08 March 2013

ಮೌನದ ಬಣ್ನದಲ್ಲಿ ಚಿತ್ರಿಸಿರುವ ನಿನ್ನನ್ನ ಮಾತಿನ ಮಸಿಯಲ್ಲಿ ಮೈಲಿಗೆಗೊಳಿಸಲಾರೆ....






ಮನ ಬಿಕ್ಕಳಿಸಿದ ಸದ್ದು ಕನಸಿಗೆ ಮಾತ್ರ ಗೊತ್ತು
ಅದರ ಕಣ್ತುಂಬಿ ಬರುವುದು ಕೇವಲ....
ಯಾರಿಗೂ ಕಣ್ಣೀರು ಕಾಣಿಸದ ಕಾರಿರುಳ ಹೊತ್ತು,
ಇರುಳೆ ಹೆಚ್ಚು ಆಪ್ತವೆನಿಸುವುದಕ್ಕೆ
ಒಂಟಿತನ ಆವರಿಸಿದ್ದಾಗಲೆಲ್ಲ ಸುತ್ತಲೂ....
ಕತ್ತಲೆ ಕವಿದಿರುತ್ತಿದ್ದುದೆ ಕಾರಣವಾಗಿರಬಹುದು/
ಮತ್ತೆ ಮನಸೊಳಗೆ ಮಾರ್ದನಿಸುವ
ಅನೇಕ ಕಿರು ರಾಗಗಳು ಹಾಗೆಯೆ...
ಸದ್ದಿಲ್ಲದೆ ಒಳಗಡೆಯೆ ಅಂತರ್ಧನಾಗಿ ಕೊನೆಯಾಗುತ್ತವೆ,
ಕೈಗೆಟುಕದ ಕನಸುಗಳಿಗೆ
ಕದ್ದು ಬಸಿರಾಗುವ ಮಳ್ಳ ಮನ....
ಇನ್ನೂ ಎಳೆತನದ ಕನಸುಗಳನ್ನ ಕೈಬಿಟ್ಟಿಲ್ಲ//


ಕಂಬನಿ ಕವಿದ ಬಾಳ ಬಾನು
ಬಿರು ಬೇಸಿಗೆಯಲ್ಲೂ ಹನಿಯುವ ವಿಸ್ಮಯಕ್ಕೆ....
ಒಲವಲ್ಲಿನ ವೇದನೆ ಎಂದು ಕರೆಯಬಹುದು,
ನಿರೀಕ್ಷೆಯ ದಿಂಬಿಗೆ ಒರಗಿ
ಚಡಪಡಿಕೆಯ ಪಲ್ಲಂಗದ ಮೇಲೆ....
ಕುಳಿತ ಮನಕ್ಕೆ ವೇದನೆಯ ಮುಳ್ಳುಗಳು ನಿತ್ಯ ನಾಟುತ್ತಿವೆ/
ಕ್ಷಣವೂ ಕರಗದ ನಿನ್ನ ಮೌನದೆದುರು
ಅಷ್ಟೆ ಮೌನವಾಗಿ ಕಾದು ಕುಳಿತ ನನಗಿರುವುದು....
ಕೇವಲ ನಿನ್ನೊಂದು ಮುಗುಳ್ನಗೆಯ ನಿರೀಕ್ಷೆ ಮಾತ್ರ,
ನೆರಳಿಲ್ಲದ ಉರಿ ಬಿಸಿಲಿನ
ಬೋಳು ಮುಳ್ಳಿನ ಮರ ಮನ....
ಇದರೊಳಗಿನ ಎಲ್ಲ ತಂಪನ್ನೂ ಕದ್ದು ಹೋದದ್ದು
ಅದು ನೀನೇನ?//


ನಡುಹಗಲೂ ಸಹ ಇರುಳಷ್ಟೆ ಕತ್ತಲೆ ನನಗೆ
ಜೊತೆಗೆ ನಡೆವ ನೀನಿದ್ದಿದ್ದರೆ ವಿಷಯ ಬೇರೆಯಿತ್ತು!....
ಕಳೆಗೆಟ್ಟ ದಿನದ ಮುಖದ ತುಂಬ
ತೀರದ ನಿರೀಕ್ಷೆಯ ಅಸಹ್ಯ ಮೊಡವೆಯ ಕಲೆಗಳು,
ಮನಸಿಗೆ ಕನಸ ಕಸಿಯಾದ ಮೇಲೆ
ಬೆಳೆದು ನಿಂತ ಮಿಶ್ರತಳಿಯ ನಿರೀಕ್ಷೆಗಳಿಗೆ....
ಅಂಕೆಯೆ ಇಲ್ಲವಾಗಿ ಹೋಗಿದೆ/
ಆರಂಭವಾಗುವ ಮೊದಲೆ ಕೊನೆಯ ಪರದೆ ಹಾಕಿ
ಯಾಮಾರಿಸಿದೆ ಈ ಜೀವನ....
ನೀನಿಲ್ಲದೆ ನೊಂದಿದ್ದೇನೆ
ಒಳಗೊಳಗೆ ಬೆಂದಿದ್ದೇನೆ... ಅನೇಕ ಆಕ್ಷಾಂಶೆಗಳನ್ನ
ಕತ್ತು ಹಿಸುಕಿ ನಿರ್ದಾಕ್ಷಿಣ್ಯವಾಗಿ ಹುಟ್ಟುವ ಮೊದಲೆ ಕೊಂದಿದ್ದೇನೆ//


ತುಂಬದ ಎದೆಯ ಖಾಲಿ ಅಂಕಣದ ತುಂಬ
ನಿನ್ನವೆ ಕೆಲವು ನೆನಪುಗಳು
ಕಣ್ಣಾಮುಚ್ಚಾಲೆಯಾಡುತ್ತಾ ಕಾಲ ಹಾಕುತ್ತಿವೆ....
ಉರಿ ಬಿಸಿಲಿನಲ್ಲಿ ತಂಪಿನಸಿಂಚನ
ನಿನ್ನ ನೆನಪುಗಳ ಸವಿ ಹನಿ,
ಸನಿಹವಿಲ್ಲದ ನಿನ್ನ ಸದಾ ನೆನೆವ
ನನ್ನ ಮನಕ್ಕೆ ಬಿಸಿಲಿನಲ್ಲೂ....
ನೆನಪಿನ ಮಳೆಯಲ್ಲಿ ತೋಯುವ ಯೋಗ/
ಕನಿಷ್ಠ ನಿಯತ್ತಿಗೆ ಗರಿಷ್ಠ ಒಲವು ದಕ್ಕುವ
ವಿಪರ್ಯಾಸದ ಯುಗದಲ್ಲಿ
ನಿರ್ಮಲ ಪ್ರೀತಿ ಕೇವಲ ನಗೆಪಾಟಲು,
ಬಿಸಿಲಿಲ್ಲದೆಯೂ ಬೆಚ್ಚಗಾಗುತ್ತಿರುವ ಇರುಳಿನ ಇಡುಗಂಟಿನಲ್ಲಿ
ನನ್ನ ಕೆಲವು ಬೆದರಿದ ಸ್ವಪ್ನಗಳಿವೆ...
ಅವುಗಳಲ್ಲಿ ನಿನ್ನ ಬೆವರ ಸ್ವೇದ ಬಿಂದುಗಳಿವೆ
ನಿನ್ನ ನಾಳೆಗಳಲ್ಲಿ ಕಳೆದು ಹೋದ ನನ್ನ ಇಂದುಗಳಿವೆ//

No comments: