್ಟೂರು ತೀರ್ಥಹಳ್ಳಿಯ ಋಣ ಅವತ್ತಿಗೆ ನನಗೆ ಹೆಚ್ಚು ಕಡಿಮೆ ಶಾಶ್ವತವಾಗಿ ಕಡಿದು ಹೋಗಿತ್ತು. ಬಾಡಿ ವಾರೆಂಟ್ ತಂದ ಪೊಲೀಸಿನವರಂತೆ ಅಜ್ಜ ಮೊದಲಿಗೆ ನನ್ನನ್ನ ನಾನು ಸದಾ ಹೋಗಲು ಕಾತರಿಸುತ್ತಿದ್ದ ಅಮ್ಮನ ಮನೆ ಮೂಡುಬಿದ್ರಿಯ ಸಾಗಿನಬೆಟ್ಟಿಗೆ ಅಲ್ಪಾವಧಿಯ ಪೆರೋಲ್ ಮೇಲೆ ಕಿರು ಸ್ವಾತಂತ್ರ್ಯ ಅನುಭವಿಸುವ ಕೈದಿಯಂತೆ ಕರೆದೊಯ್ದು ನಂತರ ಉಪಾಯವಾಗಿ ಕಾಬೆಟ್ಟಿನ ಸಂಟ್ರಲ್ ಜೈಲಿನಂತಹ ಚಿಕ್ಕಮ್ಮನ ಮನೆಗೆ ಸೇರಿಸಿಬಿಟ್ತರು! ಅಲ್ಲಿನ ಬಿಗು ವಾತಾವರಣದಲ್ಲಿ ನಾನು ಹೊಸ ಅವತಾರ ಎತ್ತಲಿಕ್ಕೆ ಆರಂಭಿಸಿದೆ. ತುಳು ಮಾತನಾಡಲು ಬಾರದ ನನ್ನ ವಿಚಿತ್ರ ಶೈಲಿಯ "ಘಟ್ಟದ ಮೇಲಿನ ಕನ್ನಡ" ಇಲ್ಲಿನವರಿಂದ ಗೇಲಿಗೆ ಒಳಗಾಗುವಾಗ ಅಣಕಿಸುವವರನ್ನೆಲ್ಲ ಹೊಡೆದು ಹೂತು ಹಾಕುವಷ್ಟು ಸಿಟ್ಟು ಉಕ್ಕೇರುತ್ತಿತ್ತು. ಆದರೆ "ಬಡವನ ಕೋಪ ದವಡೆಗೆ ಮೂಲ" ಎನ್ನುವುದರ ಖಚಿತ ಅರಿವಿತ್ತು. ಹೀಗಾಗಿ ಹಲ್ಲಿಕಚ್ಚಿ ಅವನ್ನೆಲ್ಲ ಸಹಿಸಿಕೊಂಡು ಸುಮ್ಮನಿಸುತ್ತಿದ್ದೆ.


ನನ್ನ ಚಿಕ್ಕಪ್ಪ ವೃತ್ತಿಯಿಂದ ಉಪಾಧ್ಯಾಯರು. ಮಂಗಳೂರನ್ನ ಕಾರ್ಕಳದೊಂದಿಗೆ ಬೆಸೆಯುತ್ತಿದ್ದ ರಾಜರಸ್ತೆಯಲ್ಲಿದ್ದ ಪುಲ್ಕೇರಿ ರಾಮಪ್ಪ ಶಾಲೆಗೆ ಅವರು ಮುಖ್ಯೋಪಧ್ಯಾಯರಾಗಿದ್ದರು. ಯಕ್ಷಗಾನದ ಗೀಳು ಅವರಲ್ಲಿ ಬಹಳ ಇತ್ತು. ಅವರ ಹಳೆ ಮನೆಯ ವಿಸ್ತರಣೆ ಕಟ್ಟುವ ಕಾಲಕ್ಕೆ ಹೊಸ ಬಾವಿ ತೋಡಿಸುವ ಸಮಯದಲ್ಲಿ ಬಾವಿಗೆ ಆಯತಪ್ಪಿ ಬಿದ್ದ ಮಗುವನ್ನೆತ್ತಲು ಹಾರಿ ಕಾಲು ಮುರಿದುಕೊಳ್ಳುವ ತನಕವೂ ಅವರು ಯಕ್ಷಗಾನದಲ್ಲಿ ಬಣ್ಣ ಹಚ್ಚಿ ಪಾತ್ರ ನಿರ್ವಹಿಸುತ್ತಿದ್ದರು. ಅವರ ಗೆಳೆಯರ ಬಳಗ ದೊಡ್ಡದು ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ಅವರ ಗೆಳೆಯರು ಮನೆಯಲ್ಲಿ ಔತಣಕ್ಕೆ ಸೇರುತ್ತಿದ್ದುದಿತ್ತು. ಆಗೆಲ್ಲ ಚಿಕ್ಕಮ್ಮನಿಗೆ ಹೈರಾಣಾಗುವಷ್ಟು ಅಡುಗೆಯ ಕೆಲಸ. ಹೊರ ಪ್ರಪಂಚಕ್ಕೆ ಅಷ್ಟೆಲ್ಲ ಬೇಕಾದವರಂತೆ ವರ್ತಿಸುವ ಮನುಷ್ಯ ಮನೆಯವರ ಪಾಲಿಗೆ ಮಾತ್ರ ಮಹರಾಯ ದೂರ್ವಾಸ ಮೂರ್ತಿ! ಮನೆಯಲ್ಲೆ ಇದ್ದ ತನ್ನ ಹೆತ್ತ ತಾಯಿಯ ಜೊತೆಗೆ ಅಷ್ಟಾಗಿ ಮಾತಾಡುತ್ತಿರಲಿಲ್ಲ. ಮೊದಲ ಮಗಳು ಅಪ್ಪನೆಂದರೆ ಹೆದರಿ ಮೂಲೆ ಸೇರುತ್ತಿದ್ದಳು. ಚಿಕ್ಕಮ್ಮನ ಹತ್ತಿರ ಮಾತ್ರ ಅವರು ನಗುನಗುತ್ತಾ ಮಾತನಾಡುತ್ತಿದ್ದುದನ್ನ ಕಂಡ ನೆನಪಿದೆ. ಇನ್ನು ಎರಡನೆಯ ಮಗಳು ಮಾತ್ರ ಅಪ್ಪನ ದುರಹಂಕಾರವನ್ನ ಮುಲಾಜಿಲ್ಲದೆ ಬಗ್ಗಿಸಿ ತಗ್ಗಿಸಿದಳು. ನಾನು ಚಿಕ್ಕಪ್ಪನ ಮುಂದೆ ಮೆಲುವಾಗಿ ಮಾತಾಡಲಿಕ್ಕೂ ಹೆದರುತ್ತಿದ್ದೆ. ನನ್ನ ಮಟ್ಟಿಗೆ ಮಾತ್ರ ಅವರು ಇಲ್ಲಿಯವರೆಗೂ ಅರ್ಥವಾಗದ ಕಗ್ಗವಾಗಿಯೆ ಉಳಿದಿದ್ದಾರೆ. ಇತ್ತೀಚಿನ ಅವರ ವರ್ತನೆಗಳು ಅವರೊಳಗೊಬ್ಬ ಸಮಯಸಾಧಕನಿರೋದನ್ನ ಖಚಿತ ಪಡಿಸಿವೆ.


ಚಿಕ್ಕಪ್ಪನಿಗೆ ನಾನು ಮನೆಯಲ್ಲಿರೋದು ಪಥ್ಯವಿರಲಿಲ್ಲ. ಹೇಗಾದರು ಸರಿ ತನ್ನ ಹಾಗೂ ತನ್ನ ಹೆಂಡತಿಯ ಅನಿವಾರ್ಯತೆಗಳು ಮುಗಿದ ಕೂಡಲೆ ನನ್ನನ್ನ ಅಲ್ಲಿಂದ ಸಾಗ ಹಾಕುವ ಯೋಚನೆ ಅವರಲ್ಲಿದ್ದುದು ಸ್ಪಷ್ಟ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಸಾಗುತ್ತಿದ್ದ ಚಿಕ್ಕಮ್ಮನ ಪರೀಕ್ಷಾ ತಯಾರಿಗೆ ಅವರು ಆಗಾಗ ಹೋಗ ಬೇಕಿತ್ತು. ಅವರ ಅತ್ತೆ ಅಜ್ಜಿಗೆ ನೂರೆಂಟು ವಯೋ ಸಹಜ ಖಾಯಿಲೆಗಳಿದ್ದವು. ಮನೆಯಲ್ಲಿ ಆರು ವರ್ಷದ ಹಿರಿಯ ತಂಗಿ ಹಾಗೂ ಒಂದು ವರ್ಷದ ಮಗು ಕಿರಿಯವಳನ್ನ  ನನ್ನ ನಿಗರಾನಿಯಲ್ಲಿ ಬಿಟ್ಟು ಹೋಗುತ್ತಿದ್ದರು. ನಾನು ಮಗುವಾಡಿಸಿ ಪಕ್ಕದ ಸಾಬರ ಮನೆಯಂಚಿನಲ್ಲಿದ್ದ ಪಾತಾಳದಂತಿದ್ದ ಬಾವಿಯಿಂದ ನೀರು ಎಳೆದು ಹೊತ್ತು ತರುತ್ತಿದ್ದೆ. ಬೆಳಗ್ಯೆ-ಸಂಜೆ ಅವರ ಗಂಡನ ಅಕ್ಕ ಅತ್ತಿಗೆಯ ಮನೆಯಿಂದ ಹಾಲು ತರುತ್ತಿದ್ದೆ. ಇದು ಮೊದಲ ವರ್ಷ, ಮರುವರ್ಷ ಮನೆ ಹಿಂಬದಿಯಲ್ಲಿದ್ದ ಪರ್ಪಲೆಗುಡ್ಡೆಯ ಅಂಚಿನಲ್ಲಿದ್ದ ಇವರ ಜಾಗದಲ್ಲಿ ನಾಗರ ಕಲ್ಲಿನ ಕೆಲಸ ಸಾಗುತ್ತಿತ್ತು. ಅಲ್ಲಿ ಮಣ್ಣು ಕೆತ್ತುವ ಮೇರರಿಗೆ ಹೊತ್ತು ಹೊತ್ತಿಗೆ ಚಾ-ತಿಂಡಿ-ಅನ್ನ-ನೀರು ಹೊತ್ತೊಯ್ಯುತ್ತಿದ್ದೆ. ಹೀಗೆ ಬೇಸಿಗೆ ರಜೆ ಪೂರ್ತಿ ನನ್ನ ದಿನಗಳು ಅಲ್ಲಿ ಸವೆಯುತ್ತಿದ್ದವು. ಒಂದು ವರ್ಷ ಮಾತ್ರ ನೆಪಕ್ಕೆ ಬೇಸಿಗೆ ಶಿಬಿರದ ಹೆಸರಿನ ಚಿತ್ರಕಲಾ ತರಗತಿಗೆ ಬೇಸಿಗೆಯ ಮೂವತ್ತು ದಿನ ತಪ್ಪದೆ ದಿನಕ್ಕೊಂದು ಘಂಟೆಯಂತೆ ನಡೆದೆ ನಾಲ್ಕು ಕಿಲೊಮೀಟರ್ ದೂರದಲ್ಲಿದ್ದ ಕಾರ್ಕಳ ಬಸ್ ನಿಲ್ದಾಣದ ಬಳಿಯ "ಮೈನ್ ಶಾಲೆ'ಗೆ ಹೋಗಿ ಬಂದಿದ್ದೆ. ಆ ರಜೆ ಮಾತ್ರ ಇಡಿ ಕಾರ್ಕಳದ ಮೂರುವರ್ಷದ ಬಾಳ್ವೆಯಲ್ಲಿ ನನಗೆ ಸಿಕ್ಕಿದ ಆಹ್ಲಾದದ ನೆಮ್ಮದಿಯ ಹಾಗೂ ಸಂತಸದ ರಾಜಾವಧಿ. ಹೊಸತನ್ನ ಕಲಿಯಲು ಸಿಕ್ಕಿತು, ಹೊಸ ಸಮ ವಯಸ್ಕರ ಸಂಪರ್ಕ ಹೆಚ್ಚಿತು. ಖುಷಿ ಹೆಚ್ಚಿದ್ದು ಬಹುಷಃ ಅದಕ್ಕೇನೆ.


ತಮ್ಮ ಅಗತ್ಯಗಳು ಪೂರೈಸಿದ ಮೇಲೆ ಮನೆಯಲ್ಲಿಯೆ ಇಟ್ಟುಕೊಂಡು ನನ್ನನ್ನ ಓದಿಸುವ ಉಮೆದು ಕಿಂಚಿತ್ತು ಕೂಡ ಇಲ್ಲದ ಚಿಕ್ಕಪ್ಪ ತಮಗಿದ್ದ ಎಲ್ಲಾ ಸರಕಾರಿ ಹಾಗೂ ವಯಕ್ತಿಕ ಪ್ರಭಾವಗಳನ್ನ ಬಳಸಿ ಉಪಾಯವಾಗಿ ಹಾಸ್ಟೆಲ್ ಒಂದಕ್ಕೆ ಸಾಗ ಹಾಕಿದರು. ಚಿಕ್ಕಮ್ಮ ಕಲಿಸುತ್ತಿದ್ದ ಕಾಬೆಟ್ಟು ಶಾಲೆಯಲ್ಲಿಯೆ ಓದುತ್ತಿದ್ದ ನನಗೆ ಮನೆಗೆ ಹೋಗಲು ಮಾತ್ರ ನಿರ್ಬಂಧ ಜಾರಿಯಲ್ಲಿತ್ತು. ಅದೆಷ್ಟೆ ಸೆಳೆತವಿದ್ದರೂ ಸಹ ಶಾಲೆಯ ನಡುವಿನ ವಾರಾಂತ್ಯದ ರಜೆಗಳಲ್ಲಿ ಅಪ್ಪಿತಪ್ಪಿಯೂ ಹಾಸ್ಟೆಲ್'ನಿಂದ ಮನೆಗೆ ಹೋಗುವ ಅವಕಾಶ ನನಗಿರಲಿಲ್ಲ. ಅದು ಯಾವ ಮಟ್ಟಕ್ಕಿತ್ತೆಂದರೆ ಸಹಪಾಠಿಗಳೆಲ್ಲ ವಾರ್ಷಿಕ ಪರೀಕ್ಷೆ ಮುಗಿದ ಮರುಕ್ಷಣ ಮನೆಗೆ ಓಟ ಹೂಡುತ್ತಿದ್ದರೂ ನಾನು ಮಾತ್ರ ಕಾನೂನಿನ ಪ್ರಕಾರ ಶಾಲೆ ಅಧಿಕೃತವಾಗಿ ಆ ವರ್ಷದ ಹಂಗಾಮಿನಲ್ಲಿ ಬಾಗಿಲು ಮುಚ್ಚುವ ಎಪ್ರಿಲ್ ಹತ್ತರ ಕಟ್ಟಕಡೆಯ ದಿನದ ತನಕವೂ ಅಲ್ಲಿಯೆ ಒಂಟಿ ಭೂತದಂತೆ ಕಾಲ ಹಾಕಬೇಕಾಗುತ್ತಿತ್ತು. ಇದು ಚಿಕ್ಕಪ್ಪನ ಕಟ್ಟಪ್ಪಣೆ. ಒಬ್ಬ ಹನ್ನೊಂದು-ಹನ್ನೆರಡು ವಯಸ್ಸಿನ ಬಾಲಕ ಭಯದ ನೆರಳಲ್ಲಿ ಹೀಗೆ ಎರಡೆರಡು ವಾರ ಒಂಟಿಯಾಗಿ ಹಗಲು ರಾತ್ರಿ ಕಾಲ ಹಾಕುವುದನ್ನ ಕಲ್ಪಿಸಿಕೊಳ್ಳಿ.



ಬಹುತೇಕ ಸಹಪಾಠಿಗಳು ವಾರಾಂತ್ಯಕ್ಕೆ ತಮ್ಮತಮ್ಮ ಮನೆಗೆ ಹೋಗುತ್ತಿದ್ದದ್ದನ್ನ ಕಂಡು ಸ್ಪೂರ್ತಿಗೊಂಡ ನಾನೂ ಸಹ ಗಂಟು ಮೂಟೆ ಹೊತ್ತು ಚಿಕ್ಕಮ್ಮನ ಮನೆಗೆ ಹೊರಟೆ. ಹೋಗಿ ಮನೆ ಮುಟ್ಟಿ ಇನ್ನೂ ಐದು ನಿಮಿಷ ಆಗಿರಲಿಲ್ಲ, ಅದೆಲ್ಲಿಗೋ ಹೋಗಿ ಆಗಷ್ಟೆ ಮರಳಿ ಮನೆಗೆ ಬಂದಿದ್ದ ಚಿಕ್ಕಪ್ಪ ನನ್ನನ್ನ ಕಂಡವರೆ ಕೆಂಡಾಮಂಡಲರಾಗಿ ಬಂದ ಹಾಗೆ ಹಾಸ್ಟೆಲ್ಲಿನ ತನಕ ನನ್ನನ್ನ ಮರಳಿ ಅಟ್ಟಿಸಿಕೊಂಡು ಹೋಗಿ ಬಿಟ್ಟು ಯಾವುದೆ ಕಾರಣಕ್ಕೂ ಎಂತಾ ರಜೆಗೂ ಇವನನ್ನ ಮನೆಗೆ ನಾನು ಹೇಳದೆ ಕಳಿಸ ಕೂಡದು ಅಂತ ನಮ್ಮ ನಿಲಯ ಪಾಲಕರಿಗೆ ತಾಕೀತು ಮಾಡಿ ಬಂದದ್ದು ನೆನಪಾಗುತ್ತದೆ. ತಿಂಗಳಿಗೊಮ್ಮೆ ನಾನು ಮನೆಗೆ ಬಂದರೆ ಅವರಿಗೇಕೆ ಕಿರಿಕಿರಿಯಾಗಬೇಕು? ಏಕತಾನತೆಯ ವಾತಾವರಣದಲ್ಲಿ ನರಳುತ್ತಿದ್ದ ನನ್ನ ಮಗು ಮನಸ್ಸಿಗೂ ಮನೆಯ ಸೆಳೆತ ಇರುವುದು ತಪ್ಪಾಗಿತ್ತಾ? ಹೋಗಲು ಖಚಿತ ಮನೆಯೆ ಇಲ್ಲದಿದ್ದರಿಂದ ತಾನೆ ನನ್ನ ದೇಖಾರೇಖಿಯ ಹೊಣೆಹೊತ್ತ ಅವರ ಮನೆಗೆ ತುಸು ಅಕ್ಕರೆ ನೆಮ್ಮದಿ ಅರಸಿ ನಾನು ಹೋಗಲು ಬಯಸುತ್ತಿದ್ದುದು, ಅದವರಿಗೆ ಏಕೆ ಅರ್ಥವಾಗುತ್ತಿರಲಿಲ್ಲ? ಎನ್ನುವ ನನ್ನ ಅನೇಕ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಬಹುಷಃ ಮುಂದೆಯೂ ಸಿಗಲಾರದು.


( ಇನ್ನೂ ಇದೆ.)

No comments: