12 March 2013

ಹೆಚ್ಚು ಸಮಾನರು....( ಯಾರೋ ಇಟ್ಟ "ಪ್ರಸಾದ" ತಿನ್ನಲು ನಾಲಗೆ ಚಾಚಿದ "ಶಿವ" ಲೀಲೆ.)ನಮ್ಮ ಸಾಮಾಜಿಕ ವ್ಯವಸ್ಥೆಯೆ ಹಾಗೆ. ಇಲ್ಲಿ ಉಳ್ಳವನ ತಪ್ಪು ತಪ್ಪಲ್ಲ. ಇಲ್ಲದ ಪರದೇಶಿ ನೆಟ್ಟಗಿದ್ದರೂ ಕಾಣುವವರ "ವಂಡರ್"ಕಣ್ಣಿಗೆ ಎಲ್ಲವೂ ಕಾಣೋದು ಸೊಟ್ಟ ಸೊಟ್ಟವಾಗಿ. ಜಾತಿ, ಅಂತಸ್ತು ಹಾಗೂ ಪ್ರಭಾವ ಬೀರುವ ಸಾಮರ್ಥ್ಯ ಇವೆಲ್ಲ ಇಂದಿನ ಅನುಕೂಲ ಸಿಂಧು ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಮೌಲ್ಯವನ್ನ ನಿರ್ಧರಿಸುವ ಅಂಶಗಳು. ಆದರ್ಶಗಳು ಇಲ್ಲಿ ಪ್ರದರ್ಶನಕ್ಕಿವೆ. ಸತ್ಪಥದ ಭೋದನೆ ಬಿಕರಿಗಿದೆ. ಬಹುತೇಕರ ಪಾಲಿಗೆ ಅವರು ಮಾತ್ರ ಸಾಚ, ಊರಲ್ಲಿ ಇನ್ನುಳಿದವರೆಲ್ಲ ಕಳ್ಳರು. ನುಡಿದಂತೆ ನಡೆವಲ್ಲಿ ಕನಿಷ್ಠ ಪ್ರಾಮಾಣಿಕ ಪ್ರಯತ್ನವೂ ಮಾಡದ ಪ್ರಕರಣವೊಂದಕ್ಕೆ ಹೀನ ಸಾಕ್ಷಿ "ನಕಲಿ ರಹದಾರಿ ಪತ್ರ ಹಗರಣ" ಸಿಕ್ಕಿಕೊಂಡ ಕಿರುತೆರೆಯ ವಾರ್ತಾ "ಹೆಗ್ಗಣ" ಟಿ ಆರ್ ಶಿವಪ್ರಸಾದನದ್ದು,


ಕಂಡವರ ಬೆಡ್'ರೂಮಿನ ಬಂಡವಾಳಗಳನ್ನೆಲ್ಲ ದೊಡ್ಡ ದೊಂಡೆಯಲ್ಲಿ ಅದೊಂದು ಮನುಕುಲಕ್ಕೆ ಬಂದ ಮಹಾ ವಿಪತ್ತೇನೋ ಎನ್ನುವಂತೆ ಭಿಡೆಯಿಲ್ಲದೆ ಬಟಾಬಯಲು ಮಾಡಿ ತನ್ನ ಕೂಳಿನ ಚೀಲ ತುಂಬಿಸಿಕೊಳ್ಳುವ "ಅಧಿಕೃತ" ಹೀನ ಕಸುಬಿಯಾಗಿದ್ದ ಶಿವ ನಕಲಿ ಪಾಸ್'ಪೋರ್ಟ್ ದಂಧೆಯಲ್ಲಿ ತಿಂದ, ತಿನ್ನಿಸಿದ ಪ್ರಸಾದದ ಲೆಕ್ಖ ಕೋಟಿಗಳಲ್ಲಿದ್ದು ಅದರ ಬಗ್ಗೆ ಆತನ ಸಹುದ್ಯೋಗಿ ವಾರ್ತಾವಾಹಿನಿಗಳದ್ದು ಎಂದೂ ಇಲ್ಲದ ಅಸಹಜ ಗಾಢ ಮೌನ. ತೂತು ತಮ್ಮಲ್ಲೆ ಇರುವಾಗ ಬಾಯಿಗೆ ಬೆಣೆ ಇಟ್ಟುಕೊಂಡು ಕೂತು ಕಟ್ಟುನಿಟ್ಟಾಗಿ "ಕೆಟ್ಟದ್ದನ್ನು ನೋಡಬೇಡ! ಕೆಟ್ಟದ್ದನ್ನು ಆಡಬೇಡ!! ಕೆಟ್ಟದ್ದನ್ನು ಕೇಳಲೆ ಬೇಡ!!!" ಎನ್ನುವ ಗಾಂಧಿ ತತ್ವವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಈ ಕಮಂಗಿಗಳಿಗೆ ಈಗಿನ ಅಂತರ್ಜಾಲ ಯುಗದಲ್ಲಿ  ಕಟ್ಟಿಕೊಳ್ಳಲಾಗದೆ ಬಿಟ್ಟ ಹೂಸಿನ ವಾಸನೆಯನ್ನ ಹಾಗೆಲ್ಲ ಮುಚ್ಚಿಡಲಾಗುವುದಿಲ್ಲ ಎನ್ನುವ ಸರಳ ಸತ್ಯ ಅರ್ಥವಾಗದಿರುವುದು ಹಾಸ್ಯಾಸ್ಪದ.ಈ "ಶಿವ"ಲೀಲೆ ಲೀಕಾಗಿ ನೆನ್ನೆಯ ಶಿವರಾತ್ರಿಗೆ ಸರಿಯಾಗಿ ಒಂದು ವಾರ. ಆದರೆ ಕನ್ನಡದ ಅರ್ಧ ಡಝನ್ ವಾರ್ತಾವಾಹಿನಿಗಳಲ್ಲಿ ಒಂದರಲ್ಲಾದರೂ ಈ ಬಗ್ಗೆ ತುಣುಕು ಸುದ್ದಿಯಾದರೂ ಪ್ರಸಾರವಾಗಿದ್ದರೆ ಕೇಳಿ! ಒಂದಕ್ಕಾದರೂ ಮಾನ-ಮರ್ಯಾದೆ, ಇದ್ದದ್ದನ್ನ ಇದ್ದ ಹಾಗೆ ಹೇಳುವ ಪ್ರಾಮಾಣಿಕ ನೈತಿಕತೆ ಇದೆಯ ನೋಡಿ? ಇವರದ್ದೆಲ್ಲ ಕೇವಲ "ಕಥೆ" ಅನ್ನುವುದು ಮತ್ತೆ ಸಾಬೀತಾಯ್ತಲ್ಲ? ಇಂತಹ ಅನೇಕ ಕ್ಷುಲ್ಲಕ ಪ್ರಕರಣಗಳ ಪೋಸ್ಟ್'ಮಾರ್ಟಂನ್ನ ಸ್ವತಃ ಇದೆ ಶಿವಪ್ರಸಾದ ಎಲ್ಲಾ ಬಲ್ಲ ಸರ್ವಜ್ಞನ ಸೋಗಿನಲ್ಲಿ ಅನಗತ್ಯ ವ್ಯಂಗ್ಯೋಕ್ತಿಗಳ ಸಹಿತ ಕೆಲಕಾಲ "ಸಮಯ"ಸಾಧಕನಾಗಿಯೂ ಕೆಲವೊಮ್ಮೆ ಖುದ್ದು "ಟಿವಿ೯"ರಲ್ಲಿ ತಾನೂ ಒಬ್ಬ ಒಂಬತ್ತಾಗಿಯೂ ತನ್ನೆಲ್ಲ ಅರಿವಿನ ಪರಿಮತಿಯೊಳಗೆ ಬಹಳ ಪ್ರಜ್ಞಾಪೂರ್ವಕವಾಗಿಯೆ ಮಾಡಿ ಕಂಡವರ ಮನೆ-ಮನ ಮುರಿದಿದ್ದಾನೆ. "ನಿತ್ಯ" ಅಸಂಬದ್ಧವಾಗಿ ಕಂಡವನ "ಆನಂದ"ವನ್ನ ಕೆಣಕುತ್ತಾ ಅಲ್ಲಿ ಇಲಿ ಹೋದರೆ ಹುಲಿ ಹೋಯಿತು ಎಂಬಂತೆ ಬಿಂಬಿಸಿ ವಿಕಾರವಾಗಿ ವಾರವಿಡಿ ಅರ್ಜೆಂಟ್ "ಚರ್ಚಾಪಟು"ಗಳನ್ನ, ರಾಜಕೀಯವಾಗಿ ಮೂಲೆಗುಂಪಾದ ಧೂಳು ಹಿಡಿದ ಕೂಗುಮಾರಿಗಳನ್ನ ತಮ್ಮ ಕ್ಯಾಮರಾಗಳ ಮೂಲಕ ನಮ್ಮ ನಿಮ್ಮೆಲ್ಲರ ಮನೆಯ ಟಿವಿ ಪರದೆಯ ಮೇಲೆ ಛೂ ಬಿಟ್ಟು  ಅದನ್ನೆ ಪ್ರಜ್ಞಾವಂತ ಪತ್ರಿಕೋದ್ಯಮವೆಂದು ನಂಬಿಸಿ, ನಿಮಗೆ ಬೇಕಿಲ್ಲದಿದ್ದರೂ ಸಹ "ನಿತ್ಯ" ನಿಮ್ಮ ಸಾಮಾನ್ಯಜ್ಞಾನ ಹೆಚ್ಚಿಸುವ ಈ ಎಲ್ಲಾ ಕಳ್ಳ ಭಡವರು ತಮ್ಮೊಳಗೊಬ್ಬ ಪ್ರಸಾದ ಬಾಲಲೀಲೆಯಾಡಿದಾಗ ಮಾತ್ರ ಅದೊಂದನ್ನ  "ಶಿವಾಆಆಆಆಆ" ಅಂತ ಮರೆತು, ಕುರುಡು ನಟಿಸಿ "ಆ ಸುದ್ದಿಯ" ಮೇಲೆ ಚಾಪೆಯೆಳೆದು ಭದ್ರವಾಗಿ ಅದರ ಮೇಲೆಯೆ ತಮ್ಮ ನಾರುವ ಅಂಡೂರಿ ಕುಳಿತು ಹೊಸ ಪ್ಯಾನಲ್ ಚರ್ಚೆಗಾಗಿ ಇನ್ಯಾರದಾದರೂ ಒಡೆದ ಮನೆಯ ತೂತು ಕಂಡೀತ ಅನ್ನುವ ಹುಡುಕಾಟಕ್ಕಿಳಿದು ವಿಪರೀತ ಬ್ಯುಸಿಯಾಗಿದ್ದಾರೆ. ಇಂತಹ ಮಣ್ಣು ತಿನ್ನುವ ವಿಷಯದಲ್ಲಿ ಮಾತ್ರ ಒಗ್ಗಟ್ಟಾಗಿ ಈ ಸಂಗತಿಯನ್ನ ಚಿಗುರಿನಲ್ಲಿಯೆ ಚಿವುಟಿ ಹೂತು ಹಾಕುವ ವಿಫಲ ಯತ್ನಕ್ಕಿಳಿದು ದೊಂಬರಂತೆ ಗೋಚರಿಸಿ ಹಾಸ್ಯಾಸ್ಪದರಾಗಿದ್ದಾರೆ.


"ತಾನು ತಿಂದರೆ ಔಷಧಿಗಾಗಿ, ನೀನು ಮಾತ್ರ ಹಸಿವಾಗಿಯೆ ಹೇಸಿಗೆ ತಿಂದಿರೋದು!" ಎನ್ನುವ ಹುಟ್ಟು ಜಾಯಮಾನದ ಮಾನಗೆಟ್ಟ ಪತ್ರಿಕೋದ್ಯಮದ ಕೂಸು ಈ ಶಿವಪ್ರಸಾದ . ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಈತನ ಊರು. ಮಾಜಿ ಮುಖ್ಯ"ಕಂತ್ರಿ" ಬೂಸಿಯರ ಪರಮಾಪ್ತ ರಾಜಶೇಖರ್'ರ ಸುಪುತ್ರ. ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಿರಾಳಕೊಪ್ಪದಲ್ಲಿಯೆ ಓಡಾಡಿಕೊಂಡಿದ್ದ ಶಿವಪ್ರಸಾದ್ ಪತ್ರಿಕೋದ್ಯಮಕ್ಕೆ ಧುಮುಕಿದ್ದು ಅಕ್ರಮ ಸಂಪಾದನೆಯನ್ನೆ ಮೂಲಕಸುಬು ಮಾಡಿಕೊಂಡಿರುವ ಪತ್ರಿಕೋದ್ಯಮದ ಮತ್ತೊಬ್ಬ ಅಡ್ಡ ಕಸುಬಿ ವಿಶ್ಶಿಶ್ಶಿ ಭಟ್ಟನ ಸಕ್ರಮ "ಸಂಪಾದನೆ"ಯ ರಾಜರಸ್ತೆಯಾಗಿದ್ದ ಆಗಿನ "ವಿಜಯ ಕರ್ನಾಟಕ"ದಲ್ಲಿ. ಆರಂಭದಲ್ಲಿ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಉಪ ಸಂಪಾದಕನಾಗಿದ್ದ ಮನುಷ್ಯ "ತನ್ನಂತೆ ಪರರು!" ಎಂದು ಅಪ್ರಾಮಾಣಿಕವಾಗಿಯಾದರೂ ನಂಬಿದ್ದ ವಿಷ್ಪರ್ ಭಟ್ಟನ ಕೃಪಾ ಕಟಾಕ್ಷಕ್ಕೆ ಪಾತ್ರನಾಗಿ ಚಾಮರಾಜಪೇಟೆಯಲ್ಲಿರುವ ಪತ್ರಿಕೆಯ ಮುಖ್ಯ ಕಛೇರಿಯ ಉಪ ಸಂಪಾದಕನ ಈಝಿ ಛೇರಿಗೆ ಜಿಗಿದೆ ಬಿಟ್ಟ. ಪ್ರತಿ ಸೋಮವಾರ ಶಿವಪ್ರಸಾದನ ಬಿಟ್ಟಿ ಆದರ್ಶ ಭೋದನೆಯ ಭೋಂಗು ಬಿಡುವ ಅಂಕಣವೊಂದು "ವಿಜಯ ಕರ್ನಾಟಕ"ದ ಸಂಪಾದಕೀಯ ಪುಟದಲ್ಲಿ ರಾರಾಜಿಸ ತೊಡಗಿ ಸಮಸ್ತ ಕರ್ನಾಟಕದ ವಾಚಕರ ಮನದಲ್ಲಿ ಈ ಶಿವಪ್ರಸಾದನೆಂಬ ಇಸಮು ಆದರ್ಶದ ಅಪರಾವತಾರ ಎನ್ನುವ ಭ್ರಮೆಯನ್ನ ಯಶಸ್ವಿಯಾಗಿ ಬಿತ್ತಿ ಆತನದ್ದೊಂದು ಹುಸಿ ವ್ಯಕ್ತಿ ಚಿತ್ರ ಮೂಡಿಸುವಲ್ಲಿ ಯಶಸ್ವಿಯಾಯಿತು.


ಬಂತಲ್ಲ ಆಗಲೆ ಈತನ ಏಸಿ ಕೋಣೆಯಲ್ಲಿಯೆ ಕುಳಿತು ರಚಿಸಿದ "ಸಂ"ಶೋಧನಾ ಗ್ರಂಥ "ಸುಭಾಶ್ ಸಾವಿನ ಸತ್ಯಗಳು!". ಖುದ್ದು ಘಟನೆ ನಡೆದಿರುವ ಸ್ಥಳದಲ್ಲಿ ತಾನೂ ಇದ್ದಂತೆ ಬರೆಯುವ ಕನ್ನಡದ ಅನೇಕ ಕರಿ ಮುಸುಡಿಯ ಕರಪತ್ರಿಕೆಯ ಸಂಪಾದಕರ ಶೈಲಿಯಲ್ಲಿ ನೇತಾಜಿಯ ಸಾವಿಗೆ ಶಿವಪ್ರಸಾದ ವ್ಯಾಖ್ಯೆ ಬರೆದೆ ಬರೆದ. ಅಷ್ಟು ಹೊತ್ತಿಗಾಗಲೆ ಆತನ ಕುರುಡು ಅಭಿಮಾನಿಗಳಾಗಿದ್ದ ಓದುಗರನೇಕರು ಅವನ್ನ ಕೊಂಡು ಓದಿ ಅದರಲ್ಲಿ ಬರೆಯಲಾಗಿರುವುದೆಲ್ಲ ನಿಜವೆಂದೆ ನಂಬಿದ್ದರು. ಅಂತಹ ಪರಮಮೂರ್ಖರಲ್ಲಿ ನಾನು ಸಹ ಒಬ್ಬನಾಗಿದ್ದೆ. ನಾನು ಇದೆ ವಿಷಯದ ಬಗ್ಗೆ ಗಂಭೀರವಾಗಿ ಇತ್ತೀಚೆಗೆ ನಾಲ್ಕು ವರ್ಷಗಳಿಂದ ಸಂಶೋಧನೆಗಿಳಿದು ಸಿಂಗಾಪುರದಿಂದ ಅಫ್ಘನಿಸ್ಥಾನ, ಉಜ್ಬೇಕಿಸ್ತಾನ, ಕಝಾಕಿಸ್ಥಾನ ಹಾಗೂ ಜರ್ಮನಿ ಮಾರ್ಗವಾಗಿ ವಿಯನ್ನಾವರೆಗೆ ಸಾಗುವ ಯೋಜನೆ ರೂಪಿಸಿ ಅಂಡಮಾನ್ ಸೇರಿ ಇದರಲ್ಲಿ ಅರ್ಧದಷ್ಟು ಜಾಗಗಳಿಗೆ ಖುದ್ದು ಭೇಟಿ ಕೊಟ್ಟು ನೇತಾಜಿಯ ಮಗಳನ್ನೂ ಮುಖತಃ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದ ನಂತರವಷ್ಟೆ ಸರ್ವಜ್ಞ ಶಿವಪ್ರಸಾದನ ಎಡವಟ್ಟು ಬರವಣಿಗೆಯ ಬಂಡವಾಳದ ಮಿತಿ ನನಗೆ ಅರ್ಥವಾದದ್ದು. ಹೀಗಿದ್ದ ಶಿವಪ್ರಸಾದನ ಭಾಗ್ಯದ ಬಾಗಿಲು ಮತ್ತೆ ದೊಡ್ಡದಾಗಿ ತೆರೆದುಕೊಂಡದ್ದು ತೆಲುಗಿನ ಟಿವಿ ೯ ತನ್ನ ತಡೆ ರಹಿತ ಸುದ್ದಿವಾಹಿನಿಯನ್ನ ಕರುನಾಡಿಗೂ ವಿಸ್ತರಿಸಿದಾಗ.


ಅಲ್ಲಿಯವರೆಗೆ ಈ ಟಿವಿಯ ವಾರ್ತಾವಾಚಕರಾಗಿ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯ ಸೆಖೆಯಲ್ಲಿ ಬೆಂದು ಬೆಂಡಾಗಿ ಇನ್ನಾದರೂ ಟಿವಿ ೯ನ್ನ ಸೇರಿ ಬೆಂಗಳೂರು ಪಾಲಾಗೋಣ, ಅಲ್ಲಿನ ಸುಖವಾದ ರಾಜಧಾನಿಯ ಪ್ರಭಾವಲಯದಲ್ಲಿ ತಂಪಾಗಿರೋಣ ಅಂತಂದುಕೊಂಡು ಅಲ್ಲಿಗೆ ದೌಡಾಯಿಸಿದ ಹಮೀದ್ ಪಾಳ್ಯ, ರಂಗನಾಥ ಭಾರದ್ವಜ, ಗೌರೀಶ್ ಅಕ್ಕಿಯ ಜೊತೆ "ವಿಜಯ ಕರ್ನಾಟಕ"ದಂತಹ ಮುದ್ರಣ ಮಾಧ್ಯಮದಿಂದ ಮತಾಂತರವಾಗಿ ಟಿವಿ ವಾರ್ತಾ ಲೋಕಕ್ಕೆ ಬಂದಿದ್ದವ ಶಿವಪ್ರಸಾದ. ಆಗ ಸತೀಶ್ ಚಪ್ಪರಿಕೆ ಟಿವಿ ೯ರ ಕನ್ನಡ ವಾಹಿನಿಯ ಮುಖ್ಯ ಸಂಪಾದಕರಾಗಿದ್ದರು.ಟಿವಿ ೯ರ ಉಪ ಸಂಪಾದಕನಾಗಿ ದೃಶ್ಯ ಮಾಧ್ಯಮಕ್ಕೆ ಬಂದ ಶಿವಪ್ರಸಾದನಿಗೆ ಕಿರುತೆರೆಯಲ್ಲಿ "ವಾಂಟೆಡ್" ಕಾರ್ಯಕ್ರಮ ನಿರೂಪಕನಾಗಿ ಸಿಕ್ಕ ಅರಂಗೆಟ್ರಂ. ಅನಂತರ ಕೆಲಕಾಲ ಅದೆ ವಾಹಿನಿಯ ದೆಹಲಿ ಬಾತ್ಮಿದಾರನಾಗಿ ನಿಯೋಜನೆಗೊಂಡು ರಾಷ್ಟ್ರದ ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದ. ಆಮೇಲೆ ಕರ್ನಾಟಕದ ಮಟ್ಟಗೆ ದೃಶ್ಯಮಾಧ್ಯಮಗಳ ಹವಾಮಾನ ಕೊಂಚ ಏರುಪೇರಾಯಿತು. ಇದ್ದೂ ಇಲ್ಲದಂತಿದ್ದ ಹಳೆ ಮುದುಕಿ "ಉದಯ ವಾರ್ತೆ"ಗಳ ಮುಂದೆ ಊರಿಗೊಬ್ಬಳೆ ಗೌಡತಿಯಾಗಿ ಮೆರೆಯುತ್ತಿದ್ದ ಟಿವಿ ೯ಕ್ಕೂ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು. ಆಗ ಆದ "ಆಪರೇಷನ್ ಸುವರ್ಣ"ಕ್ಕಕ್ಕೆ ಬಲಿಯಾಗಿ ಹಮೀದ್, ಗೌರೀಶ್, ರಂಗನಾಥ ಭಾರದ್ವಜ್ ಅಲ್ಲಿಗೆ ಮಂಗಗಳಂತೆ ಹಾರಿದರೆ, ಅರವಿಂದ್ ಶಶಿಧರ ಭಟ್ಟರ ಸಂಪಾದಕತ್ವದಲ್ಲಿ ಶುರುವಾಗಿದ್ದ "ಸಮಯ"ದ ಪರಿಪಾಲಕರಾದರು. ಹೀಗಾಗಿ ಅಳಿದುಳಿದ ಲಕ್ಷ್ಮಣ್, ರೆಹಮಾನ್ ಹಾಗೂ ಈ ಶಿವಪ್ರಸಾದ್ ಅಲ್ಲಿಯೆ ಉಳಿದುಕೊಂಡು ಹೆಚ್ಚಿನ ಜವಾಬ್ದಾರಿಗಳಿಗೆ ತಲೆಕೊಟ್ಟರು. ಅದೆ ಕಾಲಕ್ಕೆ ಗಮಾರಸ್ವಾಮಿ ಬೂಸಿ ಬಿಟ್ಟ ಕಾರಣ ಬೆಂಬಲ ವಾಪಾಸ್ ಪಡೆದ ಕಮಲ ಪಕ್ಷದ ಆ ಕಾಲದ ನಾಯಕ ಬೂಸಿಯ "ವಚನ ಭ್ರಷ್ಟ" ರಾಗದ ಆಲಾಪ ಊಳಿಡಲು ಆರಂಭಿಸಿದಾಗ ತನ್ನ ಉಪ ಸಂಪಾದಕತ್ವವನ್ನೆ ಉಪ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡು ಫೀಲ್ಡಿಗಿಳಿದ ಶಿವ ತಾನು ಮಾಡಿದ ಉಪಕಾರಕ್ಕೆ ಮುಂದೆ ಅಧಿಕಾರದ ಗದ್ದುಗೆ ಹಿಡಿದ ಬೂಸಿಯರಿಂದ ಬೇಕು ಬೇಕಾದಾಗಲೆಲ್ಲ ಅಕ್ರಮವಾಗಿ "ಪ್ರಸಾದ" ಪಡೆದ. ಹೀಗೆ ಪಡೆದದ್ದರಲ್ಲಿ ಬಹುಪಾಲು ಮಾಂಸವನ್ನ ತಾನೆ ಕಬಳಿಸಿ ಚೂರುಪಾರು ಮೂಳೆಗಳನ್ನ ಧಾರಾಳವಾಗಿ ತನ್ನ ಸಹ ಪಾತಕಿಗಳಿಗೂ ಹಂಚಿ ಪುನೀತನಾದ.


ಈ ನಡುವೆ ಕಾಲಚಕ್ರದ ಇನ್ನೊಂದು ಸುತ್ತು ಕನ್ನಡ ವಾರ್ತಾವಾಹಿನಿಗಳ ಪಾಲಿಗೆ ಸುತ್ತಿಯಾಗಿತ್ತು. ಕಸ್ತೂರಿ ವಾಹಿನಿ ಒಂದು ನಿರಂತರ ಸುದ್ದಿ ಛಾನಲ್ ಮರಿ ಹಾಕಿದ್ದರೆ. ಮಾಡ ಬಾರದ್ದನ್ನ ಅಡಿಗಡಿಗೆ ಮಾಡಿದ್ದರಿಂದ ಗಡಿಪಾರಾಗಿದ್ದ ಇನ್ನೊಬ್ಬ ಮಂಗಣ್ಣ ಪತ್ರಿಕೆಯೊಂದನ್ನ ಆರಂಭಿಸುವ ವಿಫಲ ಪ್ರಯತ್ನ ನಡೆಸಿ ಹತಾಶನಾಗಿ ಹೊಸ "ಲಹರಿ"ಯೊಂದನ್ನು ಕಂಡುಕೊಳ್ಳುವ ಯತ್ನದಲ್ಲಿದ್ದವರಿಂದ "ಪಬ್ಲಿಕ್" ಆಗಿ ಸಹಾಯ ಪಡೆದು ಹೊಸ ವಟವಟಕ್ಕೆ ಶುರು ಹಚ್ಚಿಕೊಂಡ. ಶಶಿಧರ್ ಭಟ್ಟರು ಆಗಷ್ಟೆ ಯಡ್ಡಿಯ ಬೇನಾಮಿಯಾಗಿದ್ದ ನಿರಾಣಿ ಕೊಂಡ "ಸಮಯ"ದಿಂದ ಹೊರ ನಡೆದಿದ್ದರು. ಹೀಗಾಗಿ ತಮ್ಮ ಪುಂಗಿಗೆ ತಲೆಯಾಡಿಸುವ ತಮ್ಮ ಛೇಲಾನ ಪುತ್ರರತ್ನ ಶಿವಪ್ರಸಾದನನ್ನ ಹೊಸ ಸಂಪಾದಕನಾಗಿ ಭಡ್ತಿ ಕೊಟ್ಟು "ಸಮಯ"ಸಾಧಕನಾಗಿಸಲಾಯಿತು. ಆದರೆ ಯಡ್ಡಿ ಕೆಜೆಪಿಯನ್ನ ಕನವರಿಸುವ ಹೊತ್ತಿನಲ್ಲಿ  ಮತ್ತೆ ಋಣಸಂದಾಯಕ್ಕೆ "ಸಮಯ"ಕ್ಕೆ ಹೋಲಿಸಿದರೆ ಟಿವಿ೯ತ್ತೆ ಪ್ರಚಾರದ ದೃಷ್ಟಿಯಿಂದ ಸೂಕ್ತ ವೇದಿಕೆ ಎಂದರಿತು ಹಳೆ ಗಂಡನ ಪಾದವೆ ಗತಿಯೆಂದು "ಮರಳಿ ಹಳೆ ಮನೆ"ಗೆ ಶಿವಪ್ರಸಾದ್ ಬಂದ. ಆದರೆ ಮೊದಲಿನ ಸಂಬಳ ಸವಲತ್ತು ಈ ಬಾರಿ ಸಿಗದೆ ಹೋಗಿ, ಸಿಕ್ಕಷ್ಟಕ್ಕೆ ತೃಪ್ತಿ ಪಟ್ಟುಕೊಂಡವ ಮತ್ತೆ ಅವೆ ಹಳೆಯ ಪ್ಯಾನಲ್ ಚರ್ಚೆ ಹೆಸರಿನ ಮನೆಮುರುಕ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ರೂಪಿಸಿದ. ಹಳೆಯ ಸ್ಥಾನಮಾನ ಅಧಿಕೃತವಾಗಿ ಸಿಗದಿದ್ದರೂ ಅದಾಗಲೆ ಸಾಕಷ್ಟು ಹಡಬೆ ದುಡ್ಡು ಮಾಡಿಕೊಂಡಿದ್ದ ಶಿವಪ್ರಸಾದನಿಗೆ ಅದೊಂದು ಮಿತಿಯೆನ್ನಿಸಿರಲಿಕ್ಕೂ ಇಲ್ಲ. ಇದು ಶಿವಪ್ರಸಾದ್ ಟಿವಿ ೯ಕ್ಕೆ "ಹೋದೆಯ ಪಿಶಾಚಿ ಎಂದರೆ, ಬಂದೆ ಗವಾಕ್ಷಿಯಲ್ಲಿ" ಎನ್ನುತ್ತಾ ಮರಳಿ ಬಂದ ಕಥೆ.


ಈ ನಡುವೆ ನಮ್ಮ ಮಾಜಿ ಮುಖ್ಯಮಂತ್ರಿ ಮದ್ದೂರಿನ  "ವಿಗ್"ನೇಶ್ವರ  ದೇಶದ ವಿದೇಶಾಂಗ ಖಾತೆಯ ಹೊಣೆ ಹೊತ್ತಿದ್ದಾಗ ಪಕ್ಕದ ಪಾಕಿಸ್ತಾನ ಹಾಗೂ ಇನ್ನೂ ಒಂದೆರಡು ಪರದೇಶಗಳಿಗೆ ಸರಕಾರಿ ಖರ್ಚಿನ. ಟಿಎ-ಡಿಎಯನ್ನೂ ಕೊಡಲಾಗಿದ್ದ ಪುಕ್ಕಟೆ ಓಸಿ ಟ್ರಿಪ್ಪನ್ನ ಮಜ ಉಡಾಯಿಸಿ ಬಂದ ಶಿವಪ್ರಸಾದ ತಾನು ಈಗ ಬಹಳ ಹಿರಿಯ ಪತ್ರಕರ್ತನಾದೆ ಎನ್ನುವ ಸ್ವ ಭ್ರಮೆಗೆ ಬಿದ್ದು ಹಿರಿಯೋ ಪತರಕರ್ತತನಕ್ಕೆ ಸ್ವಯಂ ಚಾಲನೆ ಕೊಟ್ಟ. ಆಗ ಘಟಿಸಿದ ಅಹಂಕಾರದ ಪರಮಾವಧಿಯೆ ಈ "ನಕಲಿ ಪಾಸ್"ಪೋರ್ಟ್ ಹಗರಣ". ಚಿಕ್ಕಬಳ್ಳಾಪುರ ಮೂಲದ ಮೌಲ್ವಿಯೊಬ್ಬ ಪಾಸ್'ಪೋರ್ಟ್ ವಿತರಿಸಲು ಮಾಡ ಬೇಕಾದ ಪೊಲೀಸ್ ತನಿಖೆಯನ್ನ ತಪ್ಪಿಸುವ ಕಾನೂನಿನ ಅನ್ವಯ ಅನುಮತಿಯಿರುವ ವಿನಾಯತಿಯನ್ನ ಬಳಸಿಕೊಳ್ಳಲು ಹಿರಿಯ ಅಧಿಕಾರಿಗಳ ಲೆಟರ್'ಹೆಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದುದನ್ನು ಪತ್ತೆ ಹಚ್ಚಿದ ಪ್ರಾದೇಶಿಕ ಪಾಸ್'ಪೋರ್ಟ್ ಆಯುಕ್ತರು ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಂಶಯ ವ್ಯಕ್ತ ಪಡಿಸಿ ದೂರು ನೀಡಿದ್ದಾರೆ. ಅವರು ಇದನ್ನ ಲೋಕಾಯುಕ್ತರಿಗೂ, ನಗರ ಪೊಲೀಸ್ ಆಯುಕ್ತರಿಗೂ ರವಾನಿಸಿ ಸೂಕ್ತ ತನಿಖೆಗೆ ಮನವಿ ಮಾಡಿಕೊಂಡಿದ್ದಾರೆ.


ಈ ನಡುವೆ ಅದೆ ಸಂಗತಿಯ ಕುರಿತು ಟಿವಿ ೯ ರಹಸ್ಯ ಕುಟುಕು ಕಾರ್ಯಾಚರಣೆ ನಡೆಸಿದೆ. ಅದು ಹೇಗೋ ಈ ಗೌಪ್ಯ ಸಂಗತಿ ಶಿವಪ್ರಸಾದನ ಗಮನಕ್ಕೆ ಬಂದು ಆ ಕೊಂಡಿಯಲ್ಲಿ ಮುಖ್ಯ ಹೆಸರಾಗಿರುವ ಪ್ರಾದೇಶಿಕ ಪಾಸ್'ಪೋರ್ಟ್ ಕಛೇರಿಯಲ್ಲಿ ಅಧಿಕಾರಿಯಾಗಿರುವ ತನ್ನ ಚಿಕ್ಕಪ್ಪನನ್ನ ಬಚಾಯಿಸುವ ಹೀನತನಕ್ಕಾತ ಇಳಿದಿದ್ದಾನೆ. ಆ ಕಾರ್ಯಕ್ರಮ ಪ್ರಸಾರವಾಗದಂತೆ ಟಿವಿ ೯ರ ಹಿರಿ ಕಿರಿ ತಲೆಗಳಿಗೆಲ್ಲ ಧಮಕಿ ಹಾಕಿದ್ದಾನೆ, ಒಂದು ವೇಳೆ ಹಾಗೊಮ್ಮೆ ಪ್ರಸಾರಿಸಿದ್ದೆ ಹೌದಾದರೆ ತಾನು ಅವರಿಗೆ ಬೂಸಿಯ ಅಧಿಕಾರವಧಿಯಲ್ಲಿ ಮಾಡಿಕೊಟ್ಟ ಹರಾಮಿ ಕಮಾಯಿಯನ್ನ ಜಗಜ್ಜಾಹೀರಾಗಿಸುವ ಬೆದರಿಕೆಯನ್ನೂ ಒಡ್ಡಿದ್ದಾನೆ. ಬಹುಶಃ ಇಷ್ಟಕ್ಕೆ ಸುಮ್ಮನಾಗಿದ್ದರೆ ಎಲ್ಲವೂ ಕಾಲಗರ್ಭದಲ್ಲಿ ಹೂತು ಹೋಗುತ್ತಿತ್ತೇನೋ. ಆದರೆ ಶಾಣ್ಯಾ ಶಿವಪ್ರಸಾದ್ ಈ ಉಚ್ಚೆಯಲ್ಲೂ ಮೀನು ಹಿಡಿಯ ಹೊರಟ! ಸದರಿ ಹಗರಣದ ರೂವಾರಿಗಳಿಗೆ ಕಾರ್ಯಕ್ರಮ ನಿರೂಪಿಸಿದವರ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದೆ ಅಲ್ಲದೆ ಅದು ಪ್ರಸಾರವಾಗದಂತೆ ತಡೆಯಲಿಕ್ಕೆ ಮೇಲಿನಿಂದ ಕೆಳಗಿನ ವರೆಗೆ(?) "ಎಲ್ಲರ ಬಾಯಿ ಮುಚ್ಚಿಸುವ" ಸತ್ಕಾರ್ಯಕ್ಕಾಗಿ ಕೋಟಿಗಟ್ಟಲೆ ಲಂಚದ ಹಣಕ್ಕಾಗಿ ಬೇಡಿಕೆ ಮುಂದಿಟ್ಟ. ಈ ಲಂಚವನ್ನ ಇನ್ನೆಲ್ಲ ಬೆದರುಬೊಂಬೆಗಳನ್ನ ಖದೀಮರಿಗೆ ತೋರಿಸಿ, ಭಯ ಹುಟ್ಟಿಸಿ ತಾನೊಬ್ಬನೆ ನುಂಗಿ ಜೀರ್ಣ ಮಾಡಿಕೊಳ್ಳುವ ಹಂಚಿಕೆ ಅವನದ್ದಾಗಿತ್ತಾದರೂ ವಿಧಿ ಬೇರೆಯದನ್ನೆ ಬಗೆದಿತ್ತು. ಹೀಗಾಗಿ ತಿನ್ನುವ ಮೊದಲೆ ಅಜೀರ್ಣವಾಗಿ ಎಲ್ಲಾ ಬೇಧಿಯಾಗಿ ಹೋಗಿದೆ!


ತನ್ನಂತೆ ಲೋಕಾಯುಕ್ತ ಹಾಗೂ ಕೇಂದ್ರ ಅಪರಾಧ ದಳವೂ ಈ ವಿಷಯದಲ್ಲಿ ವಿಪರೀತ ಆಸಕ್ತವಾಗಿವೆ ಎನ್ನುವುದರ ಅರಿವಿಲ್ಲದೆ. ಹಗರಣದ ಕಿಂಗ್'ಪಿನ್ ಮೌಲ್ವಿಗೆ ದಿನಕ್ಕೆ ಹತ್ತಾರು ಬಾರಿ ಹಣಕ್ಕಾಗಿ ಒತ್ತಾಯಿಸಿ ದೂರವಾಣಿ ಕರೆ ಮಾಡಿಯೆ ಮಾಡಿದ ಈ ಶಿವಪ್ರಸಾದ, ಈತನಿಂದ ಕಾರ್ಯಕ್ರಮವನ್ನ ತಯಾರಿಸಿದವರ ಮಾಹಿತಿ ಪಡೆದಿದ್ದ ನಕಲಿ ದಂಧೆಯ ಕೊರಮರು ಹಗರಣವನ್ನ ಬಯಲಿಗೆಳೆದ ವರದಿಗಾರರಿಗೆ ಕೊಲೆ ಬೆದರಿಕೆ ಒಡ್ಡಲು ಆರಂಭಿಸಿದಾಗ ಎಲ್ಲಾ ಎಡವಟ್ಟಾಗಿ ಹೋಯಿತು. ಇನ್ನೇನು ಸದ್ಯದಲ್ಲೆ ಹಮೀದ್ ಪಾಳ್ಯ ಸಂಪಾದಕತ್ವದಲ್ಲಿ ಹೊಸ ವಾರ್ತಾವಾಹಿನಿ "ರಾಜ್ ನ್ಯೂಸ್" ಕಿರುತೆರೆಗೆ ಅಪ್ಪಳಿಸಲಿದೆ. ಇನ್ನೊಂದು ಹಂತದ ಸಾಮೂಹಿಕ ರಾಜಿನಾಮೆ ಹಾಗೂ "ಆಪರೇಷನ್ ರಾಜ್"ಗೆ ಹೆದರಿದ್ದ ಟಿವಿ ೯ರ ಸಂಪಾದಕ ಮಿಶ್ರಾ ತಮ್ಮ ಕೊಲೆ ಕರೆ ಪೀಡಿತ ಸಿಬ್ಬಂದಿಯಿಂದ ಈ ಕುರಿತು ಪೊಲೀಸ್ ದೂರು ದಾಖಲಿಸಿದರು. ಅದಾಗಲೆ ಒಂದು ಹಂತದ ತನಿಖೆಯನ್ನ ಮುಗಿಸಿ ಅನಾಮಿಕ ಕರೆಯ ಜಾಡು ಹಿಡಿದು ಪೊಲೀಸರು ತಮ್ಮ ಕಳ್ಳಕಿವಿಯನ್ನ ಶಿವಪ್ರಸಾದನ ಪೋನಿನತ್ತ ತಿರುಗಿಸಿಯಾಗಿತ್ತು. ಸಂಶಯಾಸ್ಪದವಾಗಿ ಹಗಲಿನಲ್ಲಿ ಟಿವಿ ೯ರ ಕಛೇರಿಯ ಬಳಿಯೂ ರಾತ್ರಿಯಲ್ಲಿ ಹೈಗ್ರೌಂಡ್ಸ್ ಬಳಿಯ ಏಳು ಮಂತ್ರಿಗಳ ಬಂಗಲೆ ಬಳಿಯೂ ಈ ಸಂಖ್ಯೆ ಸಂಪರ್ಕಕ್ಕೆ ಬರುತ್ತಿದೆ ಅಂದಾಗವರ ಸಂಶಯ ಇನ್ನಷ್ಟು ಹೆಚ್ಚಿ ಕೂಲಂಕಷವಾಗಿ ಗಮನಿಸಿದಾಗ ಗೊತ್ತಾದ ಸತ್ಯ ಮಾತ್ರ ಭೀಕರ.


ಯಡ್ಡಿ ಗಾದಿಯಿಳಿದು ಎರಡು ವರ್ಷವಾದರೂ ಸಹ ಇನ್ನೂ ಸರಕಾರಿ ಬಂಗಲೆಯಲ್ಲೆ ಬೇನಾಮಿ ಹೆಸರಿನಲ್ಲಿ ಠಿಕಾಣಿ ಹೂಡಿರುವ ಶಿವಪ್ರಸಾದನ ಅಪ್ಪನ ಜೊತೆಯೆ ಈ ಸತ್ಪುತ್ರನದ್ದೂ ವಾಸ. ಸದರಿ ಸರಕಾರಿ ಬಂಗಲೆ ಅಂದಿನ ಲೋಕೋಪಯೋಗಿ ಸಚಿವ ಸಿ ಎಂ ಉದಾಸಿಯವರ ಪಾಲಿಗೆ ಅಲಾಟ್ ಆದದ್ದು. ಎಷ್ಟೊಂದು "ಲೋಕೋಪಯೋಗ" ಆಗುತ್ತಿದೆ ನೋಡಿ ಸರಕಾರಿ ಸ್ವತ್ತಿನಿಂದ. ಹೀಗಾಗಿ ಇರುಳಲ್ಲಿ ಸರಕಾರಿ ಬಂಗಲೆ ಹಗಲಲ್ಲಿ ತನ್ನ ಕಟ್ಟೆ ಪಂಚಾಯ್ತಿಯ ಕಾರಸ್ಥಾನ ಟಿವಿ ೯ರ ಬಳಿಯೆ ಈ ಸಂಖ್ಯೆಯ ಜಾಡು ಸಿಗುತ್ತಿತ್ತು. ಕೊನೆಗೂ ಅವನನ್ನ ವಶಕ್ಕೆ ಪಡೆದು ಹೆಚ್'ಏಎಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಸದ್ಯಕ್ಕೆ ಬಿಟ್ಟು ಕಳಿಸಲಾಗಿದೆ. ಈ ಪ್ರಕರಣದಲ್ಲಿ ಶಿವಪ್ರಸಾದನ ಕರಾಮತ್ತು ಖಚಿತವಾಗುತ್ತಲೆ ಟಿವಿ ೯ರ ಮಿಶ್ರಾ ಶಿವಪ್ರಸಾದನಿಗೆ ಅಲ್ಲಿಂದ ಶಾಶ್ವತವಾಗಿ ಗೇಟ್'ಪಾಸ್ ಸಹಿತ ಬೀಳ್ಕೊಟ್ಟಿದ್ದಾರೆ.


ಬೂಸಿಯ ಪ್ರಭಾವವನ್ನ ಬಳಸಿ ರಾಜಶೇಖರ್ ಸದರಿ ಪ್ರಕರಣದಲ್ಲಿ ಶತಾಯಗತಾಯ ತಮ್ಮ ಮಗನ ಹೆಸರು ಮಾತ್ರ ಸೇರದಂತೆ ಮಾಡಲು ಹರಸಾಹಸ ಮಾಡುತ್ತಿದ್ದರೆ. ಮತ್ತೆ ಜೀವ ಬಂದಿರುವ "ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ"ದಲ್ಲಿ ಆರೋಪಿಯಾಗಿ ಸದ್ಯ ಸಿಬಿಐ ವಶದಲ್ಲಿರುವ ಖಾರಪುಡಿ ಮಹೇಶನ ಹೇಳಿಕೆಗೆ ಬಲ ಬಂದರೆ ಜೈಲು ಪಾಲಾಗ ಬೇಕಿರುವ ವಿಷ್ಪರ್ ಭಟ್ಟ ಮತ್ತವನ ಚಾಂಡಾಳ ಶಿಷ್ಯಂದಿರು ಇದನ್ನ ಹಳ್ಳ ಹಿಡಿಸಲು ತಮ್ಮ ಕೈಲಾದ ಮೌನ ಸೇವೆಯನ್ನ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ಕಡೆಗೂ ಪೊಲೀಸರು ತಯಾರಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಶಿವಪ್ರಸಾದನ ಹೆಸರು ಸೇರ್ಪಡೆಯಾಗಿಲ್ಲ!


ಆದರೆ ಈ ನೆಲದ ಕಾನೂನು ಎಲ್ಲರಿಗೂ ಒಂದೆ ಸಮಾನ. ಮುಂದೊಮ್ಮೆ ಅದೆಲ್ಲಾದರೂ ಮೈಕೊಡವಿ ಎದ್ದರೆ ಸದ್ಯದಲ್ಲೆ "ಸುವರ್ಣ"ಕ್ಕನ ಚುಕ್ಕಾಣಿ ಹಿಡಿದು ಕಂಡವರೆನೆಲ್ಲ ಹೆರೆಯುತ್ತಿರುವ ಚೋರಗುರು ವಿಶ್ಶಿಶ್ಶಿ ಭಟ್ಟ ತನ್ನ ಚಾಂಡಾಳ ಶಿಷ್ಯ ಪಡೆಯೊಂದಿಗೆ ಕಂಬಿಯ ಹಿಂದೆ ಬಂದೆ ಬರುತ್ತಾನೆ. ಲೋಕಾಯುಕ್ತರ ಸುಪರ್ದಿಯಲ್ಲಿರುವ ಸ್ವಸ್ತಿಕ್ ನಾಗರಾಜನ ಡೈರಿಗೆ ಸದ್ಯದಲ್ಲಿಯೆ ಬಾಯಿ ಬರುವ ಸೂಚನೆಗಳು ದಟ್ಟವಾಗಿವೆ. ಸಿಬಿಐನವರ ಐ ಅದರ ಮೇಲೆ ಬಿದ್ದರೆ ಬಹಳಷ್ಟು ಸೋಗಿನ ಮಾಧ್ಯಮ ಕ್ಷೇತ್ರದ ಸುಭಗರು ಕಂಬಿಯೆಣಿಸ ಹೊರಡಬೇಕಾಗುತ್ತದೆ. ಆಗ ಬೇಕಿದ್ದರೆ ಸದರಿ "ನಕಲಿ ಪಾಸ್'ಪೋರ್ಟ್ ಹಗರಣ"ದ ಮುಂದಿನ ತನಿಖೆಯ ಹೊತ್ತಿಗೆ ಬಂಧನದ ಭೀತಿಯಿರುವ, ಇವರೊಂದಿಗೆ ಕಂಬಿ ಎಣಿಸಲಿಕ್ಕೆ ಬರ ಬಹುದಾದ ಶಿವಪ್ರಸಾದನೂ ಸೇರಿ ಅಲ್ಲಿಯೆ ಒಳಗಡೆ ಒಂದು ೧೪*೭ ಕಳ್ಳ ಕೊರಮರ ವಾರ್ತಾವಾಹಿನಿಯನ್ನ ಆರಂಭಿಸಿ "ನೀವು ಹೇಳಿದ್ದು, ನಾವ್ ಕೇಳಿದ್ದು" ಮೆಲುಕು ಹಾಕುತ್ತಾ "ತಲೆಹರಟೆ" ಮಾಡಿಕೊಂಡು ಕಾಲ ಹಾಕಬಹುದು.

No comments: