04 March 2013

ರೋಶನ್ ನಾಮಾ.....!!!!







 { ವಾಚು ಕದ್ದು ಕಳ್ಳನಾದೆ....}



ನಾನು ಮೊದಲಿನಿಂದಲೂ ಎಲ್ಲಾ ಮಕ್ಕಳಂತೆ ಕಂಡದ್ದನೆಲ್ಲ ಬೇಕೆನ್ನುವ ಹಟ ಮಾಡಿ ಬೇಡುವ ಮಗುವಾಗಿರಲಿಲ್ಲ. ತುಂಬ ಚಿಕ್ಕಂದಿನಲ್ಲಿ ಹಟ ಇತ್ತು ಸ್ವಲ್ಪ ಕಾಲ, ಆದರೆ ಆರೆಂಟು ವರ್ಷದ ಪ್ರಾಯ ಆಗುವ ಹೊತ್ತಿಗೆಲ್ಲ ನನ್ನ ಮಿತಿಯನ್ನ ನಡುವೆ ಆದ ಕೆಲವು ಕಹಿ ಅನುಭವಗಳಿಂದ ಮನದಟ್ಟು ಮಾಡಿಕೊಂಡಿದ್ದೆ. ಹೀಗಾಗಿ ಯಾರಾದರೂ ಏನನ್ನಾದರೂ ಅವರೆ ಕೈಯೆತ್ತಿ ಮನಃಪೂರ್ವಕ ಕೊಡುವ ತನಕ ನಾನು ಅವರ ಮುಂದೆ ಕೈಯೊಡ್ಡುತ್ತಿರಲಿಲ್ಲ. ನನ್ನ ಸಣ್ಣ ಪುಟ್ಟ ಬೇಕು ಬೇಡಗಳಾದ ಪೆನ್ಸಿಲ್, ಕಡ್ಡಿ ಬರೆವ ಪುಸ್ತಕ ಇವೆಲ್ಲವನ್ನ ಅನುಕಂಪದಿಂದ ಎದರು ಮನೆಯ ಪುಟ್ಟಿಯ ( ಅವಳಿಗೆ ಸುಮಕ್ಕ ಅಂತ ನನ್ನಿಂದ ಕರೆಸಿಕೊಳ್ಳುವ ಚಟ! ನನ್ನದು ಹೀಗೆ ಕರೆಯುವ ಹಟ?!) ಅಪ್ಪ ಬಾಲರಾಜಣ್ಣ ಅವಳಿಗೆ ತಂದು ಕೊಡುವಾಗ ನನಗೂ ತಂದು ಕೊಟ್ಟದ್ದುಂಟು. ಕಾರ್ಕಳ ಸೇರಿದ್ದ ಮೊದಲ ವರ್ಷ ಇನ್ನೇನು ಬೇಸಿಗೆ ರಜೆ ಮುಗೀಲಿಕ್ಕೆ ಹತ್ತು ದಿನ ಇದೆ ಎನ್ನುವಾಗ ತೀರ್ಥಹಳ್ಳಿಗೆ ಒಮ್ಮೆ ಬಂದಿದ್ದೆ. ಆಗ ನನ್ನ ಹೆತ್ತಮ್ಮನಿಗೆ ಅದೇನು ಕಾಳಜಿ ನನ್ನ ಮೇಲೆ ಉಕ್ಕಿ ಬಂದಿತ್ತೋ ಗೊತ್ತಿಲ್ಲ. ಅಡುಗೆ ಮಾಡುವುದರಲ್ಲಿ ಚತುರೆಯಾಗಿದ್ದ ದಿನೇಶಣ್ಣನ ಅಮ್ಮ ದೋನ್ ಬಪಮನನ್ನ ಕರೆಸಿ ಅತಿರಸ ಮಾಡಿಸಿ ಕಾರ್ಕಳದ ತಂಗಿ ಮನೆಗೆ ಕಳಿಸಿಕೊಟ್ಟಿದ್ದರು. ಅದೆ ತರಹ ಕಾರ್ಕಳ ಬಿಡುವ ವರ್ಷ ಅದೇ ದೋನ್ ಬಪಮ ಕಾಯಿ ಹೋಳಿಗೆ ಮಾಡಿಕೊಟ್ಟಿದ್ದ ನೆನಪು. ಮನೆಗೆ ಬಂದು ಘಂಟೆಗಟ್ಟಲೆ ಒಂದು ಕಾಲನ್ನ ಮಡಚಿಕೊಂಡು ಇನ್ನೊಂದನ್ನ ಉದ್ದಕ್ಕೆ ಚಾಚಿಕೊಂಡು ಗೋಡೆಗೊರಗಿ ಕೂತು ಎದುರಿಟ್ಟಿದ್ದ ಒಲೆಯಲ್ಲಿ ಅವರು ಲಟ್ಟಿಸಿ ಕಾಯಿಸಿ ತೆಗೆದಿದ್ದ ರುಚಿರುಚಿಯಾದ ಪುಟ್ಟ ಪುಟ್ಟ ಅಂಗೈ ಅಗಲದ ಹೋಳಿಗೆಗಳ ರುಚಿ ಇಲ್ಲಿಯವರೆಗೆ ನಾನು ತಿಂದ ಮತ್ಯಾವುದೆ ಹೋಳಿಗೆಯಲ್ಲೂ ನನಗೆ, ನನ್ನ ನಾಲಗೆಗೆ ಸವಿಯಲಿಕ್ಕೆ ಸಿಕ್ಕಿಲ್ಲ. ಅವರ ಪಾಕ ಪ್ರಾವೀಣ್ಯತೆಗೆ ನಾನು ಮಾರು ಹೋಗಿದ್ದೇನೆ. ಮರಳಿ ಕಾರ್ಕಳದ ಮಾರ್ಗವಾಗಿ ಹೊಸತಾಗಿ ಮಂಗಳೂರು ಸೇರಿಕೊಳ್ಳುವಾಗಲೂ ನನ್ನ ಪ್ರೌಢಶಾಲೆಯ ಮೊದಲ ವರ್ಷಕ್ಕೆ ಅಗತ್ಯ ಬಿದ್ದಿದ್ದ ಪೇಸ್ಟ್, ಹಲ್ಲು ತಿಕ್ಕುವ ಬ್ರಷ್, ಮೈ ಹಾಗೂ ಬಟ್ಟೆಯ ಸಾಬೂನು, ಬಟ್ಟೆ ತಿಕ್ಕುವ ಬ್ರೆಷ್, ತಲೆಗೆ ಹಾಕುವ ಎಣ್ಣೆ ಹೀಗೆ ಕೆಲವು ಅಗತ್ಯ ವಸ್ತುಗಳ ಪಟ್ಟಿಯಲ್ಲಿದ್ದ ವಸ್ತುಗಳನ್ನ ಅಷ್ಟೆ ಕಾಳಜಿ ಮತ್ತು ಪ್ರೀತಿಯಿಂದ ಕೊಡಿಸಿದ್ದು ಬಾಲರಾಜಣ್ನ. ನಮ್ಮ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯ ಸ್ಟೋರ್ ಕೀಪರ್ ಆಗಿದ್ದ ಅವರು ಇವತ್ತು ಅವರು ನಿವೃತ್ತ ಜೀವನವನ್ನ ಸವೆಸುತ್ತಿದ್ದಾರೆ. ತಂಪು ಹೊತ್ತಿನಲ್ಲವರನ್ನ ನೆನೆಯುತ್ತೇನೆ.


ನಾನಿನ್ನೂ ಕಾರ್ಕಳ ಸೇರುವ ಮೊದಲು ಎಳ್ಳಾಮವಸ್ಯೆ ಜಾತ್ರೆಯ ಕಾಲಕ್ಕೆ ನನ್ನ ಸಹೋದರ ಮಾವ ಸುರೇಶಮಾವ ಬೊಂಬಾಯಿಯಿಂದ ಊರಿಗೆ ಬಂದಿದ್ದ. ಮೂಡುಬಿದ್ರಿಯಲ್ಲಿ ನಡೆದಿದ್ದ ನನ್ನ ಎರಡನೆ ಚಿಕ್ಕಮ್ಮನ ಮದುವೆಯ ಆರತಕ್ಷತೆಯನ್ನ ತೀರ್ಥಹಳ್ಳಿಯಲ್ಲಿ ಇಟ್ಟುಕೊಂಡಿದ್ದೆವು ಅಂತ ನೆನಪು. ಲೆಕ್ಖ ಪರಿಶೋಧಕನಾಗಲು ಬೊಂಬಾಯಿ ಸೇರಿದ ನಂತರ ಅಷ್ಟಾಗಿ ಮನೆಗೆ ಬಾರದ, ಹಿರಿಯಕ್ಕನಾದ ನನ್ನ ಹೆತ್ತಮ್ಮನನ್ನ ಇಷ್ಟ ಪಡುತ್ತಿದ್ದ, ಬಾಲ್ಯದಲ್ಲಿ ನನ್ನನ್ನ ಸಾಕಷ್ಟು ಗೋಳಾಡಿಸುತ್ತಿದ್ದ ಸುರೇಶಮಾಮ ಅವತ್ತು ಜಾತ್ರೆಯ ಖರ್ಚಿಗೆ ಅಂತ ಐವತ್ತು ರೂಪಾಯಿ ಕೊಟ್ಟಿದ್ದ, ಅದು ಆ ಕಾಲಕ್ಕೆ ದೊಡ್ಡ ಮೊತ್ತ. ಹಣ ಸಿಕ್ಕಿತು ಅನ್ನುವುದಕ್ಕಿಂತಲೂ ಅದನ್ನ ನನಗೆ ನನ್ನ ಮಾವ ಕೊಟ್ಟಿದ್ದ ಅನ್ನುವ ಹೆಮ್ಮೆಯಿಂದ ಆ ಐವತ್ತು ರೂಪಾಯಿಯನ್ನ ಒಂದಿಡಿ ದಿನ ನಾನು ಜೇಬಿನಲ್ಲೆ ಇಟ್ಟುಕೊಂಡು ಸುಖಿಸಿದ್ದೆ, ಅನಂತರ ಹೆತ್ತಮ್ಮ ಅದನ್ನ ಒತ್ತಾಯದಿಂದ ಕಸಿದುಕೊಂಡ ಮೇಲೆ ಅದರ ಹಣೆ ಬರಹ ಏನಾಯ್ತು ಅನ್ನುವುದರ ಅರಿವು ನನಗಿಲ್ಲ. ಇದು ಬಿಟ್ಟರೆ ನನಗೆ ಅವನ ಮದುವೆಯ ಕೊಡುಗೆಯಾಗಿ ಒಂದು ಜೊತೆ ಬಟ್ಟೆ ತೆಗೆಸಿ ಕೊಟ್ಟಿದ್ದ. ಇವೆರಡೆ ನಾನು ನನ್ನ ಮಾವನಿಂದ ಇಲ್ಲಿಯವರೆಗೆ ಪಡೆದ ಕೊಡುಗೆಗಳು. ಅಮ್ಮ ಮಗನನ್ನ ನೋಡಲು ಬೊಂಬಾಯಿಗೆ ಹೋದಾಗಲೆಲ್ಲ ಮರಳುವಾಗ ಅವನ ಹಳೆ ಬಟ್ಟೆಗಳನ್ನ ನನಗಂತ ತರುತ್ತಿದ್ದರು. ಸಾಮಾನ್ಯವಾಗಿ ನನ್ನ ದೇಹದ ಅಳತೆಯ ಇಬ್ಬಿಬ್ಬರನ್ನ ಆರಾಮವಾಗಿ ತೂರಿಸಬಹುದಾದಷ್ಟು ದೊಗಳೆಯಾಗಿರುತ್ತಿದ್ದ ಅವನ್ನೆ ಅಲ್ಲಲ್ಲಿ ಹಿಡಿಸಿ ಹೊಲಿಗೆ ಹಾಕಿಸಿಕೊಂಡು ತೊಟ್ಟು ನಾನೂ ಸಹ ಮೆರೆಯುತ್ತಿದ್ದೆ. ಆದರೆ ಅವನ್ನೆಲ್ಲ ಅವನೆ ಕಳಿಸಿಕೊಟ್ಟಿರುತ್ತಿದ್ದುದು ಸಂಶಯ. ಅಮ್ಮ ಬರುವಾಗ ಅವರೆ ಆಗ್ರಹಿಸಿ ಹೊತ್ತುಕೊಂಡು ಬರುತ್ತಿದ್ದುದೆ ಅಧಿಕ ಅನ್ನಿಸುತ್ತೆ. ಅದೇನೆ ಇದ್ದರು ಆಗೆಲ್ಲ ಅಮ್ಮ ತಂದುಕೊಡುತ್ತಿದ್ದ ಸುರೇಶ ಮಾಮನ ಹಾಗೂ ನನ್ನ ದಾಯಾದಿ ಅಣ್ನ ರೋಶನ್ನನ ಹಳೆಯ ಬಟ್ಟೆಗಳೆ ನನ್ನ ಪಾಲಿಗೆ ಹೊಸ ಬಟ್ಟೆಗಳು. ಇದ್ದುದ್ದರಲ್ಲಿ ನನಗಿಂತ ಎರಡು ವರ್ಷಕ್ಕೆ ಹಿರಿಯನಾಗಿದ್ದ ರೋಶನ್ ತೊಡುತ್ತಿದ್ದ ಬಟ್ಟೆಗಳು ನನಗೆ ಸರಿಹೊಂದುತ್ತಿದ್ದವು. ಬೊಂಬಾಯಿಯಿಂದ ಅಮ್ಮ ತಂದ ಬಟ್ಟೆ ಅಂತ ನಾನು ಅದನ್ನು ಹಾಕಿಕೊಂಡು ಹೋಗುವಾಗ ಕೇಳಿದವರಿಗಿರಲಿ ಕೇಳದವರಿಗೂ ಡಂಗೂರ ಸಾರಿ ಜಂಭ ಕೊಚ್ಚಿಕೊಳ್ಳುತ್ತಿದ್ದೆ. ಹೀಗಾಗಿ ನನ್ನ ಬೊಂಬಾಯಿ ಬಡಾಯಿಯ "ಬಾಂಬೆ ಜಯಶ್ರಿ" ರಿಪೀಟೆಡ್ ರೆಕಾರ್ಡನ್ನ ಬಿಚ್ಚುವ ಸೂಚನೆ ಸಿಕ್ಕ ಕೂಡಲೆ ಹುಶಾರಾಗುತ್ತಿದ್ದ ನನ್ನ ಅನೇಕ ಅನಿವಾರ್ಯ ಶ್ರೋತೃಗಳು ಉಪಾಯವಾಗಿ ನನ್ನ ಸಾಗ ಹಾಕಿ ಈ ಪುಂಗಿಯ ಕರ್ಕಶ ರಾಗಾಲಾಪ ಕೇಳುವುದರಿಂದ ಪಾರಾಗಿ ನಿಟ್ಟುಸಿರು ಬಿಡುತ್ತಿದ್ದರು! ಅದೇನೆ ಇದ್ದರೂ ಹಾಡಿದ್ದನ್ನೆ ಹಾಡುವ ಕಿಸಬಾಯಿದಾಸನ ವೃತ್ತಿ ನನಗೆಂದೂ ಬೇಸರ ಹುಟ್ಟಿಸಿರಲಿಲ್ಲ. ನನಗೆ ಸಂದ ನನ್ನ ಮಟ್ಟಿಗೆ ಹೊಸತೆ ಆಗಿದ್ದ "ಬೊಂಬಾಯಿ ಬಟ್ಟೆ"ಗಳನ್ನ ನಾನಾಗಿಯೆ ಹೇಳದೆ ಉಳಿದವರಿಗೆಲ್ಲ ಅರ್ಥ ಮಾಡಿಸುವುದಾದರೂ ಹೇಗೆ?!


ನಮ್ಮ ಮನೆಗೆ ಮೊದಲು ಟಿವಿಯೆಂಬ ಮಾಯಾ ಪೆಟ್ಟಿಗೆ ಬಂದದ್ದು ಸಹಾ ನೇರ ಆಗೆಲ್ಲ ನನ್ನ ಪಾಲಿನ ಕಲ್ಪಿತ "ಧರೆಯ ಮೇಲಿನ ಸ್ವರ್ಗ"ವಾಗಿದ್ದ ಬೊಂಬಾಯಿಯಿಂದಲೆ. ಅಲ್ಲಿನ ಪಶ್ಚಿಮ ರೈಲ್ವೆಯಲ್ಲಿ ಅಮ್ಮನ ಕಡೆಯ ತಂಗಿ ವಿಶಾಲಾಕ್ಷಿಯ ಗಂಡ ಇಂಜಿನ್ ಚಾಲಕರಾಗಿದ್ದರು. ಬಾಂಡುಪ್'ನಲ್ಲಿ ಅವರ ವಾಸವಿತ್ತು. ನನ್ನ ಮೊಳಕೆ ನನ್ನ ಹೆತ್ತಮ್ಮನ ಗರ್ಭದಲ್ಲಿ ಮೊಳೆಯುವ ತನಕವೂ ನನ್ನಪ್ಪನ ಜೊತೆಗೆ ಅವರ "ಸುಖ ಸಂಸಾರ"ದ ಆರಂಭದ ದಿನಗಳು ಕಳೆದದ್ದೂ ಸಹ ಅದೆ ಬಾಂಡುಪ್'ನ ಬಿಡಾರದಲ್ಲಿಯೆ. ವಿಶಾಲ ಚಿಕ್ಕಮ್ಮನ ಮನೆಗೆ ಹೊಸ ಬಣ್ಣದ ಟಿವಿ ಬಂದು ಆಗಷ್ಟೆ ಬೊಂಬಾಯಿಯಲ್ಲಿ ಆರಂಭವಾಗಿದ್ದ ಟೆರಸ್ಟ್ರಿಯಲ್ ತಂತ್ರಜ್ಞಾನದಲ್ಲಿ ಅಂಟೇನದ ಹಂಗಿಲ್ಲದೆ ರೇಡಿಯೋದ ತರಹ ನೇರ ಟಿವಿಯಲ್ಲಿ ಚಿತ್ರಗಳು ಮೂಡಲು ಶುರುವಾದ ಕಾರಣದ ಕೃಪೆಯಿಂದ ಅವರ ಮನೆಯ ಹಳೆಯ ಕಪ್ಪು-ಬಿಳುಪಿನ "ಡಯನೊರಾ" ಟಿವಿ ತನ್ನ ಬಾಲಂಗೋಚಿ ಆಂಟೆನಾದ ಸಮೇತ ನಮ್ಮ ಮನೆಗೆ ನೇರ ಬೊಂಬಾಯಿಯಿಂದಲೆ ಬಂದು ತಲುಪಿತು. ನನಗಂತೂ ಹಿಗ್ಗೆಹಿಗ್ಗು!


ಅಲ್ಲಿಯವರೆಗೂ ನಮ್ಮ ಬಡಾವಣೆಗೆ ಟಿವಿ ಅದರಲ್ಲೂ ಬಣ್ಣದ ಎರಡು ಕೊಂಬು ಮೊಳೆತ ಎಳೆಯ ರಕ್ಕಸನ ಚಿತ್ರ ಹೊತ್ತು ಉದಯವಾಣಿಯಲ್ಲಿ ಪ್ರಕಟವಾಗಿದ್ದ ಜಾಹಿರಾತಿನಲ್ಲಷ್ಟೆ  ನೋಡಿ ಗೊತ್ತಿದ್ದ ಒನಿಡಾ ಟಿವಿ ಏಳನೆ ತಿರುವಿನ ಕೊನೆಯ ಮನೆಯಲ್ಲಿದ್ದ ಶ್ರೀನಿವಾಸ ಶೆಟ್ಟರ ಮನೆಗೆ ಬಂದಿತ್ತು. ಆದಿತ್ಯವಾರ ಸಂಜೆಯ ಸಿನೆಮಾ, ಅವತ್ತೆ ಬೆಳಗಿನ ರಾಮಾಯಣ ಇವುಗಳಿಗೆಲ್ಲ ಸಮಸ್ತ ಬಡಾವಣೆಗಿದ್ದ ಬೆರಳೆಣಕೆಯ ಟಿವಿ ಅದಾಗಿದ್ದರಿಂದ ಅವರ ಮನೆಯಲ್ಲಿ ಆ ಹೊತ್ತಿನಲ್ಲಿ ಒಂದು ಮಿನಿ ಎಳ್ಳಾಮವಾಸ್ಯೆ ಜಾತ್ರೆಗೆ ಸಾಲುವಷ್ಜ್ಟು ಜನರ ಜಾತ್ರೆ ಸೇರುತ್ತಿತ್ತು. ರಾಜ್ ಕಪೂರ್ ವಿಧಿವಶರಾದಾಗಲಂತೂ ಇದು ತೀರಾ ವಿಪರೀತಕ್ಕಿಟ್ಟುಕೊಂಡಿತ್ತು. ಅವರ ಗೌರವಾರ್ಥ ದೂರದರ್ಶನ ನಿತ್ಯ ರಾತ್ರಿ ಒಂಬತ್ತೂವರೆಗೆ ಅವರದ್ದೆ ಬ್ಯಾನರಿನ ಒಟ್ಟು ಇಪ್ಪತ್ತೊಂದು ಚಿತ್ರ್ಗಗಳನ್ನ "ಆವಾರ"ದಿಂದ ಹಿಡಿದು "ಬಾಬ್ಬಿ"ಯವರೆಗೆ ಪ್ರದರ್ಶಿಸಿದ್ದರು. ಬಹುಷಃ ಆ ಇಪ್ಪತ್ತೊಂದು ದಿನಗಳಲ್ಲಿ ತೀರ್ಥಹಳ್ಳಿಯ ವೆಂಕಟೇಶ ಮತ್ತು ಜೈಶಂಕರ್ ಟಾಕೀಸುಗಳಾದರೂ ಖಾಲಿ ಹೊಡೆದಿರಬಹುದೇನೋ ಆದರೆ ಅವಷ್ಟೂ ದಿನ ಅವರ ಮನೆಯಲ್ಲಿ ಮಾತ್ರ "ಸೆಕೆಂಡ್ ಶೋ" ನಿಜವಾದ ಅರ್ಥದಲ್ಲಿ ಹೌಸ್'ಫುಲ್(!) ಆಗಿತ್ತು. ನನಗೆ ರಾಜ್ ಕಪೂರ್ ಹಾಗು ಅವರ ಸಿನೆಮಾಗಳ ಮಹತ್ವದ, ಅವರ ನಾಯಕಿಯರಾದ ನರ್ಗಿಸ್ ದತ್, ನೂತನ್ ಬೆಹ್ಲ್, ಮೀನಾಕುಮಾರಿ, ನಂದಾ, ವೈಜಯಂತಿಮಾಲ, ಮಧುಬಾಲಾ, ಸಾಯಿರಾಬಾನು, ಜೀನತ್ ಅಮಾನ್, ಮಮ್ತಾಜ್, ಪದ್ಮಿನಿ ಕೊಲ್ಹಾಪುರೆ ಹಾಗೂ ನೀತು ಸಿಂಗ್ ಮೊದಲಾದವರ ಮೊದಲ ಮುಖದರ್ಶನ ಹಾಗೂ ಪ್ರಥಮ ಪರಿಚಯವಾದುದ್ದೆ ಶ್ರೀನಿವಾಸಶೆಟ್ಟರ ಹೋಂ ಟಾಕೀಸಿನಲ್ಲಿ. ಆ ಪ್ರೇಕ್ಷಕ ಪರಮಾತ್ಮರ ಗುಂಪಿನಲ್ಲಿ ಒಬ್ಬನಾಗಿದ್ದ ನಾನು ನನ್ನದೆ ಧಾಟಿಯಲ್ಲಿ ಪ್ರತಿದಿನವೂ ಹಗಲಿನಲ್ಲಿ ನೆನ್ನೆ ನೋಡಿರುತ್ತಿದ್ದ ರಾಜ್ ಕಪೂರ್ ಸಿನೆಮಾದ ಹಾಡುಗಳನ್ನ ಎಲ್ಲೆಂದರಲ್ಲಿ "ಆವಾರಾಹೂ" "ಎಕ್ ದಿನ್ ಮಿಟ್ ಜಾಯೆಗಾ ಮಾಟಿ ಕೆ ಮೋಲ್" "ಮೇರಾ ಜೋತಾ ಹೈ ಜಪಾನಿ" "ಪ್ಯಾರ್ ಹುವಾ ಇಕರಾರ್ ಹುವಾ' "ಓ ಚಾಂದ್ ಕಿಲಾ" "ಹಂ ತುಂ ಎಕ್ ಕಮರೆಮೆ ಬಂದ್ ಹೋ" ಹೀಗೆ ಸಮಯ ಸಂದರ್ಭ ಒಂದನ್ನೂ ಪರಿಗಣಿಸದೆ ನನ್ನ ಗಾನ ಸಾಮರ್ಥ್ಯವನ್ನ ಒರೆಹಚ್ಚಿ ಪರೀಕ್ಷಿಸಿ ನೋಡುತ್ತಿದ್ದೆ. ನನಗಾಗ ಬರುತ್ತಿದ್ದ ಹಾಗೂ ಅರ್ಥವಾಗುತ್ತಿದ್ದ ಹಿಂದಿಯಲ್ಲಿ ಹಾಡಿನ ಮೊದಲ ಸಾಲು ಮಾತ್ರ ತಕ್ಕ ಮಟ್ಟಿಗೆ ಅರ್ಥಪೂರ್ಣವಾಗಿ ಅದರ ಮೂಲ ರೂಪದಲ್ಲಿಯೆ ಉಳಿದಿರುತ್ತಿದ್ದು ಇನ್ನೆಲ್ಲ ನನ್ನದೆ ಸೃಜನ ಶೀಲ ಅಸಂಬದ್ಧತೆಯ ಪರಮಾವಧಿಯಲ್ಲಿರುತ್ತಿದ್ದ ಹಿಂದಿ ಅತ್ಲಾಗಿರಲಿ ಪ್ರಪಂಚದ ಯಾವ ಶಿಷ್ಟ ಭಾಷೆಯಲ್ಲಿಯೂ ಇದ್ದಿರಲಾರದ ಸಾಹಿತ್ಯವನ್ನೆ ಒಳಗೊಂಡಿರುತ್ತಿತ್ತು! ಅದನ್ನೆ ಬೀದಿ ಬಾಲಸುಬ್ರಮಣ್ಯಂ ಫೋಜಿನಲ್ಲಿ ಜೋರಾಗಿ ಅರಚುತ್ತಾ ಹೋಗುತ್ತಿದ್ದೆ.



ಹೊತ್ತಲ್ಲದ ಹೊತ್ತಿನಲ್ಲಿ ಕರೆಯದೆ ಬರುವ ಈ ನಿರ್ಲಜ್ಜ ಅತಿಥಿಗಳಿಂದ ಅವರಿಗೆ ಅದೆಷ್ಟೆ ರೋಸಿಹೋಗುತ್ತಿದ್ದರೂ ಮುಂದೊಮ್ಮೆ ಸ್ಕೀಮಿನಲ್ಲಿ ಊರಿಗೆಲ್ಲ ಟಿವಿ ಮಾರಿ ಕೇಬಲ್ ಎಂಬ ತಂತ್ರಜ್ಞಾನದ ಮೂಲಕ ಸ್ವಲ್ಪ ಕಾಸು ಮಾಡಿಕೊಳ್ಳುವ ಯೋಜನೆಯಲ್ಲಿದ್ದ ಶ್ರೀನಿವಾಸ ಶೆಟ್ಟರು ಊರವರ ಈ ರಸಿಕತೆಯ ಮನರಂಜಕ ಪಿಪಾಸುತನದ ಉಪಟಳಗಳನ್ನೆಲ್ಲ ನಗುಮೊಗದಿಂದಲೆ ಅವಡುಗಚ್ಚಿ ಸಹಿಸಿಕೊಂಡು ಎಲ್ಲರಿಗೂ ಟಿವಿ ಎಂಬ ನಿಷೇಧಿತ ಹಣ್ಣಿನ ಅಮಲನ್ನ ಈ ಮೂಲಕ ಉಪಾಯವಾಗಿ ಹತ್ತಿಸಿಯೆ ಬಿಟ್ಟರು! ಕಾಸು ಕೊಟ್ಟು ಶೆಟ್ಟರ ಕಂತಿನ ಟಿವಿ ಕೊಳ್ಳುವ ಆರ್ಥಿಕ ಸಾಮರ್ಥ್ಯವಿಲ್ಲದಿದ್ದ ಅಮ್ಮ ಅಲ್ಲಿ ಆಗದ ಹೋಗದ ಕೆಲಸಕ್ಕೆ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮಾಡದೆ ತನ್ನ ತಂಗಿಯ ಮನೆಗೆ ಹೋಗಿದ್ದು ಮರಳುವಾಗ ಪುಕ್ಕಟೆ ಸೆಕೆಂಡ್'ಹ್ಯಾಂಡ್ ಟಿವಿ ಸಮೇತರಾಗಿ ತೀರ್ಥಹಳ್ಳಿಗೆ ಅಡಿಯಿಟ್ಟರು.


ಮೊದಮೊದಲಿಗೆ ಸುರೇಶ ಮಾಮನ ಸಹಪಾಠಿ ಟಿವಿ ಅಂಗಡಿಯ ಶಶಿ ಮಾಮ ನಮ್ಮ ಟಿವಿಯನ್ನ ಅಷ್ಟಿಷ್ಟು ಕಾಣುವ ಸ್ಥಿತಿಗೆ ತಂದುಕೊಟ್ಟು ಆಂಟೆನಾವನ್ನ ಮಾಡಿಗೆ ಸಿಕ್ಕಿಸಿ ಹೋಗಿದ್ದರು. ಆಗಾಗ ಅದರ ಆರೋಗ್ಯ ಸಣ್ನ ಮಳೆ ಗಾಳಿಗೂ ಹಟಾತ್ತನೆ ಕೈಕೊಟ್ಟಾಗ ಅವರೆ ತಮ್ಮ ಸ್ಕ್ರೂ ಡ್ರೈವರ್, ನೆಟ್ ಬೋಲ್ಟ್'ಗಳ ಹಡಪದೊಂದಿಗೆ ನಮ್ಮಲ್ಲಿಗೆ ಬಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಹೋಗುತ್ತಿದ್ದರಾದರೂ ಮತ್ತೆ ಮತ್ತೆ ಈ ಖಾಯಿಲೆ ಗುಣವಾಗುವ ಬದಲು ಉಲ್ಬಣಿಸುತ್ತಲೆ ಸಾಗ ತೊಡಗಿದ್ದರಿಂದ ರೋಸತ್ತ ಅಮ್ಮ ಆಗಷ್ಟೆ ಶುರುವಾಗಿದ್ದ ಶೆಟ್ಟರ "ಪ್ರತಿಭಾ ಕೇಬಲ್"ನ ಒಂದು ಸಂಪರ್ಕವನ್ನ ನಮ್ಮ ಮನೆಗೂ ಎಳೆಸಿಕೊಂದು ನಿಟ್ಟುಸಿರು ಬಿಟ್ಟರು. ಮೊದಮೊದಲು ದೂರದರ್ಶನ ದೆಹಲಿ ಮತ್ತು ದೂರದರ್ಶನ ಬೆಂಗಳೂರಿನ ಸೀಮಿತ ಅವಧಿಯ ಕಾರ್ಯಕ್ರಮಗಳ ಪ್ರಸಾರಕ್ಕಷ್ಟೆ ಸೀಮಿತವಾಗಿದ್ದ ಈ ಕೇಬಲ್ ವಯರಿನಲ್ಲಿ ಮುಂದೆ ಡಿಡಿ ಮೆಟ್ರೋ, ಇಂಗ್ಲಿಷಿನ ಸ್ಟಾರ್ ಪ್ಲಸ್, ಹಿಂದಿಯ ಝಿ ಟಿವಿ, ಸೋನಿ ಟಿವಿ, ಕನ್ನಡದ ಉದಯ ಟಿವಿಗಳೂ ಸರಾಗವಾಗಿ ನಮ್ಮಲ್ಲಿಗೆ ಹರಿದು ಬರಲು ಆರಂಭವಾಯ್ತು. ಕೇಬಲ್ ವ್ಯವಸ್ಥೆ ಇನ್ನೂ ತೀರ್ಥಹಳ್ಳೀಯಲ್ಲಿ ಶೈಶವಾಸ್ಥೆಯಲ್ಲಿದ್ದಾಗ ಆರಂಭವಾಗಿದ್ದ ಈ ಶ್ರೀನಿವಾಸ ಶೆಟ್ಟರ ಚಂದಾದಾರನ್ನೆಲ್ಲ ಮುಂದೆ ಸೋಮಣ್ಣನ "ದರ್ಶನ್ ಕೇಬಲ್ ನೆಟ್'ವರ್ಕ್"ನಲ್ಲಿ ವಿಲೀನಗೊಳಿಸಿ "ಪ್ರತಿಭಾ"ವನ್ನ ಅಧಿಕೃತವಾಗಿ ಮುಚ್ಚಲಾಯ್ತು. ಇದರ ಕೃಪೆಯಿಂದಲೆ ನಾವೆಲ್ಲ ನಮ್ಮ ಮನೆಯಲ್ಲೆ ಆಗ ಪ್ರಸಾರವಾಗುತ್ತಿದ್ದ ಜನಪ್ರಿಯ ಬಿ ಆರ್ ಛೋಪ್ರಾರ ಟಿವಿ "ಮಹಾಭಾರತ"ದ ಉತ್ತರಾರ್ಧ ಹಾಗೂ "ಜಂಗಲ್ ಬುಕ್"ನ್ನ ನೋಡಲಿಕ್ಕೆ ಸಾಧ್ಯವಾಗಿದ್ದು.

ನಮ್ಮ ತೀರ್ಥಹಳ್ಳಿಯ ಮನೆಗೆ ಆಗಾಗ ಅಪರೂಪಕ್ಕೆ ನನ್ನ ಅಮ್ಮನ ಹಿರಿ ತಂಗಿ ರತ್ನ ಚಿಕ್ಕಮ್ಮನ ಮಕ್ಕಳಾದ ಶಶಿ ಹಾಗೂ ಕೇಶವ ಬರುವುದಿತ್ತು. ಇದ್ದುದ್ದರಲ್ಲಿ ನನಗೆ ಸಹೋದರ ಮಾವಂದಿರಲ್ಲಿ ಬಾಲ್ಯದುದ್ದಕ್ಕೂ ಕೇಶವನೆ ಇಷ್ಟ. ನನಗೆ ಸಣ್ಣ ಪುಟ್ಟ ಆಟಿಕೆಗಳನ್ನವ ತಪ್ಪದೆ ಕೊಡಿಸುತ್ತಿದ್ದ. ಅವ ಮನೆಗೆ ಬಂದರೆ ಸಂಜೆ ತುಂಗೆಯ ತೀರ ಸುತ್ತಲಿಕ್ಕೆ ಕರೆದುಕೊಂಡು ಹೋಗುತ್ತಿದ್ದ, ರಾಮೇಶ್ವರ ದೇವಸ್ಥಾನ ಸುತ್ತಿಸಿ ತಿನ್ನಲಿಕ್ಕೆ ಮಿಠಾಯಿಯನ್ನೂ ಕೊಡಿಸಿ ಖುಷಿಯುಕ್ಕಿಸುತ್ತಿದ್ದ. ಅವನ ತಮಾಷೆಯ ಮಾತುಗಳು, ಕೀಟಲೆಯ ಹುಡುಗಾಟ ನಮ್ಮಂತಹ ಎಳೆಯರಿಗೆ"ಹೀರೋಯಿಜಂ"ನಂತೆ ಕಾಣುತ್ತಿತ್ತು. ಆದರೆ ಉಳಿದೆಲ್ಲ ಸಹೋದರ ಮಾವಂದಿರು ಕೇವಲ ಲೆಕ್ಖ ಭರ್ತಿಗಷ್ಟೆ ಇದ್ದರು. ಅವರು ನನಗೇನನ್ನೂ ಕೊಡಿಸಲಿಲ್ಲ ಅನ್ನುವುದಕ್ಕಿಂತ ನಾನು ಎದುರಿಗಿರುವಾಗಲೂ ನನಗೊಬ್ಬನಿಗೆ ಮಾತ್ರ ಏನೊಂದನ್ನೂ ಕೊಡಿಸದೆ ಇನ್ನುಳಿದವರಿಗೆ ಮಾತ್ರ ಕೊಡಿಸುತ್ತಿದ್ದರು ಎನ್ನುವುದು ನನಗೆ ನೋವನ್ನುಂಟು ಮಾಡುತ್ತಿತ್ತು. ಇದಕ್ಕೆ ಕಾರಣ ಸ್ವಸ್ಥವಾಗಿಲ್ಲದ ನನ್ನ ಹೆತ್ತವರ ದಾಂಪತ್ಯ, ಇನ್ನುಳಿದ ಅಕ್ಕಂದಿರಿಂದ ಏನನ್ನಾದರೂ ಲಾಭದಾಯಕವಾದದ್ದನ್ನ ನಿರೀಕ್ಷಿಸುತ್ತಾ ಅವರ ಮಕ್ಕಳಿಗೆ ಪ್ರೀತಿ ತೋರಿಸುತ್ತಿದ್ದ ಅವರ ದೃಷ್ಟಿಯಲ್ಲಿ ಏನೊಂದೂ ಉಪಯೋಗ ಕಾಣದ ಈ ಅಕ್ಕನ ಮಕ್ಕಳಿಗೆ ಕುರುಡು ಕಾಸಿನ ಕಿಮ್ಮತ್ತಿರಲಿಲ್ಲ. ಈ ತಾರತಮ್ಯ ಧೋರಣೆ ನನ್ನಲ್ಲಿ ಪರಕೀಯ ಭಾವನೆ ಮೂಡಿಸುತ್ತಿತ್ತು. ಆದರೆ ಪರಿಹಾರ ಮಾತ್ರ ಹೊಳೆಯುತ್ತಲೆ ಇರದ ಬಾಲ್ಯದ ಮುಗ್ಧತೆಯ ದಿನಗಳವು.



ಕೊಪ್ಪದಲ್ಲಿದ್ದ ಅಜ್ಜನ ತಮ್ಮ ಚಿಕ್ಕಪ್ಪನ "ವೈಕುಂಠ ಸಮಾರಾಧನೆ"ಗೆ ಹೋದ ದಿನಗಳ ಕಹಿ ಅನುಭವ ಇನ್ನೂ ನನಗೆ ಮರೆಯಲಿಕ್ಕೆ ಸಾಧ್ಯವಾಗಿಲ್ಲ. ಕೊಪ್ಪ ಚಿಕ್ಕಮ್ಮನ ಮಗ ಸುಧೀರ ಮಾವ ಆಗಷ್ಟೆ ಶಾರ್ಜಾದಲ್ಲಿ ಉದ್ಯೋಗಕ್ಕೆ ಸೇರಿದ್ದ ತೀರಿ ಹೋದ ಅಪ್ಪನ ಕ್ರಿಯಾಕರ್ಮಗಳನ್ನ ಮಾಡಲಿಕ್ಕೆ ಬಂದವ ಅಲ್ಲಿಂದ ಕೆಲವು ಫ್ಯಾನ್ಸಿ ಟೋಪಿಗಳನ್ನ ಕೊಂಡು ತಂದಿದ್ದ. ನಾನಲ್ಲಿ ಹತ್ತಿರ ಹತ್ತಿರ ಒಂದು ವಾರ ಇದ್ದೆ ಆಗ ಅಲ್ಲಿ ಬಂದಿದ್ದ ಎಲ್ಲಾ ಮಕ್ಕಳಿಗೂ ಹುಡುಕಿ ಹುಡುಕಿ ಒಂದೊಂದು ಟೊಪ್ಪಿ ಕೊಟ್ಟವ ಅಲ್ಲೆ ದೈನ್ಯದಿಂದ "ಆಗ ಸಿಗಬಹುದಾ? ಈಗ ಸಿಗಬಹುದಾ? ನನಗೂ ಒಂದು ಟೊಪ್ಪಿ!" ಅನ್ನುವ ಯಾಚನೆಯ ದೃಷ್ಟಿ ಹೊತ್ತು ನಿಂತಿದ್ದ ನಾನು ಅವನ ಕಣ್ಣಿಗೆ ಬಿದ್ದಿರಲೆ ಇಲ್ಲ. ಆಗ ನನ್ನ ವಯಸ್ಸು ಕೇವಲ ಐದುವರೆ ವರ್ಷ. ಖಂಡಿತಾ ಬೇಡ ಬಾರದು ಸ್ವಾಭಿಮಾನದಿಂದ ಬದುಕಬೇಕು ಎನ್ನುವ ವಿವೇಕವಿನ್ನೂ ಮೂಡಿದ್ದಿರದ ವಯಸ್ಸದು. ಕಡೆಗೂ ನನಗೊಂದು ಟೊಪ್ಪಿ ಸಿಗಲೆ ಇಲ್ಲ, ಆದರೆ ಈ ಅವಮಾನದ ಸಿಟ್ಟನ್ನ ಮಾತ್ರ ನಾನು ವಿಚಿತ್ರವಾಗಿ ತೀರಿಸಿಕೊಂಡೆ. ಯಾವುದೋ ಕಾರ್ಯನಿಮಿತ್ತ ಸುಧೀರ ಮಾವನ ಅಕ್ಕ ಸುಧಾಕ್ಕ ತೀರ್ಥಹಳ್ಳೀಗೆ ಬಂದಿದ್ದರು ಅವರು ಮರಳಿ ಹೊರಟಾಗ ನಾನು ಸುಧೀರ ಮಾವ ಅವರಿಗೆ ದುಬಾಯಿಯಿಂದ ತಂದುಕೊಟ್ಟ ಕೈಗಡಿಯಾರವನ್ನ ಮುಚ್ಚಿಟ್ಟೆ! ಅದರಿಂದ ನನಗಂತೂ ಏನೊಂದೂ ಉಪಯೋಗವಿರವಿಲ್ಲ ಆಗ ಆರು ವರ್ಷದವನಾಗಿದ್ದ ನನಗೆ ವಾಚಿನ ಬಗ್ಗೆ ಸೆಳೆತವೂ ಇದ್ದಿರಲಿಲ್ಲ. ಆದರೂ ಮುಚ್ಚಿಟ್ಟೆ ಅವರಿಗೂ ಅದು ಅರಿವಾಗುವಾಗ ಅವರು ಅರ್ಧ ದಾರಿ ನಡೆದು ಹೋಗಿಯಾಗಿತ್ತು. ಮರೆತ ಅದನ್ನ ಹುಡುಕುತ್ತಾ ಮನೆಗೆ ಮರಳಿದವರು ಅಲ್ಲೆಲ್ಲೂ ಅದು ಸಿಗದೆ ಕಂಗಾಲಾದರು. ಹೀಗೆ ಮಂಗಮಾಯವಾದ ವಾಚಿನ ಸಂಗತಿ ಅಮ್ಮನ ಗಮನಕ್ಕೆ ಬಂದಾಗ ಮಾಯ ಮಾಡಿದ ಆ ಮಂಗ ಯಾರಾಗಿರಬಹುದೆಂದು ಸರಿಯಾಗಿ ಉಹಿಸಿದ ಅಮ್ಮ ನಯ, ವಿನಯ, ಗಿಣ್ಣು ಎಲ್ಲಾ ಸಾಮ-ದಾನ ತಂತ್ರಗಳನ್ನ ಪ್ರಯೋಗ ಮಾಡಿಯೂ ಪ್ರಯೋಜನ ಕಾಣದಿದ್ದಾಗ ಒಂದು ಕೋಲನ್ನ ಪುಡಿ ಮಾಡಿದರು ನೋಡಿ ಮನೆಯ ಓಣಿಗೆ ನಾನು ಅದನ್ನೆಸಿದಿದ್ದನ್ನ ಮೆಲ್ಲಗೆ ನಡುಗುತ್ತಾ ಬಾಯಿ ಬಿಟ್ಟೆ! "ಏ ಲಾತೋಂಕಾ ಭೂತ್ ಬಾತೋಂಸೆ ನಹಿ ಮಾನೇಗಾ" ಅನ್ನುವ ಖಚಿತ ಸತ್ಯದ ಅರಿವು ಅವರಿಗಿತ್ತು. ಕೋಲು ಪುಡಿಯಾದ ಮೇಲೆ ಅಮ್ಮನಿಗೆ ಪಶ್ಚಾತಾಪವಾಯಿತೇನೋ, "ಕೊಡೊ ಮರ್ಯಾದೆ ಕೊಡಿ ಅತ್ತೆ, ಆಮೇಲೆ ಮನೆ ಕೆಲಸ ಮುಚ್ಕೊಂಡು ಮಾಡ್ತೀನಿ" ಅನ್ನುವ ಮೊಂಡ ಸೊಸೆಯ ಕಥೆ ಹೇಳುತ್ತಲೆ ಪೆಟ್ಟು ತಿನ್ನಿಸಿದ ಕೈಯಿಂದಲೆ ಗಿಣ್ಣು ತಿನ್ನಿಸಿದರು. ಹೇಗೋ ಮುಕ್ಕಲಿಕ್ಕೆ ಗಿಣ್ಣು ಸಿಕ್ಕಿತಲ್ಲ ಅನ್ನುವ ಖಷಿಯಲ್ಲಿ ಬಿದ್ದ ಪೆಟ್ಟಿನ ನೋವನ್ನ ಕ್ಷಣದಲ್ಲಿಯೆ ಮರೆತ ನಾನು ಯಥಾಪ್ರಕಾರ ಗಿಣ್ಣುವಿಗೊಂದು ಗತಿ ಕಾಣಿಸಿದೆ! ಸುಧಾಕ್ಕ ಈಗ ಮದುವೆಯಾಗಿ ಹೊಸಪೇಟೆಯಲ್ಲಿ ವಾಸವಿದ್ದಾರೆ.



ಆದರೆ ಇದಕ್ಕೆಲ್ಲ ಕಲಶವಿಟ್ಟಂತಹ ಹೀನ ನಡುವಳಿಕೆಯನ್ನ ನಾನು ತೋರಿದ್ದು ತೀರ್ಥಹಳ್ಳಿಯಿಂದ ಗಡಿಪಾರಾಗಿ ಸಾಗಿನ ಬೆಟ್ಟಿನ ಬಳಸು ಮಾರ್ಗವಾಗಿ ಕಾಬೆಟ್ಟು ಪಾಲಾದ ದಿನ. ರೋಶನ್ ವರಸೆಯಲ್ಲಿ ನನಗೆ ಅಣ್ಣ. ಅವನ ಅಮ್ಮ ಹಾಗೂ ನನ್ನ ಹೆತ್ತಮ್ಮ ವರಸೆಯಲ್ಲಿ ಅಕ್ಕ-ತಂಗಿಯರ ಮಕ್ಕಳು, ಅಂದರೆ ಸಹೋದರಿಯರು. ಅವರಮ್ಮ ಬಾಲ್ಯದ ಕಷ್ಟದ ದಿನಗಳಲ್ಲಿ ಅವರಪ್ಪ ಸತ್ತು ಹೋಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಯ ಅವರ ದೊಡ್ಡಮ್ಮನ ಅಂದರೆ ನಮ್ಮ ಮನೆಯಲ್ಲಿಯೆ ವರ್ಷಾನುಗಟ್ಟಲೆ ಬಾಳಿದವರು. ನನ್ನ ಹೆತ್ತಮ್ಮ ಮತ್ತವರು ಸಮವಯಸ್ಕರು. ಅವರ ಮದುವೆ ನನ್ನ ಹೆತ್ತಮ್ಮನಿಗಿಂತ ಚೂರು ಮೊದಲಾಗಿತ್ತು. ಅವರ ಗಂಡ ಮುಂಬೈನ ಸಿಂಡಿಕೇಟ್ ಬ್ಯಾಂಕ್'ನ ಶಾಖೆಯೊಂದರಲ್ಲಿ ಜವಾನರಾಗಿದ್ದವರು. ಅವರ ಮದುವೆಯಾದ ಮರುವರ್ಷವೆ ನನ್ನ ತಂದೆ ಮದುವೆಯಾಗಿ ಹೆಂಡತಿಯೊಂದಿಗೆ ಬೊಂಬಾಯಿ ಪಾಲಾದರು. ಕೌಟುಂಬಿಕ ಜವಾಬ್ದಾರಿಗಳ ಅರಿವಿದ್ದ ರೋಶನ್ ಅಪ್ಪ  ಆದಷ್ಟು ಶೀಘ್ರ ಒಂದು ಮನೆ ಮಾಡಿ ಹೆಂಡತಿ ಮಕ್ಕಳನ್ನ ಬೊಂಬಾಯಿಯಲ್ಲಿಯೆ ಉಳಿಸಿಕೊಂಡು ಬೆಳೆಸಿದರೆ, ನನ್ನಪ್ಪನ ಬೇಜವಾಬ್ದಾರ ಮನಸ್ಥಿತಿ ಹೆಂಡತಿ ಬಸುರಿಯಾದ ಕೂಡಲೆ ಅವಳನ್ನ ತವರಿಗೆ ಸಾಗಹಾಕಿ ಹಿತವಾಗಿ ಮರೆತು ಹಾಯಾಗಿದ್ದುಬಿಟ್ಟಿತು. ಹೀಗಾಗಿ ನಾನು ತೀರ್ಥಹಳ್ಳಿಯಲ್ಲಿಯೂ, ರೋಶನ್ ಬೊಂಬಾಯಿಯಲ್ಲೂ ಬೆಳೆದೆವು. ವರ್ಷಕ್ಕೊಮ್ಮೆ ನಾವು ಮೂಡುಬಿದ್ರಿಯ ಅಮ್ಮನ ಮನೆಯಲ್ಲಿ ರಜೆಯ ಹೊತ್ತಿಗೆ ಭೇಟಿ ಆಗುವುದಿತ್ತು.


ಆ ರಜೆಗೂ ನಾನು ಅಲ್ಲಿಗೆ ಹೋಗಿದ್ದೆನಲ್ಲ. ಅವನ ಸಹೋದರ ಮಾವ ಅರವಿಂದ ಮಾವ ಅಕ್ಕ-ಭಾವನ ಕೃಪೆಯಿಂದ ಅಷ್ಟು ವರ್ಷ ಬೊಂಬಾಯಿಯಲ್ಲಿ ಅವರ ಮನೆಯಲ್ಲಿಯೆ ಇದ್ದವರು ಆಗಷ್ಟೆ ಹೊಸ ಕೆಲಸ ದೊರೆತು ದುಬೈ ಸೇರಿ ವರ್ಷ ಕಳೆದಿತ್ತು. ಆಗೆಲ್ಲ ಉದ್ಯೋಗ ಅರಸಿ ಬೊಂಬಾಯಿ ಸೆರಿದವರು ಹೊಸ ಅವಕಾಶ ದೊರೆತು ದುಬೈ ಸೇರಿದರೆಂದರೆ ಅವರ ಅದೃಷ್ಟ ಖುಲಾಯಿಸಿದೆ ಅಂತಲೆ ನಂಬುಗೆಯಿತ್ತು. ಅದೊಂತರಾ ವೃತ್ತಿಯಲ್ಲಿ ಮುಂಭಡ್ತಿ ದೊರೆತ ಹಾಗೆ. ಅಲ್ಲಿಂದ ರಜೆಗೆ ಊರಿಗೆ ಬಂದಿದ್ದ ಅರವಿಂದ ಮಾವ ರೋಶನ್'ಗಾಗಿ ಒಂದು ಕೈಗಡಿಯಾರವನ್ನೂ, ಉಳಿದ ಎಲ್ಲರ ಮಕ್ಕಳಿಗಾಗಿ ಒಂದೊಂದು ಉಡುಗೊರೆಯನ್ನೂ ತಂದಿದ್ದರು. ಬಹುಷಃ ನಾನು ಆಗ ಅಲ್ಲಿರುವುದು ಅವರಿಗೆ ಅಂದಾಜಿರಲಿಲ್ಲವೇನೋ, ನನ್ನ ಪಾಲಿಗೆ ಮಾತ್ರ ಏನೂ ಸಂದಾಯವಾಗಲಿಲ್ಲ. ಹಾಗಂತ ಕೊಡುವ ಮನಸಿದ್ದಿದ್ದರೆ ಅವರ ಬಳಿ ಇನ್ನೂ ಕ್ಷುಲ್ಲಕವೆನಿಸಬಹುದಾದ ಪೆನ್ನು, ಡೈರಿ ತರಹದ ನನ್ನ ದೃಷ್ಟಿಯ ಐಶಾರಾಮಿ ದುಬಾರಿ ವಸ್ತುಗಳು ಇದ್ದವು. ಆದರೆ ಕೊಡುವ ಮನಸೊಂದು ಇರಲಿಲ್ಲ ಅಷ್ಟೆ!.


ಆಗ ನನ್ನ ವಯಸ್ಸು ಹತ್ತು ರೋಶನ್ ಹನ್ನೆರಡರವ. ನನಗೂ ಕೈಗಡಿಯಾರದ ಮೇಲೆ ಮನಸ್ಸಾಯಿತು, ಮನಸ್ಸೇನು ಅದೊಂದು ಗೀಳೆ ಆಗಿ ಹೋಯಿತು. ಕನಸಿನಲ್ಲೂ ವಾಚು ಕಟ್ಟಿಕೊಂಡ ನನ್ನ ಕೈ ಕಾಣಿಸಿ, ಕಟ್ಟಿಕೊಂಡು ನನ್ನ ಸಮಸ್ತ ಪ್ರಜಾ ಸಾಮ್ರಾಜ್ಯದ ಯೋಗಕ್ಷೇಮ ವಿಚಾರಿಸಲು ಹೊರಟವ ರಥದ ಮೇಲೆ ಕೂತು ವಿಹರಿಸಿದಂತೆ, ನನ್ನ ನೋಡಿ ಜೈಕಾರ ಕೂಗುವ ಪ್ರಜೆಗಳತ್ತ ಅದೆ "ವಾಚು" ಕಟ್ಟಿದ ಕೈ ಬೀಸಿ ಅವರನ್ನ ರಸ್ತೆಯುದ್ದಕ್ಕೂ ಅಭಿನಂದಿಸುತ್ತಾ ಸಾಗುತ್ತಿರುವಂತೆ ಕ್ಷಣಕ್ಷಣವೂ ಕನವರಿಸಿಕೊಂಡು ಮನಸಿನಲ್ಲಿಯೆ ಮಂಡಿಗೆ ತಿನ್ನ ತೊಡಗಿದೆ. ಏನು ಮಾಡುತ್ತೀರಿ ಆಗಷ್ಟೆ ಟಿವಿಯಲ್ಲಿ ನೋಡುತ್ತಿದ್ದ "ಮಹಾಭಾರತ"ದ ಪ್ರಭಾವ ಅದು!


ಕನಸು ಮನಸಿನಲ್ಲೂ ನನಗೆ ವಾಚು ಕಾಣಿಸಿ ಕಾಡ ತೊಡಗಿತು. ನಾನು ಕಾಬೆಟ್ಟಿಗೆ ಮರಳಲಿಕ್ಕಿದ್ದ ಹಿಂದಿನ ದಿನ ನಾವೆಲ್ಲ ಒಟ್ಟಾಗಿ "ಕೊಣಾಜೆ ಕಲ್ಲಿ"ಗೆ ಸಂಜೆ ಹೋಗಿ ಬೆಳಗ್ಯೆ ಮರಳಿದ್ದೆವು. ಆಗ ರೋಶನ್ ಅರವಿಂದ ಮಾವ ಕೊಡಿಸಿದ್ದ ವಾಚು ಕಟ್ಟಿಕೊಂಡು ಜಂಭ ಕೊಚ್ಚಿಕೊಳ್ಳುತ್ತಾ ಮೆರೆದೆ ಮೆರೆದ. ಅದ್ಯಾಕೆ ನನಗೆ ದುಷ್ಟಬುದ್ಧಿ ಬಂತೋ ನಾಕಾಣೆ ಮನೆಗೆ ಮರಳಿ ಬಂದವ ಸಂಜೆ ಬಸ್ಸಿಗೆ ಕಾಬೆಟ್ಟಿಗೆ ಹೊರಡುವಾಗ ರೇಡಿಯೋ ಗೂಡಿನ ಹತ್ತಿರ ರೋಶನ್ ಬಿಚ್ಚಿಟ್ಟಿದ್ದ ವಾಚನ್ನ ಸದ್ದಿಲ್ಲದೆ ಜೇಬಿಗೆ ಇಳಿಬಿಟ್ಟವ ಅಜ್ಜನೊಂದಿಗೆ ಅಂಗಳ ಬಿಟ್ಟಿಳಿದೆ! ನಾನು ಮೊದಲ ಬಾರಿಗೆ ವಸ್ತುವೊಂದನ್ನ ಮನಸಾರೆ ಬಯಸಿ ಬಯಸಿ ಕದ್ದಿದ್ದೆ. ಹಾಗೆ ಮಾಡ ಬಾರದಿತ್ತು, ಆದರೆ ಮಾಡಿ ಬಿಟ್ಟಿದ್ದೆ. ಅಲ್ಲಿಂದ ಮೂಡುಬಿದ್ರೆಯವರೆಗೊಂದು, ಮತ್ತೆ ಕಾರ್ಕಳಕ್ಕೊಂದು, ಮತ್ತೆ ಅಲ್ಲಿಂದ ಕಾಬೆಟ್ಟಿಗೊಂದು ಹೀಗೆ ಸಾಗಿನಬೆಟ್ಟಿನಿಂದ ಕಾಬೆಟ್ಟಿಗೆ ಹೋಗಿ ಮುಟ್ಟಲಿಕ್ಕೆ ಮೂರು ಮೂರು ಬಸ್ಸುಗಳನ್ನ ಬದಲಿಸಬೇಕಿತ್ತು. ಸಂಜೆ ನಾಲ್ಕಕ್ಕೆ ಮನೆ ಬಿಟ್ಟೆವು. ಜೇಬಿನಲ್ಲಿದ್ದ "ಕಳ್ಳ ಮಾಲಿ"ನ ದೆಸೆಯಿಂದ ಉದ್ವೇಗಕ್ಕೊಳಗಾಗಿದ್ದ ನನ್ನ ಮೈ-ಕೈ ನಡುಗುತ್ತಿತ್ತು. ಕಿವಿ ಬೆಚ್ಚಗಾಗಿ ಯಾರೊ ಅದನ್ನ ಅಮಾನುಷವಾಗಿ ಹಿಂಡಿದ್ದಂತೆ ಕೆಂಪಗಾಗಿತ್ತು. ವ್ಯಥಾ ಬೆವರುತ್ತಿದ್ದೆ!  ಮಳೆಯ ಸೂಚನೆ ಕೊಡುತ್ತಿದ್ದ ಮೋಡಗಳು ಪಶ್ಚಿಮ ದಿಕ್ಕಿಂದ ನಿಧಾನವಾಗಿ ಆವರಿಸಿಕೊಳ್ಳುತ್ತಿದ್ದರಿಂದ ಎಲ್ಲರೂ ಏರುತ್ತಿದ್ದ ವಾತಾವರಣದ ಕೃತಕ ತಾಪಕ್ಕೆ, ಆಗುತ್ತಿದ್ದ ಸೆಖೆಗೆ ನಾನು ಬೆವರುತ್ತಿದ್ದೆ ಎಂದು ಅಪಾರ್ಥ ಮಾಡಿಕೊಂಡರು!


'ಸರಳ ಬಸ್ಸು' ಹಿಡಿದು ಮೂಡಬಿದ್ರಿ ಮುಟ್ಟಿದವರಿಗೆ ಜೈನ್ ಹೈಸ್ಕೂಲಿನ ತಿರ್ಗಾಸಿನಲ್ಲಿಯೆ ಕಾರ್ಕಳದ ದಿಕ್ಕಿಗೆ ದೌಡಾಯಿಸುತ್ತಿದ್ದ 'ಬಲ್ಲಾಳ ಬಸ್' ಸಿಕ್ಕಿತು. ತುಂಬಿ ತುಳುಕುತ್ತಿದ್ದ ಬಸ್ಸಿಗೆ ಆ ಉರಿ ಸೆಖೆಯಲ್ಲಿ ಹತ್ತಿ ಕೆಲವೆ ಕ್ಷಣಗಳ್ಳಲ್ಲಿ ಬಾನು ಬಿರಿದಂತೆ ಕುಂಭದ್ರೋಣ ಮಳೆ. ಮಳೆ ನನ್ನ ಅನುಗಾಲದ ದೌರ್ಬಲ್ಯ. ಅದನ್ನ ಕಾಣುತ್ತಲೆ ನಾನು ಮೈಮರೆಯುತ್ತೇನೆ. ಅವತ್ತೂ ಸಹ ಕಿಟಕಿಯಾಚೆ ಚಚ್ಚುತ್ತಿದ್ದ ಮಳೆಯಲ್ಲಿ ಲೀನವಾಗಿ ಹೋದವನಿಗೆ ಕಾರ್ಕಳದ ಬಸ್ಟ್ಯಾಂಡ್ ಮುಟ್ಟಿದ್ದೆ ತಿಳಿಯಲಿಲ್ಲ. ಅಲ್ಲಿ ಇಳಿದಾಗ ಜೇಬಿನಲ್ಲಿದ್ದ "ರೇಡಿಯೋ ಆಕ್ಟಿವ್"ವಸ್ತುವಿನತ್ತ ಮತ್ತೆ ಗಮನ ಹೋಯಿತು. ಮರೆಯಲ್ಲಿ ನಿಂತು ಅಜ್ಜನ ಕಣ್ಣು ತಪ್ಪಿಸಿ ಅದನ್ನೊಮ್ಮೆ ಕಂಡು ಸವರಿ ಕಣ್ತುಂಬಿಸಿಕೊಂಡೆ! ಅದೆ ನನ್ನ ಅದರ ಕೊನೆಯ ಭೇಟಿ! ಮಳೆ ಇನ್ನೂ ಬಿಡದೆ ಚಚ್ಚುತ್ತಲೆ ಇತ್ತು. ಬಜಗೋಳಿಯ ದಿಕ್ಕಿಂದ ಬರುವ 'ರಾಜಾರಾಮ್ ಬಸ್ಸು" ಬಂದದ್ದೆ ನೂಕುನುಗ್ಗಲಿನಲ್ಲಿ ಹತ್ತಿ ಕೂರುವ ಜಾಗ ದಕ್ಕದೆ ನಿಂತೆವು. ಬಹುಶಃ ಅಲ್ಲಿಯೆ ಯಾರೋ ವೃತ್ತಿ ಜೇಬುಗಳ್ಳರು ಅದನ್ನ ಅಪಹರಿಸಿರಬಹುದು. ಅರೂ ಮುಕ್ಕಾಲಿನ ಸಮಯಕ್ಕೆ ಕಾಬೆಟ್ಟಿನ ಮನೆಯ ದರ್ಕಾಸಿನ ಹತ್ತಿರ ಬಸ್ಸಿಳಿಯುವಾಗ ಮಳೆ ನಿಂತು ಒದ್ದೆ ನೆಲ ಬೆಚ್ಚಗೆ ಹಬೆಯಾಡಿಸುತ್ತಿತ್ತು, ಸೂರ್ಯ ಆಗಲೆ ಮುಳುಗಿ ಕಳ್ಳ ಹೆಜ್ಜೆಯಿಟ್ಟು ಕತ್ತಲಾವರಿಸುತ್ತಿದೆ. ಉಚ್ಚೆ ಮಾಡುವ ನೆಪ ಮಾಡಿ ಅಜ್ಜನಿಂದ ಹಿಂದುಳಿದ ನಾನು ಆಸೆಯಿಂದ ಜೇಬನ್ನ ತಡಕಾಡುತ್ತೇನೆ! ಏನಿದೆ ಅಲ್ಲಿ ಮಣ್ಣು?!


ಕದ್ದ ಮಾಲು ವೃತ್ತಿ ಕಳ್ಳರ ಪಾಲಾಗಿತ್ತು! ನನ್ನ ಎದೆ ಬಡಿತ ಒಮ್ಮೆಲೆ ನಿಂತ ಹಾಗಾಯಿತಲ್ಲ. ಚೇತರಿಸಿಕೊಳ್ಳಲಿಕ್ಕೆ ಸುಮಾರು ಹೊತ್ತೆ ಬೇಕಾಯಿತು. ಅಜ್ಜನ ಕರೆ ಕತ್ತಲಲ್ಲಿ ಕೇಳಿಸಿ ಬಿಸಬಿಸ ಹೆಜ್ಜೆ ಹಾಕಿದೆನಾದರೂ ಆದ ಪ್ರಮಾದಕ್ಕೆ ಅರ್ಧ ಸತ್ತು ಹೋದವನಂತಾಗಿದ್ದೆ. ಕದ್ದ ತಪ್ಪು ಒಂದು ಕಡೆ, ಸಿಕ್ಕಿ ಬಿದ್ದರೆ- ಬಿದ್ದರೇನು ಅಮ್ಮನ ಜಾಣ ಮನಸಿನ ತನಿಖೆಯಲ್ಲಿ ಸಿಕ್ಕಿಯೆ ಬೀಳುತ್ತೇನೆ! ಆಗ ಆಗುವ ಅವಮಾನ, ದುರಂತ ಎಲ್ಲವನ್ನ ನೆನೆದು ಕುಗ್ಗಿ ಹೋದೆ. ಆತ್ಮಹತ್ಯೆಯೆ ದಾರಿ ಅನ್ನಿಸ ತೊಡಗಿತು ತೀವೃವಾಗಿ ನನ್ನ ಮನಸಿಗೆ. ಕಳ್ಳನ ಹೆಂಡತಿ ಯಾವಾಗಲು ಮುಂಡೆ ಅನ್ನುವ ಅಜ್ಜಿ ಹೇಳುತ್ತಿದ್ದ ಗಾದೆ ನೆನಪಾಗಿ ಹೆಂಡತಿ ಇಲ್ಲದಿದ್ದವನಾದರೂ ನಾನು ಮಂಕಾದೆ! ನನ್ನಲ್ಲಾದ ಈ ಹಟಾತ್ ಬದಲಾವಣೆ ಅಜ್ಜನಲ್ಲಿ ಆತಂಕ ಮೂಡಿಸಿತು. ಜ್ವರವೇನಾದರೂ ಬಂದಿದೆಯಾ ಅಂತ ಹಣೆ ಮುಟ್ಟಿಯೂ ನೋಡಿದರು, ಹಾಗೇನೂ ಇರಲಿಲ್ಲ! ನನ್ನ ಮನದ ವ್ಯಾಪಾರ ಅವರಿಗೆ ತಾನೆ ಹೇಗೆ ಅರ್ಥವಾಗಬೇಕು?


ಮರುದಿನ ಎದ್ದವ ಸಪ್ಪೆಯಾಗಿಯೆ ತಿಂಡಿಯನ್ನೂ ತಿನ್ನದೆ ಹಾಸ್ಟೆಲ್ಲಿಗೆ ಹೋಗಿ ಅಲ್ಲಂದ ಶಾಲೆಗೂ ಬಂದು ನಿರಾಸಕ್ತನಾಗಿ ತರಗತಿಯಲ್ಲಿ ಕೂತೆ. ಎರಡನೆ ಪಿರಿಯಡ್ ಅರ್ಧ ಸಾಗುತ್ತಿದ್ದಾಗ ಬಂತಲ್ಲ ಹೆಡ್'ಮಾಸ್ಟರ್'ರ ಕರೆ. ಹಿಂದಂದೂ ಇಲ್ಲದ ಈ ವಿಶೇಷ ಕರೆಯ ಕಾರಣವನ್ನ ಕಳೆದುಕೊಂಡಿದ್ದ ಕದ್ದ ವಾಚಿಗೆ ಸೇರಿಸಿ ಅಪಶಕುನವನ್ನೆ ಊಹಿಸಿಕೊಳ್ಳ ತೊಡಗಿದ ನನ್ನ ಎದೆಯಲ್ಲಿ ಪುಕಪುಕ. ಹೋಗಿ ನೋಡಿದರೆ ಆರೋಪಿಯ ತನಿಖೆಗೆ ಸಾಗಿನಬೆಟ್ಟಿನಿಂದ ಅಮ್ಮ ಮತ್ತು ಲಲಿತತ್ತಿಗೆ ಬಂದಿದ್ದರು, ಅವರ ದೃಷ್ಟಿ ಹಾಗು ಮುಖಭಾವ ಅವರು ಬಂದ ಉದ್ದೇಶವನ್ನ ಸ್ಪಷ್ಟವಾಗಿ ಹೇಳುವಂತಿದ್ದವು! ಮೊದಮೊದಲು ಅವರ ತನಿಖೆಗೆ ನಿರಾಕರಿಸುತ್ತಿದ್ದ ನಾನು "ಮಾವ ತಂದುಕೊಟ್ಟ ಅಮೂಲ್ಯ ಕೊಡುಗೆಯಾಗಿದ್ದ ವಾಚನ್ನ ಕಳೆದುಕೊಂಡ ರೋಶನ್ ಬಹಳ ನೊಂದಿದ್ದಾನೆ, ನೆನ್ನೆಯಿಂದವನ ಆರೋಗ್ಯ ಬಿಗಡಾಯಿಸಿ ಜ್ವರ ಬಂದಿದೆ. ವಾಂತಿ ಐದಾರು ಸಾರಿ ರಾತ್ರಿಯಿಡಿ ಆಗಿ ಈಗ ಅವನ್ನ್ನ ಆಳ್ವಾಸ್ ಆಸ್ಪತ್ರೆಗೆ ಸೇರಿಸಿದ್ದಾರೆ! ರಾತ್ರಿಯಿಡಿ ಅವನು ವಾಚನ್ನೆ ಕನವರಿಸುತ್ತಿದ್ದ!!" ಅಂತ ಹೇಳಿದಾಗ ಮಾತ್ರ ವಿಚಲಿತನಾದೆ. ನಾನು ಕದ್ದ ಯಕಶ್ಚಿತ್ ಕೈಗಡಿಯಾರವೊಂದು ಇನ್ನೊಂದು ಮಗುವಿನ ಹೂ ಮನಸ್ಸನ್ನ ಮುದುಡಿಸಿ ಹಾಕಿದೆ ಆನ್ನುವುದಷ್ಟೆ ಆ ಕ್ಷಣ  ನನ್ನೊಳಗೆ ಮೂಡಿದ ಭಾವ. ನಾನದನ್ನ ಕಳೆದು ಕೊಂಡ "ಕಥೆ" ಪ್ರಾಮಾಣಿಕವಾಗಿ ಹೇಳಿದರೂ ಯಾರೊಬ್ಬರೂ ನನ್ನ ಸತ್ಯ ಕಥೆಯನ್ನ ನಂಬಲೆ ಇಲ್ಲ! ಇನ್ನಷ್ಟು ಬೈದು ನನ್ನ ದೂರಿ ಬಂದವರಿಬ್ಬರೂ ಅಪನಂಬಿಕೆ ಹೊತ್ತೆ ಮರಳಿ ಹೋದರು. ಲೋಕದ ಕಣ್ಣಿಗೆ ನಾನು "ವಾಚು ಕಳ್ಳ"ನಾದೆ.


ಪುಟ್ಟ ಮಗು ಮನಸೊಂದನ್ನ ನೋಯಿಸಿದ ಪಾಪಪ್ರಜ್ಞೆಯಿಂದ  ಅವತ್ತಿನಿಂದ ನರಳುತ್ತಿದ್ದವನಿಗೆ ಅದರಿಂದ ಹೊರ ಬರುವ ಅವಕಾಶವೂ ಮೂರು ವರ್ಷದ ಹಿಂದೆ ಒದಗಿ ಬಂತು. ಅದು ಹರ್ಷಿತಾ ಜೊತೆಗಿನ ರೋಶನ್'ನ ಮದುವೆ. ನಾನು ಆ ನಡುವೆ ಒಂಬತ್ತನೆ ತರಗತಿಯ ಕೊನೆಯಲ್ಲಿ ಸ್ವಂತ ದುಡಿಮೆ ಆರಂಭಿಸಿದಾಗ ಒಂದು ಅಗ್ಗದ ದರದ ಕಪ್ಪು ಬಣ್ಣದ "ಕ್ಯಾಸಿಯೋ" ಕೈಗಡಿಯಾರವನ್ನ ಕೊಂಡಿದ್ದೆ. ಅದರ ಖರೀದಿ ಬೆಲೆಗಿಂತ ರಿಪೇರಿಯ ಖರ್ಚನ್ನೆ ಪೆದ್ದುಪೆದ್ದಾಗಿ ಹೆಚ್ಛು ಸಾರಿ ಮಾಡಿದ್ದು ನೆನಪಾದರೆ ನಗು ಈಗಲೂ ಬರುತ್ತದೆ. ಅನಂತರ ಎರಡನೆ ಪಿಯುಸಿ ಮುಗಿಸಿದ ಸಂಭ್ರಮಕ್ಕೆ ಬೆಂಗಳೂರಿನಲ್ಲಿರುವ ನನ್ನ ವಿದ್ಯಾಭಾಸಕ್ಕೆ ಸಹಾಯ ಮಾಡಿದ ಹಿತೈಷಿಯೊಬ್ಬರು ಒಂದು ಟೈಟಾನ್ ಕೈಗಡಿಯಾರ ಕೊಡಿಸಿದ್ದರು. ಅದನ್ನ ವರ್ಷದೊಳಗೆ ಬಸ್ಸಿನಲ್ಲಿ ಕಳೆದುಕೊಂಡ ಪುಣ್ಯಾತ್ಮ ನಾನು. ಅದಾಗಿ ಎರಡು ವರ್ಷಕ್ಕೆ ಗಾಂಧಿ ಬಜಾರಿನಲ್ಲಿರುವ ಹೋಟೆಲ್ ಒಂದರ ಮಾಲಕರು ಅವರ ಬಗ್ಗೆ, ಅವರ ಹೋಟೆಲಿನ ಬಗ್ಗೆ ದಿನಪತ್ರಿಕೆಯೊಂದರಲ್ಲಿ ನಾನು ಬರೆದ ಲೇಖನವೊಂದರಿಂದ ವಿಪರೀತ ಆನಂದ ತುಂದಲರಾಗಿ ಅದೆಷ್ಟೆ ನಿರಾಕರಿಸಿದರೂ ಒತ್ತಾಯಿಸಿ  "ಟೈಮೆಕ್ಸ್" ಕೈಗಡಿಯಾರವನ್ನ ಲಂಚವಾಗಿ ಕೊಟ್ಟಿದ್ದರು. ಆ ಲಂಚವನ್ನ ಅದೆ ವರ್ಷ ನೇತಾಜಿ ಸುಭಾಷ್ ಚಂದ್ರರ ಮಗಳಾದ ಅನಿತಾ ಶಂಕೆಲ್'ರನ್ನ ಭೇಟಿಯಾಗುವ ಉದ್ದೇಶದಿಂದ ಅವರು ಕೊಲ್ಕತ್ತಾಗೆ ಬಂದಿದ್ದಾಗ ಹೋಗಿದ್ದವ ಮರಳಿ ಮದರಾಸಿನ ಮಾರ್ಗವಾಗಿ ಬರುವ ಹಾದಿಯಲ್ಲಿ ವಿಜಯವಾಡ- ವಿಶಾಖಪಟ್ಟಣದ ಮಾರ್ಗ ಮಧ್ಯೆ ನಾನು ಪ್ರಯಾಣಿಸುತ್ತಿದ್ದ "ಕೋಸ್ಟಲ್ ಎಕ್ಸ್'ಪ್ರೆಸ್" ರೈಲಿನ ಶೌಚಾಲಯದಲ್ಲಿ ಬಿಚ್ಚಿಟ್ಟಲ್ಲೆ ಮರೆತು ಕಳೆದುಕೊಂಡೆ. ನನ್ನ ಖಾಲಿ ಕೈ ನೋಡಿ ನೊಂದ ಆತ್ಮಸಖ ಅವನ ಮೊದಲ ಸಂಬಳದಲ್ಲಿ ದುಬಾರಿಯಾಗಿದ್ದ ಅದೆ ಬಣ್ನದ "ಟೈಟಾನ್" ಕೈಗಡಿಯಾರವನ್ನ ಅನಿರೀಕ್ಷಿತ ಉಡುಗೊರೆಯಾಗಿ ಕೊಡಿಸಿದ. ಅವನು ಅಮೇರಿಕೆಗೆ ಶಾಶ್ವತವಾಗಿ ಸೇರಿ ಹೋಗುವ ಗುಮಾನಿ ಹೊತ್ತ ನಾನು ನನ್ನ ಪ್ರತಿಭಟನೆಯ ರೂಪದಲ್ಲಿ ಮೊದಲ ಬಾರಿಗೆ ಅಲ್ಪಾವಧಿಯ ಭೇಟಿಗಾಗಿ ಅವನು ಅಲ್ಲಿಗೆ ಹೋಗುವ ಹಿಂದಿನ ದಿನ ಮುನಿಸಿಕೊಂಡು ಸಿಟ್ಟಿನಿಂದ ಆ ವಾಚನ್ನ ಅವನಿಗೇನೆ ಮರಳಿ ಕೊಟ್ಟೆ. ನನ್ನ ಗುಮಾನಿ ನಿಜವಾಯ್ತು, ಅವನನ್ನ- ಅವನ ಸೃಜನಶೀಲ ಸಂವೇದನೆಗಳನ್ನ ಡಾಲರ್ ಸುಖ ನುಂಗಿ ನೊಣೆಯಿತು.


ಅಂದಿನಿಂದ ನಾನು ವಾಚನ್ನ ಕಟ್ಟುತ್ತಿಲ್ಲ. ನಾಲ್ಕು ವರ್ಷವಾಯ್ತು ವಾಚಿನ ಉತ್ಸಾಹ ನನ್ನೊಳಗೆ ಸತ್ತು ಹೋಗಿದೆ. ಮುಂದೆಯೂ ಸಹ ನಾನು ವಾಚ್ ಜೀವನದಲ್ಲೆ ಕೈಗೆ ಕಟ್ಟಿಕೊಳ್ಳಲಾರೆ. ಅನಂತರ ಹೊರದೇಶಗಳಿಗೆ ಆಗಿಂದಾಗ್ಗೆ ಹೋಗಿ ಬರುವ ನಾನು ಅಲ್ಲಿಂದ ಬಹಳ ಸುಂದರ ಕೈಗಡಿಯಾರಗಳನ್ನ ಪರಿಚಿತ ಮಕ್ಕಳ ಮನ ತಣಿಸುವ ಉಡುಗೊರೆಗಳನ್ನಾಗಿ ಹಂಚಲು ತಂದಿದ್ದೇನೆ. ಯಾವುದೆ ತಾರತಮ್ಯವಿಲ್ಲದೆ ಅದನ್ನ ಹಂಚಿ ಮಕ್ಕಳ ಮೊಗದಲ್ಲಿ ನಗುವರಳಿಸಿದ್ದೇನೆ. ರೋಶನ್ ಮದುವೆಗೆ ನನಗೆ ಕರೆಯಿರಲಿಲ್ಲ. ಹೀಗಾಗಿ ನಾನು ದುಬಾರಿ ಜೋಡಿ "ಟೈಟಾನ್" ಕೈಗಡಿಯಾರವನ್ನ ಖರೀದಿಸಿ ಹಿಂದೆಂದೋ ಮಾಡಿದ ಪಾಪದಿಂದ ಮುಕ್ತನಾಗುವ ಹಂಬಲ ಹೊತ್ತು ಆವತ್ತು ನಡೆದಿದ್ದ ಘಟನೆಯನ್ನ ವಿವರಿಸಿ ಆ ವಾಚಿನ  ರೂಪದಲ್ಲಿ ನನ್ನ ತಪ್ಪೊಪ್ಪಿಗೆಯನ್ನ ಸ್ವೀಕರಿಸಲು ಪ್ರಾರ್ಥಿಸಿ ಪತ್ರವೊಂದನ್ನ ಜೊತೆಗಿರಿಸಿದೆ. ಉಡುಗೊರೆ ನೋಡಿ  ಮೊದಲು ಖುಷಿಯಾಗಿದ್ದ ರೋಶನ್ ಪತ್ರದ ಕೊನೆಯ ಐದೂವರೆ ಸಾಲುಗಳನ್ನ ಓದಿ ಕೆರಳಿದನಂತೆ. ಅನಂತರ ಅದನ್ನವ ಎಡಗೈಯಿಂದಲೂ ಮುಟ್ಟಿ ನೋಡಲಿಲ್ಲವಂತೆ.


ಈ ಬಗ್ಗೆ ನನಗೆ ಹೇಳಲಿಕ್ಕೇನೂ ಇಲ್ಲ, ಅವನ ಆ ವರ್ತನೆ ಅವನ ಮನಸಿನ ಕನ್ನಡಿ ಅಂದುಕೊಳ್ಳುತ್ತೇನೆ ಅಷ್ಟೆ. ಆ ಕೊನೆಯ ಎರಡು ಸಾಲುಗಳು ಹೀಗಿದ್ದವು "ರೋಷನ್ ಚಿಕ್ಕಂದಿನಲ್ಲಿ ನಿನ್ನ ವಾಚ್ ಕದ್ದ ಬಗ್ಗೆ ಖಂಡಿತಾ ಇಂದಿಗೂ ನನಗೆ ಪಶ್ಚಾತಾಪವಿಲ್ಲ! ಆದರೆ ಮೃದು ಮಗು ಮನಸೊಂದನ್ನ ಅದರ ಮಾವ ಕೊಡಿಸಿದ ಬೆಲೆ ಕಟ್ಟಲಾಗದ ಉಡುಗೊರೆಯಿಂದ ವಂಚಿತನಾಗಿಸಿದ ಬಗ್ಗೆ ಅತೀವ ನೋವಿದೆ. ಆದರೆ ಆಗ ನಾನೂ ಸಹ ನಿನ್ನಂತೆಯೆ ಒಂದು ಮಗುವಾಗಿದ್ದೆ, ನನಗೆ ಕನಿಷ್ಠ ಒಂದು ಕ್ಷುಲ್ಲಕ ಕೊಡುಗೆಯನ್ನದರೂ ಕೊಟ್ಟು ನನ್ನ ಮಗು ಮನಸನ್ನೂ ನಿನ್ನ ಮಾವ ಅರಳಿಸ ಬಹುದಿತ್ತು, ಅಲ್ಲವಾ? ಆದು ಅವರ ಬೆಳೆದ ಮನಸಿಗೇಕೆ ಅರ್ಥವಾಗಲಿಲ್ಲ ಹೇಳು. ಈಗ ಹಳೆಯ ಪಾಪ ತೊಳೆದುಕೊಳ್ಳುವ ಕಿರು ಪ್ರಯತ್ನ ಮಾಡ್ತಿದೇನೆ. ಇದು ನಾನು ಮಾಡಿದ ತಪ್ಪಿಗೆ ಕೊಡುತ್ತಿರುವ ಸಮರ್ಥನೆ ಖಂಡಿತಾ ಅಲ್ಲ. ಅದು ತಪ್ಪೆ ಆ ಕಳ್ಳತನದಲ್ಲಿ ನಾನು ಕಳ್ಳನೆ. ಅದೆ ಮಗು ಮನಸಿನಿಂದ ಮುಟ್ಟಿತು ಅಂದು ಬಿಡು ನನಗಷ್ಟೆ ಸಾಕು".........


( ಇನ್ನೂ ಇದೆ.)

No comments: